Saturday, March 19, 2022

ಕಥೆ: ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ

(ಇದು ರವೀಂದ್ರನಾಥ ಟಾಗೋರ್ ಅವರು ಬರೆದ 'Once there was a king' ಕಥೆಯ ಭಾವಾನುವಾದ)


"ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ"


ನಾವು ಮಕ್ಕಳಾಗಿದ್ದಾಗ ಆ ಕಥೆಯಲ್ಲಿರುವ ರಾಜ ನಿಖರವಾಗಿ ಯಾರು ಎಂದು ತಿಳಿದುಕೊಳ್ಳುವ ಅವಶ್ಯಕತೆ ಇರಲಿಲ್ಲ. ಅವನ ಹೆಸರು ವಿಕ್ರಮಾದಿತ್ಯನೋ ಅಥವಾ ಬೇರೆಯೋ ಆಗಿದ್ದರೆ ಮತ್ತು ಅವನು ಆಳಿದ್ದು ಕಾಶಿಯಲ್ಲೋ ಇಲ್ಲವೇ ಉಜ್ಜಯಿನಿಯಲ್ಲೋ ಆಗಿದ್ದರೂ ನಮಗೆ ಯಾವ ವ್ಯತ್ಯಾಸವೂ ಅನ್ನಿಸುತ್ತಿರಲಿಲ್ಲ. ಏಳು ವರುಷದ ಹುಡುಗನ ಹೃದಯ ಬಡಿತ ಸಂತೋಷದಿಂದ ಏರಲು ಕಥೆ ಶುರುವಾಗಿದ್ದರೆ ಸಾಕಿತ್ತು "ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ ..."


ಆದರೆ ಇಂದಿನ ಕಾಲದ ಕೆಲವು ಓದುಗರಿಗೆ ಅದು ಸಾಕಾಗುವುದಿಲ್ಲ. ಅವರಿಗೆ ವ್ಯಕ್ತಿ ಮತ್ತು ಸ್ಥಳಗಳ ಹೆಸರುಗಳು ಕರಾರುವಕ್ಕಾಗಿ ಇರಬೇಕು. ಇಲ್ಲದಿದ್ದರೆ ಅವರು ಶುರುವಲ್ಲಿಯೇ ಕೇಳಿಬಿಡುತ್ತಾರೆ "ಅದು ಯಾವ ರಾಜ?"


ಹಾಗಾಗಿ ಕಥೆ ಹೇಳುವವರು ಖಚಿತವಾದ ಮಾಹಿತಿಯೊಂದಿಗೆ ಕಥೆ ಹೇಳಲು ಶುರು ಮಾಡುತ್ತಾರೆ "ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ಅವನ ಹೆಸರು ಅಜಾತಶತ್ರು"


ಆದರೆ ಆಧುನಿಕ ಕಾಲದ ಓದುಗರಿಗೆ ಇಷ್ಟು ಸಾಕಾಗುವುದಿಲ್ಲ. ಕಣ್ಣು ರೆಪ್ಪೆ ಬಡಿಯುವುದರಲ್ಲೇ ಕೇಳಿ ಬಿಡುತ್ತಾರೆ "ಯಾವ ಅಜಾತಶತ್ರು?"


ಆಗ ಕಥೆಗಾರ ಸ್ಪಷ್ಟನೆ ಕೊಡಲಾರಂಭಿಸುತ್ತಾನೆ. ಇತಿಹಾಸದಲ್ಲಿ ಮೂವರು ಅಜಾತಶತ್ರುಗಳಿದ್ದಾರೆ. ಮೊದಲನೆಯವನು ಕ್ರಿ.ಪೂ. ಎರಡನೇ ಶತಮಾನದಲ್ಲಿ ಹುಟ್ಟಿ, ಸಣ್ಣ ವಯಸ್ಸಿನಲ್ಲೇ ಸಾಯುತ್ತಾನೆ. ಅವನ ಬಗ್ಗೆ ಹೆಚ್ಚಿನ ಮಾಹಿತಿ ಯಾರಿಗೂ ತಿಳಿದಿಲ್ಲ. ಎರಡನೆಯ ಅಜಾತಶತ್ರುವಿನ ಬಗ್ಗೆ ಸಾಕಷ್ಟು ಮಾಹಿತಿಯನ್ನು ಇತಿಹಾಸಕಾರರು ದಾಖಲಿಸಿದ್ದಾರೆ. ನೀವು ಎನ್ ಸೈಕ್ಲೊಪೀಡಿಯಾ ತೆಗೆದು ನೋಡಿದರೆ ..."


ಆಗ ಆಧುನಿಕ ಕಾಲದ ಓದುಗರ ಸಂಶಯ ನಿವಾರಣೆ ಆಗುತ್ತದೆ.


ಇಂಗ್ಲಿಷ್ ಭಾಷೆಯಲ್ಲಿ ಒಂದು ಗಾದೆ ಮಾತಿದೆ. "ನೀವು ಯಾವ ಪ್ರಶ್ನೆ ಕೇಳದಿದ್ದರೆ, ನಾನು ಯಾವ ಸುಳ್ಳು ಹೇಳುವುದಿಲ್ಲ". ಕಥೆ ಇಷ್ಟ ಪಡುವ ಎಲ್ಲ ಚಿಕ್ಕ ಹುಡುಗರಿಗೂ ಈ ವಿಷಯ ಚೆನ್ನಾಗಿ ಗೊತ್ತಿರುತ್ತದೆ. ಹಾಗಾಗಿ ಅವರು ಕಥೆ ಕೇಳುವಾಗ ಪ್ರಶ್ನಿಸದೆ, ಸುಂದರ ಸುಳ್ಳುಗಳನ್ನು, ಪಾರದರ್ಶಕ ಸತ್ಯವೆಂದೇ ಒಪ್ಪಿಕೊಂಡು ಕಾಲ್ಪನಿಕ ಕಥೆಯಲ್ಲಿ ಮುಳುಗಿ ಹೋಗುತ್ತಾರೆ.


ಒಂದು ದಿನ ಸಂಜೆ ಆ ಕಥೆ ಕೇಳಿದ ದಿನ ನನಗೆ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಮಳೆ, ಬಿರುಗಾಳಿ ಅಂದು ಕಲ್ಕತ್ತೆಯಲ್ಲಿ ಪ್ರವಾಹವನ್ನೇ ಸೃಷ್ಟಿಸಿದ್ದವು. ನಮ್ಮ ಬೀದಿಯಲ್ಲಿ ಮೊಳಕಾಲಿನವರೆಗೆ ನೀರು ಹರಿಯುತ್ತಿತ್ತು. ಮನೆಯ ಜಗುಲಿಯಲ್ಲಿ, ಮಳೆಯನ್ನೇ ನೋಡುತ್ತಾ ನನಗೆ ಟ್ಯೂಷನ್ ಹೇಳಿಕೊಡುವ ಶಿಕ್ಷಕರು ಬಂದೇ ಬಿಡುತ್ತಾರೇನೋ ಎನ್ನುವ ಆತಂಕದಲ್ಲಿ ಕುಳಿತಿದ್ದೆ. ಮನದಲ್ಲಿ 'ಮಳೆ ಕಡಿಮೆ ಆಗದಿರಲಿ ದೇವರೇ' ಎಂದು ಕೇಳಿಕೊಳ್ಳುತ್ತಿದ್ದೆ. ದೇವರಿಗೆ ನನ್ನ ಪ್ರಾರ್ಥನೆ ಕೇಳಿಸಿದಂತೆ ಮಳೆ ಕಡಿಮೆಯೇ ಆಗಲಿಲ್ಲ. ಆದರೆ ನನ್ನ ಶಿಕ್ಷಕರು ಕೂಡ ಬಿಡಲು ತಯಾರಿರಲಿಲ್ಲ. ಸಮಯಕ್ಕೆ ಸರಿಯಾಗಿ ಅವರು ಕೊಡೆ ಹಿಡಿದು ಬರುವುದನ್ನು ನೋಡಿಯೇ ಬಿಟ್ಟೆ. ಕೂಡಲೇ ಮನೆಯೊಳಗೇ ಓಡಿ ಹೋದೆ. ನನ್ನ ಅಮ್ಮ, ಅಜ್ಜಿಯ ಜೊತೆ ಮಾತನಾಡುತ್ತ ಕೂತಿದ್ದರು. ನಾನು ಅಮ್ಮನ ಪಕ್ಕ ಮುದುರಿ ಕೂತು 'ಅಮ್ಮ, ಶಿಕ್ಷಕರು ಬಂದಿದ್ದಾರೆ. ಆದರೆ ನನಗೆ ವಿಪರೀತ ತಲೆ ನೋವು. ಇವತ್ತು ನನಗೆ ಟ್ಯೂಷನ್ ಬೇಡ.'


