ಪುರಂದರ ದಾಸರು ದೇವರ ಕೀರ್ತನೆಗಳನ್ನು ಹಾಡಿದಷ್ಟೇ ಸುಲಭವಾಗಿ, ಮನುಷ್ಯ ಗುಣದ ಲೋಪ ದೋಷಗಳನ್ನು, ಸಮಾಜದ ಹುಳುಕುಗಳನ್ನು ಎತ್ತಿ ತೋರಿಸುವ ಸಾಕಷ್ಟು ಗೀತೆಗಳನ್ನು ಕೂಡ ರಚಿಸಿದ್ದಾರೆ. ಅಂತಹ ಒಂದು ಗೀತೆ "ಬೇವು ಬೆಲ್ಲದೊಳಿಡಲೇನು ಫಲ?". ಆ ಗೀತೆಗಳು ದಾಸರ ಕಾಲವಾದ ೧೫ ನೇ ಶತಮಾನದ ಜನ ಸಾಮಾನ್ಯರ ಶೈಲಿ ತೋರಿಸುವುದಷ್ಟೇ ಅಲ್ಲ. ಬದಲಾಗದ ಮನುಷ್ಯನ ಗುಣಗಳು ಕಾಲಾತೀತ ಎನ್ನುವ ವಿಪರ್ಯಾಸವನ್ನು ಮಾರ್ಮಿಕವಾಗಿ ತೋರಿಸುತ್ತವೆ. ಹಾಗೆಯೇ ಮೋಹ-ಮದ ಇತ್ಯಾದಿ ವಿಕಾರಗಳು ತಹಬದಿಗೆ ಬಂದಾಗ, ಇಷ್ಟ ದೈವ ಹೃದಯದಾಳವನ್ನು ತಲುಪಲು ಸುಲಭ ಸಾಧ್ಯ ಎನ್ನುವ ಸತ್ಯ ಸಂದೇಶ ಕೂಡ ಸಾರುತ್ತವೆ. ಆದರೆ ಅದಕ್ಕೆ ಬರೀ ಗೀತೆಯನ್ನು ಆನಂದಿಸುವುದಷ್ಟೇ ಅಲ್ಲ, ಪುರಂದರರು ಕೇಳುವ ಪ್ರಶ್ನೆಗಳನ್ನು ನಮ್ಮ ಅಂತರಾಳದಲ್ಲಿ ಕೇಳಿ ಕೊಳ್ಳಬೇಕಲ್ಲವೇ?
Wednesday, April 14, 2021
Sunday, April 11, 2021
ಕೇಳಬಾರದ ಪ್ರಶ್ನೆಗಳು ಆದರೂ ಸಿಗುವ ಉತ್ತರಗಳು
ಯಾರಾದರೂ ಆಗಲಿ ಏಕೆ ಸುಳ್ಳು ಹೇಳುತ್ತಾರೆ? ಚಿಕ್ಕ ಮಕ್ಕಳು ಚಾಕಲೇಟ್ ಆಸೆಗೋ, ಇಲ್ಲವೇ ಆಟದ ಸಾಮಾನು ತಾನು ಮುರಿದಿಲ್ಲವೆಂದೋ ಸುಳ್ಳು ಹೇಳಬಹುದು. ರಾಜಕಾರಣಿಗಳು ಪರಿಸ್ಥಿತಿಯ ಲಾಭ ಪಡೆಯಲೋ, ಇಲ್ಲವೇ ಕುಣಿಕೆಯಿಂದ ಪಾರಾಗಲೋ ಸುಳ್ಳು ಹೇಳಬಹುದು. ಇದು ಲಾಭ-ನಷ್ಟದ ಲೆಕ್ಕಾಚಾರವಾಯಿತು. ಆದರೆ ಕೆಲವರು ಸುಳ್ಳನ್ನೇ ಜೀವನ ಮಾಡಿಕೊಂಡಿರುತ್ತಾರಲ್ಲ. ಅವರ ಬಗ್ಗೆ ವಿಚಾರ ಮಾಡಿ ನೋಡೋಣ.
