Monday, December 14, 2020

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಇಪ್ಪತ್ತರ ಹರೆಯ

ಕಳೆದ ತಿಂಗಳಲ್ಲಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (International Space Station) ಇಪ್ಪತ್ತು ತುಂಬಿತು. ಮುಂದುವರೆದ ದೇಶಗಳಲ್ಲಿ ಇದು ಸುದ್ದಿ ಮಾಡಿದರೂ, ನಮ್ಮ ದೇಶದ ಮಾಧ್ಯಮಗಳಲ್ಲಿ ಇದು ಚರ್ಚೆಯಾಗಲಿಲ್ಲ. ಅದರಲ್ಲಿ ಭಾರತದ ಕೊಡುಗೆ ಏನು ಇರಲಿಲ್ಲ ಎನ್ನುವುದಕ್ಕೋ ಏನೋ? ನಿಜ, ಅದು ಶ್ರೀಮಂತ ದೇಶಗಳ ಯೋಜನೆ. ನೂರು ಬಿಲಿಯನ್ ಡಾಲರ್ ವೆಚ್ಚದ ಯೋಜನೆಯಲ್ಲಿ ಪಾಲ್ಗೊಳ್ಳಲು ನಮಗೆ ಇಪ್ಪತ್ತು ವರುಷಗಳ ಹಿಂದೆ ಸಾಧ್ಯವಿರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಇಸ್ರೋ ಸಂಸ್ಥೆಯ ವಿಜಯಗಳು ಭಾರತಕ್ಕೆ ವಿಶ್ವಾಸ ತುಂಬಿ ನಮ್ಮದೇ ಒಂದು ಬಾಹ್ಯಾಕಾಶ ನಿಲ್ದಾಣ ನಿರ್ಮಿಸಲು ಯೋಜನೆ ಹಾಕಿಕೊಳ್ಳುವಂತಾಗಿದೆ.

 

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಮನುಜ ಕುಲದ ವಿಕಾಸ ಮತ್ತು ವಿಜ್ಞಾನದ ಪ್ರಗತಿಯ ಸಂಕೇತ. ಇಪ್ಪತ್ತು ವರ್ಷಗಳಲ್ಲಿ ಮನುಷ್ಯರು ಬಾಹ್ಯಾಕಾಶದಲ್ಲಿ ಸುರಕ್ಷಿತವಾಗಿ ಜೀವಿಸಿ, ಅಲ್ಲಿರುವ ಸವಾಲುಗಳನ್ನು ಎದುರಿಸಿ, ಸಮಸ್ಯೆಯಿಲ್ಲದೆ ಭೂಮಿಗೆ ಮರಳುವುದು ಸಾಧ್ಯ ಎನ್ನುವುದು ಹಲವಾರು ಬಾರಿ ತೋರಿಸಿಕೊಟ್ಟಿದೆ. ತುಂಬಾ ದುಬಾರಿ ಎನ್ನಿಸುವ ಯೋಜನೆ, ಕೃತಕ ಉಪಗ್ರಹಗಳು ಮಾಡುವ ಕೆಲಸಕ್ಕಿಂತ ಹೆಚ್ಚಿನದನ್ನು ಸಾಧ್ಯವಾಗಿಸುತ್ತದೆ. ಇದು ಆಕಾಶದಲ್ಲಿ ಹಾರಾಡುವ ಒಂದು ಪ್ರಯೋಗಾಲಯ. Microgravity ಯಲ್ಲಿ ಮಾತ್ರ ಸಾಧ್ಯವಾಗುವಂತ ಪ್ರೋಟೀನ್ ಗಳನ್ನು ಇದರಲ್ಲಿ ಅಭಿವೃದ್ಧಿ ಪಡಿಸಲಾಗುತ್ತದೆ. ಪ್ರಕೃತಿ ವಿಕೋಪಗಳ ಜಾಡು ಹಿಡಿದು ಹೋಗುವುದು ಇದರ ಇನ್ನೊಂದು ಕೆಲಸ. ಭೂಮಿ ಮತ್ತು ಅದರ ಸಮೀಪದ ಆಕಾಶದ ಮೇಲೆ ಸದಾ ಕಣ್ಣಿಟ್ಟು, ಭೂಮಿಯ ಸುತ್ತುವ ಕೇಂದ್ರ ಕಳಿಸುವ ಚಿತ್ರಗಳು ಮತ್ತು ಮಾಹಿತಿ ಅಪಾರ. ಸುಮಾರು ೧೦ ವರುಷಕ್ಕೂ ಹೆಚ್ಚಿನ ಕಾಲ ಆಕಾಶದಲ್ಲಿ ನಿಲ್ದಾಣದ ಜೋಡಣೆಯ ಕಾರ್ಯ ನಡೆಯಿತ್ತಲ್ಲ. ಆಗ ಇದನ್ನು ಕಟ್ಟುವ ಸಲುವಾಗಿ ಅಭಿವೃದ್ಧಿ ಪಡಿಸಿದ ತಂತ್ರಜ್ಞಾನಗಳು ಇಂದು ಮನುಕುಲದ ಕೆಲ ಗಂಭೀರ ಸಮಸ್ಯೆಗಳನ್ನು, ಅದರಲ್ಲೂ ಮುಖ್ಯವಾಗಿ ವೈದ್ಯಕೀಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಸಹಾಯವಾಗಿವೆ. ಹೀಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಆಗಿರುವ ೧೫ ಉಪಯೋಗಗಳ ಪಟ್ಟಿಯನ್ನು ಮಾಡಿದೆ ಅಮೇರಿಕಾದ ನಾಸಾ ಸಂಸ್ಥೆ. (Link: https://www.nasa.gov/mission_pages/station/research/news/15_ways_iss_benefits_earth

ಅಲ್ಲದೆ ಕಳೆದ ವಾರದ ಮುಖ್ಯ ಬೆಳವಣಿಗೆಗಳನ್ನು ಲಿಂಕ್ ಮೂಲಕ ವರದಿ ಮಾಡಿದೆ. Link: https://www.nasa.gov/mission_pages/station/research/news/space-station-science-highlights-07dec20

