Thursday, April 15, 2021

ಮದುವೆಯನ್ನು ವ್ಯಾಪಾರ ಮಾಡಿಕೊಂಡ ಹೆಂಡತಿಯರಿಗಾಗಿ

ನಾನು ಇಂದು ಬರೆಯುತ್ತಿರುವುದು ವರದಕ್ಷಿಣೆಯ ಅನ್ಯಾಯದ ಬಗ್ಗೆ ಅಲ್ಲ. ಆದರೆ ಮದುವೆಯ ನಂತರ ಹೆಂಡತಿಯರು ನಡೆಸುವ ಅನ್ಯಾಯದ ಬಗ್ಗೆ. ಮದುವೆಯನ್ನು ಒಂದು ವ್ಯಾಪಾರ ಮಾಡಿಬಿಡುವುದು ಬರೀ ಗಂಡಸಿಗೆ ಸೀಮಿತವಲ್ಲ. ಗಂಡಸು ನಡೆಸುವ ದೌರ್ಜನ್ಯ ತಡೆಯಲೆಂದೇ ಕಾನೂನುಗಳಿವೆ. ಮತ್ತು ಅದನ್ನು ಪ್ರತಿಭಟಿಸುವ ಹೆಣ್ಣು ಮಕ್ಕಳಿಗೆ ಸಮಾಜದ ಸಹಾಯ ದೊರಕುತ್ತದೆ. ಆದರೆ ದುರಾಸೆಗೆ ಬಿದ್ದ ಹೆಂಡತಿ, ಗಂಡನಿಗೆ ಆಸ್ತಿಯಲ್ಲಿ ಪಾಲು ಕೇಳುವಂತೆ ಇಲ್ಲವೇ ಯಾವುದೇ ದಾರಿಯಲ್ಲಾದರೂ ಗಂಟು ಸಂಪಾದಿಸುವಂತೆ ದುಂಬಾಲು ಬೀಳುತ್ತಾಳಲ್ಲ. ಅದು ಎಷ್ಟೋ ಗಂಡಸರನ್ನು ತಮಗೆ ಇಷ್ಟವಿಲ್ಲದಿದ್ದರೂ, ತಪ್ಪು ದಾರಿ ಹಿಡಿಯುವಂತೆ ಮಾಡಿ, ತಮ್ಮ ಜೀವನದ ಮೌಲ್ಯಗಳ ಜೊತೆ ಹೊಂದಾಣಿಕೆ ಮಾಡಿಕೊಂಡು, ಅಸಮಾಧಾನಕಾರ ಬದುಕನ್ನು ನಡೆಸುವಂತೆ ಮಾಡುತ್ತದೆ. ಅವನು ಹೆಂಡತಿ ಮಾತು ಕೇಳಲು ತಯಾರಿಲ್ಲವೋ, ಅವನ ಮನೆ ಅವನಿಗೆ ಒಂದು ಪ್ರೈವೇಟ ನರಕ. ಗಂಡನಿಗೆ ಎಲ್ಲಿ ಚುಚ್ಚಿದರೆ ಎಷ್ಟು ನೋವಾಗುತ್ತದೆ ಎಂದು ಸಂಪೂರ್ಣ ಅರಿತಿರುವ ಹೆಂಡತಿಯರು, ಶಿಕ್ಷೆ ಕೊಡುವುದರಲ್ಲಿ ತಾವು ಯಮನಿಗೂ ಒಂದು ಕೈ ಮುಂದು ಎನ್ನುವಂತೆ ವರ್ತಿಸುತ್ತಿರುತ್ತಾರೆ. ಗಂಡನಿಗೆ ಅನುಭವ ಒಂದು ಬಿಸಿ ತುಪ್ಪ. ಹೊರಗೆ ಹೇಳಿಕೊಂಡರೆ, ಸಮಾಜ ಅವನನ್ನು ಹೀಯಾಳಿಸಿ ನಗುತ್ತದೆ. ಯಾವುದೊ ಹಿರಿಯರನ್ನು ಸಂಧಾನಕ್ಕೆ ಕರೆದರೆ, ಹೆಂಡತಿ ಅತ್ತು ಕರೆದು, ಎಲ್ಲ ಸಮಸ್ಯೆ ಗಂಡನದೇ ಎಂದು ಬಿಂಬಿಸಿಬಿಡುತ್ತಾಳೆ. ಅಲ್ಲಿಗೆ ಗಂಡನಿಗೆ ನೆಮ್ಮದಿಯಿಂದ ಬದುಕುವ ಎಲ್ಲ ಅವಕಾಶಗಳು ಮುಚ್ಚಿ ಹೋಗುತ್ತವೆ.

