Thursday, December 10, 2020

ವಿಶ್ವದ ಅಗಾಧತೆ: ನಮಗೆಷ್ಟು ಗೊತ್ತು?

ನಾನು ಶಾಲೆ ಓದುತ್ತಿರುವಾಗ, ನಮ್ಮ ಸೌರ ಮಂಡಲವನ್ನೇ (Solar System) ವಿಶ್ವ (Universe) ಎಂದುಕೊಂಡಿದ್ದೆ. ಆದರೆ ಕಾಲೇಜು ಓದುತ್ತಿರುವಾಗ ನಮ್ಮ ಸೌರ ಮಂಡಲದ  ಹಾಗೆ ೫೦೦ಕ್ಕು ಹೆಚ್ಚು ಸೌರ ಮಂಡಲಗಳಿದ್ದು ಅವನ್ನೆಲ್ಲ ಒಟ್ಟುಗೂಡಿ ಮಿಲ್ಕಿ ವೆ ಗ್ಯಾಲಕ್ಸಿ (Milki Way Galaxy) ಎನ್ನುತ್ತಾರೆ ಎಂದು ತಿಳಿಯಿತು. ಮುಂದೆ ಕುತೂಹಲಕ್ಕಾಗಿ ವಿಜ್ಞಾನದ ಬೆಳವಣಿಗೆಗಳನ್ನು ತಿಳಿದುಕೊಳ್ಳುತ್ತ ಹೋದಾಗ ಆಂಡ್ರೊಮೆಡಾ ಗ್ಯಾಲಕ್ಸಿ (Andromeda Galaxy) ನಮ್ಮ ಗ್ಯಾಲಕ್ಸಿಗಿಂತ ಹಿರಿದಾದುದು ಎನ್ನುವ ವಿಷಯ ತಿಳಿಯಿತು. ಹೀಗೆ ಕಾಡಿನಲ್ಲಿ ಮರಕ್ಕಿಂತ ಮರ ದೊಡ್ಡದು ಎನ್ನುವ ಹಾಗೆ, ವಿಶ್ವದ ಅಗಾಧತೆ ನಾವು ಅರ್ಥ ಮಾಡಿಕೊಳ್ಳುತ್ತ ಹೋದಷ್ಟು ದೊಡ್ಡದಾಗುತ್ತ ಹೋಗುತ್ತದೆ. ವರ್ಷದ ಭೌತ ಶಾಸ್ತ್ರದ ನೊಬೆಲ್ ಪ್ರಶಸ್ತಿ ನಮ್ಮ ಗ್ಯಾಲಕ್ಸಿ ಕೇಂದ್ರ ಬಿಂದು ಒಂದು ಕಪ್ಪು ರಂಧ್ರ (Black Hole) ಎಂದು ಕಂಡು ಹಿಡಿದ ವಿಜ್ಞಾನಿಗಳಿಗೆ ದೊರಕಿತಲ್ಲವೇ. ಇದು ಹೀಗೆ ಇರಲು ಸಾಧ್ಯವೇ ಎಂದು ಆಶ್ಚರ್ಯ ಎನಿಸಿತು.


