Monday, November 16, 2020

ಭಾಷೆಗೂ ನಿಲುಕದ ಭಾವನೆ ಮತ್ತು ಅದರ ಹಿಂದಿನ ವಿಜ್ಞಾನ

ಒಮ್ಮೊಮ್ಮೆ ಅನಿಸಿದ್ದನ್ನು ಭಾಷೆಯಲ್ಲಿ ವ್ಯಕ್ತ ಪಡಿಸದೆ ಒದ್ದಾಡುತ್ತೇವೆಯಲ್ಲವೇ? ಸಂಗೀತ ಮೂಡಿಸುವ ಉಲ್ಲಾಸವನ್ನು ಭಾಷೆಯಲ್ಲಿ ಹೇಳುವುದೆಂತು? ಪ್ರಕೃತಿ ಸೌಂದರ್ಯದ ವರ್ಣನೆಗೆ ಕವಿಗಳೇ ಶಬ್ದ ತಡಕಾಡುತ್ತಾರೆ ಅಲ್ಲವೇ? ಕಣ್ಣೋಟ ಹೊರಡಿಸುವ ಸಂದೇಶ ಮನಸ್ಸಿಗೆ ಅರ್ಥವಾದರೂ ಅದನ್ನು ಸ್ಪಷ್ಟವಾಗಿ, ಪರಿಣಾಮಕಾರಿಯಾಗಿ ಮಾತುಗಳಲ್ಲಿ ಹೇಳಲು ಸಾಧ್ಯವೇ? ಕವಿತೆಗೆ ಜೀವ ತುಂಬುವುದು ಹಾಡುಗಾರನ ಭಾವವಲ್ಲವೇ? ಒಬ್ಬ ಅದ್ಭುತ ನಟ, ಯಾವುದೇ ಸಂಭಾಷಣೆ ಇಲ್ಲದೆ, ಮುಖದಲ್ಲಿ ಎಲ್ಲ ಭಾವನೆಗಳನ್ನು ತೋರಿಸುತ್ತ, ಕೆಲ ಸನ್ನಿವೇಶಗಳಲ್ಲಿಯಾದರೂ ಮನೋಜ್ಞ ಅಭಿನಯ ನೀಡಲು ಸಾಧ್ಯ, ಅಲ್ಲವೇ? ಅಂದರೆ ಭಾವನೆಗಳು ಮನಸ್ಸಿನ ಆಳ (ಭಾಷೆ ತಲುಪಿದ್ದಕಿಂತ ಹೆಚ್ಚಿನ ಆಳ) ತಲುಪಲು ಸಾಧ್ಯ ಎಂದಾಯಿತು. ಮನುಷ್ಯ ವಿಕಾಸ ವಿಜ್ಞಾನ (Evolutionary Science) ಇದು ಹೀಗೇಕೆ ಎಂದು ತಕ್ಕ ಮಟ್ಟಿಗೆ ವಿವರಿಸುತ್ತದೆ.