 

ಸಮಾಧಾನದ ವಿಷಯವೆಂದರೆ ಸಮಸ್ಯೆ ಬಡ ಕುಟುಂಬಗಳಲ್ಲಿ ಇಲ್ಲ. ಅಲ್ಲಿ ಗಂಡನಿಗೂ ಆಸ್ತಿ ಇಲ್ಲ, ಹೆಂಡತಿಗೂ ಇಲ್ಲ. ದುಡಿದರೆ ಹೊಟ್ಟೆ ತುಂಬಾ ಊಟ ಇಲ್ಲದಿದ್ದರೆ ಇಲ್ಲ ಎನ್ನುವ ಕಡೆ ಆಸ್ತಿ ಸಮಸ್ಯೆ ಎಲ್ಲಿಯದು? ಹಾಗೆಯೇ ಶ್ರೀಮಂತ ಕುಟುಂಬಗಳಲ್ಲಿ ಗಂಡ-ಹೆಂಡತಿಯರ ನಡುವೆ ಮನಸ್ತಾಪ ಬಂದರೆ ಅದು ಸುಲಭದಲ್ಲಿ ಡೈವೋರ್ಸ್ ನಲ್ಲಿ ಕೊನೆಗೊಳ್ಳುತ್ತದೆ. ಹಾಗಾಗಿ ಸಮಸ್ಯೆ ಇರುವುದು ಮಧ್ಯಮ ವರ್ಗದ ಕುಟುಂಬಗಳಲ್ಲಿ ಮಾತ್ರ. ಇರುವುದರಲ್ಲಿ ನೆಮ್ಮದಿಯಾಗಿ ಇರುವುದು ಅವರಿಗೆ ಬೇಕಿಲ್ಲ. ಹಾಗೆಯೇ ಅಪಾರ ಶ್ರೀಮಂತಿಕೆಯ ಕನಸು ಕಾಣಲು ಅವರಿಗೆ ಹಗಲು-ರಾತ್ರಿಗಳು ಸಾಕಾಗುವುದಿಲ್ಲ. ತಮ್ಮ ತಂದೆ-ತಾಯಿಗಳನ್ನು ದೇವರ ಹಾಗೆ ಕಾಣುವ ಹೆಂಡತಿಯರಿಗೆ, ಗಂಡನ ತಂದೆ-ತಾಯಂದಿರು ಸುಮ್ಮನೆ ತಿಂದು ಕೂಡುವ ದಂಡ-ಪಿಂಡಗಳ ಹಾಗೆ ಕಾಣುತ್ತಾರೆ. ತಮ್ಮ ಸಹೋದರ-ಸಹೋದರಿಯರನ್ನು ಅವರಿರುವ ಹಾಗೆ ಒಪ್ಪಿಕೊಳ್ಳುವ ಅವರು, ಗಂಡನ ಸಂಬಂಧಿಕರಲ್ಲಿ ಕಾಣುವುದು ದೌರ್ಬಲ್ಯಗಳು ಮಾತ್ರ. ಎಷ್ಟು ಸಾಧ್ಯವೋ ಅಷ್ಟು ಬೇಗ ಆಸ್ತಿ ಭಾಗ ಮಾಡಿ ಎಂದು ಹಟ ಹಿಡಿದು ಕೂರುವ ಅವರು ತಾವು ಹಿಡಿದ ಕೆಲಸದಲ್ಲಿ ಸಫಲರಾಗಿಬಿಡುತ್ತಾರೆ ಕೂಡ. ಹಾಗೆಯೇ ಗಂಡನಿಗೆ ತನ್ನವರ ಜೊತೆ ಸೌಜನ್ಯದಿಂದ ಇರುವ ಭಾಗ್ಯವನ್ನು ಕೂಡ ಕಳೆದುಬಿಡುತ್ತಾರೆ.

