Friday, September 3, 2021

ಮನಶಾಸ್ತ್ರದ ಗಣಿತ ಸರಳವಲ್ಲ

೧. ಇಂದು ನಿಮ್ಮ ಅದೃಷ್ಟದ ದಿನ ಎಂದುಕೊಳ್ಳೋಣ. ಏಕೆಂದರೆ ನೀವು ಒಂದು ಲಕ್ಷ ರೂಪಾಯಿಯ ಲಾಟರಿ ಗೆದ್ದಿರುವಿರಿ. ಅದು ನಿಮಗೆ ಕೊಡುವ ಸಂತೋಷವೆಷ್ಟು? ಅದು ಉಳಿಯುವುದೆಷ್ಟು ದಿನ? ಒಂದು ವೇಳೆ ಇಂದು ನಿಮ್ಮ ದುರದೃಷ್ಟದ ದಿನವಾಗಿ, ನೀವು ಕಷ್ಟ ಪಟ್ಟು ಕೂಡಿಟ್ಟ ಒಂದು ಲಕ್ಷ ರೂಪಾಯಿ  ಕಳೆದುಕೊಂಡರೆ, ಅದು ನಿಮಗೆ ತರುವ ದುಃಖವೆಷ್ಟು? ಅದು ಮರೆತು ಹೋಗಲು ಬೇಕಾದ ಸಮಯವೆಷ್ಟು? ಒಂದು ಲಕ್ಷ ರೂಪಾಯಿ ಗೆದ್ದಾಗ ಆಗುವ ಸಂತೋಷ ಹೆಚ್ಚೊ? ಅಥವಾ ಅಷ್ಟೇ ದುಡ್ಡು ಕಳೆದುಕೊಂಡಾಗ ಆಗುವ ದುಃಖ ಹೆಚ್ಚೊ? 


೨. ನೀವು ಶಾಲಾ ಪರೀಕ್ಷೆಯಲ್ಲಿ ರಾಂಕ್ ಬಂದಿದ್ದರೆ, ಆ ಖುಷಿ, ಹೆಮ್ಮೆ ೧೫ ದಿನಗಳಲ್ಲಿ ಮರೆತು ಹೋಗಬಹುದು. ಆದರೆ ಒಂದು ವೇಳೆ ನೀವು ಫೇಲ್ ಆದರೆ ಒಂದು ವರ್ಷವಿಡೀ ಅವಮಾನ ನುಂಗಬೇಕಾಗಬಹುದು.


೩. ನೀವು ದುಡಿದ ಮೊದಲ ಲಕ್ಷ ರೂಪಾಯಿಗಳು ತರುವ ಸಂತೋಷ, ಎರಡನೆಯ ಲಕ್ಷ ರೂಪಾಯಿ ತರುವುದಿಲ್ಲ ಅಷ್ಟೇ ಸಂತೋಷ ತರಲು ನೀವು ಅದಕ್ಕಿಂತ ಹೆಚ್ಚಿಗೆ ಗಳಿಸಬೇಕಾಗುತ್ತದೆ. ಇದನ್ನು ಅರ್ಥಶಾಸ್ತ್ರದಲ್ಲಿ " law of diminishing marginal utility "  ಎನ್ನುತ್ತಾರೆ.


೪. ನೀವು ನಿಮ್ಮ ಪತ್ನಿಗೆ ಒಂದು ಕೆಟ್ಟ ಮಾತು ಹೇಳಿದರೆ, ಅದನ್ನು ಸರಿದೂಗಿಸಲು ಸುಮಾರು ಹದಿನಾರು ಒಳ್ಳೆಯ ಮಾತುಗಳನ್ನು ಆಡಬೇಕಾಗುತ್ತದೆ. ಇದು ಒಂದು ಸಮೀಕ್ಷೆಯಿಂದ ತಿಳಿದು ಬಂದ ವಿಷಯ.


ಇನ್ನೂ ಸಾಕಷ್ಟು ಉದಾಹರಣೆಗಳನ್ನು ಕೊಡುತ್ತ ಹೋಗಬಹುದು. ಅವು ಒಟ್ಟಾರೆಯಾಗಿ ತಿಳಿಸುವ ವಿಷಯವೆಂದರೆ, ಮನಶಾಸ್ತ್ರದ ಗಣಿತ ಸರಳವಲ್ಲ. ಅಲ್ಲಿ ಸಂತೋಷ ಮತ್ತು ದುಃಖ ಸರಿ ಸಮನಾಗಿ ಹಂಚಿಕೆಯಾಗುವುದಿಲ್ಲ. ಸಂತೋಷ ಎನ್ನುವುದು ಯಾವಾಗಲೋ ಒಮ್ಮೆ ಬಂದು ಹೋಗುವ ಅತಿಥಿಯಾದರೆ, ದುಃಖ ಎನ್ನುವುದು ನಮ್ಮ ಬೆನ್ನಿನ ಹಿಂದಿನ ನೆರಳು. ಬೆಳಕು ದೂರವಾದಂತೆಲ್ಲ ನೆರಳು ನಮಗಿಂತ  ಉದ್ದ ಬೆಳೆದು ನಿಲ್ಲುತ್ತದೆ. ಈ ವಿಷಯಗಳನ್ನು ಬುದ್ಧ, ಮಹಾವೀರ, ಸಾಕ್ರಟೀಸ್, ಅರಿಸ್ಟಾಟಲ್ ಇವರೆಲ್ಲ ಚೆನ್ನಾಗಿ ಅರಿತಿದ್ದರು.


