Monday, March 28, 2022

ಕಾಯುವುದು ಕರ್ಮ, ಕ್ಷಮಿಸುವುದು ದೇವರು ಎನ್ನುವ ಪುರಾವೆ ಏಕೆ ಬೇಕು?

೨೦೧೪ ನೇ ವರ್ಷದಲ್ಲಿ ಶ್ರಾವಣ ಶುಕ್ರವಾರದಂದು ಒಂದು ಹೊಸ ಚಿಕ್ಕ ಕಾರನ್ನು ಖರೀದಿಸಿದ್ದೆವು. ಆದರೆ ಅದು ನನಗೆ ವಿಚಿತ್ರ ಅನುಭವಗಳನ್ನು ಕೊಡಲು ಆರಂಭಿಸಿತ್ತು. ಒಂದು ರಾತ್ರಿ ನಾನು ಒಬ್ಬನೇ ಡ್ರೈವ್ ಮಾಡುತ್ತಿರುವಾಗ, ಹಿಂದಿನ ಸೀಟಿನಲ್ಲಿ ಯಾರೋ ಬಂದು ಕೂತಂತೆ ಅನಿಸಿತ್ತು. ಮತ್ತು ಕಾರಿನ ಸ್ಟೀರಿಂಗ್ ನಾನು ಒಂದು ಕಡೆ ತಿರುಗಿಸಿದರೆ, ಅದು ತಾನಾಗೇ ಇನ್ನೊಂದು ಕಡೆ ಎಳೆಯುವ ಅನುಭವ ಆಗುತ್ತಿತ್ತು. ಅದು ಕೆಲವೇ ದಿನಗಳಿಗೆ ದೊಡ್ಡ ಸಮಸ್ಯೆಗೆ ಸಿಕ್ಕಿ ಹಾಕಿಸಲಿದೆ ಎನ್ನುವುದು ಆಗ ನನಗೆ ಗೊತ್ತಿರಲಿಲ್ಲ.

 

ಆ ವರುಶದ ಡಿಸೆಂಬರ್ ತಿಂಗಳ ಕೊನೆಯಲ್ಲಿ ರಜೆಗಳಿಗೆ ಎಂದು ಅದೇ ಕಾರನ್ನು ತೆಗೆದುಕೊಂಡು ಊರಿಗೆ ಹೊರಟಿದ್ದೆವು. ಕಾರಿನಲ್ಲಿ ಒಟ್ಟು ಐದು ಜನ. ಬೆಂಗಳೂರಿನಿಂದ ದಾಬಸ್ ಪೇಟೆ ದಾಟಿ ತುಮಕೂರಿಗೆ ಮುಂಚೆಯೇ ಬರುವ ಫ್ಲೈ ಓವರ್ ಒಂದನ್ನು ಆಗ ತಾನೇ ದಾಟಿದ್ದೆವು. ಯಾವುದೊ ಒಂದು ಕ್ಷಣದಲ್ಲಿ ಕಾರು ನನ್ನ ಹತೋಟಿ ತಪ್ಪಿ, ಏನಾಗುತ್ತಿದೆ ಎಂದು ಅರಿವಾಗುವಷ್ಟರಲ್ಲಿ ದರದರನೇ ಕಾರನ್ನು ಯಾರೋ ಎಳೆದು ಹಾಕಿದಂತೆ, ಅದು ರಸ್ತೆ ಪಕ್ಕದ ಹೊಲಕ್ಕೆ ನುಗ್ಗಿ, ಅಲ್ಲಿರುವ ಆಳೆತ್ತರದ ಕಲ್ಲಿನ ಕಂಬವೊಂದಕ್ಕೆ ಬಡಿದು, ತಿರುಗಿ, ಉರುಳಿ ಸುಮ್ಮನಾಯಿತು. ಕಾರಿನ ಹೊರಕ್ಕೆ ಬಂದು ನೋಡಿದಾಗ ಅದರ ಟೈಯರ್ ಗಳು ಒಡೆದು ಹೋಗಿದ್ದವು. ಗಾಜುಗಳೆಲ್ಲ ಪುಡಿಪುಡಿಯಾಗಿದ್ದವು. ಕಾರಿನ ಒಂದು ಭಾಗ  ತಾನು ನಗ್ಗಿ ಹೋದರೂ ನಮ್ಮ ಜೀವ ಉಳಿಸಿತ್ತು. ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದವು. ಆದರೆ ಗಂಭೀರ ಎನ್ನುವ ಅಪಾಯ ನಮಗಾರಿಗೂ ಆಗಿರಲಿಲ್ಲ. ಒಮ್ಮೆ ಸುತ್ತ ನೋಡಿದರೆ ಹತ್ತಿರದ ಬೆಟ್ಟದ ಮೇಲೆ ದೇವಸ್ಥಾನ ಸ್ಪಷ್ಟವಾಗಿ ಕಾಣಿಸಿತ್ತು.

 

ದಾರಿಯಲ್ಲಿ ಹೋಗುತ್ತಿದ್ದವೆರೆಲ್ಲ ತಮ್ಮ ಗಾಡಿ ನಿಲ್ಲಿಸಿ ನಮಗೆ ಏನಾದರೂ ಸಹಾಯ ಬೇಕೇ ಎಂದು ವಿಚಾರಿಸತೊಡಗಿದ್ದರು. ಹತ್ತಿರವೇ ಒಂದು ರೂಮಿನಲ್ಲಿ ವಾಸ ಮಾಡಿಕೊಂಡಿದ್ದ ಹಿಜಡಾ ಗಳು ಓಡಿ ಬಂದರು. ಗಾಬರಿಗೊಂಡಿದ್ದ ನನ್ನ ಚಿಕ್ಕ ಮಗನನ್ನು ಎತ್ತಿಕೊಂಡು ಸಂತೈಸಿದರು. ತಮ್ಮ ಜಾಗದಲ್ಲಿ ಕುಳಿತುಕೊಂಡು ನಮಗೆ ಸುಧಾರಿಸಿಕೊಳ್ಳಲು ಅನುವು ಮಾಡಿಕೊಟ್ಟರು. ಮನೆಯವರನ್ನು ಮತ್ತೆ ಬೆಂಗಳೂರಿಗೆ ಇನ್ನೊಂದು ವಾಹನದಲ್ಲಿ ಕಳಿಸಿಕೊಡುವ ವ್ಯವಸ್ಥೆ ಮಾಡಿದೆ. ನಾನು ದೂರು ದಾಖಲಿಸಲು ಹತ್ತಿರದ ಪೊಲೀಸ್ ಠಾಣೆಗೆ ತೆರಳಿದೆ. ಇನ್ಶೂರೆನ್ಸ್ ಕಂಪನಿಯವರಿಗೆ ವಿಷಯ ತಿಳಿಸಿದೆ. ಕಾರನ್ನು ಮತ್ತೆ ಬೆಂಗಳೂರಿನ ಸರ್ವಿಸ್ ಸೆಂಟರ್ ಗೆ ತಲುಪಿಸುವಂತೆ ವ್ಯವಸ್ಥೆ ಮಾಡಿ, ನಾನು ಬಸ್ ನಲ್ಲಿ ಬೆಂಗಳೂರಿನ ಮನೆಗೆ ತಲುಪುವಷ್ಟರಲ್ಲಿ ಸಾಯಂಕಾಲವೇ ಆಗಿತ್ತು. ವಿಚಿತ್ರ ಎಂದರೆ ಕಷ್ಟ ಕಾಲದಲ್ಲಿ ಆಗುವ ಸ್ನೇಹಿತನೊಬ್ಬ ಅಂದು ಕೂಡ ಎಲ್ಲ ಸರಿಯಾಗಿದೆಯೇ ಎಂದು ಫೋನ್ ಮಾಡಿದ್ದ. ಆದರೆ ಅವತ್ತು ಹೇಗೋ ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗಿತ್ತು.

 

ಅದುವರೆಗೆ ಒಂದು ಚಿಕ್ಕ ಅಪಘಾತವನ್ನು ಕೂಡ ಮಾಡದ ನಾನು ಅಂದು ದೊಡ್ಡ ಅಪಘಾತಕ್ಕೀಡಾಗಿದ್ದು ನನ್ನಲ್ಲಿನ ಧೈರ್ಯವನ್ನು ಉಡುಗಿಸಿಬಿಟ್ಟಿತ್ತು. ಯಾರ ಜೀವ ಹೋಗಿದ್ದರೂ, ಅದರ ಹೊಣೆ ನನ್ನದೇ ಆಗಿತ್ತು ಎನ್ನುವ ವಿಚಾರ ನನ್ನ ಮನಸ್ಸಿನ ಆಳಕ್ಕೆ ಇಳಿದು ಹೋಗಿತ್ತು. ಅಂದು ನಗ್ಗಿ ಹೋಗಿದ್ದ ನಮ್ಮ ಕಾರು ನೋಡಿದ್ದ ಎಲ್ಲ ಜನರೂ ಜೀವ ಉಳಿದಿದ್ದೆ ದೈವ ಎನ್ನುವ ಮಾತನಾಡಿದ್ದರು. ಅಪಘಾತಕ್ಕೀಡಾದ ಮೇಲೆ ಕಾರು ಇಳಿದ ನಂತರ ನೋಡಿದ್ದ ದೇವಸ್ಥಾನ ನನಗೆ ನೆನಪಿಗೆ ಬಂತು. ಸಂಜೆ ಮನೆ ತಲುಪಿದ ಮೇಲೆ ಸ್ನಾನ ಮಾಡಿ, ಕಂಪ್ಯೂಟರ್ ತೆಗೆದು ಈ-ಮೇಲ್ ನೋಡಿದೆ. ಕೆಲವು ತಿಂಗಳುಗಳ ಹಿಂದೆ NGO ಸಂಸ್ಥೆ ಒಂದರ ಮೂಲಕ ಒಬ್ಬ ಹೆಣ್ಣು ಮಗಳಿಗೆ ಸ್ವಾವಲಂಬಿ ಆಗಲು ಮಾಡಿದ ಸಹಾಯಕ್ಕೆ ಧನ್ಯವಾದ ಪತ್ರ ಬಂದಿತ್ತು. ಅದನ್ನು ನೋಡಲೆಂದೇ ದೇವರು ನನ್ನ ಜೀವ ಉಳಿಸಿದನೇ ಎನ್ನುವ ವಿಚಾರವು ಕ್ಷಣ ಕಾಲ ಬಂದು ಹೋಯಿತು. ಹಾಗೆಯೆ Gladiator ಚಿತ್ರದಲ್ಲಿ ಮುಖ್ಯ ಪಾತ್ರದ ಜೊತೆಗಾರ 'ಸಾಯಬೇಕು, ಆದರೆ ಈಗಲ್ಲ, ಈಗಲ್ಲ' ಎನ್ನುವ ಸಂಭಾಷಣೆ ಕೂಡ ನೆನಪಿಗೆ ಬಂತು. ದೈವವೋ, ವಿಧಿಯೋ, ಕರ್ಮವೋ ಯಾವುದು ಜೀವ ಉಳಿಸಿದ್ದರೂ ಅವರಿಗೆ ಒಂದು ಧನ್ಯವಾದ ಎಂದು ಮನಸ್ಸಿನಲ್ಲೇ ಹೇಳಿಕೊಂಡು ನಿದ್ದೆ ಹೋದೆ. ಪ್ರಯಾಸದ, ಬಲವಾದ ಆಘಾತವಾದ ದಿನದಂದು ಕೂಡ ನಿದ್ರೆ ಬಂದೆ ಬಿಟ್ಟಿತು.