 

ವಿಚಾರ ಮಾಡಿ ನೋಡಿದರೆ, ತಂದೆಯ ಆಸ್ತಿ ಮಗನಿಗೆ ಬರದೇ ಎಲ್ಲಿಗೆ ಹೋಗುತ್ತದೆ? ಆದರೆ ಅದು ತಾನಾಗಿಯೇ ಆಗುವ ಹೊತ್ತಿನವರೆಗೆ ಕಾಯುವ ತಾಳ್ಮೆ ಹೆಂಡತಿಯರಿಗಿಲ್ಲ. ತಾವು ಮದುವೆಯಾಗಿದ್ದು ಗಂಡನ ಆಸ್ತಿಯ ವ್ಯಾಪಾರ ಸರಿಯಾಗಿ ನಡೆಯಲು ಎನ್ನುವಂತೆ ಅವಸರಕ್ಕೆ ಬಿದ್ದು ಮನೆ-ಮನಗಳನ್ನು ಮುರಿದುಬಿಡುತ್ತಾರೆ. ಗಮನಿಸಿ ನೋಡಿ. ಎಷ್ಟೋ ಆಸ್ತಿ ಜಗಳಗಳು ಮೇಲ್ನೋಟಕ್ಕೆ ಗಂಡಸರ ಹೊಡೆದಾಟ ಅನ್ನಿಸಿದರೂ, ಅವರು ಕೈಗೊಂಬೆಯ ಹಾಗೆ ವರ್ತಿಸಿರುತ್ತಾರೆ. ದೂರದರ್ಶನದಲ್ಲಿ ಬರುವ ಎಷ್ಟೋ ಧಾರಾವಾಹಿಗಳ ವಿಷಯ ವಸ್ತು ಇದೇ ಆಗಿರುತ್ತದೆ. ಒಬ್ಬರ ಮನೆ ಮುರಿದು ಬೀಗುವ ಹೆಂಗಸರಿಗೆ ಅದರ ಕರ್ಮದ ಫಲ ಎನ್ನುವಂತೆ ಅವರಿಗೆ ಇವರ ಮನೆ ಮುರಿಯುವ ಸೊಸೆಯಂದಿರೇ ಸಿಗುತ್ತಾರೆ. ಬಡಿದಾಡಿ ತೆಗೆದುಕೊಂಡ ಆಸ್ತಿ ಇವರ ಕೊನೆ ವಯಸ್ಸಿನಲ್ಲಿ ಮತ್ತೆ ಕೈ ಬಿಟ್ಟು ಹೋಗುತ್ತದೆ. ಹಾಗೆಯೇ ಅವರ ಮಕ್ಕಳು ಕೂಡ ದೂರವಾಗುತ್ತಾರೆ. ತಾವು ಗಂಡನ ಜೊತೆ ತೋರಿಸಿದ ಕ್ರೂರತನ ಮರೆತ ಅವರು, ತಮ್ಮ ಮಕ್ಕಳು ಅವರ ಹೆಂಡತಿಯ ಕೈಯಲ್ಲಿ ನಲುಗಿ ಹೋಗುವುದನ್ನು ನೋಡಿ ಕೈ-ಕೈ ಹಿಸುಕಿಕೊಳ್ಳುತ್ತಾರೆ. ಆಸ್ತಿ ಜಗಳಗಳ ಜೀವನ ಚಕ್ರ ಮುಂದುವರೆಯುತ್ತ ಹೋಗುತ್ತದೆ.

 

ಗಂಡಸು ತನ್ನ ಹೆಂಡತಿಯ ಮೇಲೆ ನಡೆಸುವ ದೌರ್ಜನ್ಯ ಎಲ್ಲೆಲ್ಲ ಸುದ್ದಿಯಾಗುತ್ತದೆ. ಆದರೆ ಮದುವೆಯಾಗಿ ತನ್ನ ಗಂಡನನ್ನು ಖರೀದಿ ಮಾಡಿದ್ದೇನೆ ಎಂದು ವರ್ತಿಸುವ ಹೆಂಡತಿಯರು ಸಾಕಷ್ಟು ಮನೆಗಳಲ್ಲಿದ್ದರೂ ಅವರು ಮಾತ್ರ ಎಲ್ಲೂ ಸುದ್ದಿಯಾಗುವುದಿಲ್ಲ. ಹಾಗೆಂದು ಅವರು ಕಾಲಚಕ್ರನ ಮಹಿಮೆಗೆ ಸಿಕ್ಕದೆ ಹೋಗುವವರಲ್ಲ.

Wednesday, April 14, 2021

ಬೇವು ಬೆಲ್ಲದೊಳಿಡಲೇನು ಫಲ?

