Saturday, March 19, 2022

ಗುರುವಿನ ಸಮ್ಮೋಹಕ ಶಕ್ತಿ

(ಇದು ಅರುಣ್ ಶೌರಿ ಅವರು ಬರೆದ 'Two Saints' ಪುಸ್ತಕದ ಮೊದಲ ಅಧ್ಯಾಯದ ಭಾವಾನುವಾದ. ಸ್ವಾಮಿ ವಿವೇಕಾನಂದ ಎಂದು ಗುರುತಿಸಿಕೊಂಡ ನರೇಂದ್ರ ಮತ್ತು ಅವರ ಗುರು ರಾಮಕೃಷ್ಣ ಪರಮಹಂಸರ ಜೀವನ ಕುರಿತು ಇದು ಬೆಳಕು ಚೆಲ್ಲುತ್ತದೆ)


ಗುರು ದೇವಿಯ ಪ್ರಾರ್ಥನೆಯ ಮಧ್ಯೆ ಬಿಕ್ಕುತ್ತಿದ್ದ. ತನ್ನ ಕೆಲಸ ಮುಂದುವರೆಸಲು ಸಹಾಯವಾಗುವಂತೆ ಶಿಷ್ಯರನ್ನು ಅನುಗ್ರಹಿಸುವಂತೆ ಬೇಡಿಕೊಳ್ಳುತ್ತಿದ್ದ. ಅವರಿಗೆ ತಮ್ಮ ದಿವ್ಯದೃಷ್ಟಿಯಲ್ಲಿ ಕೆಲ ಯುವಕರು ಅದರಲ್ಲೂ ನರೇಂದ್ರ ಎನ್ನುವ ಸ್ವಂತ ಚಿಂತನೆಯುಳ್ಳ, ದೇವರ ಬಗ್ಗೆ ಯಾರೂ ತಿಳಿದುಕೊಳ್ಳಲು ಸಾಧ್ಯವಿಲ್ಲ ಎಂದು ನಂಬಿದ್ದ ಬಂಡಾಯಗಾರ ಯುವಕ ಬರುವುದು ಮುಂಚೆಯೇ ಕಾಣುತ್ತಿತ್ತು. ಅದರಂತೆಯೇ ನರೇಂದ್ರ ತನ್ನ ಸ್ನೇಹಿತರೊಡನೆ ಗುರುವಿನ ಭೇಟಿಗಾಗಿ ದಕ್ಷಿಣೇಶ್ವರಕ್ಕೆ ಬರಲು ಆರಂಭಿಸಿದ. ನರೇಂದ್ರನನ್ನು ನೋಡಿದ ಕೂಡಲೇ ಗುರುವಿನ ಹರ್ಷ ಎಲ್ಲೇ ಮೀರಿತ್ತು.


ಮೊದಲ ಭೇಟಿಯಲ್ಲಿ ನರೇಂದ್ರನಿಗೆ ಗುರುವು ಮತಿಭ್ರಮಣೆಗೊಂಡ ವ್ಯಕ್ತಿಯ ತರಹ ತೋರಿದರೂ, ಇನ್ನು ಕೆಲವು ಸಲ ಭೇಟಿ ನೀಡಿ ನಿರ್ಧರಿಸಿದರಾಯಿತು ಎಂದುಕೊಂಡ. ಎರಡನೆಯ ಭೇಟಿಯಲ್ಲಿ, ಗುರುವಿನ ಹತ್ತಿರ ಯಾರೂ ಇರಲಿಲ್ಲ. ನರೇಂದ್ರನನ್ನು ಕರೆದು ತನ್ನ ಹತ್ತಿರವೇ ಕುಳಿಸಿಕೊಂಡ ಗುರು ಅವನನ್ನು ತನ್ನ ಬಲಗಾಲಿನಿಂದ ಸ್ಪರ್ಶಿಸಿದರು. ನರೇಂದ್ರನಿಗೆ ಒಂದು ಅದ್ಭುತ ಅನುಭವದ ಆರಂಭವಾಯಿತು. ಅವರು ಕುಳಿತಿದ್ದ ಕೋಣೆಯ ಗೋಡೆಗಳೆಲ್ಲ ಹಿಂದೆ ಸರಿದು ಮಾಯವಾಗುತ್ತಿರುವ ಹಾಗೆ ಮತ್ತು ಅದರ ಜೊತೆಗೆ ನರೇಂದ್ರನಿಗೆ ತಾನು ತಾನೆನ್ನುವ ಅರಿವು ಕಳೆದು ಶೂನ್ಯದಲ್ಲಿ ಸೇರಿ ಹೋದ ಹಾಗೆ ಅನುಭವ. 


