ಭಾರತ ಒಂದು ಭೂಭಾಗ ಎಂದುಕೊಂಡರೆ ಅದರ ಹೆಚ್ಚಿನ ಭಾಗವನ್ನು ಆಳಿದ ಮೊದಲ ರಾಜ ಅಶೋಕ ಚಕ್ರವರ್ತಿ. ಆ ನಂತರ ಉತ್ತರ, ದಕ್ಷಿಣ ಭಾಗಗಳನ್ನು ಬೇರೆ ಬೇರೆ ರಾಜರುಗಳು ಆಳಿದರೂ ಅವುಗಳು ಸಂಪರ್ಕದಲ್ಲಿದ್ದವು. ಆದರೆ ಮಹಾನ್ ಭಾರತದ ಕಲ್ಪನೆ ವಿದೇಶಿಯಗರಿಗೆ ನಮಗಿಂತ ಹೆಚ್ಚಾಗಿ ಇತ್ತು. ಭಾರತದ ಜೊತೆ ವ್ಯಾಪಾರ ಮಾಡಲು ವರ್ತಕರು ಹಾತೊರೆಯುತ್ತಿದ್ದರು. ಪ್ರವಾಸಿಗರು ಮುಗಿಬೀಳುತ್ತಿದ್ದರು. ಧಾಳಿಕೋರರು ಸಂಚು ಹೆಣೆಯುತ್ತಿದ್ದರು. ಅವರಿಗೆ ಸಿಂಧು ನದಿ ದಾಟಿದರೆ ಸಿಗುವ ಪ್ರದೇಶವೇ ಭಾರತ ಆಗಿತ್ತು. ಸಮುದ್ರ ಭಾಗದಿಂದ ಕೇರಳಕ್ಕೆ ಬಂದರೆ ಅದು ಕೂಡ ಅವರಿಗೆ ಭಾರತವೇ. ಗಾಳಿ ಬೀಸುವುದು ಹೆಚ್ಚು ಕಡಿಮೆ ಆಗಿ ಅವರ ಹಡಗು ಗೋವಾ ಗೆ ಬಂದು ಸೇರಿದರೆ ಅವರಿಗೆ ಅದು ಕೂಡ ಭಾರತವೇ. ಅದೇ ಇಂಗ್ಲಿಷರು ಸುತ್ತಿ ಬಳಸಿ ಕಲ್ಕತ್ತೆಗೆ ಬಂದರಲ್ಲ ಅದು ಕೂಡ ಭಾರತವೇ ಆಗಿತ್ತು. ಬ್ರಿಟಿಷರು ಭಾರತವನ್ನು ಒಟ್ಟುಗೂಡಿಸಿದ್ದು ಯಾವುದೇ ಸದುದ್ದೇಶ್ಶದಿಂದಲ್ಲ. ತಮ್ಮ ಆಡಳಿತ ಸುಗಮ ಆಗಲಿ ಎನ್ನುವುದಷ್ಟೆ ಆಗಿತ್ತು. ಆದರೆ ಇಂಡಿಯನ್ ರೈಲ್ವೇಸ್, ಇಂಡಿಯನ್ ಪೋಸ್ಟಲ್ ಸರ್ವಿಸ್ ಎನ್ನುವ ಸಂಸ್ಥೆಗಳು ಭಾರತದ ಉದ್ದಗಲಕ್ಕೂ ಹರಡಿ ಸಂಪರ್ಕ ಕಲ್ಪಿಸುವ ಜಾಲಗಳಾಗಿ ಹರಡಿಬಿಟ್ಟವು. ಅದರ ಸದುದ್ದೇಶ ಪಡೆದದ್ದು ಸ್ವತಂತ್ರ ಹೋರಾಟಗಾರರು.
