Friday, June 9, 2023

ಋಷಿಗಳು vs ಬುದ್ಧ

ಹಿಂದಿನ ಕಾಲದಲ್ಲಿ ಋಷಿಗಳು ಹೇಗೆ ಬದುಕಿದ್ದರು ಎನ್ನುವ ಚಿತ್ರಗಳನ್ನು ಗಮನಿಸಿ ನೋಡಿ. ಅವರುಗಳು ಉದ್ದನೆಯ ಗಡ್ಡ ಬಿಟ್ಟಿರುತ್ತಿದ್ದರು. ಅವರು ವೇದ-ಉಪನಿಷತ್ತುಗಳ  ಕರ್ತೃಗಳು  ಅಥವಾ ಅವುಗಳನ್ನು ಭೋಧಿಸುವವರು ಆಗಿದ್ದರು. ಅವರುಗಳು ಊರ ಹೊರಗಡೆ ಆಶ್ರಮಗಳಲ್ಲಿ ವಾಸಿಸುತ್ತಿದ್ದರು. ಅಲ್ಲಿ ಅವರ ಜೊತೆ ಅವರ ಹೆಂಡತಿ-ಮಕ್ಕಳು ಕೂಡ ವಾಸ ಆಗಿರುತ್ತಿದ್ದರು. ಅವರುಗಳು ತಮ್ಮ ದೇಶದ ರಾಜನಿಗೆ ಉಪದೇಶ ಮಾಡುವುದು, ಅವನ ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊರುವುದು ಇತ್ಯಾದಿ ಕೆಲಸಗಳಿಗೆ ನೆರವಾಗುತ್ತಿದ್ದರು. ಹಾಗೆಯೇ ಅವರಿಗೆ ತೊಂದರೆ ಕೊಟ್ಟವರಿಗೆ ಶಾಪ ಕೊಟ್ಟ ಉದಾಹರಣೆಗಳು ಏನೂ ಕಡಿಮೆ ಇಲ್ಲ. ಎಷ್ಟು ದೊಡ್ಡ ಋಷಿಯೊ, ಶಾಪ ಕೂಡ ಅಷ್ಟೇ ದೊಡ್ಡದಾಗಿರುತ್ತಿತ್ತು.


ಬುದ್ಧನ ಚಿತ್ರಗಳು ಅವನಿಗೆ ಮೀಸೆ-ಗಡ್ಡ ಇರುವುದು ತೋರಿಸಲಿಲ್ಲ.ಅವನು ಮೂರ್ತಿ ಪೂಜೆಯ ವಿರೋಧಿ ಆಗಿದ್ದ. ಅವನು ಹೆಂಡತಿ-ಮಕ್ಕಳನ್ನು ಬಿಟ್ಟು ಬಂದಿದ್ದ. ಅವನು ಒಂದು ಸ್ಥಳದಲ್ಲಿ ವಾಸ ಮಾಡದೆ ಅಲೆಮಾರಿಯಾಗಿದ್ದ. ಅವನು ರಾಜ ಮತ್ತು ಸಾಮಾನ್ಯರ ನಡುವೆ ಭೇಧ-ಭಾವ  ತೋರಿಸಲಿಲ್ಲ. ಅವನು ವೇದಾಭ್ಯಾಸ ಮಾಡಲಿಲ್ಲ. ದೇವರನ್ನು ನಂಬು ಎಂದು ಹೇಳಲಿಲ್ಲ. ಬದಲಿಗೆ ನಮ್ಮ ಆಸೆಗಳಿಗೆ ನಮ್ಮನ್ನೇ ಹೊಣೆಗಾರರನ್ನಾಗಿ ಮಾಡಿದ. ಅವನು ಸಿಟ್ಟಾದ ಅಥವಾ ಶಾಪ ಕೊಟ್ಟ ಉದಾಹರಣೆಗಳೇ ಇರಲಿಲ್ಲ. ಬುದ್ಧ ಗುರುವಿನ ಬಳಿ ಕಲಿತು ಜ್ಞಾನಿ ಆಗಲಿಲ್ಲ ಮತ್ತು ಜ್ಞಾನದ ಬಗ್ಗೆ ಭೋದಿಸಲಿಲ್ಲ. ಆದರೆ ಅವನು ಸ್ವಂತ ಅನುಭವದ ಜ್ಞಾನಿಯಾಗಿದ್ದ. ಅದನ್ನೇ ಸರಳ ಮಾತುಗಳಲ್ಲಿ ಹೇಳಿದ.


ಬುದ್ಧ ಯಾವ ಅವಮಾನಕ್ಕೂ ಸ್ಪಂದಿಸಲಿಲ್ಲ. ಅವನು ಕ್ಷಮಿಸಿದನೋ ಅಥವಾ ನಿರ್ಲಕ್ಷ್ಯ ಮಾಡಿದನೋ ಕೂಡ ಯಾರಿಗೂ ತಿಳಿಯಲಿಲ್ಲ.

ಬೆಂಗಳೂರಿನ ನಾನಾ ಮುಖಗಳು

ಸುಮಾರು ಒಂದೂವರೆ ಕೋಟಿ ಜನ ಜೀವನ ಸಾಗಿಸುವ ಬೆಂಗಳೂರು ನಗರಿಯಲ್ಲಿವಾಸಿಸುವ ಎಲ್ಲ ಜನರ ಅನುಭವಗಳು ಒಂದೇ ಆಗಿರಲು ಸಾಧ್ಯ ಇಲ್ಲ. ಇಲ್ಲಿ ಕೆಲವೇ ಸಾವಿರದಲ್ಲಿ ತಿಂಗಳ ಖರ್ಚು ನೀಗಿಸುವ ಕುಟುಬಗಳು ಇವೆ. ಹಾಗೆಯೇ ಕೋಟಿ ಹಣ ಖರ್ಚು ಮಾಡುವ ಕುಟುಂಬಗಳು ಕೂಡ ಇವೆ. ಮಂದ ಗತಿಯಲ್ಲಿ ಸಾಗುವ ಬಿಎಂಟಿಸಿ ಬಸ್ಸುಗಳಲ್ಲಿ ಪ್ರಯಾಣ ಮಾಡುವ ಜನ ಇದ್ದಾರೆ. ಅದೇ ರಸ್ತೆಗಳಲ್ಲಿ ಐಷಾರಾಮಿ ಕಾರುಗಳಲ್ಲಿ ಪ್ರಯಾಣ ಮಾಡುವ ಜನ ಕೂಡ ಅಷ್ಟೇ ಇದ್ದಾರೆ. ವಿಕ್ಟೋರಿಯಾ-ಬೌರಿಂಗ್ ಆಸ್ಪತ್ರೆಗಳಲ್ಲಿ ವಾರಸುದಾರರಿಲ್ಲದ ಶವಗಳು ಇವೆ. ಲಕ್ಸುರಿ ಆಸ್ಪತ್ರೆಗಲ್ಲಿ ಸತ್ತವರಿಗೆ ಕಣ್ಣೀರು ಸುರಿಸದ ಆದರೆ ಅಪಾರ ಸಂಪತ್ತಿಗೆ ವಾರಸುದಾರರು ಆದವರು ಕೂಡ ಇದ್ದಾರೆ. ಇಲ್ಲಿ ಹಳ್ಳಿ-ಚಿಕ್ಕ ಊರುಗಳಲ್ಲಿ ಇರುವ ಹಾಗೆ ಒಂದು ತರಹದ ಸಂಸ್ಕೃತಿ ಇಲ್ಲವೇ ಇಲ್ಲ. ಇದು ಅನೇಕ ವಿರೋಧಾಭಾಸಗಳು ಒಟ್ಟಿಗೆ ಕಾಣುವ ಊರು.