"ನನಗೆ ಏನು ಮಾಡುತ್ತಿದ್ದೀರಿ? ನನಗೆ ತಂದೆ, ತಾಯಿಯರಿದ್ದಾರೆ" ನರೇಂದ್ರ ದೊಡ್ಡ ಧ್ವನಿಯಲ್ಲಿ ಗಾಬರಿಯಿಂದ ಕೇಳಿಯೇ ಬಿಟ್ಟ. ಆ ಮಾತಿಗೆ ದೊಡದಾಗಿ ನಗುತ್ತಾ, ತಮ್ಮ ಕೈಯನ್ನು ನರೇಂದ್ರನ ಎದೆಯ ಮೇಲಿಟ್ಟು "ಹಾಗಾದರೆ ಇದು ನಿಲ್ಲಲಿ. ಎಲ್ಲ ಅನುಭವ ಒಂದೇ ಸಾಲಕ್ಕೆ ಆಗುವ ಅಗತ್ಯವಿಲ್ಲ. ಕಾಲ ಕಳೆದಂತೆ ಅವು ನಿನ್ನವಾಗಲಿ" ಎಂದು ಗುರು ನುಡಿದರು. ಅಸಾಧಾರಣವಾದಂತ ಆ ಅನುಭವ ಅಲ್ಲಿಗೆ ಕೊನೆಯಾಗಿ ಮತ್ತೆ ಸಹಜ ಸ್ಥಿತಿಗೆ ಮರಳಿದ ನರೇಂದ್ರ.


ನರೇಂದ್ರ ಮೂರನೆಯ ಬಾರಿ ಬಂದಾಗ ಗುಡಿಯಲ್ಲಿ ಗದ್ದಲವಿತ್ತು. ತನ್ನ ಜೊತೆಗೆ ಬರುವಂತೆ ಸೂಚಿಸಿದ ಗುರುಗಳು ನರೇಂದ್ರನನ್ನು ಕರೆದುಕೊಂಡು ಒಂದು ಕೋಣೆಯಲ್ಲಿ ಕುಳಿತುಕೊಂಡರು. ನೋಡುನೋಡುತ್ತಿದ್ದಂತೆಯೇ ಗುರುಗಳು ಮೈಮರೆತು ಭಾವಪರವಶರಾದರು. ಗುರುಗಳಲ್ಲಾಗುತ್ತಿರುವ ಬದಲಾವಣೆಯನ್ನು ನರೇಂದ್ರ ಗಮನಿಸುತ್ತಿದ್ದ. ಹಠಾತ್ತನೆ ಗುರುಗಳು ನರೇಂದ್ರನನ್ನು ಸ್ಪರ್ಶಿಸುತ್ತಾರೆ. ಆ ಸ್ಪರ್ಶಕ್ಕಿದ್ದ ಶಕ್ತಿಯಿಂದ ನರೇಂದ್ರನಿಗೆ ಮಾತೇ ಹೊರಡಲಿಲ್ಲ. ಅವನಿಗೆ ಅರಿವು ಸಂಪೂರ್ಣ ಕಳೆದು ಹೋಯಿತು. ಅವನು ಮತ್ತೆ ಸಹಜ ಸ್ಥಿತಿಗೆ ಬರುವಷ್ಟರಲ್ಲಿ ಒಂದು ದಿನವೇ ಕಳೆದು ಹೋಗಿತ್ತು.


