Monday, August 9, 2021

ಮಾತು, ಮನಸು, ಹೃದಯಗಳ ಸರಳರೇಖೆ

ಆಸೆಗಳು ಹುಟ್ಟುವುದು ಹೃದಯದಲ್ಲಿ. ಅವುಗಳನ್ನು ಸಾಕಾರಗೊಳಿಸುವ ಶಕ್ತಿ ನಮ್ಮಲಿದೆಯೋ, ಇಲ್ಲವೋ? ಯಾವುದಕ್ಕೆ ಎಷ್ಟು ಖರ್ಚು ಮಾಡುವುದು ಸರಿ? ಇವುಗಳನ್ನು ಅಳೆದು, ತೂಗುವುದು ಮನಸ್ಸು. ಬಹಳಷ್ಟು ಜನರಿಗೆ ನಮ್ಮ ಹೃದಯ, ಮನಸ್ಸು ಅರ್ಥವಾಗುವುದಿಲ್ಲ. ಅವರಿಗೆ ಅರ್ಥವಾಗುವುದು ನಮ್ಮ ನಾಲಿಗೆಯಿಂದ ಹೊರಡುವ ಮಾತು. ಇತರರಿಗೆ ನಮ್ಮ ಮಾತು ಇಷ್ಟವಾದಾಗ ಮಾತ್ರ ಅವರಿಂದ ನಮಗೆ ಸಹಕಾರ ದೊರಕಲು ಸಾಧ್ಯ. ಹೀಗೆ ಹೃದಯ-ಮನಸ್ಸು-ಮಾತು ಇವೆಲ್ಲವುಗಳು ಒಂದೇ ಸರಳ ರೇಖೆಯಲ್ಲಿ ಕೆಲಸ ಮಾಡಿದಾಗ ಅಂದುಕೊಂಡಿದ್ದು ಆಗಲು ಸಾಧ್ಯ.


ಆದರೆ ದೇವರು (ಅಥವಾ ಪ್ರಕೃತಿ) ಈ ಮೂರುಗಳನ್ನು ಒಂದೇ ರೇಖೆಯಲ್ಲಿ ಇರಲು ಬಿಡದೆ ಸಾಕಷ್ಟು ಸಿಕ್ಕು, ಗಂಟುಗಳನ್ನು ಮಧ್ಯದಲ್ಲಿ ಸೇರಿಸಿಬಿಡುತ್ತಾನೆ. ಆಸೆ ಇರುವ ಸಾಕಷ್ಟು ಜನರು ಅದನ್ನು ನಿಜ ಮಾಡಲು ಬೇಕಾದ ಶ್ರಮ, ಶಕ್ತಿ ವ್ಯಯಿಸಲು ಸಿದ್ಧರಿರುವುದಿಲ್ಲ. ಅವರು ಹಗಲು ಕನಸು ಕಾಣುವ ಸೋಂಭೇರಿಗಳು. ಇನ್ನು ಕೆಲವರು ತಮಗಿರುವ ಶಕ್ತಿಯನ್ನು ಹೆಚ್ಚಾಗಿಯೇ ಅಂದಾಜು ಹಾಕುತ್ತಾರೆ. ಸಾಮರ್ಥ್ಯ ಇರದೇ, ಆಸೆಗಳ ಹಿಂದೆ ಬೆನ್ನಟ್ಟಿದರೆ ಅವರು ಸೋತು ಸುಣ್ಣವಾಗುತ್ತಾರೆ. ಅಂತಹವರನ್ನು ನೋಡಿಯೇ 'ಕೆಡುವ ಕಾಲಕ್ಕೆ ಬುದ್ಧಿಯಿಲ್ಲ' ಎನ್ನುವ ಆಡು ಮಾತು ಹುಟ್ಟಿದ್ದು. ಆಸೆ, ಶಕ್ತಿ-ಸಾಮರ್ಥ್ಯ ಎರಡೂ ಇದ್ದರೂ, ಅದನ್ನು ಸರಿಯಾಗಿ ವ್ಯಕ್ತಪಡಿಸುವ ಮಾತಿನ ಕಲೆಗಾರಿಕೆಯೂ ಅತ್ಯವಶ್ಯ. ಯಾವತ್ತೂ ಮಾತೇ ಆಡದ ಮೂಗ ನಾಯಕನನ್ನು ಯಾವ ಕಾಲಕ್ಕಾದರೂ ಕಂಡಿದ್ದೀರಾ? ಮಾತು ಕಡಿಮೆ ಆಡಿ, ಅವನು ತನ್ನ ಶಕ್ತಿಯನ್ನು ಯಾವ ರೀತಿಯಲ್ಲೂ ತೋರ್ಪಡಿಸದಿದ್ದರೆ ಅವನನ್ನು ಕೈಲಾಗದವನು ಎಂದು ನಿರ್ಧರಿಸುತ್ತದೆ ಸಮಾಜ. ಮತ್ತು ಅವನಿಗೆ ಯಾವ ರೀತಿಯ ಸಹಕಾರವನ್ನು ನೀಡುವುದಿಲ್ಲ. ಒಂದು ವೇಳೆ ಅವನು ಹೆಚ್ಚು ಮಾತನಾಡುವುವನಾದರೆ ಅದೇ ಸಮಾಜ ಅವನಿಗೆ ಅಹಂಕಾರಿಯ ಪಟ್ಟ ಕಟ್ಟಿ, ಅವನ ದಾರಿಯಲ್ಲಿ ಪ್ರತಿ ಹೆಜ್ಜೆಗೂ ಅಡ್ಡಗಾಲು ಹಾಕಿ ಅವನನ್ನು ತೊಂದರೆಗೆ ಈಡು ಮಾಡುತ್ತದೆ.