ನಿಮಗೆ ಬೆಂಗಳೂರು ಅಂದರೆ ಏನು? ಗಿಜಿಗುಟ್ಟುವ ಮೆಜೆಸ್ಟಿಕ್ ಅಷ್ಟೇನಾ? ಜೇಬಿಗೆ ಭಾರ ಎನ್ನಿಸುವ ಮಹಾತ್ಮಾ ಗಾಂಧೀ ರಸ್ತೆಯ ಅಂಗಡಿಗಳಾ? ರಾಜಕೀಯ ಶಕ್ತಿ ಪ್ರದರ್ಶನ ಮಾಡುವ ವಿಧಾನ ಸೌಧವಾ? ಅನೇಕ ಸಿನಿಮಾ ನಟರ ಮನೆಗಳಾ? ವೈಟ್ ಫೀಲ್ಡ್ ನಲ್ಲಿ ಓಡಾಡಿ ಇದು ಅಮೆರಿಕಕ್ಕೆ ಕಡಿಮೆ ಇಲ್ಲ ಅಂದು ಕೊಳ್ಳುವುದಾ? ಜಯದೇವ ಅಥವಾ ನಾರಾಯಣ ಆಸ್ಪತ್ರೆಗೆ ಓಡಾಡಿ ಸಂಬಂಧಿಕರ ಜೀವ ಉಳಿಸಿಕೊಳ್ಳಲು ಹೆಣಗುವುದಾ?  ದೇವನಹಳ್ಳಿಯ ವಿಮಾನ ನಿಲ್ದಾಣಕ್ಕೆ ಹೋಗಿ, ಇದು ಭಾರತ ಎನ್ನುವ ಬಡ ದೇಶದ ಭಾಗವೇ ಎಂದು ನಿಮಗೆ ನೀವೇ ಪ್ರಶ್ನೆ ಕೇಳಿಕೊಳ್ಳುವುದಾ?

ರವಿ ಬೆಳಗೆರೆ ಪುಟಗಟ್ಟಲೆ ಬರೆದ ಬೆಂಗಳೂರಿನ ಭೂಗತ ಲೋಕ ಇನ್ನೂ ಮರೆಯಾಗಿಲ್ಲ ಎನ್ನುವುದು ನನಗೆ ಇತ್ತೀಚಿಗೆ ಚಿತ್ರಮಂದಿರದಲ್ಲಿ 'ಹೆಡ್ ಬುಷ್' ಎನ್ನುವ ಚಿತ್ರ ನೋಡುವಾಗ ಅಲ್ಲಿ ನೋಡುಗರಲ್ಲಿ ನಡೆದ ವಾಗ್ವಾದ ನೋಡಿ ಮನೆವರಿಕೆ ಆಯಿತು. ಮೆಜೆಸ್ಟಿಕ್ ಮೆಟ್ರೋ ಸ್ಟೇಷನ್ ನಲ್ಲಿ ಸಾವಿರಾರು ಪ್ರಯಾಣಿಕರನ್ನು ವ್ಯವಸ್ಥಿತವಾಗಿ ನಿರ್ವಹಿಸಿವುದು ನೋಡಿ ನ್ಯೂಯಾರ್ಕ್ ನಗರದ ಜಾನ್ ಎಫ್ ಕೆನಡಿ ವಿಮಾನ ನಿಲ್ದಾಣದ ಜನಸಂದಣಿಗೆ ಏನು ಕಡಿಮೆ ಇಲ್ಲ ಎನಿಸಿತು. ನಮ್ಮ ಮನೆ ಹತ್ತಿರ ಒಬ್ಬ ಗಂಡ-ಮಕ್ಕಳಿಲ್ಲದ ಹೆಣ್ಣು ಮಗಳು ನಡೆಸುವ ಅನಾಥಾಶ್ರಮ ನೋಡಿ ಇದೆ ದೇಶದಲ್ಲಿ ಮದರ್ ತೆರೇಸಾ ಬದುಕಿದ್ದಲ್ಲವೇ ಎಂದು ನೆನಪಾಯಿತು.

ನಾನು ಮೊದಲು ಬೆಂಗಳೂರಿಗೆ ಬಂದದ್ದು ಶಾಲೆ ಪ್ರವಾಸದ ವೇಳೆ. ನಂತರ ಕಾಲೇಜು ಕಲಿಯುವಾಗ ತರಬೇತಿಗೆ ಎಂದು ಒಂದು ತಿಂಗಳು ಇದ್ದೆ. ನಂತರ 1999 ಆಗಸ್ಟ್  ೧೫ ರಂದು ನೌಕರಿ ಹುಡುಕಿಕೊಂಡು ಬಂದ ಮೇಲೆ ಇದೆ ನನ್ನ ಮನೆಯಾಗಿದೆ. ಬರೀ ನನ್ನ  ಜೀವನೋಪಾಯಕ್ಕಲ್ಲದೆ ಅವಲಂಬಿತರಿಗೆ ಸಹಾಯ ಮಾಡುವಷ್ಟು ಶಕ್ತಿ ತುಂಬಿದೆ. ಸುಮಾರು ಇಪ್ಪತ್ತು ನಾಲ್ಕು ವರುಷಗಳನ್ನು ಇಲ್ಲಿ ಕಳೆದ ಮೇಲೂ, ಈ ನಗರ ನನಗೆ ಅಚ್ಚರಿ ತರುತ್ತದೆ.