ಮಹಾವೀರ 'ಬದುಕು,ಬದುಕಲು ಬಿಡು' ಎಂದು ಹೇಳಿದರೆ, ಬುದ್ಧ ಮಾತ್ರ ಬುಡಕ್ಕೆ ಕೈ ಹಾಕಿ ಹೇಳಿದ 'ಆಸೆಯೇ ದುಃಖಕ್ಕೆ ಮೂಲ' ಎಂದು. ಆಸೆಗಳನ್ನು ಕಡಿಮೆ ಮಾಡಿಕೊಂಡು ನೋಡಿ. ಭಯಗಳು ಕೂಡ ತಾನಾಗೇ ಕಡಿಮೆಯಾಗುತ್ತವೆ. ಚಿಂತೆಯ ಭಾರ ತಗ್ಗಿ, ನೀವು ಹಗುರಾಗುತ್ತೀರಿ. ನಮ್ಮ ಭಾವನೆಗಳ ತೀವ್ರತೆ ಕಡಿಮೆಯಾದಾಗ, ಎದುರಿಗೆ ಇರುವವರನ್ನು ವಸ್ತು ನಿಷ್ಠವಾಗಿ ನೋಡಲು ಸಾಧ್ಯವಾಗುತ್ತದೆ. ನಮ್ಮನ್ನು ನಾವು ದೂರದಿಂದ ನಿಂತು ನೋಡಲು ಸಾಧ್ಯವಾಗುತ್ತದೆ. ಬೇರೆಯವರನ್ನು ಅಳೆದು, ತೂಗುವುದನ್ನು ನಿಲ್ಲಿಸಿದ ನಂತರ ನಮ್ಮ ಮನಸ್ಸಿನ ವಟಗುಟ್ಟುವಿಕೆ ಕೂಡ ನಿಂತು ಹೋಗುತ್ತದೆ.

 

ಗಣಿತ ಸರಳವಲ್ಲದಿರಬಹುದು. ಆದರೆ ಬದುಕಿನ ಸತ್ಯಗಳು ಮಾತ್ರ ತೀರಾ ಸರಳ. ಬುದ್ಧ ಹನ್ನೆರಡು ವರುಷ ಅಲೆದು ಅರಿತುಕೊಂಡಿದ್ದನ್ನು, ನಾವು ಎಲ್ಲೂ ಹೋಗದೆ ಬರೀ ಮನಸ್ಸನ್ನು ಸ್ಥಿಮಿತಕ್ಕೆ ತೆಗೆದುಕೊಂಡು ಅರಿತುಕೊಳ್ಳಬಹುದು. ಬುದ್ಧ ಮುಗ್ಧನಾಗಿ ಬೆಳೆದಿದ್ದ. ಅದಕ್ಕೆ ಅವನಿಗೆ ದೇಶಾಂತರ ಹೋಗುವ ಅಗತ್ಯವಿತ್ತು. ಆದರೆ ನಾವು ಮುಗ್ಧರಲ್ಲ. ಕೂಡುವ, ಕಳೆಯುವ ಲೆಕ್ಕದಲ್ಲಿ ಚಾಣಾಕ್ಷರು. ಕೂಡಿದಾಗ ಆಗುವ ಸಂತೋಷಕ್ಕಿಂತ, ಕಳೆದಾಗ ಆಗುವ ದುಃಖ ಹೆಚ್ಚು ಎಂದು ಅರಿತುಕೊಳ್ಳುವುದಕ್ಕೆ ನಮಗೆ ನಮ್ಮ ಮನೆಯ ಮುಂದಿನ ಗಿಡದ ನೆರಳೇ ಸಾಕು. ಸಂತೋಷ ಎನ್ನುವ ಅತಿಥಿಯನ್ನು, ದುಃಖ ಎನ್ನುವ ಬೆಂಬಿಡದ ಭೂತವನ್ನು ಸಮನಾಗಿ ಸ್ವೀಕರಿಸುವ ಮನಸ್ಥಿತಿ ನಮ್ಮದಾದಾಗ ಮನಶಾಸ್ತ್ರದ ಗಣಿತ ನಮ್ಮನ್ನು ಬಾಧಿಸುವುದಿಲ್ಲ.

Sunday, August 22, 2021

ಸಾಲ ಮಾಡುವುದಕ್ಕಿಂತ ಉಪವಾಸವಿರುವುದೇ ಮೇಲು

“Rather go to bed without dinner than to rise in debt” – Benjamin Franklin


ಯಾವುದೇ ರಸ್ತೆಯನ್ನು ಒಮ್ಮೆ ಸುತ್ತು ಹಾಕಿ ಬನ್ನಿ. ನಿಮಗೆ ಬ್ಯಾಂಕ್ ಗಳು, ಫೈನಾನ್ಸ್ ಕಂಪನಿ ಗಳು, ಕಾಣದೆ ಇರುವುದಿಲ್ಲ. ಅವುಗಳಲ್ಲಿ ನಡೆಯುವ ವ್ಯವಹಾರ ಎಂದರೆ ಒಂದು ಠೇವಣಿ ತೆಗೆದುಕೊಳ್ಳುವುದು ಮತ್ತು ಎರಡನೆಯದು ಮುಖ್ಯವಾಗಿ ಸಾಲ ಕೊಡುವುದು. ಠೇವಣಿ ಇಡುವವರು ಸ್ವಲ್ಪ ಜನ ಆದರೆ ಸಾಲ ತೆಗೆದುಕೊಳ್ಳುವವವರು ನೂರಾರು, ಸಾವಿರಾರು ಜನ. ಸಾಲಗಳಲ್ಲಿ ಕೂಡ ಈಗ ಹಲವಾರು ವಿಧ. ಮನೆ ಮೇಲಿನ ಸಾಲ, ವ್ಯಾಪಾರದ ಮೇಲಿನ ಸಾಲ, ಆಭರಣಗಳ ಮೇಲೆ ಸಾಲ, ಕೃಷಿ ಸಾಲ, ಗೃಹ ಉಪಯೋಗಿ ಉಪಕರಣಗಳ ಮೇಲೆ ಸಾಲ, ಇವೆಲ್ಲ ಬಿಟ್ಟು ಓವರ್ ಡ್ರಾಫ್ಟ್ ಖಾತೆ ಮತ್ತು ಕ್ರೆಡಿಟ್ ಕಾರ್ಡ್ ಗಳು.


