ನನ್ನ ಅಚ್ಚು ಮೆಚ್ಚಿನ ಬರಹಗಾರರೆಂದರೆ, ರವೀಂದ್ರನಾಥ್ ಟಾಗೋರ್ ಮತ್ತು ಲಿಯೋ ಟಾಲ್ಸ್ಟಾಯ್.
ಟಾಗೋರ್ ರವರು (೧೮೬೧-೧೯೪೧) ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ - ಕಥೆ, ಕವನ, ಕಾದಂಬರಿ, ನಾಟಕ ಹೀಗೆ ಎಲ್ಲದರಲ್ಲೂ ತಮ್ಮ ಛಾಪು ಮೂಡಿಸಿದವರು. ರಾಷ್ಟ್ರೀಯತೆ, ಧರ್ಮ, ಶೈಕ್ಷಣಿಕ ವ್ಯವಸ್ಥೆ ಹೀಗೆ ಹತ್ತು ಹಲವಾರು ವಿಷಯಗಳ ಮೇಲೆ ನೂರಾರು ಪ್ರಬಂಧಗಳನ್ನು ರಚಿಸಿದ್ದಾರೆ. ಅವರು ಬರೆದ ಗೀತೆಗಳು ಎರಡು ದೇಶಗಳಲ್ಲಿ ರಾಷ್ಟ್ರ ಗೀತೆಗಳಾಗಿವೆ. ನೊಬೆಲ್ ಪಾರಿತೋಷಕವನ್ನು ಪಡೆದ ಮೊದಲ ಭಾರತೀಯ ಅವರು. ಆ ಪ್ರಶಸ್ತಿಯ ದುಡ್ಡಿನಲ್ಲೇ ಕಟ್ಟಿದ ಶಾಂತಿ ನಿಕೇತನ ಇಂದಿಗೆ ಶಿಕ್ಷಣ-ಕಲೆ-ಸಂಸ್ಕೃತಿಯ ತವರೂರಾಗಿದೆ. ಶ್ರೀಮಂತ ಕುಟುಂಬದಲ್ಲಿ ಜನಿಸಿದ ಟಾಗೋರ್, ಹಣದ ಕಡೆಗೆ ಆಕರ್ಷಿತರಾಗದೆ ಕಲೆಯ ಆರಾಧಕರಾದರು. ನಾಟಕ ರಚಿಸುವುದಷ್ಟೇ ಅಲ್ಲ, ಬಣ್ಣ ಹಚ್ಚಿ ಪಾತ್ರಧಾರಿಯಾಗಲು ಕೂಡ ಹೊರಟು ಬಿಡುತ್ತಿದ್ದರು. ಅವರು ಆಸಕ್ತಿ ಚಿತ್ರಕಲೆ ಕಡೆಗೆ ಕೂಡ ಹೊರಳಿ, ಹಲವಾರು ವರ್ಣಚಿತ್ರಗಳನ್ನು ಬಿಡಿಸಲು ಕಾರಣವಾಯಿತು.
ಟಾಲ್ಸ್ಟಾಯ್ (೧೮೨೮-೧೯೧೦) ಮೊದಲು ಸೇವೆ ಸಲ್ಲಿಸಿದ್ದು ರಷ್ಯಾದ ಸೇನೆಯಲ್ಲಿ. ಯುದ್ಧದ ಅನುಭವಗಳನ್ನು ಆಧರಿಸಿ ಬರೆದ ಅವನ ಕೃತಿ ಜನಪ್ರಿಯವಾಗಿ ಅವನನ್ನು ಒಬ್ಬ ಬರಹಗಾರನಾಗಿ ಪ್ರಸಿದ್ಧಿಗೊಳಿಸಿತು. ಅವನಿಗೆ ಶ್ರೀಮಂತಿಕೆ, ಸಂತೋಷ, ಯಾವುದರ ಕೊರತೆಯು ಆಗದೆ ಅವನ ಬರವಣಿಗೆಯು ಸಹ ಮುಕ್ಕಾಗದಂತೆ ಸಾಗಿತು. ಎರಡು ಮಹಾನ್ ಕಾದಂಬರಿಗಳು ಮೂಡಿ ಬಂದವು. ಲೆಕ್ಕವಿಲ್ಲದಷ್ಟು ಕಥೆಗಳು, ಅಸಂಖ್ಯಾತ ಎನ್ನುವಷ್ಟು ಪ್ರಬಂಧಗಳು ಪ್ರಕಟವಾದವು. ಬರಿ ರಷ್ಯಾದಲ್ಲಷ್ಟೇ ಅಲ್ಲದೆ ಅವನ ಕೃತಿಗಳು ಜಗತ್ತಿನ ಹಲವಾರು ಭಾಷೆಗಳಿಗೆ ಅನುವಾದಗೊಂಡು, ಅವನು ಜಗದ್ವಿಖ್ಯಾತನಾಗಿ ಹೋದ.