ನಮಗೆ ಗೊತ್ತಿರುವ ಭಾಷೆಗಳಲ್ಲಿ, ಹಳೆಯ ಭಾಷೆ ಎಂದರೆ ಸಂಸ್ಕೃತ. ಅದಕ್ಕೆ ಸುಮಾರು ಐದು ಸಾವಿರ ವರ್ಷ ಇತಿಹಾಸವಿದೆ. ಅದಕ್ಕೂ ಮುಂಚೆ ಬ್ರಾಹ್ಮೀ ಭಾಷೆ, ಅದಕ್ಕೆ ಸಂಪೂರ್ಣ ಲಿಖಿತ ಲಿಪಿ ಇರದಿದ್ದರೂ ಆಡು ಭಾಷೆಯ ರೂಪದಲ್ಲಿತ್ತು. ಆದರೆ ಆಡು ಭಾಷೆಯ ಬೆಳವಣಿಗೆಯ ಮುಂಚೆಯೇ ಮನುಷ್ಯ ಸಂಘ ಜೀವಿಯಾಗಿದ್ದನಲ್ಲವೇ? ಅಂದರೆ ಸುಮಾರು ೬೦,೦೦೦ ವರ್ಷಗಳ ಹಿಂದೆಯೇ ಶಿಲಾಯುಗದ ಮನುಷ್ಯ ಗುಂಪು ಗಟ್ಟಿಕೊಂಡು ಗುಡ್ಡ ಗಾಡುಗಳಲ್ಲಿ ಬೇಟೆಗೆ ಹೊರಡುತ್ತಿದ್ದಾಗ, ಒಬ್ಬರಿಗೊಬ್ಬರು ಸಂದೇಶ ಕಳಿಸುವುದಕ್ಕೆ, ಸಹಕರಿಸುವುದಕ್ಕೆ ಕಲಿತುಕೊಂಡದ್ದು ದೇಹದ ಹಾವ-ಭಾವಗಳ ಮೂಲಕ (Body Language)  ಮತ್ತು ಧ್ವನಿಯ ಏರಿಳಿತದ ಮೂಲಕ. ಕ್ರಮೇಣ ಇದನ್ನು ಸಮರ್ಪಕವಾಗಿ ಬಳಸಲು ಅವರು ಕಲಿತುಕೊಂಡರು. ಭಯಗೊಂಡಾಗ ಒಂದು ತರಹದ, ಸಂತೋಷದ ಸಮಯದಲ್ಲಿ ಇನ್ನೊಂದು ತರಹದ ಸಂದೇಶಗಳನ್ನು ಧ್ವನಿಯ ಏರಿಳಿತದ ಮೂಲಕ ಅವರು ಹಂಚಿಕೊಳ್ಳುತ್ತ, ಒಂದೇ ತರಹದ ಭಾವನೆಗಳು ತಮ್ಮ ಗುಂಪಿನಲ್ಲಿ ಮೂಡಿಸುವ ಪ್ರಕ್ರಿಯೆ ಅವರಲ್ಲಿ ಆರಂಭವಾಯಿತು. ಮತ್ತು ಅದು ಮನುಜನ ವಿಕಾಸಕ್ಕೂ ಕಾರಣವಾಯಿತು. ಮನುಷ್ಯನ ಮೆದುಳಿನ ರಚನೆ ವಿಕಾಸ ಹೊಂದುತ್ತ, ದೇಹದ ಭಂಗಿ, ಹಾವ-ಭಾವ ಮತ್ತು ಧ್ವನಿಯ ವ್ಯತ್ಯಾಸಗಳನ್ನು ಸ್ಪಷ್ಟವಾಗಿ ಗುರುತಿಸಲಾರಂಭಿಸಿತು. ಗುಂಪಿನಲ್ಲಿ ಜೊತೆಗಿರುತ್ತಿದ್ದ ಮನುಷ್ಯರ ಸಂಖ್ಯೆ ಹೆಚ್ಚಾದಂತೆಲ್ಲ, ಮನುಷ್ಯ ಉಪಯೋಗ ಮಾಡುತ್ತಿದ್ದ ಸಂಜ್ಞೆಗಳ ಪ್ರಮಾಣವೂ ಹೆಚ್ಚಾಯಿತು. ಇದಕ್ಕೆ ಸಂಬಂಧಿಸಿದ ಮೆದುಳಿನ ನ್ಯೂರಾನ್ (Neuron) ಗಳ ಸಂಖ್ಯೆಯು ಹೆಚ್ಚುತ್ತಾ ಹೋಯಿತು. ಮುಂದೆ ಮನುಷ್ಯ ಕೃಷಿಯನ್ನು ಕಲಿತುಕೊಂಡ. ಅಲೆಯುತ್ತ ಬದುಕುವುದು ಬಿಟ್ಟು ತನ್ನ ಹೊಲಗಳ ಹತ್ತಿರ ವಾಸ ಮಾಡತೊಡಗಿದ. ಆಗ ಹಳ್ಳಿಗಳು ಹುಟ್ಟಿಕೊಂಡವು. ಅವನ ಸಮಾಜ ದೊಡ್ಡದಾಗುತ್ತ ಹೋಯಿತು. ಆಗ ಬರೀ ಸಂಜ್ಞೆಗಳು ಸಾಕಾಗದೆ, ಭಾಷೆಯ ಅವಶ್ಯಕತೆ ಕಾಣತೊಡಗಿತು ಮತ್ತು ಕಾಲಾಂತರದಲ್ಲಿ ಅವನು ಹೊರಡಿಸುತ್ತಿದ್ದ ಧ್ವನಿಗಳು ಒಂದು ಭಾಷೆಯ ಶಬ್ದಗಳಾಗುತ್ತಾ ಬದಲಾದವು. ಆದರೆ ಎಲ್ಲ ಧ್ವನಿ ಮತ್ತು ಸಂಜ್ಞೆಗಳು ಪದಕೋಶಗಳಾಗಿ ಬದಲಾಗಲಿಲ್ಲ. ಕೆಲವುಗಳ ಅಭಿವ್ಯಕ್ತಿ ಮತ್ತು ಪುನರ್ಬಳಕೆ, ಗಾನ, ನಾಟ್ಯಗಳಿಂದ ಸಾಧ್ಯವಾಯಿತು. ಮನುಷ್ಯ ಕೃಷಿಯನ್ನು ಪಳಗಿಸಿಕೊಂಡು, ಇತರೆ ವೃತ್ತಿಗಳೆಡೆಗೆ ಹೊರಳಿದಾಗ, ಅವನ ಭಾಷೆಯಲ್ಲಿನ ಶಬ್ದ ಸಂಪತ್ತು ದೊಡ್ಡದಾಗುತ್ತ ಹೋಯಿತು. ಅವನು ಪದಾರ್ಥ ವಿನಿಮಯ - ವ್ಯಾಪಾರ ಕಲಿಯುವಷ್ಟರಲ್ಲಿ ಭಾಷೆಗಳು ಸಂಪೂರ್ಣ ಅಭಿವೃದ್ಧಿ ಹೊಂದಿದ್ದವು. ಮುಂದೆ ಆಡು-ಭಾಷೆ ಸಾಕಾಗದೆ ಅವನು ಬರೆಯುವುದನ್ನು ಸಹ ಕಲಿತುಕೊಂಡ.  ಹೀಗೆ ನಾಗರೀಕ ಜೀವನ ಆರಂಭಗೊಂಡಿತು.


