Tuesday, November 17, 2020

ಪುಸ್ತಕ ಪರಿಚಯ: ಕುವೆಂಪು ಸಂಚಯ

 "ವಸಂತ ವನದಲಿ ಕೂಗುವ ಕೋಗಿಲೆ

ರಾಜನ ಬಿರುದು ಬಯಸುವುದಿಲ್ಲ;

ಹೂವಿನ ಮರದಲಿ ಜೇನುಂಬುಳುಗಳು

ಮೊರೆವುದು ರಾಜನ ಭಯದಿಂದಲ್ಲ"       ("ಕವಿ" ಕವಿತೆಯಿಂದ)

 

"ದೇಶ ಕೋಸಲಮಿಹುದು ಧನ ಧಾನ್ಯ ಜನ ತುಂಬಿ

ಸರಯೂ ನದಿ ಮೇಲೆ. ಮೆರೆದುದು ವಿಷಯ ಮಧ್ಯೆ

ರಾಜಧಾನಿ ಅಯೋಧ್ಯೆ"         ("ಶ್ರೀ ರಾಮಾಯಣ ದರ್ಶನಂ" ನಿಂದ)

 

"ಧನ್ಯನ್ ನೀನ್, ಏಕಲವ್ಯ, ಧನ್ಯನೆ ದಿಟಂ"    ("ಬೆರಳ್ ಗೆ ಕೊರಳ್" ನಾಟಕದಿಂದ)

 

"ದೂರದ ಗಿರಿಗಳ ಏರುವೆ ನೀನು;

ದೂರದ ಪುರಗಳ ನೋಡುವೆ ನೀನು"          (""ಮೋಡಣ್ಣನ ತಮ್ಮ" ಶಿಶು ಸಾಹಿತ್ಯದಿಂದ)

 

"ರಂಗಯ್ಯನು ಕುಳಿತನು. ಸ್ವಲ್ಪ ಹೊತ್ತು ತನ್ನ ಕೋವಿಯನ್ನು ಕೈಯಲ್ಲಿ ಹಿಡಿದುಕೊಂಡು ದಿಕ್ಕು ದಿಕ್ಕುಗಳನ್ನು ನೋಡಿದನು. ಸುತ್ತಲೂ ವೀಣಾವಾದ್ಯ ಧ್ವನಿಗೈಯುತ್ತ ಸೊಳ್ಳೆಗಳು ಹಾರಾಡಿ ಕಡಿಯುತ್ತಿದ್ದವು"          ("ಬಂದನಾ ಹುಲಿರಾಯನು" ಕಥೆಯಿಂದ)

 

"ಹೂವಯ್ಯನ ಮುಖವು ಭಾವೋತ್ಕರ್ಷದಿಂದಲೂ ಹರ್ಷದಿಂದಲೂ ಆಗ ತಾನೇ ಅಭ್ಯಂಜನ ಮಾಡಿದವನ ಮುಖದಂತೆ ಕೆಂಪಾಗಿತ್ತು. ಕಣ್ಣು ಸಲೀಲಾವೃತವಾಗಿ ಮಿರುಗುತ್ತಿದ್ದವು. ಸೀತೆ ನೋಡುತ್ತಿದ್ದ ಹಾಗೆಯೆ ಮೆಲ್ಲೆಲರು ಬೀಸಿದಾಗ ಹೂವಿನಿಂದ ಹನಿಗಳುದುರುವಂತೆ ಅವನ ಕಣ್ಣುಗಳಿಂದ ವಾರಿಬಿಂದುಗಳೂ ಸೂಸತೊಡಗಿದವು"        ("ಕಾನೂರು ಹೆಗ್ಗಡಿತಿ" ಕಾದಂಬರಿಯಿಂದ)

 

"ಇಂಗ್ಲಿಷ್ ಸಾಹಿತ್ಯವನ್ನು ಅಮೂಲಾಗ್ರವಾಗಿ ಓದಿದವರು ಬೆಕ್ಕಸಬಡುವಂತಹ ಸಾಹಿತ್ಯ ಶೃಂಗಗಳು ಕನ್ನಡದಲ್ಲಿ ಕೆಲವಾದರೂ ಮೂಡಿವೆ"     ("ನಮಗೆ ಬೇಕಾಗಿರುವ ಇಂಗ್ಲಿಷ್" ಲೇಖನದಿಂದ)

 

"ನನಗೆ ಗುಡ್ಡ ಕಾಡುಗಳಲ್ಲಿ ಗದ್ದೆ ತೋಟಗಳಲ್ಲಿ ಹೊಳೆತೊರೆಗಳೆಡೆ ಅಲೆಯುವುದಂದರೆ ಚಿಕ್ಕಂದಿನಿಂದಲೂ ಇಷ್ಟ. ಸಹ್ಯಾದ್ರಿಯ ನೈಸರ್ಗಿಕ ರಮಣೀಯತೆಯ ಸುವಿಶಾಲ ಸರೋವರದಲ್ಲಿ ನನ್ನ ಬಾಲ ಚೇತನ ಮರಿ ಮೀನಾಗಿ ಓಲಾಡಿ ತೇಲಾಡುತ್ತಿತ್ತು"     ("ನೆನಪಿನ ದೋಣಿಯಲ್ಲಿ" ಆತ್ಮಚರಿತ್ರೆಯಿಂದ)

 

ಕನ್ನಡದ  ಕಂಪು ಕುವೆಂಪು. ಅವರ ಕಾವ್ಯ, ನಾಟಕ, ಶಿಶು ಸಾಹಿತ್ಯ, ಕಥೆ, ಲೇಖನ, ಕಾದಂಬರಿಗಳ ಆಯ್ದ ಭಾಗಗಳು ಇವೆಲ್ಲವುಗಳನ್ನು "ಕುವೆಂಪು ಸಂಚಯ" ಒಂದೇ ಪುಸ್ತಕದಲ್ಲಿ ಓದುವುದು ಸಾಧ್ಯ. ಸುಮಾರು ಎಂಟು ನೂರು ಪುಟಗಳ ಪುಸ್ತಕವನ್ನು ಸಂಪಾದಿಸಿದ್ದಾರೆ ಕನ್ನಡದ ಮೂವರು ಹಿರಿಯ ಲೇಖಕರು. ಇದು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಪ್ರಕಟಿಸಲ್ಪಿಟ್ಟಿದೆ. (ಪ್ರಾಧಿಕಾರದ ಕಾರ್ಯಾಲಯಗಳಲ್ಲಿ ಆಕರ್ಷಕ ರಿಯಾಯಿತಿ ದರದಲ್ಲಿ ಪುಸ್ತಕ ದೊರೆಯುತ್ತದೆ. ನಾನು ಬೆಂಗಳೂರಿನ ಮಲ್ಲತ್ತ ಹಳ್ಳಿಯ ಕೇಂದ್ರದಿಂದ ಖರೀದಿಸಿದ್ದು).

