ಇದು ಹದಿನೈದನೇ ಶತಮಾನದಲ್ಲಿ ನಡೆಯುವ ಕಥಾ ವಸ್ತುವನ್ನು ಹೊಂದಿದೆ. ಪೋರ್ಚುಗೀಸ್ ದೇಶದ ತೇಜೋ ನದಿ ದಡದ, ಲಿಸ್ಬನ್ ನಗರದಲ್ಲಿ ವಾಸಿಸುವ ಗೇಬ್ರಿಯಲ್ ಮತ್ತು ವಿಜಯನಗರ ಸಾಮ್ರಾಜ್ಯದಲ್ಲಿ, ತುಂಗಭದ್ರಾ ನದಿ ದಡದಲ್ಲಿರುವ ತೆಂಬಕಪುರದಲ್ಲಿ ವಾಸಿಸುವ ಹಂಪಮ್ಮ ಈ ಕಾದಂಬರಿಯ ಕೇಂದ್ರ ಬಿಂದುಗಳು. ಅವರಲ್ಲದೇ ಇನ್ನೂ ಹತ್ತಾರು ಪಾತ್ರಗಳು ತಮ್ಮ ಕಥೆಗಳನ್ನು ಹೇಳುತ್ತಾ ವಿಶಿಷ್ಟ ಛಾಪು ಮೂಡಿಸುತ್ತಾರೆ.
ಕ್ರಿಶ್ಚಿಯನ್ ಆದ ಗೇಬ್ರಿಯಲ್ ಗೆ, ಯಹೂದಿ ಧರ್ಮಕ್ಕೆ ಸೇರಿದ ಬೆಲ್ಲಾಳನ್ನು ಮದುವೆಯಾಗುವ ಆಸೆ. ಆದರೆ ಅವಳ ಅಪ್ಪ ಶ್ರೀಮಂತರಿಗೆ ಮಾತ್ರ ತನ್ನ ಮಗಳು ಸಿಗುವುದು ಎಂದು ಸ್ಪಷ್ಟ ಪಡಿಸಿದ ಮೇಲೆ, ಹೇಗಾದರೂ ತನ್ನ ಬಡತನ ಕಳೆದುಕೊಳ್ಳುವ ಉದ್ದೇಶದಿಂದ, ಶ್ರೀಮಂತಿಕೆ-ವೈಭವದಿಂದ ಮೆರೆಯುವ ಭಾರತಕ್ಕೆ, ಹಣ ಗಳಿಸುವುದಕ್ಕಾಗಿ ತೆರಳುತ್ತಾನೆ. ಅಷ್ಟರಲ್ಲಾಗಲೇ ವಾಸ್ಕೋ-ಡಾ-ಗಮ ಭಾರತಕ್ಕೆ ಸಮುದ್ರ ಮಾರ್ಗ ಕಂಡು ಹಿಡಿದಿದ್ದನಲ್ಲ. ಅವನ ಹಡಗುಗಳು ಮಸಾಲೆ, ರತ್ನ-ವೈಡೂರ್ಯಗಳನ್ನು ಹೊತ್ತು ತಂದು, ಅವನ ಜೊತೆಗಾರರನ್ನು ಶ್ರೀಮಂತರನ್ನಾಗಿಸುವುದಲ್ಲದೆ ರಾಜ ಮನೆತನದ ಬೊಕ್ಕಸವನ್ನು ಕೂಡ ತುಂಬಿದ್ದವು. ಭಾರತದೊಡನೆ ವ್ಯಾಪಾರ ಮಾಡಿದರೆ ಬಡತನ ಕಳೆದುಹೋಗುವುದು ಸುಲಭ ಎನ್ನುವುದು ಎಲ್ಲ ಸಾಮಾನ್ಯ ಜನರಿಗೂ ಗೊತ್ತಾಗಿ ಹೋಗಿತ್ತು.
ತೆಂಬಕಪುರದಲ್ಲಿ ಹಂಪಮ್ಮಳನ್ನು ಮದುವೆಯಾಗುವ ಉದ್ದೇಶದಿಂದ ಇಬ್ಬರು ಜಟ್ಟಿಗಳು ಕಾಳಗಕ್ಕೆ ಇಳಿದಿದ್ದರು. ಸೋತವನು ಸತ್ತರೆ, ಗೆದ್ದವನಿಗೆ ಹಂಪಮ್ಮಳ ಕೈ ಹಿಡಿಯುವ ಅದೃಷ್ಟ. ಆ ಕಾಳಗ ನೋಡಲು, ಸ್ವತಃ ಶ್ರೀಕೃಷ್ಣದೇವರಾಯರೇ ತಮ್ಮ ರಾಣಿಯರ ಜೊತೆ ತೆಂಬಕಪುರಕ್ಕೆ ಆಗಮಿಸಿದ್ದರಲ್ಲ. ಅದರಲ್ಲಿ ಗೆದ್ದ ಕೇಶವ ಹಂಪಮ್ಮಳನ್ನು ಮದುವೆಯಾದರೂ, ಕೆಲವೇ ವರುಷಗಳಿಗೆ ಕೃಷ್ಣದೇವರಾಯರಿಗೆ ಗಂಡು ಮಗುವಾದಾಗ, ಲೆಂಕನಾಗಿ ಪ್ರಾಣ ತೆರುತ್ತಾನೆ. ಸಹಗಮನಕ್ಕೆ ಒಪ್ಪದ, ಆಗಲೇ ಗರ್ಭಿಣಿಯಾಗಿದ್ದ ಹಂಪಮ್ಮ, ತಪ್ಪಿಸಿಕೊಂಡು ನದಿ ದಾಟುತ್ತಾಳೆ.
