ಸುಮಾರು ಒಂದೂವರೆ ಕೋಟಿ ಜನ ಜೀವನ ಸಾಗಿಸುವ ಬೆಂಗಳೂರು ನಗರಿಯಲ್ಲಿವಾಸಿಸುವ ಎಲ್ಲ ಜನರ ಅನುಭವಗಳು ಒಂದೇ ಆಗಿರಲು ಸಾಧ್ಯ ಇಲ್ಲ. ಇಲ್ಲಿ ಕೆಲವೇ ಸಾವಿರದಲ್ಲಿ ತಿಂಗಳ ಖರ್ಚು ನೀಗಿಸುವ ಕುಟುಬಗಳು ಇವೆ. ಹಾಗೆಯೇ ಕೋಟಿ ಹಣ ಖರ್ಚು ಮಾಡುವ ಕುಟುಂಬಗಳು ಕೂಡ ಇವೆ. ಮಂದ ಗತಿಯಲ್ಲಿ ಸಾಗುವ ಬಿಎಂಟಿಸಿ ಬಸ್ಸುಗಳಲ್ಲಿ ಪ್ರಯಾಣ ಮಾಡುವ ಜನ ಇದ್ದಾರೆ. ಅದೇ ರಸ್ತೆಗಳಲ್ಲಿ ಐಷಾರಾಮಿ ಕಾರುಗಳಲ್ಲಿ ಪ್ರಯಾಣ ಮಾಡುವ ಜನ ಕೂಡ ಅಷ್ಟೇ ಇದ್ದಾರೆ. ವಿಕ್ಟೋರಿಯಾ-ಬೌರಿಂಗ್ ಆಸ್ಪತ್ರೆಗಳಲ್ಲಿ ವಾರಸುದಾರರಿಲ್ಲದ ಶವಗಳು ಇವೆ. ಲಕ್ಸುರಿ ಆಸ್ಪತ್ರೆಗಲ್ಲಿ ಸತ್ತವರಿಗೆ ಕಣ್ಣೀರು ಸುರಿಸದ ಆದರೆ ಅಪಾರ ಸಂಪತ್ತಿಗೆ ವಾರಸುದಾರರು ಆದವರು ಕೂಡ ಇದ್ದಾರೆ. ಇಲ್ಲಿ ಹಳ್ಳಿ-ಚಿಕ್ಕ ಊರುಗಳಲ್ಲಿ ಇರುವ ಹಾಗೆ ಒಂದು ತರಹದ ಸಂಸ್ಕೃತಿ ಇಲ್ಲವೇ ಇಲ್ಲ. ಇದು ಅನೇಕ ವಿರೋಧಾಭಾಸಗಳು ಒಟ್ಟಿಗೆ ಕಾಣುವ ಊರು.
ನಿಮಗೆ ಬೆಂಗಳೂರು ಅಂದರೆ ಏನು? ಗಿಜಿಗುಟ್ಟುವ ಮೆಜೆಸ್ಟಿಕ್ ಅಷ್ಟೇನಾ? ಜೇಬಿಗೆ ಭಾರ ಎನ್ನಿಸುವ ಮಹಾತ್ಮಾ ಗಾಂಧೀ ರಸ್ತೆಯ ಅಂಗಡಿಗಳಾ? ರಾಜಕೀಯ ಶಕ್ತಿ ಪ್ರದರ್ಶನ ಮಾಡುವ ವಿಧಾನ ಸೌಧವಾ? ಅನೇಕ ಸಿನಿಮಾ ನಟರ ಮನೆಗಳಾ? ವೈಟ್ ಫೀಲ್ಡ್ ನಲ್ಲಿ ಓಡಾಡಿ ಇದು ಅಮೆರಿಕಕ್ಕೆ ಕಡಿಮೆ ಇಲ್ಲ ಅಂದು ಕೊಳ್ಳುವುದಾ? ಜಯದೇವ ಅಥವಾ ನಾರಾಯಣ ಆಸ್ಪತ್ರೆಗೆ ಓಡಾಡಿ ಸಂಬಂಧಿಕರ ಜೀವ ಉಳಿಸಿಕೊಳ್ಳಲು ಹೆಣಗುವುದಾ? ದೇವನಹಳ್ಳಿಯ ವಿಮಾನ ನಿಲ್ದಾಣಕ್ಕೆ ಹೋಗಿ, ಇದು ಭಾರತ ಎನ್ನುವ ಬಡ ದೇಶದ ಭಾಗವೇ ಎಂದು ನಿಮಗೆ ನೀವೇ ಪ್ರಶ್ನೆ ಕೇಳಿಕೊಳ್ಳುವುದಾ?
