ಹಿಂದಿ ಚಿತ್ರರಂಗದಲ್ಲಿ ರಾಜ್ ಕಪೂರ್ ಮುಂಚೂಣಿಗೆ ಬಂದದ್ದು 'ಜಿಸ್ ದೇಶ್ ಮೇ ಗಂಗಾ ಬೆಹತಿ ಹೈ' ಚಿತ್ರದ ಮೂಲಕ. ಹಾಗೆಯೆ ಅವರ ಕೊನೆಯ ದಿನಗಳಲ್ಲಿ ಅವರು ನಿರ್ದೇಶಿಸಿದ ಚಿತ್ರ 'ರಾಮ್ ತೇರಿ ಗಂಗಾ ಮೈಲಿ'. ರಾಜ್ ಕಪೂರ್ ಅವರ ವೃತ್ತಿ ಜೀವನದ ಎರಡು ತುದಿಗಳ ಚಿತ್ರಗಳ ಹೆಸರುಗಳು ಗಂಗಾ ನದಿಯನ್ನು ಉಲ್ಲೇಖಿಸುವುದು ಒಂದು ವಿಶೇಷ. ಆದರೆ ಕಾಕತಾಳೀಯ ಎನ್ನುವಂತೆ ಭಾರತದ ಮೊದಲು ಮತ್ತು ಕೊನೆ ಎರಡೂ ಗಂಗಾ ನದಿಯ ಇರುವಿಕೆಯ ಜೊತೆಗೆ ಬೆಸೆದುಕೊಂಡಿದೆ.
ಭಾರತದಲ್ಲಿ ಮನುಷ್ಯ ನಾಗರೀಕತೆ ಬೆಳೆದು ಬಂದ ದಾರಿಯನ್ನು ಗಮನಿಸಿ ನೋಡಿ. ಇತಿಹಾಸಕಾರರು 'ಸಿಂಧು ಕಣಿವೆಯ ನಾಗರಿಕತೆ' ಯನ್ನು ಉಲ್ಲೇಖಿಸುತ್ತಾರಾದರೂ, ಭಾರತದ ನಾಗರೀಕತೆ ಬೆಳೆದು ಬಂದಿದ್ದು ಗಂಗಾ ನದಿಯ ದಡದ ಮೇಲೆ. ಹಿಮಾಲಯದಿಂದ ಬಂಗಾಲ ಕೊಲ್ಲಿಯವರೆಗೆ ೨,೫೦೦ ಕಿ.ಮೀ. ಉದ್ದದ, ವರ್ಷ ಪೂರ್ತಿ ತುಂಬಿ ಹರಿವ ನದಿ ಮನುಷ್ಯ ಜೀವ ಸಂಕುಲ ವಿಕಾಸನವಾಗಲು ಕಾರಣವಾಯಿತು. ಅಲ್ಲಿ ಬೆಳೆದ ಜನ ಸಂಖ್ಯೆ ಮುಂದೆ ಉದ್ದಗಲಕ್ಕೂ ಹರಡಿ ಹೋಗಿ ಒಂದು ದೇಶವಾಯಿತು. ಹಾಗೆ ಹಂಚಿ ಹೋದ ಜನ ಯಾರೂ ಕೂಡ ಗಂಗಾ ನದಿಯನ್ನು ಮರೆಯಲಿಲ್ಲ. ಇಂದಿಗೆ ಭಾರತದ ಯಾವುದೇ ಪಟ್ಟಣ, ಹಳ್ಳಿಯಲ್ಲಿ 'ಗಂಗಾ' ಹೆಸರಿನ ಹುಡುಗಿಯರು ಸಿಕ್ಕೇ ಸಿಗುತ್ತಾರೆ. ಹಾಗೆಯೇ ಇಂದಿಗೂ ಶುಭ ಸಮಾರಂಭಗಳಲ್ಲಿ ನಮ್ಮ ನಲ್ಲಿ, ಭಾವಿ ನೀರಿಗೂ 'ಗಂಗೆ ಪೂಜೆ' ಮಾಡುತ್ತೇವೆ. ಗಂಗಾ ನದಿಯ ತಟದಲ್ಲಿನ ದೇವಸ್ಥಾನಗಳು ಪವಿತ್ರತೆಯ ಸ್ಥಾನ ಪಡೆದಿವೆ. ಗಂಗೆಯಲ್ಲಿ ಮುಳುಗು ಹಾಕಿದರೆ ನಮ್ಮ ಪಾಪ ನಾಶ ಎನ್ನುವ ನಂಬಿಕೆ ನಮ್ಮಲ್ಲಿದೆ. ಕೊನೆ ಉಸಿರು ಬಿಡುವ ಮುನ್ನ ಗಂಗೆಯ ನೀರು ಬಾಯಲ್ಲಿ ಹಾಕಿದರೆ ಜನ್ಮ ಸಾರ್ಥಕ ಎನ್ನುವ ನಂಬಿಕೆಯು ಇದೆ. ಹಾಗೆ ಸತ್ತವರ ಅಸ್ಥಿ ವಿಸರ್ಜನೆಗೂ ಗಂಗಾ ನದಿಯೇ ಶ್ರೇಷ್ಠ ಎನ್ನುವ ಭಾವನೆ ನಮ್ಮಲ್ಲಿ ಬೇರೂರಿ ಬಿಟ್ಟಿದೆ. ಇದೆಲ್ಲ ತೋರಿಸುವುದು ಒಂದೇ ವಿಷಯವನ್ನು. ನಾವೆಲ್ಲ ಗಂಗೆ ಮಡಿಲಲ್ಲಿ ಹುಟ್ಟಿ ಬೆಳೆದವರು. ನಾವು ಕೊನೆಗೆ ಅಲ್ಲಿಗೆ ಹೋಗಿ ವಿಲೀನವಾದರೆ ನಮಗೆ ನೆಮ್ಮದಿ.
