Wednesday, June 28, 2023

ಹಾಳೂರಿನಲ್ಲಿ ಉಳಿದವರು

ಊರುಗಳು ಏತಕ್ಕೆ ಪಾಳು ಬೀಳುತ್ತವೆ? ನಮ್ಮ ಹಂಪೆಯನ್ನು ಶತ್ರುಗಳು ಹಾಳುಗೆಡವಿದರು. ಹಿರೋಷಿಮಾ, ನಾಗಸಾಕಿ ಪಾಳು ಬೀಳುವುದಕ್ಕೆ ಪರಮಾಣು ಬಾಂಬ್ ಗಳು ಕಾರಣವಾದವು. ಒಂದು ಯುದ್ಧ ಮುಗಿಯುವುದಕ್ಕೆ ಕೆಲ ಊರುಗಳು ಪಾಳು ಬೀಳಬೇಕೇನೋ? ಅದನ್ನೇ ಇಂದಿಗೂ ಉಕ್ರೇನ್ ನಲ್ಲಿ ಕೂಡ ಕಾಣಬಹುದು. ಆದರೆ ಅದು ಅಷ್ಟೇ ಅಲ್ಲ. ಅಕ್ಬರ್ ಕಟ್ಟಿದ ಫತೇಪುರ್ ಸಿಕ್ರಿ ಯಲ್ಲಿ ನೀರು ಸಾಕಾಗದೆ ಮೊಗಲ್ ದೊರೆಯಿಂದ ಸಾಮಾನ್ಯ ಪ್ರಜೆಗಳವರೆಗೆ ಎಲ್ಲರೂ ಊರು ಬಿಟ್ಟರು. ಹಿಂದೆ ಪ್ಲೇಗ್ ಬಂದಾಗ ಜನ ಊರು ತೊರೆಯುತ್ತಿದ್ದರು. ಭೂಕಂಪಗಳು ಕೂಡ ಊರುಗಳನ್ನು  ಕ್ಷಣಾರ್ಧದಲ್ಲಿ ಪಾಳು ಬೀಳಿಸಿಬಿಡುತ್ತವೆ. ಇಂದಿಗೆ ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಜನ ದುಡಿಮೆ ಅರಸಿ ಬೆಂಗಳೂರಿಗೆ ಗುಳೆ ಹೊರಡುತ್ತಾರಲ್ಲ. ಅವರು ತಮ್ಮ ಹಳ್ಳಿಗಳಿಗೆ ಹಿಂತಿರುಗದಿದ್ದರೆ ಅವುಗಳು ಸ್ವಲ್ಪ ಮಟ್ಟಿಗಾದರೂ ಪಾಳು ಬೀಳದೆ ಏನು ಮಾಡುತ್ತವೆ?


ಬಹು ಕಾಲದ ಹಿಂದೆ ಆದಿ ಮಾನವ ಬೆಟ್ಟ, ಗುಡ್ಡಗಳಲ್ಲಿ, ಗುಹೆಗಳಲ್ಲಿ ವಾಸಿಸುತ್ತಿರಲಿಲ್ಲವೇ? ಅವನು ಬೆಟ್ಟ ಇಳಿದು, ನೀರಿನ ವ್ಯವಸ್ಥೆ ಇದ್ದಲ್ಲಿ ವ್ಯವಸಾಯ ಆರಂಭಿಸಿದ. ಕ್ರಮೇಣ ಬಯಲಲ್ಲಿ ಮನೆಗಳನ್ನು ಕಟ್ಟಿಕೊಂಡ. ಅವುಗಳು ಊರಾಗಿ ಬೆಳೆದವು. ವಾಸಕ್ಕೆ ಅನುಕೂಲ ಹೆಚ್ಚಿದ್ದರೆ ಹೊಸ ಊರು ಕಟ್ಟಿಕೊಂಡು ಹಳೆ ಊರು ತೊರೆಯಲು ಹಿಂದೆ ಮುಂದೆ ಯೋಚಿಸಲಿಲ್ಲ. ನಂತರ ಸಮಾಜ ರೂಪುಗೊಂಡು, ಪ್ರದೇಶಗಳು ಸಾಮ್ರಾಜ್ಯಗಳ ಸೀಮೆ ರೇಖೆಗಳಾದವು. ಗೆದ್ದವರು ಸೋತವರ ಊರನ್ನು  ಹಾಳುಗೆಡವುತ್ತಿದ್ದರು. ಆ ಸಂಪ್ರದಾಯ ಮುಂದೆ ಹಲವು ಊರುಗಳು ಅಳಿಯಲು ಮತ್ತು ಹೊಸ ಊರುಗಳು ಹುಟ್ಟಿಕೊಳ್ಳಲು ಕಾರಣವಾದವು.