ಆದರೆ ಇಷ್ಟೆಲ್ಲಾ ಆಗುವಷ್ಟರಲ್ಲಿ ಸುಮಾರು ೫೦,೦೦೦ ವರ್ಷಗಳಷ್ಟು ಕಾಲ ಸರಿದು ಹೋಗಿತ್ತು. ನಮ್ಮ ಮೆದುಳು ದೈಹಿಕ ಸಂಜ್ಞೆ ಮತ್ತು ಧ್ವನಿಗಳನ್ನು, ಅಷ್ಟು ದೀರ್ಘವಾದ ಕಾಲದಿಂದ ಕಲಿತುಕೊಳ್ಳುತ್ತ ಬಂದಿದೆ. ಅದಕ್ಕೆ ಹೋಲಿಸಿದರೆ ಭಾಷೆಯ ಬೆಳವಣಿಗೆ ಇತ್ತೀಚಿನದು. ಅದಕ್ಕೆ ಏನೋ, ಒಬ್ಬ ಸಾಧಾರಣ ಮನುಷ್ಯ ಒಂದು ಸಿನಿಮಾ ಅಥವಾ ದೂರದಶನವನ್ನು ನೋಡಿ ನಿರಾಯಾಸವಾಗಿ ಅರ್ಥ ಮಾಡಿಕೊಳ್ಳಬಲ್ಲ ಆದರೆ ಒಂದು ಪುಸ್ತಕ ಓದುವುದು ಅವನಿಗೆ ಪ್ರಯಾಸದ ಕೆಲಸ. ಶ್ರಮ ಅಷ್ಟೇ ಅಲ್ಲ, ಅರ್ಥ ಮಾಡಿಕೊಳ್ಳುವ ತಾಕತ್ತಿನಲ್ಲೂ ಬಹು ವ್ಯತ್ಯಾಸವಿದೆ. ಒಂದೆರಡು ಪುಟದ ಬರವಣಿಗೆಗಿಂತ, ಒಂದು ಚಿಕ್ಕ ಚಿತ್ರ ಹೆಚ್ಚು ಪರಿಣಾಮಕಾರಿಯಾಗಿ ಸಂದೇಶ ಮುಟ್ಟಿಸುತ್ತದೆ. ಮನುಷ್ಯನ ಇಂದ್ರಿಯಗಳು ಓದುವದಕ್ಕಿಂತ ಅಥವಾ ಭಾವನೆ ಇಲ್ಲದ ಮಾತಿಗಿಂತ, ಭಾವನಾತ್ಮಕ ದೃಶ್ಯ, ಏರಿಳಿತವಿರುವಂತ ಧ್ವನಿಗೆ ಹೆಚ್ಚು ಸ್ಪಂದಿಸುತ್ತವೆ. ಇದಕ್ಕೆ ಕಾರಣ ಮನುಜ ವಿಕಾಸ ಹೊಂದಿದ ರೀತಿ ಮತ್ತು ಅದಕ್ಕೆ ಮನುಜನ ಅಂಗಾಂಗಗಳು ಮತ್ತು ಮೆದುಳು ಆ ವಿಕಾಸಕ್ಕೆ ಹೊಂದಿಕೊಂಡು ವಿನ್ಯಾಸಗೊಂಡ ಬಗೆ. ಹಾಗಾಗಿ ಕವಿತೆಯನ್ನು ಬರೀ ಓದುವುದಕ್ಕಿಂತ, ಅದನ್ನು ಸುಶ್ರಾವ್ಯ ಸಂಗೀತದೊಂದಿಗೆ ಕೇಳಿದಾಗ ಆಗುವ ಅನುಭವವೇ ಬೇರೆ. ಭಾವನೆಗಳಿಗೆ ೫೦,೦೦೦ ವರ್ಷಗಳ ಇತಿಹಾಸವಿದ್ದರೆ ಭಾಷೆಗೆ ೫,೦೦೦ ವರ್ಷ ಇತಿಹಾಸವಿದೆ. ಭಾಷೆಯನ್ನು ಮನುಷ್ಯ ಪ್ರಯತ್ನ ಪೂರ್ವಕ ಕಲಿತುಕೊಳ್ಳಬೇಕು. ಭಾವನೆಗಳು ಹಾಗಲ್ಲ, ಅವು ಹುಟ್ಟಿನಿಂದ ಬರುತ್ತವೆ. ಪ್ರಕೃತಿಯು ಮನುಷ್ಯ ದೀರ್ಘ ಕಾಲದಲ್ಲಿ ಕಲಿತುಕೊಂಡದ್ದನ್ನು, ಅವನು ಬದುಕುಳಿಯಲು ಅವಶ್ಯ ಎನ್ನಿಸುವ ಮಾಹಿತಿಯನ್ನು, ಜೀನ್ (Gene) ಗಳ ಮುಖಾಂತರ ವಂಶವಾಹಿಯನ್ನಾಗಿ ಮಾಡುತ್ತದೆ.