ಯಮಧರ್ಮ ತೆರೆದು ಹೋದ ಆಧ್ಯಾತ್ಮದ ಬಾಗಿಲು

ಸುಮಾರು ಎರಡು ವರ್ಷದ ಹಿಂದಿನ ಸಮಯ. ಆ ದಿನ ಬುದ್ಧ ಪೂರ್ಣಿಮೆ. ಸಾಯಂಕಾಲ ವೇಳೆ ಬೆಂಗಳೂರಿನ ಟ್ರಾಫಿಕ್ ನಲ್ಲಿ ಕಾರು ಓಡಿಸುತ್ತಿದ್ದ ನನಗೆ ಒಂದಾದರ ಮೇಲೆ ಒಂದರಂತೆ ಫೋನ್ ಕರೆಗಳು ಬರತೊಡಗಿದ್ದವು. ಎಲ್ಲವುಗಳ ಸಂದೇಶವೂ ಒಂದೇ. ನನ್ನ ತಾಯಿ ತೀರಿಕೊಂಡಿರುವುದಾಗಿ, ಕೂಡಲೇ ಹೊರಟು ಬರಬೇಕೆಂದು ಮನೆಯವರು, ಬಂಧುಗಳು, ಸ್ನೇಹಿತರು ತಿಳಿಸುತ್ತಲೆ ಇದ್ದರು. ಆಘಾತ, ಆತಂಕ ಎನ್ನಿಸಿದರೂ ಸಾವರಿಸಿಕೊಂಡು, ಕಾರನ್ನು ಬಂಧುವೊಬ್ಬರ ಕೈಗೆ ಒಪ್ಪಿಸಿ, ಸೀದಾ ಮೆಜೆಸ್ಟಿಕ್ ಗೆ ಬಂದು ನನ್ನ ಊರಾದ ಮಸ್ಕಿ ಗೆ ಹೋಗುವ ಬಸ್ಸನ್ನು ಏರಿದೆ.


ಬೆಳಿಗ್ಗೆ ಊರಿಗೆ ಬಂದು ಸೇರುವಷ್ಟರಲ್ಲಿ, ಮನೆಯಲ್ಲಿ ತಾಯಿಯ ಅಂತಿಮ ದರ್ಶನದ ವ್ಯವಸ್ಥೆ ಮತ್ತು ಅಂತ್ಯ ಸಂಸ್ಕಾರಕ್ಕೆ ಆಗಬೇಕಾದ ಏರ್ಪಾಡುಗಳು ಆಗುತ್ತಿದ್ದವು. ಲಿಂಗಾಯತ ಸಮಾಜ ಮಾಡುವ  ವ್ಯವಸ್ಥಿತ ಏರ್ಪಾಡು ಮತ್ತು ಊರಿನ ಎಲ್ಲ ಧರ್ಮದ ಜನರ ಸಹಕಾರವನ್ನು ಕಂಡು ನನಗೆ ಈ ಊರಲ್ಲಿ ಪ್ರಾಣ ಬಿಡುವುದಕ್ಕೂ ಪುಣ್ಯ ಇರಬೇಕು ಎನ್ನಿಸತೊಡಗಿತ್ತು. ಅಲ್ಲಿಯವರೆಗೆ ಸಾಕಷ್ಟು ಅಂತ್ಯ ಸಂಸ್ಕಾರಗಳಲ್ಲಿ ಭಾಗವಹಿಸಿದ್ದರೂ, ಅಂದು ಮಾತ್ರ ನನ್ನಲ್ಲಿನ ಒಂದು ಭಾಗವು ಸತ್ತು ಹೋಯಿತೆನ್ನುವ ಭಾವನೆ ಮನೆ ಮಾಡಿತ್ತು. ಏನು ಮಾಡುವುದಕ್ಕೂ ತೋಚದಂತಾಗಿತ್ತು.


ಅಂತ್ಯ ಕ್ರಿಯೆ ಮುಗಿದ ರಾತ್ರಿ, ಮಾಡಲು ಇನ್ನೇನು ಕೆಲಸ ಇಲ್ಲ ಎಂದಾಗ ನೆನಪು ಮಾಡಿಕೊಂಡೆ. ಕೊನೆಯ ಬಾರಿ ಮಾತನಾಡಿದಾಗ ತನಗೆ ಕೆಮ್ಮು ಬಂದಿದ್ದು ಆದರೆ ಅದು ಕಡಿಮೆಯಾಗುತ್ತಿರುವುದಾಗಿ ನನ್ನ ತಾಯಿ ತಿಳಿಸಿದ್ದಳು. ಊರಿಗೆ ಯಾವಾಗ ಬರುತ್ತೀಯ ಎಂದು ಕೇಳಿದ್ದಳು. ಬರುವಷ್ಟರಲ್ಲಿ ಅವಳೇ ಇರಲಿಲ್ಲ. ವಾಂತಿ ಬರುತ್ತಿದೆ ಎಂದು ಮನೆಯ ಹೊರಗಡೆ ಹೋದ ಅವಳು ಹಾಗೆ ಉರುಳಿ ಬಿದ್ದಿದ್ದಳು. ಅವಳಿಗೆ ಕೊನೆಯ ಕ್ಷಣದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಆಸ್ಪತ್ರೆಗೆ ಕರೆದೊಯ್ದ ನಮ್ಮ ನೆರೆ ಮನೆಯಲ್ಲಿರುವ ಡಾಕ್ಟರ್ ತಿಳಿಸಿದ್ದು, ಅಮ್ಮ ಯಾವುದೇ ಚಿಕಿತ್ಸೆಗೆ ಅವಕಾಶ ನೀಡಲಿಲ್ಲ ಎಂದು. ಅವಳಿಗೆ ಯಾರ ಜೊತೆಗೂ ಕೊನೆಯ ಮಾತು ಆಡುವ ಅವಕಾಶ ನೀಡದೆ ಯಮಧರ್ಮ ಹಟಾತ್ತನೆ ಕರೆದೊಯ್ದಿದ್ದ. ಅಂದು ರಾತ್ರಿ ಎಷ್ಟು ಹೊತ್ತಾದರೂ, ಕಣ್ಣು ಕೆಂಪಾಗಿ, ಮೈ ಬಿಸಿಯೇರಿದರೂ  ನನಗೆ ನಿದ್ದೆ ಮಾತ್ರ ಬಾರದು. ನನ್ನ ಮೊಬೈಲ್ ನಲ್ಲಿ ಹಾಕಿಕೊಂಡ ವಿಡಿಯೋನಲ್ಲಿ ಸದ್ಗುರು ಹೇಳುತ್ತಿದ್ದ "ಸಾವು ಸಹಜ ಕ್ರಿಯೆ. ಆದರೆ ಅದು ಬರುವ ಮುಂಚೆಯೇ ನಾವು ಅದನ್ನು ಸ್ವಾಗತಿಸಲು ತಯಾರಿ ಮಾಡಿಕೊಳ್ಳಬೇಕು." ಮಂಕು ಬಡಿದಂತೆ ಎರಡು ದಿನ ಕಳೆದ ನಾನು ಹಿತವಿಲ್ಲದಿದ್ದರೂ ಮತ್ತೆ ಲೌಕಿಕ ಜೀವನಕ್ಕೆ ಸ್ವಲ್ಪ ಅಸಹಜ ಎನ್ನುವ ರೀತಿಯಲ್ಲೇ ಮರಳಿದೆ.


