Saturday, March 26, 2022

ಕಥೆ: ಒಬ್ಬ ಕಳ್ಳನ ಕಥೆ

(ಇದು ರಸ್ಕಿನ್ ಬಾಂಡ್ ಅವರು ಬರೆದ 'The thief's story'  ಕಥೆಯ ಭಾವಾನುವಾದ)


ರೋಮಿಯನ್ನು ಮೊದಲು ಭೇಟಿ ಮಾಡಿದಾಗ ನಾನು ಇನ್ನೂ ಕಳ್ಳನಾಗೇ ಇದ್ದೆ. ನನಗೆ ಆವಾಗ ಸುಮಾರು ಹದಿನೈದು ವರುಷ ಅಷ್ಟೇ. ಅಷ್ಟರಲ್ಲಿ ನನ್ನ ಕೈ ಕಳ್ಳತನದಲ್ಲಿ ಪಳಗಿತ್ತು. ಆವತ್ತು ರೋಮಿ ಕುಸ್ತಿ ಪಂದ್ಯವನ್ನು ನೋಡುತ್ತಾ ಕೂತಿದ್ದ. ಅವನಿಗೆ ಸುಮಾರು ಇಪ್ಪತೈದು ವರ್ಷ ಇದ್ದಿರಬಹುದು. ನೋಡಲು ಒಳ್ಳೆಯ ವ್ಯಕ್ತಿಯ ಹಾಗೆ, ನನ್ನ ಉದ್ದೇಶಗಳಿಗೆ ಸುಲಭಕ್ಕೆ ಬೀಳುವ ಆಸಾಮಿಯ ಹಾಗೆ ಕಾಣಿಸಿದ. ಈ ವ್ಯಕ್ತಿಯ ವಿಶ್ವಾಸವನ್ನು ನಾನು ಗಳಿಸಿಕೊಳ್ಳುವುದರಲ್ಲಿ ನನಗೆ ಸಂದೇಹವೇ ಇರಲಿಲ್ಲ.


''ನೀವೇ ಒಬ್ಬ ಕುಸ್ತಿ ಪಟುವ ಹಾಗೆ ಇದ್ದೀರಿ" ನಾನು ಅವನನ್ನು ಮಾತಿಗೆಳೆದೆ. ಹೊಸಬರನ್ನು ಪರಿಚಯ ಮಾಡಿಕೊಳ್ಳಲು ಹೊಗಳಿಕೆಯಷ್ಟು ಸುಲಭ ದಾರಿ ಬೇರೆ ಯಾವುದಿದೆ?


"ನೀನು ಕೂಡ ಹಾಗೆ ಕಾಣುತ್ತಿರುವೆ" ಅವನು ನನಗೆ ಉತ್ತರಿಸಿದ. ನಾನು ಒಂದು ಕ್ಷಣ ತಬ್ಬಿಬ್ಬಾದೆ. ತೆಳ್ಳಗೆ, ಬರೀ ಮೂಳೆಯ ಹಂದರವಾಗಿದ್ದ ನನಗೆ ಆ ಮಾತು ಯಾವ ರೀತಿಯಿಂದಲೂ ಒಪ್ಪುತ್ತಿರಲಿಲ್ಲ.


"ಏನು ನಿನ್ನ ಹೆಸರು?" ರೋಮಿ ನನ್ನನ್ನು ಕೇಳಿದ.


"ಹರಿ ಸಿಂಗ್" ನಾನು ಮನಸ್ಸಿಗೆ ತೋಚಿದ ಸುಳ್ಳು ಹೆಸರು ಹೇಳಿದೆ. ಆಗಾಗ ಹೆಸರು ಬದಲಿಸಿಕೊಳ್ಳುವುದು ನನ್ನ ಜಾಯಮಾನ. ಪೊಲೀಸರಿಗೆ ಮತ್ತು ನಾನು ಮೋಸ ಮಾಡಿದವರಿಗೆ ನನ್ನನ್ನು ಸುಲಭವಾಗಿ ಹುಡುಕದಂತೆ ಅದು ತಡೆಯುತ್ತದೆ.


