Tuesday, August 17, 2021

ಹೇಳದೆ ಕಳೆದು ಹೋದ ಕಥೆಗಳು

ಎಲ್ಲರಲ್ಲೂ ಹೇಳಬಹುದಾದ ಆದರೂ ಹೇಳದೆ ಹೋದ ಕಥೆಗಳಿವೆ. ಹತ್ತಾರು ಅಲ್ಲದಿದ್ದರೂ ಒಂದೆರಡು ಆದರೂ ಕಥೆಗಳನ್ನು ಅಡಗಿಸಿಕೊಂಡಿರದ ಜೀವಿಯೇ ಇಲ್ಲ.  ಕೆಲವರಿಗೆ ಕೇಳುವ ಕಿವಿಗಳು ಸಿಕ್ಕಾಗ, ತಮ್ಮ ಕಥೆ ಹೇಳಿ ಹಗುರಾಗುತ್ತಾರೆ. ಕಥೆಗಳನ್ನು ಅರಗಿಸಿಕೊಳ್ಳದೆ ಹೋದವರು ಅದನ್ನು ಬರೆದು ವಾಂತಿ ಮಾಡಿಕೊಳ್ಳುತ್ತಾರೆ. ಸಾಕಷ್ಟು ಜನರು ಕಥೆಗಳನ್ನು ತಮ್ಮ ಹೃದಯಗಳಲ್ಲಿ ಅಡಗಿಸಿಕೊಳ್ಳುತ್ತಾರೆ. ಅವರದ್ದೇ ಸಮಸ್ಯೆ. ಅವರಿಗೆ ಗೊತ್ತಿಲ್ಲದೇ ಇರುವ ವಿಷಯ ಏನೆಂದರೆ ಕಥೆಗಳನ್ನು ಎಂದೂ ಜೀರ್ಣಿಸಿಕೊಳ್ಳಲಾಗುವುದಿಲ್ಲ. ಅವುಗಳು ಚಿಂತೆಗಳಾಗಿ ಬದಲಾಗಿ ಅವರ ಕಥೆ ಮುಗಿಸುತ್ತವೆ. ಹುಚ್ಚರು ಗೋಡೆಯ ಜೊತೆ, ಆಕಾಶದ ಜೊತೆ ಮಾತನಾಡುವುದು ನೋಡಿರುತ್ತಿರಿಲ್ಲ. ಅವರಿಗೆ ಅವರ ಕಥೆ ಹೇಳುವ ಅವಕಾಶ ಸಿಕ್ಕಿದ್ದರೆ, ಅವರ ಕಥೆ ಬೇರೆಯ ತರಹ ಇರುತ್ತಿತ್ತೋ ಏನೋ? ಕಥೆ ಎಷ್ಟು ಕೆಟ್ಟದಾಗಿದ್ದರೂ ಪರವಾಗಿಲ್ಲ. ಅದನ್ನು ಹೇಳಿ ಬಿಟ್ಟರೆ ಚೆನ್ನ ಎನ್ನುವುದು ನನ್ನ ಅಭಿಪ್ರಾಯ.