ಸಾಲ ಮತ್ತು ನಮ್ಮ ಜೀವನ ಇವೆರಡು ಬೇರ್ಪಡಿಸಲಾಗದ ಸಂಗತಿಗಳು. ಸಾಲ ಮಾಡದ ಗಂಡಸಿಲ್ಲ ಎಂಬುದು ನಮ್ಮ ನಾಣ್ಣುಡಿ. ಜಗತ್ತು ಸುತ್ತಿ ಬಂದರೆ ಸಾಲವನ್ನು ದ್ವೇಷಿಸುವ ದೇಶಗಳು, ಧರ್ಮಗಳನ್ನು ಕಾಣಬಹುದು. ಆದರೆ ಸಾಲವನ್ನು ಬಿಗಿದಪ್ಪಿದ ದೇಶಗಳು, ನಾಗರಿಕತೆಗಳೇ ಹೆಚ್ಚು. ಸಾಲ ಮಾಡುವುದು ತಪ್ಪು ಎಂದೇನಿಲ್ಲ. ಸಾಲ ಯಾವ ಕಾರಣಕ್ಕಾಗಿ ಮಾಡುತ್ತಿದ್ದೇವೆ ಮತ್ತು ಅದನ್ನು ನಮ್ಮಿಂದ ತೀರಿಸಲು ಸಾಧ್ಯವೇ? ಅದು ಮುಗಿದು ಹೋಗುವ ಮುನ್ನ ನಮ್ಮ ಎಷ್ಟು ಜೀವನವನ್ನು ಬಸಿದುಬಿಡುತ್ತದೆ ಎನ್ನುವ ಲೆಕ್ಕಾಚಾರ ಮುಖ್ಯ. ಆದರೆ ಸಾಕಷ್ಟು ಜನ ಸಾಲ ಪಡೆಯುವ ಮುನ್ನ ಅವುಗಳ ಬಗ್ಗೆ ಆಲೋಚನೆಯೇ ಮಾಡುವುದಿಲ್ಲ. ಅದು ಅವರನ್ನು ಫಜೀತಿಗೆ ಬೀಳಿಸುತ್ತದೆ.  ಅವಿವೇಕಿಯ ಕೈಯಲ್ಲಿನ ದುಡ್ಡು, ಬೊಗಸೆಯಲ್ಲಿನ ನೀರಿನ ಹಾಗೆ. ಹೆಚ್ಚು ಹೊತ್ತು ಹಿಡಿದಿಡಲು ಸಾಧ್ಯವಿಲ್ಲ. ಆದರೆ ಸಾಲ ಮಾತ್ರ, ಬಡ್ಡಿಯ ಜೊತೆ ಬಳ್ಳಿಯ ಹಾಗೆ ನಮ್ಮ ದೇಹವನ್ನು ಆವರಿಸಿ ಬೆಳೆಯುತ್ತ ಕೊನೆಗೆ ನಮ್ಮ ಕುತ್ತಿಗೆ ಸುತ್ತುವರಿದು ಉಸಿರುಗಟ್ಟಿಸುವ ಹಾಗೆ ಆದಾಗ ತಪ್ಪಿನ ಅರಿವಾಗುತ್ತದೆ. ಆದರೆ ಕಾಲ ಮಿಂಚಿ ಹೋಗಿರುತ್ತದೆ.


ಎಷ್ಟೋ ಕುಟುಂಬಗಳು ಬೀದಿಗೆ ಬಂದದ್ದು ಆ ಮನೆಗಳಲ್ಲಿನ ಸಾಲಗಾರರಿಂದ. ಸಾಲ ಮಾಡಿ ಬೇಕಾಬಿಟ್ಟಿ ಖರ್ಚು ಮಾಡುವುದು ಬರಿ ಕುಟುಂಬಗಳನ್ನಲ್ಲ, ಸರ್ಕಾರಗಳನ್ನೇ ದಿವಾಳಿ ಎಬ್ಬಿಸಿಬಿಡುತ್ತದೆ. ಅದೇ ಕಾರಣಕ್ಕೆ ಹಣಕಾಸು ಸಚಿವರು ಇಂದಿಗೆ ಮುಖ್ಯ ಮಂತ್ರಿ, ಪ್ರಧಾನ ಮಂತ್ರಿಗಳಷ್ಟೇ ಪ್ರಮುಖರು. ಯಾವುದೇ ಯಶಸ್ವಿ ಕಂಪನಿ ಯಲ್ಲಿ, CEO ಗೆ ಸರಿ ಸಮನಾಗಿ CFO ಕೂಡ  ಜವಾಬ್ದಾರಿ ಹೊತ್ತಿರುತ್ತಾನೆ. ಅವರು ಸಾಲ ಮಾಡುವುದಿಲ್ಲ ಎಂದೇನಿಲ್ಲ. ಆದರೆ ಎಷ್ಟು ಸಾಲ ಮಾಡಬೇಕು. ಅದನ್ನು ಯಾವ ರೂಪದಲ್ಲಿ, ಎಷ್ಟು ಬಡ್ಡಿ ದರಕ್ಕೆ ತರಬೇಕು ಮತ್ತು ಅದನ್ನು ಹಿಂತಿರುಗಿಸುವ ಬಗೆ ಹೇಗೆ ಎಂದು ಕೂಲಂಕುಷವಾಗಿ ಯೋಚಿಸಿರುತ್ತಾರೆ ಮತ್ತು ಅದನ್ನು ಕಾರ್ಯರೂಪಕ್ಕೆ ಇಳಿಸುತ್ತಾರೆ. ಅವರುಗಳು ಬ್ಯಾಂಕ್ ನ ಸಾಲದಿಂದ ಅಭಿವೃದ್ಧಿ ಹೊಂದಿದರೆ, ಜವಾಬ್ದಾರಿ ಇರದವರು ತಮ್ಮ ಕುಟುಂಬಕ್ಕೆ ದುಡಿದದ್ದಕ್ಕಿಂತ ಹೆಚ್ಚು ಬ್ಯಾಂಕ್ ಗಳ ಸಲುವಾಗಿ ದುಡಿಯುತ್ತಾರೆ.


