Wednesday, April 28, 2021

ಕಣ್ಣೀರು ಮಾರೋ ಬಜಾರು

ಇಂದಿಗೆ ದಿನಕ್ಕೆ ನೂರಾರು ಲೆಕ್ಕದಲ್ಲಿ ಬೆಂಗಳೂರಿನಲ್ಲಿ ಹಾಗೆಯೇ ಸಾವಿರ ಲೆಕ್ಕದಲ್ಲಿ ಭಾರತದಲ್ಲಿ, ಕೋವಿಡ್ ಸಂಬಂದಿಸಿದ ಸಾವುಗಳು ಸಂಭವಿಸುತ್ತಿವೆಯಲ್ಲ. ಆಸ್ಪತ್ರೆಗೆ ಸೇರಿದ ಸಾವಿರಾರು ಜನ ಗುಣ ಹೊಂದಿ ಮನೆಗೆ ಮರಳಿ ನೇಪಥ್ಯಕ್ಕೆ ಸರಿದು ಹೋದರೂ, ಅದಕ್ಕೆ ಹೋಲಿಸದರೆ ಕಡಿಮೆ ಪ್ರಮಾಣದ ಸಾವುಗಳು ಹೆಚ್ಚಿನ ಮಟ್ಟದ ಸುದ್ದಿಯಾಗುತ್ತಲಿವೆ.

 

ಇದಕ್ಕೆ ಏನು ಕಾರಣ ಎಂದು ವಿಚಾರ ಮಾಡಿದರೆ, ನಾವು, ನಮ್ಮ ಸರ್ಕಾರ, ನಮ್ಮ ಸಮಾಜ, ನಮ್ಮ ವೈದ್ಯಕೀಯ ವ್ಯವಸ್ಥೆ ಇಂತಹ ದೊಡ್ಡ ಪ್ರಮಾಣದ ಕೋವಿಡ್ ಪ್ರಮಾಣಕ್ಕೆ ತಯ್ಯಾರಿ ಮಾಡಿಕೊಳ್ಳದಿರುವುದು. 'ಗಡ್ಡಕ್ಕೆ ಬೆಂಕಿ ಹತ್ತಿದಾಗ ಭಾವಿ ತೋಡು' ಎಂಬ ಗಾದೆ ಮಾತು ಭಾರತಕ್ಕೆ ಮಾತ್ರ ಅನ್ವಯ ಎನ್ನುವಂತೆ ಇಂದಿಗೆ ಎರಡನೇ ಅಲೆಗೆ ಭಾರತದಲ್ಲಿ ಮಾತ್ರ ಹೆಚ್ಚಿನ ಸಾವು ಸಂಭವಿಸುತ್ತಿವೆ. ಪರಿಸ್ಥಿತಿಯಲ್ಲಿ ಬರೀ ಕೆಲವರನ್ನೇ ದೂರಿ ಏನು ಉಪಯೋಗ ಹೇಳಿ? ವೈದ್ಯರು, ಆಸ್ಪತ್ರೆ ಸಿಬ್ಬಂದಿ ಕೂಡ ಮನುಷ್ಯರೇ ಅಲ್ಲವೇ? ಅವರು ಕೂಡ ಒತ್ತಡಕ್ಕೆ ಒಳಗಾಗುತ್ತಾರೆ. ಹಾಗೆಯೇ ಎಲ್ಲ ವೃತ್ತಿಗಳಲ್ಲಿ ಇರುವಂತೆಯೇ, ಇಲ್ಲಿಯೂ ಅಲ್ಪ ಪ್ರಮಾಣದ ಪರಿಸ್ಥಿತಿಯ ಲಾಭ ಪಡೆಯುವ ಮನಸ್ಥಿತಿ ಉಳ್ಳವರೂ ಇದ್ದಾರೆ. ಲಾಭ ಪಡೆಯುವದಕ್ಕೆಂದೇ ಸೃಷ್ಟಿಯಾದ ಖಾಸಗಿ ಆಸ್ಪತ್ರೆಗಳು ತಮ್ಮ ಲಾಭ-ನಷ್ಟದ ವಿಚಾರವನ್ನು ಮಾಡಿಯೇ ಮಾಡುತ್ತವೆ. ಅದನ್ನು ಜಗಜ್ಜಾಹೀರು ಮಾಡದಿದ್ದರೂ, ಅವರ ಲೆಕ್ಕಾಚಾರ ಅವರಿಗೆ ಅಲ್ಲವೇ. ಆದರೆ ಇದೆಲ್ಲರ ನಡುವೆ ನಾವು ಸರಕಾರಿ ಆಸ್ಪತ್ರೆಗಳ ಅಭಿವೃದ್ಧಿ ಕಡೆ ಯಾಕೆ ಗಮನ ಕೊಡಲಿಲ್ಲ? ಎಲ್ಲಿಯೋ ಕಟ್ಟುವ ರಾಮ ಮಂದಿರಕ್ಕೆ ದೇಣಿಗೆ ನೀಡುವ ನಾವು, ನಮ್ಮ ಊರಿನ ಆಸ್ಪತ್ರೆಯ ಕುಂದು-ಕೊರತೆಗಳ ಬಗ್ಗೆ ವಿಚಾರಿಸಲಿಲ್ಲ. 'ಮಾಡಿದ್ದುಣ್ಣೋ ಮಹರಾಯ' ಎನ್ನುವಂತೆ ಇಂದು ನಮ್ಮ ಕರ್ಮ ಫಲಗಳನ್ನು ನಾವು ಅನುಭವಿಸುತ್ತಿದ್ದೇವೆ ಅಷ್ಟೇ.