ಬೇರೆಯ ಸಮಸ್ಯೆಗಳು ನನ್ನನ್ನು ಅವರಿಸಿದರೂ, ನಡೆದು ಹೋದದ್ದು ಜೀರ್ಣಿಸಿಕೊಳ್ಳಲು ಕೆಲವು ತಿಂಗಳುಗಳೇ ಬೇಕಾದವು. ಆದರೆ ಆ ಸಮಯದಲ್ಲಿ ನನ್ನ ವಿಚಾರಗಳು ಬದಲಾಗತೊಡಗಿದವು. ದುಡ್ಡು, ಅಸ್ತಿ, ಮರ್ಯಾದೆ ಸಂಪಾದಿಸುವುದಕ್ಕಿಂತ ದ್ವೇಷ, ಗರ್ವ, ಅಹಂ ಗಳನ್ನು ಕಳೆದುಕೊಳ್ಳುವುದೇ ಜೀವನ ಎನ್ನಿಸತೊಡಗಿತು. ಅದುವರೆಗೆ ಓದಿದ ಉಪನಿಷತ್ತುಗಳೆಲ್ಲ ಸಪ್ಪೆ ಎನ್ನಿಸತೊಡಗಿದವು. ಹಿಮಾಲಯದ ಗುಡಿಗಳಿಗೆ ಹೋಗದಿದ್ದರೂ, ಗಂಗೆಯ ಮಡಿಲು ಸೇರದಿದ್ದರು ಜೀವನಕ್ಕೆ ಮುಕ್ತಿ ಎನ್ನುವುದು ಎಲ್ಲರಿಗೂ ಸಾಧ್ಯ ಎನ್ನುವ ನಂಬಿಕೆ ಬಲವಾಗತೊಡಗಿತು. 'ಎಲ್ಲೋ ಹುಡುಕಿದೆ ಇಲ್ಲದ ದೇವರ' ಎಂದು ಬರೆದಿದ್ದು ಶಿವರುದ್ರಪ್ಪನವರೇ ಆದರೂ, ಅದು ನನ್ನ ಹಾಗೆ ನೂರಾರು, ಸಾವಿರಾರು ಜನರ ಎದೆಯಾಳದ ಧ್ವನಿ ಎನ್ನಿಸತೊಡಗಿತು. ಮಾತಿಗಿಂತ ಮೌನ ಶ್ರೇಷ್ಟ ಎಂದು ಹೇಳಿದ್ದು ಓಶೋ ಮಹಾಗುರು. ಅದುವರೆಗೆ ಧ್ಯಾನ ಎಂದರೆ ಏನು ಎಂದು ಗೊತ್ತಿರದಿದ್ದ ನನಗೆ, ಯಾವುದೇ ಚಿತ್ತ ವಿಕಾರಗಳಿಲ್ಲದೆ ಸುಮ್ಮನೆ ಕುಳಿಕೊಳ್ಳುವುದು ಸಾಧ್ಯವಾಗತೊಡಗಿತು. ಭಾವನೆಗಳೆಲ್ಲ ಕರಗಿ ಸ್ಪಷ್ಟತೆ ಮೂಡಲಾರಂಭಿಸಿತು.


ನನ್ನ ಸುಪ್ತ ಮನಸ್ಸು ತಿಳಿದುಕೊಂಡದ್ದು ನನ್ನ ಅರಿವಿಗೆ ಬರಲು ಇನ್ನು ಹೆಚ್ಚಿನ ಸಮಯ ತಗುಲಿತು. ನನಗೆ ಇಂದು ಭಾವನೆಗಳೆಲ್ಲ ತಹಬದಿಗೆ ಬಂದ ಮೇಲೆ ಅನಿಸುವುದು ಏನೆಂದರೆ, ಅವಸರದಲ್ಲಿ ನನ್ನ ತಾಯಿಯನ್ನು ಕರೆದೊಯ್ದ ಯಮಧರ್ಮ, ನನ್ನನ್ನು ಮುಂದೊಂದು ದಿನ ಕರೆದೊಯ್ಯಲು ಬರುವುದಾಗಿ ಖಡಕ್ಕಾಗಿ ಎಚ್ಚರಿಸಿ ಹೋಗಿದ್ದ. ಆದರೆ ಅಲ್ಲಿಯವರೆಗೆ ನಿನಗೆ ತಿಳಿದಿದ್ದು, ಸಾಧ್ಯವಾಗಿದ್ದು  ಮಾಡಿಕೋ ಎನ್ನುವಂತೆ, ನನಗೆ ಆಧ್ಯಾತ್ಮದ ಬಾಗಿಲು ತೆರೆದು ಹೋಗಿದ್ದ. ಯಮನಿಗೆ ಯಾವುದಾದರೂ ಧರ್ಮ ಇದ್ದರೆ ಅದು ಇದೇ ಏನೋ ಎನ್ನುವಂತೆ. ತೆರೆದ ಬಾಗಿಲಿನ ಆಚೆ ಇರುವ ಬುದ್ಧ-ಶಂಕರ-ಬಸವ-ಅಕ್ಕ-ಶರೀಫ-ದಾಸರು ನನ್ನ ಕಾಲದವರಲ್ಲರಾದರೂ, ನನಗೆ ಹೆಚ್ಚು ಆತ್ಮೀಯ ಎನ್ನಿಸತೊಡಗಿದರು. ವೇದ-ಪುರಾಣ-ಗೀತೆಗಳು ಸಪ್ಪೆ ಎನಿಸತೊಡಗಿದವು. ಭಕ್ತಿಯೇ ಪೂಜೆ, ಧರ್ಮವೇ ಪ್ರಸಾದ, ಕರುಣೆಯೇ ತೀರ್ಥ ಎನ್ನುವ ತಿಳುವಳಿಕೆ ಬಂದಿತು. ನಮ್ಮ ಗುಡಿಗಳಲ್ಲಿ ನಡೆಯುವುದು ಅದರ ಅಂಧ ಅನುಕರಣೆ ಮಾತ್ರ ಎನ್ನುವ ಸ್ಪಷ್ಟತೆ ಮೂಡಿತು.