ಕಳ್ಳ ತಾನು ಸಮಾಜದಲ್ಲಿ ಕಳ್ಳ ಎಂದು ಒಪ್ಪಿಕೊಂಡರೆ ಅವನ ಆಟ ನಿಲ್ಲುತ್ತದೆ. ಅದಕ್ಕೆ ಆತ ಬೇರೆಯದೇ ಮುಖವಾಡ ಧರಿಸುತ್ತಾನೆ. ಒಬ್ಬ ಭ್ರಷ್ಟ ಅಧಿಕಾರಿ ತನ್ನ ದೌರ್ಬಲ್ಯ ಮುಚ್ಚಿಕೊಳ್ಳಲು ಅಗತ್ಯಕ್ಕಿಂತ ಹೆಚ್ಚಿಗೆ ಖಡಕ್ಕಾಗಿ ಇರುತ್ತಾನೆ. ಕುಡಿತಕ್ಕೆ ದಾಸನಾದ ಗಂಡಸು ಜೋರು ಧ್ವನಿಯಲ್ಲೇ ಸುಳ್ಳೇ ಜಗಳ ತೆಗೆಯುತ್ತಾನೆ. ಅನೈತಿಕ ಸಂಬಂಧ ಹೊಂದಿದ ಹೆಣ್ಣು ಹೂವಿನಷ್ಟೇ ಮೆತ್ತಗೆ ಸುಳ್ಳು ಹೇಳಿ, ಕೇಳುಗರ ಕಿವಿಯಲ್ಲಿ ಹೂವು ಇಟ್ಟು ಕಳಿಸುತ್ತಾಳೆ. ಮೈತುಂಬ ಸಾಲ ಮಾಡಿಕೊಂಡ ವಿಫಲ ವರ್ತಕ, ಚಟಗಳಿಗೆ ದಾಸರಾಗಿರುವ ಮಕ್ಕಳ ಹೆತ್ತ ತಾಯಿ ತಮಗೆ ಸುಳ್ಳು ಹೇಳುವುದು ಬಿಟ್ಟು ಬೇರೆ ದಾರಿಯೇ ಇಲ್ಲ ಎಂಬಂತೆ ವರ್ತಿಸುತ್ತಾರೆ.
ಅವರಿಗೆ ನೀವು ಯಾಕೆ ಹೀಗಾಯಿತು ಎಂದು ಪ್ರಶ್ನೆ ಕೇಳಿದರೆ ಉಪಯೋಗವಿಲ್ಲ. ಯಾವ ದೇವರ ಮೇಲೆ ಆಣೆ ಮಾಡಿಸಿದರೂ, ಅವರು ನಿಜ ಹೇಳಲಾರರು. ಅವರು ಈಗಾಗಲೇ ತಮಗೆ ತಾವು ಸುಳ್ಳು ಹೇಳಿಕೊಂಡಿದ್ದಾರೆ. ಅದನ್ನೇ ನಿಮಗೂ ಹೇಳುತ್ತಾರೆ. ಬದಲಿಗೆ ಅವರ ಜೊತೆ ಸ್ವಲ್ಪ ಸಮಯ ಕಳೆದು ನೋಡಿ. ವಾಸ್ತವ ಸತ್ಯದ ಅನಾವರಣ ನಿಮಗೆ ಆಗುತ್ತಾ ಹೋಗುತ್ತದೆ. ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಕ್ಕೇ ಹೋಗುತ್ತದೆ.
