Wednesday, July 14, 2021

ಪರಿಸ್ಥಿತಿ vs. ನಾಯಕ

ಕಾಲಮಾನ, ಸನ್ನಿವೇಶಗಳು ನಾಯಕರನ್ನು ಸೃಷ್ಟಿಸುತ್ತವೆ ಎಂದು ಹೇಳಿದ್ದು ಲಿಯೋ ಟಾಲ್ಸ್ಟಾಯ್. ಅದಕ್ಕೆ ತದ್ವಿರುದ್ಧವಾಗಿ, ನಾಯಕರು ಸನ್ನಿವೇಶಗಳನ್ನು ಸೃಷ್ಟಿಸುತ್ತಾರೆ ಮತ್ತು ಕಾಲಮಾನವನ್ನು ಪ್ರಭಾವಗೊಳಿಸುತ್ತಾರೆ ಎಂದು ಹೇಳಿದ್ದು ಥಾಮಸ್ ಕಾರ್ಲೈಲ್. ಒಬ್ಬರದು ನಾಯಕರು ಇತಿಹಾಸದ ಕೈಗೊಂಬೆ ಎನ್ನುವ ಅಭಿಪ್ರಾಯ. ಇತಿಹಾಸ ಎನ್ನುವುದು ಮಹಾನ್ ನಾಯಕರ ಆತ್ಮ ಚರಿತ್ರೆ ಎನ್ನುವುದು ಇನ್ನೊಬ್ಬರ ಅಭಿಪ್ರಾಯ.


ಹಿಟ್ಲರ್, ಸ್ಟಾಲಿನ್, ಮಾವೋ ಮುಂತಾದವರು ತಮ್ಮ ಬಿಗಿ ಹಿಡಿತದಿಂದ ಚರಿತ್ರೆ ಸೃಷ್ಟಿಸಿದರೆ, ಇಂದಿಗೆ ಸಾಕಷ್ಟು ದೇಶಗಳಲ್ಲಿ ಒಬ್ಬ ವ್ಯಕ್ತಿಯಲ್ಲಿ ಸಂಪೂರ್ಣ ಅಧಿಕಾರ ಕೇಂದ್ರೀಕೃತವಾಗುವ ಬದಲು ಒಂದು ವ್ಯವಸ್ಥೆ, ಸಮೂಹ ಮತ್ತು ಸಂಸ್ಥೆಗಳು ಜವಾಬ್ದಾರಿಯ ನಿರ್ವಹಣೆ ಮಾಡುತ್ತವೆ.


ಕೆಲವು ನಾಯಕರು ಎಲ್ಲ ನಿರ್ಧಾರಗಳನ್ನು ತಾವು ತೆಗೆದುಕೊಳ್ಳದೆ, ಸಂಘ, ಸಂಸ್ಥೆಗಳನ್ನು ಹುಟ್ಟು ಹಾಕಿ ಅವುಗಳು ತೆಗೆದುಕೊಳ್ಳುವ ನಿರ್ಧಾರಕ್ಕೆ ಬೆಲೆ ಕೊಟ್ಟ ಉದಾಹರಣೆಗಳು ಇವೆ. ಹಾಗೆಯೆ, ಸಂಘ, ಸಂಸ್ಥೆಗಳಿಂದ ಬೆಳಕಿಗೆ ಬಂದ ಕೆಲವು ನಾಯಕರು ಅದನ್ನು ಮೀರಿ ಬೆಳೆದು, ಅಧಿಕಾರವನ್ನು ತಮ್ಮ ಕೈಗೆ ತೆಗೆದುಕೊಂಡ ಉದಾಹರಣೆಗಳು ಇವೆ.


ವ್ಯಕ್ತಿಗಿಂತ ಸಿದ್ಧಾಂತ ಮುಖ್ಯ ಎನ್ನುವವವರು ಇದ್ದಾರೆ. ವ್ಯಕ್ತಿಯೇ ಸಿದ್ಧಾಂತವಾದ ಉದಾಹರಣೆಗಳು ಕೂಡ ಇವೆ. ಒಳ್ಳೆಯ ನಾಯಕರಿಲ್ಲದ ದೇಶದ್ದು ದುರಾದೃಷ್ಟ ಎನ್ನುವ ವಾದ ಇದೆ. ನಾಯಕರ ಮೇಲೆ ಅವಲಂಬಿತವಾದ ದೇಶದ್ದೇ ದುರಾದೃಷ್ಟ ಎನ್ನುವ ವಾದವೂ ಕೂಡ ಇದೆ.