ಇತರೆ ಬೇಟೆ ಪ್ರಾಣಿಗಳ ಹಾಗೆ, ಮನುಷ್ಯನಿಗೆ ವೇಗವಾಗಿ ಓಡಲು ಅಥವಾ ಕಾದಾಡಲು ಸಾಧ್ಯವಿರಲಿಲ್ಲ. ಆದರೆ ಆಯುಧಗಳ ಸಹಾಯದಿಂದ ಮತ್ತು ಗುಂಪಿನ ಬಲದಿಂದ ಬದುಕುಳಿಯುವುದನ್ನು ಕಲಿತ. ಆಯುಧ ಚೂಪು ಮಾಡುವ ಮತ್ತು ಬಲಿಯನ್ನು ಹೊತ್ತು ತರುವ ಗಂಡಸಿನ ಕೈ-ಕಾಲು ಸ್ನಾಯುಗಳು, ಭುಜ-ಬೆನ್ನುಗಳು ಬಲವಾದವು. ಮನೆ-ಮಕ್ಕಳ ನಿರ್ವಹಣೆ ಹೊತ್ತ ಹೆಂಗಸಿಗೆ ಮಾತು-ಕತೆಯ ಉಪಯೋಗ ಹೆಚ್ಚಿನದಿತ್ತು. ಅದೇ ಅವಳ ಬಲವಾಗಿ ಬದಲಾಯ್ತು. ಇವತ್ತಿಗೂ ನೋಡಿ, ಎಂಥ ಸೂಕ್ಷ್ಮ ಭಾವನೆಯಿರಲಿ, ಅದನ್ನು ತಾಯಿ ಗುರುತಿಸದಷ್ಟು ಸುಲಭವಾಗಿ ತಂದೆ ಗುರುತಿಸುವುದಿಲ್ಲ. ತಾಯಿ ಮಗುವಿಗೆ ಮಾತು ಕಲಿಸಿದರೆ, ಅಜ್ಜಿ ಕಥೆ ಹೇಳಿ ಮನು ಕುಲದ ಸಮಾಜ ಜೀವನಕ್ಕೆ ತಳಪಾಯ ಹಾಕಿದಳು. ಭಾವನೆ ಅರಿತು ಮಾತನಾಡುವ ವ್ಯಕ್ತಿಗಳು ಸಮಾಜದ ನಾಯಕರಾಗುತ್ತಾ ಬಂದರು. ಇವೆಲ್ಲ ಬೆಳವಣಿಗೆಗಳು ಮನುಷ್ಯನ ದೇಹವನ್ನು ಇತರೆ ಪ್ರಾಣಿಗಳಿಗಿಂತ ಭಿನ್ನವಾಗಿ ಮಾರ್ಪಾಡಾಗುವಂತೆ ಮಾಡಿತು. ಮನುಷ್ಯನ ಮೆದುಳಿನ ಗಾತ್ರ ಹೆಚ್ಚುತ್ತಾ ಹೋಗಿ ಅವನ ನರಜಾಲ (Nervous System) ಸಂಕೀರ್ಣಗೊಳ್ಳುತ್ತ ಹೋಯಿತು. ಪ್ರಾಣಿಗಳಿಗಿಂತ ಹೆಚ್ಚು ಭಾವನೆಗಳನ್ನು, ವಿಚಾರಗಳನ್ನು ಅರ್ಥ ಮಾಡಿಕೊಳ್ಳಬಲ್ಲ ಮತ್ತು ವ್ಯಕ್ತಪಡಿಸುವ ಶಕ್ತಿ ಅವನದಾಯಿತು. ಅದರ ಒಂದು ಮಾಧ್ಯಮ ಎನ್ನುವಂತೆ ಭಾಷೆ ಬೆಳೆಯಿತು.