ಮೋಹನ್ ದಾಸ್ ಎನ್ನುವ ವಕೀಲ ದಕ್ಷಿಣ ಆಫ್ರಿಕಾ ದಲ್ಲಿ ರೈಲಿನಿಂದ ಹೊರ ದಬ್ಬಿಸಿಕೊಂಡಾಗ ಅವನಲ್ಲಿ ಒಂದು ಸ್ವಾತಿಕ ಕಿಚ್ಚು ಮೂಡಿತ್ತು. ಅವಮಾನ ನುಂಗಲು ಸಿದ್ಧನಿರದ ಆತ ವ್ಯವಸ್ಥೆ ಬದಲಾಯಿಸಲು ಹೋರಾಟ. ಭಾರತಕ್ಕೆ ಮರಳಿ ಬಂದು ಮೊದಲ ಬಾರಿಗೆ ಅಹ್ಮದಾಬಾದ್ ನಲ್ಲಿ ಬಟ್ಟೆ ನೇಯುವ ಕಾರ್ಮಿಕರ ಪರವಾಗಿ ಉಪವಾಸ ಸತ್ಯಾಗ್ರಹ ಮಾಡಿದ. ಅವನ ಹಿಂದೆ ಜನರು ಮೂವತ್ತಿಗಿಂತ ಹೆಚ್ಚಿರಲಿಲ್ಲ. ಅದು ೧೯೧೯. ಆದರೆ ಅವನು ಸಾವಿರಾರು ಪಾತ್ರಗಳು ಬರೆದ. ನೂರಾರು ಊರು ಅಲೆದ. ಹೊಸ ನಾಯಕರನ್ನು ಹುಟ್ಟು ಹಾಕಿದ. ವಿದೇಶದ ಬಟ್ಟೆ ಸುಟ್ಟ. ಮತ್ತೆ ನೂಲುವುದನ್ನು ಕಲಿಸಿದ. ನಿಯಮಕ್ಕೆ ವಿರುದ್ಧವಾಗಿ ಸಮುದ್ರದ ನೀರಿನಿಂದ ಉಪ್ಪು ಮಾಡಲು ಹೊರಟ. ಹಲವಾರು ಬಾರಿ ಬಂಧನಕ್ಕೊಳಗಾದ. ಬಂಧಿಸಲು ಬಂದ ಬ್ರಿಟಿಷ್ ಪೊಲೀಸ್ ರಿಗೆ ನಿಮ್ಮ ಹತ್ತಿರ ಅರೆಸ್ಟ್ ವಾರೆಂಟ್ ಇದೆಯೇ ಎಂದು ಕೇಳಿದ ಮೊದಲ ಸ್ವಾತಂತ್ರ ಹೋರಾಟಗಾರ ಆತ. ಸಣ್ಣ ಮೈಯ, ಅಸಾಧಾರಣ ಧೈರ್ಯ ಇದ್ದ ವ್ಯಕ್ತಿ 'ಬ್ರಿಟಿಷರೇ ಭಾರತ ಬಿಟ್ಟು ತೊಲಗಿ' ಎನ್ನುವ ಚಳುವಳಿ ಆರಂಭಿಸಿದ. ಅದು ೧೯೪೨. ಅಷ್ಟೊತ್ತಿಗೆಲ್ಲ ಆತನಿಗೆ ಮೂವತ್ತು ಕೋಟಿ ಹಿಂಬಾಲಕರು ಇದ್ದರು.
ಆದರೆ ಸ್ವಾತಂತ್ರ ಹೋರಾಟದಲ್ಲಿ ಸಾಕಷ್ಟು ಜನ ಮುಂಚೂಣಿಯಲ್ಲಿದ್ದರು. ಬಿಸಿ ರಕ್ತದ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ತರಹದವರು. 'ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ ಕೊಡುತ್ತೇನೆ' ಎಂದ ಅಪ್ರತಿಮ ದೇಶ ಭಕ್ತ ಸುಭಾಷ್ ಚಂದ್ರ ಬೋಸ್ ಇದ್ದರು. ಆಧ್ಯಾತ್ಮಿಕವಾಗಿ ಕ್ಷೇತ್ರದಲ್ಲಿದ್ದರು ಭಾರತ ಸ್ವತಂತ್ರ ಹೊಂದುವುದು ಬಯಸಿದ್ದ ಸ್ವಾಮಿ ವಿವೇಕಾನಂದ, ಅರವಿಂದೋ ಘೋಷ್ ಇದ್ದರು. ಅವರೆಲ್ಲರ ದಾರಿ ಬೇರೆ ಬೇರೆ. ಆದರೆ ಉದ್ದೇಶ ಒಂದೇ. ಸ್ವಾತಂತ್ರ ಭಾರತ. ಎರಡನೇ ಜಾಗತಿಕ ಯುದ್ಧದಲ್ಲಿ ಸೋತು ಸುಣ್ಣವಾಗಿದ್ದ ಬ್ರಿಟಿಷರು ಜಾಗತಿಕ ಬೆಳವಣಿಗೆಗಳ ಮೇಲೆ ತಮ್ಮ ಹಿಡಿತ ಕಳೆದುಕೊಂಡು ತಮ್ಮ ಅಧಿಕಾರವನ್ನು ಬಿಟ್ಟು ಕೊಡುತ್ತ ಹೋದರು. ಆಂತರಿಕ ಮತ್ತು ಬಾಹ್ಯ ಬೆಳವಣಿಗೆಗಳು ಭಾರತ ಸ್ವಾತಂತ್ರ ಆಗುವುದು ಬಿಟ್ಟರೆ ದಾರಿಯೇ ಇಲ್ಲ ಎನ್ನುವ ಸನ್ನಿವೇಶ ಸೃಷ್ಟಿ ಆಗಿಬಿಟ್ಟಿತು.