ಅದಾದ ಮೇಲೆ ರೋಮಿ ಕುಸ್ತಿ ಪಟುಗಳ ಬಗ್ಗೆ, ಅವರು ಗುರುಗುಟ್ಟುವುದು, ಅವರು ಏದುಸಿರು ಬಿಡುವುದು, ಒಬ್ಬರನ್ನೊಬ್ಬರು ಎತ್ತಿ ಬಿಸಾಕುವುದು ಇದರ ಬಗ್ಗೆಯೇ ಮಾತನಾಡುತ್ತ ಇದ್ದ. ಮತ್ತು ಒಂದು ಚಿಕ್ಕ ಪುಸ್ತಕದಲ್ಲಿ ಅದರ ಬಗ್ಗೆ ಟಿಪ್ಪಣಿ ಬರೆದುಕೊಳ್ಳುತ್ತಿದ್ದ. ಅವನು ಎದ್ದು ಹೊರಗೆ ಹೊರಟಾಗ ಅವನನ್ನೇ ಹಿಂಬಾಲಿಸಿದೆ.


"ಏನು ವಿಷಯ?" ರೋಮಿ ಕೇಳಿದ.


"ನನಗೆ ಯಾವುದಾದರೂ ಕೆಲಸ ಕೊಡುವಿರಾ?" ನಾನು ಕೇಳಿದೆ.


"ಆದರೆ ನಾನು ನಿನಗೆ ಯಾವುದೇ ಸಂಬಳ ಕೊಡಲಾರೆ" ಅವನು ಉತ್ತರಿಸಿದ.


ಒಂದು ಕ್ಷಣ ನನ್ನ ಎಣಿಕೆ ತಪ್ಪಾಯಿತೇನೋ ಎಂದು ಅನಿಸಿತು. ಆದರೂ ಕೇಳಿದೆ "ನನಗೆ ಊಟ ಹಾಕುವಿರಾ?"


"ನಿನಗೆ ಅಡಿಗೆ ಮಾಡಲು ಬರುತ್ತೋ?" ಅವನು ಕೇಳಿದ


"ಹೌದು. ಬರುತ್ತೆ" ನಾನು ಸುಳ್ಳು ಹೇಳಿದೆ.


"ಸರಿ. ಹಾಗಾದರೆ ನನ್ನ ಜೊತೆ ಬಾ" ಎಂದು ಅವನು ನನ್ನನ್ನು ಕರೆದುಕೊಂಡು ಹೋದ. ದೆಹಲಿ ಬೇಕರಿ ಅಂಗಡಿಯ ಮೇಲಿನ ರೂಮೊಂದರಲ್ಲಿ ಅವನು ವಾಸವಾಗಿದ್ದ. ನನ್ನನ್ನು ಬಾಲ್ಕನಿಯಲ್ಲಿ ಮಲಗಿಕೊಳ್ಳುವಂತೆ ಸೂಚಿಸಿದ. ಅಂದು ರಾತ್ರಿ ನಾನು ಮಾಡಿದ ಅಡಿಗೆ ಎಷ್ಟು ಕೆಟ್ಟದಾಗಿತ್ತೇನೋ ಅವನು ಅದನ್ನೆಲ್ಲ ಬೀದಿ ನಾಯಿಗೆ ಸುರಿದು ನನಗೆ ಹೊರಹೋಗುವಂತೆ ಹೇಳಿದ.


ನಾನು ರೂಮಿನ ಹೊರಗಡೆಯೇ ಮನವಿಪೂರ್ವಕ ಮುಖವನ್ನು ಹೊತ್ತು ಕುಳಿತುಕೊಂಡೆ. ಸ್ವಲ್ಪ ಹೊತ್ತು ಬಿಟ್ಟ ನನ್ನನ್ನು ನೋಡಿದ ಅವನಿಗೆ ನಗು ತಡೆಯಲಾಗಲಿಲ್ಲ. ಬಳಿಕ, ಅವನು ನನಗೆ ಅಡಿಗೆ ಕಲಿಸುವುದಾಗಿ ಹೇಳಿದ. ಅಷ್ಟೇ ಅಲ್ಲದೇ ನನಗೆ ಓದುವುದನ್ನು, ಬರೆಯುವುದನ್ನು ಕೂಡ ಹೇಳಿಕೊಡಲಾರಂಭಿಸಿದ. ನನ್ನ ಹೆಸರನ್ನು ನಾನೇ ಬರೆದ ಮೇಲೆ, ನನ್ನಲ್ಲಿ ಹೊಸ ಆತ್ಮವಿಶ್ವಾಸ ಮೂಡತೊಡಗಿತ್ತು. ಅಷ್ಟೇ ಅಲ್ಲದೇ, ರೋಮಿ ನನಗೆ ಶಾಲೆ ಓದಿಕೊಂಡವರ  ಹಾಗೆ ಸಂಪೂರ್ಣ ವಾಕ್ಯಗಳನ್ನು ಬರೆಯುವುದನ್ನು ಮತ್ತು ಕೂಡಿ ,ಕಳೆಯುವ ಲೆಕ್ಕಗಳನ್ನು ಕಲಿಸಿಕೊಡುವುದಾಗಿ ಹೇಳಿದ. ಅದನ್ನು ನಾನು ಕಲಿತರೆ, ಜೀವನದಲ್ಲಿ ನಾನು ಸಾಧಿಸುವುದಕ್ಕೆ ಯಾವುದೇ ಮಿತಿ ಇರುವುದಿಲ್ಲ ಎನಿಸಿತು.