ಬುದ್ಧಿ ತಿಳಿಯದ ಆ ವಯಸ್ಸಿನಲ್ಲಿ ನಾನು ಹಾಗೆ ನಡೆದುಕೊಂಡಿದ್ದು ಇಂದಿನ ಓದುಗರು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಆದರೆ ನನ್ನ ಅಮ್ಮ "ಸರಿ" ಎಂದು ಹೇಳಿಯೇಬಿಟ್ಟಳು ಮತ್ತು ಬಂದಿದ್ದ ಶಿಕ್ಷಕರಿಗೆ ವಾಪಸ್ಸಾಗುವಂತೆ ಸೂಚಿಸಿದಳು. ಅವಳಿಗೆ ನನಗೆ ಯಾವ ತಲೆನೋವು ಇಲ್ಲವೆಂದು ತಿಳಿದಿತ್ತು. ಹಾಗಾಗಿ ನನ್ನ ಬಗ್ಗೆ ಯಾವ ವಿಶೇಷ ಕಾಳಜಿಯನ್ನು ತೋರಲಿಲ್ಲ. ನಾನು ತಲೆದಿಂಬಿನಲ್ಲಿ ಮುಖ ಹುದುಗಿಸಿ ಮನಸಾರೆ ನಕ್ಕು ಬಿಟ್ಟೆ. ನಾನು ಮತ್ತು ನನ್ನಮ್ಮ ಒಬ್ಬರನ್ನೊಬ್ಬರು ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೆವು.


ಸ್ವಲ್ಪ ಹೊತ್ತಿಗೆ ನಾನು ಅಜ್ಜಿಗೆ ಕಥೆ ಹೇಳಲು ಪೀಡಿಸಲಾರಂಭಿಸಿದೆ. ನಾನು ಹಿಡಿದ ಪಟ್ಟು ಬಿಡುವುದಿಲ್ಲ ಎಂದು ಗೊತ್ತಿದ್ದ ನನ್ನ ಅಮ್ಮ, ತಾನು ಅಜ್ಜಿಯೊಡನೆ ಆಡುತ್ತಿದ್ದ ಮಾತು ನಿಲ್ಲಿಸಿ ಅಜ್ಜಿಗೆ ಹೇಳಿದಳು 'ಅವನು ಕೇಳಿದ್ದು ನಾವು ಮಾಡದಿದ್ದರೆ ನಮಗೆ ಅವನನ್ನು ನಿಭಾಯಿಸಲು ಆಗುವುದಿಲ್ಲ'.


ನಾನು ಅಜ್ಜಿಯ ಕೈ ಹಿಡಿದು, ನನ್ನ ಹಾಸಿಗೆಯವರೆಗೆ ಕರೆದೊಯ್ದು 'ಅಜ್ಜಿ ಈಗ ಕಥೆ ಹೇಳು' ಎಂದು ಹಟ ಮಾಡಿದೆ. ಅಜ್ಜಿ ಕಥೆ ಶುರು ಮಾಡಿದಳು "ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ. ಅವನಿಗೆ ಒಬ್ಬ ರಾಣಿಯಿದ್ದಳು".