ತಮ್ಮ ದೌರ್ಬಲ್ಯಗಳನ್ನು ನೇರವಾಗಿ ಎದುರಿಸುವ ಜನ ತುಂಬಾ ಕಡಿಮೆ. ಅವರಿಗೆ ಸುಳ್ಳು ಹೇಳುವ ಅವಶ್ಯಕತೆ ಬರುವುದಿಲ್ಲ. ಆದರೆ ಉಳಿದವರಿಗೆ ಸುಳ್ಳಿನ ಲೋಕವೇ ಪ್ರೀತಿ. ವಾಸ್ತವವನ್ನು ಒಪ್ಪಿಕೊಳ್ಳದೆ, ಕನಸುಗಳನ್ನು ಕೈ ಬಿಡದೆ, ಅಡ್ಡ ದಾರಿ ಹಿಡಿದು, ತಮ್ಮ ದೌರ್ಬಲ್ಯಗಳನ್ನು ಮುಚ್ಚಿ ಹಾಕಲು ಸುಳ್ಳನ್ನು ಅವಲಂಬಿಸುತ್ತಾರೆ. ಆದರೆ ಒಂದು ಸುಳ್ಳು ಮುಚ್ಚಿ ಹಾಕಲು ಇನ್ನೊಂದು ಸುಳ್ಳು ಹೇಳಬೇಕಲ್ಲ. ಹೀಗೆ ಅವರು ಸುಳ್ಳಿನ ಸರಮಾಲೆಯಲ್ಲೇ ಸಿಕ್ಕಿ ಹಾಕಿಕೊಂಡು ತಮ್ಮ ಜೀವನ ಮತ್ತೆ ಬದಲಾಗದಷ್ಟು ನೈತಿಕ ಅಧಪತನಕ್ಕೆ ಇಳಿದು ಬಿಡುತ್ತಾರೆ. ಅದರಿಂದ ಹೊರ ಬರುವ ಹಾದಿ ಕಠಿಣ. ಅದಕ್ಕೆ ಈ ಜಗತ್ತಿಗೆ ಸತ್ಯ ಅಪಥ್ಯ.
Saturday, April 10, 2021
ಶರಣರು ಕಟ್ಟಿದ ಕರುಣಾ ಕೇಂದ್ರ
Saturday, April 3, 2021
ಯುದ್ಧಗಳ ಬದಲಾದ ಸ್ವರೂಪವೇ ಚುನಾವಣೆ
ಮನುಷ್ಯ ಚರಿತ್ರೆ ದಾಖಲಿಸುವ ಮುಂಚೆಯೇ ಬುಡಕಟ್ಟು ಜನಾಂಗಗಳು ಗಡಿಗಾಗಿ, ತಮ್ಮ ಶ್ರೇಷ್ಠತೆ ತೋರ್ಪಡಿಸುವುದಕ್ಕಾಗಿ ಕಾದಾಡುತ್ತಿದ್ದರಲ್ಲ. ಅಲ್ಲಿಂದ 1945 ರವರೆಗಿನ ಎರಡನೇ ಜಾಗತಿಕ ಮಹಾ ಯುದ್ಧದವರೆಗೆ ಯುದ್ಧಗಳು ತಮ್ಮ ರಾಜನ ಅಳಿವು ಉಳಿವನ್ನು ನಿರ್ಧರಿಸುತ್ತಿದ್ದವು. ಆದರೆ ಎರಡನೇ ಜಾಗತಿಕ ಯುದ್ಧದಲ್ಲಿ ಹಿಟ್ಲರ್-ಸ್ಟಾಲಿನ್, ಅಮೇರಿಕ-ಜಪಾನ್ ನಡುವಿನ ಹಣ ಹಣಿ ಅಪಾರ ಪ್ರಮಾಣದ ಸಾವು ನೋವು ತಂದ ನಂತರ ಮನುಷ್ಯ ಯುದ್ಧಗಳ ಬದಲಿಗೆ ಚುನಾವಣೆಯನ್ನು ಕಾರ್ಯರೂಪಕ್ಕೆ ತಂದ. ಚುನಾವಣೆಗಳು ಹೊಸ ಜಗತ್ತಿನ ಹರಿಕಾರರಾಗದೆ ಹಳೆಯ ಯುದ್ಧಗಳ ಹೊಸ ಸ್ವರೂಪವಾಗಿ ಬದಲಾದವು.