 

ಕುವೆಂಪುರವರ ಕೃತಿಗಳನ್ನು ಓದುತ್ತ ಬೆಳೆದ ನಮಗೆ ಅವರ ಸಾಹಿತ್ಯ ಕೃಷಿಯ ಪರಿಚಯ ಇದ್ದೇ ಇದೆ. ಆದರೆ ಅವರ ಕೃತಿಗಳಲ್ಲಿ ಕಾಣುವ ಪೃಕೃತಿ ಸೌಂದರ್ಯ, ಬಾಳಿನ ಮಾಧುರ್ಯ, ಭಾಷಾ ಸಂಪತ್ತು ಮತ್ತೆ ಮತ್ತೆ ಓದುವ ಪ್ರೇರೇಪಣೆ ಮೂಡಿಸದೆ ಇರದು. ಅದರಲ್ಲೂ ಕುವೆಂಪುರವರ ಕನ್ನಡ ಪ್ರೇಮ ಅಪರಿಮಿತವಾದದ್ದು. ಅದಕ್ಕೇನೇ ಅವರು ನಮಗೆ ಹೇಳಿದ್ದು:

 

"ಎಲ್ಲಾದರೂ ಇರು, ಎಂತಾದರು ಇರು;

ಎಂದೆಂದಿಗೂ ನೀ ಕನ್ನಡವಾಗಿರು"




Monday, November 16, 2020

ಭಾಷೆಗೂ ನಿಲುಕದ ಭಾವನೆ ಮತ್ತು ಅದರ ಹಿಂದಿನ ವಿಜ್ಞಾನ

ಒಮ್ಮೊಮ್ಮೆ ಅನಿಸಿದ್ದನ್ನು ಭಾಷೆಯಲ್ಲಿ ವ್ಯಕ್ತ ಪಡಿಸದೆ ಒದ್ದಾಡುತ್ತೇವೆಯಲ್ಲವೇ? ಸಂಗೀತ ಮೂಡಿಸುವ ಉಲ್ಲಾಸವನ್ನು ಭಾಷೆಯಲ್ಲಿ ಹೇಳುವುದೆಂತು? ಪ್ರಕೃತಿ ಸೌಂದರ್ಯದ ವರ್ಣನೆಗೆ ಕವಿಗಳೇ ಶಬ್ದ ತಡಕಾಡುತ್ತಾರೆ ಅಲ್ಲವೇ? ಕಣ್ಣೋಟ ಹೊರಡಿಸುವ ಸಂದೇಶ ಮನಸ್ಸಿಗೆ ಅರ್ಥವಾದರೂ ಅದನ್ನು ಸ್ಪಷ್ಟವಾಗಿ, ಪರಿಣಾಮಕಾರಿಯಾಗಿ ಮಾತುಗಳಲ್ಲಿ ಹೇಳಲು ಸಾಧ್ಯವೇ? ಕವಿತೆಗೆ ಜೀವ ತುಂಬುವುದು ಹಾಡುಗಾರನ ಭಾವವಲ್ಲವೇ? ಒಬ್ಬ ಅದ್ಭುತ ನಟ, ಯಾವುದೇ ಸಂಭಾಷಣೆ ಇಲ್ಲದೆ, ಮುಖದಲ್ಲಿ ಎಲ್ಲ ಭಾವನೆಗಳನ್ನು ತೋರಿಸುತ್ತ, ಕೆಲ ಸನ್ನಿವೇಶಗಳಲ್ಲಿಯಾದರೂ ಮನೋಜ್ಞ ಅಭಿನಯ ನೀಡಲು ಸಾಧ್ಯ, ಅಲ್ಲವೇ? ಅಂದರೆ ಭಾವನೆಗಳು ಮನಸ್ಸಿನ ಆಳ (ಭಾಷೆ ತಲುಪಿದ್ದಕಿಂತ ಹೆಚ್ಚಿನ ಆಳ) ತಲುಪಲು ಸಾಧ್ಯ ಎಂದಾಯಿತು. ಮನುಷ್ಯ ವಿಕಾಸ ವಿಜ್ಞಾನ (Evolutionary Science) ಇದು ಹೀಗೇಕೆ ಎಂದು ತಕ್ಕ ಮಟ್ಟಿಗೆ ವಿವರಿಸುತ್ತದೆ.


ನಮಗೆ ಗೊತ್ತಿರುವ ಭಾಷೆಗಳಲ್ಲಿ, ಹಳೆಯ ಭಾಷೆ ಎಂದರೆ ಸಂಸ್ಕೃತ. ಅದಕ್ಕೆ ಸುಮಾರು ಐದು ಸಾವಿರ ವರ್ಷ ಇತಿಹಾಸವಿದೆ. ಅದಕ್ಕೂ ಮುಂಚೆ ಬ್ರಾಹ್ಮೀ ಭಾಷೆ, ಅದಕ್ಕೆ ಸಂಪೂರ್ಣ ಲಿಖಿತ ಲಿಪಿ ಇರದಿದ್ದರೂ ಆಡು ಭಾಷೆಯ ರೂಪದಲ್ಲಿತ್ತು. ಆದರೆ ಆಡು ಭಾಷೆಯ ಬೆಳವಣಿಗೆಯ ಮುಂಚೆಯೇ ಮನುಷ್ಯ ಸಂಘ ಜೀವಿಯಾಗಿದ್ದನಲ್ಲವೇ? ಅಂದರೆ ಸುಮಾರು ೬೦,೦೦೦ ವರ್ಷಗಳ ಹಿಂದೆಯೇ ಶಿಲಾಯುಗದ ಮನುಷ್ಯ ಗುಂಪು ಗಟ್ಟಿಕೊಂಡು ಗುಡ್ಡ ಗಾಡುಗಳಲ್ಲಿ ಬೇಟೆಗೆ ಹೊರಡುತ್ತಿದ್ದಾಗ, ಒಬ್ಬರಿಗೊಬ್ಬರು ಸಂದೇಶ ಕಳಿಸುವುದಕ್ಕೆ, ಸಹಕರಿಸುವುದಕ್ಕೆ ಕಲಿತುಕೊಂಡದ್ದು ದೇಹದ ಹಾವ-ಭಾವಗಳ ಮೂಲಕ (Body Language)  ಮತ್ತು ಧ್ವನಿಯ ಏರಿಳಿತದ ಮೂಲಕ. ಕ್ರಮೇಣ ಇದನ್ನು ಸಮರ್ಪಕವಾಗಿ ಬಳಸಲು ಅವರು ಕಲಿತುಕೊಂಡರು. ಭಯಗೊಂಡಾಗ ಒಂದು ತರಹದ, ಸಂತೋಷದ ಸಮಯದಲ್ಲಿ ಇನ್ನೊಂದು ತರಹದ ಸಂದೇಶಗಳನ್ನು ಧ್ವನಿಯ ಏರಿಳಿತದ ಮೂಲಕ ಅವರು ಹಂಚಿಕೊಳ್ಳುತ್ತ, ಒಂದೇ ತರಹದ ಭಾವನೆಗಳು ತಮ್ಮ ಗುಂಪಿನಲ್ಲಿ ಮೂಡಿಸುವ ಪ್ರಕ್ರಿಯೆ ಅವರಲ್ಲಿ ಆರಂಭವಾಯಿತು. ಮತ್ತು ಅದು ಮನುಜನ ವಿಕಾಸಕ್ಕೂ ಕಾರಣವಾಯಿತು. ಮನುಷ್ಯನ ಮೆದುಳಿನ ರಚನೆ ವಿಕಾಸ ಹೊಂದುತ್ತ, ದೇಹದ ಭಂಗಿ, ಹಾವ-ಭಾವ ಮತ್ತು ಧ್ವನಿಯ ವ್ಯತ್ಯಾಸಗಳನ್ನು ಸ್ಪಷ್ಟವಾಗಿ ಗುರುತಿಸಲಾರಂಭಿಸಿತು. ಗುಂಪಿನಲ್ಲಿ ಜೊತೆಗಿರುತ್ತಿದ್ದ ಮನುಷ್ಯರ ಸಂಖ್ಯೆ ಹೆಚ್ಚಾದಂತೆಲ್ಲ, ಮನುಷ್ಯ ಉಪಯೋಗ ಮಾಡುತ್ತಿದ್ದ ಸಂಜ್ಞೆಗಳ ಪ್ರಮಾಣವೂ ಹೆಚ್ಚಾಯಿತು. ಇದಕ್ಕೆ ಸಂಬಂಧಿಸಿದ ಮೆದುಳಿನ ನ್ಯೂರಾನ್ (Neuron) ಗಳ ಸಂಖ್ಯೆಯು ಹೆಚ್ಚುತ್ತಾ ಹೋಯಿತು. ಮುಂದೆ ಮನುಷ್ಯ ಕೃಷಿಯನ್ನು ಕಲಿತುಕೊಂಡ. ಅಲೆಯುತ್ತ ಬದುಕುವುದು ಬಿಟ್ಟು ತನ್ನ ಹೊಲಗಳ ಹತ್ತಿರ ವಾಸ ಮಾಡತೊಡಗಿದ. ಆಗ ಹಳ್ಳಿಗಳು ಹುಟ್ಟಿಕೊಂಡವು. ಅವನ ಸಮಾಜ ದೊಡ್ಡದಾಗುತ್ತ ಹೋಯಿತು. ಆಗ ಬರೀ ಸಂಜ್ಞೆಗಳು ಸಾಕಾಗದೆ, ಭಾಷೆಯ ಅವಶ್ಯಕತೆ ಕಾಣತೊಡಗಿತು ಮತ್ತು ಕಾಲಾಂತರದಲ್ಲಿ ಅವನು ಹೊರಡಿಸುತ್ತಿದ್ದ ಧ್ವನಿಗಳು ಒಂದು ಭಾಷೆಯ ಶಬ್ದಗಳಾಗುತ್ತಾ ಬದಲಾದವು. ಆದರೆ ಎಲ್ಲ ಧ್ವನಿ ಮತ್ತು ಸಂಜ್ಞೆಗಳು ಪದಕೋಶಗಳಾಗಿ ಬದಲಾಗಲಿಲ್ಲ. ಕೆಲವುಗಳ ಅಭಿವ್ಯಕ್ತಿ ಮತ್ತು ಪುನರ್ಬಳಕೆ, ಗಾನ, ನಾಟ್ಯಗಳಿಂದ ಸಾಧ್ಯವಾಯಿತು. ಮನುಷ್ಯ ಕೃಷಿಯನ್ನು ಪಳಗಿಸಿಕೊಂಡು, ಇತರೆ ವೃತ್ತಿಗಳೆಡೆಗೆ ಹೊರಳಿದಾಗ, ಅವನ ಭಾಷೆಯಲ್ಲಿನ ಶಬ್ದ ಸಂಪತ್ತು ದೊಡ್ಡದಾಗುತ್ತ ಹೋಯಿತು. ಅವನು ಪದಾರ್ಥ ವಿನಿಮಯ - ವ್ಯಾಪಾರ ಕಲಿಯುವಷ್ಟರಲ್ಲಿ ಭಾಷೆಗಳು ಸಂಪೂರ್ಣ ಅಭಿವೃದ್ಧಿ ಹೊಂದಿದ್ದವು. ಮುಂದೆ ಆಡು-ಭಾಷೆ ಸಾಕಾಗದೆ ಅವನು ಬರೆಯುವುದನ್ನು ಸಹ ಕಲಿತುಕೊಂಡ.  ಹೀಗೆ ನಾಗರೀಕ ಜೀವನ ಆರಂಭಗೊಂಡಿತು.