ಆದರೆ ಹಾಳೂರಿನಲ್ಲಿ ಒಬ್ಬಿಬ್ಬರು ಉಳಿದುಕೊಂಡರೆ ಅವರೇ ಊರ ಗೌಡರು ಎನ್ನೋದು ಗಾದೆ ಮಾತು. ಆದರೆ ಆ ಊರಿನಲ್ಲಿ ಉಳಿದುಕೊಳ್ಳಲು ಕಾರಣಗಳು ಮುಗಿದು ಹೋಗಿವೆ. ಹಳೆ ನೆನಪಿಗಳಿಗೆ, ಸಂಪ್ರದಾಯಗಳಿಗೆ, ಮುಲಾಜಿಗೆ ಬಿದ್ದು ಉಳಿದುಕೊಂಡರೆ ಅವರು ಸಾಧಿಸುವುದೇನು? ಬೇರೆಲ್ಲ ಜನ ಊರು ಬಿಟ್ಟು ಹೋಗಿ ಆಗಿದೆಯಲ್ಲವೇ? ಮತ್ತೆ ಆ ಊರಲ್ಲಿ ಹಳೆಯ ಅನುಕೂಲಗಳು ಉಳಿಯುವುದಿಲ್ಲ. ಪರಸ್ಪರ ಸಹಾಯ, ವ್ಯಾಪಾರ ಯಾವುದು ಸಾಧ್ಯವಿಲ್ಲ. ಹಾಗಿದ್ದಲ್ಲಿ ಪಾಳು ಬಿದ್ದ ಕೋಟೆ ಕಾಯುವೆದೇಕೆ? ಸತ್ತ ಹೆಣಕ್ಕೆ ಶೃಂಗಾರ ಮಾಡಿದರೆ ಏನುಪಯೋಗ?


ನಮ್ಮ ಪೂರ್ವಜರು ಅವರ ಹಿರಿಯರು ಬದುಕಿದ್ದಲ್ಲಿಯೇ ಇರುತ್ತೇವೆ ಎಂದು ನಿಶ್ಚಯ ಮಾಡಿದ್ದರೆ, ಇಂದಿಗೆ ನಾವು ಕೂಡ ಗುಹೆಗಳಲ್ಲಿ ವಾಸ ಮಾಡಬೇಕಿತ್ತು. ಆದರೆ ಹಾಗಾಗಲಿಲ್ಲ. ಸಮಾಜಕ್ಕೆ ಬೇಡದ ಊರುಗಳನ್ನು ಅವನು ತೊರೆದು ಹೊಸ ಜೀವನ ಕಟ್ಟಿಕೊಂಡ. ಆದರೂ ಅಲ್ಲೊಬ್ಬರು ಇಲ್ಲೊಬ್ಬರು ಹಾಳೂರಿನಲ್ಲೂ ಗೌಡರಾಗಿ ಉಳಿದುಕೊಂಡರು. ಅದು ಯಾವುದೊ ಪ್ರತಿಷ್ಠೆಗೋ, ಅಥವಾ ಮುಲಾಜಿಗೆ ಬಿದ್ದು. ಅವರಿಗೆ ತಾವು ಕಳೆದುಕೊಂಡಿದ್ದು ಏನು ಎಂದು ತಿಳಿಯಲಿಲ್ಲ. 


ಸಂಪ್ರದಾಯಗಳನ್ನು ಮರೆಯಬೇಕೆಂದು ನಾನು ಹೇಳುತ್ತಿಲ್ಲ. ಆದರೆ ಸಂಪ್ರದಾಯಗಳಿಗಾಗಿ ಸಾಯಬಾರದು ಎನ್ನುವುದಷ್ಟೆ ನನ್ನ ಅಭಿಪ್ರಾಯ. ಇಲ್ಲಿ ಊರುಗಳಷ್ಟೇ ಹಾಳು ಬೀಳುವುದಿಲ್ಲ ಎನ್ನುವುದು ಗಮನಿಸಬೇಕು. ಕುಟುಂಬಗಳು ಹಾಳು ಬಿದ್ದಾಗ ಅವರ ಮನೆಗಳು ಕೂಡ ಹಾಳು ಬೀಳುತ್ತವೆ. ಒಬ್ಬ ಮನುಷ್ಯ ಹಾಳು ಬಿದ್ದರೆ ಅವನ ಸಂಬಂಧಗಳು ಕೂಡ ಹಾಳು ಬೀಳುತ್ತವೆ. ಅಂತಹ ಹಾಳೂರುಗಳನ್ನು ಬಿಟ್ಟು ಮುನ್ನಡೆದಷ್ಟೂ ಹೊಸ ಜೀವನಕ್ಕೆ ಅವಕಾಶ.


ಹಾಳೂರು, ಪಾಳು ಬಿದ್ದ ಮನೆ, ಮನುಷ್ಯ ಅಲ್ಲಿ ಗೌಡರಾಗಿ ಉಳಿದು ಯಾವ ಪ್ರಯೋಜನ?

No comments:

Post a Comment