Thursday, July 29, 2021

ಆಸೆಯ ಮೂಲ?

ಆಸೆಯೇ ದುಃಖಕ್ಕೆ ಮೂಲ ಎಂದ ಬುದ್ಧ. ಸರಿ, ಆದರೆ ಆಸೆಯ ಮೂಲ ಯಾವುದು? ಆಸೆಗಳಿಗೆ ಕೊನೆಯಿಲ್ಲದಂತೆ ಆಗಿದ್ದು ಹೇಗೆ? ಅದರ ಬಗ್ಗೆ ಬುದ್ಧ ಏನು ಹೇಳಿದ್ದಾನೋ ಗೊತ್ತಿಲ್ಲ. ಆದರೆ ಪ್ರಕೃತಿ ವಿಕಾಸ (Evolution) ಇದರ ಬಗ್ಗೆ ಸಾಕಷ್ಟು ಬೆಳಕು ಚೆಲ್ಲುತ್ತದೆ.


ಪ್ರಕೃತಿ ಸಹಸ್ರಾರು ಜೀವಿಗಳನ್ನು ಸೃಷ್ಟಿಸಿ, ಅವುಗಳು ನಿರಂತರ ವಿಕಾಸ ಹೊಂದುವ ಪ್ರಕ್ರಿಯೆಯನ್ನು ಸದಾ ಜಾರಿಯಲ್ಲಿ ಇಟ್ಟಿರುತ್ತದೆ. ಪರಿಸರಕ್ಕೆ ತಕ್ಕಂತೆ ಬದಲಾವಣೆ ಹೊಂದಬಲ್ಲ ಜೀವಿಗಳು ಮಾತ್ರ ಉಳಿದುಕೊಂಡು ತಮ್ಮ ವಂಶವನ್ನು ಮುಂದುವರೆಸಿಕೊಂಡು ಹೋಗುತ್ತವೆ. ಉಳಿದವುಗಳನ್ನು ನಿರ್ದಾಕ್ಷಿಣ್ಯವಾಗಿ ಪ್ರಕೃತಿ ಹೊಸಕಿ ಹಾಕುತ್ತದೆ. ಈ ವಿಕಾಸ ಹೊಂದುವ ಪ್ರಕ್ರಿಯೆ ಮುಂದುವರೆದುಕೊಂಡು ಹೋಗಲು, ಪ್ರಕೃತಿ ಎಲ್ಲ ಜೀವಿಗಳಲ್ಲಿ, ತಾನು ಸ್ವಾರ್ಥಿಯಾಗುವಂತೆ, ಎಂತಹ ಪರಿಸ್ಥಿತಿಯಲ್ಲೂ ಮೊದಲು ತನಗೆ ಆಹಾರ ಹುಡುಕಿಕೊಳ್ಳುವಂತೆ, ತನ್ನ ಪ್ರಾಣ ಕಾಪಾಡಿಕೊಳ್ಳುವಂತೆ, ತನ್ನ ವಂಶ ಮುಂದುವರೆಯುವಂತೆ ಮಾಡುವ ಸ್ವಭಾವಗಳನ್ನು ಹುಟ್ಟಿನಿಂದಲೇ ಬರುವ ಏರ್ಪಾಡು ಮಾಡುತ್ತದೆ. ಆಸೆ ಮತ್ತು ನೋವು ಈ ಸ್ವಭಾವಗಳ ಎರಡು ಮುಖಗಳು. ನೋವೇ ಆಗದಿದ್ದರೆ ಮನುಷ್ಯ ತನ್ನ ದೇಹಕ್ಕೆ ಕಾಳಜಿ ಮಾಡುತ್ತಿದ್ದನೇ? ಅದಕ್ಕೆ ನೋಡಿ, ಯಾವುದೇ ಗಾಯ ಉಲ್ಬಣವಾಗುವುದಕ್ಕೆ ಮುನ್ನವೇ ನೋವು ಉಂಟು ಮಾಡಿ ದೇಹದ ಕಡೆಗೆ ಗಮನ ಹರಿಸುವಂತೆ ಮಾಡುವ ವ್ಯವಸ್ಥೆ ಪ್ರಕೃತಿ ಮನುಷ್ಯನನ್ನು ಸೇರಿದಂತೆ ಎಲ್ಲ ಪ್ರಾಣಿ, ಪಕ್ಷಿಗಳಲ್ಲಿ ಮಾಡಿದೆ. ಹಾಗೆಯೇ, ವಿಕಾಸ ಹೊಂದುವುದಕ್ಕೆ ಆಸೆಯನ್ನು ಎಲ್ಲ ಜೀವಿಗಳಲ್ಲಿ ಹುಟ್ಟು ಗುಣವನ್ನಾಗಿಸಿದೆ. ಆದರೆ ಮನುಷ್ಯರಲ್ಲಿ ಮಾತ್ರ ಆಸೆಗಳಿಗೆ ಮಿತಿಯೇ ಇಲ್ಲ ಎನ್ನುವಂತೆ ಆಗಿರುವುದು ಪ್ರಕೃತಿ ನಮಗೆ ಹೆಚ್ಚಿಗೆ ಕೊಟ್ಟ ಬುದ್ದಿವಂತಿಕೆಯಿಂದ. ಆಸೆಗಳು ಹೆಚ್ಚಾದಷ್ಟು ದುಃಖವು ಹೆಚ್ಚಾಗುತ್ತದೆ ಎನ್ನುವುದು ಮಾತ್ರ ಬುದ್ಧ ನಮಗೆ ತಿಳಿಸಿಕೊಟ್ಟ.