ಪುರಂದರ ದಾಸರು ದೇವರ ಕೀರ್ತನೆಗಳನ್ನು ಹಾಡಿದಷ್ಟೇ ಸುಲಭವಾಗಿ, ಮನುಷ್ಯ ಗುಣದ ಲೋಪ ದೋಷಗಳನ್ನು, ಸಮಾಜದ ಹುಳುಕುಗಳನ್ನು ಎತ್ತಿ ತೋರಿಸುವ ಸಾಕಷ್ಟು ಗೀತೆಗಳನ್ನು ಕೂಡ ರಚಿಸಿದ್ದಾರೆ. ಅಂತಹ ಒಂದು ಗೀತೆ "ಬೇವು ಬೆಲ್ಲದೊಳಿಡಲೇನು ಫಲ?". ಆ ಗೀತೆಗಳು ದಾಸರ ಕಾಲವಾದ  ೧೫ ನೇ ಶತಮಾನದ ಜನ ಸಾಮಾನ್ಯರ ಶೈಲಿ ತೋರಿಸುವುದಷ್ಟೇ ಅಲ್ಲ. ಬದಲಾಗದ ಮನುಷ್ಯನ ಗುಣಗಳು ಕಾಲಾತೀತ ಎನ್ನುವ ವಿಪರ್ಯಾಸವನ್ನು ಮಾರ್ಮಿಕವಾಗಿ ತೋರಿಸುತ್ತವೆ. ಹಾಗೆಯೇ ಮೋಹ-ಮದ ಇತ್ಯಾದಿ ವಿಕಾರಗಳು ತಹಬದಿಗೆ ಬಂದಾಗ, ಇಷ್ಟ ದೈವ ಹೃದಯದಾಳವನ್ನು ತಲುಪಲು ಸುಲಭ ಸಾಧ್ಯ ಎನ್ನುವ ಸತ್ಯ ಸಂದೇಶ ಕೂಡ ಸಾರುತ್ತವೆ. ಆದರೆ ಅದಕ್ಕೆ ಬರೀ ಗೀತೆಯನ್ನು ಆನಂದಿಸುವುದಷ್ಟೇ ಅಲ್ಲ, ಪುರಂದರರು ಕೇಳುವ ಪ್ರಶ್ನೆಗಳನ್ನು ನಮ್ಮ ಅಂತರಾಳದಲ್ಲಿ ಕೇಳಿ ಕೊಳ್ಳಬೇಕಲ್ಲವೇ?




Sunday, April 11, 2021

ಕೇಳಬಾರದ ಪ್ರಶ್ನೆಗಳು ಆದರೂ ಸಿಗುವ ಉತ್ತರಗಳು

ಯಾರಾದರೂ ಆಗಲಿ ಏಕೆ ಸುಳ್ಳು ಹೇಳುತ್ತಾರೆ? ಚಿಕ್ಕ ಮಕ್ಕಳು ಚಾಕಲೇಟ್ ಆಸೆಗೋ, ಇಲ್ಲವೇ ಆಟದ ಸಾಮಾನು ತಾನು ಮುರಿದಿಲ್ಲವೆಂದೋ ಸುಳ್ಳು ಹೇಳಬಹುದು. ರಾಜಕಾರಣಿಗಳು ಪರಿಸ್ಥಿತಿಯ ಲಾಭ ಪಡೆಯಲೋ, ಇಲ್ಲವೇ ಕುಣಿಕೆಯಿಂದ ಪಾರಾಗಲೋ ಸುಳ್ಳು ಹೇಳಬಹುದು. ಇದು ಲಾಭ-ನಷ್ಟದ ಲೆಕ್ಕಾಚಾರವಾಯಿತು. ಆದರೆ ಕೆಲವರು ಸುಳ್ಳನ್ನೇ ಜೀವನ ಮಾಡಿಕೊಂಡಿರುತ್ತಾರಲ್ಲ. ಅವರ ಬಗ್ಗೆ ವಿಚಾರ ಮಾಡಿ ನೋಡೋಣ.


