Thursday, March 24, 2022

ಅತ್ತೆ-ಸೊಸೆ ಜಗಳ ಸಾಮಾನ್ಯವಾದಷ್ಟು ಇತರ ಜಗಳಗಳು ಏಕಲ್ಲ?

ಹೆಂಡತಿಗೆ ಅತ್ತೆ ಇದ್ದ ಹಾಗೆ, ಗಂಡನಿಗೂ ಅತ್ತೆ ಇರುತ್ತಾಳೆ. ಆದರೆ ಹೆಂಡತಿ ಅತ್ತೆ ಕಾಟ ಎಂದು ಸಂಕಟ ಪಟ್ಟಷ್ಟು ಗಂಡ ಸಂಕಟ ಪಡುವುದಿಲ್ಲ. ಅದು ಏಕಿರಬಹುದು?


ಮೊದಲಿಗೆ ಗಮನಿಸಬೇಕಾದ ಅಂಶವೆಂದರೆ, ಅತ್ತೆ-ಸೊಸೆ ಒಂದೇ ಮನೆಯಲ್ಲಿ ಇರಬೇಕು. ಆದರೆ ಗಂಡಸು ತನ್ನ ತಾಯಿಯ ಜೊತೆ ವಾಸಿಸುತ್ತಾನೆ, ಅತ್ತೆಯ ಜೊತೆ ಅಲ್ಲ. ಹಾಗಾಗಿ ಅವನಿಗೆ ಅತ್ತೆಯ ಕಾಟ ಇರದೇ ಹೋಗಬಹುದು. ಆದರೆ ಎಷ್ಟೋ ಗಂಡ-ಹೆಂಡತಿಯರು ಬೇರೆ ಮನೆ ಮಾಡಿಕೊಂಡು ಅತ್ತೆ-ಸೊಸೆ ಬೇರೆ ಬೇರೆ ವಾಸಿಸುತ್ತಿದ್ದರೂ, ಸೊಸೆಗೆ ಅತ್ತೆಯ ಕಂಡರೆ ಹಾಗೆಯೆ ಅತ್ತೆಗೆ ಸೊಸೆಯನ್ನು ಕಂಡರೆ ಆಗಿಬರುವುದಿಲ್ಲ. ಅದಕ್ಕೇನು ಹೇಳುತ್ತೀರಿ? ಕೆಲ ಗಂಡಸರು ಮನೆ ಅಳಿಯನಾಗಿ ಹೋಗಿರುತ್ತಾರಲ್ಲ. ಅವರಿಗೆ ಅತ್ತೆಯ ಕಾಟ ಇರುತ್ತೋ, ಇಲ್ಲವೋ? ನನಗೆ ಈ ವಿಷಯ ಗೊತ್ತಿಲ್ಲವಾದ್ದರಿಂದ ಕೇಳಿ ತಿಳಿಯಬೇಕು.