ಆಸೆಗಳನ್ನೇ ಬೇಡ ಎಂದು ತಿರಸ್ಕಿರಿಸದರೆ ಏನಾಗುತ್ತದೆ? ಅದು ಪ್ರಕೃತಿಯ ವಿರುದ್ಧದ ಈಜಾಗುತ್ತದೆ. ನಾವು ಆಸೆಗಳನ್ನು ಅದುಮಿಕೊಂಡರೂ, ಪ್ರಕೃತಿ ನಮ್ಮನ್ನು ಮತ್ತೆ ವಿಕಾಸದ ಕಡೆಗೆ ಸೆಳೆಯುವ ಪ್ರಯತ್ನ ಮಾಡುತ್ತಲೇ ಇರುತ್ತದೆ. ಅದಕ್ಕೆ ಬುದ್ಧ, ಮಹಾವೀರ, ಸ್ವಾಮಿ ವಿವೇಕಾನಂದ ತರಹದ ಕೆಲವೇ ಜನರಿಗೆ ಮಾತ್ರ ಆಧ್ಯಾತ್ಮ ಒಲಿಸಿಕೊಳ್ಳಲು ಸಾಧ್ಯವಾಯಿತು. ಕೊನೆಯಿಲ್ಲದ, ನಿರಂತರ ವಿಕಾಸದ ವಿರುದ್ಧ ದಿಕ್ಕಿನೆಡೆ ಅವರು ಸಾಗಿ ಪ್ರಕೃತಿಯ ಬಿಗಿ ಮುಷ್ಟಿಯಿಂದ ಪಾರಾದರು. ಪ್ರಕೃತಿಗೆ ಸಾಧು-ಸಂತರಿಂದ ಏನೂ ಉಪಯೋಗವಿಲ್ಲ. ಅದಕ್ಕೆ ಅದು ಆಸೆಗಳಿಗೆ ಶರಣಾಗುವ ನಮ್ಮ ನಿಮ್ಮಂಥವರನ್ನೇ ಅವಲಂಬಿಸಿದೆ. ಒಬ್ಬೊಬ್ಬರಿಗೆ ಒಂದೊಂದು ತರಹದ ಹುಚ್ಚು ಹತ್ತಿಸಿ ತನ್ನ ಕಾರ್ಯ ಸಾಧಿಸಿಕೊಳ್ಳುತ್ತದೆ. ಆಸೆಗಳನ್ನು ಮೆಟ್ಟಿ ನಿಂತವರನ್ನು ತನ್ನಲ್ಲಿ ಲೀನವಾಗಿಸಿಕೊಂಡು ಪುನರ್ಜನ್ಮವಿಲ್ಲದಂತೆ ಮಾಡಿಬಿಡುತ್ತದೆ. (ಇದು ನನ್ನ ಅಭಿಪ್ರಾಯ ಅಷ್ಟೇ, ಯಾವ ಅನುಭವವು ನನಗಿಲ್ಲ).


ಪ್ರಕೃತಿಗೆ ವಿಕಾಸ ಮುಖ್ಯ. ನಿರ್ದಿಷ್ಟ ಮನುಷ್ಯನಲ್ಲ. ಆಸೆಯೇ ಇರದಿದ್ದರೆ, ಬದಲಾವಣೆ ಮತ್ತು ಪ್ರಗತಿ ಹೇಗೆ ಸಾಧ್ಯ? ಪ್ರಕೃತಿ ವಿಕಾಸ ನಿರಂತರವಾಗಿ ಸಾಗಲು ಆಸೆಗಳ ನೆರವು ಪ್ರಕೃತಿಗೆ ಅತ್ಯವಶಕ. ಅದಕ್ಕೆ ಅದು ಬದಲಾವಣೆ ಬಯಸದವರನ್ನು ಹಿಂದಕ್ಕೆ ಬಿಟ್ಟು, ಆಸೆಯ ತೆವಲಿಗೆ ಬಿದ್ದವರನ್ನು ತನ್ನ ದಾಳವನ್ನಾಗಿಸಿಕೊಳ್ಳುತ್ತದೆ. ಸತ್ಯ ಕಂಡುಕೊಂಡ ಕೆಲವೇ ಕೆಲವರು ಈ ಆಟದಿಂದ ದೂರ ಸರಿದರೆ, ಉಳಿದವರೆಲ್ಲ ಆಸೆಗಳ ಬೆಂಬತ್ತಿ ಜೀವನ ಸವೆಸುತ್ತಾರೆ. ಅದಕ್ಕೆ ಬುದ್ಧ 'ಆಸೆಯೇ ದುಃಖಕ್ಕೆ ಮೂಲ' ಎಂದು ಎರಡು ಸಾವಿರ ವರುಷಗಳ ಹಿಂದೆಯೇ ಸಾರಿ ಹೇಳಿದರೂ, ಮನುಜ ಕುಲ ಕಿಂಚಿತ್ತಾದರೂ ಬದಲಾಗದೇ, ಇನ್ನು ಹೆಚ್ಚಿನ ಆಸೆಬುರುಕರಾಗಿರುವುದು.

No comments:

Post a Comment