"ಎಲ್ಲೋ
ಹುಡುಕಿದೆ ಇಲ್ಲದ ದೇವರ
ಕಲ್ಲು
ಮಣ್ಣುಗಳ ಗುಡಿಯೊಳಗೆ
ಇಲ್ಲೇ
ಇರುವ ಪ್ರೀತಿ-ಸ್ನೇಹಗಳ
ಗುರುತಿಸದಾದೆನು
ನಮ್ಮೊಳಗೆ"
"ಹಾಡು
ಹಳೆಯದಾದರೇನು
ಭಾವ
ನವನವೀನ"
ಈ ಭಾವಗೀತೆಗಳು ಹೃದಯಕ್ಕೆ ಎಷ್ಟು ಹತ್ತಿರ ಎನಿಸುತ್ತವೆ ಅಲ್ಲವೇ? ಅಷ್ಟೇ ಸುಲಲಿತವಾಗಿ ಓದಿಸಿಕೊಂಡು ಹಾಗೆಯೇ ವೈಚಾರಿಕತೆಯ ಚಾಟಿ ಏಟನ್ನು ಬೀಸುತ್ತವೆ
ಶಿವರುದ್ರಪ್ಪನವರ ಕಾವ್ಯ ವಿಮರ್ಶೆಗಳು. "ವಚನಕಾರರ ವಿಚಾರಕ್ರಾಂತಿ" ಎನ್ನುವ ವಿಮರ್ಶೆಯಲ್ಲಿ ಅವರು ಹೀಗೆ ಬರೆಯುತ್ತಾರೆ.
"ವಚನಕಾರರು
ಅಥವಾ ಶಿವಶರಣರು ಮೂಲತ: ನಿಷ್ಠುರ ವಿಮರ್ಶಕರು. ಅವರು ವೇದ, ಶಾಸ್ತ್ರಗಳ
ಮಾತಿಗಿಂತ, ತಮ್ಮ ಸುತ್ತಣ ಪರಿಸರದಲ್ಲಿ
ಯಾವುದು ಸ್ವಂತ ಅನುಭವಕ್ಕೆ ಬರುತ್ತದೋ, ಆ ಸ್ವಾನುಭವವೇ ಎಲ್ಲಕಿಂತ
ಮಿಗಿಲಾದುದು ಎಂದು ಕಂಡು ಕೊಂಡರು.
ವೇದಕ್ಕೆ
ಒರೆಯ ಕಟ್ಟುವೆ. ಶಾಸ್ತ್ರಕ್ಕೆ ನಿಗಳನಿಕ್ಕುವೆ - ಎಂದು ಬಸವಣ್ಣ ನವರು
ಸವಾಲು ಹಾಕಿದರು.
ವೇದಶಾಸ್ತ್ರ
ಪುರಾಣಾಗಮಗಳೆಂಬ ಕೊಟ್ಟಣವ ಕುಟ್ಟುತ್ತ ನುಚ್ಚು ತೌಡು ಕಾಣಿರೋ - ಎಂದು
ಅಕ್ಕಮಹಾದೇವಿ ಅವುಗಳ ನಿರರ್ಥಕತೆಯನ್ನು ಘೋಷಿಸಿದಳು.
ಧರ್ಮವೆಂದರೆ
ಬದುಕಿಗೆ ಇಳಿಯಲಾರದ ಆದರ್ಶಗಳ, ವಿಚಾರಗಳ, ನಂಬಿಕೆಗಳ ಒಂದು ಕಂತೆ ಎಂದು
ವಚನಕಾರರು ಭಾವಿಸಲಿಲ್ಲ. ಧ್ಯಾನ, ಪೂಜೆ, ಪ್ರಾರ್ಥನೆಗಳು ಇರುವುದು ವ್ಯಕ್ತಿಯ ಅಂತರಂಗವನ್ನು ಪರಿಶುದ್ಧಗೊಳಿಸಲು. ಇವು ಬಹಿರಂಗದ ನಡುವಳಿಕೆಗಳಲ್ಲಿ
ಪ್ರಕಟವಾಗದಿದ್ದರೆ ಆ ಅಂತರಂಗದ ಆಧ್ಯಾತ್ಮಿಕ
ಸ್ಥಿತಿಗೆ ಏನೂ ಅರ್ಥವಿಲ್ಲ."
ಹೀಗೆ
ಇತರೆ ಕವಿಗಳಾದ ಪಂಪ, ಹರಿಹರ, ರಾಘವಾಂಕ,
ಸರ್ವಜ್ಞ, ಕುವೆಂಪು, ಬೇಂದ್ರೆಯವರ ಕಾವ್ಯ ವಿಮರ್ಶೆಗಳು ಈ ಪುಸ್ತಕದಲ್ಲಿವೆ.