ಇದು ಒಳ್ಳೆಯ ಆರಂಭ. ಎಷ್ಟೋ ಕಥೆಗಳಲ್ಲಿ ರಾಜನಿಗೆ ಹಲವಾರು ರಾಣಿಯರಿರುತ್ತಾರೆ. ಅದು ಕೇಳಿದೊಡನೆ ನಮಗೆ ಹೃದಯ ಕುಸಿದ ಅನುಭವ ಆಗತೊಡಗುತ್ತದೆ. ಏಕೆಂದರೆ ಅಲ್ಲಿ ಒಬ್ಬ ರಾಣಿಗಾದರೂ ಅಸಮಾಧಾನ ಇದ್ದೆ ಇರುತ್ತದೆ. ಈ ಕಥೆಯಲ್ಲಿ ಅಂತಹ ಅಪಾಯ ಇಲ್ಲ. ಏಕೆಂದರೆ ಈ ಕಥೆಯ ರಾಜನಿಗೆ ಒಬ್ಬಳೇ ರಾಣಿ ಇದ್ದಾಳೆ.


ಅಜ್ಜಿ ಕಥೆ ಮುಂದುವರೆಸುತ್ತಾಳೆ. ಆ ರಾಜನಿಗೆ ಮಗಳಿದ್ದಾಳೆ. ಆದರೆ ಗಂಡು ಸಂತಾನ ಇರುವುದಿಲ್ಲ.


ಏಳು ವರುಷದ ಹುಡುಗನಿಗೆ ಗಂಡು ಸಂತಾನ ಇರದಿದ್ದರೆ ಏಕೆ ಚಿಂತಿಸಬೇಕು ಎಂದು ಅರ್ಥವಾಗುವುದು ಕಷ್ಟ. ಈಗ ಇರದಿದ್ದರೆ ಮುಂದೆ ಹುಟ್ಟಬಹುದಲ್ಲವೇ ಎನ್ನುವುದು ಅವನ ವಿಚಾರ.   


ಆದರೆ ಅಜ್ಜಿಯ ಕಥೆ ಮುಂದೆ ಸಾಗುತ್ತದೆ. ಚಿಂತೆಯಿಂದ ರಾಜ ಗಂಡು ಸಂತಾನಕ್ಕಾಗಿ ದೇವರನ್ನು ಪ್ರಾರ್ಥಿಸಿ ತಪಸ್ಸು ಮಾಡಲು ಕಾಡಿಗೆ ಹೊರಡುತ್ತಾನೆ. ರಾಣಿಯನ್ನು, ಚಿಕ್ಕ ಮಗಳನ್ನು ಅರಮನೆಯಲ್ಲೇ ಬಿಟ್ಟು ರಾಜ ಹೊರಡುತ್ತಾನೆ. ಹನ್ನೆರಡು ವರ್ಷಗಳು ಕಳೆದು ಹೋಗುತ್ತವೆ. ಅವನ ಮಗಳು ಬೆಳೆದು ನಿಂತು ಸುಂದರ ಯುವತಿಯಾಗುತ್ತಾಳೆ. ಬೆಳೆದು ನಿಂತ ಮಗಳಿಗೆ ಮದುವೆ ಮಾಡಲು ರಾಜನಿಲ್ಲದೆ ರಾಣಿಗಷ್ಟೇ ಹೇಗೆ ಸಾಧ್ಯ? ಅವಳು ರಾಜನಿಗೆ ಒಂದು ದಿನ ಮಟ್ಟಿಗಾದರೂ ಬಂದು ಹೋಗುವಂತೆ ಹೇಳಿಕಳಿಸುತ್ತಾಳೆ.