ಅರ್ಥವಿಲ್ಲದ ಜೀವನದಲ್ಲಿ, ಏನು ನಿನ್ನ ಗುರಿ ಎಂದು ಕೇಳಿ ಹೋದ ಯಮ ಮತ್ತೆ ಬರುವಷ್ಟರಲ್ಲಿ ಉತ್ತರ ಹುಡುಕಿಕೊಳ್ಳಬೇಕು. ಆತನ ಮೇಲೆ ನನಗೆ ಯಾವುದೇ ದೂರುಗಳಿಲ್ಲ. ಬದಲಿಗೆ ಜೀವನ ನನಗೆ ಈಗಾಗಲೇ ಕೊಟ್ಟಿರುವ ಸೌಕರ್ಯಗಳಿಗೆ ಋಣಿಯಾಗಿದ್ದೇನೆ. ಅದರಲ್ಲೇ ನನ್ನಿಂದ ಸಾಧ್ಯ ಆಗುವುದರ ಕಡೆಗೆ ಹೆಜ್ಜೆ ಇಟ್ಟಿದ್ದೇನೆ. ಸ್ವಾರ್ಥದಿಂದಾಚೆಗೆ ಇಡುವ ಪುಟ್ಟ ಹೆಜ್ಜೆಗಳು ನನ್ನಲ್ಲಿ ಹೊಸ ಉತ್ಸಾಹ ಮೂಡಿಸಿವೆ. ಅಡಿಗರು ತಮ್ಮ ಕಾವ್ಯದಲ್ಲಿ ಹೇಳಿದ ಹಾಗೆ ದೂರ ತೀರಕೆ ಕರೆಯುವ ಮೋಹನ ಮುರಳಿಯ ಕರೆ ಪ್ರತಿಯೊಬ್ಬರಿಗೆ ಅವರ ಸಮಯ ಬಂದಾಗ ಕೇಳಿಯೇ ಕೇಳಿಸುತ್ತದೆ. ಅದಕ್ಕೆ ಮುಂಚೆ ನಮ್ಮ ಕರ್ಮದ ಹೊರೆ ಕಡಿಮೆ ಮಾಡಿಕೊಳ್ಳುವ ಅವಕಾಶಗಳ ಸದುಪಯೋಗ ಮಾಡಿಕೊಳ್ಳುವುದು ನಮಗೆ  ಬಿಟ್ಟಿದ್ದು. ನಾನು ಆ ದಿಶೆಯಲ್ಲಿ ಈಗಾಗಲೇ ಹೆಜ್ಜೆ ಇಟ್ಟಾಗಿದೆ. ಬದುಕು ಕಳೆದು ಹೋಗುವ ಮುನ್ನವೇ ಬದುಕಬೇಕಲ್ಲವೇ?

Sunday, December 13, 2020

ಮೈಯಲ್ಲಿನ ತೂಕ ಕಡಿಮೆಯಾದಾಗ ಅದು ಹೋಗುವುದು ಎಲ್ಲಿಗೆ?

ಈಗ ಎಲ್ಲರಿಗೂ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ಅಲ್ಲವೇ? ನಿಮ್ಮ ಎತ್ತರಕ್ಕೆ ಅನುಗುಣವಾಗಿ ಇರದೇ ನಿಮ್ಮ ದೇಹದ ತೂಕ ಹೆಚ್ಚಿದ್ದರೆ ಅದನ್ನು ಕಡಿಮೆ ಮಾಡಿಕೊಳ್ಳಲು ವೈದ್ಯರು ಸಲಹೆ ನೀಡುತ್ತಾರೆ ಅಲ್ಲವೇ? ಆಗ ತೂಕ ಹೆಚ್ಚಿದ್ದವರು ಏನೆಲ್ಲಾ ಸಾಹಸ ಮಾಡುತ್ತಾರೆ. ಬೆಳಿಗ್ಗೆ ಇಲ್ಲವೇ ಸಂಜೆ ನಡಿಗೆ, ಲಘು ಓಟ, ಜಿಮ್ ಸೇರಿಕೊಳ್ಳುವುದು, ತಿನ್ನುವ ಆಹಾರದ ಕಡೆಗೆ ಕಾಳಜಿ ವಹಿಸುವುದು,  ಕಡಿಮೆ ಕೊಬ್ಬಿನಂಶ ಇರುವ ಪದಾರ್ಥ ಸೇವಿಸುವುದು ಹೀಗೆ ಎಲ್ಲ ಪ್ರಯತ್ನಗಳು ತೂಕ ಕಡಿಮೆ ಮಾಡಿಕೊಳ್ಳುವುದರ ಕಡೆಗೆ ಸಾಗುತ್ತವೆ. ಅದರ ಪ್ರತಿಫಲ ಎಂಬಂತೆ ತೂಕದ ಯಂತ್ರ ಕಡಿಮೆ ತೂಕ ತೋರಿಸಲು ಶುರು ಮಾಡಿದಾಗ 'ಉಸ್ಸಪ್ಪ' ಎನ್ನುತ್ತಾರೋ ಅಥವಾ ಖುಷಿಯಿಂದ ಇನ್ನು ಹೆಚ್ಚು ನಡಿಗೆ, ಓಟ ಪ್ರಾರಂಭ ಮಾಡುತ್ತಾರೋ ಇಲ್ಲವೇ ಹಳೆಯ ಆಲಸ್ಯಕ್ಕೆ ಶರಣು ಹೋಗುತ್ತಾರೋ ಅವರವರ ಮೇಲೆ ಅವಲಂಬಿತವಾಗಿದೆ. ಆದರೆ ನನಗೆ ಮಾತ್ರ ಪ್ರಶ್ನೆ ಕಾಡಿದ್ದು, ಈ ಮೈಯಲ್ಲಿನ ತೂಕ ಕೊಡುವ ಭೌತಿಕ ವಸ್ತು ದೇಹದಿಂದ ಮರೆಯಾಗಿ ಹೋಗಿದ್ದು ಹೇಗೆ ಎನ್ನುವುದು?


ಅದಕ್ಕೆ ನಾನು ಗೂಗಲ್ ಹುಡುಕಾಟ ಆರಂಭಿಸಿದಾಗ ಕೆಲವು ಕುತೂಹಲ ಎನ್ನಿಸುವ ವಿಷಯಗಳು ಗೊತ್ತಾದವು. ಅವುಗಳನ್ನು ನಿಮ್ಮೊಂದಿಗೆ ಹಂಚಿಕೊಂಡರಾಯಿತು ಎನ್ನುವ ಉದ್ದೇಶ ಈ ಲೇಖನದ್ದು. ಮೊದಲಿಗೆ ನಾವು ತಿಳಿಕೊಳ್ಳಬೇಕಾದದ್ದು ಕೊಬ್ಬು ಹೇಗೆ ನಮ್ಮ ಮೈ ಸೇರಿತು ಎನ್ನುವುದು, ನಂತರ ಅದು ಕರಗಿ ಹೋಗುವ ಬಗೆಯನ್ನು. 