ಆದರೆ ಇಲ್ಲಿ ನಾವು ಗಮನಿಸಬೇಕಾದದ್ದು ನಾಯಕ ಮತ್ತು ಪರಿಸ್ಥಿತಿ ಇವರಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಎನ್ನುವುದು. ಪರಿಸ್ಥಿತಿ ಅನುಕೂಲಕರವಾಗಿದ್ದಾಗ ನಾಯಕರು ಹೇಳಿದ್ದೆಲ್ಲ ವೇದವಾಕ್ಯವಾದರೆ, ಸರ್ವಾಧಿಕಾರಿಗಳು ಪರಿಸ್ಥಿತಿ ತಮ್ಮ ಕೈ ಮೀರಿ ಹೋದ ಕೆಲವೇ ದಿನಗಳಿಗೆ ಅಂತ್ಯ ಕಂಡರು.


ಮಹಾತ್ಮಾ ಗಾಂಧಿ ೧೯೧೭ ರಲ್ಲೇ ತಮ್ಮ ಸತ್ಯಾಗ್ರಹವನ್ನು ಆರಂಭಿಸಿದಾಗ, ಅವರ ಹಿಂದೆ ೩೦ ಜನ ಹಿಂಬಾಲಕರೂ ಇರಲಿಲ್ಲ. ಆದರೆ ೧೯೪೨ ರಲ್ಲಿ ಕ್ವಿಟ್ ಇಂಡಿಯಾ ಆಗ್ರಹ ಶುರುವಾಗುವ ಹೊತ್ತಿಗೆ ಅವರಿಗೆ ೩೦ ಕೋಟಿ ಹಿಂಬಾಲಕರಿದ್ದರು. ಆ ೨೫ ವರುಷಗಳ ಅಂತರದಲ್ಲಿ, ಗಾಂಧೀಜಿ ನಂಬಿದ್ದು, ಹೇಳಿದ್ದು ಯಾವುದು ಬದಲಾಗಿರಲಿಲ್ಲ ಆದರೆ ಬದಲಾಗಿದ್ದು ಪರಿಸ್ಥಿತಿ ಮಾತ್ರ ಮತ್ತು ಅದು ಒಬ್ಬ ನಾಯಕನ ಬೆಳವಣಿಗೆಗೆ ದಾರಿ ಮಾಡಿ ಕೊಟ್ಟಿತು. 


ಬಲಿಷ್ಠ ಸೇನೆ ಕಟ್ಟಿ, ದಶಕಗಳ ಕಾಲ ಸಾಲು ಸಾಲು ಯುದ್ಧ ಗೆದ್ದ ಮಹತ್ವಾಕಾಂಕ್ಷಿ ನೆಪೋಲಿಯನ್, ಪರಿಸ್ಥಿತಿಯನ್ನು ತನ್ನ ಆಳಾಗಿ ಇಟ್ಟುಕೊಂಡಿದ್ದ. ಆದರೆ ಒಂದು ಪ್ರತಿಕೂಲ ಪರಿಸ್ಥಿತಿಯಲ್ಲಿ ಒಂದು ಯುದ್ಧ ಸೋತು, ಕೊನೆಯವರೆಗೂ ಬಂದಿಯಾಳಾಗಿ ಜೀವಿಸಬೇಕಾಯಿತು. ಬದಲಾಗಿದ್ದು ನೆಪೋಲಿಯನ್ ನ ಯುದ್ಧ ಕೌಶಲ್ಯತೆ ಅಲ್ಲ. ಪ್ರತಿಕೂಲ ಪರಿಸ್ಥಿತಿ ಮಾತ್ರ. ಅದು ಒಬ್ಬ ನಾಯಕನನ್ನು ಆಹುತಿ ತೆಗೆದುಕೊಂಡಿತು.


ಪರಿಸ್ಥಿತಿ ಮತ್ತು ನಾಯಕ ಇಬ್ಬರೂ ಶಾಶ್ವತವಲ್ಲ. ಇಬ್ಬರು ಒಬ್ಬರ ಮೇಲೆ ಇನ್ನೊಬ್ಬರು ಅವಲಂಬಿತರು. ನಾಯಕನ ಅಂತ್ಯ ಪರಿಸ್ಥಿತಿಯನ್ನು ಬದಲಾಯಿಸಬಹುದು. ಪರಿಸ್ಥಿತಿಯ ಬದಲಾವಣೆ ಹೊಸ ನಾಯಕನನ್ನು ಹುಟ್ಟು ಹಾಕಬಹುದು. ಹೊಂದಾಣಿಕೆ ಇರುವಷ್ಟು ಹೊತ್ತು ಅವರಿಬ್ಬರದು ಭಲೇ ಜೋಡಿ. ಹೊಂದಾಣಿಕೆ ಮುರಿದು ಬಿದ್ದಾಗ ಮುಗಿಯುವುದು ಮೋಡಿ.

No comments:

Post a Comment