Wednesday, July 14, 2021

ಸರಳ, ಸಜ್ಜನರ ಊರು ಮೈಸೂರು

ಮೈಸೂರು ಪ್ರವಾಸಿ ತಾಣವಾಗಿ, ಸಾಂಸ್ಕೃತಿಕ ಕೇಂದ್ರವಾಗಿ ನಮಗೆಲ್ಲ ಗೊತ್ತು. ನೀವು ಅಲ್ಲಿಗೆ ಹಲವಾರು ಸಲ ಭೇಟಿ ನೀಡಿದರೆ ಮತ್ತು ಕೆಲವು ದಿನ ಉಳಿದುಕೊಂಡರೆ, ಆ ಊರಿನ ಮತ್ತು ಅಲ್ಲಿನ ಜನರ ಜೀವನ ಶೈಲಿ, ಅವರ ಆದ್ಯತೆಗಳು, ಹೆಚ್ಚಿನ ಜನರ ವಿಚಾರ ಧಾಟಿ ಇವುಗಳನ್ನು ಗುರುತಿಸಬಹುದು. ಬೇರೆ ಎಲ್ಲ ಊರುಗಳಲ್ಲಿ ಇರುವ ಹಾಗೆ, ಮೈಸೂರಲ್ಲಿ ಕೂಡ ಎಲ್ಲ ತರಹದ ಜನರು ಇರಬಹುದು. ಆದರೆ ನನ್ನ ಅನುಭವದಲ್ಲಿ ಸರಳ, ಸಜ್ಜನಿಕೆಯ ಜನರು ಬೇರೆ ಊರಿಗಿಂತ ಮೈಸೂರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅಲ್ಲಿ ನನಗಾದ ಮೂರು ಅನುಭವಗಳನ್ನು ಇಲ್ಲಿ ಕೊಡುತ್ತಿದ್ದೇನೆ.


೧.

ನಾವು ಸ್ನೇಹಿತರು ಒಂದು ದಿನ ಮೈಸೂರಿನಲ್ಲಿ ಸಾಯಂಕಾಲ ಕತ್ತಲಾಗುತ್ತಿರುವ ಸಮಯದಲ್ಲಿ ಕೈಯಲ್ಲಿ ವಿಳಾಸ ಹಿಡಿದುಕೊಂಡು ಆ ಮನೆಯ ಪತ್ತೆ ಹಚ್ಚುವುದಕ್ಕೆ ಪರದಾಡುತ್ತಿದ್ದೆವು. ಅಲ್ಲಿ ಒಬ್ಬರು ತಮ್ಮ ಮನೆಯ ಹೊರಗಡೆ ನಿಂತಿದ್ದರು. ಅವರ ಹತ್ತಿರ ವಿಚಾರಿಸಿದಾಗ, ಅವರು ಹತ್ತಿರದಲ್ಲೇ ಇರುವ ಆ ವಿಳಾಸಕ್ಕೆ ತಲುಪುವುದು ಹೇಗೆಂದು ಅತ್ಯಂತ ಸ್ಪಷ್ಟವಾಗಿ ಮಾರ್ಗದರ್ಶನ ನೀಡಿದರು. ಅಷ್ಟರಲ್ಲಿ ಆ ಮನೆಯಿಂದ ಹೊರ ಬಂದ ಅವರ ಪತ್ನಿ, ತಮ್ಮ ಪತಿಗೆ ನಮ್ಮ ಜೊತೆ ಹೋಗಿ ಆ ಮನೆಯವರಿಗೆ ಹೋಗಿ ನಮ್ಮನ್ನು ಬಿಟ್ಟು ಬನ್ನಿ ಎಂದು ಹೇಳಬೇಕೇ? ಆತ ತಲೆ ತಗ್ಗಿಸಿಕೊಂಡು, ಸರಿ ಹೋಗೋಣ ಬನ್ನಿ ಎಂದು ನಮ್ಮ ಜೊತೆಗೆ ಬರಲು ಸಿದ್ಧನಾದ. ನಮ್ಮ ಕಲ್ಯಾಣ ಕರ್ನಾಟಕದಲ್ಲಿ ಅಷ್ಟು ಒಳ್ಳೆಯ ಹೆಂಡತಿಯರು ಮತ್ತು ಅವರ ಮಾತು ಕೇಳುವ ಗಂಡಂದಿರು ಇರುವುದು ಮತ್ತು ಅವರು ಅಪರಿಚಿತರಿಗೆ ಸಹಾಯ ಮಾಡುವುದು ಸಾಧ್ಯವೇ?