ಅದಕ್ಕೆ ಒಪ್ಪಿದ ರಾಜ ಅರಮನೆಗೆ ಮರಳುತ್ತಾನೆ. ರಾಣಿ ತನ್ನ ಕೈಯಿಂದಲೇ ವಿಧ ವಿಧದ ಭಕ್ಷ್ಯಗಳನ್ನು ತಯಾರಿಸಿ ಕಾಯುತ್ತಿರುತ್ತಾಳೆ. ಅವಳ ಮಗಳು ನವಿಲು ಗರಿಯ ಬೀಸಣಿಕೆ ಹಿಡಿದು ರಾಜನಿಗೆ ಸೇವೆ ಮಾಡಲು ನಿಂತಿರುತ್ತಾಳೆ. ಅಲ್ಲಿಗೆ ಬಂದ ರಾಜ "ಸೌಂದರ್ಯದ ಖನಿಯಾಗಿರುವ ಈ ಹುಡುಗಿ ಯಾರು? ಯಾರ ಮಗಳು?" ಎಂದು ರಾಜ, ರಾಣಿಯನ್ನು ಪ್ರಶ್ನಿಸುತ್ತಾನೆ. ರಾಣಿ ಹಣೆ ಚಚ್ಚಿಕೊಳ್ಳುತ್ತ "ನಿಮ್ಮ ಮಗಳನ್ನು ನೀವು ಗುರುತು ಹಿಡಿಯದೇ ಹೋದಿರಾ?" ಎಂದು ಪ್ರಶ್ನಿಸುತ್ತಾಳೆ. ಅದನ್ನು ಕೇಳಿ ಉಲ್ಲಾಸಭರಿತನಾದ ರಾಜ "ನಾಳೆ ನಾನು ನೋಡಿದ ಪ್ರಥಮ ವ್ಯಕ್ತಿಯೊಂದಿಗೆ ಇವಳ ಮದುವೆ ಮಾಡುತ್ತೇನೆ" ಎಂದು ಹೇಳುತ್ತಾನೆ.


ಮರುದಿನ ಅರಮನೆಯ ಹೊರಗೆ ಕಟ್ಟಿಗೆ ಆಯಲು ಬಂದ ಒಬ್ಬ ಬ್ರಾಹ್ಮಣ ಹುಡುಗನನ್ನು ರಾಜ ನೋಡುತ್ತಾನೆ. ಅವನಿನ್ನೂ ಏಳೆಂಟು ವರುಷದವನು. ಆದರೆ ರಾಜ ಅವನಿಗೆ ತನ್ನ ಮಗಳನ್ನು ಕೊಟ್ಟು ಮದುವೆ ಮಾಡಲು ನಿರ್ಧರಿಸುತ್ತಾನೆ. ರಾಜನ ನಿರ್ಧಾರವನ್ನು ಪ್ರಶ್ನಿಸುವ ಧೈರ್ಯ ಯಾರಿಗುಂಟು? ತಡವಿಲ್ಲದೆ ಅವನ ಮಗಳ ಮದುವೆ ಆ ಬ್ರಾಹ್ಮಣ ಹುಡುಗನೊಂದಿಗೆ ನಡೆದೇ ಹೋಗುತ್ತದೆ.


"ಆಮೇಲೆ ಏನಾಯಿತು?" ನಾನು ಅಜ್ಜಿಗೆ ಕೇಳಿದೆ. ಹೀಗೆ ಸೊಗಸಾಗಿ ಕಥೆ ಹೇಳುವ ಅಜ್ಜಿ ಮುಂದಿನ ಜನ್ಮದಲ್ಲೂ ಅಜ್ಜಿಯಾಗೇ ಹುಟ್ಟಬೇಕು ಎಂದು ಮನಸ್ಸಿನಲ್ಲೇ ಅಂದುಕೊಂಡೆ.