 

ಆದರೆ ಅವಘಡಗಳು ಸಂಭವಿಸುತ್ತಿರುವುದು ಬರೀ ವೈದ್ಯಕೀಯ ವ್ಯವಸ್ಥೆಯಲ್ಲಷ್ಟೇ ಅಲ್ಲವಲ್ಲ. ಔಷಧಿಗಳ ಅಭಾವ, ಆಂಬುಲೆನ್ಸ್ ಗೆ ಕಾಯುವಿಕೆ, ಸತ್ತ ನಂತರ ಅಂತ್ಯ ಸಂಸ್ಕಾರದಲ್ಲಿ ಆಗುತ್ತಿರುವ ಅನ್ಯಾಯ ಇವೆಲ್ಲೆವುಗಳನ್ನು ಗಮನಿಸಿದರೆ ಇಲ್ಲಿ ಒಂದು ಕಣ್ಣೀರು ಮಾರೋ ಬಜಾರು ಸೃಷ್ಟಿಯಾಗಿದೆ. ಸತ್ತವರು ಪುಣ್ಯ ಕಂಡರೂ, ಅವರ ಸಂಬಂಧಿಗಳ ಕರುಣಾಜನಕ ರೋಧನ ನೋಡಲಾಗದು. ಇಲ್ಲಿ ಸಾಮಾನ್ಯ ಜನ, ಸಂಘ ಸಂಸ್ಥೆಗಳು ಹೆಚ್ಚಿಗೆ ಮಾಡುವುದೇನಿಲ್ಲ. ದೊಡ್ಡ ಕಾರ್ಖಾನೆಗಳು ತಮ್ಮ ಉತ್ಪಾದನೆಯನ್ನು ನಿಲ್ಲಿಸಿ ಆಕ್ಸಿಜನ್ ಉತ್ಪಾದನೆ ಕಡೆ ಗಮನ ಹರಿಸಿದರೂ, ಉಳಿದ ವೈದ್ಯಕೀಯ ವಿಷಯಗಳಲ್ಲಿ ಅವರು ತಲೆ ಹಾಕುವಂತಿಲ್ಲ. ಹಾಗಾಗಿಯೇ ಸಂಭವಿಸುತ್ತಿರುವ ಸಾವುಗಳನ್ನು ನೋಡುತ್ತಾ ಅಸಹಾಯಕರಾಗಿ ನಿಲ್ಲುವ ಪರಿಸ್ಥಿತಿ ಸಾಮಾನ್ಯ ಮನುಷ್ಯನದ್ದು.

Tuesday, April 27, 2021

ಸಾಕಿದ ನಾಯಿ ಮತ್ತು ದುಡಿದ ದುಡ್ಡು ಬಿಟ್ಟರೆ ...

