Wednesday, August 4, 2021

ವಿಜಯಗಳ ಸರಮಾಲೆ ಹಾಕಿಕೊಂಡವರನ್ನು ಮುಗಿಸಲು ಒಂದು ಸಣ್ಣ ಸೋಲು ಸಾಕು

ಇತ್ತೀಚಿಗೆ ಓದಿದ 'ತೇಜೋ-ತುಂಗಭದ್ರಾ' ಕಾದಂಬರಿಯಲ್ಲಿ ವಿಜಯನಗರದ ಅರಸು ಶ್ರೀಕೃಷ್ಣದೇವರಾಯನ ವ್ಯಕ್ತಿತ್ವದ ಕಿರು ಚಿತ್ರಣ ಇದೆ. ಸಾಮ್ರಾಜ್ಯ ವಿಸ್ತರಿಸಿ, ಭವ್ಯ ಪರಂಪರೆ ಕಟ್ಟಿದ ಅರಸನಿಗೆ ಗಂಡು ಸಂತಾನವಿಲ್ಲದ ಹಪಾಹಪಿ. ಅದಕ್ಕೆ ಆತ ದೇವರಲ್ಲಿ ಹರಕೆ ಹೊರುವ ಪ್ರಸಂಗ ಇದೆ. ಆತನ ಇತರ ವಿಷಯಗಳ ಬಗ್ಗೆ ಆ ಕಾದಂಬರಿಯಲ್ಲಿ ಉಲ್ಲೇಖ ಇಲ್ಲವಾದರೂ ಬೇರೆ ಸಾಕಷ್ಟು ಪುಸ್ತಕಗಳನ್ನು ಓದಿ ತಿಳಿದುಕೊಳ್ಳಬಹುದು. ಹೆಚ್ಚು ಕಡಿಮೆ ಆತನ ವಯಸ್ಸಿನವರಾದ ಅಳಿಯಂದರಿಗೆ ಅಥವಾ ಅಧಿಕಾರಕ್ಕೆ ತುದಿಗಾಲಲ್ಲಿ ನಿಂತ ತಮ್ಮಂದಿರಿಗೆ ರಾಜ್ಯಭಾರ ಬಿಟ್ಟು ಕೊಡಲು ಆತನಿಗೆ ಸುತರಾಂ ಇಷ್ಟವಿಲ್ಲದ್ದು ಆತನ ನಡುವಳಿಕೆಯಿಂದ ತಿಳಿದು ಬರುತ್ತದೆ. ಮುಂದೆ ಆತನಿಗೆ ಗಂಡು ಸಂತಾನವಾದಾಗ, ಸಣ್ಣ ವಯಸ್ಸಿನಲ್ಲೇ ಆತನಿಗೆ ಪಟ್ಟ ಕಟ್ಟುತ್ತಾನೆ. ಆದರೆ ಆಂತರಿಕ ಶತ್ರುಗಳು ಆತನ ಮಗನನ್ನು ವಿಷವಿಕ್ಕಿ ಕೊಲ್ಲುತ್ತಾರೆ. ಅದಾಗಿ ಕೆಲವೇ ದಿನಗಳಿಗೆ ಶ್ರೀಕೃಷ್ಣದೇವರಾಯನ ಅಂತ್ಯವೂ ಆಗುತ್ತದೆ. ರಣರಂಗದಲ್ಲಿ ಶತ್ರುಗಳನ್ನು ಬೆನ್ನಟ್ಟಿ ಹೋಗಿ ಸದೆ ಬಡಿದು, ತಾನು ಮಾಡಿದ ಯಾವುದೇ ಯುದ್ಧಗಳಲ್ಲಿ ಸೋಲು ಕಾಣದ ಶ್ರೀಕೃಷ್ಣದೇವರಾಯ, ತನ್ನ ಮನೆಯಲ್ಲಿ ತನ್ನ ಮಗನನ್ನು ಉಳಿಸಿಕೊಳ್ಳುವಲ್ಲಿ ಸೋತು ಹೋಗುತ್ತಾನೆ. ಅದು ಹುಟ್ಟಿಸಿದ ಕೊರಗು ಆತನ ಜೀವ ತೆಗೆದಿರಲಿಕ್ಕೂ ಸಾಕು ಎನ್ನುವುದು ಮಾತ್ರ ನನ್ನ ಅಭಿಪ್ರಾಯ.