ಹಿಂದೆ ನಾನ್ನು ಜೀವನ ಕಳೆದ ಊರುಗಳಲ್ಲಿ ಇದ್ದ ಹಾಗೆ ಇಲ್ಲಿ ಯಾರು ಸಾಧು-ಸಂತರಿಲ್ಲ. ಹಿಂದೆ ನಾನು ಇದ್ದ ಕಲ್ಬುರ್ಗಿಯಲ್ಲಿ ಶರಣಬಸವ ಅಪ್ಪನ ಗುಡಿಯಿತ್ತು. ಹುಬ್ಬಳ್ಳಿಯಲ್ಲಿ ಸಿದ್ಧಾರೂಢರ ಮಠ ಇತ್ತು. ಬೆಂಗಳೂರಿನಲ್ಲಿ ಇರುವುದು ಭಕ್ತರನ್ನು ಯಾಮಾರಿಸುವ ನಕಲಿ ಸ್ವಾಮಿಗಳು. ಇಲ್ಲಿ ಬೆವರನ್ನು ನಂಬಿ ಬದುಕುವ ಸಾಮಾನ್ಯರ ಹಾಗೆಯೇ ಮೋಸ ಮಾಡಿಯೇ ಜೀವನ ಸಾಗಿಸುವ ಜನರ ಸಂಖ್ಯೆ ಕೂಡ ಕಡಿಮೆ ಇಲ್ಲ. ಆದರೆ ಅವೆಲ್ಲ ವಿರೋಧಾಭಾಸಗಳ ನಡುವೆ ಇದು ಕೋಟ್ಯಂತರ ಜನರಿಗೆ ಆಶ್ರಯ ನೀಡಿದೆ.

ನಮ್ಮ ಆಫೀಸಿನ ಹೊರಗಡೆ ವೀರಭದ್ರೇಶ್ವರ ಖಾನಾವಳಿ ಇದ್ದ ಹಾಗೆ, ಆಂಧ್ರ ಬಿರಿಯಾನಿ ಊಟ ಕೂಡ ಅಷ್ಟೇ ಫೇಮಸ್. ಪಕ್ಕದಲ್ಲೇ ಬಂಗಾಳಿಯ ಶೈಲಿಯ ಮೀನು ಮಾಡುವ ಅಂಗಡಿ ಇದೆ. ಪಂಜಾಬಿ ಊಟ ಕೂಡ ಅದರ ಪಕ್ಕದಲ್ಲೇ. ಭಾರತದಲ್ಲಿ ಇರುವ ಎಲ್ಲ ತರಹದ ಅಡುಗೆ ಶೈಲಿಯ ಊಟಗಳು ಇಲ್ಲಿ ಲಭ್ಯ. ಅಷ್ಟೇ ಅಲ್ಲ. ಇಲ್ಲಿಗೆ ಭೇಟಿ ನೀಡುವ ವಿದೇಶಿಗರ ಅನುಕೊಲಕ್ಕಾಗಿ ಕಾಂಟಿನೆಂಟಲ್ ರುಚಿಗಳು ಕೂಡ ಲಭ್ಯ.

ಜೋಪಡಿಗಳಲ್ಲಿ, ತಾತ್ಕಾಲಿಕ ಶೆಡ್ ಗಳಲ್ಲಿ ಜನ ವಾಸ ಮಾಡಿದ ಹಾಗೆ  ಮಯ ನಿರ್ಮಿಸಿದ ಇಂದ್ರಪ್ರಸ್ಥದ ಹಾಗಿರುವ ಮನೆಗಳಲ್ಲಿ ಕೂಡ ಜನ ವಾಸ ಮಾಡುವುದು ನೀವು ಇಲ್ಲಿ ಗಮನಿಸಬಹುದು. ನಿಮಗೆ ದೇಶ ಸುತ್ತಲು ಸಾಧ್ಯ ಆಗದಿದ್ದರೆ, ಬೆಂಗಳೂರನ್ನು ಒಂದೆರಡು ಸಲ ಸುತ್ತಿ ಬಂದರೆ ಅಡ್ಡಿ ಇಲ್ಲ ಎನ್ನಬಹುದು. ತರಹೇವಾರಿ ಜನರನ್ನು ಮತ್ತು ವಿಶಿಷ್ಟ ಅನುಭವಗಳನ್ನು ಒಂದೇ ಸ್ಥಳದಲ್ಲಿ ಕೊಡುವ ಊರು ನಮ್ಮ ಬೆಂಗಳೂರು. ಇದು ನನಗೆ ಕೊಟ್ಟ ಅವಕಾಶಕ್ಕೆ ನಾನು ಋಣಿ.

ಮಗಳ ದೌರ್ಬಲ್ಯಗಳನ್ನು ಮುಚ್ಚಿ ಹಾಕಿದ ನಂತರ

'ಕೆಟ್ಟ ತಂದೆ ಇರಬಹುದು ಆದರೆ ಕೆಟ್ಟ ತಾಯಿ ಇರಲು ಸಾಧ್ಯ ಇಲ್ಲ' ಎನ್ನುವುದು ಸಾಕಷ್ಟು ಜನರ ಅನುಭವದ ಮಾತು. ಹಾಗೆಯೇ ಮುಂದೆ ಹೋಗಿ 'ಕೆಟ್ಟ ಮಗ ಹುಟ್ಟಬಹುದು ಆದರೆ ಕೆಟ್ಟ ಮಗಳು ಹುಟ್ಟಲು ಸಾಧ್ಯ ಇಲ್ಲ' ಎಂದು ಕೂಡ ಹೇಳಬಹುದು. ಸಾಕಷ್ಟು ಜನ ತಂದೆಯರಿಗೆ ತಮ್ಮ ಹೆಣ್ಣು ಮಕ್ಕಳೆಂದರೆ ಹೆಮ್ಮೆ. ಕಡೆಯ ಕಾಲದಲ್ಲಿ ಗಂಡು ಮಕ್ಕಳು - ಸೊಸೆಯಂದಿರು ಊಟ ಹಾಕದಿದ್ದಾಗ ತಮ್ಮ ತಂದೆ-ತಾಯಿಯನ್ನು ಸಲಹುವ ಹಲವಾರು ಹೆಣ್ಣು ಮಕ್ಕಳನ್ನು ನಾನು ನೋಡಿದ್ದೇನೆ. ತಂದೆ-ತಾಯಿಗೆ ಧೈರ್ಯ ಹೇಳುವ ಕೆಲಸ ಬೆಳೆದ ಹೆಣ್ಣು ಮಕ್ಕಳು ಮಾಡಿದರೆ, ಹೆಚ್ಚಿನ ಗಂಡು ಮಕ್ಕಳು ಅವರ ಪೋಷಕರಿಗೆ ತಲೆ ನೋವಾಗಿರುತ್ತಾರೆ.