ಒಂದು ಮಾತಿದೆ. ಸಾಕಿದ ನಾಯಿ ಮತ್ತು ದುಡಿದ ದುಡ್ಡು ಬಿಟ್ಟರೆ ಬೇರೆ ಯಾವುದು ನಂಬಿಕೆಗೆ ಅರ್ಹವಲ್ಲ ಎಂದು. ಈ ಮಾತು ಸಂಪೂರ್ಣ ಸತ್ಯವಲ್ಲವಾದರೂ ಬಹುತೇಕ ನಿಜ. ಅವಸರಕ್ಕೆ ಆಗುವ ಸ್ನೇಹಿತರು, ಬಂಧುಗಳು ಪ್ರತಿಯೊಬ್ಬರಿಗೂ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲದಿದ್ದರೂ ಒಬ್ಬಿಬ್ಬರು ಆದರೂ ಇದ್ದೆ ಇರುತ್ತಾರೆ. ಆದರೆ ಅವರನ್ನು ಹೊರತು ಪಡಿಸಿ ಉಳಿದವರೆಲ್ಲ ತಮ್ಮ ಅನುಕೂಲಕ್ಕೆ ತಕ್ಕಂತೆ ಆಡುವವರು.


ನಮ್ಮ ಸಮಾಜದಲ್ಲಿ ಸುಳ್ಳು, ಮೋಸಗಳು ಹದವಾಗಿ ಬೆರೆತು ಹೋಗಿವೆ. 'ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು' ಎಂದು ಗಾದೆ ಮಾತೇ ಇದೆಯಲ್ಲ. ಅಂದರೆ ಸುಳ್ಳು ಹೇಳಿದರೆ ತಪ್ಪೇನಿಲ್ಲ ಎನ್ನುವುದು ಸಮಾಜದ ಅಭಿಪ್ರಾಯ. ಹಾಗೆಯೇ ಒಂದು ಯುದ್ಧದಲ್ಲಿ ಮೋಸ ಮಾಡಿ ಗೆಲ್ಲುವುದು ಚಾಣಾಕ್ಷತೆಯ ಸಂಕೇತ ಎನಿಸಿಕೊಳ್ಳುತ್ತದೆ. ಸುಳ್ಳು, ಮೋಸ ಬಲ್ಲವನು ಚಾಣಾಕ್ಷ, ಮೇಧಾವಿ ಎನಿಸಿಕೊಳ್ಳುತ್ತಾನೆ. ರಾಜಕಾರಣಿ ಸುಳ್ಳು ಆಶ್ವಾಸನೆ ಕೊಡುತ್ತಾನೆ ಎಂದು ಗೊತ್ತಿದ್ದರೂ ನಾವು ಭಾಷಣ ಕೇಳಲು ಹೋಗುವುದಿಲ್ಲವೆ? ಇದು ಪ್ರತಿಯೊಬ್ಬ ಸಾಮಾನ್ಯ ಮನುಷ್ಯನಿಗೂ ಅನ್ವಯಿಸುತ್ತದೆ. ಗಂಡಸು ಹುಟ್ಟಾ ಲಂಪಟ. ಸುಲಭವಾಗಿ ಸುಳ್ಳು ಹೇಳುತ್ತಾನೆ. ಸಿಕ್ಕಿ ಬಿದ್ದರೆ 'ಹೌದು. ಸುಳ್ಳು ಹೇಳಿದೆ. ಏನಿವಾಗ?' ಎಂದು ದಬಾಯಿಸುತ್ತಾನೆ. ಹೆಂಗಸು ಕನ್ನಡಿ ಇಲ್ಲದೆ ಸೀರೆ ಬದಲಾಯಿಸಬಲ್ಲಳು. ಅವಳು ನಿಶ್ಚಯಿಸಿದ್ದಲ್ಲಿ, ಎಂಥ ಜಾಣನಿಗೂ ಪಂಗನಾಮ ಗ್ಯಾರಂಟಿ. ತಂದೆ-ತಾಯಿ, ಗಂಡ-ಹೆಂಡತಿ, ಮಕ್ಕಳು, ಹತ್ತಿರದ ಬಂಧುಗಳು, ಗೊತ್ತೇ ಇರದ ಅಪರಿಚಿತರು ಎಲ್ಲರೂ ಸಮಯಕ್ಕೆ ತಕ್ಕ ಹಾಗೆ ಸುಳ್ಳು ಹೇಳುತ್ತಾರೆ. ಮತ್ತು ಅದು ದೊಡ್ಡ ವಿಷಯ ಏನಲ್ಲ ಎನ್ನುವಂತೆ ವರ್ತಿಸುತ್ತಾರೆ. ಸಮಯ ಪ್ರಜ್ಞೆ ಮತ್ತು ಸೂಕ್ಷ್ಮತೆ ನಮಗೆ ಇರದೇ ಹೋದರೆ ನಾವು ಮೋಸ ಹೋಗುತ್ತಿರುವುದು ಬಹು ಸಮಯದವರೆಗೆ ಗೊತ್ತೇ ಆಗುವುದಿಲ್ಲ.