ಎಷ್ಟೋ ವಾರಗಳು ಉರುಳಿ ಹೋದವು. ಒಂದು ದಿನ ನರೇಂದ್ರ ತನ್ನ ಸ್ನೇಹಿತನೊಡನೆ ಗುರುಗಳು ದೇವರ ಬಗ್ಗೆ ಹೇಳಿದ್ದನ್ನು ಅಪಹಾಸ್ಯ ಮಾಡುತ್ತ ನಿಂತಿದ್ದ. ಅಲ್ಲಿಗೆ ಬಂದ ಗುರುಗಳು ಪ್ರೀತಿಯಿಂದ "ಯಾವ ವಿಷಯ ಮಾತನಾಡುತ್ತಿರುವಿರಿ?" ಎನ್ನುತ್ತಾ ನರೇಂದ್ರನನ್ನು ಸ್ಪರ್ಶಿಸಿದರು. ನರೇಂದ್ರನಿಗೆ ತಲೆ ಸುತ್ತಿ ಬಂದಂತೆ ಆಗಿ ಉತ್ತರಿಸಿದ "ನೀವು ಈ ಜಗತ್ತಿನಲ್ಲಿ ದೇವರ ಬಿಟ್ಟು ಬೇರೇನಿಲ್ಲ ಎಂದು ಹೇಳಿದ್ದರ ಬಗ್ಗೆ". ಆ ಅನುಭವ ನರೇಂದ್ರನಿಗೆ ಎಷ್ಟೋ ದಿನಗಳವರೆಗೆ ಬಿಟ್ಟು ಹೋಗಲಿಲ್ಲ. ಅಷ್ಟರಲ್ಲಿ ದೇವರು ಮತ್ತು ಜಗತ್ತು ಬೇರೆ ಬೇರೆ ಅಲ್ಲ ಎನ್ನುವ ಅದ್ವೈತ ಸಿದ್ಧಾಂತ ಅವನ ಸ್ವಂತ ಅನುಭವಕ್ಕೆ ಬಂದು ಬಿಟ್ಟಿತು.


ಗುರುವಿಗೆ ನರೇಂದ್ರ ಹತ್ತಿರವಾದರೂ, ಅವನು ತನ್ನ ಸಂಶಯ ಪಡುವ, ವಾದಕ್ಕೆ ಇಳಿಯುವ, ಪ್ರಶ್ನೆ ಹಾಕುವ ಸ್ವಭಾವವನ್ನು ಬಿಟ್ಟಿರಲಿಲ್ಲ.


ನರೇಂದ್ರನ ತಂದೆ ತೀರಿಕೊಂಡರು. ಅವನ ಕುಟುಂಬ ಕಡುಬಡತನಕ್ಕಿಳಿಯಿತು. ಮನೆಯಲ್ಲಿ ಎಲ್ಲರಿಗು ಸಾಕಾಗುವಷ್ಟು ಊಟವಿರುತ್ತಿರಲಿಲ್ಲ. ಯಾವುದೊ ಒಂದು ನೆಪದಲ್ಲಿ ಮನೆಯಿಂದ ನರೇಂದ್ರ ಹೊರ ಬಂದು ಬಿಡುತ್ತಿದ್ದ. ಉಳಿದವರಿಗೆ ಒಂದು ತುತ್ತು ಊಟ ಹೆಚ್ಚಿಗೆ ಸಿಗಲಿ ಎಂದು. ಅವನು ಕೆಲಸಕ್ಕಾಗಿ ಅಲೆದು ಅಲೆದು ಸುಸ್ತಾದ. ಆದರೆ ಅವನಿಗೆ ಎಲ್ಲೂ ಕೆಲಸ ದೊರಕಲಿಲ್ಲ. ಒಂದು ದಿನ ಮಳೆಯಲ್ಲಿ ನೆನೆದು, ನಡೆಯಲು ತ್ರಾಣವಿಲ್ಲದೆ ಕುಸಿದುಬಿಟ್ಟ. ಮತ್ತೆ ಅವನು ಎದ್ದಾಗ, ಅವನಿಗೆ ತಾನು ಕೆಲಸ ಮಾಡುವುದಕ್ಕೆ, ಹಣ ಗಳಿಸುವುದಕ್ಕೆ ಹುಟ್ಟಿಲ್ಲ ಎನ್ನುವುದನ್ನು ಕಂಡುಕೊಂಡ. ಲೌಕಿಕವನ್ನು ತೊರೆದು ಸನ್ಯಾಸಿಯಾಗುವ ಬಯಕೆ ಅವನಲ್ಲಿ ಮೊಳೆಯತೊಡಗಿತ್ತು. ಆದರೆ ತನ್ನ ತಾಯಿ, ಸಹೋದರರು ಉಪವಾಸ ಇರುವುದನ್ನು ಅವನು ನೋಡಲಾರ.