ಹೆಣ್ಣು ಮಕ್ಕಳ ಮೇಲೆ ಇರುವ ಪ್ರೀತಿ, ತಂದೆಗೆ ಗಂಡು ಮಕ್ಕಳ ಮೇಲೆ ಇರಲು ಸಾಧ್ಯ ಇಲ್ಲ.  ಹಾಗೆಯೆ ಹೆಣ್ಣು ಮಕ್ಕಳಿಗೆ ಕೂಡ ತಂದೆಯೇ ಅವರ ಜೀವನದ ಮೊದಲ ಹೀರೋ. ಬೇರೆ ಯಾರು ಆ ಸ್ಥಾನಕ್ಕೆ ಪೈಪೋಟಿ ನೀಡಲು ಸಾಧ್ಯ ಇಲ್ಲವೇ ಇಲ್ಲ. ಇದನ್ನು ಬಹಳಷ್ಟು ಕುಟುಂಬಗಳಲ್ಲಿ ಗಮನಿಸಬಹುದು. ತಂದೆಯ ದೌರ್ಬಲ್ಯಗಳನ್ನು ಮಗಳು ಮುಚ್ಚಿ ಹಾಕಿದರೆ, ತಂದೆಗೆ ಅವನ ಮಗಳಲ್ಲಿ ದೌರ್ಬಲ್ಯಗಳನ್ನು ಹುಡುಕುವುದು ಸಾಧ್ಯವೇ ಆಗುವುದಿಲ್ಲ. ಪ್ರಕೃತಿ ಹುಟ್ಟು ಹಾಕಿದ ಈ ತಂದೆ-ಮಗಳ ಸಂಬಂಧ, ಮಗಳು ಮದುವೆ ಆಗುವವರೆಗೆ ಚೆನ್ನಾಗಿಯೇ ಇರುತ್ತದೆ. ಆದರೆ ಅಲ್ಲಿಂದ ಅದು ಬೇರೆಯೇ ಸಮಸ್ಯೆಗಳನ್ನು ಹುಟ್ಟು ಹಾಕುತ್ತದೆ.

ಮಗಳು ತನ್ನ ತಂದೆಯ ಮೇಲೆ ತೋರಿದ ಪ್ರೇಮ, ಮದುವೆ ಆದ ನಂತರ ಮಗಳು ತನ್ನ ಗಂಡ ಮತ್ತು ಅವನ ಕುಟುಂಬದವರ ಜೊತೆ ತೋರಲು ಸಾಧ್ಯ ಇಲ್ಲ. ತಂದೆ ಸೋಂಭೇರಿ ಆಗಿದ್ದರೂ ಸಹಿಸಿಕೊಳ್ಳುವ ಮಗಳು, ತನ್ನ ಗಂಡ-ಮಾವ-ಅತ್ತೆ ಸೋಂಭೇರಿಗಳಾಗಿದ್ದರೆ ಯಾವುದೇ ಮುಲಾಜಿಲ್ಲದೆ ಮಾನ ಹರಾಜು ಮಾಡಿಬಿಡುತ್ತಾಳೆ. ಇದು ಕೂಡ ಸಾಕಷ್ಟು ಮನೆಗಳ ಸಂಗತಿ.

ಆದರೆ ಆ ಮಗಳಲ್ಲಿ ಕೂಡ ಲೋಪ-ದೋಷಗಳು ಇರುತ್ತಲ್ಲವೇ? ಅದನ್ನು ಮಗಳು ತನ್ನ ಮನೆಯಲ್ಲಿದ್ದಾಗ ಮುಚ್ಚಿ ಹಾಕಿದ ಹಾಗೆ, ಮದುವೆ ಆದ ನಂತರ ಕೂಡ ಅವನ ಮಗಳ ಕುಟುಂಬದಲ್ಲಿ ತಲೆ ಹಾಕಿ ಅವುಗಳನ್ನು ಮುಚ್ಚಿ ಹಾಕುತ್ತ ಹೋದರೆ, ಆ ತಂದೆ ಬಹು ಬೇಗ ಮರ್ಯಾದೆ ಕಳೆದು ಕೊಳ್ಳುತ್ತಾನೆ. ಅವನಿಗೆ ಮಗಳು ಮಾಡುವ ಕೆಲಸಗಳು ಸಹಜ ಅನ್ನಿಸಬಹುದು. ಆದರೆ ಅದೇ ಕೆಲಸಗಳನ್ನು ಅವನ ಸೊಸೆ ಮಾಡಿದರೆ ಅವನು ಸಹಿಸಿಕೊಳ್ಳುವುದಿಲ್ಲ. ಈ ತರಹದ ವಿರೋಧಾಭಾಸಗಳು ಅವನ ಮಗಳು ತಪ್ಪು ತಿದ್ದಿಕೊಳ್ಳುವುದು ಬಿಟ್ಟು, ಅವುಗಳನ್ನು ಹೆಚ್ಚಿಗೆ ಮಾಡುವಂತೆ ಪ್ರಚೋದಿಸುತ್ತವೆ. ಇತ್ತೀಚಿಗೆ ಮದುವೆ ಮುರಿದು ಬಿದ್ದ ಕುಟುಂಬಗಳನ್ನು ಗಮನಿಸುತ್ತಾ ಹೋದರೆ ಅಲ್ಲಿ ಮಗಳಿಗೆ ಬುದ್ಧಿ ಹೇಳದ ತಂದೆಯ ಪಾತ್ರ ಕೂಡ ಗಮನಿಸಬಹುದು.