ರೋಮಿಯ ಜೊತೆ ಇರುವುದು ಒಂದು ಆಹ್ಲಾದಕರ ಅನುಭವವೇ ಆಗಿತ್ತು. ಬೆಳಿಗ್ಗೆ ಎದ್ದ ತಕ್ಷಣ ಅವನಿಗೆ ಚಹಾ ಮಾಡಿಕೊಡುತ್ತಿದ್ದೆ. ಮಾರುಕಟ್ಟೆಗೆ ಹೋಗಿ ತರಕಾರಿ ನಾನೇ ತರುತ್ತಿದ್ದೆ. ಅದರಲ್ಲಿ ಒಂದೆರಡು ರೂಪಾಯಿಗಳನ್ನು ನಾನು ಉಳಿಸಿಕೊಳ್ಳುತ್ತಿದ್ದೆ. ಅದು ಅವನಿಗೆ ಗೊತ್ತಿತ್ತೋ ಏನೋ, ಆದರೆ  ಯಾವುದೇ ಆಕ್ಷೇಪಣೆ ಮಾಡುತ್ತಿರಲಿಲ್ಲ. ಯಾವುದನ್ನೂ ಪ್ರಶ್ನಿಸುವ ಗೊಡವೆಗೆ ಹೋಗುತ್ತಿರಲಿಲ್ಲ.


ಅವನು ದೆಹಲಿ ಮತ್ತು ಬಾಂಬೆಯ ಪತ್ರಿಕೆಗಳಿಗೆ ಸುದ್ದಿ, ಲೇಖನ ಬರೆಯುತ್ತಿದ್ದ. ಅವನಿಗೆ ಪ್ರತಿ ದಿನ ದುಡ್ಡು ಬರುತ್ತಿರಲಿಲ್ಲ. ಯಾವಾಗಲೋ ಒಮ್ಮೆ ಅವನಿಗೆ ಹಣ ಸಿಗುತ್ತಿತ್ತು. ದುಡ್ಡು ಬಂದ ಮರುದಿನವೇ ಅವನು ಅದನ್ನು ಆನಂದವಾಗಿ ಖರ್ಚು ಮಾಡಿಬಿಡುತ್ತಿದ್ದ. ಒಂದು ದಿನ ಸಂಜೆ ಅವನ ಕೈಯಲ್ಲಿ ದುಡ್ಡು ಬಂದಿತ್ತು. ಒಂದು ಸಣ್ಣ ನೋಟಿನ ಕಟ್ಟನ್ನು ಒಂದು ಲಕೋಟೆಯೊಳಗೆ ಇಟ್ಟು, ಅದನ್ನು ತನ್ನ ತಲೆದಿಂಬಿನ ಅಡಿ ಇಟ್ಟುಕೊಂಡು ಅವನು ಆ ರಾತ್ರಿ ನಿದ್ದೆ ಹೋಗುವುದನ್ನು ನೋಡಿದೆ.