ಹಿಂದೆ ಒಬ್ಬ ರಾಜ ಇನ್ನೊಬ್ಬ ರಾಜನ ಮೇಲೆ ಕಾದಾಡಿದರೆ ಇಂದು ಒಂದು ರಾಜಕೀಯ ಪಕ್ಷ ಇನ್ನೊಂದು ಪಕ್ಷದ ಮೇಲೆ ಯುದ್ಧ ಸಾರುತ್ತದೆ. ಅಂದಿಗೆ ರಣ ಕಹಳೆ ಊದಿದರೆ ಇಂದಿಗೆ ಲೌಡ್ ಸ್ಪೀಕರ್ ಗಳ ಹಾವಳಿ. ಅಂದಿಗೆ ದುಡ್ಡು ಕೊಟ್ಟು ಸೈನಿಕರನ್ನು ಮತ್ತು ಅವರ ನಾಯಕರನ್ನು ಖರೀದಿ ಮಾಡಿದರೆ, ಇಂದಿಗೆ ಮತದಾರರನ್ನು ಮತ್ತು ಎದುರಾಳಿ ನಾಯಕರನ್ನು ಖರೀದಿಸಲಾಗುತ್ತದೆ. ಅಂದಿಗೆ ಮೋಸದಿಂದ ಎದುರಾಳಿಗಳನ್ನು ಇಕ್ಕಟ್ಟಿಗೆ ಸಿಕ್ಕಿಸಿದರೆ, ಇಂದಿನ ಸಿ.ಡಿ. ಪ್ರಕರಣಗಳು ಇನ್ನೇನು? ಅಂದು ಯುದ್ಧವೆಂದರೆ ಹೊಡೆದಾಟ. ಇಂದಿಗೆ ಅದು ವಾಕ್ಸಮರ. ಆವೇಶ ಹೆಚ್ಚಾದಾಗ ಅದು ಬಡಿದಾಟವಾಗಿ ಬದಲಾಗವುದು ಇಂದಿಗೂ ಇದೆ. ಅಂದಿಗೆ ರಾಜ ತನ್ನ ಅಂಗರಕ್ಷಕರ ಜೊತೆ ಬರುತ್ತಿದ್ದ. ಇಂದಿನ ಪುಢಾರಿಗಳು ತಮ್ಮ ಹುಡುಗರ ಗುಂಪನ್ನು ಕಟ್ಟಿಕೊಂಡು ಬರುತ್ತಾರೆ.
ಅಂದಿನ ರಾಜ, ಮಹಾರಾಜರು ಇಂದಿನ ಮುಖ್ಯ ಮಂತ್ರಿ, ಪ್ರಧಾನ ಮಂತ್ರಿಗಳಾಗಿ ಬದಲಾಗಿದ್ದಾರೆ ರಾಜನನ್ನು ವಿರೋಧಿಸಿದ ಸಾಮಾನ್ಯರಿಗೆ ಅಂದಿಗೂ ಉಳಿಗಾಲ ಇರಲಿಲ್ಲ, ಇಂದಿಗೂ ಇಲ್ಲ. ಪ್ರಜಾಪ್ರಭುತ್ವ ಮತ್ತು ಚುನಾವಣೆಗಳು ಯುದ್ಧಗಳ ರಕ್ತದೋಕುಳಿ ತಪ್ಪಿಸಿದರೂ, ನಿಜ ಬದಲಾವಣೆಯನ್ನು ತರಲೇ ಇಲ್ಲ. ಬುದ್ಧ, ಶಂಕರ, ಬಸವ, ವಿವೇಕಾನಂದರಂತಹ ಸಮಾಜ ಸುಧಾರಕರು ಮನುಷ್ಯನ ಆಸೆಗಳಿಗೆ ಧರ್ಮ-ಕಾಯಕದ ಕಡಿವಾಣ ಹಾಕಿದರೂ, ಅಧಿಕಾರ ದಾಹದ ಮನುಜರು ರಕ್ತ ಬೀಜಾಸುರನ ಸಂತತಿಯಂತೆ ಹಬ್ಬುತ್ತಲಿದ್ದಾರೆ. ಯುದ್ಧ ಗೆದ್ದವರೇ ಅಂದಿಗೆ ರಾಜರು. ಚುನಾವಣೆಗಳನ್ನು ರಣಭೂಮಿಯನ್ನಾಗಿ ಮಾಡಿಕೊಂಡವರೇ ಇಂದಿನ ಪ್ರಭುಗಳು.