ಆದರೆ ಇಷ್ಟೆಲ್ಲಾ ಆಗುವಷ್ಟರಲ್ಲಿ ಸುಮಾರು ೫೦,೦೦೦ ವರ್ಷಗಳಷ್ಟು ಕಾಲ ಸರಿದು ಹೋಗಿತ್ತು. ನಮ್ಮ ಮೆದುಳು ದೈಹಿಕ ಸಂಜ್ಞೆ ಮತ್ತು ಧ್ವನಿಗಳನ್ನು, ಅಷ್ಟು ದೀರ್ಘವಾದ ಕಾಲದಿಂದ ಕಲಿತುಕೊಳ್ಳುತ್ತ ಬಂದಿದೆ. ಅದಕ್ಕೆ ಹೋಲಿಸಿದರೆ ಭಾಷೆಯ ಬೆಳವಣಿಗೆ ಇತ್ತೀಚಿನದು. ಅದಕ್ಕೆ ಏನೋ, ಒಬ್ಬ ಸಾಧಾರಣ ಮನುಷ್ಯ ಒಂದು ಸಿನಿಮಾ ಅಥವಾ ದೂರದಶನವನ್ನು ನೋಡಿ ನಿರಾಯಾಸವಾಗಿ ಅರ್ಥ ಮಾಡಿಕೊಳ್ಳಬಲ್ಲ ಆದರೆ ಒಂದು ಪುಸ್ತಕ ಓದುವುದು ಅವನಿಗೆ ಪ್ರಯಾಸದ ಕೆಲಸ. ಶ್ರಮ ಅಷ್ಟೇ ಅಲ್ಲ, ಅರ್ಥ ಮಾಡಿಕೊಳ್ಳುವ ತಾಕತ್ತಿನಲ್ಲೂ ಬಹು ವ್ಯತ್ಯಾಸವಿದೆ. ಒಂದೆರಡು ಪುಟದ ಬರವಣಿಗೆಗಿಂತ, ಒಂದು ಚಿಕ್ಕ ಚಿತ್ರ ಹೆಚ್ಚು ಪರಿಣಾಮಕಾರಿಯಾಗಿ ಸಂದೇಶ ಮುಟ್ಟಿಸುತ್ತದೆ. ಮನುಷ್ಯನ ಇಂದ್ರಿಯಗಳು ಓದುವದಕ್ಕಿಂತ ಅಥವಾ ಭಾವನೆ ಇಲ್ಲದ ಮಾತಿಗಿಂತ, ಭಾವನಾತ್ಮಕ ದೃಶ್ಯ, ಏರಿಳಿತವಿರುವಂತ ಧ್ವನಿಗೆ ಹೆಚ್ಚು ಸ್ಪಂದಿಸುತ್ತವೆ. ಇದಕ್ಕೆ ಕಾರಣ ಮನುಜ ವಿಕಾಸ ಹೊಂದಿದ ರೀತಿ ಮತ್ತು ಅದಕ್ಕೆ ಮನುಜನ ಅಂಗಾಂಗಗಳು ಮತ್ತು ಮೆದುಳು ಆ ವಿಕಾಸಕ್ಕೆ ಹೊಂದಿಕೊಂಡು ವಿನ್ಯಾಸಗೊಂಡ ಬಗೆ. ಹಾಗಾಗಿ ಕವಿತೆಯನ್ನು ಬರೀ ಓದುವುದಕ್ಕಿಂತ, ಅದನ್ನು ಸುಶ್ರಾವ್ಯ ಸಂಗೀತದೊಂದಿಗೆ ಕೇಳಿದಾಗ ಆಗುವ ಅನುಭವವೇ ಬೇರೆ. ಭಾವನೆಗಳಿಗೆ ೫೦,೦೦೦ ವರ್ಷಗಳ ಇತಿಹಾಸವಿದ್ದರೆ ಭಾಷೆಗೆ ೫,೦೦೦ ವರ್ಷ ಇತಿಹಾಸವಿದೆ. ಭಾಷೆಯನ್ನು ಮನುಷ್ಯ ಪ್ರಯತ್ನ ಪೂರ್ವಕ ಕಲಿತುಕೊಳ್ಳಬೇಕು. ಭಾವನೆಗಳು ಹಾಗಲ್ಲ, ಅವು ಹುಟ್ಟಿನಿಂದ ಬರುತ್ತವೆ. ಪ್ರಕೃತಿಯು ಮನುಷ್ಯ ದೀರ್ಘ ಕಾಲದಲ್ಲಿ ಕಲಿತುಕೊಂಡದ್ದನ್ನು, ಅವನು ಬದುಕುಳಿಯಲು ಅವಶ್ಯ ಎನ್ನಿಸುವ ಮಾಹಿತಿಯನ್ನು, ಜೀನ್ (Gene) ಗಳ ಮುಖಾಂತರ ವಂಶವಾಹಿಯನ್ನಾಗಿ ಮಾಡುತ್ತದೆ.