ನಾನು ರೋಮಿಯ ಹತ್ತಿರ ಕೆಲಸ ಮಾಡಲು ಶುರು ಮಾಡಿ ತಿಂಗಳ ಮೇಲೆಯೇ ಕಳೆದಿತ್ತು. ಅವನು ನನ್ನನ್ನು ನಂಬಿದಷ್ಟು ಅದುವರೆಗೆ ಬೇರೆ ಯಾರು ನನ್ನನ್ನು ನಂಬಿರಲಿಲ್ಲ. ಯಾವುದೊ ದುರಾಸೆಯ ಮನುಷ್ಯನಿಗೆ ಕಳ್ಳತನ ಮಾಡಿ, ಮೋಸ ಮಾಡುವುದು ಸುಲಭ. ಆದರೆ ರೋಮಿಯಂತಹ ಒಳ್ಳೆಯ ವ್ಯಕ್ತಿಗೆ ಮೋಸ ಮಾಡಲು ಸುಲಭದಲ್ಲಿ ಮನಸ್ಸು ಒಪ್ಪುತ್ತಿರಲಿಲ್ಲ. ಆದರೆ ವಿಚಾರ ಮಾಡಿ ನೋಡಿದೆ. ಅವನು ಹೇಗಿದ್ದರೂ ಈ ಹಣವನ್ನು ಯಾವುದೊ ಸ್ನೇಹಿತರ ಜೊತೆ ಖರ್ಚು ಮಾಡಿ ಮುಗಿಸುತ್ತಾನೆ. ಮತ್ತು ನನಗೆ ಇದುವರೆಗೆ ಯಾವುದೇ ಸಂಬಳ ಕೂಡ ಕೊಟ್ಟಿಲ್ಲ.


ರೋಮಿ ಶಾಂತವಾಗಿ ನಿದ್ರಿಸುತ್ತಿದ್ದ. ಅವನ ದಿಂಬಿನ ಕೆಳಗೆ ಕೈ ಹಾಕಿ ಯಾವುದೇ ಸದ್ದಾಗದಂತೆ ಆ ಲಕೋಟೆಯನ್ನು ಹೊರಗೆ ಎಳೆದೆ. ನಿದ್ದೆಯಲ್ಲೇ ನಿಟ್ಟುಸಿರಿಟ್ಟ ರೋಮಿ. ತಡ ಮಾಡದೆ ಕೋಣೆಯ ಹೊರ ಬಂದು, ರೈಲ್ವೆ ಸ್ಟೇಷನ್ ಕಡೆಗೆ ಒಡಲು ಪ್ರಾರಂಭಿಸಿದೆ. ರಾತ್ರಿ ಹೊರಡುವ ಲಕ್ನೋ ರೈಲನ್ನು ಏರುವ ಇರಾದೆ ನನ್ನದಾಗಿತ್ತು. ರೈಲ್ವೆ ನಿಲ್ದಾಣ ಹತ್ತಿರವಾದೊಡನೆ, ಓಡುವುದು ನಿಲ್ಲಿಸಿ, ನಡೆಯಲಾರಂಭಿಸಿದೆ. ಲಕೋಟೆಯನ್ನು ತೆಗೆದು ಎಣಿಸಿದಾಗ ಅದರಲ್ಲಿ ಏಳು ನೂರಾ ಐವತ್ತು ರೂಪಾಯಿಗಳಿದ್ದವು. ಒಂದೆರಡು ವಾರ ರಾಜನ ಹಾಗೆ ಮೆರೆಯಬಹುದು ಅಂದುಕೊಂಡೆ.


ನಿಲ್ದಾಣದ ಒಳಗೆ ಹೋದ ಮೇಲೆ ಟಿಕೆಟ್ ಏನೂ ನಾನು ಖರೀದಿಸಲಿಲ್ಲ. ನಾನು ಜೀವಮಾನದಲ್ಲೇ ಟಿಕೆಟ್ ತೆಗೆದುಕೊಂಡು ಪ್ರಯಾಣ ಮಾಡಿಲ್ಲ. ಲಕ್ನೋ ರೈಲು ಆಗ ತಾನೇ ನಿಲ್ದಾಣ ಬಿಡುತ್ತಿತ್ತು. ಎಷ್ಟು ಜೋರಾಗಿ ಓಡಿದರೂ ಸ್ವಲ್ಪದರಲ್ಲೇ ಅದು ತಪ್ಪಿ ಹೋಯಿತು. ನಿಲ್ದಾಣದಲ್ಲಿ ನಾನು ಒಬ್ಬನೇ ಉಳಿದು ಹೋದೆ. ರಾತ್ರಿ ಎಲ್ಲಿ ಕಳೆಯುವುದು ಎಂದು ತಿಳಿಯಲಿಲ್ಲ. ನನಗೆ ಆಶ್ರಯ ಕೊಟ್ಟ ಜಾಗದಲ್ಲೇ ನಾನು ದೋಚಿ ಬಂದಿದ್ದೆ. ನಿಲ್ದಾಣದಿಂದ ಹೊರ ಬಂದು ಸುಮ್ಮನೆ ಬಜಾರಿನ ರಸ್ತೆಯಲ್ಲೇ ನಡೆಯಲು ಆರಂಭಿಸಿದೆ.