 

ಕೆಲವೇ ದಿನಗಳಿಗೆ ಕಾರನ್ನು ರಿಪೇರಿ ಮಾಡಲು ಸಾಧ್ಯ ಇಲ್ಲ ಎಂದು ಕಾರಿನ ಕಂಪನಿ ಯವರು ಹೇಳಿದರು. ಇನ್ಶೂರೆನ್ಸ್ ಕಂಪನಿಯವರು ಅದನ್ನು ಮಾರಿ ಹಾಕಿ ನಮಗೆ ಹಣ ಕೊಟ್ಟರು. ನನಗೆ ದೊಡ್ಡ ಮೊತ್ತದ ನಷ್ಟವೇ ಆದರೂ, ಮನಸ್ಸಿಗೆ ಆದ ಆಘಾತ ಹೆಚ್ಚಿನ ಪ್ರಮಾಣದಲ್ಲಿತ್ತು. ಆದದ್ದನ್ನು ಮನೆಯವರು ಕೆಲವೇ ದಿನಗಳಿಗೆ ಮರೆತು ಹೋದರೂ, ನನಗೆ ಮಾತ್ರ ಅದು ಸಾಧ್ಯ ಆಗಲಿಲ್ಲ. ಒಂದು ವರುಷದವರೆಗೆ ಯಾವ ಕಾರನ್ನು ಕೂಡ ಡ್ರೈವ್ ಮಾಡುತ್ತಿರಲಿಲ್ಲ. ಒಂದು ದಿನ ಆಫೀಸಿನ ಆಪ್ತ ಸ್ನೇಹಿತನೊಬ್ಬನಿಗೆ ನಡೆದ ವಿಷಯವನ್ನೆಲ್ಲ ತಿಳಿಸಿದೆ. ಅವನು ನಕ್ಕು, ಅದು ನಡೆದದ್ದು ಕಳೆದ ವರುಷದಲ್ಲಿ. ಆದರೆ ಈಗಾಗಲೇ ಹೊಸ ವರ್ಷ ಬಂದಾಗಿದೆ. ಬೇರೆ ಕಾರು ತೆಗೆದುಕೋ ಎಂದು ಧೈರ್ಯ ತುಂಬಿದ. ಸ್ವಲ್ಪ ಭಯದಿಂದಲೇ ಬೇರೆ ಕಾರು ಖರೀದಿಸಿ ಮತ್ತೆ ಡ್ರೈವ್ ಮಾಡಲು ಆರಂಭಿಸಿದೆ. ಮತ್ತೆ ಅದೇ ದಾರಿಯಲ್ಲಿ ಹೋಗುವಾಗ, ಅಪಘಾತ ನಡೆದ ಸ್ಥಳದಲ್ಲಿ ಕಾರು ನಿಲ್ಲಿಸಿ ಹತ್ತಾರು ಹೆಜ್ಜೆ ಹಾಕಿ ಬಂದೆ. ದುಗುಡ ಕಡಿಮೆ ಆಗಿ ಹೋಯಿತು. ಅಲ್ಲಿಂದ ಮತ್ತೆ ಸರಾಗವಾಗಿ ಡ್ರೈವ್ ಮಾಡಲು ಶುರು ಮಾಡಿದೆ. ಆ ಮಾರ್ಗದಲ್ಲಿ ಹೋಗುವಾಗ ಪ್ರತಿ ಬಾರಿ ನಾವು ಬಿದ್ದ ಸ್ಥಳವನ್ನು ಗಮನಿಸುತ್ತಿದ್ದೆ. ಇಂದಿಗೆ ಅಲ್ಲಿ ಖಾಲಿ ಜಾಗವಿಲ್ಲ ಬದಲಿಗೆ ಅಲ್ಲಿ ಒಂದು ಪೆಟ್ರೋಲ್ ಪಂಪ್ ಬಂದಿದೆ.

 

ಆ ಘಟನೆಯ ನಂತರ ನನಗೆ ಅಪಘಾತಗಳು ಕ್ಷಣಾರ್ಧದಲ್ಲಿ ಹೇಗೆ ಸಾವು ತಂದು ಬಿಡುತ್ತವೆ ಎನ್ನುವುದು ಅನುಭವಕ್ಕೆ ಬಂದು ಬಿಟ್ಟಿತ್ತು. ಹಾಗೆಯೆ ಕಾಯುವ ಶಕ್ತಿಯ ಮೇಲಿನ ನಂಬಿಕೆಯು (ನೀವು ಮೂಢ ನಂಬಿಕೆ ಎಂದರೂ ಪರವಾಗಿಲ್ಲ) ಕೂಡ ಬಲವಾಗತೊಡಗಿತ್ತು. ಇಂದಿಗೂ ಕಾಣದ ದೇವರಿಗೆ ಕೈ ಮುಗಿಯುತ್ತೇನೆ. ತಿಳಿಯದೆ ಮಾಡಿದ ತಪ್ಪುಗಳಿಗೆ ಕ್ಷಮೆ ಕೋರುತ್ತೇನೆ. ಗೊತ್ತಿಲ್ಲದ ಜನ ತೊಂದರೆಗೆ ಸಿಕ್ಕಿಕೊಂಡಾಗ ಕೈಲಾದ ಸಹಾಯ ಮಾಡುತ್ತೇನೆ. ಸ್ವಲ್ಪ ಮಟ್ಟಿನ ಸಮಯಕ್ಕಾದರೂ ನಾನು ಅದೇ ಪರಿಸ್ಥಿತಿಯಲ್ಲಿ ಇದ್ದೆ. ಗಂಡಾಗಿ ಹುಟ್ಟಿ ಹೆಣ್ಣಿನ ವೇಷ ಧರಿಸುವ ಹಿಜಡಾಗಳನ್ನು ಕಂಡರೆ ಬೇಸರಿಸಿಕೊಳ್ಳುವುದಿಲ್ಲ. ಪುರಾಣ ಕಾಲದ ಅರ್ಧನಾರೀಶ್ವರನ ಕಲ್ಪನೆ ಇವರಿಂದ ಹುಟ್ಟಿದ್ದೋ ಎಂದುಕೊಳ್ಳುತ್ತೇನೆ.

 

ಕರ್ಮ ಕಾಯುತ್ತದೆಯೋ, ದೇವರು ಕ್ಷಮಿಸುತ್ತಾನೋ ಎನ್ನುವ ಸಾಕ್ಷಿ, ಪುರಾವೆ ಯಾರಿಗಾದರೂ ಕೊಡುವ ಅವಶ್ಯಕತೆಯೇ ನನಗಿಲ್ಲ. ಅದು ನನ್ನ ನಂಬಿಕೆ ಅಷ್ಟೇ. ಸಮಸ್ಯೆಗಳಿಂದ ಪಾರು ಮಾಡಿ, ಸದಾವಕಾಶಗಳನ್ನು ಮಾಡಿ ಕೊಡುವ ದೈವಕ್ಕೆ ನಾನು ಕೃತಜ್ಞನಾಗಿದ್ದೇನೆ.

Saturday, March 26, 2022

ಕಥೆ: ಒಬ್ಬ ಕಳ್ಳನ ಕಥೆ

(ಇದು ರಸ್ಕಿನ್ ಬಾಂಡ್ ಅವರು ಬರೆದ 'The thief's story'  ಕಥೆಯ ಭಾವಾನುವಾದ)


ರೋಮಿಯನ್ನು ಮೊದಲು ಭೇಟಿ ಮಾಡಿದಾಗ ನಾನು ಇನ್ನೂ ಕಳ್ಳನಾಗೇ ಇದ್ದೆ. ನನಗೆ ಆವಾಗ ಸುಮಾರು ಹದಿನೈದು ವರುಷ ಅಷ್ಟೇ. ಅಷ್ಟರಲ್ಲಿ ನನ್ನ ಕೈ ಕಳ್ಳತನದಲ್ಲಿ ಪಳಗಿತ್ತು. ಆವತ್ತು ರೋಮಿ ಕುಸ್ತಿ ಪಂದ್ಯವನ್ನು ನೋಡುತ್ತಾ ಕೂತಿದ್ದ. ಅವನಿಗೆ ಸುಮಾರು ಇಪ್ಪತೈದು ವರ್ಷ ಇದ್ದಿರಬಹುದು. ನೋಡಲು ಒಳ್ಳೆಯ ವ್ಯಕ್ತಿಯ ಹಾಗೆ, ನನ್ನ ಉದ್ದೇಶಗಳಿಗೆ ಸುಲಭಕ್ಕೆ ಬೀಳುವ ಆಸಾಮಿಯ ಹಾಗೆ ಕಾಣಿಸಿದ. ಈ ವ್ಯಕ್ತಿಯ ವಿಶ್ವಾಸವನ್ನು ನಾನು ಗಳಿಸಿಕೊಳ್ಳುವುದರಲ್ಲಿ ನನಗೆ ಸಂದೇಹವೇ ಇರಲಿಲ್ಲ.


''ನೀವೇ ಒಬ್ಬ ಕುಸ್ತಿ ಪಟುವ ಹಾಗೆ ಇದ್ದೀರಿ" ನಾನು ಅವನನ್ನು ಮಾತಿಗೆಳೆದೆ. ಹೊಸಬರನ್ನು ಪರಿಚಯ ಮಾಡಿಕೊಳ್ಳಲು ಹೊಗಳಿಕೆಯಷ್ಟು ಸುಲಭ ದಾರಿ ಬೇರೆ ಯಾವುದಿದೆ?


"ನೀನು ಕೂಡ ಹಾಗೆ ಕಾಣುತ್ತಿರುವೆ" ಅವನು ನನಗೆ ಉತ್ತರಿಸಿದ. ನಾನು ಒಂದು ಕ್ಷಣ ತಬ್ಬಿಬ್ಬಾದೆ. ತೆಳ್ಳಗೆ, ಬರೀ ಮೂಳೆಯ ಹಂದರವಾಗಿದ್ದ ನನಗೆ ಆ ಮಾತು ಯಾವ ರೀತಿಯಿಂದಲೂ ಒಪ್ಪುತ್ತಿರಲಿಲ್ಲ.


"ಏನು ನಿನ್ನ ಹೆಸರು?" ರೋಮಿ ನನ್ನನ್ನು ಕೇಳಿದ.


"ಹರಿ ಸಿಂಗ್" ನಾನು ಮನಸ್ಸಿಗೆ ತೋಚಿದ ಸುಳ್ಳು ಹೆಸರು ಹೇಳಿದೆ. ಆಗಾಗ ಹೆಸರು ಬದಲಿಸಿಕೊಳ್ಳುವುದು ನನ್ನ ಜಾಯಮಾನ. ಪೊಲೀಸರಿಗೆ ಮತ್ತು ನಾನು ಮೋಸ ಮಾಡಿದವರಿಗೆ ನನ್ನನ್ನು ಸುಲಭವಾಗಿ ಹುಡುಕದಂತೆ ಅದು ತಡೆಯುತ್ತದೆ.


ಅದಾದ ಮೇಲೆ ರೋಮಿ ಕುಸ್ತಿ ಪಟುಗಳ ಬಗ್ಗೆ, ಅವರು ಗುರುಗುಟ್ಟುವುದು, ಅವರು ಏದುಸಿರು ಬಿಡುವುದು, ಒಬ್ಬರನ್ನೊಬ್ಬರು ಎತ್ತಿ ಬಿಸಾಕುವುದು ಇದರ ಬಗ್ಗೆಯೇ ಮಾತನಾಡುತ್ತ ಇದ್ದ. ಮತ್ತು ಒಂದು ಚಿಕ್ಕ ಪುಸ್ತಕದಲ್ಲಿ ಅದರ ಬಗ್ಗೆ ಟಿಪ್ಪಣಿ ಬರೆದುಕೊಳ್ಳುತ್ತಿದ್ದ. ಅವನು ಎದ್ದು ಹೊರಗೆ ಹೊರಟಾಗ ಅವನನ್ನೇ ಹಿಂಬಾಲಿಸಿದೆ.


"ಏನು ವಿಷಯ?" ರೋಮಿ ಕೇಳಿದ.


"ನನಗೆ ಯಾವುದಾದರೂ ಕೆಲಸ ಕೊಡುವಿರಾ?" ನಾನು ಕೇಳಿದೆ.