ತಂದ ಸಾಲವನ್ನು ನಾವು ಬಂಡವಾಳದ ಹಾಗೆ ಬಳಕೆ ಮಾಡಿ, ಬಡ್ಡಿ ದರಕ್ಕಿಂತ ಹೆಚ್ಚಿಗೆ ದುಡಿಸಲು ಸಾಧ್ಯವಾಗದೆ ಹೋದರೆ, ಆ ಸಾಲ ಪಡೆಯುವ ಮುನ್ನ ವಿಚಾರ ಮಾಡುವುದು ಒಳಿತು. ನಮ್ಮ ಪ್ರವಾಸಗಳಿಗೆ, ಮನೆ ಉಪಕರಣಗಳಿಗೆ ಸಾಲ ಮಾಡುವುದಕ್ಕಿಂತ ಮೊದಲು ಉಳಿತಾಯ ಮಾಡಿ ಆ ಹಣವನ್ನೇ ಬಳಸುವುದು ಕ್ಷೇಮ. ಈ ಸಾಮಾನ್ಯ ವಿಚಾರ ಎಲ್ಲರಿಗೂ ತಿಳಿದಿದ್ದರೂ, ತಮ್ಮ ಆಸೆಗಳನ್ನು ಹಲವು ದಿನ ತಡೆ ಹಿಡಿಯುವದರಲ್ಲಿ ಸೋತು ಹೋಗುತ್ತಾರೆ. ಅಂತಹವರಿಗೆ ಅರ್ಥ ಆಗಲೆಂದೇ ಬೆಂಜಮಿನ್ ಫ್ರಾಂಕ್ಲಿನ್ ಸಾಲ ಮಾಡುವುದಕ್ಕಿಂತ ಉಪವಾಸವಿರುವುದೇ ಮೇಲು ಎಂದು ಹೇಳಿದ್ದು.

Thursday, August 19, 2021

ಶಾಂತಿ ಉಳಿಯಲು ತೋಳಿನ ಬಲ ಕೂಡ ಅತ್ಯವಶ್ಯಕ

ಭಾರತದ ಚರಿತ್ರೆಯಲ್ಲಿ ಶಾಂತಿದೂತ ಎಂದು ಹೆಸರಾದದ್ದು ಚಕ್ರವರ್ತಿ ಅಶೋಕ. ಆದರೆ ಇತಿಹಾಸವನ್ನು ಸೂಕ್ಷ್ಮವಾಗಿ ಗಮನಿಸಿ ನೋಡಿ. ಮೌರ್ಯ ಸಾಮ್ರಾಜ್ಯವನ್ನು ಕಟ್ಟಿದ್ದು ಅಶೋಕನ ತಾತನಾದ, ಮಹತ್ವಾಕಾಂಕ್ಷಿ ಮತ್ತು ಸಾಹಸಿಯಾದ ಚಂದ್ರಗುಪ್ತ ಮೌರ್ಯ ಮತ್ತು ಚಾಣಾಕ್ಷತೆಗೆ, ಛಲಕ್ಕೆ ಹೆಸರಾದ ಚಾಣಕ್ಯ. ಅವರಿಬ್ಬರೂ ಕಟ್ಟಿದ ಬಲಿಷ್ಠ ಸೈನ್ಯ, ಮೌರ್ಯ ಸಾಮ್ರಾಜ್ಯವನ್ನು ಕಾಪಾಡಿಕೊಂಡು ಬಂತು. ನಂತರ ಬಂದ ಸಾಮ್ರಾಟ್ ಅಶೋಕ ಶಾಂತಿದೂತನಾಗಿ ಬದಲಾದಾಗ, ಬೌದ್ಧ ಧರ್ಮದ ಪ್ರಚಾರಕ್ಕೆ ನಿಂತಾಗ, ಅವನ ಗಮನ ಸೈನ್ಯದ ಮೇಲೆ ಕಡಿಮೆಯಾಗಿ, ಅದು ಕ್ರಮೇಣ ದುರ್ಬಲವಾಗಿರಲಿಕ್ಕೂ ಸಾಕು. ಅಶೋಕನ ಮಕ್ಕಳು ಕೂಡ ಧರ್ಮ ಪ್ರಚಾರಕ್ಕೆಂದು ನಿಂತರು. ಅಶೋಕನ  ಕಾಲಾ ನಂತರ, ಅವನ ಮಕ್ಕಳು ಪಟ್ಟಕ್ಕೇರದೆ, ಮೊಮ್ಮಗನಾದ ಬೃಹದ್ರಥ ಅರಸನಾದ. ಆದರೆ ಶುಂಗ ರಾಜವಂಶಕ್ಕೆ ಸೇರಿದ ಪುಷ್ಯಮಿತ್ರನ ಧಾಳಿಗೆ, ಬೃಹದ್ರಥ ಯುದ್ಧದಲ್ಲೇ ಮೃತ ಪಟ್ಟು, ಮೌರ್ಯ ವಂಶದ ಆಳ್ವಿಕೆ ಕೊನೆಗೊಂಡಿತು. ತೋಳ್ಬಲದಿಂದ ಕಟ್ಟಿದ ಶಾಂತಿಯುತ ಸಾಮ್ರಾಜ್ಯ, ತೋಳ್ಬಲ ಕುಂದಿದಾಗ ಮರೆಯಾಗಿ ಹೋಯಿತು.