ನಾವು ದೇಹಕ್ಕೆ ಅಗತ್ಯ ಇರುವದಕ್ಕಿಂತ ಹೆಚ್ಚಿನ ಪ್ರೋಟೀನ್, ಕಾರ್ಬೋಹೈಡ್ರೇಟ್ ಆಹಾರ ಸೇವಿಸಿದಾಗ ಅದು ಕೊಬ್ಬಿನಂಶವಾಗಿ ಮಾರ್ಪಟ್ಟು ನಮ್ಮ ದೇಹದಲ್ಲಿ ಶೇಖರವಾಗಿ, ನಮ್ಮ ದೇಹದ ತೂಕವನ್ನು ಹೆಚ್ಚಿಸುತ್ತದೆ. ನಾವು ದೇಹಕ್ಕೆ ಪರಿಶ್ರಮ ಕೊಡುವ ಕೆಲಸದಲ್ಲಿ ತೊಡಗಿದಾಗ, ಆಗ ನಡೆಯುವ ಜೀವರಾಸಾಯನಿಕ ಕ್ರಿಯೆಯಲ್ಲಿ ಅದು ಕರಗಿ ದೇಹಕ್ಕೆ ಶಕ್ತಿ ಕೊಡುವುದಲ್ಲದೆ, ಎರಡು ತ್ಯಾಜ್ಯ ವಸ್ತುಗಳನ್ನು ಉತ್ಪಾದಿಸುತ್ತದೆ. ಆ ತಾಜ್ಯ ವಸ್ತುಗಳು ನೀರು ಮತ್ತು ಕಾರ್ಬನ್ ಡೈಆಕ್ಸೈಡ್. ನೀರು ಬೆವರಿನ ಮೂಲಕ ಇಲ್ಲವೇ ಮೂತ್ರದ ಮೂಲಕ ದೇಹದಿಂದ ಹೊರಗೆ ಹೋದರೆ, ಕಾರ್ಬನ್ ಡೈಆಕ್ಸೈಡ್ ನ್ನು ನಾವು ಉಸಿರಿನ ಮೂಲಕ ಹೊರ ಹಾಕುತ್ತೇವೆ. 

ಆದರೆ ಇಲ್ಲಿ ಗಮನಿಸಬೇಕಾದ ಸಂಗತಿ ಏನೆಂದರೆ, ಇಲ್ಲಿ ನೀರಿನ ಪ್ರಮಾಣ ಕೇವಲ ಶೇಕಡಾ ೧೬ ರಷ್ಟು ಮಾತ್ರ. ಉಳಿದ ಶೇಕಡಾ ೮೪ ರಷ್ಟು ತೂಕ ದೇಹದಿಂದ  ಮರೆಯಾಗಿದ್ದು ನಮ್ಮ ಶ್ವಾಸಕೋಶಗಳ ಮೂಲಕ ಕಾರ್ಬನ್ ಡೈಆಕ್ಸೈಡ್ ಆಗಿ.

C55H104O6 + 78O2 → 55CO2  + 52H2O  + ಶಕ್ತಿ 

ನೀವು ಈ ರಾಸಾಯನಿಕ ಕ್ರಿಯೆಯ ಸಮೀಕರಣ ಗಮನಿಸಿದರೆ, ಇಲ್ಲಿರುವುದು ಕಾರ್ಬನ್, ಹೈಡ್ರೋಜನ್ ಮತ್ತು ಆಕ್ಸಿಜನ್ ಕಣಗಳು ಮಾತ್ರ. ಈ ಮೂರರಲ್ಲಿ ಹೆಚ್ಚಿನ ತೂಕವಿರುವುದು ಕಾರ್ಬನ್ ಅಣುಗಳೇ. ಹಾಗಾಗಿ ತೂಕ ಕಡಿಮೆಯಾದಾಗ, ಅದರಲ್ಲಿ ಕಾರ್ಬನ್ ಅಣುಗಳ ಪಾತ್ರವೇ ಹಿರಿದಾಗಿತ್ತು. 

ಕಾರ್ಬನ್ ನಮ್ಮ ದೇಹ ಸೇರಿದ್ದು ನಮ್ಮ ಊಟದ ಮೂಲಕ ಹಾಗು ಹೈಡ್ರೋಜನ್ ನಾವು ಕುಡಿಯುವ ನೀರಿನ ಮೂಲಕ ಮತ್ತು ಊಟದಲ್ಲಿನ ನೀರಿನಂಶದಿಂದ. ಆಕ್ಸಿಜನ್ ನಮ್ಮ ದೇಹದ ಒಳಗೆ ಬಂದಿದ್ದು, ನಾವು ಉಸಿರು ಒಳಗೆ ಎಳೆದುಕೊಂಡಾಗ. ಆದರೆ ಅದು ಜೀವಕೋಶಗಳ ಶಕ್ತಿ ಉತ್ಪಾದನೆಯ ಕ್ರಿಯೆಯಲ್ಲಿ ಭಾಗವಹಿಸಿ ಹೊರ ಹೋಗುವಾಗ ಕಾರ್ಬನ್ ಡೈಆಕ್ಸೈಡ್ ಆಗಿ ಮಾರ್ಪಟ್ಟು, ಹೆಚ್ಚು ತೂಕದ ಕಾರ್ಬನ್ ಅಣುಗಳನ್ನು ದೇಹದಿಂದ ಹೊರಕ್ಕೆ ಹಾಕಿತು. ಹಾಗೆ ದೇಹದ ಭಾರವೂ ಕಡಿಮೆಯಾಯಿತು. 

ನಾವು ಉಸಿರಾಡುವ ಗಾಳಿ ನಮ್ಮ ಕಣ್ಣಿಗೆ ಕಾಣದೆ ಹೋಗುವುದರಿಂದ, ಅದರ ಬೃಹತ್ ಎನ್ನಿಸುವ ಪ್ರಮಾಣ ನಮ್ಮ ಗಮನಕ್ಕೆ ಬರದೇ ಹೋಗುತ್ತದೆ. ಆದರೆ ನೆನಪಿಡಿ. ನಿಮ್ಮ ಗೆಳೆಯ ಹತ್ತು ಕೆ.ಜಿ. ತೂಕ ಕಳೆದುಕೊಂಡರೆ ಅದರಲ್ಲಿ ೮.೪ ಕೆ.ಜಿ. ತೂಕ ಮರೆಯಾಗಿ ಹೋದದ್ದು ಅವನ ಉಸಿರಾಟದ ಮೂಲಕ. ಒಂದು ತಾಸಿನ ವ್ಯಾಯಾಮ ೩೯ ಗ್ರಾಂ ನಷ್ಟು ತೂಕದ ಕಾರ್ಬನ್ ನ್ನು ದೇಹದಿಂದ ಹೊರಗೆ ಹಾಕುತ್ತದೆ. ಮತ್ತೆ ಅದೇ ಪ್ರಮಾಣ ಊಟದ ಮೂಲಕ ದೇಹ ಸೇರದಂತೆ ನೋಡಿಕೊಂಡರೆ, ಒಂದು ತಿಂಗಳಲ್ಲಿ ಎಷ್ಟು ತೂಕ ಕಳೆದುಕೊಳ್ಳಬಹುದು ಎಂದು ನೀವೇ ಲೆಕ್ಕ ಹಾಕಿ.

 ನಾನು ಈ ವಿಷಯ ತಿಳಿದುಕೊಂಡಿದ್ದು ಲಿಂಕ್ ನಲ್ಲಿರುವ ವಿವರಣೆಯಿಂದ. ಹೆಚ್ಚಿನ ಮಾಹಿತಿಗೆ ಅದನ್ನೇ ಓದಿ ನೋಡಿ.