"ಆದರೆ ನಾನು ನಿನಗೆ ಯಾವುದೇ ಸಂಬಳ ಕೊಡಲಾರೆ" ಅವನು ಉತ್ತರಿಸಿದ.


ಒಂದು ಕ್ಷಣ ನನ್ನ ಎಣಿಕೆ ತಪ್ಪಾಯಿತೇನೋ ಎಂದು ಅನಿಸಿತು. ಆದರೂ ಕೇಳಿದೆ "ನನಗೆ ಊಟ ಹಾಕುವಿರಾ?"


"ನಿನಗೆ ಅಡಿಗೆ ಮಾಡಲು ಬರುತ್ತೋ?" ಅವನು ಕೇಳಿದ


"ಹೌದು. ಬರುತ್ತೆ" ನಾನು ಸುಳ್ಳು ಹೇಳಿದೆ.


"ಸರಿ. ಹಾಗಾದರೆ ನನ್ನ ಜೊತೆ ಬಾ" ಎಂದು ಅವನು ನನ್ನನ್ನು ಕರೆದುಕೊಂಡು ಹೋದ. ದೆಹಲಿ ಬೇಕರಿ ಅಂಗಡಿಯ ಮೇಲಿನ ರೂಮೊಂದರಲ್ಲಿ ಅವನು ವಾಸವಾಗಿದ್ದ. ನನ್ನನ್ನು ಬಾಲ್ಕನಿಯಲ್ಲಿ ಮಲಗಿಕೊಳ್ಳುವಂತೆ ಸೂಚಿಸಿದ. ಅಂದು ರಾತ್ರಿ ನಾನು ಮಾಡಿದ ಅಡಿಗೆ ಎಷ್ಟು ಕೆಟ್ಟದಾಗಿತ್ತೇನೋ ಅವನು ಅದನ್ನೆಲ್ಲ ಬೀದಿ ನಾಯಿಗೆ ಸುರಿದು ನನಗೆ ಹೊರಹೋಗುವಂತೆ ಹೇಳಿದ.


ನಾನು ರೂಮಿನ ಹೊರಗಡೆಯೇ ಮನವಿಪೂರ್ವಕ ಮುಖವನ್ನು ಹೊತ್ತು ಕುಳಿತುಕೊಂಡೆ. ಸ್ವಲ್ಪ ಹೊತ್ತು ಬಿಟ್ಟ ನನ್ನನ್ನು ನೋಡಿದ ಅವನಿಗೆ ನಗು ತಡೆಯಲಾಗಲಿಲ್ಲ. ಬಳಿಕ, ಅವನು ನನಗೆ ಅಡಿಗೆ ಕಲಿಸುವುದಾಗಿ ಹೇಳಿದ. ಅಷ್ಟೇ ಅಲ್ಲದೇ ನನಗೆ ಓದುವುದನ್ನು, ಬರೆಯುವುದನ್ನು ಕೂಡ ಹೇಳಿಕೊಡಲಾರಂಭಿಸಿದ. ನನ್ನ ಹೆಸರನ್ನು ನಾನೇ ಬರೆದ ಮೇಲೆ, ನನ್ನಲ್ಲಿ ಹೊಸ ಆತ್ಮವಿಶ್ವಾಸ ಮೂಡತೊಡಗಿತ್ತು. ಅಷ್ಟೇ ಅಲ್ಲದೇ, ರೋಮಿ ನನಗೆ ಶಾಲೆ ಓದಿಕೊಂಡವರ  ಹಾಗೆ ಸಂಪೂರ್ಣ ವಾಕ್ಯಗಳನ್ನು ಬರೆಯುವುದನ್ನು ಮತ್ತು ಕೂಡಿ ,ಕಳೆಯುವ ಲೆಕ್ಕಗಳನ್ನು ಕಲಿಸಿಕೊಡುವುದಾಗಿ ಹೇಳಿದ. ಅದನ್ನು ನಾನು ಕಲಿತರೆ, ಜೀವನದಲ್ಲಿ ನಾನು ಸಾಧಿಸುವುದಕ್ಕೆ ಯಾವುದೇ ಮಿತಿ ಇರುವುದಿಲ್ಲ ಎನಿಸಿತು.


ರೋಮಿಯ ಜೊತೆ ಇರುವುದು ಒಂದು ಆಹ್ಲಾದಕರ ಅನುಭವವೇ ಆಗಿತ್ತು. ಬೆಳಿಗ್ಗೆ ಎದ್ದ ತಕ್ಷಣ ಅವನಿಗೆ ಚಹಾ ಮಾಡಿಕೊಡುತ್ತಿದ್ದೆ. ಮಾರುಕಟ್ಟೆಗೆ ಹೋಗಿ ತರಕಾರಿ ನಾನೇ ತರುತ್ತಿದ್ದೆ. ಅದರಲ್ಲಿ ಒಂದೆರಡು ರೂಪಾಯಿಗಳನ್ನು ನಾನು ಉಳಿಸಿಕೊಳ್ಳುತ್ತಿದ್ದೆ. ಅದು ಅವನಿಗೆ ಗೊತ್ತಿತ್ತೋ ಏನೋ, ಆದರೆ  ಯಾವುದೇ ಆಕ್ಷೇಪಣೆ ಮಾಡುತ್ತಿರಲಿಲ್ಲ. ಯಾವುದನ್ನೂ ಪ್ರಶ್ನಿಸುವ ಗೊಡವೆಗೆ ಹೋಗುತ್ತಿರಲಿಲ್ಲ.


ಅವನು ದೆಹಲಿ ಮತ್ತು ಬಾಂಬೆಯ ಪತ್ರಿಕೆಗಳಿಗೆ ಸುದ್ದಿ, ಲೇಖನ ಬರೆಯುತ್ತಿದ್ದ. ಅವನಿಗೆ ಪ್ರತಿ ದಿನ ದುಡ್ಡು ಬರುತ್ತಿರಲಿಲ್ಲ. ಯಾವಾಗಲೋ ಒಮ್ಮೆ ಅವನಿಗೆ ಹಣ ಸಿಗುತ್ತಿತ್ತು. ದುಡ್ಡು ಬಂದ ಮರುದಿನವೇ ಅವನು ಅದನ್ನು ಆನಂದವಾಗಿ ಖರ್ಚು ಮಾಡಿಬಿಡುತ್ತಿದ್ದ. ಒಂದು ದಿನ ಸಂಜೆ ಅವನ ಕೈಯಲ್ಲಿ ದುಡ್ಡು ಬಂದಿತ್ತು. ಒಂದು ಸಣ್ಣ ನೋಟಿನ ಕಟ್ಟನ್ನು ಒಂದು ಲಕೋಟೆಯೊಳಗೆ ಇಟ್ಟು, ಅದನ್ನು ತನ್ನ ತಲೆದಿಂಬಿನ ಅಡಿ ಇಟ್ಟುಕೊಂಡು ಅವನು ಆ ರಾತ್ರಿ ನಿದ್ದೆ ಹೋಗುವುದನ್ನು ನೋಡಿದೆ.


ನಾನು ರೋಮಿಯ ಹತ್ತಿರ ಕೆಲಸ ಮಾಡಲು ಶುರು ಮಾಡಿ ತಿಂಗಳ ಮೇಲೆಯೇ ಕಳೆದಿತ್ತು. ಅವನು ನನ್ನನ್ನು ನಂಬಿದಷ್ಟು ಅದುವರೆಗೆ ಬೇರೆ ಯಾರು ನನ್ನನ್ನು ನಂಬಿರಲಿಲ್ಲ. ಯಾವುದೊ ದುರಾಸೆಯ ಮನುಷ್ಯನಿಗೆ ಕಳ್ಳತನ ಮಾಡಿ, ಮೋಸ ಮಾಡುವುದು ಸುಲಭ. ಆದರೆ ರೋಮಿಯಂತಹ ಒಳ್ಳೆಯ ವ್ಯಕ್ತಿಗೆ ಮೋಸ ಮಾಡಲು ಸುಲಭದಲ್ಲಿ ಮನಸ್ಸು ಒಪ್ಪುತ್ತಿರಲಿಲ್ಲ. ಆದರೆ ವಿಚಾರ ಮಾಡಿ ನೋಡಿದೆ. ಅವನು ಹೇಗಿದ್ದರೂ ಈ ಹಣವನ್ನು ಯಾವುದೊ ಸ್ನೇಹಿತರ ಜೊತೆ ಖರ್ಚು ಮಾಡಿ ಮುಗಿಸುತ್ತಾನೆ. ಮತ್ತು ನನಗೆ ಇದುವರೆಗೆ ಯಾವುದೇ ಸಂಬಳ ಕೂಡ ಕೊಟ್ಟಿಲ್ಲ.


ರೋಮಿ ಶಾಂತವಾಗಿ ನಿದ್ರಿಸುತ್ತಿದ್ದ. ಅವನ ದಿಂಬಿನ ಕೆಳಗೆ ಕೈ ಹಾಕಿ ಯಾವುದೇ ಸದ್ದಾಗದಂತೆ ಆ ಲಕೋಟೆಯನ್ನು ಹೊರಗೆ ಎಳೆದೆ. ನಿದ್ದೆಯಲ್ಲೇ ನಿಟ್ಟುಸಿರಿಟ್ಟ ರೋಮಿ. ತಡ ಮಾಡದೆ ಕೋಣೆಯ ಹೊರ ಬಂದು, ರೈಲ್ವೆ ಸ್ಟೇಷನ್ ಕಡೆಗೆ ಒಡಲು ಪ್ರಾರಂಭಿಸಿದೆ. ರಾತ್ರಿ ಹೊರಡುವ ಲಕ್ನೋ ರೈಲನ್ನು ಏರುವ ಇರಾದೆ ನನ್ನದಾಗಿತ್ತು. ರೈಲ್ವೆ ನಿಲ್ದಾಣ ಹತ್ತಿರವಾದೊಡನೆ, ಓಡುವುದು ನಿಲ್ಲಿಸಿ, ನಡೆಯಲಾರಂಭಿಸಿದೆ. ಲಕೋಟೆಯನ್ನು ತೆಗೆದು ಎಣಿಸಿದಾಗ ಅದರಲ್ಲಿ ಏಳು ನೂರಾ ಐವತ್ತು ರೂಪಾಯಿಗಳಿದ್ದವು. ಒಂದೆರಡು ವಾರ ರಾಜನ ಹಾಗೆ ಮೆರೆಯಬಹುದು ಅಂದುಕೊಂಡೆ.


ನಿಲ್ದಾಣದ ಒಳಗೆ ಹೋದ ಮೇಲೆ ಟಿಕೆಟ್ ಏನೂ ನಾನು ಖರೀದಿಸಲಿಲ್ಲ. ನಾನು ಜೀವಮಾನದಲ್ಲೇ ಟಿಕೆಟ್ ತೆಗೆದುಕೊಂಡು ಪ್ರಯಾಣ ಮಾಡಿಲ್ಲ. ಲಕ್ನೋ ರೈಲು ಆಗ ತಾನೇ ನಿಲ್ದಾಣ ಬಿಡುತ್ತಿತ್ತು. ಎಷ್ಟು ಜೋರಾಗಿ ಓಡಿದರೂ ಸ್ವಲ್ಪದರಲ್ಲೇ ಅದು ತಪ್ಪಿ ಹೋಯಿತು. ನಿಲ್ದಾಣದಲ್ಲಿ ನಾನು ಒಬ್ಬನೇ ಉಳಿದು ಹೋದೆ. ರಾತ್ರಿ ಎಲ್ಲಿ ಕಳೆಯುವುದು ಎಂದು ತಿಳಿಯಲಿಲ್ಲ. ನನಗೆ ಆಶ್ರಯ ಕೊಟ್ಟ ಜಾಗದಲ್ಲೇ ನಾನು ದೋಚಿ ಬಂದಿದ್ದೆ. ನಿಲ್ದಾಣದಿಂದ ಹೊರ ಬಂದು ಸುಮ್ಮನೆ ಬಜಾರಿನ ರಸ್ತೆಯಲ್ಲೇ ನಡೆಯಲು ಆರಂಭಿಸಿದೆ.