 

ಇಂದಿಗೆ ಅಫ್ಘಾನಿಸ್ಥಾನ್ ನಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ತೋಳ್ಬಲ, ಶಸ್ತ್ರಾಸ್ತ್ರಗಳು ಮೇಲುಗೈ ಸಾಧಿಸಿರುವುದು ಕಾಣುತ್ತದೆ. ಪ್ರಪಂಚ ರಾಜಕೀಯದಲ್ಲಿ ಸಾಕಷ್ಟು ದೇಶಗಳು ನಾಗರಿಕತೆಯ ಅಭಿವೃದ್ಧಿ ಹೊಂದಿ ಆರ್ಥಿಕ, ಸಾಮಾಜಿಕ ಬೆಳವಣಿಗೆ ಕಾಣುತ್ತ ಹೋದರೆ, ಇದೊಂದು ದೇಶ ನೂರಾರು ವರುಶಗಳಷ್ಟು ಹಿಂದೆ ಉಳಿದಿರುವುದು ಅಶ್ಯರ್ಯಕರ ಬೆಳವಣಿಗೆ ಏನು ಅಲ್ಲ. ಏಕೆಂದರೆ ಶಾಂತಿ ಇರಲು, ಅರಾಜಕತೆ ಉಂಟಾಗದೇ ಇರಲು ತೋಳ್ಬಲದ ಅವಶ್ಯಕತೆಯೂ ಅಷ್ಟೇ ಮುಖ್ಯ. ಅಲ್ಲಿಯ ಸೈನ್ಯ ಬಲವಾಗಿದ್ದರೆ ಇಂತಹ ಬೆಳವಣಿಗೆಗೆ ಅವಕಾಶ ಎಲ್ಲಿತ್ತು? ಇದೇ ಕಾರಣಕ್ಕೆ ಎಲ್ಲ ದೇಶಗಳು ಅನಿವಾರ್ಯವಾಗಿ ಆದರೂ ಬಲಿಷ್ಠ ಸೈನ್ಯವನ್ನು ಕಟ್ಟಿಕೊಳ್ಳುತ್ತಾರೆ. ಸೇನೆಯ ಮುಖ್ಯ ಉದ್ದೇಶ ಆಕ್ರಮಣವಾಗಿರದೆ, ಗಡಿಯನ್ನು ಕಾಪಾಡಿಕೊಳ್ಳುವುದು ಮತ್ತು ಆಕ್ರಮಣ ನಿರೋಧ ಮಾಡುವುದು ಆಗಿರುತ್ತದೆ.

 

ತೋಳ್ಬಲ ಶಾಂತಿಯನ್ನು ಸ್ಥಾಪಿಸಬಹುದು ಆದರೆ ಅದೇ ತೋಳ್ಬಲ ಶಕ್ತಿ ಕಳೆದುಕೊಂಡಾಗ ಶಾಂತಿ ಉಳಿಯುವುದು ಹೇಗೆ ಸಾಧ್ಯ? ಅದು ಉಳಿಯಬೇಕೆಂದರೆ ಜಗತ್ತಿನ ಉಳಿದೆಲ್ಲ ಜನರು ಒಂದೇ ಮಟ್ಟದ ನಾಗರೀಕತೆ ಹೊಂದಿರಬೇಕು. ಇಲ್ಲದೇ ಹೋದರೆ ಅಪಾಯ ತಪ್ಪಿದ್ದಲ್ಲ. ಸಾವಿರಾರು ವರುಷಗಳ ಹಿಂದೆಯೇ ಅಭಿವೃದ್ಧಿ ಹೊಂದಿದ್ದ ಭಾರತ ದೇಶದ ನಾಗರಿಕರು, ಶಾಂತಿ-ಧರ್ಮದ ಕಡೆಗೆ ಒತ್ತು ಕೊಟ್ಟು, ತಮ್ಮ ಶಸ್ತ್ರಾಸ್ತ್ರಗಳನ್ನು ಕೆಳಗಿಟ್ಟರು. ಅದೇ ಕಾರಣಕ್ಕೆ ಹಿಂಸೆಯನ್ನೇ ಮೈಗೂಡಿಸಿಕೊಂಡ ಧಾಳಿಕೋರರಿಗೆ ಸೋತು ಹೋದರು. ಭಾರತ ಹಲವಾರು ಸಲ ಲೂಟಿಯಾಯಿತು. ಭಾರತ ಇಂದಿಗೆ ಸುರಕ್ಷತೆ ದೃಷ್ಟಿಯಿಂದ ಭದ್ರವಾಗಿದೆ. ಆದರೂ ಕೂಡ ಚರಿತ್ರೆಯ ಪಾಠಗಳನ್ನು ಮರೆಯಬಾರದು.

 

ಭಾರತದಲ್ಲಿ ಇಂದಿಗೆ ದೇಗುಲಗಳನ್ನು ಕಟ್ಟುವುದಕ್ಕಿಂತ ಗಡಿಯಲ್ಲಿ ಹೆಚ್ಚಿನ ಕಾವಲು ಗೋಪುರಗಳನ್ನು ನಿರ್ಮಿಸುವುದು ಅತ್ಯವಶ್ಯ. ಇಲ್ಲದಿದ್ದರೆ ಕಟ್ಟಿದ ದೇಗುಲಗಳು ಉಳಿಯುವುದು ಅಸಾಧ್ಯ.