ಆದರೆ ಸಾಕಿದ ನಾಯಿ ತನ್ನ ಜೀವನದುದ್ದಕ್ಕೂ, ಹಾಗೆಯೆ ದುಡಿದ ದುಡ್ಡು ಅದು ಮುಗಿದು ಹೋಗುವವರೆಗೆ ತಮ್ಮ ಒಡೆಯನಿಗೆ ನಂಬಿಕೆಯಿಂದ ನಡೆದುಕೊಳ್ಳುತ್ತವೆ. ಅನುಕೂಲಕ್ಕೆ ತಕ್ಕಂತೆ ಬದಲಾಗುವುದು ಅವುಗಳ ಜಾಯಮಾನದಲ್ಲಿಲ್ಲ. ಹಾಗಾಗಿಯೇ ಇಂತಹದೊಂದು ಮಾತು ರೂಢಿಗೆ ಬಂದಿರಬೇಕು.


ಬರೀ ನಾಯಿ ಮತ್ತು ದುಡಿದ ದುಡ್ಡೇ ಜೀವನ ಅಲ್ಲವಲ್ಲ. ನಾವು ಬದುಕ ಬೇಕಾಗಿರುವುದು ಮನುಷ್ಯರ ಜೊತೆ. ನಿಮಗೆ ಪ್ರಾಮಾಣಿಕ, ನಂಬಿಕಸ್ಥ ಸ್ನೇಹಿತರು ಸಿಕ್ಕಾಗ ಆ ಸ್ನೇಹವನ್ನು ಎಂದಿಗೂ ಕಳೆದುಕೊಳ್ಳಬೇಡಿ. ಆದರೆ ಉಳಿದೆಲ್ಲರ ಜೊತೆಗೆ ಒಂದು ಎಚ್ಚರಿಕೆಯಿಂದ ವರ್ತಿಸಿ. ಎಲ್ಲರಿಗೂ ನಿಮ್ಮನ್ನು ಮೋಸ ಮಾಡುವ ಉದ್ದೇಶ ಇರುವುದಿಲ್ಲ. ಆದರೆ ನೀವು ಎಲ್ಲರನ್ನು ನಂಬುವ ಮುಗ್ಧರು ಎನ್ನುವ ಸಂದೇಶ ನಿಮ್ಮಿಂದ ಹೋದರೆ, ಮೋಸಗಾರರು ನಿಮ್ಮನ್ನು ಸುತ್ತುವರೆಯಲು ಬಹಳ ಸಮಯ ಬೇಕಿಲ್ಲ. ಎಷ್ಟು ಎಚ್ಚರಿಕೆಯಿಂದ ಇದ್ದರೂ ಮೋಸಗಳು ಆಗಿಯೇ ಬಿಡುತ್ತವಲ್ಲ. ಅಂತಹ ಮೋಸಗಾರರಿಂದ ನಗುತ್ತಲೇ ದೂರವಾಗಿ. ಅವರನ್ನು ನೀವು ನಂಬಲು ಅವರು ನೀವು ಸಾಕಿದ ನಾಯಿಯಲ್ಲ. ನಿಮ್ಮ ಪರ್ಸ್ ಅಲ್ಲಿ ಇರುವ ಏಟಿಎಂ ಕಾರ್ಡ್ ಅಲ್ಲ.