Source: https://www.bmj.com/content/349/bmj.g7257

Link: https://www.bmj.com/content/349/bmj.g7257

Friday, December 11, 2020

ಕಣ್ಣಿಗೆ ಕಾಣದ್ದು, ಕಿವಿಗೆ ಕೇಳಿಸದ್ದು

ನಾವು ನಮ್ಮ ಪಂಚೇಂದ್ರಿಯಗಳ ಮೂಲಕ ಜಗತ್ತಿನ ಅನುಭವ ಪಡೆಯುತ್ತೇವೆ. ನೀವು ಈಗ   ನೋಡುತ್ತಿರುವುದು ನಿಮ್ಮ ಫೋನ್ (ಅಥವಾ ಕಂಪ್ಯೂಟರ್) ಅಲ್ಲ. ಬದಲಿಗೆ ಅದರ ಅದರ ಮೇಲೆ ಬಿದ್ದ ಬೆಳಕು ಪ್ರತಿಫಲಿಸಿ ನಿಮ್ಮ ಕಣ್ಣಿನ ಒಳಗಡೆ ಮೂಡಿದ ಬಿಂಬವನ್ನ. ಹಾಗೆಯೇ ನಿಮ್ಮ ಪಕ್ಕದವರು ನಿಮ್ಮನ್ನು ಕೈ ಮುಟ್ಟಿ ಮಾತನಾಡಿಸಿದರೆ ನಿಮಗೆ ಅರಿವಾಗುವದು ಅವರ ಕೈ ಸ್ಪರ್ಶ ಅಲ್ಲ. ನಿಮ್ಮ ಅನುಭವಕ್ಕೆ ಬಂದದ್ದು ನಿಮ್ಮ ಚರ್ಮದ ಮೇಲೆ ಮೂಡಿದ ಸಂವೇದನೆ ಮಾತ್ರ. ಪ್ರತಿಯೊಂದು ಇಂದ್ರಿಯವು ಕೆಲಸ ಮಾಡುವ ಬಗೆ ಹಾಗೆಯೇ. ನಮ್ಮ ಇಂದ್ರಿಯಗಳ ಸಾಮರ್ಥ್ಯಕ್ಕೂ ಹಲವಾರು ಇತಿ ಮಿತಿಗಳಿವೆ. ಹಾಗಾಗಿ ನಮ್ಮ ಇಂದ್ರಿಯಗಳ ಗ್ರಹಿಕೆಗೆ ಸಿಕ್ಕದೆ ಹೋಗುವ ಸಾವಿರಾರು ವಿಷಯಗಳ ಅನುಭವ ನಮಗೆ ದಕ್ಕದೆ ಹೋಗುತ್ತದೆ. ಅದು ನನ್ನ ಇಂದಿನ ವಿಷಯ ವಸ್ತು.
 

ಮನೆಯಲ್ಲಿಯ ಮೈಕ್ರೋವೇವ್ ಓವೆನ್ ಹೇಗೆ ಅಡುಗೆ ಬಿಸಿ ಮಾಡುತ್ತದೆ ಎಂದು ಯೋಚಿಸಿದ್ದೀರಾ? ಅಲ್ಲಿ ನೀವು ಕಡ್ಡಿ ಗೀರುವುದಿಲ್ಲ, ಬೆಂಕಿ ಹಚ್ಚುವುದಿಲ್ಲ. ಅದರೊಳಗೆ ಇಟ್ಟ ಪಾತ್ರೆ ಹೆಚ್ಚು ಬಿಸಿಯಾಗದೆ ಇದ್ದರೂ, ಅದರೊಳಗಿನ ಅಡುಗೆ (ಮ್ಯಾಗಿ ನೂಡಲ್ಸ್?) ಮಾತ್ರ ಬಿಸಿ ಬಿಸಿಯಾಗಿ ಹೇಗೆ ತಯಾರಾಗಿರುತ್ತದೆ? ಸುಲಭ ಉತ್ತರ, ಮೈಕ್ರೋವೇವ್ ಕಿರಣಗಳು ಕಣ್ಣಿಗೆ ಕಾಣದೆ ಇದ್ದರೂ, ಶಕ್ತಿಯುತವಾಗಿ ಕೆಲಸ ಮಾಡುತ್ತವೆ. ನಮಗೆ ಕಣ್ಣಿಗೆ ಗೋಚರವಾಗುವುದು VIBGYOR ಬಣ್ಣಗಳ ಕಿರಣಗಳು ಮಾತ್ರ. Violet ಬಣ್ಣದ ಆಚೆಗಿನ ಕಿರಣಗಳು Ultraviolet, X-Ray, Gamma ಹಾಗೆ Red ಬಣ್ಣದ ಈಚೆಗಿನ ಕಿರಣಗಳಿಗೆ Infrared, Microwave, Radio ಎಂದು ಕರೆಯುತ್ತೇವೆ. ನಮ್ಮ ಕಣ್ಣಿಗೆ ಕಾಣುವುದಕ್ಕಿಂತ, ಕಾಣದೆ ಹೋಗುವುದು ಅಗಾಧವಾಗಿರುವುದು ನಿಮಗೆ ಗೊತ್ತೇ? ಅವುಗಳ ಉಪಯೋಗ ಮಾತ್ರ ನಾವು ದಿನ ನಿತ್ಯ ಎನ್ನುವಂತೆ ರೇಡಿಯೋ, ಮೊಬೈಲ್ ಫೋನ್, ಕ್ಷ-ಕಿರಣ ಹೀಗೆ ಹಲವಾರು ಉಪಕರಣಗಳ ಸಹಾಯದಿಂದ ಸಾಧ್ಯವಾಗುತ್ತದೆ.