ಭಾಷೆ ಮತ್ತು ಭಾವನೆ ಇವೆರಡರಲ್ಲಿ ಹೆಚ್ಚು ಶಕ್ತಿಯುತವಾದದ್ದು ಭಾವನೆಯೇ ಎನ್ನಲು ಅಡ್ಡಿಯಿಲ್ಲ. ಭಾಷೆ ಕೇವಲ ಒಂದು ಮಾಧ್ಯಮವಾದರೆ, ಭಾವನೆ ನಮ್ಮನ್ನಾಳುವ ಕೇಂದ್ರೀಯ ಶಕ್ತಿ. ಭಾಷೆ ಅರಿಯುವ ತಂತ್ರಜ್ಞಾನವನ್ನು ಮನುಷ್ಯ ಈಗಾಗಲೇ ಅಭಿವೃದ್ಧಿಗೊಳಿಸಿದ್ದಾನೆ. (ಉದಾಹರಣೆಗೆ - ಅಲೆಕ್ಸಾ ಡಿವೈಸ್. ಅಥವಾ ಆಪಲ್ ಫೋನ್ ನಲ್ಲಿರುವ 'ಸಿರಿ'. ಅದು ನನ್ನ ಜೊತೆಗೆ ಮಾತನಾಡಿದಷ್ಟೇ ಸುಲಭವಾಗಿ, ನನ್ನ ನಾಲ್ಕು ವರ್ಷದ ಮಗನ ಜೊತೆಗೂ ಮಾತನಾಡುತ್ತದೆ). ಆದರೆ ಭಾಷೆಯ ಹಿಂದಿರುವ ಭಾವನೆ? ಇದನ್ನು ಅರಿಯಲು ಮನಶಾಸ್ತ್ರದ ಸಹಾಯ ಬೇಕು. ಮತ್ತು ಇದರ ಬಳಕೆ ಸದುಪಯೋಗಕ್ಕಿಂತ, ದುರುಪಯೋಗಗಳಿಗೆ ಹೆಚ್ಚು. ಉದಾಹರಣೆಗೆ, ದ್ವೇಷ ಭಾವನೆ ಬಿತ್ತುವ ಭಯೋತ್ಪಾದನೆ ಕೆಲಸ ಮಾಡುವುದು ಮನಸ್ಸನ್ನು ಆಳುವ ಭಾವನೆಗಳ ಮೇಲೆ. ಹಾಗೆಯೇ ಜಾಹಿರಾತು ಉದ್ಯಮ ನಿಂತಿರುವುದು ಭಾವನೆಗಳ ತಳಹದಿಯ ಮೇಲೆ. ಇಲ್ಲದಿದ್ದರೆ, ಹುಟ್ಟಿದಾಗಿಂದ ಚಹಾ ಕುಡಿಯುತ್ತಿರುವ ನಿಮಗೆ ಯಾವ ಬ್ರಾಂಡ್ ಚಹಾ ಕುಡಿಯೇಬೇಕೆಂದು ಒಬ್ಬ ಸಿನಿಮಾ ನಟ ಹೇಳಲು ಸಾಧ್ಯವಿತ್ತೇ? ಹಾಗೆಯೇ ನಿಮ್ಮ ಕಾರಿಗೆ ಯಾವ ಟೈಯರ್ ಸೂಕ್ತ ಎಂದು ಡ್ರೈವರ್ ಗೆ ಹೆಚ್ಚು ಗೊತ್ತೋ  ಅಥವಾ ಕ್ರಿಕೆಟ್ ಆಟಗಾರನಿಗೋ? ಆದರೂ ನೋಡಿ, ಈ ಜಾಹಿರಾತುಗಳು ಮನುಷ್ಯನ ಮೇಲೆ ಭಾಷೆಗೂ ನಿಲುಕದ ಒಂದು ಸೂಕ್ಷ್ಮ ಪರಿಣಾಮ ಬೀರುತ್ತವೆ. ಹಾಗೆಯೇ ರಾಜಕೀಯ ಪಕ್ಷಗಳ ಉದ್ದೇಶಗಳು ಭಾವನೆಗಳನ್ನು ಕೆದಕಿ, ಸಮಾಜದ ಮೇಲೆ ಹತೋಟಿ ಸಾಧಿಸುವ ಯೋಜನೆ ಹೊಂದಿರುತ್ತವೆ. ಒಂದು ಒಳ್ಳೆಯ ಕಥೆಗಿಂತ, ಭಾವನೆ ಉದ್ರೇಕಿಸುವ ಚಲನಚಿತ್ರ ಹೆಚ್ಚು ಜನಪ್ರಿಯವಾಗುತ್ತದೆ.