ಪ್ರಜೆಗಳು ಅಂದಿಗೆ ರಾಜ ಮನೆತನಗಳನ್ನು ಕಂದಾಯ ಕೊಟ್ಟು ಸಲಹಿದರೆ, ಇಂದಿಗೆ ರಾಜಕೀಯ ಪಕ್ಷಗಳನ್ನು ಸಲಹುತ್ತಾರೆ. ಕಾಲ ಬದಲಾಗಿ, ಬದುಕಿನ ಹೊರ ನೋಟ ಬದಲಾದರೂ, ಎಂದೆಂದಿಗೂ ಬದಲಾಗದ ಮನುಜನ ಆಂತರಿಕ ಸ್ವಭಾವದ ಅತಿರೇಕಗಳು ಅಂದಿಗೆ ಯುದ್ಧಗಳಾಗಿ ಬದಲಾದರೆ, ಇಂದಿಗೆ ಅವು ಚುನಾವಣೆಗಳಾಗಿ ಬದಲಾಗಿವೆ.
Monday, March 29, 2021
ನೆರವಾದವರು ಕಣ್ಮರೆಯಾದಾಗ
"ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು" ಎಂದು ಗಾದೆ ಮಾತು ಇದೆಯಲ್ಲ. ಅದು ೨೦೦೯ ರ ಸಮಯ. ನಮ್ಮೂರಾದ ಮಸ್ಕಿಯಲ್ಲಿ ಮನೆ ಕಟ್ಟಿ, ಅದೇ ಮನೆಯಲ್ಲಿ ನಾನು ಮದುವೆಯಾಗ ಹೊರಟಿದ್ದೆ. ಮನೆ ಕಟ್ಟಲು ಸ್ನೇಹಿತರ ಸಹಾಯವಿತ್ತಾದರೂ, ಅವರು ನನಗಿಂತ ತುಂಬಾ ಅನುಭವಸ್ಥರೆನಿದ್ದಿಲ್ಲ. ಕಳ್ಳ ಸುಳ್ಳರೇ ತುಂಬಿರುವ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ, ಸುಣ್ಣಕ್ಕೂ ಬೆಣ್ಣೆಗೂ ವ್ಯತ್ಯಾಸ ತಿಳಿಯದ ನನಗೆ ಹೊಸ ಜಗತ್ತಿನ ಪಾಠಗಳ ಅನಾವರಣ ಆಗುತ್ತಲಿತ್ತು. ಒಪ್ಪಿಕೊಂಡು ಕೆಲಸಕ್ಕೆ ಬಂದ ಗಾರೆ ಕೆಲಸದವರು ಕೆಲಸದ ಅರ್ಧದಲ್ಲೇ ಕಣ್ಮರೆಯಾಗಿ ಬಿಡುತ್ತಿದ್ದರು. ಮತ್ತೆ ಅವರನ್ನು ನಾನು ಹುಡುಕಿ ತಂದು ಕೆಲಸಕ್ಕೆ ಹಚ್ಚಿದರೆ, ಕೆಲ ದಿನಗಳಲ್ಲಿ ಅವರು ಮತ್ತೆ ಕಣ್ಮರೆ. ಹೊಸಬರನ್ನು ಕೆಲಸಕ್ಕೆ ತಂದರೆ, ಹಳಬರು ಬಂದು ತಕರಾರು ತೆಗೆಯುತ್ತಿದ್ದರು. ನನ್ನ ಅನನುಭವದ ಜೊತೆಗೆ, ಶತ್ರುಗಳ ಕೈವಾಡವೂ ಸೇರಿ ಮನೆ ಕೆಲಸ ಮುಂದುವರೆಸುವುದು ಕಗ್ಗಂಟಾಗಿತ್ತು.