ನನ್ನ ಅಲ್ಪ ವೃತ್ತಿ ಜೀವನದಲ್ಲಿ ವ್ಯಕ್ತಿಗಳು ತಮ್ಮ ವಸ್ತು ಕಳೆದುಕೊಂಡ ಮೇಲೆ ಹೇಗೆ ಮುಖ ಮಾಡುತ್ತಾರೆ ಎಂಬುದನ್ನು ಗಮನಿಸಿದ್ದೆ. ದುರಾಸೆಯ ವ್ಯಕ್ತಿಗಳು ಗಾಬರಿ ಬಿದ್ದರೆ, ಶ್ರೀಮಂತರು ಕೋಪದ ಮುಖ ಮಾಡುತ್ತಾರೆ. ಮತ್ತು ಬಡವರಾದರೆ ಅವರ ಮುಖದಲ್ಲಿ ಹತಾಶೆ ತೇಲುತ್ತಿರುತ್ತದೆ. ಆದರೆ ರೋಮಿಯ ಮುಖದಲ್ಲಿ ನಂಬಿಕೆದ್ರೋಹ ಮಾತ್ರ ಕಾಣುತ್ತದೆ ಎನ್ನುವ ವಿಷಯ ನನಗೆ ಚೆನ್ನಾಗಿ ತಿಳಿದಿತ್ತು.


ರಾತ್ರಿ ತಣ್ಣನೆಯ ಚಳಿ ಮೈ ಕೊರೆಯುತ್ತಿತ್ತು. ಉತ್ತರ ಭಾರತದ ನವೆಂಬರ್ ತಿಂಗಳ ರಾತ್ರಿಯ ಚಳಿ ಸಾಮಾನ್ಯವೇ? ಸ್ವಲ್ಪ ಮಳೆ ಕೂಡ ಬಂದು ನನ್ನನ್ನು ಇನ್ನೂ ಹೆಚ್ಚಿನ ತೊಂದರೆಗೆ ಸಿಕ್ಕಿಸಿತ್ತು. ರಸ್ತೆ ಬದಿಯಲ್ಲಿ ಭಿಕ್ಷುಕರು ಸಿಕ್ಕಿದ್ದನ್ನು ಸುತ್ತಿಕೊಂಡು ಮಲಗಿದ್ದರೆ. ನಾಯಿಗಳು ಕೂಡ ಮೈ ಮುದುಡಿ ಸದ್ದಿಲ್ಲದೇ ಮಲಗಿಕೊಂಡಿದ್ದವು. ಅಂಗಿಯೊಳಗೆ ಇಟ್ಟುಕೊಂಡಿದ್ದ ಹಣದ ಲಕೋಟೆಗೆ ಕೈ ಹಾಕಿದೆ. ಅದು ಕೂಡ ಮಳೆಗೆ ನೆನದು ಹೋಗಿತ್ತು. ಅಲ್ಲೇ ಇದ್ದಿದ್ದರೆ, ರೋಮಿ ಬೆಳಗ್ಗೆ ಎದ್ದು ನನಗೆ ಅದರಿಂದ ಐದು ರೂಪಾಯಿ ಕೊಟ್ಟು ಸಿನೆಮಾಗೆ ಹೋಗುವಂತೆ ಹೇಳುತ್ತಿದ್ದನೋ ಏನೋ? ಆದರೆ ಪೂರ್ತಿ ಹಣ ಈಗ ನನ್ನದೇ. ಬೆಳಗ್ಗೆ ಎದ್ದ ತಕ್ಷಣ ಅವನಿಗೆ ಚಹಾ ಮಾಡುವ ತಾಪತ್ರಯ ಇನ್ನಿಲ್ಲ. ಓದುವ, ಬರೆಯುವ ಸಮಸ್ಯೆಯೂ ಕೂಡ ಇನ್ನೂ ಮುಂದೆ ಇಲ್ಲ.


ಅಯ್ಯೋ, ಓದುವುದು, ಬರೆಯುವುದು! ಕಳ್ಳತನ ಮಾಡುವುದು ಒಂದು ಸಣ್ಣ ಕೆಲಸ. ಆದರೆ ಓದಿ, ಬರೆದು ದೊಡ್ಡ ವ್ಯಕ್ತಿಯಾಗುವುದು, ಅದೇನು ಸಾಮಾನ್ಯ ಮಾತೆ? ಅದು ಮುಂದೊಂದು ದಿನ ನನಗೆ ನೂರಾರು ರೂಪಾಯಿ ದುಡಿಯುವಂತೆ ಮಾಡುತ್ತದೆ. ನಾನು ಹಾಗಾಗಬೇಕೆಂದರೆ ನಾನು ರೋಮಿಯ ಹತ್ತಿರ ವಾಪಸಾಗಬೇಕು. ಅವಸರದಲ್ಲಿ ಮತ್ತೆ ನಾನು ರೋಮಿಯ ಕೋಣೆ ತಲುಪಿದೆ. ರೋಮಿ ಇನ್ನೂ ಮಲಗೇ ಇದ್ದ. ಮೆತ್ತಗೆ, ಸದ್ದಾಗದಂತೆ ಆ ಲಕೋಟೆಯನ್ನು ದಿಂಬಿನ ಕೆಳಗೆ ಸೇರಿಸಿಬಿಟ್ಟೆ. ಅವನ ಉಸಿರು ನನ್ನ ಕೈ ತಾಕುತ್ತಿತ್ತು.


ನಾನು ಬೆಳಿಗ್ಗೆ ಎದ್ದೇಳುವಷ್ಟರಲ್ಲಿ ರೋಮಿ ಆಗಲೇ ಎದ್ದು ಚಹಾ ಮಾಡಿದ್ದ. ನನಗೂ ಕುಡಿಯಲು ಕೊಟ್ಟ.


"ನಿನ್ನೆ ನನಗೆ ದುಡ್ಡು ಬಂತು". ತನ್ನ ಕೈಯಿಂದ ಐವತ್ತು ರೂಪಾಯಿ ನೋಟು ನನಗೆ ಕೊಡುತ್ತ ರೋಮಿ ಹೇಳಿದ "ಇನ್ನು ಮೇಲೆ ನಿನಗೆ ಸಂಬಳ ಕೊಡಬಲ್ಲೆ"


ನನಗೆ ಭಾವಾವೇಶ ಉಂಟಾಯಿತು. ಕೈಯ್ಯಲ್ಲಿನ ನೋಟು ಇನ್ನೂ ಒದ್ದೆಯಾಗಿರುವುದು ನನ್ನ ಗಮನಕ್ಕೆ ಬಂತು. ಅವನಿಗೆ ನಾನು ಮಾಡಿದ ಕೆಲಸ ತಿಳಿದಿತ್ತು. ಆದರೆ ಅವನ ಬಾಯಿಂದ ಅದರ ಬಗ್ಗೆ ಯಾವ ಮಾತುಗಳು, ಅಥವಾ ಅವನ ಕಣ್ಣೋಟ ಕೂಡ ಅವನಿಗೆ ವಿಷಯ ತಿಳಿದಿದೆ ಎನ್ನುವುದು ಬಿಟ್ಟುಕೊಡಲಿಲ್ಲ.


"ಇವತ್ತಿನಿಂದ ಬರೆಯುವುದು ಪ್ರಾರಂಭಿಸೋಣ" ಅವನು ನನಗೆ ಹೇಳಿದ.


ರೋಮಿ ಅತ್ಯಂತ ಅಪ್ಯಾಯಮಾನ ವ್ಯಕ್ತಿಯಾಗಿ ನನಗೆ ಕಾಣಿಸಿದ. ನನ್ನ ಮುಖದಲ್ಲಿ ನನಗೆ ಅರಿವಿಲ್ಲದೆ ಮಂದಹಾಸ ಮೂಡಿತು.

Thursday, March 24, 2022

ಅತ್ತೆ-ಸೊಸೆ ಜಗಳ ಸಾಮಾನ್ಯವಾದಷ್ಟು ಇತರ ಜಗಳಗಳು ಏಕಲ್ಲ?

ಹೆಂಡತಿಗೆ ಅತ್ತೆ ಇದ್ದ ಹಾಗೆ, ಗಂಡನಿಗೂ ಅತ್ತೆ ಇರುತ್ತಾಳೆ. ಆದರೆ ಹೆಂಡತಿ ಅತ್ತೆ ಕಾಟ ಎಂದು ಸಂಕಟ ಪಟ್ಟಷ್ಟು ಗಂಡ ಸಂಕಟ ಪಡುವುದಿಲ್ಲ. ಅದು ಏಕಿರಬಹುದು?


ಮೊದಲಿಗೆ ಗಮನಿಸಬೇಕಾದ ಅಂಶವೆಂದರೆ, ಅತ್ತೆ-ಸೊಸೆ ಒಂದೇ ಮನೆಯಲ್ಲಿ ಇರಬೇಕು. ಆದರೆ ಗಂಡಸು ತನ್ನ ತಾಯಿಯ ಜೊತೆ ವಾಸಿಸುತ್ತಾನೆ, ಅತ್ತೆಯ ಜೊತೆ ಅಲ್ಲ. ಹಾಗಾಗಿ ಅವನಿಗೆ ಅತ್ತೆಯ ಕಾಟ ಇರದೇ ಹೋಗಬಹುದು. ಆದರೆ ಎಷ್ಟೋ ಗಂಡ-ಹೆಂಡತಿಯರು ಬೇರೆ ಮನೆ ಮಾಡಿಕೊಂಡು ಅತ್ತೆ-ಸೊಸೆ ಬೇರೆ ಬೇರೆ ವಾಸಿಸುತ್ತಿದ್ದರೂ, ಸೊಸೆಗೆ ಅತ್ತೆಯ ಕಂಡರೆ ಹಾಗೆಯೆ ಅತ್ತೆಗೆ ಸೊಸೆಯನ್ನು ಕಂಡರೆ ಆಗಿಬರುವುದಿಲ್ಲ. ಅದಕ್ಕೇನು ಹೇಳುತ್ತೀರಿ? ಕೆಲ ಗಂಡಸರು ಮನೆ ಅಳಿಯನಾಗಿ ಹೋಗಿರುತ್ತಾರಲ್ಲ. ಅವರಿಗೆ ಅತ್ತೆಯ ಕಾಟ ಇರುತ್ತೋ, ಇಲ್ಲವೋ? ನನಗೆ ಈ ವಿಷಯ ಗೊತ್ತಿಲ್ಲವಾದ್ದರಿಂದ ಕೇಳಿ ತಿಳಿಯಬೇಕು.