ಗುರುವಿನ ಹತ್ತಿರ ಬಂದ ನರೇಂದ್ರ ತನ್ನ ಕುಟುಂಬಕ್ಕೆ ಸಹಾಯ ಮಾಡುವಂತೆ ದೇವಿಯನ್ನು ಪ್ರಾರ್ಥಿಸಿ ಎಂದು ಕೇಳಿಕೊಂಡ. ಗುರುವು ಅದಕ್ಕೆ "ದೇವಿಯನ್ನು ನಾನು ಸಾಕಷ್ಟು ಸಲ ನಿಮ್ಮ ಕುಟುಂಬದ ದಾರಿದ್ರ್ಯವನ್ನು ದೂರ ಮಾಡುವಂತೆ ಪ್ರಾರ್ಥಿಸಿದ್ದೇನೆ. ಅದರಿಂದ ಯಾವ ಉಪಯೋಗವು ಆಗಿಲ್ಲ. ಏಕೆಂದರೆ ನಿನಗೆ ದೇವಿಯ ಮೇಲೆ ನಂಬಿಕೆ ಇಲ್ಲ. ಇಂದು ಮಂಗಳವಾರ. ದೇವಿಯ ಇಷ್ಟದ ವಾರ. ನೀನೆ ಏಕೆ ದೇವಿಯನ್ನು ಪ್ರಾರ್ಥಿಸಬಾರದು? ಅವಳು ಜಗತ್ತಿಗೆ ಜನ್ಮ ಕೊಟ್ಟವಳು. ಅವಳು ಮನಸ್ಸು ಮಾಡಿದರೆ ಆಗದ ಕೆಲಸ ಯಾವುದಿದೆ?"  ಎಂದು ಹೇಳಿದರು.