ತಂದೆಯ ಹತ್ತಿರ ಮಗಳು ಹೇಗೆ ನಡೆಕೊಳ್ಳುತ್ತಾಳೋ, ಅವಳು ಇತರರ ಜೊತೆ ಹಾಗೆ ನಡೆದು ಕೊಳ್ಳುತ್ತಿರುವುದಿಲ್ಲ. ಇದನ್ನು ಗಮನಿಸಲು ತಂದೆ ಸೋತು ಹೋಗುತ್ತಾನೆ. ಮಗಳ ಮೇಲಿನ ಕುರುಡು ಪ್ರೇಮ ಕೂಡ ಅದಕ್ಕೆ ಕಾರಣ ಆಗಿರುತ್ತದೆ. ಅವನು ಮಗಳು ಕೂಡ ತಂದೆ ಜೊತೆ ಸಂಬಂಧ ನಿಭಾಯಿಸಿದ ಹಾಗೆ ಉಳಿದ ಸಂಬಂಧಗಳನ್ನು ನಿಭಾಯಿಸಲು ಸೋತು ಹೋಗುತ್ತಾಳೆ.

ತಂದೆ ಸತ್ತ ಮೇಲೆ ಮಗಳ ಜೀವನ ಮುಂದುವರೆಯಬೇಕಲ್ಲವೇ? ಮಗಳಿಗೆ ಬೇಕಿರುವುದು ತಂದೆಯ ವಿವೇಕ ಮತ್ತು ಅನುಭವ ಅಲ್ಲದೇ ತಂದೆಯ ಮಿತಿ ಮೀರಿದ ಪ್ರೇಮ ಅಲ್ಲ. ಕ್ಷಮಿಸಿ, ಇದು ಎಲ್ಲ ಮನೆಯಲ್ಲಿ ನಡೆಯುವ ಸಂಗತಿ ಅಲ್ಲ. ಆದರೆ ಅನವಶ್ಯಕ ಎನ್ನಿಸುವಷ್ಟು ಮಗಳಿಗೆ ಬೆಂಬಲ ನೀಡುವ ತಂದೆ ಇದ್ದರೆ, ಆ ಮಗಳು ತನ್ನ ಗಂಡನ ಮನೆ ಬಿಟ್ಟು ಬರುವ ಸಾಧ್ಯತೆಗಳು ಕೂಡ ಅಷ್ಟೇ ಜಾಸ್ತಿ ಎನ್ನುವುದು ನನ್ನ ಸ್ವಂತ ಅನುಭವ.

Wednesday, May 17, 2023

ಮುಳುಗುತ್ತಿರುವ ಸೂರ್ಯನತ್ತ ನಡೆದು ಹೋಗುವ ಮುನ್ನ

ಇಂದು ಟಿವಿಯಲ್ಲಿ ಸುಮ್ಮನೆ ಚಾನೆಲ್ ಬದಲು ಮಾಡುತ್ತಿದ್ದಾಗ ಅದರಲ್ಲಿ 'ಜೀವನ ಚೈತ್ರ' ಚಲನ ಚಿತ್ರ ಬರುತ್ತಿದ್ದದ್ದು ಗಮನಿಸಿದೆ. ಆ ಚಿತ್ರ ಅದಾಗಲೇ ಅರ್ಧಕ್ಕಿಂತ ಹೆಚ್ಚು ಮುಗಿದು ಹೋಗಿತ್ತು. ಆಗಲೇ ಒಂದೆರಡು ಬಾರಿ ನೋಡಿದ್ದ ನೆನಪಿದ್ದರೂ ಮತ್ತೆ ನೋಡುವ ಕುತೂಹಲ ಹುಟ್ಟಿತು. 'ಗಂಗಾ ಮಾ, ಜೈ ಜೈ  ಗಂಗಾ ಮಾ' ಎನ್ನುವ ಹಿನ್ನೆಲೆ ಸಂಗೀತದೊಂದಿಗೆ ಅಣ್ಣಾವ್ರು ಹಿಮಾಲಯದ ಪುಣ್ಯಕ್ಷೇತ್ರಗಳ ದರ್ಶನ ಮಾಡುತ್ತಾರಲ್ಲ. ಅಲ್ಲಿಂದ ಕೊನೆಯವರೆಗೆ ಟಿವಿ ಬಿಟ್ಟು ಬೇರೆ ಎಲ್ಲೂ ಹೋಗಲಿಲ್ಲ ನಾನು.

'ನಾದಮಯ ಈ ಲೋಕವೆಲ್ಲಾ' ಎನ್ನುವ ಅದ್ಭುತ ಹಾಡಿನಲ್ಲಿ ನಮಗೆ ಗಂಗೋತ್ರಿ, ಗೋಮುಖ, ಕೇದಾರನಾಥ, ಬದರೀನಾಥ, ದೇವಪ್ರಯಾಗ ಕೊನೆಗೆ ಹರಿದ್ವಾರವನ್ನು ತೋರಿಸುತ್ತ ಅಧ್ಯಾತ್ಮ ಲೋಕಕ್ಕೆ ಸೆಳೆಯುವ ಹಾಡು ಹಾಡುವ ಅಣ್ಣಾವ್ರಿಗೆ ತಮ್ಮ ಊರಿನವನನ್ನು ನೋಡಿ ಜ್ಞಾಪಕ ಮರಳುತ್ತದೆ. ತಾಯಿಯನ್ನು ಕಾಣುವ ಆಸೆಯೊಂದಿಗೆ ಊರಿಗೆ ಮರಳುತ್ತಾರೆ ವಿಶ್ವನಾಥ ಜೋಡೀದಾರ.

ತಮ್ಮ ಮನೆಯಲ್ಲಿ ನಡೆದಿರುವ ಕುಡುಕರ ಸಮಾರಾಧನೆಯನ್ನು ಕಂಡು ಸಿಡಿದೇಳುವ ಅಣ್ಣಾವ್ರ ಅಭಿನಯ, ಸಂಭಾಷಣೆಗಳು ಅಮೋಘ. 'ಎಲ್ಲೋ ಅಮ್ಮ' ಎಂದು ತಮ್ಮ ಮಗನನ್ನು ಹಿಡಿದೆತ್ತುವ ಸ್ಥೈರ್ಯ ಅವರ ಪಾತ್ರಗಳಿಗಲ್ಲದೆ ಬೇರೆ ಯಾರಿಗುಂಟು? ಮಗ ಇನ್ನು ಸತ್ತಿಲ್ಲ ಎನ್ನುವ ನಂಬಿಕೆ ಸುಳ್ಳು ಮಾಡದೆ ಅವರ ಅಮ್ಮನಿಗೆ ತಮ್ಮ ತೋಳಿನಲ್ಲೇ ನೆಮ್ಮದಿಯ ಕೊನೆ ಉಸಿರು ಬಿಡುವ ಅವಕಾಶ ವಿಶ್ವನಾಥ ಜೋಡೀದಾರ ಪಾತ್ರಕ್ಕೆ. ನಂತರ ಮದಿರೆ ತಯಾರಿಸುವ ಕಾರ್ಖಾನೆ ಮುಚ್ಚಿಸಿ, ಉಯಿಲು ಬರೆದಿಟ್ಟು ಮುಳುಗುತ್ತಿರುವ ಸೂರ್ಯನತ್ತ ನಡೆದು ಹೋಗುವ ರಾಜಕುಮಾರ್ ಅವರ ಅಭಿನಯ ಅದ್ಭುತ.