ಕಳ್ಳ ತಾನು ಸಮಾಜದಲ್ಲಿ ಕಳ್ಳ ಎಂದು ಒಪ್ಪಿಕೊಂಡರೆ ಅವನ ಆಟ ನಿಲ್ಲುತ್ತದೆ. ಅದಕ್ಕೆ ಆತ ಬೇರೆಯದೇ ಮುಖವಾಡ ಧರಿಸುತ್ತಾನೆ. ಒಬ್ಬ ಭ್ರಷ್ಟ ಅಧಿಕಾರಿ ತನ್ನ ದೌರ್ಬಲ್ಯ ಮುಚ್ಚಿಕೊಳ್ಳಲು ಅಗತ್ಯಕ್ಕಿಂತ ಹೆಚ್ಚಿಗೆ ಖಡಕ್ಕಾಗಿ ಇರುತ್ತಾನೆ. ಕುಡಿತಕ್ಕೆ ದಾಸನಾದ ಗಂಡಸು ಜೋರು ಧ್ವನಿಯಲ್ಲೇ ಸುಳ್ಳೇ ಜಗಳ ತೆಗೆಯುತ್ತಾನೆ. ಅನೈತಿಕ ಸಂಬಂಧ ಹೊಂದಿದ ಹೆಣ್ಣು ಹೂವಿನಷ್ಟೇ ಮೆತ್ತಗೆ ಸುಳ್ಳು ಹೇಳಿ, ಕೇಳುಗರ ಕಿವಿಯಲ್ಲಿ ಹೂವು ಇಟ್ಟು ಕಳಿಸುತ್ತಾಳೆ. ಮೈತುಂಬ ಸಾಲ ಮಾಡಿಕೊಂಡ ವಿಫಲ ವರ್ತಕ, ಚಟಗಳಿಗೆ ದಾಸರಾಗಿರುವ ಮಕ್ಕಳ ಹೆತ್ತ ತಾಯಿ ತಮಗೆ ಸುಳ್ಳು ಹೇಳುವುದು ಬಿಟ್ಟು ಬೇರೆ ದಾರಿಯೇ ಇಲ್ಲ ಎಂಬಂತೆ ವರ್ತಿಸುತ್ತಾರೆ.


ಅವರಿಗೆ ನೀವು ಯಾಕೆ ಹೀಗಾಯಿತು ಎಂದು ಪ್ರಶ್ನೆ ಕೇಳಿದರೆ ಉಪಯೋಗವಿಲ್ಲ. ಯಾವ ದೇವರ ಮೇಲೆ ಆಣೆ ಮಾಡಿಸಿದರೂ, ಅವರು ನಿಜ ಹೇಳಲಾರರು. ಅವರು ಈಗಾಗಲೇ ತಮಗೆ ತಾವು ಸುಳ್ಳು ಹೇಳಿಕೊಂಡಿದ್ದಾರೆ. ಅದನ್ನೇ ನಿಮಗೂ ಹೇಳುತ್ತಾರೆ. ಬದಲಿಗೆ ಅವರ ಜೊತೆ ಸ್ವಲ್ಪ ಸಮಯ ಕಳೆದು ನೋಡಿ. ವಾಸ್ತವ ಸತ್ಯದ ಅನಾವರಣ ನಿಮಗೆ ಆಗುತ್ತಾ ಹೋಗುತ್ತದೆ. ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಕ್ಕೇ ಹೋಗುತ್ತದೆ.


ತಮ್ಮ ದೌರ್ಬಲ್ಯಗಳನ್ನು ನೇರವಾಗಿ ಎದುರಿಸುವ ಜನ ತುಂಬಾ ಕಡಿಮೆ. ಅವರಿಗೆ ಸುಳ್ಳು ಹೇಳುವ ಅವಶ್ಯಕತೆ ಬರುವುದಿಲ್ಲ. ಆದರೆ ಉಳಿದವರಿಗೆ ಸುಳ್ಳಿನ ಲೋಕವೇ ಪ್ರೀತಿ. ವಾಸ್ತವವನ್ನು ಒಪ್ಪಿಕೊಳ್ಳದೆ, ಕನಸುಗಳನ್ನು ಕೈ ಬಿಡದೆ, ಅಡ್ಡ ದಾರಿ ಹಿಡಿದು, ತಮ್ಮ ದೌರ್ಬಲ್ಯಗಳನ್ನು ಮುಚ್ಚಿ ಹಾಕಲು ಸುಳ್ಳನ್ನು ಅವಲಂಬಿಸುತ್ತಾರೆ. ಆದರೆ ಒಂದು ಸುಳ್ಳು ಮುಚ್ಚಿ ಹಾಕಲು ಇನ್ನೊಂದು ಸುಳ್ಳು ಹೇಳಬೇಕಲ್ಲ. ಹೀಗೆ ಅವರು ಸುಳ್ಳಿನ ಸರಮಾಲೆಯಲ್ಲೇ ಸಿಕ್ಕಿ ಹಾಕಿಕೊಂಡು ತಮ್ಮ ಜೀವನ ಮತ್ತೆ ಬದಲಾಗದಷ್ಟು ನೈತಿಕ ಅಧಪತನಕ್ಕೆ ಇಳಿದು ಬಿಡುತ್ತಾರೆ. ಅದರಿಂದ ಹೊರ ಬರುವ ಹಾದಿ ಕಠಿಣ. ಅದಕ್ಕೆ ಈ ಜಗತ್ತಿಗೆ ಸತ್ಯ ಅಪಥ್ಯ.