ನೋಡುವ ವಸ್ತು ಒಂದೇ ಆಗಿದ್ದರೂ, ಅದು ನಮಗೆ ಕಂಡ ಹಾಗೆ ಇತರೆ ಪ್ರಾಣಿಗಳಿಗೆ ಕಾಣುವುದಿಲ್ಲ. ಕೆಲವೊಂದು ಪ್ರಾಣಿಗಳು ಬಣ್ಣ ಗುರುತಿಸಲಾರವು. ಆದರೆ ಬೆಕ್ಕುಗಳು ನಮಗಿಂತ ಹೆಚ್ಚು ಅಗಲದ ೨೦೦ ಡಿಗ್ರಿ ನೋಟವನ್ನು ನೋಡಬಲ್ಲವು. ಕತ್ತಲಾದರೆ ನಾವು ಮನೆ ಸೇರಿದರೆ, ಕಾಡಿನಲ್ಲಿನ ಬೇಟೆ ಪ್ರಾಣಿಗಳು ಹಾಗು ನಿಶಾಚರ ಹಕ್ಕಿಗಳು ಆಗ ಹೊರ ಬೀಳುವುದಿಲ್ಲವೇ? ಪ್ರಕೃತಿಯು ಅವುಗಳ ದೇಹವನ್ನು ಬೇರೆ ತರಹ ವಿನ್ಯಾಸ ಮಾಡಿ ಅವುಗಳ ಇಂದ್ರಿಯಗಳ ಸಾಮರ್ಥ್ಯವನ್ನು ಅವುಗಳ ಜೀವನ ಶೈಲಿಗೆ ಹೊಂದುವಂತೆ ಬದಲಾಯಿಸಿದೆ. ನಾಯಿಗಳ ವಾಸನೆ ಗುರುತು ಹಿಡಿಯುವ ಶಕ್ತಿ ನಮಗಿಂತ  ಹೆಚ್ಚು ಇರುವ ಹಾಗೆ, ಹಾವುಗಳು ಸೂಕ್ಷ್ಮ ಕಂಪನಗಳನ್ನು ಗುರುತಿಸಿದ ಹಾಗೆ ಎಲ್ಲ ಪ್ರಾಣಿ, ಪಕ್ಷಿಗಳು ವಿವಿಧ ಸ್ಥರದಲ್ಲಿ ಇಂದ್ರಿಯ ಸಾಮರ್ಥ್ಯ ಹೊಂದಿವೆ. ಎಲ್ಲ ಜೀವಿಗಳಿಗೂ, ಕಾಣಿಸುವ ಬೆಳಕು, ಕೇಳಿಸುವ ಶಬ್ದ, ವಾಸನೆ, ರುಚಿ ಗುರುತಿಸುವಿಕೆ, ಹಾಗೆಯೆ ಸ್ಪರ್ಶದ ಅನುಭವಕ್ಕೆ ಬೇರೆ ಬೇರೆ ವ್ಯಾಪ್ತಿಗಳಿವೆ. ಅದರಾಚೆಗೆ ಇರುವುದು ಅವುಗಳ ಅನುಭವಕ್ಕೆ ಬರುವುದಿಲ್ಲ ಅಷ್ಟೇ. ಆದರೆ ಇರುವಿಕೆಯನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ.


ಹಾಗೆಯೇ ನಿಮ್ಮ ಶ್ರವಣ ಶಕ್ತಿಗೆ ಒಂದು ಪುಟ್ಟ ಪರೀಕ್ಷೆ. ಲಿಂಕ್ ನಲ್ಲಿರುವ ಧ್ವನಿಯನ್ನು ಆಲಿಸಿ. ಅದರ ಮೊದಲ ಕೆಲವು ಕ್ಷಣಗಳು ಹಾಗು ಕೊನೆಯ ಕ್ಷಣಗಳು ನಿಮಗೆ ಕೇಳಿಸದೇ ಹೋಗಬಹುದು. ಆದರೂ ಸಂಪೂರ್ಣ ಆಲಿಸಿ. ನಂತರ ಮನೆಯಲ್ಲಿನ ಚಿಕ್ಕ ಮಕ್ಕಳಿಗೆ ಇದನ್ನು ಕೇಳಿಸಿ ನೋಡಿ. ನಿಮಗಿಂತ ಹೆಚ್ಚಿನ frequency ಅವರಿಗೆ ಕೇಳಿಸುವುದಾಗಿ ಹೇಳುತ್ತಾರೆ. ತರಂಗಾಂತರದಲ್ಲಿ ಶಬ್ದ ಇದ್ದರೂ, ಅದು ಚಿಕ್ಕ ಮಕ್ಕಳಿಗೆ ಕೇಳಿಸಿದರೂ, ನಮಗೆ ಮಾತ್ರ ಕೇಳಿಸದೇ ಹೋಗಿತ್ತು.

https://www.youtube.com/watch?v=PAsMlDptjx8

 



ವಿಜ್ಞಾನದ ತಿಳಿವು ಪಂಚೇಂದ್ರಿಯಗಳ ಸಾಮರ್ಥ್ಯಕ್ಕೆ ನಿಲುಕದ ಅನುಭೂತಿ ಮತ್ತು ಜ್ಞಾನವನ್ನು ನಮ್ಮದಾಗಿಸುತ್ತ ಹೋಗುತ್ತದೆ. ಪ್ರಕೃತಿಯ ರಹಸ್ಯಗಳು ತಮಗೆ ತಾವೇ ತೆರೆದುಕೊಳ್ಳುತ್ತಾ ಹೋಗುತ್ತವೆ. ಇದು ಎಷ್ಟು ಕುತೂಹಲಕಾರಿ ವಿಷಯ ಅಲ್ಲವೇ?

Thursday, December 10, 2020

ವಿಶ್ವದ ಅಗಾಧತೆ: ನಮಗೆಷ್ಟು ಗೊತ್ತು?

ನಾನು ಶಾಲೆ ಓದುತ್ತಿರುವಾಗ, ನಮ್ಮ ಸೌರ ಮಂಡಲವನ್ನೇ (Solar System) ವಿಶ್ವ (Universe) ಎಂದುಕೊಂಡಿದ್ದೆ. ಆದರೆ ಕಾಲೇಜು ಓದುತ್ತಿರುವಾಗ ನಮ್ಮ ಸೌರ ಮಂಡಲದ  ಹಾಗೆ ೫೦೦ಕ್ಕು ಹೆಚ್ಚು ಸೌರ ಮಂಡಲಗಳಿದ್ದು ಅವನ್ನೆಲ್ಲ ಒಟ್ಟುಗೂಡಿ ಮಿಲ್ಕಿ ವೆ ಗ್ಯಾಲಕ್ಸಿ (Milki Way Galaxy) ಎನ್ನುತ್ತಾರೆ ಎಂದು ತಿಳಿಯಿತು. ಮುಂದೆ ಕುತೂಹಲಕ್ಕಾಗಿ ವಿಜ್ಞಾನದ ಬೆಳವಣಿಗೆಗಳನ್ನು ತಿಳಿದುಕೊಳ್ಳುತ್ತ ಹೋದಾಗ ಆಂಡ್ರೊಮೆಡಾ ಗ್ಯಾಲಕ್ಸಿ (Andromeda Galaxy) ನಮ್ಮ ಗ್ಯಾಲಕ್ಸಿಗಿಂತ ಹಿರಿದಾದುದು ಎನ್ನುವ ವಿಷಯ ತಿಳಿಯಿತು. ಹೀಗೆ ಕಾಡಿನಲ್ಲಿ ಮರಕ್ಕಿಂತ ಮರ ದೊಡ್ಡದು ಎನ್ನುವ ಹಾಗೆ, ವಿಶ್ವದ ಅಗಾಧತೆ ನಾವು ಅರ್ಥ ಮಾಡಿಕೊಳ್ಳುತ್ತ ಹೋದಷ್ಟು ದೊಡ್ಡದಾಗುತ್ತ ಹೋಗುತ್ತದೆ. ವರ್ಷದ ಭೌತ ಶಾಸ್ತ್ರದ ನೊಬೆಲ್ ಪ್ರಶಸ್ತಿ ನಮ್ಮ ಗ್ಯಾಲಕ್ಸಿ ಕೇಂದ್ರ ಬಿಂದು ಒಂದು ಕಪ್ಪು ರಂಧ್ರ (Black Hole) ಎಂದು ಕಂಡು ಹಿಡಿದ ವಿಜ್ಞಾನಿಗಳಿಗೆ ದೊರಕಿತಲ್ಲವೇ. ಇದು ಹೀಗೆ ಇರಲು ಸಾಧ್ಯವೇ ಎಂದು ಆಶ್ಚರ್ಯ ಎನಿಸಿತು.