ಎಪ್ಪತೈದು ವರ್ಷಗಳ ಬಳಿಕ ಇಂದು ಸ್ವಾತಂತ್ರ ಭಾರತದಲ್ಲಿ ಅಭಿವೃದ್ಧಿ ಸಮರ್ಪಕ ಏನು ಅನಿಸುವುದಿಲ್ಲ. ಆದರೂ ಕೂಡ ಇದು ನಮ್ಮ ಭಾರತ ಎನ್ನುವ ನಂಬಿಕೆ ನಮ್ಮಲ್ಲಿ ಮನೆ ಮಾಡಿದೆ. ಅಂದಿಗೆ ಸ್ವತಂತ್ರ ಹೋರಾಟಗಾರರು ನಮ್ಮನ್ನು ಒಟ್ಟಿಗೆ ತರಲು ಹರಪ್ರಯತ್ನ ಪಟ್ಟರೆ ಇಂದಿಗೆ ಹಬ್ಬಗಳು, ಚಿತ್ರರಂಗ, ಕ್ರಿಕೆಟ್, ಗಡಿ ಸಮಸ್ಯೆಗಳು ನಮ್ಮನ್ನು ಒಟ್ಟಿಗೆ ತರುತ್ತಿವೆ. ನಮ್ಮ ದೇಶ ತಡವಾಗಿ ಆದರೂ ಹಂತ ಹಂತವಾಗಿ ಬಲಿಷ್ಠ ರಾಷ್ಟ್ರ ಎನಿಸಿಕೊಳ್ಳುತ್ತಿದೆ.
ನಮ್ಮ ಇಂದಿನ ಸಮಸ್ಯೆಗಳು ಬೇರೆ ಇವೆ. ಬೇರೆ ದೇಶಗಳ ಜನ ಮಂಗಳ ಗ್ರಹಕ್ಕೆ ಹೋಗುವ ಪ್ರಯತ್ನ ಮಾಡುತ್ತಿದ್ದಾರೆ ಆದರೆ ನಾವು ಇತಿಹಾಸದಲ್ಲೇ ಕಳೆದು ಹೋಗಿದ್ದೇವೆ. ಅದರಿಂದ ಹೆಚ್ಚಿನ ಜನ ಹೊರ ಬಂದು ಹೊಸ ಪ್ರಯತ್ನಗಳನ್ನು ಜಾರಿ ಇಟ್ಟಾಗ ನಮ್ಮ ಭವಿಷ್ಯ ಕೂಡ ಉಜ್ವಲ ಆಗುತ್ತಾ ಹೋಗುತ್ತದೆ. ಎಲ್ಲ ಸಮಸ್ಯೆ ಮತ್ತು ಅವಕಾಶಗಳ ನಡುವೆ ಭಾರತಾಂಬೆ ನೂರು ಕೋಟಿ ಜನಕ್ಕೂ ಹೆಚ್ಚು ಜನರಿಗೆ ಆಶ್ರಯವಿತ್ತು ಸಲಹುತ್ತಿದ್ದಾಳೆ. ಅವಳಿಗೆ ಶರಣು!
No comments:
Post a Comment