ಭಾರತ ದೇಶದ ನಾಗರೀಕತೆ ಸಲಹಿದ ಗಂಗೆ, ಎಲ್ಲಿಯವರೆಗೆ ಸ್ವಚ್ಛ ಇರುತ್ತಾಳೋ, ಅಲ್ಲಿಯವರೆಗೆ ನಮಗೂ ಕೂಡ ಉಳಿಗಾಲ. ವಿಪರೀತ ಎನ್ನಿಸುವಷ್ಟು ಕಲುಷಿತ ಗಂಗೆಗೆ ಹರಿಬಿಡುವುದನ್ನು ಗಂಗೆ ಕ್ಷಮಿಸುತ್ತಾಳೋ ಇಲ್ಲವೋ ಗೊತ್ತಿಲ್ಲ. ಕೆಲ ವರ್ಷಗಳ ಹಿಂದೆ ಪ್ರಕೃತಿಯ ವೈಪರೀತ್ಯದಿಂದ ಗಂಗಾ ನದಿಯಲ್ಲಿ ಪ್ರವಾಹ ಉಂಟಾಗಿ, ಮನುಷ್ಯ ನಿರ್ಮಿತ ಅಣೆಕಟ್ಟುಗಳನ್ನು ಮುರಿದು ಹಾಕಿ, ಹಿಮಾಲಯ ಪ್ರದೇಶದಲ್ಲಿ ಸಾಕಷ್ಟು ಸಾವು ನೋವು ಉಂಟು ಮಾಡಿದಳಲ್ಲ. ಅದು ಆಕೆ ನಮಗೆ ಕೊಟ್ಟ ಮುನ್ನೆಚ್ಚರಿಕೆಯೇ?
ಇಂದಿಗೆ ಗಂಗಾ ನದಿಯಲ್ಲಿ ತೇಲಿ ಬರುತ್ತಿರುವ ಹೆಣಗಳ ಸುದ್ದಿಯನ್ನು ನಾವು ಪತ್ರಿಕೆಗಳಲ್ಲಿ ಓದುತ್ತಿದ್ದೇವೆ ಮತ್ತು ದೂರದರ್ಶನದಲ್ಲಿ ನೋಡುತ್ತಿದ್ದೇವೆ. ಉಳ್ಳವರು ಶ್ರಾದ್ಧ ಮಾಡಿದರೆ, ಬಡವರು ತಮ್ಮ ಸತ್ತ ಸಂಬಂಧಿಕರನ್ನು ಗಂಗೆಯ ಮಡಿಲಿಗೆ ಸೇರಿಸಿ ಕೈ ಮುಗಿದಿದ್ದಾರೆ. ಇಂದಿಗೆ ತೇಲಿ ಬರುವ ಹೆಣಗಳಿಗೆ, ಪಾಪನಾಶಿನಿ ಗಂಗೆ ಬಡವ ಬಲ್ಲಿದರೆಂದು ಬೇಧ ತೋರದೆ ಎಲ್ಲರನ್ನೂ ತನ್ನ ಒಡಲಿಗೆ ಸೇರಿಸಿಕೊಂಡು ಮೋಕ್ಷ ಕರುಣಿಸಿದ್ದಾಳೆ ಎಂದು ನಾವು ಅಂದುಕೊಳ್ಳುತ್ತೇವೆ. ಮತ್ತೆ ಗಂಗೆ ಒಡಲಿಗೆ ವಿಷ ಸುರಿಯಲು ಮುಂದಾಗುತ್ತೇವೆ. ನಮಗೆ ಜೀವನ ಕೊಟ್ಟ ಗಂಗೆ ಕಲುಷಿತವಾದಾಗ ನಮ್ಮ ಜೀವನದ ಅಂತ್ಯವೂ ಸನಿಹವಾಗುತ್ತದೆ ಎಂಬ ಸತ್ಯ ಮಾತ್ರ ನಮಗೆ ಏಕೋ ಕಾಣುತ್ತಿಲ್ಲ.
No comments:
Post a Comment