ಆ ಸಂದರ್ಭದಲ್ಲಿ ನನಗೆ ಭೇಟಿಯಾದವನೇ ರಮೇಶ. ಜನ ಅವನನ್ನು ಕರಾಟೆ ರಮೇಶ ಎನ್ನುತ್ತಿದ್ದರು. ಚಿಕ್ಕ ಮಕ್ಕಳಿಗೆ ಕರಾಟೆ ಹೇಳಿಕೊಡುತ್ತಿದ್ದ ಅವನಿಗೆ ಅದು ಹೊಟ್ಟೆ ತುಂಬಿಸದೆ, ತನ್ನ ಕುಲ ಕಸುಬಾದ ಗಾರೆ ಕೆಲಸಕ್ಕೆ ಇಳಿದಿದ್ದ. ಅವನು ಅರ್ಧಕ್ಕೆ ನಿಂತ ನನ್ನ ಮನೆ ಕೆಲಸವನ್ನು ಕೈಗತ್ತಿಕೊಂಡ. ಹಳಬರು ನನ್ನ ಜೊತೆ ತಕರಾರಿಗೆ ಬಂದು, ದೈಹಿಕ ಘರ್ಷಣೆಯ ಮಟ್ಟಕ್ಕೆ ಇಳಿದಾಗ ಈ ರಮೇಶ ನನ್ನ ನೆರವಿಗೆ ಧಾವಿಸಿ ಬಂದ. ಬಂದವರು ಕೈ ಕೈ ಹಿಸುಕಿಕೊಂಡು ಏನು ಮಾಡಲಾಗದೆ ಹಿಂತಿರುಗಿದರು. ಇನ್ನೊಂದು ದಿನ, ಈ ರಮೇಶನನ್ನು ನನ್ನ ಜೊತೆ ಹೋಟೆಲ್ ಒಂದಕ್ಕೆ ತಿಂಡಿಗೆ ಎಂದು ಕರೆದುಕೊಂಡು ಹೋಗಿದ್ದೆ. ಅಲ್ಲಿ ಅವಸರದಲ್ಲಿ ಆಫೀಸ್ ನವರು ನನಗೆ ಕೊಟ್ಟಿದ್ದ ದುಬಾರಿಯಾದ 'ಬ್ಲಾಕ್ ಬೆರಿ' ಫೋನ್ ಬೀಳಿಸಿಕೊಂಡು ಬಿಟ್ಟಿದ್ದೆ. ಅದನ್ನು ಬೇರೆಯವರು ತೆಗೆದುಕೊಂಡು ಆ ಕ್ಷಣವೇ ಅಲ್ಲಿಂದ ಪರಾರಿಯಾಗಿದ್ದರು. ಇದನ್ನೆಲ್ಲಾ ದೂರದಿಂದ ಗಮನಿಸಿದ್ದ ರಮೇಶ ಅವರ ಬೆನ್ನತ್ತಿ, ನನ್ನ ಫೋನ್ ವಾಪಸ್ಸು ತಂದಾಗ ನನಗೆ ಹೋದ ಜೀವ ಬಂದಂತಾಗಿತ್ತು. ನಾನು ನನ್ನ ಮನೆಯ ಕೆಲಸದ ಹೆಚ್ಚಿನ ಜವಾಬ್ದಾರಿ ಅವನಿಗೆ ಹೊರಿಸಿ, ಅವನು ಹೆಚ್ಚು ದುಡಿಯುವಂತೆ ನೋಡಿಕೊಂಡೆ. ಮುಗಿಸಲು ಸಾಧ್ಯವೇ ಎಂದುಕೊಂಡಿದ್ದ ಮನೆ ಕೆಲಸ ಕೆಲವು ತಿಂಗಳುಗಳಲ್ಲಿ ಮುಗಿದೇ ಹೋಯಿತು. ಗೃಹ ಪ್ರವೇಶದ ಪೂಜೆಗೆ, ರಮೇಶನಿಗೆ ಅವನಿಷ್ಟದ ಜೀನ್ಸ್ ಪ್ಯಾಂಟ್, ಜಾಕೆಟ್ ಕೊಡಿಸಿ ನಾನು ಸಂತಸ ಪಟ್ಟಿದ್ದೆ.
