Saturday, May 15, 2021

ಲಾಕ್ ಡೌನ್ ಡೈರಿ

ಈ ವರ್ಷದ ಲಾಕ್ ಡೌನ್ ನೀವು ಹೇಗೆ ಕಳೆಯುತ್ತಿದ್ದಿರಿ? ನನ್ನ ದಿನದ ಆರಂಭ ಮಾತ್ರ ಪ್ರತಿದಿನವೂ ಒಂದೇ ತರಹ ಎನ್ನುವಂತೆ ಸಾಗುತ್ತಿದೆ. ಊರಾಚೆ ಒಂದು ಆಲದ ಮರ. ಅಲ್ಲಿ ಕಟ್ಟೆಯನ್ನುಕಟ್ಟಿಸಿ, ಒಂದು ಶಿವಲಿಂಗವನ್ನು ಪ್ರತಿಷ್ಠಾಪನೆ ಮಾಡಿದ್ದು ಒಬ್ಬ ಪುಣ್ಯಾತ್ಮ. ಅದು ತನ್ನ ಪತ್ನಿಯ ನೆನಪಿಗಾಗಿ ಕಟ್ಟಿದ್ದು ಎಂದು ಅಲ್ಲಿ ಕಲ್ಲಿನ ಫಲಕ ಇದೆ. ಹಿಂದೆ ಅಲ್ಲಿಗೆ ನನ್ನ ಜೊತೆ ಬಂದಿದ್ದ ಸ್ನೇಹಿತನೊಬ್ಬ ಇದು ಅವರ 'ತಾಜ್ ಮಹಲ್' ಎಂದು ತಮಾಷೆ ಮಾಡಿದ್ದಿದೆ. ಆ ಕಟ್ಟೆಯ ಮೇಲೆ ಕುಳಿತರೆ ಬೀಸುವ ತಂಗಾಳಿ, ಸುಮ್ಮನೆ ಮಲಗಿದರೆ ಸಿಗುವ ವಿಶ್ರಾಂತಿ, ಕಣ್ಣು ಮುಚ್ಚಿ ಪ್ರಾಣಾಯಾಮ ಮಾಡಿದಾಗ ಆಗುವ ವಿಶೇಷ ಅನುಭವ ಇವೆಲ್ಲವುಗಳನ್ನು ಗಮನಿಸಿ ಇನ್ನೊಬ್ಬ ಸ್ನೇಹಿತ ಇದಕ್ಕೆ 'ಬೋಧಿ ವೃಕ್ಷ' ಎಂದು ಹೆಸರಿಟ್ಟಿದ್ದಾನೆ.


ನಾನು ಮತ್ತು ನೆರೆಯ ಸ್ನೇಹಿತರೊಬ್ಬರು ದಿನವೂ ಅಲ್ಲಿಗೆ ಸುಮಾರು ೪೫ ನಿಮಿಷದ ನಡಿಗೆಯಿಂದ ತಲುಪುತ್ತೇವೆ. ಅಲ್ಲಿ ೧೫ ನಿಮಿಷದ ವಿಶ್ರಾಂತಿ. ನಮ್ಮ ಶ್ವಾಸಕೋಶಗಳು ಸ್ವಚ್ಛ ಗಾಳಿಯನ್ನು ತುಂಬಿಕೊಂಡು ದಣಿದ ಮೈಗೆ ಮತ್ತೆ ಉಲ್ಲಾಸವನ್ನು ತುಂಬುತ್ತವೆ. ಅಲ್ಲಿಯ ಶಾಂತ ಪರಿಸರ ನಮ್ಮ ಮನಸ್ಸನ್ನೂ ಕೂಡ ಶಾಂತಗೊಳಿಸುತ್ತದೆ. ಮತ್ತೆ ಮನೆಗೆ ವಾಪಸ್ಸಾಗಲು ೪೫ ನಿಮಿಷ ತಗುಲುತ್ತದೆ. ದಾರಿಯಲ್ಲಿರುವ ನವಿಲುಗಳು ಕಲರವ ಮಾಡುತ್ತ ನಮ್ಮನ್ನು ಚಕಿತಗೊಳಿಸುತ್ತವೆ. ರಸ್ತೆಯ ಹಾದಿಗೆ ಬಂದಾಗ ದಾರಿಯಲ್ಲಿ ಸಿಗುವ ಪರಿಚಿತರು ಕೈ ಬೀಸುತ್ತಾರೆ. ಮನೆ ಮುಟ್ಟಿದಾಗ ನಾವು ಸವೆಸಿದ್ದು ಸುಮಾರು ೮ ಕಿ.ಮೀ. ದೂರದ ಹಾದಿ ಎಂದು ನನ್ನ ಫೋನ್ ಹೇಳುತ್ತದೆ. ಮತ್ತೆ ಲೌಕಿಕ ಜೀವನ ನಮ್ಮನ್ನು ಆವರಿಸಿ ಬಿಡುತ್ತದೆ.


ನಿಮ್ಮ ದಿನಚರಿ ಏನು? ಲಾಕ್ ಡೌನ್ ಕೊಟ್ಟಿರುವ ಬಿಡುವಿನಲ್ಲಿ ಏನು ಮಾಡುತ್ತಿರುವಿರಿ?





No comments:

Post a Comment