ಭಾರತಕ್ಕೆ ಬಂದು ತಲುಪಿದ ಗೇಬ್ರಿಯಲ್, ಗೋವಾದಲ್ಲಿ ಬಿಜಾಪುರ ಸುಲ್ತಾನರ ಕೈಗೆ ಸಿಕ್ಕು, ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು, ಅಹ್ಮದ್ ಖಾನ್ ನಾಗಿ ಬದಲುಗುತ್ತಾನೆ. ಮತ್ತೆ ಪೋರ್ಚುಗೀಸ್ ರ ಧಾಳಿಗೆ ಸಿಕ್ಕು ತನ್ನ ಕಿವಿ-ಮೂಗುಗಳನ್ನು ಕೊಯ್ಯಿಸಿಕೊಂಡು ವಿರೂಪಗೊಳ್ಳುತ್ತಾನೆ. ಕೊನೆಗೆ ವಿಜಯನಗರಕ್ಕೆ ಬಂದು ನೆಲೆಗೊಳ್ಳುತ್ತಾನೆ. ಅವನ ಹೆಸರು ಕನ್ನಡಕ್ಕೆ ರೂಪಾಂತರಗೊಂಡು ಅಮ್ಮದಕಣ್ಣ ನಾಗಿ ಬದಲಾಗುತ್ತದೆ.
ನದಿ ದಾಟಿ ಬಂದ ಹಂಪಮ್ಮಳಿಗೆ, ಅವಳನ್ನು ಕೊಲ್ಲಲು ಹಿಂದೆ ಬೆನ್ನಟ್ಟಿ ಬರುತ್ತಿರುವವರಿಂದ ಕಾಪಾಡುವ ಉದ್ದೇಶದಿಂದ ಅಮ್ಮದಕಣ್ಣ, ಹಂಪಮ್ಮಳನ್ನು ತನ್ನ ಕುದುರೆಯ ಮೇಲೆ ಗೋವಾ ಗೆ ಕರೆದೊಯ್ಯುತ್ತಾನೆ. ಮಾರ್ಗ ಮಧ್ಯದಲ್ಲಿ ಪುರಂದರ ದಾಸರ ದರ್ಶನವಾಗಿ ಅವರು ಇವರನ್ನು ಹರಸುತ್ತಾರೆ. ಗೋವಾ ತಲುಪಿ ಪೋರ್ಚುಗೀಸ್ ರ ಆಶ್ರಯ ಪಡೆಯುವ ಹಂಪಮ್ಮ, ತನಗೆ ನೆರವಾದ ಅಮ್ಮದಕಣ್ಣನನ್ನು ತನಗೆ ಜೋಡಿಯಾಗುವಂತೆ ಕೇಳಿಕೊಳ್ಳುತ್ತಾಳೆ.
ಪರದೇಶದವನಿಗೆ ಆಶ್ರಯ ಕೊಟ್ಟ ಹಂಪೆ, ತನ್ನದೇ ನಾಡಿನವಳಿಗೆ ಹೊರ ಹೋಗುವಂತ ಸನ್ನಿವೇಶ ಸೃಷ್ಟಿಸುವ ವಿಪರ್ಯಾಸ ಈ ಕಥೆಯಲ್ಲಿದೆ. ಸಣ್ಣ ಕಥೆಗಳಲ್ಲಿರುವ ಸೂಕ್ಷ್ಮತೆ, ಆರ್ದ್ರತೆ ಈ ಕಾದಂಬರಿ ಉದ್ದಕ್ಕೂ ಕಾಪಾಡಿಕೊಂಡು ಬಂದಿದ್ದಾರೆ ಲೇಖಕರು. ಐದು ನೂರು ವರುಷಗಳ ಹಿಂದೆ ಇದ್ದ ಸಮಾಜದ ಸಂಸ್ಕೃತಿ, ಧರ್ಮ-ಅಧರ್ಮದ ವಿಮರ್ಶೆ, ಸಾಮಾಜಿಕ ಸ್ಥಿತಿ-ಗತಿಗಳು, ಮತ್ತು ಜೀವನಶೈಲಿ ಇವುಗಳನ್ನು ವಾಸ್ತವಕ್ಕೆ ಹತ್ತಿರವಾಗಿ ಅಕ್ಷರಗಳಲ್ಲಿ ಈ ಕೃತಿಯ ಮೂಲಕ ಮೂಡಿಸಿದ್ದಾರೆ ಲೇಖಕ ವಸುಧೇಂದ್ರ. ಬಡತನ-ಹಸಿವು, ಧರ್ಮ ಮತ್ತು ರಾಜಭಕ್ತಿಗಳನ್ನು ಮೀರಿದ್ದು, ಹಾಗೆಯೇ ಮನುಷ್ಯ ತನ್ನ ಅಧಿಕಾರ ದಾಹಕ್ಕೆ ಧರ್ಮ ಮತ್ತು ಕ್ರೌರ್ಯಗಳನ್ನು ಹೇಗೆ ಬಳಸಿಕೊಳ್ಳುತ್ತಾನೆ ಎಂದು ಈ ಕಾದಂಬರಿಯ ಕೆಲವು ಪಾತ್ರಗಳು ಸ್ಪಷ್ಟ ಪಡಿಸುತ್ತವೆ.
ಇತಿಹಾಸಕ್ಕೆ, ಸಮಾಜಕ್ಕೆ ಮತ್ತು ಮನುಷ್ಯ ವರ್ಗಕ್ಕೆ ಕನ್ನಡಿ ಹಿಡಿಯುವ ಕೃತಿಯಾಗಿದೆ ಈ ಕಾದಂಬರಿ.
No comments:
Post a Comment