ವಿಶ್ವದ ಬಗ್ಗೆ ನಮ್ಮ ತಿಳುವಳಿಕೆ ಸಾವಿರಾರು ವರುಷಗಳಿಂದ ಬದಲಾಗುತ್ತ ಬಂದಿದೆ ಮತ್ತು ಹಾಗೆ ಬದಲಾಗುವುದು ಮುಂದುವರೆದಿದೆ. ಭೂಮಿ ಚಪ್ಪಟೆಯಾಗಿದೆ ಎಂದು ನಂಬಿದ್ದ ಕಾಲವಿತ್ತು. ಹಾಗೆಯೇ ಭೂಮಿಯ ಸುತ್ತ ಸೂರ್ಯ ಸುತ್ತುವುದು ಎಂದು ನಂಬಿದ್ದ ಕಾಲವೂ ಇತ್ತು. ಸೂರ್ಯನೇ ಕೇಂದ್ರ ಬಿಂದು ಎಂದ ಗೆಲಿಲಿಯೋ ಅಂದಿನ ಸಮಾಜಕ್ಕೆ ಅರ್ಥವಾಗದೇ ಹೋದರೂ, ವಿಜ್ಞಾನದ ಬೆಳವಣಿಗೆಗೆ ಅವನ ಕೊಡುಗೆ ಅಪಾರ. ಅವನು ತಯಾರಿಸಿದ ಟೆಲಿಸ್ಕೋಪ್ ಗಳು, ಗ್ರಹಗಳ ಚಲನೆಯನ್ನು ಹಾಗೆಯೇ ವಿಶ್ವದ ರಚನೆಯನ್ನು ತೆರೆದಿಡುತ್ತಾ ಹೋದವು. ಅವನ ಹಾಗೆ ಖಗೋಳಶಾಸ್ತ್ರದಲ್ಲಿ ಆಸಕ್ತಿ ಇದ್ದ ಸಾಕಷ್ಟು ವಿಜ್ಞಾನಿಗಳು ಹೊಸ ವಿಷಯಗಳನ್ನು ಕಲಿಯುತ್ತ, ಹಳೆಯ ತಪ್ಪು ತಿಳುವಳಿಕೆಗಳನ್ನು ತಿದ್ದುತ್ತಾ ಸಾಗಿದರು. ನ್ಯೂಟನ್, ಐನ್ ಸ್ಟೀನ್ ರಂತ ದೈತ್ಯ ಪ್ರತಿಭೆಗಳು ವಿಜ್ಞಾನವನ್ನು ಮನುಕುಲದ ಮುಂಚೂಣಿಗೆ ತಂದರು. ಸ್ಟೀಫೆನ್ ಹಾಕಿಂಗ್ ವಿಶ್ವದ ಬಗೆಗಿನ ನಮ್ಮ ತಿಳುವಳಿಕೆಯ ಪರಿಧಿಯನ್ನು ವಿಸ್ತರಿಸಿದರು. ಇತ್ತೀಚಿನ ವರ್ಷಗಳಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ವೇಗದ ಬೆಳವಣಿಗೆ ಕಂಡು, ಹೆಚ್ಚಿನ ಮಾಹಿತಿಯನ್ನು ನಿಖರವಾಗಿ ಕಲೆ ಹಾಕಲು ಸಾಧ್ಯವಾಗಿದೆ.

 

ನಮ್ಮದೇ ಲೋಕದಲ್ಲಿ  ಮುಳುಗಿ ಹೋಗುವ ನಮಗೆ, ನಾವು ಇರುವ ಭೂಮಿ ಎಷ್ಟು ಚಿಕ್ಕದು ಎನ್ನುವ ಅಂದಾಜು ಸಿಗಲಿಕ್ಕೆ ಈ ವಿಡಿಯೋ ನೋಡಿ. ನಾವು ಇರುವ ಭೂಮಿ ಏನು ಅಲ್ಲ, ನಮ್ಮ ಸೂರ್ಯನೇ ಯಾವ ಲೆಕ್ಕಕ್ಕೂ ಅಲ್ಲ ಅನ್ನುವಷ್ಟು ದೊಡ್ಡ ದೊಡ್ಡ ನಕ್ಷತ್ರಗಳಿವೆ ಈ ವಿಶ್ವದಲ್ಲಿ. ಹಾಗೆ ನಕ್ಷತ್ರ  ಉರಿಯುವುದು ಮುಗಿದು ಹೋದ ಮೇಲೆ ಶೂನ್ಯವಾಗಿ ಬದಲಾಗಿ, ಆದರೆ ತಮ್ಮ ಗುರುತ್ವಾಕರ್ಷಣೆಯನ್ನು ಉಳಿಸಿಕೊಂಡು ಹತ್ತಿರದ ಎಲ್ಲವನ್ನು ತಮ್ಮ ಶೂನ್ಯದಲ್ಲಿ ಅರಗಿಸಿಕೊಳ್ಳುವ ಅನೇಕ ಕಪ್ಪು ರಂಧ್ರಗಳಿವೆ. ಹಾಗಿದ್ದರೂ ವಿಶ್ವದ ಅಗಾಧತೆ ಹಿಗ್ಗುತ್ತಲೇ ಇದೆ. ಇದು ವಿಸ್ಮಯದ ಸಂಗತಿ ಅಲ್ಲವೇ? 


ಅಂದ ಹಾಗೆ ನಿಮ್ಮ ಮನೆಯಲ್ಲಿ ಟೆಲಿಸ್ಕೋಪ್ ಇದೆಯೇ? ಇದ್ದಲ್ಲಿ, ಡಿಸೆಂಬರ್ ೨೧ ರಾತ್ರಿ ನಿಮ್ಮ ಮನೆ ಮಾಳಿಗೆ ಹತ್ತಿ, ದೊಡ್ಡ ಗ್ರಹಗಳಾದ ಶನಿ ಹಾಗು ಗುರು ಗ್ರಹಗಳ ಸಂಯೋಗ ವೀಕ್ಷಣೆಗೆ ಸಿದ್ಧತೆ ಮಾಡಿಕೊಂಡಿದ್ದೀರಾ?



https://www.youtube.com/watch?v=i93Z7zljQ7I

No comments:

Post a Comment