೨.

ಇನ್ನೊಂದು ಪ್ರವಾಸದಲ್ಲಿ, ಅವತ್ತು ಶನಿವಾರ ಸಾಯಂಕಾಲವಾಗಿತ್ತು. ಮಾರ್ಕೆಟ್ ನಲ್ಲಿ, ಅಡ್ಡಾಡುತ್ತ ನನಗೆ ಕಾರು ಡೂಪ್ಲಿಕೇಟ್ ಕೀ ಮಾಡುವ ಅಂಗಡಿ ಕಾಣಿಸಿತು. ಸರಿ ನನಗೆ ಆ ಅವಶ್ಯಕತೆ ಇತ್ತಲ್ಲ. ಆ ಅಂಗಡಿಗೆ ಹೋದೆ. ಅವನು ಕೀ ಮಾಡುವುದಲ್ಲದೆ, ಅದನ್ನು ಕಾರಿನಲ್ಲಿಟ್ಟು ಒಂದು ಸಾಫ್ಟ್ ವೇರ್ ಕೋಡ್ ಕೂಡ  ನಕಲು ಮಾಡಬೇಕಿತ್ತು. ಅವನು ಎಷ್ಟು ಪ್ರಯತ್ನ ಪಟ್ಟರೂ ಅದು ಆಗಲೊಲ್ಲದು. ಪಕ್ಕದ ಎಲ್ಲ ಅಂಗಡಿಗಳು ಮುಚ್ಚಿ, ಇಡೀ ಮಾರುಕಟ್ಟೆಯೇ ಮುಚ್ಚಿ, ನಾವಷ್ಟೇ ಉಳಿದಾಯಿತು. ಆದರೂ ಕೆಲಸ ಪೂರ್ಣಗೊಳ್ಳಲಿಲ್ಲ. ಮರುದಿನ ರವಿವಾರ ಅವನ ಅಂಗಡಿ ಮತ್ತು ಮಾರುಕಟ್ಟೆಗೆ ರಜೆ. ಆದರೆ ನಾವು ಅಂದೇ ಮೈಸೂರಿನಿಂದ ಹೊರಟು ಬಿಡುವವರಿದ್ದೆವು. ಅವನು ನಾನು ಉಳಿದುಕೊಂಡ ಲಾಜ್ ವಿವರ ತಿಳಿದುಕೊಂಡು ಮರುದಿನ ಬೆಳಿಗ್ಗೆ ಬರುವುದಾಗಿ ತಿಳಿಸಿದ. ಮರುದಿನ ಬೆಳಿಗ್ಗೆ ನಾನು ಹಲ್ಲುಜ್ಜಿ, ಏನು ಟಿಫನ್ ತಿನ್ನುವುದು ಎಂದು ವಿಚಾರ ಮಾಡುವ ಹೊತ್ತಿಗೆ ಅವನು ಲಾಜ್ ಮುಂದೆ ಹಾಜರ್. ಪಾರ್ಕಿಂಗ್ ನಲ್ಲೆ ಕುಳಿತು, ತನ್ನ ಕೆಲಸ ಮುಗಿಸಿಕೊಟ್ಟು ನಮಗೆ ವಿದಾಯ ಹೇಳಿ ಹೋದ. ಅವನ ಕರ್ತವ್ಯ ಪ್ರಜ್ಞೆ ಮತ್ತು ನಮ್ಮ ಬಗ್ಗೆ ಅವನು ತೋರಿಸಿದ ಕಾಳಜಿ ಕಂಡು ನನಗೆ ಆಶ್ಚರ್ಯ. ಇದೆ ಕೆಲಸಕ್ಕೆ ನನಗೆ ಬೆಂಗಳೂರಿನಲ್ಲಿ ಎರಡು ಮೂರು ದಿನ ಓಡಾಡಿಸಿ, ಅದು ನಿಮ್ಮ ಹಣೆಬರಹ ಎಂದು ಹೇಳಿರುತ್ತಿದ್ದರು.


೩.