ಅದೇ ಅಣ್ಣಾವ್ರ ಸೂಪರ್ ಹಿಟ್ ಚಿತ್ರ ಎನ್ನಿಸಿಕೊಂಡ, ೧೯೭೨ ರಲ್ಲಿ ಬಿಡುಗಡೆಗೊಂಡ 'ಬಂಗಾರದ ಮನುಷ್ಯ' ಚಿತ್ರದಲ್ಲಿ ಕೂಡ ಕೊನೆಯ ಸನ್ನಿವೇಶ ಮುಳುಗುತ್ತಿರುವ ಸೂರ್ಯನತ್ತ ನಡೆದು ಹೋಗುವುದೇ ಇದೆ. ಆದರೆ ಆ ಚಿತ್ರದುದ್ದಕ್ಕೂ ಯಾವ ಪ್ರಯತ್ನ ಬಿಡದೆ ಆದರೆ ಕೊನೆಗೆ ಹತಾಶೆಗೊಂಡು, ಸೋತು ಹೋಗಿ, ಮುಳುಗುತ್ತಿರುವ ಸೂರ್ಯನತ್ತ ನಡೆದು ಹೋಗುವುದೇ ಬೇರೆ. ಮತ್ತು 'ಜೀವನ ಚೈತ್ರ'ದ ಸಂತೃಪ್ತ ಜೀವನ ನಡೆಸಿ, ಆತ್ಮ ತೃಪ್ತಿಯೊಂದಿಗೆ ಮುಳುಗುತ್ತಿರುವ ಸೂರ್ಯನತ್ತ ನಡೆದು ಹೋಗುವುದೇ ಬೇರೆ.

ಎಲ್ಲರ ಜೀವನವೂ ಕೊನೆಯಾಗುತ್ತದೆ. ಅದನ್ನೇ ಚಿತ್ರದಲ್ಲಿ ಮುಳುಗುತ್ತಿರುವ ಸೂರ್ಯನತ್ತ ನಡೆದು ಹೋಗುವುದರ ಮೂಲಕ ನಿರ್ದೇಶಕ ತೋರಿಸುತ್ತಾನೆ. ೧೯೭೨ರ  'ಬಂಗಾರದ ಮನುಷ್ಯ' ದ ರಾಜೀವನ ಪಾತ್ರ ಮತ್ತು ೧೯೯೨ರ  'ಜೀವನ ಚೈತ್ರ'ದ ವಿಶ್ವನಾಥ ಜೋಡೀದಾರ ಪಾತ್ರ ಹೊರತಲ್ಲ. ಆದರೆ ಆ ಎರಡು ಕಥೆಗಳು ಅಂತ್ಯಗೊಳ್ಳುವ ಸಂದರ್ಭಗಳು ಬೇರೆ ಬೇರೆ. ಮತ್ತು ಆ ಎರಡು ಚಿತ್ರಗಳಲ್ಲಿ ಅಭಿನಯಿಸಿದ ಅಣ್ಣಾವ್ರು ಆ ಪಾತ್ರಗಳಿಗೆ ತುಂಬಿದ ಜೀವಕಳೆಯು ಕೂಡ ಬೇರೆ.

ಅದು ಬರೀ ಕಥೆಗಳಿಗಷ್ಟೇ ಸೀಮಿತವಲ್ಲ. ನನಗೆ, ನಿಮಗೆ ಕೂಡ ಮುಳುಗುತ್ತಿರುವ ಸೂರ್ಯನತ್ತ ನಡೆದು ಹೋಗುವ ಸಂದರ್ಭ ಬಂದೇ ಬಿಡುತ್ತದೆ. ಆದರೆ ಅಷ್ಟರವರೆಗೆ ನಾವು ಬದುಕಿದ ರೀತಿ ಹೇಗಿತ್ತು, ನಮಗೆ ಬಂದ ಸಂದರ್ಭ ಮತ್ತು ಅವಕಾಶಗಳು ಹೇಗಿದ್ದವು ಅನ್ನುವುದು ನಮಗೆ ರಾಜೀವನ ವಿಷಾದಮಯ ಅಂತ್ಯ ಸಾಧ್ಯವೋ ಅಥವಾ ವಿಶ್ವನಾಥ ಜೋಡೀದಾರರ ನೆಮ್ಮದಿಯ ಅಂತ್ಯ ಸಾಧ್ಯವೋ ಎನ್ನುವದು ನಿರ್ಧರಿಸುತ್ತದೆ. ಎಲ್ಲ ಸಾಧ್ಯತೆಗಳನ್ನು ತೆರೆಯ ಮೇಲೆ ಅಭಿನಯಿಸಿ ತೋರಿಸಿದ ರಾಜಣ್ಣ ಏಕೆ ಅಜರಾಮರ ಎನ್ನುವುದು ಅವರ ಚಿತ್ರಗಳು ಮತ್ತೆ ಮತ್ತೆ ಮನದಟ್ಟು ಮಾಡಿ ತೋರಿಸುತ್ತವೆ.

'' failed to upload. Invalid response: Unexpected token '<', "<html>

  "... is not valid JSON


Friday, May 12, 2023

ಅಧಿಕಾರದ ಆಸೆ ಮತ್ತು ಸಾಯಬಹುದಲ್ಲ ಎನ್ನುವ ಭಯ

ಸಾಮಾನ್ಯ ಮನುಷ್ಯ ಬೇಕಾದರೆ ಒಂದೊಪ್ಪತ್ತು ಊಟ ಬಿಟ್ಟು ಉಪವಾಸ ಮಾಡುತ್ತಾನೆಯೇ ಹೊರತು ವಿಷ ಬೆರೆಸಿದ ಆಹಾರ ಸೇವಿಸಲು ಒಪ್ಪುವುದಿಲ್ಲ. ಕಹಿ ಅನಿಸಿದ ಪದಾರ್ಥ ಆಗಿಂದಾಗಲೇ ಉಗುಳಿ ಜೀವ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಾನೆ. ಪ್ರಕೃತಿ ಮನುಷ್ಯನನ್ನು ರೂಪಿಸಿದ್ದು ಹಾಗೆಯೇ. ಬದುಕಿದರೆ ಹೇಗೋ ಜೀವನ ಮಾಡಬಹುದು ಎಂದುಕೊಳ್ಳುವ ಮನುಷ್ಯ ಸಾವಿನ ಅಪಾಯಗಳನ್ನು ಎದುರಿಸಲು ಹೋಗುವುದಿಲ್ಲ. ಆದರೆ ಎಲ್ಲರೂ ಹಾಗಲ್ಲ.