ಈ ಜಗಳಗಳೆಲ್ಲ ಹೆಣ್ಣು-ಹೆಣ್ಣುಗಳಲ್ಲಿ ಹೆಚ್ಚು. ಆದ್ದರಿಂದ ಅತ್ತೆ-ಸೊಸೆ ಜಗಳವಿದ್ದ ಹಾಗೆ ಅತ್ತೆ-ಅಳಿಯನ ಜಗಳ ಇರಲು ಸಾಧ್ಯವಿಲ್ಲ ಎನ್ನುವುದಾದರೆ ಗಂಡಸು-ಗಂಡಸರ ನಡುವೆ ಅಳಿಯ-ಮಾವನ ಜಗಳ ಇರಲು ಸಾಧ್ಯವೇ? ಮಾವನಿಗೆ ಅವನದೇ ಲೋಕ. ಅಳಿಯನಿಗೂ ಕೂಡ ಅವನದ್ದೇ ಆದ ಲೋಕ ಇರುತ್ತಾದ್ದರಿಂದ ಅವರು ಅದರಿಂದ ಹೊರ ಬಂದು ಜಗಳ ಕಾಯುವ ಸಾಧ್ಯತೆ ಕಡಿಮೆಯೇ ಎನ್ನಬಹುದು. ಒಂದು ವೇಳೆ ಮಾವ-ಅಳಿಯ ಜಗಳಕ್ಕೆ ಬಿದ್ದರೂ ಅದರಲ್ಲಿ ಯಾರೋ ಒಬ್ಬರು ಗೆದ್ದು ಸಮಸ್ಯೆ ಸ್ವಲ್ಪ ಸಮಯದಲ್ಲೇ ಇತ್ಯರ್ಥ ಆಗಿಬಿಡುತ್ತದೆ. ಗಂಡಸು ಕೋಳಿ ಜಗಳ ಎಲ್ಲಿ ಇಷ್ಟ ಪಡುತ್ತಾನೆ? ಇಷ್ಟಕ್ಕೂ ಅವಶ್ಯಕತೆ ಬಿದ್ದಾಗ ಜಗಳಕ್ಕೆ ಸಿದ್ಧವಾಗದ ಗಂಡಸಿಗೆ ಸಮಾಜ ಎಲ್ಲಿ ಬೆಲೆ ಕೊಡುತ್ತದೆ? ಹೇಡಿ ಎಂದು ಜರಿದು ಅವನನ್ನು ಕೆರಳಿಸಿ, ಅವನಿಂದ ಸೋಲೋ-ಗೆಲುವೋ ಎನ್ನುವ ಫಲಿತಾಂಶ ಬರಲು ಬಹು ಸಮಯ ತೆಗೆದುಕೊಳ್ಳುವುದಿಲ್ಲ. ಆ ಜಗಳ ಬಹು ಕಾಲ ಉಳಿಯುದಿಲ್ಲವಾದ್ದರಿಂದ, ಮಾವ-ಅಳಿಯರ ಜಗಳಗಳು ಅಷ್ಟು ಸಾಮಾನ್ಯವಾಗಿ ಕಂಡು ಬರುವುದಿಲ್ಲ.


ಇನ್ನೊಂದು ಕಡೆ ಹೆಂಗಸು-ಗಂಡಸಿನ ಜಗಳಗಳು ಯಾರೋ ಒಬ್ಬರು ಇನ್ನೊಬ್ಬರನ್ನು ಕ್ಷಮಿಸುವುದರೊಂದಿಗೆ ಇಲ್ಲವೇ  ಇವರ ಹಣೆ ಬರಹ ಇಷ್ಟೇ ಬಿಡು ಅನ್ನುವುದರೊಂದಿಗೆ ಇತ್ಯರ್ಥ ಆಗಿಬಿಡುತ್ತವೆ. ಸೊಸೆ ಅತ್ತೆಯ ಜೊತೆ ಜಗಳ ಕಾದಷ್ಟು ಸುಲಭವಾಗಿ, ಅನವಶ್ಯಕವಾಗಿ ಮಾವನ ಜೊತೆ ಜಗಳ ಕಾಯಲು ಹೋಗುವುದಿಲ್ಲ. ಹಾಗೆಯೇ ಅತ್ತೆ ಕೂಡ ಅಳಿಯನನ್ನು ಬೈಯುವಷ್ಟು ಬೈದು ಸುಮ್ಮನಾಗಿ ಬಿಡುತ್ತಾಳೆ. ಗಂಡ-ಹೆಂಡತಿಯರು ಏನು ಜಗಳ ಕಾದರೂ ಒಬ್ಬರಿಗೆ ಇನ್ನೊಬ್ಬರ ಅವಶ್ಯಕತೆ ಇರುತ್ತದಲ್ಲ. ಅವನು ಹೋಗಿ ಸಕ್ಕರೆ ತಂದರೆ ಇವಳು ಚಹಾ ಮಾಡುತ್ತಾಳೆ. ಅದಕ್ಕೆ ನೋಡಿ ಗಂಡ-ಹೆಂಡತಿ ಜಗಳ ಬಿಡಿಸಲು, ಸಂಧಾನಕ್ಕೆ ಹೋಗಲು ಹತ್ತಾರು ಜನ ರೆಡಿ. ಆದರೆ ಅತ್ತೆ-ಸೊಸೆ ಜಗಳ ಬಿಡಿಸಲು ಹೋಗುವರೆಷ್ಟು ಜನ?

 


ಕೊನೆಗೆ ಇದು ಅತ್ತೆ-ಸೊಸೆ ಜಗಳ ಸಾಮಾನ್ಯವಾಗಿ ಕಂಡು ಬಂದಷ್ಟು ಅತ್ತೆ-ಅಳಿಯನ, ಮಾವ-ಅಳಿಯನ ಅಥವಾ ಸೊಸೆ-ಮಾವನ ಜಗಳ ಕಂಡು ಬರುವುದಿಲ್ಲ ಎನ್ನುವಲ್ಲಿಗೆ ಬಂದು ನಿಲ್ಲುತ್ತದೆ. ಈ ಅತ್ತೆ-ಸೊಸೆ ಒಂದೇ ಸೂರಿನಡಿ ವಾಸಿಸದಿದ್ದರೂ, ಅವರ ನಡುವೆ ಜಗಳ ಕಾಯುವ ವಿಷಯ ಗಂಡಸೇ ಆಗಿರುತ್ತಾನೆ. ಆ ಗಂಡಸು ತುತ್ತಾ-ಮುತ್ತಾ ಎಂದು ಎಂದು ಹಾಡಿದರೆ, ಅವನ ತಾಯಿ ಮತ್ತು ಹೆಂಡತಿ ನಾನಾ-ನೀನಾ ಎನ್ನುವ ಸ್ಪರ್ಧೆಯಿಂದ ಹಿಂದೆ ಸರಿಯುವುದೇ ಇಲ್ಲ. ಅವರಲ್ಲಿ ಯಾರೋ ಒಬ್ಬರು ಮಚ್ಚು ಎತ್ತಿ ಕೊಲೆ ಮಾಡುವ ಧೈರ್ಯ ಮಾಡುವುದೂ ಇಲ್ಲ. ಮತ್ತು ಜಗಳ ಅಲ್ಲಿಗೆ ಬಿಟ್ಟು ಬಿಡುವ ದೊಡ್ಡ ಮನಸ್ಸು ಕೂಡ ಮಾಡುವದಿಲ್ಲ. ಬಿಡದ ಜಿಟಿ ಜಿಟಿ ಮಳೆಯಂತೆ, ಅತ್ತ ತೊಯ್ಯಿಸದು ಇತ್ತ ನೆಮ್ಮದಿಯಿಂದ ಓಡಾಡಲು ಬಿಡದು ಎನ್ನುವಂತೆ ಅವರ ಜಗಳ ನಿರಂತರ  ಆಗಿರುತ್ತದೆ.


ಕಾಲಾಂತರದಲ್ಲಿ ಸೊಸೆ ಅತ್ತೆಯ ಸ್ಥಾನಕ್ಕೆ ಬಂದರೂ ಯಾವುದೇ ಬದಲಾವಣೆ ಆಗುವುದಿಲ್ಲ. ಏಕೆಂದರೆ ಅವರಿಗೆ ಸಮಸ್ಯೆ ಬಗೆ ಹರಿಸಿಕೊಳ್ಳುವುದು ಬೇಕಿಲ್ಲ ಹಾಗಾಗಿ ಅವರ ನಡುವೆ ಯಾವುದೇ ರಾಜಿ-ಸಂಧಾನಗಳು ಫಲಪ್ರದವಾಗುವುದಿಲ್ಲ. ಸೂರ್ಯ-ಚಂದ್ರರು ತಮ್ಮ ತಮ್ಮ ಸಮಯಕ್ಕೆ  ಆಕಾಶವನ್ನು ಆಕ್ರಮಿಸಿಕೊಂಡಂತೆ, ಅವರ ಹೊಳಪಿನಲ್ಲಿ ಇತರೆ ನಕ್ಷತ್ರಗಳು ಮಂಕಾಗಿ ಕಾಣುವಂತೆ,  ಕುಟುಂಬವೆಂಬ ಆಕಾಶದಲ್ಲಿ ಅತ್ತೆ-ಸೊಸೆಯರ ಅಸಮಾಧಾನಗಳು ಕೂಡ ನಿರಂತರ. ಇತರೆ ಎಲ್ಲ ಜಗಳಗಳು ಒಮ್ಮೆ ಹೊಳೆದು ಮರೆಯಾಗಿ ಹೋಗುವ ನಕ್ಷತ್ರಗಳ ತರಹ.

Wednesday, March 23, 2022

ಹಿತಶತ್ರುವೆಂಬ ಮಹಾನ್ ಗುರು

ಎದೆಯ ದೀಪ ಹೊತ್ತಿಸಲು,

ಆತ್ಮದ ಅಜ್ಞಾನ ಕಳೆಯಲು, 

ಮೂರ್ಖ ಮಿತ್ರನಿಗಿಂತ, 

ಬುದ್ದಿವಂತ ಶತ್ರುವೇ ಲೇಸು

 

- ರೂಮಿ, ಪರ್ಷಿಯಾ ದೇಶದ ಕವಿ



ಸಾಧಾರಣವಾಗಿ ನಮಗೂ, ನಮ್ಮ ಶತ್ರುಗಳಿಗೂ ನಡುವಳಿಕೆಗಳಲ್ಲಿ, ವಿಚಾರ ಶೈಲಿಯಲ್ಲಿ ಅಥವಾ ಜೀವನದ ಉದ್ದೇಶಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿರುತ್ತವೆ. ಅದಕ್ಕೆ ಅವರಿಗೂ ನಮಗೂ ಆಗದೆ ಶತ್ರುತ್ವ ಬೆಳೆದಿರುತ್ತದೆ. ಆದರೆ ಹಿತಶತ್ರುಗಳು? ಅವರು ನಮ್ಮೊಡನೆ, ನಮ್ಮ ಸ್ನೇಹಿತರ ಹಾಗೆ ಇರುತ್ತಾರೆ. ಮೇಲ್ನೋಟಕ್ಕೆ ಅವರ ಉದ್ದೇಶಗಳ ಅರ್ಥ ನಮಗಾಗದೆ ಹೋಗಿರುತ್ತದೆ. ಅವರ ಮೇಲೆ ಸಂಶಯ ಪಡಲು ಯಾವುದೇ ಕಾರಣ ಇರುವುದಿಲ್ಲ. ಆದರೆ ಪೆಟ್ಟಿಗೆ ಬಿದ್ದಾಗ ಇದು ಏನು ಎಂದು ಅರಿತುಕೊಳ್ಳಲು ಸಾಕಷ್ಟು ಸಂಶೋಧನೆ ನಡೆಸಿದಾಗ, ಈ ಹಿತ ಶತ್ರುಗಳ ನಿಜ ಬಣ್ಣ ಬಯಲಾಗುತ್ತ ಹೋಗುತ್ತದೆ. ಮಹಾಭಾರತದ ಶಕುನಿ ಕೌರವರ ನಾಶಕ್ಕೆ ಒಳ ಸಂಚು ಹಾಕಿದಂತೆ ನಮ್ಮ ಹಿತ ಶತ್ರುಗಳು ನಮ್ಮ ವಿನಾಶಕ್ಕೆ ಪಟ್ಟು ಹಾಕಿರುವುದು ಮೆಲ್ಲಗೆ ಅರಿವಿಗೆ ಬರುತ್ತಾ ಹೋಗುತ್ತದೆ.