Monday, April 26, 2021

ಕಲ್ಲು ಸಕ್ಕರೆ ಕೊಳ್ಳಿರೋ ನೀವೆಲ್ಲರೂ

೧೯೬೧ ರಲ್ಲಿ ಬಿಡುಗಡೆಯಾದ ಕಪ್ಪು-ಬಿಳುಪು ಚಿತ್ರ 'ಕಣ್ತೆರೆದು ನೋಡು'. ಈ ಚಿತ್ರದಲ್ಲಿ ಕಣ್ಣು ಕಾಣಿಸದ ನಾಯಕನಿಗೆ ಕಂಠ ಸಿರಿಯ ಪ್ರತಿಭೆ. ಅವನಿಂದ ಹಾಡು ಹಾಡಿಸಿ ಹಣ ಸಂಗ್ರಹಿಸುವ ಜೊತೆಗಾರ. ಈ ಚಿತ್ರದಲ್ಲಿ ಪಿ.ಬಿ.ಶ್ರೀನಿವಾಸ್ ಅವರ ಧ್ವನಿಯಲ್ಲಿರುವ ಪುರಂದರ ದಾಸರ ಕೀರ್ತನೆ ಇಂಪಾಗಿ ಮೂಡಿ ಬಂದಿದೆ. "ಸಂತೆಯೊಳಗೆ ಇಟ್ಟು ಮಾರುವುದಲ್ಲ ಭಕ್ತಿಯ ಸವಿ" ಎಂದು ದಾಸರು ಹಾಡಿದರೂ, ಅದನ್ನೇ ಬಂಡವಾಳ ಮಾಡಿಕೊಂಡಿರುವ ನಮ್ಮ ಸಮಾಜದ ದ್ವಂದ್ವವನ್ನು ತೋರಿಸುತ್ತದೆ.




Sunday, April 25, 2021

ಕನ್ನಡ ಮಣ್ಣಿನ ಧ್ರುವತಾರೆ

ಈ ವಾರ ಪೂರ್ತಿ ದೂರದರ್ಶನದಲ್ಲಿ ರಾಜಕುಮಾರ್ ಅಭಿನಯದ ಸಾಲು ಸಾಲು ಚಿತ್ರಗಳು. ಹಾಗೆಯೇ ಪತ್ರಿಕೆ, ಸೋಶಿಯಲ್ ಮೀಡಿಯಾ ದಲ್ಲೂ ಕೂಡ ರಾಜ್ ರ ನೆನಪಿಸಿಕೊಳ್ಳುವ ಲೇಖನಗಳು ಹಲವಾರು. ಇಂದಿನ ವಿಷಯ ಬಿಡಿ. ೫೦ ವರುಷಗಳಿಗೆ ಮುಂಚೆ ರೇಡಿಯೋನೇ ಲಕ್ಸುರಿ ಅನ್ನೋ ಕಾಲ ಇತ್ತಲ್ಲ. ಆಗ ಅದರಲ್ಲೂ ಕೂಡ 'ನಾನೇ ರಾಜಕುಮಾರ' ಎನ್ನುವ ಹಾಡು ಜನಪ್ರಿಯವಾಗಿತ್ತು. ಅವರ ಕಪ್ಪು-ಬಿಳುಪು ಚಿತ್ರಗಳು ಹಣ ಹಾಕಿದ ನಿರ್ಮಾಪಕರಿಗೆ ಮತ್ತು ನಾಲ್ಕಾಣೆ ಕೊಟ್ಟು ಸಿನಿಮಾ ನೋಡಲು ಬಂದ ಪ್ರೇಕ್ಷಕರಿಗೂ ನಿರಾಸೆ ಮಾಡಲಿಲ್ಲ. ಆರಂಭದಲ್ಲಿ ಭಕ್ತಿ ಪ್ರಧಾನ, ಕೌಟುಂಬಿಕ ಮತ್ತು ಪೌರಾಣಿಕ ಚಿತ್ರಗಳಲ್ಲಿ ಅವರು ಪ್ರಸಿದ್ಧಿಗೆ ಬಂದರೂ, ಆ ಚೌಕಟ್ಟನ್ನು ಮೀರಿ ಮುಂದೆ ಸಾಮಾಜಿಕ ಚಿತ್ರಗಳು, ಬಾಂಡ್ ಚಿತ್ರಗಳಲ್ಲಿ ಕೂಡ ಲೀಲಾಜಾಲವಾಗಿ ಅಭಿನಯಿಸಿ ತೋರಿಸಿದರಲ್ಲ.