 

ದಕ್ಷಿಣ ಭಾರತದಲ್ಲಿ ವಿಜಯನಗರ ಸಾಮ್ರಾಜ್ಯ ಪತನವಾಗುವ ಹೊತ್ತಿಗೆ, ಉತ್ತರ ಭಾರತದಲ್ಲಿ ಮೊಗಲ್  ದೊರೆ ಅಕ್ಬರ, ಫತೇಪುರ್ ಸಿಕ್ರಿ (ಕನ್ನಡದಲ್ಲಿ ರೂಪಾಂತರಿಸಿದರೆ ಅದು ಕೂಡ ವಿಜಯನಗರವೇ) ಕಟ್ಟುತ್ತಿರುತ್ತಾನೆ. ಆತನಿಗೆ ತನ್ನ ಮಕ್ಕಳ ಮೇಲೆ ವಿಶ್ವಾಸವಿರುವುದಿಲ್ಲ. ಆದರೆ ಆತನ ಮೊಮ್ಮಗ ಒಬ್ಬನಿಗೆ, ಆಸ್ಥಾನ ಜ್ಯೋತಿಷ್ಯಕಾರರು ಉಜ್ವಲ ಭವಿಷ್ಯ ಇರುವುದಾಗಿ ತಿಳಿಸಿರುತ್ತಾರೆ. ಆತನೇ ಷಾಜಹಾನ್. ಆತನನ್ನು ತನ್ನ ತೊಡೆಯ ಮೇಲೆ ಕೂಡಿಸಿಕೊಂಡೆ ಬೆಳೆಸುತ್ತಾನೆ ಅಕ್ಬರ್. ಅಕ್ಬರನ ಮರಣಾ ನಂತರ, ಷಾಜಹಾನ್ ತನ್ನ ತಂದೆಯಿಂದ ದೂರಾಗಿ, ಕೆಲವು ಸಲ ತಲೆ ಮರೆಸಿಕೊಂಡು ಬದುಕಬೇಕಾದರೂ, ದೆಹಲಿಯ ಗದ್ದುಗೆ ಏರಿದ ನಂತರ, ಸಾಲು ಸಾಲು ಯುದ್ಧಗಳನ್ನು ಗೆದ್ದು, ತನ್ನ ಸಾಮ್ರಾಜ್ಯ ವಿಸ್ತರಿಸುತ್ತ, ಭಾರತ ಹಿಂದೆಂದೂ ಕಂಡರಿಯದ ಶ್ರೀಮಂತಿಕೆಯ ರಾಜ್ಯವನ್ನು ಕಟ್ಟುತ್ತಾನೆ. ಹಣ, ಕೀರ್ತಿ ಎಲ್ಲ ದಿಕ್ಕುಗಳಿಂದ ಹರಿದು ಬರುತ್ತದೆ. ಜಗತ್ತಿನ ಅದ್ಭುತಗಳಲ್ಲಿ ಒಂದಾದ ತಾಜ್ ಮಹಲ್ ಅನ್ನು ತನ್ನ ಹೆಂಡತಿಯ ನೆನಪಿಗಾಗಿ ಕಟ್ಟುತಾನೆ ಷಾಜಹಾನ್. ಮೇಧಾವಿ ಮಗನಾದ ದಾರಾ ಶಿಕೋ ನಿಗೆ ಯುವರಾಜ ಪಟ್ಟ ಕಟ್ಟುತ್ತಾನೆ. ಆದರೆ ವಿಧಿಯ ಬರಹ ಬೇರೆಯೇ ಇತ್ತಲ್ಲ. ಆತನ ಇನ್ನೊಬ್ಬ ಮಗ ಔರಂಗಜೇಬ್, ತನ್ನ ತಂದೆ ಷಾಜಹಾನ್ ನನ್ನು ಗೃಹಬಂಧಿಯನ್ನಾಗಿಸಿ, ತನ್ನ ಅಣ್ಣ ದಾರಾ ಶಿಕೋ ನನ್ನು ಮತ್ತು ಆತನ ಮಗನನ್ನು ಆನೆಯಿಂದ ತುಳಿಸಿ ಸಾಯಿಸುತ್ತಾನೆ. ತನ್ನದೇ ಸಾಮ್ರಾಜ್ಯದಲ್ಲಿ, ತಾನೇ ಕಟ್ಟಿದ ಅರಮನೆಯಲ್ಲಿ ಬಂದಿಯಾಗಿ, ತನ್ನ ಇನ್ನೊಂದು ನಿರ್ಮಾಣವಾದ ತಾಜ್ ಮಹಲ್ ನ್ನು ಕಿಟಕಿಯ ಮೂಲಕ ನೋಡುತ್ತಾ ತನ್ನ ಕೊನೆಯ ದಿನಗಳನ್ನು ಕಳೆಯುತ್ತಾನೆ ಷಾಜಹಾನ್.

