ತನ್ನ ಶ್ರಮದಿಂದ ಪಕ್ಷ ಕಟ್ಟಿ, ಚುನಾವಣೆ ಗೆದ್ದು ಅಧಿಕಾರಕ್ಕೆ ಬಂದ ಪ್ರಧಾನ ಮಂತ್ರಿ, ಪಕ್ಷದ ಹಿತಕ್ಕೆ ಏನಾದರು ಮಾಡಲಿಕ್ಕೆ ಸಿದ್ಧನಿರುವ ಪಕ್ಷದ ಮುಖ್ಯಸ್ಥ, ಅವರನ್ನು ದೂಷಣೆಗೆ ಈಡು ಮಾಡಲು ತಂತ್ರ ರೂಪಿಸುವ ಎದುರಾಳಿ ಪಕ್ಷ, ಸರ್ಕಾರದ ಅಧಿಕಾರವನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳಲು ಮತ್ತು ಅದಕ್ಕಾಗಿ ಬೆದರಿಕೆ ಒಡ್ಡುವ ಅನೇಕ ಜನ. ಇವುಗಳ ನಡುವೆ ತಂತ್ರಗಾರಿಕೆಗೆ ಪ್ರತಿತಂತ್ರ ಹೆಣೆಯುವ, ತಪ್ಪುಗಳನ್ನು ಸರಿದೂಗಿಸುವ, ತೆರೆ ಮರೆಯಲ್ಲೇ ಆತಂಕಕಾರಿ ಪರಿಸ್ಥಿತಿಗಳನ್ನು ನಿಭಾಯಿಸುವ ಹೊಣೆ ಹೊತ್ತ ಕಾದಂಬರಿಯ ಮುಖ್ಯ ಪಾತ್ರ ಸಹದೇವ.
ಚುನಾವಣೆ ಹತ್ತಿರ ಬಂದಾಗ ರಾಜಕೀಯ ಸನ್ಯಾಸ ತೆಗೆದುಕೊಳ್ಳುವ ಇಂಗಿತ ಪ್ರಧಾನಿ ವ್ಯಕ್ತ ಪಡಿಸಿದಾಗ, ಪಕ್ಷದ ಮುಖ್ಯಸ್ಥ ಗಾಬರಿಯಾಗುತ್ತಾರೆ. ಅವರಿಲ್ಲದೆ ಇದ್ದರೆ ಚುನಾವಣೆ ಸೋಲುವ ಭೀತಿ. ಪಕ್ಷದ ಪೊಲಿಟಿಕಲ್ ಸ್ಟ್ರಾಟಜಿಸ್ಟ್ ಆದ ಸಹದೇವನಿಗೆ ಅದನ್ನು ತಪ್ಪಿಸುವ ಜವಾಬ್ದಾರಿ ಹೆಗಲೇರುತ್ತದೆ. ಸಮಸ್ಯೆಯನ್ನು ಸಹದೇವ ಕೆದಕುತ್ತಾ ಹೋದಾಗ ಪ್ರಧಾನಿಯ ಹಿಂದಿನ ಜೀವನ, ಅದರ ಬಗ್ಗೆ ತಿಳಿದ ಒಬ್ಬ ಪತ್ರಿಕೋದ್ಯಮಿ ಅವರನ್ನು ಬೆದರಿಸುವ ಪ್ರಯತ್ನ ಮಾಡಿರುವುದು ತಿಳಿಯುತ್ತದೆ. ಕಾದಂಬರಿಗೆ ಹೊಸ ಪಾತ್ರಗಳು ಸೇರುತ್ತಾ ಹೋಗುತ್ತವೆ.
ತಂತ್ರಗಾರಿಕೆ-ಪ್ರತಿತಂತ್ರ ಹೂಡುವ ಎಲ್ಲ ಮನುಷ್ಯರಿಗೂ ಒಂದು ಪ್ರತ್ಯೇಕ ಜೀವನ ಇದ್ದೇ ಇರುತ್ತದೆ. ಸಹದೇವನಿಗೂ ಅವನ ತಾಯಿಯಿದ್ದಾಳೆ. ಎಲ್ಲದರಲ್ಲೂ ನೆರವಾಗುವ ಸಹಾಯಕಿ ಮತ್ತು ಮನಸ್ಸು ಮತ್ತು ದೇಹ ಹಂಚಿಕೊಳ್ಳುವ ಸ್ನೇಹಿತೆ ಇದ್ದಾಳೆ. ರಹಸ್ಯ ಕೆಲಸಗಳಿಗೆ ನೆರವಾಗಲು ಅನೇಕ ಸರ್ಕಾರೀ ಅಧಿಕಾರಿಗಳು ಅವನ ಬೆಂಬಲಕ್ಕೆ ಇದ್ದಾರೆ. ಹಾಗೆಯೆ ಅವನನ್ನು ಹಣಿಯಲು ಎತ್ನಿಸುವ ಪ್ರತಿಸ್ಪರ್ಧಿಗಳು ಕೂಡ. ಹೊರಗಿನ ಪ್ರಪಂಚಕ್ಕೆ ತನ್ನ ಬಗ್ಗೆ ಯಾವುದೇ ವಿಷಯ ಗೊತ್ತಾಗದಂತೆ ಎಚ್ಚರ ವಹಿಸುವ ಸಹದೇವನಿಗೆ ಅವನ ಅಂತರಂಗದಲ್ಲಿ ಅನೇಕ ಗೊಂದಲಗಳಿವೆ. ಅದನ್ನು ಮೀರಿ ಅವನು ತನ್ನ ಜವಾಬ್ದಾರಿ ನಿಭಾಯಿಸಬೇಕು. ತನ್ನ ಪಕ್ಷದ ಹಿತ ಕಾಯಬೇಕು.