ರವಿ ಬೆಳಗೆರೆ ಪುಟಗಟ್ಟಲೆ ಬರೆದ ಬೆಂಗಳೂರಿನ ಭೂಗತ ಲೋಕ ಇನ್ನೂ ಮರೆಯಾಗಿಲ್ಲ ಎನ್ನುವುದು ನನಗೆ ಇತ್ತೀಚಿಗೆ ಚಿತ್ರಮಂದಿರದಲ್ಲಿ 'ಹೆಡ್ ಬುಷ್' ಎನ್ನುವ ಚಿತ್ರ ನೋಡುವಾಗ ಅಲ್ಲಿ ನೋಡುಗರಲ್ಲಿ ನಡೆದ ವಾಗ್ವಾದ ನೋಡಿ ಮನೆವರಿಕೆ ಆಯಿತು. ಮೆಜೆಸ್ಟಿಕ್ ಮೆಟ್ರೋ ಸ್ಟೇಷನ್ ನಲ್ಲಿ ಸಾವಿರಾರು ಪ್ರಯಾಣಿಕರನ್ನು ವ್ಯವಸ್ಥಿತವಾಗಿ ನಿರ್ವಹಿಸಿವುದು ನೋಡಿ ನ್ಯೂಯಾರ್ಕ್ ನಗರದ ಜಾನ್ ಎಫ್ ಕೆನಡಿ ವಿಮಾನ ನಿಲ್ದಾಣದ ಜನಸಂದಣಿಗೆ ಏನು ಕಡಿಮೆ ಇಲ್ಲ ಎನಿಸಿತು. ನಮ್ಮ ಮನೆ ಹತ್ತಿರ ಒಬ್ಬ ಗಂಡ-ಮಕ್ಕಳಿಲ್ಲದ ಹೆಣ್ಣು ಮಗಳು ನಡೆಸುವ ಅನಾಥಾಶ್ರಮ ನೋಡಿ ಇದೆ ದೇಶದಲ್ಲಿ ಮದರ್ ತೆರೇಸಾ ಬದುಕಿದ್ದಲ್ಲವೇ ಎಂದು ನೆನಪಾಯಿತು.
ನಾನು ಮೊದಲು ಬೆಂಗಳೂರಿಗೆ ಬಂದದ್ದು ಶಾಲೆ ಪ್ರವಾಸದ ವೇಳೆ. ನಂತರ ಕಾಲೇಜು ಕಲಿಯುವಾಗ ತರಬೇತಿಗೆ ಎಂದು ಒಂದು ತಿಂಗಳು ಇದ್ದೆ. ನಂತರ 1999 ಆಗಸ್ಟ್ ೧೫ ರಂದು ನೌಕರಿ ಹುಡುಕಿಕೊಂಡು ಬಂದ ಮೇಲೆ ಇದೆ ನನ್ನ ಮನೆಯಾಗಿದೆ. ಬರೀ ನನ್ನ ಜೀವನೋಪಾಯಕ್ಕಲ್ಲದೆ ಅವಲಂಬಿತರಿಗೆ ಸಹಾಯ ಮಾಡುವಷ್ಟು ಶಕ್ತಿ ತುಂಬಿದೆ. ಸುಮಾರು ಇಪ್ಪತ್ತು ನಾಲ್ಕು ವರುಷಗಳನ್ನು ಇಲ್ಲಿ ಕಳೆದ ಮೇಲೂ, ಈ ನಗರ ನನಗೆ ಅಚ್ಚರಿ ತರುತ್ತದೆ.