Tuesday, August 17, 2021

ಹೇಳದೆ ಕಳೆದು ಹೋದ ಕಥೆಗಳು

ಎಲ್ಲರಲ್ಲೂ ಹೇಳಬಹುದಾದ ಆದರೂ ಹೇಳದೆ ಹೋದ ಕಥೆಗಳಿವೆ. ಹತ್ತಾರು ಅಲ್ಲದಿದ್ದರೂ ಒಂದೆರಡು ಆದರೂ ಕಥೆಗಳನ್ನು ಅಡಗಿಸಿಕೊಂಡಿರದ ಜೀವಿಯೇ ಇಲ್ಲ.  ಕೆಲವರಿಗೆ ಕೇಳುವ ಕಿವಿಗಳು ಸಿಕ್ಕಾಗ, ತಮ್ಮ ಕಥೆ ಹೇಳಿ ಹಗುರಾಗುತ್ತಾರೆ. ಕಥೆಗಳನ್ನು ಅರಗಿಸಿಕೊಳ್ಳದೆ ಹೋದವರು ಅದನ್ನು ಬರೆದು ವಾಂತಿ ಮಾಡಿಕೊಳ್ಳುತ್ತಾರೆ. ಸಾಕಷ್ಟು ಜನರು ಕಥೆಗಳನ್ನು ತಮ್ಮ ಹೃದಯಗಳಲ್ಲಿ ಅಡಗಿಸಿಕೊಳ್ಳುತ್ತಾರೆ. ಅವರದ್ದೇ ಸಮಸ್ಯೆ. ಅವರಿಗೆ ಗೊತ್ತಿಲ್ಲದೇ ಇರುವ ವಿಷಯ ಏನೆಂದರೆ ಕಥೆಗಳನ್ನು ಎಂದೂ ಜೀರ್ಣಿಸಿಕೊಳ್ಳಲಾಗುವುದಿಲ್ಲ. ಅವುಗಳು ಚಿಂತೆಗಳಾಗಿ ಬದಲಾಗಿ ಅವರ ಕಥೆ ಮುಗಿಸುತ್ತವೆ. ಹುಚ್ಚರು ಗೋಡೆಯ ಜೊತೆ, ಆಕಾಶದ ಜೊತೆ ಮಾತನಾಡುವುದು ನೋಡಿರುತ್ತಿರಿಲ್ಲ. ಅವರಿಗೆ ಅವರ ಕಥೆ ಹೇಳುವ ಅವಕಾಶ ಸಿಕ್ಕಿದ್ದರೆ, ಅವರ ಕಥೆ ಬೇರೆಯ ತರಹ ಇರುತ್ತಿತ್ತೋ ಏನೋ? ಕಥೆ ಎಷ್ಟು ಕೆಟ್ಟದಾಗಿದ್ದರೂ ಪರವಾಗಿಲ್ಲ. ಅದನ್ನು ಹೇಳಿ ಬಿಟ್ಟರೆ ಚೆನ್ನ ಎನ್ನುವುದು ನನ್ನ ಅಭಿಪ್ರಾಯ.


ಕಥೆಗಳನ್ನು ಕಟ್ಟು ಕಥೆ, ಅವು ಮನುಷ್ಯ ನಿರ್ಮಿತ ಎಂದೆಲ್ಲ ಮಾತನಾಡುತ್ತವೆ. ವಿಚಾರ ಮಾಡಿ ನೋಡಿದರೆ ಕಥೆಗಳೇ ಮನುಷ್ಯನನ್ನು ರೂಪಿಸುತ್ತವೆ. ಪ್ರತಿ ದಿನ ಬೆಳಿಗ್ಗೆ ಆ ದಿನ ಬದುಕಲು ನಮಗೆ ನಾವು ಏನೋ ಕಥೆ ಹೇಳಿಕೊಳ್ಳುತ್ತೇವೆ. ಆ ದಿನದ ಬದುಕು ಮುಂದುವರೆಯಲು ಆ ಕಥೆ ಪ್ರೇರೇಪಣೆ ನೀಡುತ್ತದೆ. ಹಾಗೆಯೇ ರಾತ್ರಿ ಮಲಗುವಾಗ ಹಾಗೆಯೇ ಸತ್ತು ಹೋಗದಿರಲು, ಮರು ದಿನ ಜೀವನ ಮುಂದುವರೆಯಲು ನಮಗೆ ನಾವು ಕಥೆ ಹೇಳಿಕೊಳ್ಳುವುದನ್ನು ಮುಂದುವರೆಸುತ್ತೇವೆ. ಹೀಗೆ ಕಥೆ ಹೇಳಿಕೊಳ್ಳುವುದು ನಿಂತಾಗ ನಮ್ಮ ಕಥೆಯು ಅಂತ್ಯಕ್ಕೆ ಬಂದು ನಿಲ್ಲುತ್ತದೆ. ಈಗ ವಿಚಾರ ಮಾಡಿ ನೋಡಿ. ಕಥೆಯೇ ಕರ್ತೃವಾಯಿತು. ನಾವೇ ಅದರ ಪಾತ್ರಧಾರಿಗಳಾದೆವು.


ನಿಮ್ಮಲ್ಲಿ ಹೇಳದೆ ಹೋದ ಕಥೆಗಳಿದ್ದರೆ, ಅವುಗಳನ್ನು ಮೊದಲು ಹೊರ ಹಾಕಿ ಹಗುರಾಗಿ. ಅಲ್ಲಿಂದ ನೀವು ಮುಂದೆ ಹೇಳಬಹುದಾದ ಕಥೆಗಳ ದಿಕ್ಕು ಕೂಡ ಬದಲಾಗುತ್ತದೆ. ಇತರರ ಕಥೆಗಳಿಗೆ ಕಿವಿಯಾಗಿ. ಅವು ನಿಮ್ಮ ಕಥೆಯೂ ಕೂಡ ಆಗಿರಬಹುದು. ಇನ್ನು ಕೆಲವು ದಾರುಣ ಕಥೆಗಳು, ಅವು ನಿಮ್ಮದಾಗದಂತೆ ಎಚ್ಚರ ವಹಿಸುವ ಪ್ರಕ್ರಿಯೆ ಮತ್ತು ಅವುಗಳಿಗೆ ಪರ್ಯಾಯವಾಗಿ ನೀವು ಹೇಳಿಕೊಳ್ಳಬೇಕಾದ ಕಥೆಗಳ ಕಡೆಗೆ ಗಮನ ಹರಿಸಿ. ಆಗ ನಿಮ್ಮ ಕಥೆ ಇತರರಿಗೆ ಆದರ್ಶವಾಗುತ್ತದೆ. ಇಲ್ಲದೇ ಹೋದರೆ ನಿಮ್ಮ ಕಥೆ ಹೇಗೆ ಬದುಕಬಾರದು ಎನ್ನುವುದಕ್ಕೆ ಉದಾಹರಣೆ ಆಗುತ್ತದೆ.