ಇತರೆ ಬೇಟೆ ಪ್ರಾಣಿಗಳ ಹಾಗೆ, ಮನುಷ್ಯನಿಗೆ ವೇಗವಾಗಿ ಓಡಲು ಅಥವಾ ಕಾದಾಡಲು ಸಾಧ್ಯವಿರಲಿಲ್ಲ. ಆದರೆ ಆಯುಧಗಳ ಸಹಾಯದಿಂದ ಮತ್ತು ಗುಂಪಿನ ಬಲದಿಂದ ಬದುಕುಳಿಯುವುದನ್ನು ಕಲಿತ. ಆಯುಧ ಚೂಪು ಮಾಡುವ ಮತ್ತು ಬಲಿಯನ್ನು ಹೊತ್ತು ತರುವ ಗಂಡಸಿನ ಕೈ-ಕಾಲು ಸ್ನಾಯುಗಳು, ಭುಜ-ಬೆನ್ನುಗಳು ಬಲವಾದವು. ಮನೆ-ಮಕ್ಕಳ ನಿರ್ವಹಣೆ ಹೊತ್ತ ಹೆಂಗಸಿಗೆ ಮಾತು-ಕತೆಯ ಉಪಯೋಗ ಹೆಚ್ಚಿನದಿತ್ತು. ಅದೇ ಅವಳ ಬಲವಾಗಿ ಬದಲಾಯ್ತು. ಇವತ್ತಿಗೂ ನೋಡಿ, ಎಂಥ ಸೂಕ್ಷ್ಮ ಭಾವನೆಯಿರಲಿ, ಅದನ್ನು ತಾಯಿ ಗುರುತಿಸದಷ್ಟು ಸುಲಭವಾಗಿ ತಂದೆ ಗುರುತಿಸುವುದಿಲ್ಲ. ತಾಯಿ ಮಗುವಿಗೆ ಮಾತು ಕಲಿಸಿದರೆ, ಅಜ್ಜಿ ಕಥೆ ಹೇಳಿ ಮನು ಕುಲದ ಸಮಾಜ ಜೀವನಕ್ಕೆ ತಳಪಾಯ ಹಾಕಿದಳು. ಭಾವನೆ ಅರಿತು ಮಾತನಾಡುವ ವ್ಯಕ್ತಿಗಳು ಸಮಾಜದ ನಾಯಕರಾಗುತ್ತಾ ಬಂದರು. ಇವೆಲ್ಲ ಬೆಳವಣಿಗೆಗಳು ಮನುಷ್ಯನ ದೇಹವನ್ನು ಇತರೆ ಪ್ರಾಣಿಗಳಿಗಿಂತ ಭಿನ್ನವಾಗಿ ಮಾರ್ಪಾಡಾಗುವಂತೆ ಮಾಡಿತು. ಮನುಷ್ಯನ ಮೆದುಳಿನ ಗಾತ್ರ ಹೆಚ್ಚುತ್ತಾ ಹೋಗಿ ಅವನ ನರಜಾಲ (Nervous System) ಸಂಕೀರ್ಣಗೊಳ್ಳುತ್ತ ಹೋಯಿತು. ಪ್ರಾಣಿಗಳಿಗಿಂತ ಹೆಚ್ಚು ಭಾವನೆಗಳನ್ನು, ವಿಚಾರಗಳನ್ನು ಅರ್ಥ ಮಾಡಿಕೊಳ್ಳಬಲ್ಲ ಮತ್ತು ವ್ಯಕ್ತಪಡಿಸುವ ಶಕ್ತಿ ಅವನದಾಯಿತು. ಅದರ ಒಂದು ಮಾಧ್ಯಮ ಎನ್ನುವಂತೆ ಭಾಷೆ ಬೆಳೆಯಿತು.


ಭಾಷೆ ಮತ್ತು ಭಾವನೆ ಇವೆರಡರಲ್ಲಿ ಹೆಚ್ಚು ಶಕ್ತಿಯುತವಾದದ್ದು ಭಾವನೆಯೇ ಎನ್ನಲು ಅಡ್ಡಿಯಿಲ್ಲ. ಭಾಷೆ ಕೇವಲ ಒಂದು ಮಾಧ್ಯಮವಾದರೆ, ಭಾವನೆ ನಮ್ಮನ್ನಾಳುವ ಕೇಂದ್ರೀಯ ಶಕ್ತಿ. ಭಾಷೆ ಅರಿಯುವ ತಂತ್ರಜ್ಞಾನವನ್ನು ಮನುಷ್ಯ ಈಗಾಗಲೇ ಅಭಿವೃದ್ಧಿಗೊಳಿಸಿದ್ದಾನೆ. (ಉದಾಹರಣೆಗೆ - ಅಲೆಕ್ಸಾ ಡಿವೈಸ್. ಅಥವಾ ಆಪಲ್ ಫೋನ್ ನಲ್ಲಿರುವ 'ಸಿರಿ'. ಅದು ನನ್ನ ಜೊತೆಗೆ ಮಾತನಾಡಿದಷ್ಟೇ ಸುಲಭವಾಗಿ, ನನ್ನ ನಾಲ್ಕು ವರ್ಷದ ಮಗನ ಜೊತೆಗೂ ಮಾತನಾಡುತ್ತದೆ). ಆದರೆ ಭಾಷೆಯ ಹಿಂದಿರುವ ಭಾವನೆ? ಇದನ್ನು ಅರಿಯಲು ಮನಶಾಸ್ತ್ರದ ಸಹಾಯ ಬೇಕು. ಮತ್ತು ಇದರ ಬಳಕೆ ಸದುಪಯೋಗಕ್ಕಿಂತ, ದುರುಪಯೋಗಗಳಿಗೆ ಹೆಚ್ಚು. ಉದಾಹರಣೆಗೆ, ದ್ವೇಷ ಭಾವನೆ ಬಿತ್ತುವ ಭಯೋತ್ಪಾದನೆ ಕೆಲಸ ಮಾಡುವುದು ಮನಸ್ಸನ್ನು ಆಳುವ ಭಾವನೆಗಳ ಮೇಲೆ. ಹಾಗೆಯೇ ಜಾಹಿರಾತು ಉದ್ಯಮ ನಿಂತಿರುವುದು ಭಾವನೆಗಳ ತಳಹದಿಯ ಮೇಲೆ. ಇಲ್ಲದಿದ್ದರೆ, ಹುಟ್ಟಿದಾಗಿಂದ ಚಹಾ ಕುಡಿಯುತ್ತಿರುವ ನಿಮಗೆ ಯಾವ ಬ್ರಾಂಡ್ ಚಹಾ ಕುಡಿಯೇಬೇಕೆಂದು ಒಬ್ಬ ಸಿನಿಮಾ ನಟ ಹೇಳಲು ಸಾಧ್ಯವಿತ್ತೇ? ಹಾಗೆಯೇ ನಿಮ್ಮ ಕಾರಿಗೆ ಯಾವ ಟೈಯರ್ ಸೂಕ್ತ ಎಂದು ಡ್ರೈವರ್ ಗೆ ಹೆಚ್ಚು ಗೊತ್ತೋ  ಅಥವಾ ಕ್ರಿಕೆಟ್ ಆಟಗಾರನಿಗೋ? ಆದರೂ ನೋಡಿ, ಈ ಜಾಹಿರಾತುಗಳು ಮನುಷ್ಯನ ಮೇಲೆ ಭಾಷೆಗೂ ನಿಲುಕದ ಒಂದು ಸೂಕ್ಷ್ಮ ಪರಿಣಾಮ ಬೀರುತ್ತವೆ. ಹಾಗೆಯೇ ರಾಜಕೀಯ ಪಕ್ಷಗಳ ಉದ್ದೇಶಗಳು ಭಾವನೆಗಳನ್ನು ಕೆದಕಿ, ಸಮಾಜದ ಮೇಲೆ ಹತೋಟಿ ಸಾಧಿಸುವ ಯೋಜನೆ ಹೊಂದಿರುತ್ತವೆ. ಒಂದು ಒಳ್ಳೆಯ ಕಥೆಗಿಂತ, ಭಾವನೆ ಉದ್ರೇಕಿಸುವ ಚಲನಚಿತ್ರ ಹೆಚ್ಚು ಜನಪ್ರಿಯವಾಗುತ್ತದೆ.


