Wednesday, March 23, 2022

ಹಿತಶತ್ರುವೆಂಬ ಮಹಾನ್ ಗುರು

ಎದೆಯ ದೀಪ ಹೊತ್ತಿಸಲು,

ಆತ್ಮದ ಅಜ್ಞಾನ ಕಳೆಯಲು, 

ಮೂರ್ಖ ಮಿತ್ರನಿಗಿಂತ, 

ಬುದ್ದಿವಂತ ಶತ್ರುವೇ ಲೇಸು

 

- ರೂಮಿ, ಪರ್ಷಿಯಾ ದೇಶದ ಕವಿ



ಸಾಧಾರಣವಾಗಿ ನಮಗೂ, ನಮ್ಮ ಶತ್ರುಗಳಿಗೂ ನಡುವಳಿಕೆಗಳಲ್ಲಿ, ವಿಚಾರ ಶೈಲಿಯಲ್ಲಿ ಅಥವಾ ಜೀವನದ ಉದ್ದೇಶಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿರುತ್ತವೆ. ಅದಕ್ಕೆ ಅವರಿಗೂ ನಮಗೂ ಆಗದೆ ಶತ್ರುತ್ವ ಬೆಳೆದಿರುತ್ತದೆ. ಆದರೆ ಹಿತಶತ್ರುಗಳು? ಅವರು ನಮ್ಮೊಡನೆ, ನಮ್ಮ ಸ್ನೇಹಿತರ ಹಾಗೆ ಇರುತ್ತಾರೆ. ಮೇಲ್ನೋಟಕ್ಕೆ ಅವರ ಉದ್ದೇಶಗಳ ಅರ್ಥ ನಮಗಾಗದೆ ಹೋಗಿರುತ್ತದೆ. ಅವರ ಮೇಲೆ ಸಂಶಯ ಪಡಲು ಯಾವುದೇ ಕಾರಣ ಇರುವುದಿಲ್ಲ. ಆದರೆ ಪೆಟ್ಟಿಗೆ ಬಿದ್ದಾಗ ಇದು ಏನು ಎಂದು ಅರಿತುಕೊಳ್ಳಲು ಸಾಕಷ್ಟು ಸಂಶೋಧನೆ ನಡೆಸಿದಾಗ, ಈ ಹಿತ ಶತ್ರುಗಳ ನಿಜ ಬಣ್ಣ ಬಯಲಾಗುತ್ತ ಹೋಗುತ್ತದೆ. ಮಹಾಭಾರತದ ಶಕುನಿ ಕೌರವರ ನಾಶಕ್ಕೆ ಒಳ ಸಂಚು ಹಾಕಿದಂತೆ ನಮ್ಮ ಹಿತ ಶತ್ರುಗಳು ನಮ್ಮ ವಿನಾಶಕ್ಕೆ ಪಟ್ಟು ಹಾಕಿರುವುದು ಮೆಲ್ಲಗೆ ಅರಿವಿಗೆ ಬರುತ್ತಾ ಹೋಗುತ್ತದೆ.

 

