Sunday, August 1, 2021

ರಕ್ತಪಿಶಾಚಿಯೊಡನೆ ಒಂದು ಮಧ್ಯಾಹ್ನ

ಮಧ್ಯಾಹ್ನ ಊಟವಾದ ನಂತರ ಮಂಚದ ಮೇಲೆ ಒರಗಿಕೊಂಡು, ಸ್ವಲ್ಪ ಹೊತ್ತು ಏನಾದರು ಓದುತ್ತ ವಿಶ್ರಾಂತಿ ತೆಗೆದುಕೊಳ್ಳುವುದು, ಹಾಗೆಯೆ ಕೆಲವೊಂದು ಸಲ ನಿದ್ದೆ ಮಾಡಿಬಿಡುವುದು ನನ್ನ ಸಾಮಾನ್ಯ ದಿನಚರಿ. ಅಂದು ಕೂಡ ಕುವೆಂಪು ರಚಿಸಿದ ಸಣ್ಣ ಕಥೆಗಳನ್ನು ಓದುತ್ತ, ಮನಸ್ಸು ನಿಧಾನವಾಗುತ್ತ, ನಿದ್ರೆಗೆ ಜಾರುವುದರಲ್ಲಿದ್ದೆ. ಆಗ ಕೇಳಿಸಿದ್ದು ಕಿವಿಯ ಪಕ್ಕದಲ್ಲಿ ಗುಂಯ್ ಗುಡುವ ಸದ್ದು. ಸುಮ್ಮನೆ ಕೈ ಆಡಿಸಿದೆ. ಆಗ ಸದ್ದು ಇನ್ನೊಂದು ಕಿವಿಯ ಹತ್ತಿರ ಕೇಳಿಸತೊಡಗಿತು. ಪಕ್ಕದಲ್ಲಿದ್ದ ಪುಸ್ತಕವನ್ನು ಹಿಡಿದು ತಲೆಯ ಎರಡು ಬದಿಗೂ ಆಡಿಸಿದೆ. ನನ್ನ ಕೈ ಚಲನೆಯ ವೇಗವನ್ನು ಮೀರಿ ಆ ಸದ್ದು ನನ್ನ ಸುತ್ತತೊಡಗಿತು. ಅದು ಒಂದು ಯಕಶ್ಚಿತ್ ಸೊಳ್ಳೆ ಎಂದರೆ ನಾವು ಅದನ್ನು ಅಪಮಾನಿಸಿದಂತೆ ಅನಿಸತೊಡಗಿತು. ಸುಮ್ಮನೆ ರಕ್ತ ಹೀರಿ ಹೋಗಿದ್ದರೆ ನನ್ನದೇನು ಅಭ್ಯಂತರ ಇರಲಿಲ್ಲ. ಜಿಗಣೆಯ ಹಾಗೆ ನೋವಾಗದಂತೆ ರಕ್ತ ಹೀರುವುದು ಈ ಸೊಳ್ಳೆಗಳಿಗೆ ಗೊತ್ತಿಲ್ಲ. ಸೂಜಿಯ ಮೊನೆಯ ಹಾಗೆ ಚುಚ್ಚಿ, ತಾವು ರಕ್ತ ಹೀರುವುದನ್ನು ಜಗಜ್ಜಾಹೀರು ಮಾಡುತ್ತವೆ. ಅಲ್ಲದೆ ಕೆರಳಿಸುವ ಹಾಗೆ ಕಿವಿಯ ಹತ್ತಿರವೇ ಬಂದು ಗುಂಯ್ ಗುಡುತ್ತವೆ. ನಿದ್ದೆಗೆಡಿಸಿ, ರಕ್ತ ಹೀರಿ, ಬಿಟ್ಟು ಬಿಡದಂತೆ ತೊಂದರೆ ಕೊಡುವ ಈ ಜೀವಿಗಳಿಗೆ ಸೊಳ್ಳೆ ಎನ್ನದೆ ರಕ್ತ ಪಿಶಾಚಿ ಎನ್ನುವುದೇ ಸೂಕ್ತ ಅನಿಸತೊಡಗಿತು. ಅದರ ಮೇಲೆ ದ್ವೇಷ ಹುಟ್ಟಿ, ಇದನ್ನು ಬೇಟೆಯಾಡದೆ ಬಿಟ್ಟರೆ ನನಗೆ ಉಳಿಗಾಲವಿಲ್ಲ ಎನಿಸತೊಡಗಿತು.