ಹಾಗೆಯೇ ಇದನ್ನು ಸದುಪಯೋಯುಗಕ್ಕೆ ಬಳಸುವ ಕೆಲಸವೂ ಹಿಂದಿನ ಕಾಲದಿಂದಲೂ ಸಾಗುತ್ತ ಬಂದಿದೆ. ಋಗ್ವೇದದ ಮಂತ್ರಗಳನ್ನು ಉಚ್ಚರಿಸುವ ರೀತಿಗೆ ಪ್ರಾಮುಖ್ಯತೆ ಕೊಡುತ್ತದೆ ಸಾಮವೇದ. ಓಂಕಾರ ಹೊರಡಿಸುವ ಕಂಪನ, ಮನಸ್ಸಿನ ಭಾವನೆಗಳನ್ನು ಹತೋಟಿಗೆ ತರುವುದಲ್ಲದೆ, ಅನಿವರ್ಚನೀಯ ಆನಂದ ಕೊಡುವುದನ್ನು ಕಂಡುಕೊಂಡಿದ್ದರು ಹಿಂದಿನ ಯೋಗಿಗಳು. ಸಾಮಾನ್ಯ ಜನರು ಭಾವನೆ ತಣಿಸಲು ಹಾಡು-ನೃತ್ಯದ ಮನರಂಜನೆಯ ಮೊರೆ ಹೋದರು. ಭಾಷೆಯನ್ನು ಮೀರಿ ಭಾವನೆ ವ್ಯಕ್ತಪಡಿಸುವುದು ಕಲೆಗಳಿಂದ ಸಾಧ್ಯವಾಯಿತು. ಕಲೆಯ ಎಲ್ಲ ಪ್ರಕಾರಗಳು (ಗಾನ, ಸಂಗೀತ, ನಾಟ್ಯ, ಯಕ್ಷಗಾನ, ಚಿತ್ರಕಲೆ ಇತ್ಯಾದಿ) ಭಾವನೆಯ ಅಭಿವ್ಯಕ್ತಿಗೆ ಪ್ರಾಮುಖ್ಯತೆ ಕೊಡುತ್ತವೆ. ಭಾಷೆಯಿಂದ ಸಾಧ್ಯವಿಲ್ಲದ್ದನ್ನು ಕಲೆಯ ಮೂಲಕ ವ್ಯಕ್ತಗೊಳಿಸುತ್ತಾನೆ ಕಲಾವಿದ. ಹಾಗಾಗಿ ಹೆಚ್ಚಿನ ಕಲೆಗಳಿಗೆ ಭಾಷೆಯ ಇತಿ-ಮಿತಿಗಳಿಲ್ಲ.

ಮುಂದೆ ಯಾವುದಾದರೂ ಅಂದದ ವರ್ಣಚಿತ್ರವನ್ನು ನೀವು ನೋಡಿದಾಗ ಅದನ್ನು ವಿವರಿಸಲು ಭಾಷೆ ಒಂದು ಅಸಮರ್ಪಕ ಮಾಧ್ಯಮ ಎನ್ನಿಸಿದರೆ, ಅದು ನಿಜ ಮತ್ತು ಅದರ ಕಾರಣ ಏನೆಂದು ನೀವು ಈಗಾಗಲೇ ಬಲ್ಲಿರಿ.

A painting by Vincent Van Gogh


References:

1. Homo Deus by Yuval Noah Harrari

2. Gene: An Intimate History by Dr. Siddhartha Mukherjee

3. Brainwashing by Kathleen Taylor

4. Guns, Germs and Steel by Jared Diamond

Saturday, November 14, 2020

ಸುಮಧುರ ಗೀತೆಗಳ ರಚನಕಾರ: ದೊಡ್ಡರಂಗೇಗೌಡ

 'ಕೇಳಿಸದೇ ಕಲ್ಲು ಕಲ್ಲಿನಲಿ ಕನ್ನಡ ನುಡಿ ...'

'ನಮ್ಮೂರ ಮಂದಾರ ಹೂವೆ ...'

'ತೇರ ಏರಿ ಅಂಬರದಾಗೇ ...'

'ಶ್ರೀ ರಾಮ ಬಂದವ್ನೆ, ಸೀತೆಯ ಕಾಣಲಿಕ್ಕೆ ...'

'ಕೊಲುಮಂಡೆ ಜಂಗಮದೇವರು ...'