ಇವರ ಮೇಲೆ ಸಂಶಯ ಪಟ್ಟರೆ ಮೊದಮೊದಲಿಗೆ ಯಾರೂ ನಿಮ್ಮನ್ನು ನಂಬುವುದಿಲ್ಲ. ಬದಲಿಗೆ ನಿಮ್ಮ ತಲೆ ನೆಟ್ಟಗಿದೆಯೋ ಎನ್ನುವಂತೆ ನೋಡುತ್ತಾರೆ. ಹಾಗಾಗಿ ನಿಮಗೆ ವಿಷಯದ ಬಗ್ಗೆ ಸ್ಪಷ್ಟತೆ ಬರಲು ಯಾರೂ ಜೊತೆಗಾರರು ಅಥವಾ ಯಾವುದೇ ತರಹದ ನೆರವು ದೊರಕುವುದಿಲ್ಲ. ಎರಡನೆಯದು ಅವರು ನಿಮ್ಮ ಹಿತೈಷಿಗಳಂತೆ ಸಮಾಜಕ್ಕೆ ತೋರುವುದರಿಂದ ನಿಮ್ಮ ಬಗೆಗಿನ ಎಲ್ಲ ಮಾಹಿತಿ ಅವರಿಗೆ ಲಭ್ಯ. ಎಲ್ಲಕ್ಕಿಂತ ಮುಖ್ಯವಾಗಿ ಅವರನ್ನು ಪ್ರಬಲವಾಗಿ ವಿರೋಧಿಸಿದರೆ, ಜನ ನಿಮ್ಮನ್ನು ತಪ್ಪಾಗಿ ತಿಳಿದುಕೊಳ್ಳುವ ಸಾಧ್ಯತೆಯೇ ಹೆಚ್ಚು. ಈ ಎಲ್ಲ ಅನುಕೂಲಗಳನ್ನು ನಿಮ್ಮ ಹಿತಶತ್ರುಗಳು ಬಳಸಿಕೊಂಡು ನಿಮ್ಮ ಸುತ್ತ ಬಲೆ ಹೆಣೆಯತೊಡಗುತ್ತಾರೆ. ಇದು ನಿಮಗೆ ಅರಿವಿಗೆ ಬಂದರೂ ಆ ಕ್ಷಣದಲ್ಲಿ ನೀವು ನಿಸ್ಸಹಾಯಕರು. ಕಷ್ಟ ಪಟ್ಟು ನೀವು ಸಾಕ್ಷಿ, ಆಧಾರಗಳನ್ನು ಕಲೆ ಹಾಕಿ ಅವರನ್ನು ತೆರೆದಿಡುತ್ತಾ ಹೋಗುವವರೆಗೆ ನೀವು ಒಬ್ಬಂಟಿ. ಹಾಗೆಂದು ಅವರು ಸೋಲಿಲ್ಲದ ಸರದಾರರೇನಲ್ಲ.

 

ಕುಸ್ತಿಯ ಪಟ್ಟುಗಳನ್ನು ನೀವು ಕಲಿಯುತ್ತ ಹೋದಂತೆ ನಿಮಗೆ ವಿಷಯ ಅರಿವಾಗಿದೆ ಎಂಬ ಸೂಕ್ಷ್ಮ ಅರಿವು ಅವರಿಗೆ ಬಂದು ಬಿಡುತ್ತದೆ. ಅಲ್ಲಿಂದ ಅವರು ನಿಮ್ಮ ಮೇಲಿನ ಹಿಡಿತ ಸಡಿಲಿಸಬಹುದು ಅಥವಾ ಬಹಿರಂಗ ಜಗಳಗಳಿಗೆ ಇಳಿಯಬಹುದು. ಅದು ಬೇಗನೆ ಬಹಿರಂಗಗೊಂಡಷ್ಟು ನಿಮಗೆ ಅನುಕೂಲ ಜಾಸ್ತಿ. ಅವರ ಉದ್ದೇಶ ಅರಿವಾದಂತೆ ಅವರ ಶತ್ರುಗಳು ನಿಮ್ಮ ಸ್ನೇಹಿತರಾಗುತ್ತಾರೆ ಮತ್ತು ನಿಮ್ಮ ಬಲಹೀನತೆಗಳ ಮಾಹಿತಿ ಅವರಿಗೆ ದೊರಕುವ ಸಾಧ್ಯತೆ ಕಡಿಮೆ ಆಗುತ್ತದೆ. ಆದರೆ ಅಲ್ಲಿಯವರೆಗಿನ ಶೀತಲ ಸಮರ ನಿಮಗೆ ಮನುಷ್ಯ ಕುಲದ ವಿಚಿತ್ರ ಮತ್ತು ವಿಲಕ್ಷಣ ಎನ್ನಿಸುವ ಗುಣ-ಸ್ವಭಾವಗಳ ದರ್ಶನ ಮಾಡಿಸುತ್ತ ಹೋಗುತ್ತದೆ.