ಹಾಗೆಯೇ ಇದನ್ನು ಸದುಪಯೋಯುಗಕ್ಕೆ ಬಳಸುವ ಕೆಲಸವೂ ಹಿಂದಿನ ಕಾಲದಿಂದಲೂ ಸಾಗುತ್ತ ಬಂದಿದೆ. ಋಗ್ವೇದದ ಮಂತ್ರಗಳನ್ನು ಉಚ್ಚರಿಸುವ ರೀತಿಗೆ ಪ್ರಾಮುಖ್ಯತೆ ಕೊಡುತ್ತದೆ ಸಾಮವೇದ. ಓಂಕಾರ ಹೊರಡಿಸುವ ಕಂಪನ, ಮನಸ್ಸಿನ ಭಾವನೆಗಳನ್ನು ಹತೋಟಿಗೆ ತರುವುದಲ್ಲದೆ, ಅನಿವರ್ಚನೀಯ ಆನಂದ ಕೊಡುವುದನ್ನು ಕಂಡುಕೊಂಡಿದ್ದರು ಹಿಂದಿನ ಯೋಗಿಗಳು. ಸಾಮಾನ್ಯ ಜನರು ಭಾವನೆ ತಣಿಸಲು ಹಾಡು-ನೃತ್ಯದ ಮನರಂಜನೆಯ ಮೊರೆ ಹೋದರು. ಭಾಷೆಯನ್ನು ಮೀರಿ ಭಾವನೆ ವ್ಯಕ್ತಪಡಿಸುವುದು ಕಲೆಗಳಿಂದ ಸಾಧ್ಯವಾಯಿತು. ಕಲೆಯ ಎಲ್ಲ ಪ್ರಕಾರಗಳು (ಗಾನ, ಸಂಗೀತ, ನಾಟ್ಯ, ಯಕ್ಷಗಾನ, ಚಿತ್ರಕಲೆ ಇತ್ಯಾದಿ) ಭಾವನೆಯ ಅಭಿವ್ಯಕ್ತಿಗೆ ಪ್ರಾಮುಖ್ಯತೆ ಕೊಡುತ್ತವೆ. ಭಾಷೆಯಿಂದ ಸಾಧ್ಯವಿಲ್ಲದ್ದನ್ನು ಕಲೆಯ ಮೂಲಕ ವ್ಯಕ್ತಗೊಳಿಸುತ್ತಾನೆ ಕಲಾವಿದ. ಹಾಗಾಗಿ ಹೆಚ್ಚಿನ ಕಲೆಗಳಿಗೆ ಭಾಷೆಯ ಇತಿ-ಮಿತಿಗಳಿಲ್ಲ.

ಮುಂದೆ ಯಾವುದಾದರೂ ಅಂದದ ವರ್ಣಚಿತ್ರವನ್ನು ನೀವು ನೋಡಿದಾಗ ಅದನ್ನು ವಿವರಿಸಲು ಭಾಷೆ ಒಂದು ಅಸಮರ್ಪಕ ಮಾಧ್ಯಮ ಎನ್ನಿಸಿದರೆ, ಅದು ನಿಜ ಮತ್ತು ಅದರ ಕಾರಣ ಏನೆಂದು ನೀವು ಈಗಾಗಲೇ ಬಲ್ಲಿರಿ.

A painting by Vincent Van Gogh


References:

1. Homo Deus by Yuval Noah Harrari

2. Gene: An Intimate History by Dr. Siddhartha Mukherjee

3. Brainwashing by Kathleen Taylor

4. Guns, Germs and Steel by Jared Diamond

No comments:

Post a Comment