 

ಇವರ ಮೇಲೆ ಸಂಶಯ ಪಟ್ಟರೆ ಮೊದಮೊದಲಿಗೆ ಯಾರೂ ನಿಮ್ಮನ್ನು ನಂಬುವುದಿಲ್ಲ. ಬದಲಿಗೆ ನಿಮ್ಮ ತಲೆ ನೆಟ್ಟಗಿದೆಯೋ ಎನ್ನುವಂತೆ ನೋಡುತ್ತಾರೆ. ಹಾಗಾಗಿ ನಿಮಗೆ ವಿಷಯದ ಬಗ್ಗೆ ಸ್ಪಷ್ಟತೆ ಬರಲು ಯಾರೂ ಜೊತೆಗಾರರು ಅಥವಾ ಯಾವುದೇ ತರಹದ ನೆರವು ದೊರಕುವುದಿಲ್ಲ. ಎರಡನೆಯದು ಅವರು ನಿಮ್ಮ ಹಿತೈಷಿಗಳಂತೆ ಸಮಾಜಕ್ಕೆ ತೋರುವುದರಿಂದ ನಿಮ್ಮ ಬಗೆಗಿನ ಎಲ್ಲ ಮಾಹಿತಿ ಅವರಿಗೆ ಲಭ್ಯ. ಎಲ್ಲಕ್ಕಿಂತ ಮುಖ್ಯವಾಗಿ ಅವರನ್ನು ಪ್ರಬಲವಾಗಿ ವಿರೋಧಿಸಿದರೆ, ಜನ ನಿಮ್ಮನ್ನು ತಪ್ಪಾಗಿ ತಿಳಿದುಕೊಳ್ಳುವ ಸಾಧ್ಯತೆಯೇ ಹೆಚ್ಚು. ಈ ಎಲ್ಲ ಅನುಕೂಲಗಳನ್ನು ನಿಮ್ಮ ಹಿತಶತ್ರುಗಳು ಬಳಸಿಕೊಂಡು ನಿಮ್ಮ ಸುತ್ತ ಬಲೆ ಹೆಣೆಯತೊಡಗುತ್ತಾರೆ. ಇದು ನಿಮಗೆ ಅರಿವಿಗೆ ಬಂದರೂ ಆ ಕ್ಷಣದಲ್ಲಿ ನೀವು ನಿಸ್ಸಹಾಯಕರು. ಕಷ್ಟ ಪಟ್ಟು ನೀವು ಸಾಕ್ಷಿ, ಆಧಾರಗಳನ್ನು ಕಲೆ ಹಾಕಿ ಅವರನ್ನು ತೆರೆದಿಡುತ್ತಾ ಹೋಗುವವರೆಗೆ ನೀವು ಒಬ್ಬಂಟಿ. ಹಾಗೆಂದು ಅವರು ಸೋಲಿಲ್ಲದ ಸರದಾರರೇನಲ್ಲ.

 

ಕುಸ್ತಿಯ ಪಟ್ಟುಗಳನ್ನು ನೀವು ಕಲಿಯುತ್ತ ಹೋದಂತೆ ನಿಮಗೆ ವಿಷಯ ಅರಿವಾಗಿದೆ ಎಂಬ ಸೂಕ್ಷ್ಮ ಅರಿವು ಅವರಿಗೆ ಬಂದು ಬಿಡುತ್ತದೆ. ಅಲ್ಲಿಂದ ಅವರು ನಿಮ್ಮ ಮೇಲಿನ ಹಿಡಿತ ಸಡಿಲಿಸಬಹುದು ಅಥವಾ ಬಹಿರಂಗ ಜಗಳಗಳಿಗೆ ಇಳಿಯಬಹುದು. ಅದು ಬೇಗನೆ ಬಹಿರಂಗಗೊಂಡಷ್ಟು ನಿಮಗೆ ಅನುಕೂಲ ಜಾಸ್ತಿ. ಅವರ ಉದ್ದೇಶ ಅರಿವಾದಂತೆ ಅವರ ಶತ್ರುಗಳು ನಿಮ್ಮ ಸ್ನೇಹಿತರಾಗುತ್ತಾರೆ ಮತ್ತು ನಿಮ್ಮ ಬಲಹೀನತೆಗಳ ಮಾಹಿತಿ ಅವರಿಗೆ ದೊರಕುವ ಸಾಧ್ಯತೆ ಕಡಿಮೆ ಆಗುತ್ತದೆ. ಆದರೆ ಅಲ್ಲಿಯವರೆಗಿನ ಶೀತಲ ಸಮರ ನಿಮಗೆ ಮನುಷ್ಯ ಕುಲದ ವಿಚಿತ್ರ ಮತ್ತು ವಿಲಕ್ಷಣ ಎನ್ನಿಸುವ ಗುಣ-ಸ್ವಭಾವಗಳ ದರ್ಶನ ಮಾಡಿಸುತ್ತ ಹೋಗುತ್ತದೆ.

 

ಹಿತ ಶತ್ರುಗಳನ್ನು ನಾನೇಕೆ ಮಹಾನ್ ಗುರು ಎಂದೆನೆಂದು ನಿಮಗೆ ಈಗಾಗಲೇ ಅಂದಾಜು ಬಂದಿರಬಹುದು. ಏಕೆಂದರೆ ಹಿತೈಷಿಗಳು ಎಂದು ತೋರಿಸಿಕೊಂಡವರೆಲ್ಲ ನಂಬಿಕೆಗೆ ಅರ್ಹರಲ್ಲ ಎನ್ನುವ ಪಾಠ ಅವರು ನಮಗೆ ಕಲಿಸಿರುತ್ತಾರೆ. ನಮ್ಮ ದೌರ್ಬಲ್ಯಗಳನ್ನು ಹಂಚಿಕೊಳ್ಳುವ ಮುನ್ನ ನಾವು ಹುಷಾರಾಗಿ ಇರಬೇಕು ಇಲ್ಲದಿದ್ದರೆ ಅವುಗಳು ನಮ್ಮ ಮೇಲೆಯೇ ಪ್ರಯೋಗಿಸಲ್ಪಡುತ್ತವೆ  ಎನ್ನುವ ಅರಿವು ಅವರು ನಮಗೆ ಮೂಡಿಸಿರುತ್ತಾರೆ. ಅವರ ಮೇಲೆ ಜಗಳಕ್ಕೆ ಹೋಗುವ ಮುನ್ನ ಯಾವ ಸ್ನೇಹಿತರು ನಮ್ಮ ನೆರವಿಗೆ ಬಂದಾರು ಮತ್ತು ಯಾರ ಬೆಂಬಲ ನಮಗೆ ಸಿಕ್ಕೀತು ಎಂದು ತಿಳಿದಿಕೊಳ್ಳುವ ಪ್ರಜ್ಞೆ ನಮ್ಮಲ್ಲಿ ಬೆಳೆಯುವಂತೆ ಮಾಡಿರುತ್ತಾರೆ.

 

ಲೆಕ್ಕಕ್ಕೆ ಸಿಗದ ಎಷ್ಟೋ ಪಾಠಗಳನ್ನು ಜೀವನ ನಮಗೆ ನಿಧಾನವಾಗಿ ಕಲಿಸುತ್ತ ಹೋಗುತ್ತದೆ. ಆದರೆ ನಮ್ಮ ಹಿತಶತ್ರುಗಳು ನಮ್ಮನ್ನು ಶೀಘ್ರ ಹಾದಿಯಲ್ಲಿ ಅಲ್ಲಿಗೆ ತಲುಪುವಂತೆ ಮಾಡುತ್ತಾರೆ. ಅನುಭವಕ್ಕಿಂತ ದೊಡ್ಡ ಗುರು ಇಲ್ಲವಾದರೆ, ಅಂತಹ ಅನುಭವ ಕೊಡುವ ನಮ್ಮ ಹಿತಶತ್ರುಗಳು ನಮಗೆ ಮಹಾನ್ ಗುರುಗಳಲ್ಲದೆ ಇನ್ನೇನು? ಒಂದೆರಡು ಸಲ ಅನುಭವ ಆದ ಮೇಲೆ ಅವರನ್ನು ದೂರದಿಂದಲೇ ಗುರುತಿಸುವ ಮತ್ತು ಅವರಿಂದ ತೊಂದರೆ ಆಗದಂತೆ ಎಚ್ಚರ ವಹಿಸುವ ಗುಣಗಳು ನಮ್ಮಲ್ಲಿ ಅಡಕವಾಗುತ್ತ ಹೋಗುತ್ತವೆ. ಇಂತಹ ಅನುಭವಗಳು ಚಿಕ್ಕ ವಯಸ್ಸಿನಲ್ಲೇ ಆದಷ್ಟು ಒಳ್ಳೆಯದು. ಆದರೆ ಎಲ್ಲರ ಜೀವನವು ಒಂದೇ ತರಹ ಎಲ್ಲಿರುತ್ತದೆ? ಅಥವಾ ನಿಮಗೆ ಈ ವಿಷಯದಲ್ಲಿ ನನಗಿಂತ ಹೆಚ್ಚಿನ ಪರಿಣಿತಿ ಇರಬಹುದು. ಆದರೂ ನಿಮ್ಮ ಹತ್ತಿರ ಅಂತರಂಗ ಅರಿತುಕೊಂಡ ವಿಷಯಗಳನ್ನು ಹಂಚಿಕೊಂಡಾಗಲೇ ಸಮಾಧಾನ. ನಿಮ್ಮ ಅಭಿಪ್ರಾಯ ಏನು?

Saturday, March 19, 2022

ಕಥೆ: ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ

(ಇದು ರವೀಂದ್ರನಾಥ ಟಾಗೋರ್ ಅವರು ಬರೆದ 'Once there was a king' ಕಥೆಯ ಭಾವಾನುವಾದ)


"ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ"


ನಾವು ಮಕ್ಕಳಾಗಿದ್ದಾಗ ಆ ಕಥೆಯಲ್ಲಿರುವ ರಾಜ ನಿಖರವಾಗಿ ಯಾರು ಎಂದು ತಿಳಿದುಕೊಳ್ಳುವ ಅವಶ್ಯಕತೆ ಇರಲಿಲ್ಲ. ಅವನ ಹೆಸರು ವಿಕ್ರಮಾದಿತ್ಯನೋ ಅಥವಾ ಬೇರೆಯೋ ಆಗಿದ್ದರೆ ಮತ್ತು ಅವನು ಆಳಿದ್ದು ಕಾಶಿಯಲ್ಲೋ ಇಲ್ಲವೇ ಉಜ್ಜಯಿನಿಯಲ್ಲೋ ಆಗಿದ್ದರೂ ನಮಗೆ ಯಾವ ವ್ಯತ್ಯಾಸವೂ ಅನ್ನಿಸುತ್ತಿರಲಿಲ್ಲ. ಏಳು ವರುಷದ ಹುಡುಗನ ಹೃದಯ ಬಡಿತ ಸಂತೋಷದಿಂದ ಏರಲು ಕಥೆ ಶುರುವಾಗಿದ್ದರೆ ಸಾಕಿತ್ತು "ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ ..."


ಆದರೆ ಇಂದಿನ ಕಾಲದ ಕೆಲವು ಓದುಗರಿಗೆ ಅದು ಸಾಕಾಗುವುದಿಲ್ಲ. ಅವರಿಗೆ ವ್ಯಕ್ತಿ ಮತ್ತು ಸ್ಥಳಗಳ ಹೆಸರುಗಳು ಕರಾರುವಕ್ಕಾಗಿ ಇರಬೇಕು. ಇಲ್ಲದಿದ್ದರೆ ಅವರು ಶುರುವಲ್ಲಿಯೇ ಕೇಳಿಬಿಡುತ್ತಾರೆ "ಅದು ಯಾವ ರಾಜ?"


ಹಾಗಾಗಿ ಕಥೆ ಹೇಳುವವರು ಖಚಿತವಾದ ಮಾಹಿತಿಯೊಂದಿಗೆ ಕಥೆ ಹೇಳಲು ಶುರು ಮಾಡುತ್ತಾರೆ "ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ಅವನ ಹೆಸರು ಅಜಾತಶತ್ರು"


ಆದರೆ ಆಧುನಿಕ ಕಾಲದ ಓದುಗರಿಗೆ ಇಷ್ಟು ಸಾಕಾಗುವುದಿಲ್ಲ. ಕಣ್ಣು ರೆಪ್ಪೆ ಬಡಿಯುವುದರಲ್ಲೇ ಕೇಳಿ ಬಿಡುತ್ತಾರೆ "ಯಾವ ಅಜಾತಶತ್ರು?"