ಅಜ್ಜಿ ಕಥೆ ಮುಂದುವರೆಸಿದಳು. ರಾಜಕುಮಾರಿ ತನ್ನ ಹೊಸ ಅರಮನೆಗೆ ಇನ್ನೂ ಬಾಲಕನಾದ ಗಂಡನನ್ನು ಕರೆದುಕೊಂಡು ಹೋಗುತ್ತಾಳೆ. ಆ ಹುಡುಗನನ್ನು ಶಾಲೆಗೆ ಕಳಿಸಿ ವಿದ್ಯಾಭ್ಯಾಸ ಮುಂದುವರೆಯುವಂತೆ ಏರ್ಪಾಡು ಮಾಡಲಾಗಿತ್ತು. ಶಾಲೆಯಲ್ಲಿ ಅವನ ಸ್ನೇಹಿತರೆಲ್ಲ, ಅರಮನೆಯಲ್ಲಿರುವ ಆ ಸುಂದರ ಹೆಣ್ಣು ಅವನಿಗೆ ಏನಾಗಬೇಕು ಎಂದು ಕೇಳುತ್ತಿದ್ದರು. ಆ ಬಾಲಕನಿಗೋ ಒಂದು ದಿನ ಅವಳ ಜೊತೆ ಹಾರ ಬದಲಿ ಮಾಡಿಕೊಂಡ ನೆನಪು ಮಾತ್ರ ಉಂಟು. ಅದಕ್ಕಿಂತ ಹೆಚ್ಚಿಗೆ ಅವನಿಗೆ ಏನು ತಿಳಿಯದು. ನಾಲ್ಕು-ಐದು ವರುಷಗಳು ಕಳೆದು ಹೋದವು. ಅವನ ಸ್ನೇಹಿತರು ಅರಮನೆಯಲ್ಲಿರುವ ಸುಂದರ ಹೆಣ್ಣು ಯಾರು ಎಂದು ಕೇಳುತ್ತಲೇ ಇದ್ದರು. ಅವನು ಮನೆಗೆ ಬಂದೊಡನೆ ಯುವರಾಣಿಗೆ ಕೇಳಿಯೇ ಬಿಟ್ಟ. "ನನ್ನ ಸ್ನೇಹಿತರೆಲ್ಲ ನೀನಾರು ಎಂದು ಕೇಳುತ್ತಿದ್ದಾರೆ. ಯಾರು ನೀನು?" ಅದಕ್ಕೆ ಯುವರಾಣಿ "ಅದು ಇಂದಿಗೆ ಬೇಡ. ಮುಂದೆ ಎಂದಾದರೂ ಆ ವಿಷಯ ಹೇಳುತ್ತೇನೆ" ಎಂದು ಹೇಳಿದಳು. ಹಾಗೆಯೆ ಇನ್ನು ಕೆಲವು ವರುಷಗಳು ಕಳೆದು ಹೋದವು. ಕೊನೆಗೆ ಬ್ರಾಹ್ಮಣ ಹುಡುಗ ತಾಳ್ಮೆ ಕಳೆದುಕೊಂಡು "ನೀನು ಯಾರು ಎಂದು ಹೇಳಲೇಬೇಕು" ಎಂದು ಒತ್ತಾಯಿಸಿದ. "ಇಂದು ಬೇಡ, ನಾಳೆ ಖಂಡಿತ ಹೇಳುತ್ತೇನೆ" ಎಂದು ಉತ್ತರಿಸಿದಳು ಯುವರಾಣಿ.