ಯಾವುದು ನಿಮ್ಮ ಕಥೆ? ನೀವು ಕಥೆ ಹೇಳಲು ಜನರನ್ನು ಹುಡುಕಿಕೊಂಡು ಹೋಗುತ್ತೀರಿ ಎಂದರೆ, ನಿಮ್ಮ ಕಥೆಯಲ್ಲಿ ಏನೋ ದೋಷವಿದೆ. ಆದರೂ ಪರವಾಗಿಲ್ಲ. ಕಥೆ ಹೇಳದೆ ಸುಮ್ಮನಾಗಬೇಡಿ. ಒಂದು ವೇಳೆ, ಜನ ಕಥೆ ಕೇಳಲು ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ ಎಂದರೆ ನಿಮಗೆ ಅಭಿನಂದನೆಗಳು.

Monday, August 9, 2021

ಮಾತು, ಮನಸು, ಹೃದಯಗಳ ಸರಳರೇಖೆ

ಆಸೆಗಳು ಹುಟ್ಟುವುದು ಹೃದಯದಲ್ಲಿ. ಅವುಗಳನ್ನು ಸಾಕಾರಗೊಳಿಸುವ ಶಕ್ತಿ ನಮ್ಮಲಿದೆಯೋ, ಇಲ್ಲವೋ? ಯಾವುದಕ್ಕೆ ಎಷ್ಟು ಖರ್ಚು ಮಾಡುವುದು ಸರಿ? ಇವುಗಳನ್ನು ಅಳೆದು, ತೂಗುವುದು ಮನಸ್ಸು. ಬಹಳಷ್ಟು ಜನರಿಗೆ ನಮ್ಮ ಹೃದಯ, ಮನಸ್ಸು ಅರ್ಥವಾಗುವುದಿಲ್ಲ. ಅವರಿಗೆ ಅರ್ಥವಾಗುವುದು ನಮ್ಮ ನಾಲಿಗೆಯಿಂದ ಹೊರಡುವ ಮಾತು. ಇತರರಿಗೆ ನಮ್ಮ ಮಾತು ಇಷ್ಟವಾದಾಗ ಮಾತ್ರ ಅವರಿಂದ ನಮಗೆ ಸಹಕಾರ ದೊರಕಲು ಸಾಧ್ಯ. ಹೀಗೆ ಹೃದಯ-ಮನಸ್ಸು-ಮಾತು ಇವೆಲ್ಲವುಗಳು ಒಂದೇ ಸರಳ ರೇಖೆಯಲ್ಲಿ ಕೆಲಸ ಮಾಡಿದಾಗ ಅಂದುಕೊಂಡಿದ್ದು ಆಗಲು ಸಾಧ್ಯ.


ಆದರೆ ದೇವರು (ಅಥವಾ ಪ್ರಕೃತಿ) ಈ ಮೂರುಗಳನ್ನು ಒಂದೇ ರೇಖೆಯಲ್ಲಿ ಇರಲು ಬಿಡದೆ ಸಾಕಷ್ಟು ಸಿಕ್ಕು, ಗಂಟುಗಳನ್ನು ಮಧ್ಯದಲ್ಲಿ ಸೇರಿಸಿಬಿಡುತ್ತಾನೆ. ಆಸೆ ಇರುವ ಸಾಕಷ್ಟು ಜನರು ಅದನ್ನು ನಿಜ ಮಾಡಲು ಬೇಕಾದ ಶ್ರಮ, ಶಕ್ತಿ ವ್ಯಯಿಸಲು ಸಿದ್ಧರಿರುವುದಿಲ್ಲ. ಅವರು ಹಗಲು ಕನಸು ಕಾಣುವ ಸೋಂಭೇರಿಗಳು. ಇನ್ನು ಕೆಲವರು ತಮಗಿರುವ ಶಕ್ತಿಯನ್ನು ಹೆಚ್ಚಾಗಿಯೇ ಅಂದಾಜು ಹಾಕುತ್ತಾರೆ. ಸಾಮರ್ಥ್ಯ ಇರದೇ, ಆಸೆಗಳ ಹಿಂದೆ ಬೆನ್ನಟ್ಟಿದರೆ ಅವರು ಸೋತು ಸುಣ್ಣವಾಗುತ್ತಾರೆ. ಅಂತಹವರನ್ನು ನೋಡಿಯೇ 'ಕೆಡುವ ಕಾಲಕ್ಕೆ ಬುದ್ಧಿಯಿಲ್ಲ' ಎನ್ನುವ ಆಡು ಮಾತು ಹುಟ್ಟಿದ್ದು. ಆಸೆ, ಶಕ್ತಿ-ಸಾಮರ್ಥ್ಯ ಎರಡೂ ಇದ್ದರೂ, ಅದನ್ನು ಸರಿಯಾಗಿ ವ್ಯಕ್ತಪಡಿಸುವ ಮಾತಿನ ಕಲೆಗಾರಿಕೆಯೂ ಅತ್ಯವಶ್ಯ. ಯಾವತ್ತೂ ಮಾತೇ ಆಡದ ಮೂಗ ನಾಯಕನನ್ನು ಯಾವ ಕಾಲಕ್ಕಾದರೂ ಕಂಡಿದ್ದೀರಾ? ಮಾತು ಕಡಿಮೆ ಆಡಿ, ಅವನು ತನ್ನ ಶಕ್ತಿಯನ್ನು ಯಾವ ರೀತಿಯಲ್ಲೂ ತೋರ್ಪಡಿಸದಿದ್ದರೆ ಅವನನ್ನು ಕೈಲಾಗದವನು ಎಂದು ನಿರ್ಧರಿಸುತ್ತದೆ ಸಮಾಜ. ಮತ್ತು ಅವನಿಗೆ ಯಾವ ರೀತಿಯ ಸಹಕಾರವನ್ನು ನೀಡುವುದಿಲ್ಲ. ಒಂದು ವೇಳೆ ಅವನು ಹೆಚ್ಚು ಮಾತನಾಡುವುವನಾದರೆ ಅದೇ ಸಮಾಜ ಅವನಿಗೆ ಅಹಂಕಾರಿಯ ಪಟ್ಟ ಕಟ್ಟಿ, ಅವನ ದಾರಿಯಲ್ಲಿ ಪ್ರತಿ ಹೆಜ್ಜೆಗೂ ಅಡ್ಡಗಾಲು ಹಾಕಿ ಅವನನ್ನು ತೊಂದರೆಗೆ ಈಡು ಮಾಡುತ್ತದೆ.