ಹಿಂದಿನ ಕಾಲದಲ್ಲಿ ರಾಜರುಗಳು ಒಬ್ಬರ ಮೇಲೆ ಒಬ್ಬರ ಯುದ್ಧ ಹೂಡುತ್ತಿದ್ದರಲ್ಲ. ಅದರ ಹಿಂದಿನ ಕಾರಣ, ಒಬ್ಬ ರಾಜನಿಗೆ ಹೆಚ್ಚಿನ ಅಧಿಕಾರದ ಆಸೆ. ಮತ್ತು ಇನ್ನೊಬ್ಬನಿಗೆ ಇರುವ ಅಧಿಕಾರ ಏಕೆ ಬಿಟ್ಟು ಕೊಡಬೇಕು ಎನ್ನುವ ಛಲ. ಹೆಚ್ಚಿನ ಯುದ್ಧಗಳು ಇಬ್ಬರಲ್ಲಿ ಒಬ್ಬ ರಾಜ ಸಾಯುವುದರೊಂದಿಗೆ ಕೊನೆಗೊಳ್ಳುತ್ತಿದ್ದವಲ್ಲ. ಅಂದರೆ ಸಾವಿಗೆ ಇಬ್ಬರು ರಾಜರುಗಳು ಮಾನಸಿಕವಾಗಿ ಸಿದ್ಧರಾಗಿಯೇ ಬಂದಿರುತ್ತಿದ್ದರು. ಅವರಿಗೆ ಸತ್ತರೆ ಹೇಗೆ ಎನ್ನುವ ಭಯಕ್ಕಿಂತ ಅಧಿಕಾರ ಕಳೆದುಕೊಂಡರೆ ಹೇಗೆ ಎನ್ನುವ ಚಿಂತೆ ಹೆಚ್ಚಿಗೆ ಭಾದಿಸುತ್ತಿತ್ತು.

ಇದು ಹಳೆಯ ಕಾಲಕ್ಕೆ ಸೀಮಿತವಲ್ಲ. ಅಮೇರಿಕಾದ ಅಧ್ಯಕ್ಷ ಜಾನ್ ಎಫ್ ಕೆನಡಿ ಯಿಂದ ಭಾರತದ ಪ್ರಧಾನಿ ಇಂದಿರಾ ಗಾಂಧಿಯವರೆಗೆ ಅವರು ಅಧಿಕಾರದಲ್ಲಿ ಇರುವಾಗ ಹತರಾದರಲ್ಲ. ಅವರು ತೆಗೆದುಕೊಂಡ ನಿರ್ಧಾರಗಳು ಶತ್ರುಗಳನ್ನು ಸೃಷ್ಟಿಸುವುದು ಮತ್ತು ಅದು ಅವರ ಜೀವಕ್ಕೆ ಕುತ್ತಾಗಬಹುದು ಎನ್ನುವ ಅಪಾಯಗಳ ಬಗ್ಗೆ ಅವರಿಗೆ ಸ್ಪಷ್ಟವಾಗಿ ಅರಿವಿತ್ತು. ಆದರೂ ಕೂಡ ಅವರೇಕೆ ಅಪಾಯಗಳಿಗೆ ಎದೆಯೊಡ್ಡಿದರು? ಪ್ರಕೃತಿ ಅವರನ್ನೇಕೆ ವಿಭಿನ್ನವಾಗಿ ರೂಪಿಸಿತು?

ಕೂಲಂಕುಷವಾಗಿ ಪರಿಶೀಲಿಸಿ ನೋಡಿದರೆ, ಪ್ರಕೃತಿ ಎಲ್ಲ ತರಹದ ಜನರನ್ನು ಸೃಷ್ಟಿಸಿತ್ತದೆ. ಕಾಡಿನಲ್ಲಿ ಜಿಂಕೆ, ತೋಳ, ಹುಲಿಗಳ ನಡುವಳಿಕೆ ಬೇರೆ ಬೇರೆ ಹಾಗೆಯೆ ಅವುಗಳ ಸಂಖ್ಯೆಯು ಕೂಡ ಬೇರೆ ಬೇರೆ. ಜಿಂಕೆಗಳು ಗುಂಪಿನಲ್ಲಿ ಬದುಕುತ್ತವೆ. ಅವುಗಳು ಇನ್ನೊಬ್ಬರ ಮೇಲೆ ಆಕ್ರಮಣ ಮಾಡುವುದಿರಲಿ, ತಮ್ಮನ್ನು ರಕ್ಷಿಕೊಳ್ಳುವ ಕಲೆಯೂ ಅವುಗಳಿಗೆ ಒಲಿದಿಲ್ಲ. ಆದರೆ ಹಸಿದ ಹುಲಿ ಎಂತಹ ಪ್ರಾಣಿಯನ್ನಾದರೂ ಬೇಟೆಯಾಡುವ ಗುಂಡಿಗೆ ತೋರುತ್ತದೆ. ಅದೇ ತರಹ ಮನುಷ್ಯರಲ್ಲಿ ತಾನು ರಾಜನಾಗಬೇಕೆನ್ನುವ ಆಸೆ ಇರುವವರ ಸಂಖ್ಯೆ ಕಡಿಮೆ. ಆದರೆ ಅವರಿಲ್ಲ ಎಂದಿಲ್ಲ. ಒಂದು ಜಿಂಕೆ ಹುಲಿಗೆ  ಆಹಾರವಾದರೆ ಉಳಿದವೆಲ್ಲ ಓಡಿ ತಪ್ಪಿಸಿಕೊಳ್ಳುತ್ತವಲ್ಲ. ಉಳಿದ ಜನ ಎಲ್ಲ ಆ ಪ್ರಕೃತಿಯವರು.