ದೇವಸ್ಥಾನದ ಮೆಟ್ಟಿಲೇರಿ ಒಳ ಹೋದ ನರೇಂದ್ರ ಕರುಣೆಯ ಚಿಲುಮೆಯಾಗಿದ್ದ ದೇವಿಯನ್ನು ನೋಡುತ್ತಾ ಮೈಮರೆತು ತನಗೆ ದೈವಿಕ ಜ್ಞಾನ ಮತ್ತು ವೈರಾಗ್ಯವನ್ನು ಕೊಡುವಂತೆ ಬೇಡಿಕೊಂಡ. ಮರಳಿ ಬಂದ ನರೇಂದ್ರನ್ನು ಕಂಡ ಗುರುಗಳು "ದೇವಿಯ ಹತ್ತಿರ ನಿನ್ನ ಕುಟುಂಬದ ಸಮಸ್ಯೆ ಹೇಳಿಕೊಂಡೆಯಾ?" ಎಂದು ಪ್ರಶ್ನಿಸಿದರು. ದೇವಿಯ ಸಾನ್ನಿಧ್ಯದಲ್ಲಿ ಅದು ತನಗೆ ಸಂಪೂರ್ಣ ಮರೆತು ಹೋದುದನ್ನು ನರೇಂದ್ರ ನಿವೇದಿಸಿಕೊಂಡ. ಮತ್ತೆ ಇನ್ನೊಂದು ಸಲ ಹೋಗಿ ಪ್ರಾರ್ಥಿಸುವಂತೆ ಗುರುಗಳು ನರೇಂದ್ರನಿಗೆ ಸೂಚಿಸಿದರು. ಎರಡನೆಯ ಅನುಭವವು ನರೇಂದ್ರನಿಗೆ ವಿಭಿನ್ನವಾಗಿರಲಿಲ್ಲ. ಮತ್ತೆ ಮೂರನೆಯ ಬಾರಿಗೆ ಹೋಗುವಂತೆ ಗುರುಗಳು ಸೂಚಿಸಿದರು. ಈ ಬಾರಿ ದೇವಸ್ಥಾನದೊಳಗೆ ಕಾಲಿಟ್ಟೊಡನೆ ನರೇಂದ್ರನಿಗೆ ಲೌಕಿಕ ಸ್ವಾರ್ಥಗಳಿಗೆ ದೇವಿಯನ್ನು ಪ್ರಾರ್ಥಿಸಬಾರದು ಎನ್ನುವ ಅರಿವು ಮೂಡಿತು. ಮತ್ತೆ ತನಗೆ ದೈವಿಕ ಜ್ಞಾನ ನೀಡುವಂತೆ ದೇವಿಯನ್ನು ಪ್ರಾರ್ಥಿಸಿ ಗುರುವಿನತ್ತ ಮರಳಿದ ನರೇಂದ್ರ. 


"ಇದು ನಿಮ್ಮದೇ ಆಟ. ನನಗೆ ದೇವಿಯಲ್ಲಿ ಸ್ವಾರ್ಥಕ್ಕಾಗಿ ಪ್ರಾರ್ಥಿಸದಂತೆ ಮಾಡುತ್ತಿರುವಿರಿ. ನನ್ನ ತಾಯಿ, ತಮ್ಮಂದಿರ ಜವಾಬ್ದಾರಿಯನ್ನು ನಿಮಗೆ ಬಿಡುತ್ತೇನೆ" ಎಂದು ಹೇಳಿದ ನರೇಂದ್ರ. 

"ಸರಿ. ಅವರಿಗಿನ್ನೂ ಸಾಧಾರಣ ಊಟ, ಬಟ್ಟೆಗಳ ತೊಂದರೆ ಆಗದಂತೆ ನಾನು ನೋಡಿಕೊಳ್ಳುತ್ತೇನೆ" ಅಭಯವಿತ್ತರು ಗುರುಗಳು.