ಆಸೆ ಹೊತ್ತ ಹೃದಯ, ಅಳೆದು ತೂಗುವ ಚಾಣಾಕ್ಷತೆ, ನಯ ಮಾತುಗಾರಿಕೆ ಎಲ್ಲವೂ ಇದ್ದವನಿಗೆ ಅದು ಹಾಗೆಯೇ ಇರಲು ಬಿಡುವುದಿಲ್ಲ ವಿಧಿ. ಅವನ ವೈಯಕ್ತಿಕ ಜೀವನದಲ್ಲಿ ಸೋಲುಂಟು ಮಾಡಿ, ಆಸೆಗಳನ್ನೇ ಬತ್ತಿಸಿಬಿಡುತ್ತದೆ. ಮಾತು, ಮನಸು, ಹೃದಯಗಳನ್ನು ಸಮತೋಲನವಾಗಿ ಒಂದೇ  ಸರಳರೇಖೆಯಲ್ಲಿ ಇಡಲು ನಾವೆಲ್ಲ ಪ್ರಯತ್ನಿಸುತ್ತೇವೆ. ಆದರೆ ಅಸಮತೋಲನ ಉಂಟು ಮಾಡುವುದು ಮಾತ್ರ ನೈಸರ್ಗಿಕ ಕ್ರಿಯೆ. ಅದಕ್ಕೆ ನಮ್ಮ ಯಾವ ಪ್ರಯತ್ನವೂ ಬೇಕಿಲ್ಲ. ಯಶಸ್ಸಿನ ತುದಿ, ಸೋಲಿನ ನೇಪಥ್ಯ ಎರಡೂ ವಿರುದ್ಧ ದಿಕ್ಕಿನಲ್ಲಿ ಇದ್ದರೂ, ಅವು ಉಯ್ಯಾಲೆಯ ಎರಡೂ ತುದಿಗಳು. ಎಷ್ಟು ಜೋರಾಗಿ ಮುಂದು ನೂಕುತ್ತಿರೋ ಅಷ್ಟೇ ವೇಗದಲ್ಲಿ ಅದನ್ನು ಹಿಂದಕ್ಕೆ ತಳ್ಳುತ್ತದೆ ಪ್ರಕೃತಿ.


ನಮ್ಮ ಸುತ್ತ ಮುತ್ತಲಿನ ಜನರನ್ನು ಗಮನಿಸಿ ನೋಡಿ. ಆಸೆ ಇದ್ದು ಸಾಮರ್ಥ್ಯ ಇಲ್ಲದವರು, ಅಥವಾ ಶಕ್ತಿ-ಸಾಮರ್ಥ್ಯ ಇದ್ದು ಮಾತಿನ ನಯಗಾರಿಕೆಯ ಕೊರತೆ ಇರುವವರು, ಇವರುಗಳು ಯಥೇಚ್ಛವಾಗಿ ಕಾಣ ಸಿಗುತ್ತಾರೆ. ಎಲ್ಲ ಸರಿ ಇರುವವರು ಕಡಿಮೆ ಸಂಖ್ಯೆಯಲ್ಲಿ ಇದ್ದರೂ, ಅವರನ್ನು ಒಂದು ಕಿರುಗಣ್ಣಿನಲ್ಲಿ ಗಮನಿಸುತ್ತಾ ಹೋಗಿ. ಕಾಲಚಕ್ರ ಅವರನ್ನು ಕೆಳಗಿಳಿಸುವುದಕ್ಕೆ ನೀವೇ ಸಾಕ್ಷಿಯಾಗುತ್ತೀರಿ. ಹಾಗೆಯೇ ಆಸೆ ಬತ್ತಿ ಹೋದವರು ವಿರಳ ಸಂಖ್ಯೆಯಲ್ಲಿದ್ದರೂ ಅವರ ಇತಿಹಾಸ ತಿಳಿದುಕೊಂಡು ನೋಡಿ. ಅವರಿಗೆ ಯಾವ ಕೊರತೆ ಇರದೆಯೇ ಇದ್ದದ್ದು, ಆದರೂ ಯಶಸ್ಸಿನ ತುದಿಯಿಂದ ಯಾವುದೊ ಕಾರಣಕ್ಕೆ ಸೋಲಿನ ಸೋಪಾನಕ್ಕೆ ಜಾರಿದ್ದು ಮತ್ತು ತದನಂತರ ಅವರು ಮೌನಕ್ಕೆ ಶರಣಾಗಿದ್ದು ನಿಮ್ಮ ಗಮನಕ್ಕೆ ಬಂದೇ ಬರುತ್ತದೆ.


ಮಾತು-ಮನಸು-ಹೃದಯಗಳು ನಿಮ್ಮಲಿ ಒಂದೇ ಸರಳ ರೇಖೆಯಲ್ಲಿದ್ದರೆ ನಿಮಗೆ ಅಭಿನಂದನೆಗಳು. ಅದು ಹಾಗೆಯೆ ಇರುವಷ್ಟು ದಿನ ಆನಂದಿಸಿ. ಮತ್ತು ಅದು ಹಾಗೆಯೆ ಉಳಿಯುವುದಿಲ್ಲ ಎನ್ನುವ ಸತ್ಯವೂ ನೆನಪಿರಲಿ. ಪ್ರಕೃತಿ ಇಂದು ನಿಮ್ಮನ್ನು ನಾಯಕನನ್ನಾಗಿಸಿದೆ. ನಾಳೆ ನಿಮ್ಮನ್ನು ಕೆಳಗಿಳಿಸಿ ಇನ್ನೊಬ್ಬರನ್ನು ನಾಯಕನನ್ನಾಗಿ ಮಾಡಲಿದೆ.