ಎಲ್ಲಿಯಾದರೂ ಹೊಸ ಕೆಲಸ ಕೊಡಿಸುವಂತೆ ನನಗೆ ರಮೇಶ ಗಂಟು ಬಿದ್ದಿದ್ದ. ಆದರೆ ಅಷ್ಟೇನೂ ಕೌಶಲ್ಯತೆ ಇಲ್ಲದ ಅವನಿಗೆ ಹೆಚ್ಚಿನ ಕೆಲಸ ದೊರಕುತ್ತಿದ್ದಿಲ್ಲ. ಆಗೊಮ್ಮೆ, ಈಗೊಮ್ಮೆ ಅನಿವಾರ್ಯ ಸಮಯದಲ್ಲಿ ನನ್ನ ಹತ್ತಿರ ದುಡ್ಡು ಕೇಳಿ ಪಡೆಯುತ್ತಿದ್ದ. ದುಡ್ಡಿನ ವಿಷಯದಲ್ಲಿ ಅವನು ಹೆಸರು ಕೆಡಿಸಿಕೊಂಡಿದ್ದಾನೆ ಎಂದು ನನಗೆ ಸ್ನೇಹಿತನೊಬ್ಬ ತಿಳಿಸಿದ್ದ. ಇದರ ನಡುವೆ ಅವನು ಕುಡಿಯುವುದು ಅತಿಯಾಗಿತ್ತು. ರಾತ್ರಿ ಕುಡಿದು ಫೋನ್ ಮಾಡಿ ನನ್ನ ಹತ್ತಿರ ಬೈಸಿಕೊಂಡಿದ್ದ. ನನ್ನ ಜಗತ್ತು ಮತ್ತು ಸಮಸ್ಯೆಗಳು ಕೂಡ ಬೇರೆಯಾಗಲಾರಂಭಿಸದ್ದವು. ಕೆಲ ವರ್ಷಗಳಿಗೆ ನನ್ನ ಮತ್ತು ರಮೇಶನ ಸಂಪರ್ಕ ಕಡಿದೇ ಹೋಯಿತು.
ಮೊನ್ನೆ ಊರಿಗೆ ಹೋದಾಗ ರಮೇಶನ ಬಗ್ಗೆ ವಿಚಾರಿಸಿದೆ. ಅವನು ಕೋವಿಡ್ ಸಮಸ್ಯೆಯಲ್ಲಿ ತೀರಿ ಹೋದ ಎಂದು ತಿಳಿಯಿತು. ಅವನಿಗೆ ಇತರ ಅನಾರೋಗ್ಯ ಇತ್ತು ಎಂದು ಕೂಡ ತಿಳಿಸಿದರು. ಕೆಲ ತಿಂಗಳುಗಳ ಹಿಂದೆ ನಮ್ಮ ಮನೆಯ ಒಂದು ಚಿಕ್ಕ ಕೆಲಸ ಮಾಡಿಕೊಟ್ಟು ಹೋಗಿದ್ದ. ಅಷ್ಟೊತ್ತಿಗೆ ಆಗಲೇ ಅವನಲ್ಲಿ ಅನಾರೋಗ್ಯ ಮನೆ ಮಾಡಿತ್ತು. ಒಂದು ಸಲ ಭೇಟಿಯಾದರೆ ಆಯಿತು ಎಂದು ನಾನು ಅಂದುಕೊಳ್ಳುವಷ್ಟರಲ್ಲಿ ಅವನು ಲೋಕವನ್ನೇ ತ್ಯಜಿಸಿದ್ದ.
ಅಂತಹ ಹೇಳಿಕೊಳ್ಳುವಂತ ಕೆಲಸಗಾರ ಅವನಾಗಿರಲಿಲ್ಲ. ಹಾಗಾಗಿ ನನ್ನ ಊರಿನಲ್ಲಿ ಮತ್ತು ನನ್ನ ಸ್ನೇಹಿತರಲ್ಲಿ ಅವನಿಗೆ ಯಾವ ವಿಶೇಷ ಸ್ಥಾನವು ಇರಲಿಲ್ಲ. ಆದರೆ ಬುದ್ಧಿ ತಿಳಿಯದ ಸಮಯದಲ್ಲಿ, ನನಗೆ ಆಸರೆಯಾಗಿ ನಿಂತಿದ್ದ. ಅಸಹಾಯಕ ಪರಿಸ್ಥಿತಿಯಲ್ಲಿ, ನನ್ನ ಕೈ ಬಲ ಪಡಿಸಿದ್ದ. ಅವನ ಸಾವಿನ ಸುದ್ದಿ ನೆರವಾದವರು ಕಣ್ಮರೆಯಾದಾಗ ಹುಟ್ಟಿಸುವ ವಿಷಾದವನ್ನು ನನ್ನಲ್ಲಿ ಕೂಡ ಹುಟ್ಟಿಸಿ ಹೋಯಿತು.