ಕಥೆಗಳನ್ನು ಕಟ್ಟು ಕಥೆ, ಅವು ಮನುಷ್ಯ ನಿರ್ಮಿತ ಎಂದೆಲ್ಲ ಮಾತನಾಡುತ್ತವೆ. ವಿಚಾರ ಮಾಡಿ ನೋಡಿದರೆ ಕಥೆಗಳೇ ಮನುಷ್ಯನನ್ನು ರೂಪಿಸುತ್ತವೆ. ಪ್ರತಿ ದಿನ ಬೆಳಿಗ್ಗೆ ಆ ದಿನ ಬದುಕಲು ನಮಗೆ ನಾವು ಏನೋ ಕಥೆ ಹೇಳಿಕೊಳ್ಳುತ್ತೇವೆ. ಆ ದಿನದ ಬದುಕು ಮುಂದುವರೆಯಲು ಆ ಕಥೆ ಪ್ರೇರೇಪಣೆ ನೀಡುತ್ತದೆ. ಹಾಗೆಯೇ ರಾತ್ರಿ ಮಲಗುವಾಗ ಹಾಗೆಯೇ ಸತ್ತು ಹೋಗದಿರಲು, ಮರು ದಿನ ಜೀವನ ಮುಂದುವರೆಯಲು ನಮಗೆ ನಾವು ಕಥೆ ಹೇಳಿಕೊಳ್ಳುವುದನ್ನು ಮುಂದುವರೆಸುತ್ತೇವೆ. ಹೀಗೆ ಕಥೆ ಹೇಳಿಕೊಳ್ಳುವುದು ನಿಂತಾಗ ನಮ್ಮ ಕಥೆಯು ಅಂತ್ಯಕ್ಕೆ ಬಂದು ನಿಲ್ಲುತ್ತದೆ. ಈಗ ವಿಚಾರ ಮಾಡಿ ನೋಡಿ. ಕಥೆಯೇ ಕರ್ತೃವಾಯಿತು. ನಾವೇ ಅದರ ಪಾತ್ರಧಾರಿಗಳಾದೆವು.


ನಿಮ್ಮಲ್ಲಿ ಹೇಳದೆ ಹೋದ ಕಥೆಗಳಿದ್ದರೆ, ಅವುಗಳನ್ನು ಮೊದಲು ಹೊರ ಹಾಕಿ ಹಗುರಾಗಿ. ಅಲ್ಲಿಂದ ನೀವು ಮುಂದೆ ಹೇಳಬಹುದಾದ ಕಥೆಗಳ ದಿಕ್ಕು ಕೂಡ ಬದಲಾಗುತ್ತದೆ. ಇತರರ ಕಥೆಗಳಿಗೆ ಕಿವಿಯಾಗಿ. ಅವು ನಿಮ್ಮ ಕಥೆಯೂ ಕೂಡ ಆಗಿರಬಹುದು. ಇನ್ನು ಕೆಲವು ದಾರುಣ ಕಥೆಗಳು, ಅವು ನಿಮ್ಮದಾಗದಂತೆ ಎಚ್ಚರ ವಹಿಸುವ ಪ್ರಕ್ರಿಯೆ ಮತ್ತು ಅವುಗಳಿಗೆ ಪರ್ಯಾಯವಾಗಿ ನೀವು ಹೇಳಿಕೊಳ್ಳಬೇಕಾದ ಕಥೆಗಳ ಕಡೆಗೆ ಗಮನ ಹರಿಸಿ. ಆಗ ನಿಮ್ಮ ಕಥೆ ಇತರರಿಗೆ ಆದರ್ಶವಾಗುತ್ತದೆ. ಇಲ್ಲದೇ ಹೋದರೆ ನಿಮ್ಮ ಕಥೆ ಹೇಗೆ ಬದುಕಬಾರದು ಎನ್ನುವುದಕ್ಕೆ ಉದಾಹರಣೆ ಆಗುತ್ತದೆ.


ಯಾವುದು ನಿಮ್ಮ ಕಥೆ? ನೀವು ಕಥೆ ಹೇಳಲು ಜನರನ್ನು ಹುಡುಕಿಕೊಂಡು ಹೋಗುತ್ತೀರಿ ಎಂದರೆ, ನಿಮ್ಮ ಕಥೆಯಲ್ಲಿ ಏನೋ ದೋಷವಿದೆ. ಆದರೂ ಪರವಾಗಿಲ್ಲ. ಕಥೆ ಹೇಳದೆ ಸುಮ್ಮನಾಗಬೇಡಿ. ಒಂದು ವೇಳೆ, ಜನ ಕಥೆ ಕೇಳಲು ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ ಎಂದರೆ ನಿಮಗೆ ಅಭಿನಂದನೆಗಳು.

No comments:

Post a Comment