ನನ್ನ ಅಲ್ಪ ವೃತ್ತಿ ಜೀವನದಲ್ಲಿ ವ್ಯಕ್ತಿಗಳು ತಮ್ಮ ವಸ್ತು ಕಳೆದುಕೊಂಡ ಮೇಲೆ ಹೇಗೆ ಮುಖ ಮಾಡುತ್ತಾರೆ ಎಂಬುದನ್ನು ಗಮನಿಸಿದ್ದೆ. ದುರಾಸೆಯ ವ್ಯಕ್ತಿಗಳು ಗಾಬರಿ ಬಿದ್ದರೆ, ಶ್ರೀಮಂತರು ಕೋಪದ ಮುಖ ಮಾಡುತ್ತಾರೆ. ಮತ್ತು ಬಡವರಾದರೆ ಅವರ ಮುಖದಲ್ಲಿ ಹತಾಶೆ ತೇಲುತ್ತಿರುತ್ತದೆ. ಆದರೆ ರೋಮಿಯ ಮುಖದಲ್ಲಿ ನಂಬಿಕೆದ್ರೋಹ ಮಾತ್ರ ಕಾಣುತ್ತದೆ ಎನ್ನುವ ವಿಷಯ ನನಗೆ ಚೆನ್ನಾಗಿ ತಿಳಿದಿತ್ತು.


ರಾತ್ರಿ ತಣ್ಣನೆಯ ಚಳಿ ಮೈ ಕೊರೆಯುತ್ತಿತ್ತು. ಉತ್ತರ ಭಾರತದ ನವೆಂಬರ್ ತಿಂಗಳ ರಾತ್ರಿಯ ಚಳಿ ಸಾಮಾನ್ಯವೇ? ಸ್ವಲ್ಪ ಮಳೆ ಕೂಡ ಬಂದು ನನ್ನನ್ನು ಇನ್ನೂ ಹೆಚ್ಚಿನ ತೊಂದರೆಗೆ ಸಿಕ್ಕಿಸಿತ್ತು. ರಸ್ತೆ ಬದಿಯಲ್ಲಿ ಭಿಕ್ಷುಕರು ಸಿಕ್ಕಿದ್ದನ್ನು ಸುತ್ತಿಕೊಂಡು ಮಲಗಿದ್ದರೆ. ನಾಯಿಗಳು ಕೂಡ ಮೈ ಮುದುಡಿ ಸದ್ದಿಲ್ಲದೇ ಮಲಗಿಕೊಂಡಿದ್ದವು. ಅಂಗಿಯೊಳಗೆ ಇಟ್ಟುಕೊಂಡಿದ್ದ ಹಣದ ಲಕೋಟೆಗೆ ಕೈ ಹಾಕಿದೆ. ಅದು ಕೂಡ ಮಳೆಗೆ ನೆನದು ಹೋಗಿತ್ತು. ಅಲ್ಲೇ ಇದ್ದಿದ್ದರೆ, ರೋಮಿ ಬೆಳಗ್ಗೆ ಎದ್ದು ನನಗೆ ಅದರಿಂದ ಐದು ರೂಪಾಯಿ ಕೊಟ್ಟು ಸಿನೆಮಾಗೆ ಹೋಗುವಂತೆ ಹೇಳುತ್ತಿದ್ದನೋ ಏನೋ? ಆದರೆ ಪೂರ್ತಿ ಹಣ ಈಗ ನನ್ನದೇ. ಬೆಳಗ್ಗೆ ಎದ್ದ ತಕ್ಷಣ ಅವನಿಗೆ ಚಹಾ ಮಾಡುವ ತಾಪತ್ರಯ ಇನ್ನಿಲ್ಲ. ಓದುವ, ಬರೆಯುವ ಸಮಸ್ಯೆಯೂ ಕೂಡ ಇನ್ನೂ ಮುಂದೆ ಇಲ್ಲ.