 

ಕೇಳಲು ಇಂಪಾದ, ಪದ ಜೋಡಣೆಯ ಮಾಧುರ್ಯ ಹೊಂದಿದ ಇವೆಲ್ಲ ಜನಪ್ರಿಯ ಚಿತ್ರ ಗೀತೆಗಳನ್ನು ನೀವು ಕೇಳಿಯೇ ಇರ್ತೀರಿ. ಇವೆಲ್ಲವುಗಳನ್ನು ರಚಿಸಿದ್ದು  ಕವಿ ದೊಡ್ಡ ರಂಗೇಗೌಡರು. ಇವರು ಹುಟ್ಟಿ ಬೆಳೆದದ್ದು ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ. ಕನ್ನಡ ಪ್ರಾಧ್ಯಾಪಕರಾಗಿ ನಂತರ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದು ಬೆಂಗಳೂರಿನ  ಕಾಲೇಜೊಂದರಲ್ಲಿ. ಆದರೆ ಇವರ ಜನಪ್ರಿಯರಾಗಿದ್ದು ಕವಿತೆಗಳ ಮೂಲಕ.  ಚಲನಚಿತ್ರಗಳಿಗೆ ಗೀತೆ, ಮತ್ತು ಸಂಭಾಷಣೆ ಅಲ್ಲದೆ ಹಲವಾರು ಭಾವಗೀತೆಗಳ ಸಂಕಲನಗಳನ್ನು ರಚಿಸಿದ್ದಾರೆ. ಮೂರು ಬಾರಿ ಅತ್ಯುತ್ತಮ ಗೀತ-ರಚನಾಕಾರ ಪ್ರಶಸ್ತಿ ಹಾಗೂ 'ಪದ್ಮ ಶ್ರೀ' ಪ್ರಶಸ್ತಿ ಇವರನ್ನು ಅರಸಿ ಬಂದಿವೆ. ಕವಿಯಾಗಿ ಅವರ ಅನುಭವಗಳು, ಅವರ ಮೇಲೆ ಪ್ರಭಾವ ಬೀರಿದ ವ್ಯಕ್ತಿಗಳು ಮತ್ತು ಕವಿತೆ ಬರೆದಂತ ಸಂದರ್ಭಗಳು, ಇವುಗಳ ಬಗ್ಗೆ ಅವರಿಂದಲೇ ಕೇಳಿ ತಿಳಿದುಕೊಂಡರೆ ಎಷ್ಟು  ಚೆನ್ನ ಅಲ್ಲವೇ? ಅದಕ್ಕಾಗಿ ಈ ವಿಡಿಯೋ ವನ್ನು ನೋಡಿ.


https://www.youtube.com/watch?v=Dai-YsAIKTo






 

ಪುಸ್ತಕ ಪರಿಚಯ: ಜಿ.ಎಸ್.ಶಿವರುದ್ರಪ್ಪ ಸಂಚಯ

"ಎಲ್ಲೋ ಹುಡುಕಿದೆ ಇಲ್ಲದ ದೇವರ

ಕಲ್ಲು ಮಣ್ಣುಗಳ ಗುಡಿಯೊಳಗೆ

ಇಲ್ಲೇ ಇರುವ ಪ್ರೀತಿ-ಸ್ನೇಹಗಳ

ಗುರುತಿಸದಾದೆನು ನಮ್ಮೊಳಗೆ"

 

"ಹಾಡು ಹಳೆಯದಾದರೇನು

ಭಾವ ನವನವೀನ"

 

ಭಾವಗೀತೆಗಳು ಹೃದಯಕ್ಕೆ ಎಷ್ಟು ಹತ್ತಿರ ಎನಿಸುತ್ತವೆ ಅಲ್ಲವೇ? ಅಷ್ಟೇ ಸುಲಲಿತವಾಗಿ ಓದಿಸಿಕೊಂಡು ಹಾಗೆಯೇ ವೈಚಾರಿಕತೆಯ ಚಾಟಿ ಏಟನ್ನು ಬೀಸುತ್ತವೆ ಶಿವರುದ್ರಪ್ಪನವರ ಕಾವ್ಯ ವಿಮರ್ಶೆಗಳು. "ವಚನಕಾರರ ವಿಚಾರಕ್ರಾಂತಿ" ಎನ್ನುವ ವಿಮರ್ಶೆಯಲ್ಲಿ ಅವರು ಹೀಗೆ ಬರೆಯುತ್ತಾರೆ.

 "ವಚನಕಾರರು ಅಥವಾ ಶಿವಶರಣರು ಮೂಲತ: ನಿಷ್ಠುರ ವಿಮರ್ಶಕರು. ಅವರು ವೇದ, ಶಾಸ್ತ್ರಗಳ ಮಾತಿಗಿಂತ, ತಮ್ಮ ಸುತ್ತಣ ಪರಿಸರದಲ್ಲಿ ಯಾವುದು ಸ್ವಂತ ಅನುಭವಕ್ಕೆ ಬರುತ್ತದೋ, ಸ್ವಾನುಭವವೇ ಎಲ್ಲಕಿಂತ ಮಿಗಿಲಾದುದು ಎಂದು ಕಂಡು ಕೊಂಡರು.

 ವೇದಕ್ಕೆ ಒರೆಯ ಕಟ್ಟುವೆ. ಶಾಸ್ತ್ರಕ್ಕೆ ನಿಗಳನಿಕ್ಕುವೆ - ಎಂದು ಬಸವಣ್ಣ ನವರು ಸವಾಲು ಹಾಕಿದರು.

 ವೇದಶಾಸ್ತ್ರ ಪುರಾಣಾಗಮಗಳೆಂಬ ಕೊಟ್ಟಣವ ಕುಟ್ಟುತ್ತ ನುಚ್ಚು ತೌಡು ಕಾಣಿರೋ - ಎಂದು ಅಕ್ಕಮಹಾದೇವಿ ಅವುಗಳ ನಿರರ್ಥಕತೆಯನ್ನು ಘೋಷಿಸಿದಳು.

 ಧರ್ಮವೆಂದರೆ ಬದುಕಿಗೆ ಇಳಿಯಲಾರದ ಆದರ್ಶಗಳ, ವಿಚಾರಗಳ, ನಂಬಿಕೆಗಳ ಒಂದು ಕಂತೆ ಎಂದು ವಚನಕಾರರು ಭಾವಿಸಲಿಲ್ಲ. ಧ್ಯಾನ, ಪೂಜೆ, ಪ್ರಾರ್ಥನೆಗಳು ಇರುವುದು ವ್ಯಕ್ತಿಯ ಅಂತರಂಗವನ್ನು ಪರಿಶುದ್ಧಗೊಳಿಸಲು. ಇವು ಬಹಿರಂಗದ ನಡುವಳಿಕೆಗಳಲ್ಲಿ ಪ್ರಕಟವಾಗದಿದ್ದರೆ ಅಂತರಂಗದ ಆಧ್ಯಾತ್ಮಿಕ ಸ್ಥಿತಿಗೆ ಏನೂ ಅರ್ಥವಿಲ್ಲ."

 ಹೀಗೆ ಇತರೆ ಕವಿಗಳಾದ ಪಂಪ, ಹರಿಹರ, ರಾಘವಾಂಕ, ಸರ್ವಜ್ಞ, ಕುವೆಂಪು, ಬೇಂದ್ರೆಯವರ ಕಾವ್ಯ ವಿಮರ್ಶೆಗಳು ಪುಸ್ತಕದಲ್ಲಿವೆ.

 ಜಾನಪದ, ನವೋದಯ, ಹೊಸಗನ್ನಡ ಕಾವ್ಯ, ಸಾಹಿತ್ಯ ಚಳವಳಿಗಳು ಮತ್ತು ಸಾಹಿತ್ಯ ಪರಂಪರೆ ಇವೆಲ್ಲ ವಿಷಯಗಳ ಮೇಲೆ ಲೇಖಕರು ರಚಿಸಿರುವ ಹಲವಾರು ಮೀಮಾಂಸೆಗಳು ಪುಸ್ತಕದಲ್ಲಿವೆ. ಅವು ಓದುಗರಿಗೆ ಜ್ಞಾನಾರ್ಜನೆ ಮತ್ತು ಹೊಸ ಬರಹಗಾರರಿಗೆ ಮಾರ್ಗದರ್ಶನ ನೀಡಬಲ್ಲವು.