Saturday, April 10, 2021

ಶರಣರು ಕಟ್ಟಿದ ಕರುಣಾ ಕೇಂದ್ರ

ಮನೆ ಇಲ್ಲದವರಿಗೂ, ಮನೆ ಸಾಕಾದವರಿಗೂ ಆಶ್ರಯ ನೀಡುವ ಸ್ಥಳ ಮಠ. ಚಿತ್ರದುರ್ಗದ ಮುರುಘರಾಜೇಂದ್ರ ಮಠ ಕೇವಲ ಮನುಶ್ಯರಿಗಲ್ಲದೆ ಹಲವಾರು ಪ್ರಾಣಿ ಪಕ್ಷಿಗಳ ವಾಸ ಸ್ಥಾನ ಕೂಡ ಆಗಿದೆ. ಕನ್ನಡ ಮಣ್ಣಿನಲ್ಲಿ ರಾಜ ಮಹಾರಾಜರು ಸಾಧಿಸಿದ್ದಕ್ಕಿಂತ ಹೆಚ್ಚಿನ ಸಾಧನೆ ಇಲ್ಲಿನ ಸಾಧು, ಸಂತ, ಶರಣರದ್ದು. ನಾಯಕರು ಕಟ್ಟಿದ ಕಲ್ಲಿನ ಕೋಟೆ ಇಂದಿಗೆ ಬಿಸಿಲಿನಲ್ಲಿ ಭಣಗುಡುತ್ತಿದ್ದರೆ, ಶರಣರು ಕಟ್ಟಿದ ಮಠ, ವನ ಮಾತ್ರ ಹಚ್ಚ ಹಸಿರು. ಕೋಟೆ ಅಂದಿನ ಕತ್ತಿಯ ಮೊನಚು, ಫಿರಂಗಿ ಗುಂಡುಗಳು ಹರಿಸಿದ ರಕ್ತ ಮತ್ತು ಮನುಷ್ಯನ ಕ್ರೌರ್ಯದ ನೆನಪು ತಂದರೆ, ಮಠ ಮನುಷ್ಯನ ಇನ್ನೊಂದು ಮುಖವಾದ ಕರುಣೆ ಎನ್ನುವ ತಣ್ಣನೆಯ ತೀರ್ಥ ಪ್ರವಹಿಸುವ ಕೇಂದ್ರವಾಗಿ ಇತಿಹಾಸವನ್ನು ಇಂದಿನ ಕಾಲದ ಜೊತೆಗೆ ಜೋಡಿಸುತ್ತದೆ.

ದುಷ್ಟತೆ ಮೈಗೂಡಿಸಿಕೊಂಡಂತ ಸಮಾಜದ ವಿಷ ತಗ್ಗಿಸಲು, ಮಾನವೀಯತೆಂಬ ಜೀವ ಸೆಲೆ ಬತ್ತದಂತೆ ಕಾಪಾಡಲು ಮಠಗಳನ್ನು ಕಟ್ಟಬೇಕಾದ ಅವಶ್ಯಕತೆಯನ್ನು ಮನಗಂಡ ಶರಣರು ತಾವು ವಿರಕ್ತರಾದರೂ, ಸಮಾಜೋದ್ಧಾರಕ್ಕಾಗಿ ಹಟದಿಂದ ಮಠ ಕಟ್ಟಿದರು. ೧೭ನೆ ಶತಮಾನದಲ್ಲಿ ಈ ಮಠ ಕಟ್ಟಿದ ಶ್ರೀ ಗುರುಸಿದ್ಧ ಸ್ವಾಮಿಗಳಿಂದ, ಅದನ್ನು ಅನವರತ ನಡೆಸಿಕೊಂಡ ಬಂದ ಅನೇಕ ಶರಣರು, ಇಂದು ಅದನ್ನು ಮುನ್ನಡೆಸುವ ಶ್ರೀ ಶಿವಮೂರ್ತಿ ಶರಣರವರೆಗೆ ಹಲವಾರು ಸಂತರ ಜೀವಶಕ್ತಿಯನ್ನು ಈ ಮಠ ತನ್ನದಾಗಿಸಿಕೊಂಡಿದೆ. ೧೫೦ ಕ್ಕೂ ಹೆಚ್ಚು ವಿದ್ಯಾ ಕೇಂದ್ರಗಳನ್ನು ಈ ಮಠ ನಡೆಸುತ್ತ, ಬರಿ ರಾಜಕೀಯ ಅಥವಾ ಧಾರ್ಮಿಕ ಕೇಂದ್ರವಾಗದೆ, ಮನುಷ್ಯನ ಅಜ್ಞಾನವನ್ನು ಹೋಗಲಾಡಿಸುವ ಪ್ರಯತ್ನವನ್ನು ಯಾವತ್ತಿಗೂ ಜಾರಿಯಲ್ಲಿಟ್ಟಿದೆ.