ಮರುದಿನ ಮತ್ತೆ ಅದೇ ಪ್ರಶ್ನೆ ಬಂದಾಗ "ಈಗ ಬೇಡ. ರಾತ್ರಿ ಊಟದ ನಂತರ ಮಲಗುವಾಗ ಹೇಳುತ್ತೇನೆ" ಎಂದಳು ಯುವರಾಣಿ. ಅಂದು ರಾತ್ರಿ ಅವರ ಮಂಚ ಹೂವಿನಿಂದ ಅಲಂಕೃತವಾಗಿತ್ತು. ಕೋಣೆಯಲ್ಲಿ ಸುಗಂಧ ದ್ರವ್ಯಗಳನ್ನು ಸಿಂಪಡಿಸಲಾಗಿತ್ತು. ಯುವರಾಣಿ ಸುಂದರ ಬಟ್ಟೆ ಧರಿಸಿ ಅಲಂಕೃತವಾಗಿದ್ದಳು. ಅವಳ ಗಂಡ ಅಲ್ಲಿಗೆ ಹೋಗಿ ಮಲಗಿದ ಮೇಲೆ ಹೆಚ್ಚಿಗೆ ತಡ ಮಾಡದೆ ಆ ಕೋಣೆಯನ್ನು ಪ್ರವೇಶಿಸಿದಳು ಯುವರಾಣಿ. ಆದರೆ ಅಷ್ಟರಲ್ಲೇ ಹೂವಿನ ಬುಟ್ಟಿಯಲ್ಲಿದ್ದ ವಿಷದ ಹಾವು ಅಲಂಕೃತವಾಗಿದ್ದ ಮಂಚದ ಮೇಲೆ ಮಲಗಿದ್ದ ಅವಳ ಗಂಡನ ಕಚ್ಚಿ ಪ್ರಾಣ ತೆಗೆದಿತ್ತು.


ನನ್ನ ಹೃದಯ ಒಮ್ಮೆಲೇ ನಿಂತಂತಾಗಿ ಉಸಿರುಗಟ್ಟಿದ ಧ್ವನಿಯಲ್ಲಿ ಅಜ್ಜಿಯನ್ನು ಕೇಳಿದೆ "ಆಮೇಲೆ ಏನಾಯಿತು?"


ಆಮೇಲೆ ಕಥೆ ಮುಂದುವರೆಸಿ ಏನು ಪ್ರಯೋಜನ ಇದೆ? ಸಾವಿನ ನಂತರದ ಕಥೆಯನ್ನು ಯಾವ ಅಜ್ಜಿಯೂ ಮುಂದುವರೆಸಲಾರಳು. ಆ ಸುಂದರ ಸಂಜೆಯ ಕಥೆ ಹೀಗೆ ಅಂತ್ಯ ಕಾಣಬಹುದು ಎಂದು ನಾನು ಊಹಿಸಲು ಹೇಗೆ ಸಾಧ್ಯ ಇತ್ತು? ಮಂತ್ರೋಚ್ಚಾರಣೆ ಮಾಡಿ ಸತ್ತವರನ್ನು ಮತ್ತೆ ಬದುಕಿಸುವ ಕಥೆ ಅದಾಗಿರಲಿಲ್ಲ. ಎಲ್ಲದಕ್ಕೂ ಒಂದು ಅಂತ್ಯ ಎನ್ನುವುದು ಇರಬೇಕಲ್ಲವೇ? ಆದರೆ ಕಥೆ ಕೇಳುತ್ತಿದ್ದ ನನಗೆ ಸಾವು ಎನ್ನುವುದು ಭಯ ಬೀಳಿಸುವ ಅಂತ್ಯ ಅನಿಸದೇ ಅದು ಒಂದು ದೀರ್ಘ ರಾತ್ರಿಯ ತರಹದ್ದಾಗಿರಬೇಕು ಎನಿಸಿತು. ಕಥೆ ಮುಗಿದ ಮೇಲೆ ಕಣ್ಣು ರೆಪ್ಪೆ ಭಾರವಾಗಿ ನಿದ್ರೆಗೆ ಜಾರುವ ಹುಡುಗ ಮರುದಿನ ಮತ್ತೆ ಬೆಳಕಿನ ಜಗತ್ತಿಗೆ ಮತ್ತು ಬದುಕಿಗೆ ತನ್ನನ್ನು ಒಡ್ಡಿಕೊಳ್ಳುತ್ತಾನೆ. ಹೊಸ ಕಥೆಗೆ ಅಣಿಯಾಗುತ್ತಾನೆ.

No comments:

Post a Comment