ಈ ಜಗಳಗಳೆಲ್ಲ ಹೆಣ್ಣು-ಹೆಣ್ಣುಗಳಲ್ಲಿ ಹೆಚ್ಚು. ಆದ್ದರಿಂದ ಅತ್ತೆ-ಸೊಸೆ ಜಗಳವಿದ್ದ ಹಾಗೆ ಅತ್ತೆ-ಅಳಿಯನ ಜಗಳ ಇರಲು ಸಾಧ್ಯವಿಲ್ಲ ಎನ್ನುವುದಾದರೆ ಗಂಡಸು-ಗಂಡಸರ ನಡುವೆ ಅಳಿಯ-ಮಾವನ ಜಗಳ ಇರಲು ಸಾಧ್ಯವೇ? ಮಾವನಿಗೆ ಅವನದೇ ಲೋಕ. ಅಳಿಯನಿಗೂ ಕೂಡ ಅವನದ್ದೇ ಆದ ಲೋಕ ಇರುತ್ತಾದ್ದರಿಂದ ಅವರು ಅದರಿಂದ ಹೊರ ಬಂದು ಜಗಳ ಕಾಯುವ ಸಾಧ್ಯತೆ ಕಡಿಮೆಯೇ ಎನ್ನಬಹುದು. ಒಂದು ವೇಳೆ ಮಾವ-ಅಳಿಯ ಜಗಳಕ್ಕೆ ಬಿದ್ದರೂ ಅದರಲ್ಲಿ ಯಾರೋ ಒಬ್ಬರು ಗೆದ್ದು ಸಮಸ್ಯೆ ಸ್ವಲ್ಪ ಸಮಯದಲ್ಲೇ ಇತ್ಯರ್ಥ ಆಗಿಬಿಡುತ್ತದೆ. ಗಂಡಸು ಕೋಳಿ ಜಗಳ ಎಲ್ಲಿ ಇಷ್ಟ ಪಡುತ್ತಾನೆ? ಇಷ್ಟಕ್ಕೂ ಅವಶ್ಯಕತೆ ಬಿದ್ದಾಗ ಜಗಳಕ್ಕೆ ಸಿದ್ಧವಾಗದ ಗಂಡಸಿಗೆ ಸಮಾಜ ಎಲ್ಲಿ ಬೆಲೆ ಕೊಡುತ್ತದೆ? ಹೇಡಿ ಎಂದು ಜರಿದು ಅವನನ್ನು ಕೆರಳಿಸಿ, ಅವನಿಂದ ಸೋಲೋ-ಗೆಲುವೋ ಎನ್ನುವ ಫಲಿತಾಂಶ ಬರಲು ಬಹು ಸಮಯ ತೆಗೆದುಕೊಳ್ಳುವುದಿಲ್ಲ. ಆ ಜಗಳ ಬಹು ಕಾಲ ಉಳಿಯುದಿಲ್ಲವಾದ್ದರಿಂದ, ಮಾವ-ಅಳಿಯರ ಜಗಳಗಳು ಅಷ್ಟು ಸಾಮಾನ್ಯವಾಗಿ ಕಂಡು ಬರುವುದಿಲ್ಲ.


ಇನ್ನೊಂದು ಕಡೆ ಹೆಂಗಸು-ಗಂಡಸಿನ ಜಗಳಗಳು ಯಾರೋ ಒಬ್ಬರು ಇನ್ನೊಬ್ಬರನ್ನು ಕ್ಷಮಿಸುವುದರೊಂದಿಗೆ ಇಲ್ಲವೇ  ಇವರ ಹಣೆ ಬರಹ ಇಷ್ಟೇ ಬಿಡು ಅನ್ನುವುದರೊಂದಿಗೆ ಇತ್ಯರ್ಥ ಆಗಿಬಿಡುತ್ತವೆ. ಸೊಸೆ ಅತ್ತೆಯ ಜೊತೆ ಜಗಳ ಕಾದಷ್ಟು ಸುಲಭವಾಗಿ, ಅನವಶ್ಯಕವಾಗಿ ಮಾವನ ಜೊತೆ ಜಗಳ ಕಾಯಲು ಹೋಗುವುದಿಲ್ಲ. ಹಾಗೆಯೇ ಅತ್ತೆ ಕೂಡ ಅಳಿಯನನ್ನು ಬೈಯುವಷ್ಟು ಬೈದು ಸುಮ್ಮನಾಗಿ ಬಿಡುತ್ತಾಳೆ. ಗಂಡ-ಹೆಂಡತಿಯರು ಏನು ಜಗಳ ಕಾದರೂ ಒಬ್ಬರಿಗೆ ಇನ್ನೊಬ್ಬರ ಅವಶ್ಯಕತೆ ಇರುತ್ತದಲ್ಲ. ಅವನು ಹೋಗಿ ಸಕ್ಕರೆ ತಂದರೆ ಇವಳು ಚಹಾ ಮಾಡುತ್ತಾಳೆ. ಅದಕ್ಕೆ ನೋಡಿ ಗಂಡ-ಹೆಂಡತಿ ಜಗಳ ಬಿಡಿಸಲು, ಸಂಧಾನಕ್ಕೆ ಹೋಗಲು ಹತ್ತಾರು ಜನ ರೆಡಿ. ಆದರೆ ಅತ್ತೆ-ಸೊಸೆ ಜಗಳ ಬಿಡಿಸಲು ಹೋಗುವರೆಷ್ಟು ಜನ?