ದೂರದ ಹರಿದ್ವಾರ, ಕಾಶಿಗೆ ಪ್ರವಾಸ ಹೋಗಿ, ಅಲ್ಲಿ ಗಂಗೆಯಲ್ಲಿ ಮುಳುಗೆದ್ದು ಪಾಪ ಪರಿಹಾರ ಎನ್ನುವ ಭ್ರಮೆಯಲ್ಲಿ ವಾಪಸ್ಸು ಬರುವುದಕ್ಕಿಂತ, ನಮ್ಮ ಸುತ್ತ ಮುತ್ತಲಿನ ಮಠಗಳ ಅಂಗಳದ ಕಸ ಬಳೆದು, ನೀರು ಹೊತ್ತು ಹಾಕಿ, ಬಂದವರಿಗೆ ಊಟ ಬಡಿಸಿ, ಶರಣರ ಸಾನ್ನಿಧ್ಯದಲ್ಲಿ ಪ್ರಾರ್ಥಿಸಿದರೆ ಎಂಥಹ ಕಷ್ಟಕರ ಜೀವನವಾದರೂ ಸಹನೀಯವಾದೀತು ಎನ್ನುವುದು ನನ್ನ ಅಭಿಪ್ರಾಯ.





Saturday, April 3, 2021

ಯುದ್ಧಗಳ ಬದಲಾದ ಸ್ವರೂಪವೇ ಚುನಾವಣೆ

ಮನುಷ್ಯ ಚರಿತ್ರೆ ದಾಖಲಿಸುವ ಮುಂಚೆಯೇ ಬುಡಕಟ್ಟು ಜನಾಂಗಗಳು ಗಡಿಗಾಗಿ, ತಮ್ಮ ಶ್ರೇಷ್ಠತೆ ತೋರ್ಪಡಿಸುವುದಕ್ಕಾಗಿ ಕಾದಾಡುತ್ತಿದ್ದರಲ್ಲ. ಅಲ್ಲಿಂದ 1945 ರವರೆಗಿನ ಎರಡನೇ ಜಾಗತಿಕ ಮಹಾ ಯುದ್ಧದವರೆಗೆ ಯುದ್ಧಗಳು ತಮ್ಮ ರಾಜನ ಅಳಿವು ಉಳಿವನ್ನು ನಿರ್ಧರಿಸುತ್ತಿದ್ದವು. ಆದರೆ ಎರಡನೇ ಜಾಗತಿಕ ಯುದ್ಧದಲ್ಲಿ ಹಿಟ್ಲರ್-ಸ್ಟಾಲಿನ್, ಅಮೇರಿಕ-ಜಪಾನ್ ನಡುವಿನ ಹಣ ಹಣಿ ಅಪಾರ ಪ್ರಮಾಣದ ಸಾವು ನೋವು ತಂದ ನಂತರ ಮನುಷ್ಯ ಯುದ್ಧಗಳ ಬದಲಿಗೆ ಚುನಾವಣೆಯನ್ನು ಕಾರ್ಯರೂಪಕ್ಕೆ ತಂದ. ಚುನಾವಣೆಗಳು ಹೊಸ ಜಗತ್ತಿನ ಹರಿಕಾರರಾಗದೆ  ಹಳೆಯ ಯುದ್ಧಗಳ ಹೊಸ ಸ್ವರೂಪವಾಗಿ ಬದಲಾದವು.