ಪ್ರವಾಸದ ಗುಂಗಿನಲ್ಲಿದ್ದ ನಮಗೆ ಮಧ್ಯಾಹ್ನದ ಹೊತ್ತು ಕಳೆದಿದ್ದೆ ಗೊತ್ತಾಗಿರಲಿಲ್ಲ. ಆಗಲೇ ಮೂರು ಗಂಟೆಯಾಗಿತ್ತು. ಮೈಸೂರಿನಿಂದ ಸುಮಾರು ಒಂದು ಗಂಟೆ ದೂರದಲ್ಲಿ ಇದ್ದ ನಮಗೆ ರಸ್ತೆಯಲ್ಲಿ ಸಿಕ್ಕ ಎಲ್ಲ ಹೋಟೆಲ್ ಗಳಲ್ಲಿ, ಊಟ-ತಿಂಡಿ ಎಲ್ಲ ಖಾಲಿ, ಮುಂದೆ ಹೋಗಿ ಎಂದು ಹೇಳಿ ಕಳಿಸಿದರು. ಮೈಸೂರು ಹೊರ ವಲಯಕ್ಕೆ ಬರುವ ಹೊತ್ತಿಗೆ ಮಧ್ಯಾಹ್ನ ನಾಲ್ಕು ಗಂಟೆ. ಎಲ್ಲರೂ ಹಸಿವಿನಿಂದ ಕಂಗಾಲು. ಮುಂದೆ ಹೋಗುವಷ್ಟು ಶಕ್ತಿ ನಮಗಾರಿಗೂ ಉಳಿದಿರಲಿಲ್ಲ. ಆದರೆ ಮೈಸೂರು ಹೊರ ವಲಯದ ಆ ಹೋಟೆಲ್ ನಲ್ಲೂ ಕೂಡ ಊಟ-ತಿಂಡಿ ಎಲ್ಲ ಖಾಲಿಯಾಗಿತ್ತು. ಆದರೆ ನಮ್ಮ ಸ್ಥಿತಿ ಗಮನಿಸಿದ ಹೋಟೆಲ್ ಮಾಲೀಕ, ಹದಿನೈದು ನಿಮಿಷ ಕಾದರೆ ಅನ್ನ-ಸಾಂಬಾರ್ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ಅವರ ಉದ್ದೇಶ ನಮ್ಮ ಹೊಟ್ಟೆ ತುಂಬಿಸುವುದಾಗಿತ್ತು. ನಮ್ಮವರೆಲ್ಲ ಒಂದೇ ಏಟಿಗೆ ಹೂಂ ಎಂದರು. ನಮ್ಮ ಊಟ ಮುಗಿದು ನಾವು ಹೊರಡುವ ಹೊತ್ತಿಗೆ, ನಮ್ಮದೇ ಪರಿಸ್ಥಿತಿ ಇದ್ದ ಇನ್ನೊಂದು ಕಾರು ಅಲ್ಲಿಗೆ ಬಂದು ಏನಾದರು ಊಟ ಕೊಡುವಂತೆ ಹೋಟೆಲ್ ಮಾಲೀಕರಿಗೆ ಕೇಳಿಕೊಳ್ಳುತ್ತಿದ್ದರು. ಅವರಿಗೂ ಕೂಡ ಆ ಮಾಲೀಕ ಸಮಾಧಾನವಾಗಿ ಉತ್ತರಿಸುತ್ತಿದ್ದರು. 


ಇದು ನನ್ನ ಅನುಭವಗಳು ಮತ್ತು ಅವುಗಳಿಂದ ಮೂಡಿದ ಅಭಿಪ್ರಾಯ. ಬೇರೆ ಊರಿನ ಪ್ರವಾಸಗಳಲ್ಲಿ ಸಾಕಷ್ಟು ಒರಟು ಎನಿಸುವ ಅನುಭವಗಳು ಆದ ಮೇಲೆ, ಮೈಸೂರಿನ ಜನರ ಸರಳ, ಸಜ್ಜನಿಕೆಗೆ ತಲೆ ಬಾಗುತ್ತೇನೆ. ಕುಟುಂಬದ ಜೊತೆ ಎರಡು ದಿನ ಬಿಡುವು ಬೇಕೆನಿಸಿದಾಗ, ಎರಡನೇ ವಿಚಾರ ಮಾಡದೇ ಮೈಸೂರಿಗೆ ಹೊರಟು ಬಿಡುತ್ತೇನೆ.

No comments:

Post a Comment