ಆಗ ಕಥೆಗಾರ ಸ್ಪಷ್ಟನೆ ಕೊಡಲಾರಂಭಿಸುತ್ತಾನೆ. ಇತಿಹಾಸದಲ್ಲಿ ಮೂವರು ಅಜಾತಶತ್ರುಗಳಿದ್ದಾರೆ. ಮೊದಲನೆಯವನು ಕ್ರಿ.ಪೂ. ಎರಡನೇ ಶತಮಾನದಲ್ಲಿ ಹುಟ್ಟಿ, ಸಣ್ಣ ವಯಸ್ಸಿನಲ್ಲೇ ಸಾಯುತ್ತಾನೆ. ಅವನ ಬಗ್ಗೆ ಹೆಚ್ಚಿನ ಮಾಹಿತಿ ಯಾರಿಗೂ ತಿಳಿದಿಲ್ಲ. ಎರಡನೆಯ ಅಜಾತಶತ್ರುವಿನ ಬಗ್ಗೆ ಸಾಕಷ್ಟು ಮಾಹಿತಿಯನ್ನು ಇತಿಹಾಸಕಾರರು ದಾಖಲಿಸಿದ್ದಾರೆ. ನೀವು ಎನ್ ಸೈಕ್ಲೊಪೀಡಿಯಾ ತೆಗೆದು ನೋಡಿದರೆ ..."


ಆಗ ಆಧುನಿಕ ಕಾಲದ ಓದುಗರ ಸಂಶಯ ನಿವಾರಣೆ ಆಗುತ್ತದೆ.


ಇಂಗ್ಲಿಷ್ ಭಾಷೆಯಲ್ಲಿ ಒಂದು ಗಾದೆ ಮಾತಿದೆ. "ನೀವು ಯಾವ ಪ್ರಶ್ನೆ ಕೇಳದಿದ್ದರೆ, ನಾನು ಯಾವ ಸುಳ್ಳು ಹೇಳುವುದಿಲ್ಲ". ಕಥೆ ಇಷ್ಟ ಪಡುವ ಎಲ್ಲ ಚಿಕ್ಕ ಹುಡುಗರಿಗೂ ಈ ವಿಷಯ ಚೆನ್ನಾಗಿ ಗೊತ್ತಿರುತ್ತದೆ. ಹಾಗಾಗಿ ಅವರು ಕಥೆ ಕೇಳುವಾಗ ಪ್ರಶ್ನಿಸದೆ, ಸುಂದರ ಸುಳ್ಳುಗಳನ್ನು, ಪಾರದರ್ಶಕ ಸತ್ಯವೆಂದೇ ಒಪ್ಪಿಕೊಂಡು ಕಾಲ್ಪನಿಕ ಕಥೆಯಲ್ಲಿ ಮುಳುಗಿ ಹೋಗುತ್ತಾರೆ.


ಒಂದು ದಿನ ಸಂಜೆ ಆ ಕಥೆ ಕೇಳಿದ ದಿನ ನನಗೆ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಮಳೆ, ಬಿರುಗಾಳಿ ಅಂದು ಕಲ್ಕತ್ತೆಯಲ್ಲಿ ಪ್ರವಾಹವನ್ನೇ ಸೃಷ್ಟಿಸಿದ್ದವು. ನಮ್ಮ ಬೀದಿಯಲ್ಲಿ ಮೊಳಕಾಲಿನವರೆಗೆ ನೀರು ಹರಿಯುತ್ತಿತ್ತು. ಮನೆಯ ಜಗುಲಿಯಲ್ಲಿ, ಮಳೆಯನ್ನೇ ನೋಡುತ್ತಾ ನನಗೆ ಟ್ಯೂಷನ್ ಹೇಳಿಕೊಡುವ ಶಿಕ್ಷಕರು ಬಂದೇ ಬಿಡುತ್ತಾರೇನೋ ಎನ್ನುವ ಆತಂಕದಲ್ಲಿ ಕುಳಿತಿದ್ದೆ. ಮನದಲ್ಲಿ 'ಮಳೆ ಕಡಿಮೆ ಆಗದಿರಲಿ ದೇವರೇ' ಎಂದು ಕೇಳಿಕೊಳ್ಳುತ್ತಿದ್ದೆ. ದೇವರಿಗೆ ನನ್ನ ಪ್ರಾರ್ಥನೆ ಕೇಳಿಸಿದಂತೆ ಮಳೆ ಕಡಿಮೆಯೇ ಆಗಲಿಲ್ಲ. ಆದರೆ ನನ್ನ ಶಿಕ್ಷಕರು ಕೂಡ ಬಿಡಲು ತಯಾರಿರಲಿಲ್ಲ. ಸಮಯಕ್ಕೆ ಸರಿಯಾಗಿ ಅವರು ಕೊಡೆ ಹಿಡಿದು ಬರುವುದನ್ನು ನೋಡಿಯೇ ಬಿಟ್ಟೆ. ಕೂಡಲೇ ಮನೆಯೊಳಗೇ ಓಡಿ ಹೋದೆ. ನನ್ನ ಅಮ್ಮ, ಅಜ್ಜಿಯ ಜೊತೆ ಮಾತನಾಡುತ್ತ ಕೂತಿದ್ದರು. ನಾನು ಅಮ್ಮನ ಪಕ್ಕ ಮುದುರಿ ಕೂತು 'ಅಮ್ಮ, ಶಿಕ್ಷಕರು ಬಂದಿದ್ದಾರೆ. ಆದರೆ ನನಗೆ ವಿಪರೀತ ತಲೆ ನೋವು. ಇವತ್ತು ನನಗೆ ಟ್ಯೂಷನ್ ಬೇಡ.'


ಬುದ್ಧಿ ತಿಳಿಯದ ಆ ವಯಸ್ಸಿನಲ್ಲಿ ನಾನು ಹಾಗೆ ನಡೆದುಕೊಂಡಿದ್ದು ಇಂದಿನ ಓದುಗರು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಆದರೆ ನನ್ನ ಅಮ್ಮ "ಸರಿ" ಎಂದು ಹೇಳಿಯೇಬಿಟ್ಟಳು ಮತ್ತು ಬಂದಿದ್ದ ಶಿಕ್ಷಕರಿಗೆ ವಾಪಸ್ಸಾಗುವಂತೆ ಸೂಚಿಸಿದಳು. ಅವಳಿಗೆ ನನಗೆ ಯಾವ ತಲೆನೋವು ಇಲ್ಲವೆಂದು ತಿಳಿದಿತ್ತು. ಹಾಗಾಗಿ ನನ್ನ ಬಗ್ಗೆ ಯಾವ ವಿಶೇಷ ಕಾಳಜಿಯನ್ನು ತೋರಲಿಲ್ಲ. ನಾನು ತಲೆದಿಂಬಿನಲ್ಲಿ ಮುಖ ಹುದುಗಿಸಿ ಮನಸಾರೆ ನಕ್ಕು ಬಿಟ್ಟೆ. ನಾನು ಮತ್ತು ನನ್ನಮ್ಮ ಒಬ್ಬರನ್ನೊಬ್ಬರು ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೆವು.


ಸ್ವಲ್ಪ ಹೊತ್ತಿಗೆ ನಾನು ಅಜ್ಜಿಗೆ ಕಥೆ ಹೇಳಲು ಪೀಡಿಸಲಾರಂಭಿಸಿದೆ. ನಾನು ಹಿಡಿದ ಪಟ್ಟು ಬಿಡುವುದಿಲ್ಲ ಎಂದು ಗೊತ್ತಿದ್ದ ನನ್ನ ಅಮ್ಮ, ತಾನು ಅಜ್ಜಿಯೊಡನೆ ಆಡುತ್ತಿದ್ದ ಮಾತು ನಿಲ್ಲಿಸಿ ಅಜ್ಜಿಗೆ ಹೇಳಿದಳು 'ಅವನು ಕೇಳಿದ್ದು ನಾವು ಮಾಡದಿದ್ದರೆ ನಮಗೆ ಅವನನ್ನು ನಿಭಾಯಿಸಲು ಆಗುವುದಿಲ್ಲ'.


ನಾನು ಅಜ್ಜಿಯ ಕೈ ಹಿಡಿದು, ನನ್ನ ಹಾಸಿಗೆಯವರೆಗೆ ಕರೆದೊಯ್ದು 'ಅಜ್ಜಿ ಈಗ ಕಥೆ ಹೇಳು' ಎಂದು ಹಟ ಮಾಡಿದೆ. ಅಜ್ಜಿ ಕಥೆ ಶುರು ಮಾಡಿದಳು "ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ಅವನಿಗೆ ಒಬ್ಬ ರಾಣಿಯಿದ್ದಳು".


ಇದು ಒಳ್ಳೆಯ ಆರಂಭ. ಎಷ್ಟೋ ಕಥೆಗಳಲ್ಲಿ ರಾಜನಿಗೆ ಹಲವಾರು ರಾಣಿಯರಿರುತ್ತಾರೆ. ಅದು ಕೇಳಿದೊಡನೆ ನಮಗೆ ಹೃದಯ ಕುಸಿದ ಅನುಭವ ಆಗತೊಡಗುತ್ತದೆ. ಏಕೆಂದರೆ ಅಲ್ಲಿ ಒಬ್ಬ ರಾಣಿಗಾದರೂ ಅಸಮಾಧಾನ ಇದ್ದೆ ಇರುತ್ತದೆ. ಈ ಕಥೆಯಲ್ಲಿ ಅಂತಹ ಅಪಾಯ ಇಲ್ಲ. ಏಕೆಂದರೆ ಈ ಕಥೆಯ ರಾಜನಿಗೆ ಒಬ್ಬಳೇ ರಾಣಿ ಇದ್ದಾಳೆ.


ಅಜ್ಜಿ ಕಥೆ ಮುಂದುವರೆಸುತ್ತಾಳೆ. ಆ ರಾಜನಿಗೆ ಮಗಳಿದ್ದಾಳೆ. ಆದರೆ ಗಂಡು ಸಂತಾನ ಇರುವುದಿಲ್ಲ.


ಏಳು ವರುಷದ ಹುಡುಗನಿಗೆ ಗಂಡು ಸಂತಾನ ಇರದಿದ್ದರೆ ಏಕೆ ಚಿಂತಿಸಬೇಕು ಎಂದು ಅರ್ಥವಾಗುವುದು ಕಷ್ಟ. ಈಗ ಇರದಿದ್ದರೆ ಮುಂದೆ ಹುಟ್ಟಬಹುದಲ್ಲವೇ ಎನ್ನುವುದು ಅವನ ವಿಚಾರ.   


ಆದರೆ ಅಜ್ಜಿಯ ಕಥೆ ಮುಂದೆ ಸಾಗುತ್ತದೆ. ಚಿಂತೆಯಿಂದ ರಾಜ ಗಂಡು ಸಂತಾನಕ್ಕಾಗಿ ದೇವರನ್ನು ಪ್ರಾರ್ಥಿಸಿ ತಪಸ್ಸು ಮಾಡಲು ಕಾಡಿಗೆ ಹೊರಡುತ್ತಾನೆ. ರಾಣಿಯನ್ನು, ಚಿಕ್ಕ ಮಗಳನ್ನು ಅರಮನೆಯಲ್ಲೇ ಬಿಟ್ಟು ರಾಜ ಹೊರಡುತ್ತಾನೆ. ಹನ್ನೆರಡು ವರ್ಷಗಳು ಕಳೆದು ಹೋಗುತ್ತವೆ. ಅವನ ಮಗಳು ಬೆಳೆದು ನಿಂತು ಸುಂದರ ಯುವತಿಯಾಗುತ್ತಾಳೆ. ಬೆಳೆದು ನಿಂತ ಮಗಳಿಗೆ ಮದುವೆ ಮಾಡಲು ರಾಜನಿಲ್ಲದೆ ರಾಣಿಗಷ್ಟೇ ಹೇಗೆ ಸಾಧ್ಯ? ಅವಳು ರಾಜನಿಗೆ ಒಂದು ದಿನ ಮಟ್ಟಿಗಾದರೂ ಬಂದು ಹೋಗುವಂತೆ ಹೇಳಿಕಳಿಸುತ್ತಾಳೆ.