 

ಕಿಟಕಿಯ ಪರದೆಯನ್ನು ಪೂರ್ತಿ ತೆಗೆದು, ಕೋಣೆಯ ತುಂಬಾ ಬೆಳಕಾಗುವಂತೆ ಮಾಡಿಕೊಂಡೆ. ಗೋಡೆಯ ಮೇಲೆ ಕುಳಿತ ಸೊಳ್ಳೆ ಸ್ಪಷ್ಟವಾಗಿ ಕಂಡಿತು. ಆ ದಿನದ ನ್ಯೂಸ್ ಪೇಪರ್ ನ್ನು ಕೈಯಲ್ಲಿ ಮಡಿಚಿ ಹಿಡಿದು ಮೆತ್ತಗೆ ಹೆಜ್ಜೆ ಹಾಕುತ್ತ ಸೊಳ್ಳೆಯ ಹತ್ತಿರಕ್ಕೆ ಹೋಗಿ ರಪ್ಪೆಂದು ಬಾರಿಸಿದೆ. ಆದರೆ ಕೊನೆ ಕ್ಷಣದಲ್ಲಿ ನನ್ನ ನೆರಳು ಅದರ ಮೇಲೆ ಬಿದ್ದು ಅದು ಪಕ್ಕಕ್ಕೆ ಹಾರಿತು. ತಕ್ಷಣವೇ ಅದು ಹಾರಿದ ದಿಕ್ಕಿನಲ್ಲಿ ಗಾಳಿಯಲ್ಲಿ ಕೈ ಬೀಸಿದೆ. ಕೈಯಲ್ಲಿ ಹಿಡಿದ ಪೇಪರ್ ಅದರ ಮೈಗೆ ತಾಗಿದರೂ, ಅದು ತನಗೆ ಏನು ಆಗಿಲ್ಲ ಎನ್ನುವಂತೆ ಮತ್ತೆ ದಿಕ್ಕು ಬದಲಾಯಿಸಿ ಮರೆಯಾಯಿತು.

 