ವಿಶ್ವದ ಬಗ್ಗೆ ನಮ್ಮ ತಿಳುವಳಿಕೆ ಸಾವಿರಾರು ವರುಷಗಳಿಂದ ಬದಲಾಗುತ್ತ ಬಂದಿದೆ ಮತ್ತು ಹಾಗೆ ಬದಲಾಗುವುದು ಮುಂದುವರೆದಿದೆ. ಭೂಮಿ ಚಪ್ಪಟೆಯಾಗಿದೆ ಎಂದು ನಂಬಿದ್ದ ಕಾಲವಿತ್ತು. ಹಾಗೆಯೇ ಭೂಮಿಯ ಸುತ್ತ ಸೂರ್ಯ ಸುತ್ತುವುದು ಎಂದು ನಂಬಿದ್ದ ಕಾಲವೂ ಇತ್ತು. ಸೂರ್ಯನೇ ಕೇಂದ್ರ ಬಿಂದು ಎಂದ ಗೆಲಿಲಿಯೋ ಅಂದಿನ ಸಮಾಜಕ್ಕೆ ಅರ್ಥವಾಗದೇ ಹೋದರೂ, ವಿಜ್ಞಾನದ ಬೆಳವಣಿಗೆಗೆ ಅವನ ಕೊಡುಗೆ ಅಪಾರ. ಅವನು ತಯಾರಿಸಿದ ಟೆಲಿಸ್ಕೋಪ್ ಗಳು, ಗ್ರಹಗಳ ಚಲನೆಯನ್ನು ಹಾಗೆಯೇ ವಿಶ್ವದ ರಚನೆಯನ್ನು ತೆರೆದಿಡುತ್ತಾ ಹೋದವು. ಅವನ ಹಾಗೆ ಖಗೋಳಶಾಸ್ತ್ರದಲ್ಲಿ ಆಸಕ್ತಿ ಇದ್ದ ಸಾಕಷ್ಟು ವಿಜ್ಞಾನಿಗಳು ಹೊಸ ವಿಷಯಗಳನ್ನು ಕಲಿಯುತ್ತ, ಹಳೆಯ ತಪ್ಪು ತಿಳುವಳಿಕೆಗಳನ್ನು ತಿದ್ದುತ್ತಾ ಸಾಗಿದರು. ನ್ಯೂಟನ್, ಐನ್ ಸ್ಟೀನ್ ರಂತ ದೈತ್ಯ ಪ್ರತಿಭೆಗಳು ವಿಜ್ಞಾನವನ್ನು ಮನುಕುಲದ ಮುಂಚೂಣಿಗೆ ತಂದರು. ಸ್ಟೀಫೆನ್ ಹಾಕಿಂಗ್ ವಿಶ್ವದ ಬಗೆಗಿನ ನಮ್ಮ ತಿಳುವಳಿಕೆಯ ಪರಿಧಿಯನ್ನು ವಿಸ್ತರಿಸಿದರು. ಇತ್ತೀಚಿನ ವರ್ಷಗಳಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ವೇಗದ ಬೆಳವಣಿಗೆ ಕಂಡು, ಹೆಚ್ಚಿನ ಮಾಹಿತಿಯನ್ನು ನಿಖರವಾಗಿ ಕಲೆ ಹಾಕಲು ಸಾಧ್ಯವಾಗಿದೆ.

 

ನಮ್ಮದೇ ಲೋಕದಲ್ಲಿ  ಮುಳುಗಿ ಹೋಗುವ ನಮಗೆ, ನಾವು ಇರುವ ಭೂಮಿ ಎಷ್ಟು ಚಿಕ್ಕದು ಎನ್ನುವ ಅಂದಾಜು ಸಿಗಲಿಕ್ಕೆ ಈ ವಿಡಿಯೋ ನೋಡಿ. ನಾವು ಇರುವ ಭೂಮಿ ಏನು ಅಲ್ಲ, ನಮ್ಮ ಸೂರ್ಯನೇ ಯಾವ ಲೆಕ್ಕಕ್ಕೂ ಅಲ್ಲ ಅನ್ನುವಷ್ಟು ದೊಡ್ಡ ದೊಡ್ಡ ನಕ್ಷತ್ರಗಳಿವೆ ಈ ವಿಶ್ವದಲ್ಲಿ. ಹಾಗೆ ನಕ್ಷತ್ರ  ಉರಿಯುವುದು ಮುಗಿದು ಹೋದ ಮೇಲೆ ಶೂನ್ಯವಾಗಿ ಬದಲಾಗಿ, ಆದರೆ ತಮ್ಮ ಗುರುತ್ವಾಕರ್ಷಣೆಯನ್ನು ಉಳಿಸಿಕೊಂಡು ಹತ್ತಿರದ ಎಲ್ಲವನ್ನು ತಮ್ಮ ಶೂನ್ಯದಲ್ಲಿ ಅರಗಿಸಿಕೊಳ್ಳುವ ಅನೇಕ ಕಪ್ಪು ರಂಧ್ರಗಳಿವೆ. ಹಾಗಿದ್ದರೂ ವಿಶ್ವದ ಅಗಾಧತೆ ಹಿಗ್ಗುತ್ತಲೇ ಇದೆ. ಇದು ವಿಸ್ಮಯದ ಸಂಗತಿ ಅಲ್ಲವೇ? 


ಅಂದ ಹಾಗೆ ನಿಮ್ಮ ಮನೆಯಲ್ಲಿ ಟೆಲಿಸ್ಕೋಪ್ ಇದೆಯೇ? ಇದ್ದಲ್ಲಿ, ಡಿಸೆಂಬರ್ ೨೧ ರಾತ್ರಿ ನಿಮ್ಮ ಮನೆ ಮಾಳಿಗೆ ಹತ್ತಿ, ದೊಡ್ಡ ಗ್ರಹಗಳಾದ ಶನಿ ಹಾಗು ಗುರು ಗ್ರಹಗಳ ಸಂಯೋಗ ವೀಕ್ಷಣೆಗೆ ಸಿದ್ಧತೆ ಮಾಡಿಕೊಂಡಿದ್ದೀರಾ?



https://www.youtube.com/watch?v=i93Z7zljQ7I