ಐತಿಹಾಸಿಕ ವ್ಯಕ್ತಿಗಳು ಹೇಗಿದ್ದರೋ ನಾವು ತಿಳಿಯೆವು. ಆದರೆ 'ಮಯೂರ' ಎಂದರೆ ನನಗೆ ಕಣ್ಮುಂದೆ ಬರುವುದು ಕತ್ತಿ ಹಿಡಿದ ರಾಜಕುಮಾರ್ ಚಿತ್ರ. ಹಾಗೆಯೇ 'ಭಕ್ತ ಕನಕದಾಸ' ಎಂದರೆ 'ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ' ಎಂದು ರಾಜಕುಮಾರ್ ದೀನವಾಗಿ ಹಾಡುವ ಹಾಡು. 'ಕವಿರತ್ನ ಕಾಳಿದಾಸ', 'ಶ್ರೀಕೃಷ್ಣದೇವರಾಯ' ಮುಂತಾದ ಧೀಮಂತ ವ್ಯಕ್ತಿತ್ವಗಳಿಗೆ ಅವರು ಬಣ್ಣ ತುಂಬಿದ್ದು, ನಮ್ಮ ಕಲ್ಪನೆಗಳಿಗೆ ಸ್ಪಷ್ಟತೆ ಕೊಟ್ಟಿತು. ಆ ಪಾತ್ರಗಳಲ್ಲಿ ಬೇರೆಯವರನ್ನು ಕಲ್ಪಿಸಿಕೊಳ್ಳುವುದು ನನಗೆ ಅಸಾಧ್ಯದ ಮಾತು.


ರಾಜಕುಮಾರ್ ಅವರ ಅಭಿಮಾನಿ ಬಳಗವು ಅಪಾರವಾಗಿ ಬೆಳೆಯಿತಲ್ಲ. 'ತಾಯಿಗೆ ತಕ್ಕ ಮಗ' ಚಿತ್ರ ಬಿಡುಗಡೆಯ ನೂಕು ನುಗ್ಗಲಿನಲ್ಲಿ ಕೆಲ ಜನ ಸತ್ತೇ ಹೋದರು. 'ಹುಲಿಯ ಹಾಲಿನ ಮೇವು' ಚಿತ್ರದ ಟಿಕೆಟ್ ಗಳನ್ನು ಸ್ಟೇಡಿಯಂನಲ್ಲಿ ವಿತರಿಸಲಾಗಿತ್ತು. ಅವರ ಸಿನಿಮಾ ಬರಿ ಮನರಂಜನೆಗೆ ಸೀಮಿತವಾಗಲಿಲ್ಲ. 'ನಾವಿರುವ ತಾಣವೇ ಗಂಧದ ಗುಡಿ' ಎಂದು ಹಾಡಿ, ನಮ್ಮಕನ್ನಡ ನಾಡಿನ ಪ್ರೇಮವನ್ನು ಜಾಗೃತಗೊಳಿಸಿದರು.


ಅವರ ನೂರಾರು ಚಿತ್ರಗಳಲ್ಲಿನ ಪಾತ್ರಗಳು, ಅವುಗಳು ನಮ್ಮ ಸಾಮಾಜಿಕ ಬದುಕಿಗೆ ನೈತಿಕ ಚೌಕಟ್ಟು, ಆದರ್ಶಗಳನ್ನು ತುಂಬಿದ್ದು, ಯಾವುದೇ ಒಬ್ಬ ನಟ ಕೊಡಬಹುದಾದ ಮಹತ್ತರ ಕೊಡುಗೆ. ಅದಕ್ಕೆ ಅಲ್ಲವೇ, ಇಂದಿಗೆ ಅವರಿಲ್ಲ ಎಂದರೂ ಅವರ ಪ್ರಭಾವ ಕಡಿಮೆ ಆಗದೆ ಇರುವುದು. ಅದಕ್ಕೆ ಅವರು ನನಗೆ ಸ್ವಲ್ಪವೂ ಹೊಳಪು ಕಳೆದುಕೊಳ್ಳದ ಧ್ರುವತಾರೆ ಎನಿಸುತ್ತಾರೆ.