ಜಾನಪದ,
ನವೋದಯ, ಹೊಸಗನ್ನಡ ಕಾವ್ಯ, ಸಾಹಿತ್ಯ ಚಳವಳಿಗಳು ಮತ್ತು ಸಾಹಿತ್ಯ ಪರಂಪರೆ ಇವೆಲ್ಲ ವಿಷಯಗಳ ಮೇಲೆ ಲೇಖಕರು ರಚಿಸಿರುವ
ಹಲವಾರು ಮೀಮಾಂಸೆಗಳು ಈ ಪುಸ್ತಕದಲ್ಲಿವೆ. ಅವು
ಓದುಗರಿಗೆ ಜ್ಞಾನಾರ್ಜನೆ ಮತ್ತು ಹೊಸ ಬರಹಗಾರರಿಗೆ ಮಾರ್ಗದರ್ಶನ
ನೀಡಬಲ್ಲವು.
ಪ್ರವಾಸ
ಸಾಹಿತ್ಯ ವಿಭಾಗದಲ್ಲಿ ಲೇಖಕರು ರಚಿಸಿದ ನಾಲ್ಕು ಕೃತಿಗಳು - "ಟಾಲ್ ಸ್ಟಾಯ್ ಬೆಳೆದ
ಮಲೆನಾಡಿನಲ್ಲಿ",
"ವಿವೇಕಾನಂದರ ಹೆಜ್ಜೆಯ ಹಿಂದೆ", "ಸರೋವರ ಮಂಡಲಗಳ ಮಧ್ಯೆ" ಮತ್ತು "ಕೇದಾರನಾಥಕ್ಕೆ" ಕೂಡ ಈ ಪುಸ್ತಕದ
ಭಾಗವಾಗಿವೆ.
ಲೇಖಕರು
ರಚಿಸಿದ "ಶಿವಯೋಗಿ ಸಿದ್ಧರಾಮ" ಕಾದಂಬರಿಯ ಆಯ್ದ ಭಾಗ ಆಕರ್ಷಿತವಾಗಿದೆ
ಮತ್ತು ಲೇಖಕರಿಗಿದ್ದ
ಅಧ್ಯಾತ್ಮದ ಒಲವನ್ನು ಸ್ಪಷ್ಟ ಪಡಿಸುತ್ತದೆ. ಲೇಖಕರ ಆತ್ಮಕಥೆಯಾದ "ಚತುರಂಗ" ದ ಆಯ್ದ ಭಾಗ,
ಲೇಖಕರ ಶಾಲಾ ದಿನಗಳು, ಅವರು
ಬಾಲಕರಾಗಿದ್ದಾಗ ರಚಿಸಿದ ಕವಿತೆಗಳು, ಅವರ ಸಾಹಿತ್ಯಾಸಕ್ತಿ ರೂಪುಗೊಂಡ
ಬಗೆ ಇವುಗಳ ಪರಿಚಯ ಮಾಡಿಸುತ್ತದೆ.
ಸುಮಾರು
೪೫೦ ಪುಟಗಳ, ಅತ್ಯುತ್ತಮ ಗುಣಮಟ್ಟದ ಕಾಗದದಲ್ಲಿ ಮುದ್ರಿಸಲ್ಪಟ್ಟ ಈ ಪುಸ್ತಕ ಕುವೆಂಪು
ಭಾಷಾ ಭಾರತಿ ಪ್ರಾಧಿಕಾರದಿಂದ ಪ್ರಕಟಿಸಲ್ಪಿಟ್ಟಿದು, ರಿಯಾಯಿತಿ ದರದಲ್ಲಿ ಲಭ್ಯವಿದೆ.
ಈ ಪುಸ್ತಕ ಒಂದೇ ಸಲಕ್ಕೆ ಓದಿ
ಮುಗಿಸುವ ಕಾದಂಬರಿಯಲ್ಲ. ಬದಲಿಗೆ ನಿಧಾನವಾಗಿ ಮತ್ತು ನಿರಂತರವಾಗಿ ಓದಿದರೆ ಹೃದಯಕ್ಕೆ ತಂಪನ್ನು ತಂದುಕೊಡಬಲ್ಲ ಪುಸ್ತಕ. ಕವಿಗಳ ಮತ್ತು ವಚನಕಾರರ ಮನದಾಳಕ್ಕೆ ಇಳಿಯುತ್ತ, ಸಾಹಿತ್ಯ ಪ್ರೇಮವನ್ನು ಗಟ್ಟಿಗೊಳಿಸಲು ನೆರವಾಗುವ ಪುಸ್ತಕ.
No comments:
Post a Comment