ಅಯ್ಯೋ, ಓದುವುದು, ಬರೆಯುವುದು! ಕಳ್ಳತನ ಮಾಡುವುದು ಒಂದು ಸಣ್ಣ ಕೆಲಸ. ಆದರೆ ಓದಿ, ಬರೆದು ದೊಡ್ಡ ವ್ಯಕ್ತಿಯಾಗುವುದು, ಅದೇನು ಸಾಮಾನ್ಯ ಮಾತೆ? ಅದು ಮುಂದೊಂದು ದಿನ ನನಗೆ ನೂರಾರು ರೂಪಾಯಿ ದುಡಿಯುವಂತೆ ಮಾಡುತ್ತದೆ. ನಾನು ಹಾಗಾಗಬೇಕೆಂದರೆ ನಾನು ರೋಮಿಯ ಹತ್ತಿರ ವಾಪಸಾಗಬೇಕು. ಅವಸರದಲ್ಲಿ ಮತ್ತೆ ನಾನು ರೋಮಿಯ ಕೋಣೆ ತಲುಪಿದೆ. ರೋಮಿ ಇನ್ನೂ ಮಲಗೇ ಇದ್ದ. ಮೆತ್ತಗೆ, ಸದ್ದಾಗದಂತೆ ಆ ಲಕೋಟೆಯನ್ನು ದಿಂಬಿನ ಕೆಳಗೆ ಸೇರಿಸಿಬಿಟ್ಟೆ. ಅವನ ಉಸಿರು ನನ್ನ ಕೈ ತಾಕುತ್ತಿತ್ತು.


ನಾನು ಬೆಳಿಗ್ಗೆ ಎದ್ದೇಳುವಷ್ಟರಲ್ಲಿ ರೋಮಿ ಆಗಲೇ ಎದ್ದು ಚಹಾ ಮಾಡಿದ್ದ. ನನಗೂ ಕುಡಿಯಲು ಕೊಟ್ಟ.


"ನಿನ್ನೆ ನನಗೆ ದುಡ್ಡು ಬಂತು". ತನ್ನ ಕೈಯಿಂದ ಐವತ್ತು ರೂಪಾಯಿ ನೋಟು ನನಗೆ ಕೊಡುತ್ತ ರೋಮಿ ಹೇಳಿದ "ಇನ್ನು ಮೇಲೆ ನಿನಗೆ ಸಂಬಳ ಕೊಡಬಲ್ಲೆ"


ನನಗೆ ಭಾವಾವೇಶ ಉಂಟಾಯಿತು. ಕೈಯ್ಯಲ್ಲಿನ ನೋಟು ಇನ್ನೂ ಒದ್ದೆಯಾಗಿರುವುದು ನನ್ನ ಗಮನಕ್ಕೆ ಬಂತು. ಅವನಿಗೆ ನಾನು ಮಾಡಿದ ಕೆಲಸ ತಿಳಿದಿತ್ತು. ಆದರೆ ಅವನ ಬಾಯಿಂದ ಅದರ ಬಗ್ಗೆ ಯಾವ ಮಾತುಗಳು, ಅಥವಾ ಅವನ ಕಣ್ಣೋಟ ಕೂಡ ಅವನಿಗೆ ವಿಷಯ ತಿಳಿದಿದೆ ಎನ್ನುವುದು ಬಿಟ್ಟುಕೊಡಲಿಲ್ಲ.


"ಇವತ್ತಿನಿಂದ ಬರೆಯುವುದು ಪ್ರಾರಂಭಿಸೋಣ" ಅವನು ನನಗೆ ಹೇಳಿದ.


ರೋಮಿ ಅತ್ಯಂತ ಅಪ್ಯಾಯಮಾನ ವ್ಯಕ್ತಿಯಾಗಿ ನನಗೆ ಕಾಣಿಸಿದ. ನನ್ನ ಮುಖದಲ್ಲಿ ನನಗೆ ಅರಿವಿಲ್ಲದೆ ಮಂದಹಾಸ ಮೂಡಿತು.

No comments:

Post a Comment