ಟಾಗೋರ್ ರಿಗೆ ಸಣ್ಣ ವಯಸ್ಸಿನಿಂದಲೇ ಜೀವನ ಪೆಟ್ಟು ಕೊಡಲಾರಂಭಿಸಿತ್ತು. ಸಣ್ಣ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡ ಅವರು, ತಮ್ಮನ್ನು ಸಾಕಿದ ಅತ್ತಿಗೆಯನ್ನು ಕೂಡ ಬೆಳೆದು ನಿಲ್ಲುವಷ್ಟರಲ್ಲೇ ಕಳೆದುಕೊಂಡರು. ಮುಂದೆ ಅವರು ಪ್ರೀತಿಯ ಮಗಳು, ಪತ್ನಿಯ ಅಕಾಲಿಕ ವಿಯೋಗದ ನೋವನ್ನು ಕೂಡ ಉಂಡರು. ಟಾಲ್ಸ್ಟಾಯ್ ಗೆ ಮಧ್ಯ ವಯಸ್ಸನ್ನು ದಾಟಿದ ಮೇಲೆ ಆಧ್ಯಾತ್ಮಿಕ ಬಿಕ್ಕಟ್ಟು ತಲೆದೋರಿತ್ತು. ಅದನ್ನು ಅವರು ತಮ್ಮ ಪುಸ್ತಕಗಳಲ್ಲಿ ವಿವರವಾಗಿ ದಾಖಲಿಸಿದ್ದಾರೆ.
ಟಾಗೋರ್ ಮತ್ತು ಟಾಲ್ಸ್ಟಾಯ್ ತಮ್ಮ ಜೀವನ ಅನುಭವವನ್ನೇ ಆಧರಿಸಿ ಕಥೆ-ಕಾದಂಬರಿ ರಚಿಸಿದರು. ಟಾಗೋರ್ ಮನುಷ್ಯ ಸಂಬಂಧದ ನೋವು-ನಲಿವನ್ನು ತಮ್ಮ ವಿಷಯ ವಸ್ತುವಾಗಿಸಿದರೆ, ಟಾಲ್ಸ್ಟಾಯ್ ಮನುಷ್ಯನ ರಾಗ-ದ್ವೇಷಗಳನ್ನು ಪ್ರಮುಖ ವಸ್ತುವನ್ನಾಗಿ ಕೃತಿಗಳನ್ನು ರಚಿಸಿದರು. ಇಬ್ಬರ ಕೃತಿಗಳಲ್ಲೂ ತತ್ವಶಾಸ್ತ್ರದ ಗಾಢ ಛಾಯೆಯನ್ನು ಓದುಗರು ಗಮನಿಸಬಹುದು. ಮನುಷ್ಯ ಸ್ವಭಾವದ ಯಾವುದೇ ಮಜಲನ್ನು ಇವರಿಬ್ಬರು ಪರಿಶೋಧಿಸದೆ ಬಿಟ್ಟಿಲ್ಲ.
ಯಾರಾದರೂ ನನಗೆ ಕೆಲವೇ ಪುಟಗಳ, ಆದರೆ ಗಾಢ ಪರಿಣಾಮ ಬೀರುವ ಪುಸ್ತಕದ ಸಲಹೆ ಕೇಳಿದರೆ, ಅವರಿಗೆ ನಾನು ಸೂಚಿಸುವುದು ಟಾಗೋರ್ ರ ಸಣ್ಣ ಕಥೆಗಳನ್ನು. ಹಾಗೆಯೇ ದೊಡ್ಡ ಗಾತ್ರದ್ದು ಆದರೂ ಸರಿ, ಆದರೆ ಒಂದೇ ಒಂದು ಪುಸ್ತಕದ ಸಲಹೆ ಕೇಳಿದರೆ ಅವರಿಗೆ ನಾನು ಸೂಚಿಸುವುದು ಟಾಲ್ಸ್ಟಾಯ್ ರವರ 'ಅನ್ನಾ ಕರೆನಿನಾ' ಕೃತಿ.
No comments:
Post a Comment