 ಪ್ರವಾಸ ಸಾಹಿತ್ಯ ವಿಭಾಗದಲ್ಲಿ ಲೇಖಕರು ರಚಿಸಿದ ನಾಲ್ಕು ಕೃತಿಗಳು - "ಟಾಲ್ ಸ್ಟಾಯ್ ಬೆಳೆದ ಮಲೆನಾಡಿನಲ್ಲಿ", "ವಿವೇಕಾನಂದರ ಹೆಜ್ಜೆಯ ಹಿಂದೆ", "ಸರೋವರ ಮಂಡಲಗಳ ಮಧ್ಯೆ" ಮತ್ತು "ಕೇದಾರನಾಥಕ್ಕೆ" ಕೂಡ ಪುಸ್ತಕದ ಭಾಗವಾಗಿವೆ.

 ಲೇಖಕರು ರಚಿಸಿದ "ಶಿವಯೋಗಿ ಸಿದ್ಧರಾಮ" ಕಾದಂಬರಿಯ ಆಯ್ದ ಭಾಗ ಆಕರ್ಷಿತವಾಗಿದೆ ಮತ್ತು  ಲೇಖಕರಿಗಿದ್ದ ಅಧ್ಯಾತ್ಮದ ಒಲವನ್ನು ಸ್ಪಷ್ಟ ಪಡಿಸುತ್ತದೆ. ಲೇಖಕರ ಆತ್ಮಕಥೆಯಾದ "ಚತುರಂಗ" ಆಯ್ದ ಭಾಗ, ಲೇಖಕರ ಶಾಲಾ ದಿನಗಳು, ಅವರು ಬಾಲಕರಾಗಿದ್ದಾಗ ರಚಿಸಿದ ಕವಿತೆಗಳು, ಅವರ ಸಾಹಿತ್ಯಾಸಕ್ತಿ ರೂಪುಗೊಂಡ ಬಗೆ ಇವುಗಳ ಪರಿಚಯ ಮಾಡಿಸುತ್ತದೆ.

 ಸುಮಾರು ೪೫೦ ಪುಟಗಳ, ಅತ್ಯುತ್ತಮ ಗುಣಮಟ್ಟದ ಕಾಗದದಲ್ಲಿ ಮುದ್ರಿಸಲ್ಪಟ್ಟ ಪುಸ್ತಕ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದಿಂದ ಪ್ರಕಟಿಸಲ್ಪಿಟ್ಟಿದು, ರಿಯಾಯಿತಿ ದರದಲ್ಲಿ ಲಭ್ಯವಿದೆ.

  ಪುಸ್ತಕ ಒಂದೇ ಸಲಕ್ಕೆ ಓದಿ ಮುಗಿಸುವ ಕಾದಂಬರಿಯಲ್ಲ. ಬದಲಿಗೆ ನಿಧಾನವಾಗಿ ಮತ್ತು ನಿರಂತರವಾಗಿ ಓದಿದರೆ ಹೃದಯಕ್ಕೆ ತಂಪನ್ನು ತಂದುಕೊಡಬಲ್ಲ ಪುಸ್ತಕ. ಕವಿಗಳ ಮತ್ತು ವಚನಕಾರರ ಮನದಾಳಕ್ಕೆ ಇಳಿಯುತ್ತ, ಸಾಹಿತ್ಯ ಪ್ರೇಮವನ್ನು ಗಟ್ಟಿಗೊಳಿಸಲು ನೆರವಾಗುವ ಪುಸ್ತಕ.




ದೇವಾನಾಂಪ್ರಿಯ ಅಶೋಕನ ಕುರಿತು ನೆಹರು

(ನೆಹರುರವರು ೧೯೩೦ ರಿಂದ ೧೯೩೩ ರವರೆಗೆ ಜೈಲಿನಿಂದ, ಶಾಲೆಯಲ್ಲಿ ಓದುತ್ತಿದ್ದ ತಮ್ಮ ಮಗಳು ಇಂದಿರಾಗೆ ಪ್ರಪಂಚದ ಇತಿಹಾಸ ತಿಳಿಸುತ್ತ ನಿರಂತರವಾಗಿ ಬರೆದ ಪತ್ರಗಳನ್ನು ಒಟ್ಟುಗೂಡಿ "Glimpses of World History" ಎನ್ನುವ ಪುಸ್ತಕವಾಗಿದೆ. ಅದರಲ್ಲಿ ಒಂದು ಪತ್ರ ಅಶೋಕ ಮತ್ತು ಆತನ ಶಾಸನಗಳನ್ನು ಉಲ್ಲೇಖಿಸಿ ಬರೆದಿದ್ದಾಗಿದೆ. ಅದನ್ನು ಸಂಕ್ಷಿಪ್ತ ವಾಗಿ ಇಲ್ಲಿ ಅನುವಾದಿಸಿದ್ದೇನೆ.)

 ಪತ್ರ ೨೪: ಅಶೋಕ, ದೇವರಿಗೆ ಪ್ರಿಯನಾದವನು, ಮಾರ್ಚ್ ೩೦, ೧೯೩೨

 ಬಿಂದುಸಾರನ ನಂತರ ಕ್ರಿ. ಪೂ. ೨೬೮ ರಲ್ಲಿ ಅಧಿಕಾರಕ್ಕೆ ಬಂದವನು ಅಶೋಕ. ಸಾಮ್ರಾಜ್ಯವನ್ನು ವಿಸ್ತಾರಗೊಳಿಸುವ ಉದ್ದೇಶದಿಂದ ಕಳಿಂಗ ಯುದ್ಧವನ್ನು ಮಾಡಿದ್ದೆ ಕೊನೆ. ಯುದ್ಧ ತರುವ ಸಾವು ನೋವುಗಳಿಗೆ ಜಿಗುಪ್ಸೆಗೊಂಡು ತನಗಿನ್ನು ಆ ನೋವು ಸಾಕು ಎನ್ನುವ ನಿರ್ಧಾರಕ್ಕೆ ಬರುತ್ತಾನೆ. ಗೆಲುವಿನ ನಂತರವೂ ಯುದ್ಧ ತ್ಯಜಿಸಿದ ಏಕೈಕ ರಾಜ ಅಶೋಕ. ಆತನ ಮನದಾಳದಲ್ಲಿದ್ದ ವಿಷಯ ಅರಿಯಲು ನಾವು ಇತಿಹಾಸಕಾರರ ಮೇಲೆ ಅವಲಂಬಿತವಾಗಬೇಕಿಲ್ಲ. ಅಶೋಕನೇ ಕೆತ್ತಿಸಿದ ಶಾಸನಗಳು ಆತನ ಸಂದೇಶವನ್ನು ಸಾರಿ ಹೇಳುತ್ತವೆ.  ನಿಜವಾದ ವಿಜಯವೆಂದರೆ, ಅಶೋಕನ ಪ್ರಕಾರ, ನಿಮ್ಮನ್ನು ನೀವು ಗೆಲ್ಲುವುದು ಮತ್ತು ಧರ್ಮ ಮಾರ್ಗದ ಮೂಲಕ ಜನರ ಹೃದಯ ಗೆಲ್ಲುವುದು.