ಆಸೆ ಹೊತ್ತ ಹೃದಯ, ಅಳೆದು ತೂಗುವ ಚಾಣಾಕ್ಷತೆ, ನಯ ಮಾತುಗಾರಿಕೆ ಎಲ್ಲವೂ ಇದ್ದವನಿಗೆ ಅದು ಹಾಗೆಯೇ ಇರಲು ಬಿಡುವುದಿಲ್ಲ ವಿಧಿ. ಅವನ ವೈಯಕ್ತಿಕ ಜೀವನದಲ್ಲಿ ಸೋಲುಂಟು ಮಾಡಿ, ಆಸೆಗಳನ್ನೇ ಬತ್ತಿಸಿಬಿಡುತ್ತದೆ. ಮಾತು, ಮನಸು, ಹೃದಯಗಳನ್ನು ಸಮತೋಲನವಾಗಿ ಒಂದೇ  ಸರಳರೇಖೆಯಲ್ಲಿ ಇಡಲು ನಾವೆಲ್ಲ ಪ್ರಯತ್ನಿಸುತ್ತೇವೆ. ಆದರೆ ಅಸಮತೋಲನ ಉಂಟು ಮಾಡುವುದು ಮಾತ್ರ ನೈಸರ್ಗಿಕ ಕ್ರಿಯೆ. ಅದಕ್ಕೆ ನಮ್ಮ ಯಾವ ಪ್ರಯತ್ನವೂ ಬೇಕಿಲ್ಲ. ಯಶಸ್ಸಿನ ತುದಿ, ಸೋಲಿನ ನೇಪಥ್ಯ ಎರಡೂ ವಿರುದ್ಧ ದಿಕ್ಕಿನಲ್ಲಿ ಇದ್ದರೂ, ಅವು ಉಯ್ಯಾಲೆಯ ಎರಡೂ ತುದಿಗಳು. ಎಷ್ಟು ಜೋರಾಗಿ ಮುಂದು ನೂಕುತ್ತಿರೋ ಅಷ್ಟೇ ವೇಗದಲ್ಲಿ ಅದನ್ನು ಹಿಂದಕ್ಕೆ ತಳ್ಳುತ್ತದೆ ಪ್ರಕೃತಿ.


ನಮ್ಮ ಸುತ್ತ ಮುತ್ತಲಿನ ಜನರನ್ನು ಗಮನಿಸಿ ನೋಡಿ. ಆಸೆ ಇದ್ದು ಸಾಮರ್ಥ್ಯ ಇಲ್ಲದವರು, ಅಥವಾ ಶಕ್ತಿ-ಸಾಮರ್ಥ್ಯ ಇದ್ದು ಮಾತಿನ ನಯಗಾರಿಕೆಯ ಕೊರತೆ ಇರುವವರು, ಇವರುಗಳು ಯಥೇಚ್ಛವಾಗಿ ಕಾಣ ಸಿಗುತ್ತಾರೆ. ಎಲ್ಲ ಸರಿ ಇರುವವರು ಕಡಿಮೆ ಸಂಖ್ಯೆಯಲ್ಲಿ ಇದ್ದರೂ, ಅವರನ್ನು ಒಂದು ಕಿರುಗಣ್ಣಿನಲ್ಲಿ ಗಮನಿಸುತ್ತಾ ಹೋಗಿ. ಕಾಲಚಕ್ರ ಅವರನ್ನು ಕೆಳಗಿಳಿಸುವುದಕ್ಕೆ ನೀವೇ ಸಾಕ್ಷಿಯಾಗುತ್ತೀರಿ. ಹಾಗೆಯೇ ಆಸೆ ಬತ್ತಿ ಹೋದವರು ವಿರಳ ಸಂಖ್ಯೆಯಲ್ಲಿದ್ದರೂ ಅವರ ಇತಿಹಾಸ ತಿಳಿದುಕೊಂಡು ನೋಡಿ. ಅವರಿಗೆ ಯಾವ ಕೊರತೆ ಇರದೆಯೇ ಇದ್ದದ್ದು, ಆದರೂ ಯಶಸ್ಸಿನ ತುದಿಯಿಂದ ಯಾವುದೊ ಕಾರಣಕ್ಕೆ ಸೋಲಿನ ಸೋಪಾನಕ್ಕೆ ಜಾರಿದ್ದು ಮತ್ತು ತದನಂತರ ಅವರು ಮೌನಕ್ಕೆ ಶರಣಾಗಿದ್ದು ನಿಮ್ಮ ಗಮನಕ್ಕೆ ಬಂದೇ ಬರುತ್ತದೆ.


ಮಾತು-ಮನಸು-ಹೃದಯಗಳು ನಿಮ್ಮಲಿ ಒಂದೇ ಸರಳ ರೇಖೆಯಲ್ಲಿದ್ದರೆ ನಿಮಗೆ ಅಭಿನಂದನೆಗಳು. ಅದು ಹಾಗೆಯೆ ಇರುವಷ್ಟು ದಿನ ಆನಂದಿಸಿ. ಮತ್ತು ಅದು ಹಾಗೆಯೆ ಉಳಿಯುವುದಿಲ್ಲ ಎನ್ನುವ ಸತ್ಯವೂ ನೆನಪಿರಲಿ. ಪ್ರಕೃತಿ ಇಂದು ನಿಮ್ಮನ್ನು ನಾಯಕನನ್ನಾಗಿಸಿದೆ. ನಾಳೆ ನಿಮ್ಮನ್ನು ಕೆಳಗಿಳಿಸಿ ಇನ್ನೊಬ್ಬರನ್ನು ನಾಯಕನನ್ನಾಗಿ ಮಾಡಲಿದೆ.

No comments:

Post a Comment