ಕೆಲ ತಿಂಗಳುಗಳು ಕಳೆದವು. ಗುರುಗಳ ಗಂಟಲ ಬೇನೆ ಉಲ್ಬಣವಾಗುತ್ತ ಹೋಯಿತು. ನರೇಂದ್ರ ಮತ್ತು ಅವನ ಸ್ನೇಹಿತರು ಸರದಿಯಲ್ಲಿ ಗುರುವಿನ ಸೇವೆಗೆ ನಿಂತರು. ಒಂದು ದಿನ ನರೇಂದ್ರ ಗುರುಗಳಲ್ಲಿ ಅಧ್ಯಾತ್ಮದ ಅಂತಿಮ ಹಂತವನ್ನು ತನಗೆ ತೋರಿಸಿಕೊಡುವಂತೆ ಬೇಡಿಕೊಂಡ. ಗುರುಗಳು ಅದನ್ನು ಮುಂದಕ್ಕೆ ತಳ್ಳಿ ಹಾಕುತ್ತ ಹೋದರು. ಒಂದು ದಿನ ನರೇಂದ್ರನಿಗೆ ತನ್ನ ತಲೆಯ ಹಿಂದೆ ಒಂದು ಪ್ರಕಾಶಮಾನವಾದ ದೀಪ ಹೊತ್ತಿಕೊಂಡಂತೆ, ಅವನ ಆತ್ಮ ಬೇರೆಯಾಗಿ ಶೂನ್ಯದೊಂದಿಗೆ ಬೆರೆತುಕೊಂಡ ಅನುಭವ ಆಯಿತು. ತನ್ನ ಜೊತೆಗಾರರನ್ನು ಸಹಾಯಕ್ಕಾಗಿ ಕೂಗಿದ. ಬಂದವರು ನರೇಂದ್ರನ ದೇಹ ನಿಶ್ಚಲವಾಗಿ, ಜೀವವಿಲ್ಲದಂತೆ ಮಲಗಿರುವುದನ್ನು ನೋಡಿ ಗುರುವಿನ ಹತ್ತಿರ ಓಡಿ ಹೋದರು. ಗುರುಗಳು ಶಾಂತವಾಗಿ, ತಮಗೆಲ್ಲ ಅರಿವಿರುವಂತೆ "ಅವನು ಹಾಗೆ ಇರಲಿ. ಬಹಳಷ್ಟು ದಿನಗಳಿಂದ ಆ ಅನುಭವಕ್ಕಾಗಿ ಗಂಟು ಬಿದ್ದಿದ್ದ" ಎಂದು ಹೇಳಿದರು.


ಸಹಜ ಸ್ಥಿತಿಗೆ ಮರಳಿದ ನಂತರ ನರೇಂದ್ರ ತನ್ನ ಗುರುಗಳ ಬಳಿ ಹೋದ. ಅವನನ್ನು ಉದ್ದೇಶಿಸಿ ಗುರುಗಳು ಹೇಳಿದರು "ತಾಯಿ ನಿನಗೆ ಸಕಲವನ್ನೂ ತೋರಿದ್ದಾಳೆ. ಆದರೆ ನಿನಗೆ ಮಾಡಲು ಸಾಕಷ್ಟು  ಕೆಲಸವಿದೆ. ಅದು ಮುಗಿದ ನಂತರ ಮತ್ತೆ ಆ ಅನುಭವ ನಿನ್ನದಾಗುತ್ತದೆ".


ಗುರುಗಳ ಆರೋಗ್ಯ ಹದಗೆಡುತ್ತಾ ಹೋಯಿತು. ಅವರಿಗೆ ಊಟ ಸೇರದಾಯಿತು. ನರೇಂದ್ರನನ್ನು ಎದುರಿಗೆ ಕೂಡಿಸಿಕೊಂಡು, ಅವನನ್ನು ನೋಡುತ್ತಾ ಸಮಾಧಿ ಸ್ಥಿತಿಗೆ ತಲುಪಿದರು. ನರೇಂದ್ರನಿಗೆ ತನ್ನ ದೇಹದಲ್ಲಿ ಏನೋ ಸೇರುತ್ತಿರುವ ಅನುಭವವಾಗಿ ಪ್ರಜ್ಞೆ ಕಳೆದುಕೊಂಡನು. ಮತ್ತೆ ಅವನಿಗೆ ಪ್ರಜ್ಞೆ ಬಂದಾಗ ಗುರುಗಳು ಅವನಿಗೆ ತಮ್ಮ ಜ್ಞಾನವನ್ನೆಲ್ಲ ಧಾರೆ ಎರೆದದ್ದು ತಿಳಿಸಿದರು. ನಂತರ ಗುರುಗಳು ತಮ್ಮ ದೇಹ ತೊರೆದರು. ಅಲ್ಲಿಂದ ಮುಂದೆ ನರೇಂದ್ರನಿಗೆ ತನ್ನ ಜೀವನದ ಉದ್ದೇಶ ಏನು  ಎನ್ನುವುದರಲ್ಲಿ ಯಾವುದೇ ಸಂದೇಹ ಉಳಿಯಲಿಲ್ಲ.

No comments:

Post a Comment