ಹಿಂದೆ ನಾನ್ನು ಜೀವನ ಕಳೆದ ಊರುಗಳಲ್ಲಿ ಇದ್ದ ಹಾಗೆ ಇಲ್ಲಿ ಯಾರು ಸಾಧು-ಸಂತರಿಲ್ಲ. ಹಿಂದೆ ನಾನು ಇದ್ದ ಕಲ್ಬುರ್ಗಿಯಲ್ಲಿ ಶರಣಬಸವ ಅಪ್ಪನ ಗುಡಿಯಿತ್ತು. ಹುಬ್ಬಳ್ಳಿಯಲ್ಲಿ ಸಿದ್ಧಾರೂಢರ ಮಠ ಇತ್ತು. ಬೆಂಗಳೂರಿನಲ್ಲಿ ಇರುವುದು ಭಕ್ತರನ್ನು ಯಾಮಾರಿಸುವ ನಕಲಿ ಸ್ವಾಮಿಗಳು. ಇಲ್ಲಿ ಬೆವರನ್ನು ನಂಬಿ ಬದುಕುವ ಸಾಮಾನ್ಯರ ಹಾಗೆಯೇ ಮೋಸ ಮಾಡಿಯೇ ಜೀವನ ಸಾಗಿಸುವ ಜನರ ಸಂಖ್ಯೆ ಕೂಡ ಕಡಿಮೆ ಇಲ್ಲ. ಆದರೆ ಅವೆಲ್ಲ ವಿರೋಧಾಭಾಸಗಳ ನಡುವೆ ಇದು ಕೋಟ್ಯಂತರ ಜನರಿಗೆ ಆಶ್ರಯ ನೀಡಿದೆ.
ನಮ್ಮ ಆಫೀಸಿನ ಹೊರಗಡೆ ವೀರಭದ್ರೇಶ್ವರ ಖಾನಾವಳಿ ಇದ್ದ ಹಾಗೆ, ಆಂಧ್ರ ಬಿರಿಯಾನಿ ಊಟ ಕೂಡ ಅಷ್ಟೇ ಫೇಮಸ್. ಪಕ್ಕದಲ್ಲೇ ಬಂಗಾಳಿಯ ಶೈಲಿಯ ಮೀನು ಮಾಡುವ ಅಂಗಡಿ ಇದೆ. ಪಂಜಾಬಿ ಊಟ ಕೂಡ ಅದರ ಪಕ್ಕದಲ್ಲೇ. ಭಾರತದಲ್ಲಿ ಇರುವ ಎಲ್ಲ ತರಹದ ಅಡುಗೆ ಶೈಲಿಯ ಊಟಗಳು ಇಲ್ಲಿ ಲಭ್ಯ. ಅಷ್ಟೇ ಅಲ್ಲ. ಇಲ್ಲಿಗೆ ಭೇಟಿ ನೀಡುವ ವಿದೇಶಿಗರ ಅನುಕೊಲಕ್ಕಾಗಿ ಕಾಂಟಿನೆಂಟಲ್ ರುಚಿಗಳು ಕೂಡ ಲಭ್ಯ.
ಜೋಪಡಿಗಳಲ್ಲಿ, ತಾತ್ಕಾಲಿಕ ಶೆಡ್ ಗಳಲ್ಲಿ ಜನ ವಾಸ ಮಾಡಿದ ಹಾಗೆ ಮಯ ನಿರ್ಮಿಸಿದ ಇಂದ್ರಪ್ರಸ್ಥದ ಹಾಗಿರುವ ಮನೆಗಳಲ್ಲಿ ಕೂಡ ಜನ ವಾಸ ಮಾಡುವುದು ನೀವು ಇಲ್ಲಿ ಗಮನಿಸಬಹುದು. ನಿಮಗೆ ದೇಶ ಸುತ್ತಲು ಸಾಧ್ಯ ಆಗದಿದ್ದರೆ, ಬೆಂಗಳೂರನ್ನು ಒಂದೆರಡು ಸಲ ಸುತ್ತಿ ಬಂದರೆ ಅಡ್ಡಿ ಇಲ್ಲ ಎನ್ನಬಹುದು. ತರಹೇವಾರಿ ಜನರನ್ನು ಮತ್ತು ವಿಶಿಷ್ಟ ಅನುಭವಗಳನ್ನು ಒಂದೇ ಸ್ಥಳದಲ್ಲಿ ಕೊಡುವ ಊರು ನಮ್ಮ ಬೆಂಗಳೂರು. ಇದು ನನಗೆ ಕೊಟ್ಟ ಅವಕಾಶಕ್ಕೆ ನಾನು ಋಣಿ.
No comments:
Post a Comment