ಇಂದಿಗೆ ಚುನಾವಣೆಗಳು ನಡೆದಿವೆಯಲ್ಲ. ಅಲ್ಲಿ ಅಧಿಕಾರ ಬೇಕೆಂದು ಸ್ಪರ್ಧಿಸುವವರು ಕೆಲವು ಜನ. ಅವರ ಹಿಂದೆ ಹೊಡೆದಾಡಲು ತಯ್ಯಾರು ಇರುವವರು ಕೆಲವು ಸಾವಿರ ಜನ. ಆದರೆ ಅದನ್ನು ನಿಂತು ನೋಡುವವರು ಕೋಟಿ ಜನ. ಚುನಾವಣೆಯಲ್ಲಿ ಬರಿ ಮತದ ಹೋರಾಟ ಅಷ್ಟೇ ಇಲ್ಲ. ಪ್ರತಿಸ್ಪರ್ಧಿಗಳು ಬೀದಿಯಲ್ಲಿ ಕೂಡ ಹೊಡೆದಾಟಕ್ಕೆ ಇಳಿಯುತ್ತಾರೆ. ಆಗ ಸಂಘರ್ಷದಲ್ಲಿ ಕೈ-ಕಾಲು ಮುರಿಯಬಹುದು ಅಥವಾ ತಮ್ಮ ಅಥವಾ ಹಿಂಬಾಲಕರ ಜೀವವೇ ಹೋಗಬಹುದು. ಆ ಅಪಾಯವನ್ನು ಎದುರಿಸಲು ಸಜ್ಜಾಗಿರುವವನೇ ಶಾಸಕ ಆಗುತ್ತಾನೆ. ಅವನು ಒಳ್ಳೆಯವನು  ಅಥವಾ ಕೆಟ್ಟವನು ಎನ್ನುವ ನೈತಿಕ ವಿಮರ್ಶೆ ನಾನು ಮಾಡುತ್ತಿಲ್ಲ. ಆದರೆ ಶಾಸಕನ ಅಧಿಕಾರದ ಆಸೆ ಅವನನ್ನು ಜೀವ ಭಯವನ್ನು ಮೆಟ್ಟಿ ನಿಲ್ಲುವಂತೆ ಮಾಡಿದೆ. ಅದು ಹಿಂದಿನ ಕಾಲದಲ್ಲಿ ರಾಜನೊಬ್ಬ ಯುದ್ಧಕ್ಕೆ ಸಜ್ಜಾದ ಹಾಗೆ.

ತಮಗೆ ಏನಾದರೂ ಆದರೆ ಹೇಗೆ ಎನ್ನುವ ಸಾಮಾನ್ಯ ಮನುಷ್ಯ ಅಂತಹ ಅಪಾಯಗಳಿಗೆ ಎದೆಯೊಡ್ಡುವುದಿಲ್ಲ. ತಲೆ ತಗ್ಗಿಸಿ ದೌರ್ಜನ್ಯಗಳನ್ನು ಸಹಿಸಿಕೊಳ್ಳುತ್ತಾನೆ. ಅಪಾಯ ಎದುರಿಸಿ ನಿಲ್ಲುವ ವ್ಯಕ್ತಿ ಒಂದು ಗೆಲ್ಲುತ್ತಾನೆ ಇಲ್ಲವೇ ಸೋತು ಸುಣ್ಣವಾಗುತ್ತಾನೆ ಅಥವಾ ಪ್ರಾಣ ಕಳೆದುಕೊಳ್ಳುತ್ತಾನೆ. ಗೆದ್ದವನ ದೊಡ್ಡಸ್ತಿಕೆ ಇನ್ನೊಬ್ಬ ಪ್ರತಿಸ್ಪರ್ಧಿ ಹುಟ್ಟುವವರೆಗೆ. ಅವನ ಸಂತತಿ ಉಳಿಯುವುದು ಕಷ್ಟ. ಕಾಡಿನಲ್ಲಿ ಹುಲಿಗಳ ಹಾಗೆ.  ಆದರೆ ಅಪಾಯದಿಂದ ದೂರ ಸರಿಯುವ ವ್ಯಕ್ತಿಯ ಸಂತತಿ ಬೆಳೆಯುತ್ತ ಹೋಗುತ್ತದೆ. ಕಾಡಿನ ಜಿಂಕೆಗಳ ಹಾಗೆ.

ನಾಡನ್ನಾಳಿದ ಎಷ್ಟೋ ರಾಜ ಮನೆತನಗಳ ಸಂತತಿಗಳು ಬಹು ಬೇಗ ಅಳಿದು ಹೋದವು. ಅದು ಅವರು ಅಪಾಯಗಳನ್ನು ಎದುರಿಸಿದ್ದಕ್ಕೆ. ಸಾಮಾನ್ಯ ಜನರ ಸಂತತಿ ನೂರು ಪಟ್ಟು ಬೆಳೆಯಿತು. ಅದು ಅವರು ಪರಿಸ್ಥಿತಿಗೆ ತಲೆ ಬಾಗಿದ್ದಕ್ಕೆ. ಅದು ಕಾಡಲ್ಲಿನ ಹುಲಿ-ಜಿಂಕೆಯ ಅನುಪಾತದ ಹಾಗೆ.

ಅಧಿಕಾರ ಬೇಕೆನ್ನುವವರು ಮುಂದೆಯೂ ಇರುತ್ತಾರೆ. ಅವರು ಪುಕ್ಕಲರ ಹಾಗೆ ಬದುಕುವುದಿಲ್ಲ. ಮತ್ತು ಅವರ ಅಧಿಕಾರ ತುಂಬಾ ಕಾಲ ಕೂಡ ಉಳಿಯುವುದಿಲ್ಲ. ಹೇಗೋ ಒಂದು ಬದುಕಿದರಾಯಿತು ಎನ್ನುವವರು ಯಾವುದೇ ಸಂಘರ್ಷಕ್ಕೆ ಇಳಿಯುವುದಿಲ್ಲ. ಅವರ ಬದುಕಿದ್ದು, ಸತ್ತಿದ್ದು ಯಾರಿಗೂ ಬದಲಾವಣೆ ತರುವುದಿಲ್ಲ. ಬದಲಾವಣೆ ತರುವವರು ಸಾವಿಗೆ ಅಂಜಿ ಬದುಕುವುದಿಲ್ಲ.

(ಪ್ರಭಾವ: ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣ ಸ್ಪರ್ಧಿಗಳ ಬೀದಿ ಹೊಡೆದಾಟ ನೋಡಿ ಅನಿಸಿದ್ದು)