ಉಳಿದ ಪಾತ್ರಗಳಾದ ಪ್ರಧಾನ ಮಂತ್ರಿ, ಪಕ್ಷದ ಮುಖ್ಯಸ್ಥ, ಸಹದೇವನ ತಾಯಿ, ಸ್ನೇಹಿತೆ, ಅವನ ಪ್ರತಿಸ್ಪರ್ಧಿಗಳು ಎಲ್ಲರಿಗೂ ಅವರದೇ ಆದ ಮಿತಿಗಳಿವೆ. ಅವರದ್ದೇ ಆದ ಇತಿಹಾಸ ಇದೆ. ಹಾಗೆಯೆ ನಂಬಿಕೆ, ಆಸೆಗಳು ಕೂಡ.
ಸಮಸ್ಯೆಗೆ ಪರಿಹಾರ ಕಾಣಲು ಪ್ರಧಾನ ಮಂತ್ರಿಯವರೊಂದಿಗೆ ಅವರ ಸಾಹಿತ್ಯ ಸ್ನೇಹಿತ ಒಬ್ಬರ ಮನೆಯಲ್ಲಿ ಠಿಕಾಣಿ ಹೂಡುವ ಸಹದೇವನಿಗೆ ಹೊಸ ಜನರ ಮತ್ತು ಜೀವನದ ಹೊಸ ಆಯಾಮಗಳ ಪರಿಚಯವಾಗುತ್ತದೆ. ಮಹಾಭಾರತ ಬರೆದ ವ್ಯಾಸರ ಪಾತ್ರ ಅವನಿಗೆ ಪರಿಚಯ ಆಗುತ್ತದೆ. ಅಲ್ಲಿ ಇರುವವರಿಂದ ತಾನು ಬೇರೆ ಎಂದು ಯೋಚಿಸುವ ಅವನು ಕ್ರಮೇಣ ಅವರಲ್ಲಿ ಒಂದಾಗುತ್ತಾನೆ. ಎಲ್ಲವು ರಾಜಕೀಯದ ಲೆಕ್ಕಾಚಾರ ಎನ್ನುವ ಅವನ ನಿಲುವು ಬದಲಾಗುತ್ತದೆ. ಮುಂದೆ ಮದುವೆ ಆಗುವ ನಿರ್ಧಾರ ಮಾಡುತ್ತಾನೆ. ಐವತ್ತನೇ ವಯಸ್ಸಿನಲ್ಲಿ ಅವನ ಜೀವನಕ್ಕೆ ಹೊಸತನ ಬರುತ್ತದೆ.
ಆದರೆ ರಾಜಕೀಯಕ್ಕೆ ಕೊನೆ ಎಲ್ಲಿ? ಭಾರತ ಇರುವವರೆಗೆ ಮಹಾಭಾರತ ಇರಬೇಕಲ್ಲವೇ? ಅಲ್ಲಿ ಪಾತ್ರಗಳಷ್ಟೇ ಅಭಿನಯಿಸುವುದಿಲ್ಲ. ಪ್ರೇಕ್ಷಕರು ಕೂಡ ಮೂಕ ಅಭಿನಯ ನೀಡುವವರೇ.
ಕಾದಂಬರಿಯ ಹಲವಾರು ಪುಟಗಳು ಮನೋಜ್ಞವಾಗಿ ಚಿತ್ರಗೊಂಡಿವೆ. "ಸಂಭವಾಮಿ ಯುಗೇ ಯುಗೇ" ಎನ್ನುವ ವ್ಯಾಸ, ದೇಶದ ಪ್ರಗತಿ ಬಯಸುವ ಪ್ರಧಾನಿ, ಪಕ್ಷದ ಹಿತ ಬಯಸುವ ಮುಖ್ಯಸ್ಥ, ಬದುಕಿನ ಸಣ್ಣ ಸಂಗತಿಗಳನ್ನು ಆನಂದಿಸುವ ಸಹದೇವನ ಗೆಳತಿ ಹೀಗೆ ಕಾದಂಬರಿಯ ಎಲ್ಲ ಪಾತ್ರಗಳು ಹದವಾಗಿ ಮೂಡಿ ಬಂದಿವೆ.
ಕ್ಲಿಷ್ಟ ವಿಷಯಗಳನ್ನು ಸರಳವಾಗಿ ಅಕ್ಷರದಲ್ಲಿ ಮೂಡಿಸುವ ಲೇಖಕ ಜೋಗಿಯವರಿಗೆ ಅಭಿನಂದನೆಗಳು. ಒಬ್ಬರ ಬಾಯಿಂದ ಇನ್ನೊಬರಿಗೆ ತಲುಪಿದ ಮಹಾಭಾರತದಲ್ಲಿ ಕಥೆ ಹೇಳಿದವರ ಪ್ರಜ್ಞೆಯು ಕೂಡ ಕಥೆಯಾದಂತೆ, ಹಸ್ತಿನಾವತಿ ಓದಿದ, ಅದನ್ನು ನಮಗೆ ತಿಳಿದಂತೆ ಅರ್ಥೈಸಿಕೊಳ್ಳುವ ನಮ್ಮ ಕಥೆಯು ಕೂಡ ಅದರಲ್ಲಿ ಸೇರಿಕೊಳ್ಳುತ್ತದೆ. ವ್ಯಾಸನ ಭಾರತ, ಜೋಗಿಯ ಭಾರತವಾಗಿ ಮತ್ತು ಅದು ಓದುಗರ ಭಾರತವಾಗಿ ಪರಿವರ್ತಿತಗೊಳ್ಳುತ್ತ ಸಾಗುತ್ತದೆ.