 

ಹಿತ ಶತ್ರುಗಳನ್ನು ನಾನೇಕೆ ಮಹಾನ್ ಗುರು ಎಂದೆನೆಂದು ನಿಮಗೆ ಈಗಾಗಲೇ ಅಂದಾಜು ಬಂದಿರಬಹುದು. ಏಕೆಂದರೆ ಹಿತೈಷಿಗಳು ಎಂದು ತೋರಿಸಿಕೊಂಡವರೆಲ್ಲ ನಂಬಿಕೆಗೆ ಅರ್ಹರಲ್ಲ ಎನ್ನುವ ಪಾಠ ಅವರು ನಮಗೆ ಕಲಿಸಿರುತ್ತಾರೆ. ನಮ್ಮ ದೌರ್ಬಲ್ಯಗಳನ್ನು ಹಂಚಿಕೊಳ್ಳುವ ಮುನ್ನ ನಾವು ಹುಷಾರಾಗಿ ಇರಬೇಕು ಇಲ್ಲದಿದ್ದರೆ ಅವುಗಳು ನಮ್ಮ ಮೇಲೆಯೇ ಪ್ರಯೋಗಿಸಲ್ಪಡುತ್ತವೆ  ಎನ್ನುವ ಅರಿವು ಅವರು ನಮಗೆ ಮೂಡಿಸಿರುತ್ತಾರೆ. ಅವರ ಮೇಲೆ ಜಗಳಕ್ಕೆ ಹೋಗುವ ಮುನ್ನ ಯಾವ ಸ್ನೇಹಿತರು ನಮ್ಮ ನೆರವಿಗೆ ಬಂದಾರು ಮತ್ತು ಯಾರ ಬೆಂಬಲ ನಮಗೆ ಸಿಕ್ಕೀತು ಎಂದು ತಿಳಿದಿಕೊಳ್ಳುವ ಪ್ರಜ್ಞೆ ನಮ್ಮಲ್ಲಿ ಬೆಳೆಯುವಂತೆ ಮಾಡಿರುತ್ತಾರೆ.

 

ಲೆಕ್ಕಕ್ಕೆ ಸಿಗದ ಎಷ್ಟೋ ಪಾಠಗಳನ್ನು ಜೀವನ ನಮಗೆ ನಿಧಾನವಾಗಿ ಕಲಿಸುತ್ತ ಹೋಗುತ್ತದೆ. ಆದರೆ ನಮ್ಮ ಹಿತಶತ್ರುಗಳು ನಮ್ಮನ್ನು ಶೀಘ್ರ ಹಾದಿಯಲ್ಲಿ ಅಲ್ಲಿಗೆ ತಲುಪುವಂತೆ ಮಾಡುತ್ತಾರೆ. ಅನುಭವಕ್ಕಿಂತ ದೊಡ್ಡ ಗುರು ಇಲ್ಲವಾದರೆ, ಅಂತಹ ಅನುಭವ ಕೊಡುವ ನಮ್ಮ ಹಿತಶತ್ರುಗಳು ನಮಗೆ ಮಹಾನ್ ಗುರುಗಳಲ್ಲದೆ ಇನ್ನೇನು? ಒಂದೆರಡು ಸಲ ಅನುಭವ ಆದ ಮೇಲೆ ಅವರನ್ನು ದೂರದಿಂದಲೇ ಗುರುತಿಸುವ ಮತ್ತು ಅವರಿಂದ ತೊಂದರೆ ಆಗದಂತೆ ಎಚ್ಚರ ವಹಿಸುವ ಗುಣಗಳು ನಮ್ಮಲ್ಲಿ ಅಡಕವಾಗುತ್ತ ಹೋಗುತ್ತವೆ. ಇಂತಹ ಅನುಭವಗಳು ಚಿಕ್ಕ ವಯಸ್ಸಿನಲ್ಲೇ ಆದಷ್ಟು ಒಳ್ಳೆಯದು. ಆದರೆ ಎಲ್ಲರ ಜೀವನವು ಒಂದೇ ತರಹ ಎಲ್ಲಿರುತ್ತದೆ? ಅಥವಾ ನಿಮಗೆ ಈ ವಿಷಯದಲ್ಲಿ ನನಗಿಂತ ಹೆಚ್ಚಿನ ಪರಿಣಿತಿ ಇರಬಹುದು. ಆದರೂ ನಿಮ್ಮ ಹತ್ತಿರ ಅಂತರಂಗ ಅರಿತುಕೊಂಡ ವಿಷಯಗಳನ್ನು ಹಂಚಿಕೊಂಡಾಗಲೇ ಸಮಾಧಾನ. ನಿಮ್ಮ ಅಭಿಪ್ರಾಯ ಏನು?

No comments:

Post a Comment