 

ವೈಭವದಿಂದ ಮೆರೆದ, ರಣರಂಗದಲ್ಲಿ ಸೋಲನ್ನೇ ಕಾಣದ ಒಬ್ಬ ರಾಜಾಧಿರಾಜನಿಗೆ ತನ್ನ ಪುತ್ರನನ್ನು ಉಳಿಸಿಕೊಳ್ಳಲು ಆಗದೆ ಹೋದರೆ, ಇನ್ನೊಬ್ಬ ಚಕ್ರವರ್ತಿ ತನ್ನ ಪುತ್ರನಿಂದಲೇ ಅಧಿಕಾರ ಕಳೆದುಕೊಂಡು ದಾರುಣವಾಗಿ ತನ್ನ ಅಂತ್ಯದ ದಿನಗಳನ್ನು ಸವೆಸುತ್ತಾನೆ. ಯಶಸ್ಸಿನ ಸರಮಾಲೆಗಳನ್ನೇ ಕೊರಳಲ್ಲಿ ಹಾಕಿಕೊಂಡು ಮೆರೆದ, ಸಧೃಢ ವ್ಯಕ್ತಿತ್ವ ಹೊಂದಿದ, ಇತಿಹಾಸ ರೂಪಿಸಿದ ಮಹಾನ್ ವ್ಯಕ್ತಿಗಳೇ, ಕೊನೆ ಗಳಿಗೆಯ ಸೋಲಿನಿಂದ ಮೂಲೆಗುಂಪಾಗಿಬಿಡುತ್ತಾರೆ.

 

ಇತಿಹಾಸದಲ್ಲಿ ಬರೀ ವಿಜಯಗಳ ಬಗ್ಗೆ ಬರೆದಿದ್ದು ಹೆಚ್ಚು. ಆದರೆ ಗಮನಿಸಿ ನೋಡಿದರೆ ಯಾವ ವಿಜಯವು ಶಾಶ್ವತವಲ್ಲ. ಮಹಾತಾಕಾಂಕ್ಷಿಗಳೇ ಮಣ್ಣಾಗಿ ಹೋಗಿರುವಾಗ, ಸಣ್ಣ ಪುಟ್ಟ ಗೆಲುವಿನಿಂದ ಅಹಂಕಾರ ಹೆಚ್ಚಿಸಿಕೊಂಡ ಜನರೇ ನಮ್ಮ ಸುತ್ತ ತುಂಬಿದ್ದಾರಲ್ಲ. ಅವರಾರು ಇತಿಹಾಸದಿಂದ ಕಲಿತಿದ್ದೇನೂ ಇಲ್ಲ. ಅದಕ್ಕೆ ಇತಿಹಾಸ ಪುನರಾವರ್ತನೆ ಆಗುತ್ತಲೇ ಇರುತ್ತದೆ.

No comments:

Post a Comment