Friday, April 23, 2021

ಎಲ್ಲಿ ನಿಮ್ಮ ಮನೆ?

"ಎಲ್ಲೋ ಜೋಗಪ್ಪ ನಿನ್ನ ಅರಮನೆ?" ಎಂದು ಯಾರಾದರೂ ಕೇಳಿದರೆ ತೋರಿಸಲಿಕ್ಕೆ ಆದರೂ ನಮಗೆ ಮನೆ ಬೇಕಲ್ಲವೇ? ಅದು ಚಿಕ್ಕದಾದರೂ ಆದೀತು, ಶೀಟಿನದು ಆದರೂ ಆದೀತು. ನೆರಳು, ಏಕಾಂತ ಕೊಟ್ಟರೆ ಸಾಕು. ಚಿಕ್ಕ ಮಕ್ಕಳು ಅಮ್ಮನ ಮಡಿಲಿನಲ್ಲಿ ಮಲಗಿದ ಹಾಗೆ, ಮೈ ಚೆಲ್ಲಿ ನಿರಾತಂಕವಾಗಿ ಮಲಗಬಹುದಾದ ಸ್ಥಳ ನಮಗೆ ನಮ್ಮ ಮನೆ. ಯಾವಾಗಲಾದರೂ ಎರಡು-ಮೂರು ದಿನ ಸತತ ಪ್ರವಾಸ ಮಾಡಿ, ಬಸ್-ಸ್ಟಾಂಡ್ ನಲ್ಲೋ, ರೈಲ್ವೆ ಸ್ಟೇಷನ್ ನಲ್ಲೋ ಮಲಗಿದಾಗ, ಯಾವಾಗ ಮನೆ ಸೇರಿದೆವೋ ಎಂದು ಹಾತೊರೆಯುತ್ತಿರುತ್ತೇವೆ. ಸರ್ವಜ್ಞ ತನ್ನ ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ವಚನದಲ್ಲಿ ಮೊದಲು ಉಲ್ಲೇಖಿಸಿದ್ದು ಬೆಚ್ಚನೆಯ ಮನೆಯನ್ನು ಅಲ್ಲವೇ? ಸಾಕಷ್ಟು ಜನರ ಗಳಿಕೆಯ ಬಹುಪಾಲು ತಮ್ಮ ಮನೆಯ ಕಟ್ಟುವಿಕೆಗೆ ಖರ್ಚು ಮಾಡಿರುತ್ತಾರೆ. ಮತ್ತು ಅದು ಅವರ ಜೀವಮಾನದ ಸಾಧನೆ ಕೂಡ ಆಗಿರುತ್ತದೆ. ಇಂತಹ ಮನೆಯನ್ನು ಬಿಟ್ಟು ಹೋಗುವ ಸಂಧರ್ಭ ಹಿಂದೆ ಹಲವರಿಗೆ ಬಂದಿತ್ತಲ್ಲವೇ?


ಗೌತಮ, ಬುದ್ಧನಾಗುವುದಕ್ಕಿಂತ ಮುಂಚೆ ರಾಜಕುಮಾರನಾಗಿದ್ದನಲ್ಲವೇ? ರಾಜಕುಮಾರ ಸಿದ್ಧಾರ್ಥ ಸತ್ಯಾನ್ವೇಷಣೆಗೆ ಮನೆ ಬಿಟ್ಟು ಹೊರಟು ನಿಂತಾಗ, ಆತನ ಪತ್ನಿ ಯಶೋಧರೆ ಆ ಅನ್ವೇಷಣೆ, ಸಾಧನೆ ಮನೆಯಲ್ಲಿದ್ದುಕೊಂಡೇ ಮಾಡಬಹುದಲ್ಲವೇ ಎಂದು ಪ್ರಶ್ನಿಸುತ್ತಾಳೆ. ಅದಕ್ಕೆ ಸಿದ್ಧಾರ್ಥ ಕೊಟ್ಟ ಉತ್ತರವೇನು?