ಹಿಂದೆ ಒಬ್ಬ ರಾಜ ಇನ್ನೊಬ್ಬ ರಾಜನ ಮೇಲೆ ಕಾದಾಡಿದರೆ ಇಂದು ಒಂದು ರಾಜಕೀಯ ಪಕ್ಷ ಇನ್ನೊಂದು ಪಕ್ಷದ ಮೇಲೆ ಯುದ್ಧ ಸಾರುತ್ತದೆ. ಅಂದಿಗೆ ರಣ ಕಹಳೆ ಊದಿದರೆ ಇಂದಿಗೆ ಲೌಡ್ ಸ್ಪೀಕರ್ ಗಳ ಹಾವಳಿ. ಅಂದಿಗೆ ದುಡ್ಡು ಕೊಟ್ಟು ಸೈನಿಕರನ್ನು ಮತ್ತು  ಅವರ ನಾಯಕರನ್ನು ಖರೀದಿ ಮಾಡಿದರೆ, ಇಂದಿಗೆ ಮತದಾರರನ್ನು ಮತ್ತು ಎದುರಾಳಿ ನಾಯಕರನ್ನು ಖರೀದಿಸಲಾಗುತ್ತದೆ. ಅಂದಿಗೆ ಮೋಸದಿಂದ ಎದುರಾಳಿಗಳನ್ನು ಇಕ್ಕಟ್ಟಿಗೆ ಸಿಕ್ಕಿಸಿದರೆ, ಇಂದಿನ ಸಿ.ಡಿ. ಪ್ರಕರಣಗಳು ಇನ್ನೇನು? ಅಂದು ಯುದ್ಧವೆಂದರೆ ಹೊಡೆದಾಟ. ಇಂದಿಗೆ ಅದು ವಾಕ್ಸಮರ. ಆವೇಶ ಹೆಚ್ಚಾದಾಗ ಅದು ಬಡಿದಾಟವಾಗಿ ಬದಲಾಗವುದು ಇಂದಿಗೂ ಇದೆ. ಅಂದಿಗೆ ರಾಜ ತನ್ನ ಅಂಗರಕ್ಷಕರ ಜೊತೆ ಬರುತ್ತಿದ್ದ. ಇಂದಿನ ಪುಢಾರಿಗಳು ತಮ್ಮ ಹುಡುಗರ ಗುಂಪನ್ನು ಕಟ್ಟಿಕೊಂಡು ಬರುತ್ತಾರೆ.


ಅಂದಿನ ರಾಜ, ಮಹಾರಾಜರು ಇಂದಿನ ಮುಖ್ಯ ಮಂತ್ರಿ, ಪ್ರಧಾನ ಮಂತ್ರಿಗಳಾಗಿ ಬದಲಾಗಿದ್ದಾರೆ ರಾಜನನ್ನು ವಿರೋಧಿಸಿದ ಸಾಮಾನ್ಯರಿಗೆ ಅಂದಿಗೂ ಉಳಿಗಾಲ ಇರಲಿಲ್ಲ, ಇಂದಿಗೂ ಇಲ್ಲ. ಪ್ರಜಾಪ್ರಭುತ್ವ ಮತ್ತು ಚುನಾವಣೆಗಳು ಯುದ್ಧಗಳ ರಕ್ತದೋಕುಳಿ ತಪ್ಪಿಸಿದರೂ, ನಿಜ ಬದಲಾವಣೆಯನ್ನು ತರಲೇ ಇಲ್ಲ. ಬುದ್ಧ, ಶಂಕರ, ಬಸವ, ವಿವೇಕಾನಂದರಂತಹ ಸಮಾಜ ಸುಧಾರಕರು ಮನುಷ್ಯನ ಆಸೆಗಳಿಗೆ ಧರ್ಮ-ಕಾಯಕದ ಕಡಿವಾಣ ಹಾಕಿದರೂ, ಅಧಿಕಾರ ದಾಹದ ಮನುಜರು ರಕ್ತ ಬೀಜಾಸುರನ ಸಂತತಿಯಂತೆ ಹಬ್ಬುತ್ತಲಿದ್ದಾರೆ. ಯುದ್ಧ ಗೆದ್ದವರೇ ಅಂದಿಗೆ ರಾಜರು. ಚುನಾವಣೆಗಳನ್ನು ರಣಭೂಮಿಯನ್ನಾಗಿ ಮಾಡಿಕೊಂಡವರೇ ಇಂದಿನ ಪ್ರಭುಗಳು. 


ಪ್ರಜೆಗಳು ಅಂದಿಗೆ ರಾಜ ಮನೆತನಗಳನ್ನು ಕಂದಾಯ ಕೊಟ್ಟು ಸಲಹಿದರೆ, ಇಂದಿಗೆ ರಾಜಕೀಯ ಪಕ್ಷಗಳನ್ನು ಸಲಹುತ್ತಾರೆ. ಕಾಲ ಬದಲಾಗಿ, ಬದುಕಿನ ಹೊರ ನೋಟ ಬದಲಾದರೂ, ಎಂದೆಂದಿಗೂ ಬದಲಾಗದ ಮನುಜನ ಆಂತರಿಕ ಸ್ವಭಾವದ ಅತಿರೇಕಗಳು ಅಂದಿಗೆ ಯುದ್ಧಗಳಾಗಿ ಬದಲಾದರೆ, ಇಂದಿಗೆ ಅವು ಚುನಾವಣೆಗಳಾಗಿ ಬದಲಾಗಿವೆ.