ಅದಕ್ಕೆ ಒಪ್ಪಿದ ರಾಜ ಅರಮನೆಗೆ ಮರಳುತ್ತಾನೆ. ರಾಣಿ ತನ್ನ ಕೈಯಿಂದಲೇ ವಿಧ ವಿಧದ ಭಕ್ಷ್ಯಗಳನ್ನು ತಯಾರಿಸಿ ಕಾಯುತ್ತಿರುತ್ತಾಳೆ. ಅವಳ ಮಗಳು ನವಿಲು ಗರಿಯ ಬೀಸಣಿಕೆ ಹಿಡಿದು ರಾಜನಿಗೆ ಸೇವೆ ಮಾಡಲು ನಿಂತಿರುತ್ತಾಳೆ. ಅಲ್ಲಿಗೆ ಬಂದ ರಾಜ "ಸೌಂದರ್ಯದ ಖನಿಯಾಗಿರುವ ಈ ಹುಡುಗಿ ಯಾರು? ಯಾರ ಮಗಳು?" ಎಂದು ರಾಜ, ರಾಣಿಯನ್ನು ಪ್ರಶ್ನಿಸುತ್ತಾನೆ. ರಾಣಿ ಹಣೆ ಚಚ್ಚಿಕೊಳ್ಳುತ್ತ "ನಿಮ್ಮ ಮಗಳನ್ನು ನೀವು ಗುರುತು ಹಿಡಿಯದೇ ಹೋದಿರಾ?" ಎಂದು ಪ್ರಶ್ನಿಸುತ್ತಾಳೆ. ಅದನ್ನು ಕೇಳಿ ಉಲ್ಲಾಸಭರಿತನಾದ ರಾಜ "ನಾಳೆ ನಾನು ನೋಡಿದ ಪ್ರಥಮ ವ್ಯಕ್ತಿಯೊಂದಿಗೆ ಇವಳ ಮದುವೆ ಮಾಡುತ್ತೇನೆ" ಎಂದು ಹೇಳುತ್ತಾನೆ.


ಮರುದಿನ ಅರಮನೆಯ ಹೊರಗೆ ಕಟ್ಟಿಗೆ ಆಯಲು ಬಂದ ಒಬ್ಬ ಬ್ರಾಹ್ಮಣ ಹುಡುಗನನ್ನು ರಾಜ ನೋಡುತ್ತಾನೆ. ಅವನಿನ್ನೂ ಏಳೆಂಟು ವರುಷದವನು. ಆದರೆ ರಾಜ ಅವನಿಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಲು ನಿರ್ಧರಿಸುತ್ತಾನೆ. ರಾಜನ ನಿರ್ಧಾರವನ್ನು ಪ್ರಶ್ನಿಸುವ ಧೈರ್ಯ ಯಾರಿಗುಂಟು? ತಡವಿಲ್ಲದೆ ಅವನ ಮಗಳ ಮದುವೆ ಆ ಬ್ರಾಹ್ಮಣ ಹುಡುಗನೊಂದಿಗೆ ನಡೆದೇ ಹೋಗುತ್ತದೆ.


"ಆಮೇಲೆ ಏನಾಯಿತು?" ನಾನು ಅಜ್ಜಿಗೆ ಕೇಳಿದೆ. ಹೀಗೆ ಸೊಗಸಾಗಿ ಕಥೆ ಹೇಳುವ ಅಜ್ಜಿ ಮುಂದಿನ ಜನ್ಮದಲ್ಲೂ ಅಜ್ಜಿಯಾಗೇ ಹುಟ್ಟಬೇಕು ಎಂದು ಮನಸ್ಸಿನಲ್ಲೇ ಅಂದುಕೊಂಡೆ.


ಅಜ್ಜಿ ಕಥೆ ಮುಂದುವರೆಸಿದಳು. ರಾಜಕುಮಾರಿ ತನ್ನ ಹೊಸ ಅರಮನೆಗೆ ಇನ್ನೂ ಬಾಲಕನಾದ ಗಂಡನನ್ನು ಕರೆದುಕೊಂಡು ಹೋಗುತ್ತಾಳೆ. ಆ ಹುಡುಗನನ್ನು ಶಾಲೆಗೆ ಕಳಿಸಿ ವಿದ್ಯಾಭ್ಯಾಸ ಮುಂದುವರೆಯುವಂತೆ ಏರ್ಪಾಡು ಮಾಡಲಾಗಿತ್ತು. ಶಾಲೆಯಲ್ಲಿ ಅವನ ಸ್ನೇಹಿತರೆಲ್ಲ, ಅರಮನೆಯಲ್ಲಿರುವ ಆ ಸುಂದರ ಹೆಣ್ಣು ಅವನಿಗೆ ಏನಾಗಬೇಕು ಎಂದು ಕೇಳುತ್ತಿದ್ದರು. ಆ ಬಾಲಕನಿಗೋ ಒಂದು ದಿನ ಅವಳ ಜೊತೆ ಹಾರ ಬದಲಿ ಮಾಡಿಕೊಂಡ ನೆನಪು ಮಾತ್ರ ಉಂಟು. ಅದಕ್ಕಿಂತ ಹೆಚ್ಚಿಗೆ ಅವನಿಗೆ ಏನು ತಿಳಿಯದು. ನಾಲ್ಕು-ಐದು ವರುಷಗಳು ಕಳೆದು ಹೋದವು. ಅವನ ಸ್ನೇಹಿತರು ಅರಮನೆಯಲ್ಲಿರುವ ಸುಂದರ ಹೆಣ್ಣು ಯಾರು ಎಂದು ಕೇಳುತ್ತಲೇ ಇದ್ದರು. ಅವನು ಮನೆಗೆ ಬಂದೊಡನೆ ಯುವರಾಣಿಗೆ ಕೇಳಿಯೇ ಬಿಟ್ಟ. "ನನ್ನ ಸ್ನೇಹಿತರೆಲ್ಲ ನೀನಾರು ಎಂದು ಕೇಳುತ್ತಿದ್ದಾರೆ. ಯಾರು ನೀನು?" ಅದಕ್ಕೆ ಯುವರಾಣಿ "ಅದು ಇಂದಿಗೆ ಬೇಡ. ಮುಂದೆ ಎಂದಾದರೂ ಆ ವಿಷಯ ಹೇಳುತ್ತೇನೆ" ಎಂದು ಹೇಳಿದಳು. ಹಾಗೆಯೆ ಇನ್ನು ಕೆಲವು ವರುಷಗಳು ಕಳೆದು ಹೋದವು. ಕೊನೆಗೆ ಬ್ರಾಹ್ಮಣ ಹುಡುಗ ತಾಳ್ಮೆ ಕಳೆದುಕೊಂಡು "ನೀನು ಯಾರು ಎಂದು ಹೇಳಲೇಬೇಕು" ಎಂದು ಒತ್ತಾಯಿಸಿದ. "ಇಂದು ಬೇಡ, ನಾಳೆ ಖಂಡಿತ ಹೇಳುತ್ತೇನೆ" ಎಂದು ಉತ್ತರಿಸಿದಳು ಯುವರಾಣಿ.


ಮರುದಿನ ಮತ್ತೆ ಅದೇ ಪ್ರಶ್ನೆ ಬಂದಾಗ "ಈಗ ಬೇಡ. ರಾತ್ರಿ ಊಟದ ನಂತರ ಮಲಗುವಾಗ ಹೇಳುತ್ತೇನೆ" ಎಂದಳು ಯುವರಾಣಿ. ಅಂದು ರಾತ್ರಿ ಅವರ ಮಂಚ ಹೂವಿನಿಂದ ಅಲಂಕೃತವಾಗಿತ್ತು. ಕೋಣೆಯಲ್ಲಿ ಸುಗಂಧ ದ್ರವ್ಯಗಳನ್ನು ಸಿಂಪಡಿಸಲಾಗಿತ್ತು. ಯುವರಾಣಿ ಸುಂದರ ಬಟ್ಟೆ ಧರಿಸಿ ಅಲಂಕೃತವಾಗಿದ್ದಳು. ಅವಳ ಗಂಡ ಅಲ್ಲಿಗೆ ಹೋಗಿ ಮಲಗಿದ ಮೇಲೆ ಹೆಚ್ಚಿಗೆ ತಡ ಮಾಡದೆ ಆ ಕೋಣೆಯನ್ನು ಪ್ರವೇಶಿಸಿದಳು ಯುವರಾಣಿ. ಆದರೆ ಅಷ್ಟರಲ್ಲೇ ಹೂವಿನ ಬುಟ್ಟಿಯಲ್ಲಿದ್ದ ವಿಷದ ಹಾವು ಅಲಂಕೃತವಾಗಿದ್ದ ಮಂಚದ ಮೇಲೆ ಮಲಗಿದ್ದ ಅವಳ ಗಂಡನ ಕಚ್ಚಿ ಪ್ರಾಣ ತೆಗೆದಿತ್ತು.


ನನ್ನ ಹೃದಯ ಒಮ್ಮೆಲೇ ನಿಂತಂತಾಗಿ ಉಸಿರುಗಟ್ಟಿದ ಧ್ವನಿಯಲ್ಲಿ ಅಜ್ಜಿಯನ್ನು ಕೇಳಿದೆ "ಆಮೇಲೆ ಏನಾಯಿತು?"


ಆಮೇಲೆ ಕಥೆ ಮುಂದುವರೆಸಿ ಏನು ಪ್ರಯೋಜನ ಇದೆ? ಸಾವಿನ ನಂತರದ ಕಥೆಯನ್ನು ಯಾವ ಅಜ್ಜಿಯೂ ಮುಂದುವರೆಸಲಾರಳು. ಆ ಸುಂದರ ಸಂಜೆಯ ಕಥೆ ಹೀಗೆ ಅಂತ್ಯ ಕಾಣಬಹುದು ಎಂದು ನಾನು ಊಹಿಸಲು ಹೇಗೆ ಸಾಧ್ಯ ಇತ್ತು? ಮಂತ್ರೋಚ್ಚಾರಣೆ ಮಾಡಿ ಸತ್ತವರನ್ನು ಮತ್ತೆ ಬದುಕಿಸುವ ಕಥೆ ಅದಾಗಿರಲಿಲ್ಲ. ಎಲ್ಲದಕ್ಕೂ ಒಂದು ಅಂತ್ಯ ಎನ್ನುವುದು ಇರಬೇಕಲ್ಲವೇ? ಆದರೆ ಕಥೆ ಕೇಳುತ್ತಿದ್ದ ನನಗೆ ಸಾವು ಎನ್ನುವುದು ಭಯ ಬೀಳಿಸುವ ಅಂತ್ಯ ಅನಿಸದೇ ಅದು ಒಂದು ದೀರ್ಘ ರಾತ್ರಿಯ ತರಹದ್ದಾಗಿರಬೇಕು ಎನಿಸಿತು. ಕಥೆ ಮುಗಿದ ಮೇಲೆ ಕಣ್ಣು ರೆಪ್ಪೆ ಭಾರವಾಗಿ ನಿದ್ರೆಗೆ ಜಾರುವ ಹುಡುಗ ಮರುದಿನ ಮತ್ತೆ ಬೆಳಕಿನ ಜಗತ್ತಿಗೆ ಮತ್ತು ಬದುಕಿಗೆ ತನ್ನನ್ನು ಒಡ್ಡಿಕೊಳ್ಳುತ್ತಾನೆ. ಹೊಸ ಕಥೆಗೆ ಅಣಿಯಾಗುತ್ತಾನೆ.