ಅದು ನನ್ನನ್ನು ಮತ್ತೆ ಹುಡುಕಿ ಬಂದೇ ಬರುತ್ತದೆ ಎನ್ನುವ ನಂಬಿಕೆಯಿಂದ ನಾನು ಕೋಣೆಯ ಮಧ್ಯದಲ್ಲಿ ಕುಳಿತು ಅದಕ್ಕಾಗಿ ಕಾಯತೊಡಗಿದೆ. ಕೆಲವೇ ಕ್ಷಣಗಳಿಗೆ, ನನ್ನ ನಂಬಿಕೆ ಸುಳ್ಳಾಗದಂತೆ ಹತ್ತಿರವೇ ಗುಂಯ್ ಗುಡುವ ಸದ್ದು ಕೇಳಿಸತೊಡಗಿತು. ಮೈಯೆಲ್ಲಾ ಕಿವಿಯಾಗಿಸಿಕೊಂಡು ಯಾವ ಕಡೆಯಿಂದ ಸದ್ದು ಕೇಳುತ್ತಿದೆ ಎಂದು ಗಮನಿಸತೊಡಗಿದೆ. ಮಹಾಭಾರತದ ಅರ್ಜುನ ಶಬ್ದವೇಧಿ ವಿದ್ಯೆಯನ್ನು ಇಂತಹ ಸಂದರ್ಭಗಳಲ್ಲಿ ಕಲಿತಿದ್ದೆನೋ ಎನಿಸಿತು. ಸದ್ದು ಕ್ಷೀಣವಾಗುತ್ತ ಅದು ನನ್ನ ಕಾಲ ಮೇಲೆ ಕುಳಿತುಕೊಳ್ಳುವುದು ಕಾಣಿಸಿತು. ಅದು ನನ್ನ ಕಾಲೇ ಆದರೂ, ಸಿಟ್ಟಿನಿಂದ ಕೈಯಲ್ಲಿ ಹಿಡಿದ ಪೇಪರ್ ನಿಂದ ರಪ್ಪೆಂದು ಬಾರಿಸಿದೆ. ಮತ್ತೆ ತಪ್ಪಿಸಿಕೊಂಡ ಆ ಸೊಳ್ಳೆ ಹತ್ತಿರದ ಗೋಡೆಯ ಮೇಲೆ ಕುಳಿತುಕೊಂಡಿತು. ಶತ್ರುವಿನ ಪ್ರಾಣ ತೆಗೆಯಲು ನಿಂತ ಯೋಧನ ಹಾಗೆ ನಾನು ಅದರ ಬೆನ್ನು ಬಿಡದೆ ರಪ್ಪೆಂದು ಬಾರಿಸಿದೆ. ಅದು ಮತ್ತೆ ಪಾರಾಗುವ ಮುನ್ನವೇ ಇನ್ನೊಂದು ಸಲ ಬಾರಿಸಿ ಆಯಿತು. ಅಲ್ಲಿಯವರೆಗೆ ಫೈಟರ್ ಜೆಟ್ ವಿಮಾನಗಳ ಹಾಗೆ ಹಾರುತ್ತ ತಪ್ಪಿಸಿಕೊಳ್ಳುತ್ತಿದ್ದ ಆ ಸೊಳ್ಳೆ, ನನ್ನ ಚೌಕಾಕಾರದ ಪೇಪರ್ ಆಯುಧಕ್ಕೆ ಕೊನೆಗೂ ಆಹುತಿ ಆಯಿತು.

 

ದೊಡ್ಡ ಗಾತ್ರದ ಆ ಸೊಳ್ಳೆಯನ್ನು ಪೇಪರ್ ನಲ್ಲಿ ತುಂಬಿ, ಕಿಟಕಿ ತೆಗೆದು ಹೊರ ಹಾಕಿದೆ. ಮನೆಯ ಕಾಂಪೌಂಡ್ ಗೋಡೆಗೆ ಕುಳಿತಿದ್ದ ಕಟ್ಟಡ ಕಾರ್ಮಿಕ ಹಚ್ಚಿದ ರೇಡಿಯೋನಲ್ಲಿ ಅಣ್ಣಾವ್ರು ಸಣ್ಣಗೆ ಹಾಡುತ್ತಿದ್ದರು "ಕೋಟೆ ಕಟ್ಟಿ ಮೆರೆದೋರೆಲ್ಲ ಏನಾದರು? ಮೀಸೆ ತಿರುವಿ ಕುಣಿದೊರೆಲ್ಲ ಮಣ್ಣಾದರು".  ಹೌದಲ್ಲವೇ ಅನಿಸಿತು. ಮೆರೆದವರನ್ನು ಸಾವು ಹುಡುಕಿಕೊಂಡು ಬರುತ್ತೋ ಅಥವಾ ಅದು ತಾನು ಬರುವ ಮುಂಚೆ ಮೆರೆಯುವ ಹುಚ್ಚುತನವನ್ನು ಕಳಿಸುತ್ತೋ? ಯಾವುದರ ಕಾರಣ ಯಾವುದು ಎಂದು ಒಮ್ಮೆಗೆ ನಿರ್ಧರಿಸಲು ಆಗಲಿಲ್ಲ.

 

ಸೊಳ್ಳೆ ಸಾಯುವ ಮುಂಚೆ ಅದನ್ನು ಕ್ಷಮಿಸಲು ಸಾಧ್ಯವೇ ಇಲ್ಲ ಎನ್ನುವ ಮನಸ್ಥಿತಿಯಲ್ಲಿ ಇದ್ದ ನನಗೆ, ಅದು ಸತ್ತ ಮೇಲೆ 'ಪಾಪ, ಅದರ ಕರ್ಮ' ಎನಿಸತೊಡಗಿತು.

No comments:

Post a Comment