 


ಕೊನೆಗೆ ಇದು ಅತ್ತೆ-ಸೊಸೆ ಜಗಳ ಸಾಮಾನ್ಯವಾಗಿ ಕಂಡು ಬಂದಷ್ಟು ಅತ್ತೆ-ಅಳಿಯನ, ಮಾವ-ಅಳಿಯನ ಅಥವಾ ಸೊಸೆ-ಮಾವನ ಜಗಳ ಕಂಡು ಬರುವುದಿಲ್ಲ ಎನ್ನುವಲ್ಲಿಗೆ ಬಂದು ನಿಲ್ಲುತ್ತದೆ. ಈ ಅತ್ತೆ-ಸೊಸೆ ಒಂದೇ ಸೂರಿನಡಿ ವಾಸಿಸದಿದ್ದರೂ, ಅವರ ನಡುವೆ ಜಗಳ ಕಾಯುವ ವಿಷಯ ಗಂಡಸೇ ಆಗಿರುತ್ತಾನೆ. ಆ ಗಂಡಸು ತುತ್ತಾ-ಮುತ್ತಾ ಎಂದು ಎಂದು ಹಾಡಿದರೆ, ಅವನ ತಾಯಿ ಮತ್ತು ಹೆಂಡತಿ ನಾನಾ-ನೀನಾ ಎನ್ನುವ ಸ್ಪರ್ಧೆಯಿಂದ ಹಿಂದೆ ಸರಿಯುವುದೇ ಇಲ್ಲ. ಅವರಲ್ಲಿ ಯಾರೋ ಒಬ್ಬರು ಮಚ್ಚು ಎತ್ತಿ ಕೊಲೆ ಮಾಡುವ ಧೈರ್ಯ ಮಾಡುವುದೂ ಇಲ್ಲ. ಮತ್ತು ಜಗಳ ಅಲ್ಲಿಗೆ ಬಿಟ್ಟು ಬಿಡುವ ದೊಡ್ಡ ಮನಸ್ಸು ಕೂಡ ಮಾಡುವದಿಲ್ಲ. ಬಿಡದ ಜಿಟಿ ಜಿಟಿ ಮಳೆಯಂತೆ, ಅತ್ತ ತೊಯ್ಯಿಸದು ಇತ್ತ ನೆಮ್ಮದಿಯಿಂದ ಓಡಾಡಲು ಬಿಡದು ಎನ್ನುವಂತೆ ಅವರ ಜಗಳ ನಿರಂತರ  ಆಗಿರುತ್ತದೆ.


ಕಾಲಾಂತರದಲ್ಲಿ ಸೊಸೆ ಅತ್ತೆಯ ಸ್ಥಾನಕ್ಕೆ ಬಂದರೂ ಯಾವುದೇ ಬದಲಾವಣೆ ಆಗುವುದಿಲ್ಲ. ಏಕೆಂದರೆ ಅವರಿಗೆ ಸಮಸ್ಯೆ ಬಗೆ ಹರಿಸಿಕೊಳ್ಳುವುದು ಬೇಕಿಲ್ಲ ಹಾಗಾಗಿ ಅವರ ನಡುವೆ ಯಾವುದೇ ರಾಜಿ-ಸಂಧಾನಗಳು ಫಲಪ್ರದವಾಗುವುದಿಲ್ಲ. ಸೂರ್ಯ-ಚಂದ್ರರು ತಮ್ಮ ತಮ್ಮ ಸಮಯಕ್ಕೆ  ಆಕಾಶವನ್ನು ಆಕ್ರಮಿಸಿಕೊಂಡಂತೆ, ಅವರ ಹೊಳಪಿನಲ್ಲಿ ಇತರೆ ನಕ್ಷತ್ರಗಳು ಮಂಕಾಗಿ ಕಾಣುವಂತೆ,  ಕುಟುಂಬವೆಂಬ ಆಕಾಶದಲ್ಲಿ ಅತ್ತೆ-ಸೊಸೆಯರ ಅಸಮಾಧಾನಗಳು ಕೂಡ ನಿರಂತರ. ಇತರೆ ಎಲ್ಲ ಜಗಳಗಳು ಒಮ್ಮೆ ಹೊಳೆದು ಮರೆಯಾಗಿ ಹೋಗುವ ನಕ್ಷತ್ರಗಳ ತರಹ.

No comments:

Post a Comment