 ಬುದ್ಧ ಧರ್ಮದ ಆರಾಧಕನಾಗಿ ಹೋದ ಅಶೋಕ, ಧರ್ಮ ಪ್ರಚಾರದ ಕಾರ್ಯ ಕೈಗೊಳ್ಳುತ್ತಾನೆ. ಬಲವಂತಿಕೆ ಅಥವಾ ಶಕ್ತಿ ಪ್ರದರ್ಶನದಿಂದಲ್ಲ, ಬದಲಿಗೆ ಜನರ ಹೃದಯ ಸೂರೆಗೊಳ್ಳುವುದರ ಮೂಲಕ. ಧರ್ಮ ಪ್ರಚಾರಕರನ್ನು ಏಷ್ಯಾ, ಯೂರೋಪ್, ಆಫ್ರಿಕಾ ಖಂಡಗಳಿಗೆ ಕಳುಹಿಸಿಕೊಡುತ್ತಾನೆ. ಅವನ ತಮ್ಮ ತಂಗಿಯಯರೇ ದಕ್ಷಿಣ ಭಾರತ ಮತ್ತು ಶ್ರೀಲಂಕಾಗೆ ಅಶೋಕನ ಸಂದೇಶ ಹೊತ್ತು ಸಾಗುತ್ತಾರೆ. ಇದು ಭಾರತದಲ್ಲಿ ಬೌದ್ಧ ಧರ್ಮ ಕ್ಷಿಪ್ರ ವಾಗಿ ಹಬ್ಬಲು ಕಾರಣವಾಗುತ್ತದೆ. ಅವನ ಯೋಜನಗಳು ಬರಿ ಪ್ರಾರ್ಥನೆ, ಆಚರಣೆಗಳಿಗೆ ಸೀಮಿತಗೊಳ್ಳದೆ, ಸಮಾಜದ ಉನ್ನತಿಗೆ ಕಾರಣವಾಗುವಂತೆ ಸಾರ್ವಜನಿಕ ಅನೂಕೂಲಕ್ಕಾಗಿ ಉತ್ತಮ ಆಸ್ಪತ್ರೆಗಳು, ಉದ್ಯಾನಗಳು, ರಸ್ತೆಗಳ ನಿರ್ಮಾಣಕ್ಕೆ ಕಾರಣವಾಗುತ್ತವೆ. ಶಿಕ್ಷಣದ ಪೋಷಣೆಗೆಂದು ನಾಲ್ಕು ವಿಶ್ವ ವಿದ್ಯಾನಿಲಯಗಳು - ತಕ್ಷಶಿಲಾ, ಮಥುರಾ, ಉಜ್ಜಯಿನಿ ಮತ್ತು ನಳಂದ ಪಟ್ಟಣಗಳಲ್ಲಿ ನಿರ್ಮಿತವಾಗುತ್ತವೆ. ದೇಶದ ಉದ್ದಗಲಕ್ಕೂ ಬೌದ್ಧ ಧರ್ಮದ ವಿಹಾರಗಳು ನಿರ್ಮಿಸಲ್ಪಡುತ್ತವೆ.

 ಅಶೋಕನ ಕಾರ್ಯಕ್ಷೇತ್ರ ಮನುಜರಿಗೆ ಸೀಮಿತವಾಗದೆ, ಪ್ರಾಣಿಗಳಿಗೂ ದಯೆ ತೋರುವ, ಅವುಗಳನ್ನು ಬಲಿ ಕೊಡದಂತೆ ತಡೆಯುವ ಮತ್ತು ಅವುಗಳಿಗೆಂದೇ ಆಸ್ಪತ್ರೆಗಳನ್ನು ನಿರ್ಮಿಸುವುದರಲ್ಲೂ ಕಂಡು ಬರುತ್ತದೆ. ಅವನ ಈ ಕಾರ್ಯಗಳು ಮತ್ತು ಬೌದ್ಧ ಧರ್ಮದ ಹರಡುವಿಕೆ, ಭಾರತೀಯರಲ್ಲಿ ಹೆಚ್ಚಿನವರು ಸಸ್ಯಹಾರಿಗಳು ಆಗುವಂತೆ ಮಾಡುತ್ತದೆ.

 ಹೀಗೆ ಮೂವತ್ತೆಂಟು ವರುಷಗಳ ಕಾಲ ರಾಜ್ಯಭಾರ ಮಾಡಿದ ಅಶೋಕ, ತನ್ನ ಜೀವನ ಶಾಂತಿ, ಸೌಹಾರ್ದತೆ ಮತ್ತು ಸಮಾಜದ ಏಳಿಗೆಗಾಗಿ ಮೀಸಲಿಟ್ಟ.  ಕ್ರಿ. ಪೂ. ೨೨೬ ರಲ್ಲಿ ಕಾಲವಾಗುವ ಕೆಲ ಸಮಯದ ಮುನ್ನ ಬೌದ್ಧ ಧರ್ಮದ ಸನ್ಯಾಸತ್ವ ಸ್ವೀಕರಿಸಿದ್ದ.

 ಇಂದಿಗೆ ಮೌರ್ಯ ಸಾಮ್ರಾಜ್ಯದ ಗತ ವೈಭವ ಸಾರುವ ಅವಶೇಷಗಳು ಅಲ್ಲಿ-ಇಲ್ಲಿ ಸ್ವಲ್ಪ ಉಳಿದುಕೊಂಡಿವೆ. ಆದರೆ ಅಶೋಕನ ರಾಜಧಾನಿಯಾಗಿದ್ದ ಪಾಟಲೀಪುತ್ರದಲ್ಲಿ ಯಾವ ಅವಶೇಷಗಳು  ಉಳಿದಿಲ್ಲ. ಅಶೋಕನು ಕಾಲವಾಗಿ ೬೦೦ ವರುಷಗಳ ನಂತರ ಅಲ್ಲಿಗೆ ಭೇಟಿ ಕೊಟ್ಟಿದ್ದ ಫಾ-ಹಿಯೆನ್ ಎನ್ನುವ ಚೀನಾದ ಪ್ರವಾಸಿಯ ಪ್ರಕಾರ ಅದು ಅಭಿವೃದ್ಧಿ ಹೊಂದಿದ್ದ ಒಂದು ಶ್ರೀಮಂತ ನಗರವಾಗಿತ್ತು. ಅಷ್ಟೊತ್ತಿಗಾಗಲೇ ಅಶೋಕನ ಕಲ್ಲಿನ ಅರಮನೆ ಶಿಥಿಲಗೊಂಡಿತ್ತು, ಆದರೂ ಅದು ಮನುಜ ಮಾತ್ರರಿಂದ ಕಟ್ಟಲು ಸಾಧ್ಯವೇ ಎನ್ನುವಂತಿತ್ತು.

 ಅಶೋಕನ ಬೃಹದಾಕಾರವಾದ ಕಲ್ಲಿನ ಅರಮನೆ ಇಂದಿಗೆ ಸಂಪೂರ್ಣ ಅಳಿದು ಹೋಗಿದ್ದರೂ, ಅಶೋಕನ ಜೀವನ, ಅವನ ಸಂದೇಶಗಳು ಮತ್ತು ಎಂದಿಗೂ ಅಳಿಸಲಾಗದಾರದ ಅವನ ಸಾಧನೆಗಳನ್ನು ಭಾರತದಲ್ಲಿ ಅಲ್ಲದೆ ಏಷ್ಯಾ ಖಂಡದ ಹಲವು ದೇಶಗಳಲ್ಲಿ ಬದಲಾದ ಜನ ಜೀವನ ತೋರಿಸುತ್ತವೆ. ಅವನ ಶಾಸನಗಳು ಇಂದಿಗೂ ಅಶೋಕನನ್ನು ನಮ್ಮ ಹತ್ತಿರಕ್ಕೆ ತರುತ್ತವೆ.