ತುಂಬಾ ಶ್ರೀಮಂತನಾಗಿದ್ದು, ಅಷ್ಟೇ ಜಿಪುಣನಾಗಿದ್ದ ನವಕೋಟಿ ನಾರಾಯಣ, ಪುರಂದರ ದಾಸನಾಗಿ ಬದಲಾಗಿ, ಅವನು ಮನೆ ತೊರೆಯುವ ಮುನ್ನ 'ಹೆಂಡತಿ ಸಂತತಿ ಸಾವಿರವಾಗಲಿ' ಎಂದು ಹಾಡಿದ್ದೇಕೆ?


ಮೋಹವೆಂದರೆ ಬರಿ ಧನ-ಕನಕ-ಸ್ತ್ರೀ ಅಷ್ಟೇ ಅಲ್ಲವಲ್ಲ. ನಾವು ಇಷ್ಟ ಪಟ್ಟು ಕಟ್ಟಿಕೊಂಡ ಮನೆಯೂ ಕೂಡ ಮೋಹದ ಒಂದು ಭಾಗ. ಆ ಮನೆಯನ್ನು ತ್ಯಜಿಸಿ ಹೋದವರಿಗೆ ಪ್ರಕೃತಿಯೇ ಮನೆಯಾಗುತ್ತದೆ. ಮಲಗಲು ಮರದ ನೆರಳು, ಪಾಳುಮಂಟಪ, ದೇವಸ್ಥಾನದ ಬಯಲು ಹೀಗೆ ಹಲವಾರು ಸ್ಥಳಗಳು. ಮನೆಯ ಗೋಡೆಗಳು ಬಂಧಿಸಿ ಹಿಡಿದಿಡುವ ಮನಸ್ಥಿತಿ ಬಯಲಿನಲ್ಲಿ ಇರುವುದಿಲ್ಲ. ಆಕಾಶವೇ ಹೊದ್ದಿಕೆಯಾದಾಗ, ಮನದ ವ್ಯಾಪ್ತಿಯೂ ವಿಶಾಲವಾಗುತ್ತದೆ. ಅದನ್ನು ಮನಗಂಡ ಸಾಧು-ಸಂತ-ಶರಣರು, ವಿಶಾಲ ಜಗತ್ತನ್ನೇ ತಮ್ಮ ಮನೆಯನ್ನಾಗಿಸಿಕೊಂಡರು. ಅವರ ಜೀವನ ಅನುಭವ ಕೂಡ ವಿಶಾಲವಾಯಿತು.


ಅವರಿಗೆ ಎಲ್ಲಿ ಹೋದರೂ, 'ಯಾವುದು ನಿಮ್ಮೂರು?', 'ಎಲ್ಲಿ ನಿಮ್ಮ ಮನೆ?' ಎನ್ನುವ ಪ್ರಶ್ನೆ ಎದುರಾಗಲಿಲ್ಲ. ಒಂದು ವೇಳೆ ಅಂತಹ ಪ್ರಶ್ನೆಗಳು ಎದುರಾದರೂ ಮುಗುಳ್ನಗುತ್ತ ಮುಂದೆ ಸಾಗಿದರು. ಆ ಸತ್ಯ ಗೊತ್ತಾಗದ ನಮ್ಮಂಥ ಲೌಕಿಕ ಜನರು, ಯಾರಾದ್ರೂ 'ಎಲ್ಲಿ ನಿಮ್ಮ ಮನೆ?' ಎಂದು ಕೇಳಿದರೆ ಸಾಕು. ನಮ್ಮ ಮನೆಯ ಪೂರ್ತಿ ವಿಳಾಸವನ್ನು ಕೊಡುವ ಪ್ರಯತ್ನ ಮಾಡುತ್ತೇವೆ ಅಲ್ಲವೇ?