Monday, May 30, 2022

ಹೆಣ್ಣಿಗಿಂತ ಗಂಡೇ ಜಾಸ್ತಿ ಕ್ರೂರಿ ಎನ್ನುವ ಶುದ್ಧ ಸುಳ್ಳು


ಗಂಡಸಿನ ದುಷ್ಟತನದ ಪರಿಚಯ ಎಲ್ಲರಿಗೂ ಇರುತ್ತದೆ. ಕುಡಿದು ಬರುವ ಗಂಡಸು, ಹೆಂಡತಿಯನ್ನು  ಹೊಡೆಯುವ ಗಂಡಸು, ಮನೆ ಸಾಮಾನುಗಳನ್ನು ಮಾರಿ ಹಾಕುವ ಗಂಡಸು, ತನ್ನ ಚಟಗಳಿಗೆ ಕುಟುಂಬದ ಆಸ್ತಿ ಹರಾಜು ಮಾಡಿಸುವ ಗಂಡಸು. ಅದೇ ಮಟ್ಟಕ್ಕೆ ಸುಳ್ಳಿನ ಪ್ರಪಂಚದ ಸುಂದರಿಯರು ಏಕೆ ಸುದ್ದಿಯಾಗುವುದಿಲ್ಲ?


ಹೆಂಗಸು ಎಂದರೆ ತಾಯಿ ಪಾತ್ರದ ಕರುಣಾಮಯಿ, ವಾತ್ಸಲ್ಯ ತೋರುವ ಸೋದರಿ, ಪ್ರೀತಿಯಿಂದ ಕಾಣುವ ಹೆಂಡತಿ, ಅಭಿಮಾನವೇ ಮೈ ತಳೆದಂತಿರುವ ಮಗಳು. ಗಂಡಸಿನ ಕ್ರೂರತನ ಸಾಮಾನ್ಯ. ಆದರೆ ಹೆಂಗಸಿನಲ್ಲಿ ಅದು ಅಪರೂಪ. ಅದೆಲ್ಲ ಸರಿ. ಆದರೆ ಇತ್ತೀಚಿಗೆ ಒಂದು ಇಂಗ್ಲಿಷ್ ಪತ್ರಿಕೆಯಲ್ಲಿ ಲೇಖನದ ಒಂದು ಸಾಲು ನನ್ನ ಗಮನ ಸೆಳೆಯಿತು. ಮಾನಸಿಕ ಚಿತ್ರಹಿಂಸೆ ಕೊಡುವುದರಲ್ಲಿ ಹೆಣ್ಣಿಗೆ ಸರಿ ಸಾಟಿಯಾಗಲು ಗಂಡಿಗೆ ಸಾಧ್ಯವೇ ಇಲ್ಲ ಎನ್ನುವುದು ಅದರ ಸಾರಾಂಶ.


ಹೌದಲ್ಲ, ಕ್ರೂರತನ ಅಂದರೆ ಅದು ದೈಹಿಕ ಕಿರುಕುಳ ಅಷ್ಟೇ ಅಲ್ಲ. ಮೈಯಿಗೆ ಆದ ಗಾಯ ಕೆಲ ಕಾಲಕ್ಕೆ ಮಾಯಬಹುದು. ಆದರಿಗೆ ಮನಸ್ಸಿಗೆ ಆದ ನೋವು? ಅದು ಹೊರ ನೋಟಕ್ಕೆ ಸ್ಪಷ್ಟವಾಗಿ ಗೋಚರ ಆಗುವುದಿಲ್ಲ. ಆದರೆ ಅದು ಮನುಷ್ಯನನ್ನು ಕುಗ್ಗಿಸದೆ ಬಿಡುವುದಿಲ್ಲ. ಮಾನಸಿಕ ಚಿತ್ರಹಿಂಸೆ ನೀಡುವುದರಲ್ಲಿ ಹೆಂಗಸಿಗೆ ಹೇಗೆ ಗಂಡಸಿಗಿಂತ ಹೆಚ್ಚಿನ ಐಡಿಯಾ ಬಂದು ಬಿಡುತ್ತವೆ? ಏಕೆಂದರೆ ಹೆಂಗಸಿಗೆ ಭಾವನೆಗಳು ಅರ್ಥವಾದಷ್ಟು ಸುಲಭವಾಗಿ ಗಂಡಸಿಗೆ ಆಗುವುದಿಲ್ಲ. ಅದೇ ಹೆಣ್ಣಿನ ಶಕ್ತಿ. ಮತ್ತು ಹೆಣ್ಣು ತನಗೆ ಬೇಕಾದಾಗ ಅದನ್ನು ಆಯುಧದ ತರಹ ಕೂಡ ಉಪಯೋಗಿಸಬಲ್ಲಳು. ಯಾವ ಮಾತು, ಯಾವ ನಿರ್ಲಕ್ಷ್ಯ ಎಷ್ಟು ಪರಿಣಾಮ ಬೀರುತ್ತದೆ ಎನ್ನುವುದು ಹೆಂಗಸಿಗೆ ಅರ್ಥವಾದಷ್ಟು ಚೆನ್ನಾಗಿ ಗಂಡಿಗೆ ಆಗಲು ಎಲ್ಲಿ ಸಾಧ್ಯ? ಗಂಡಸಿಗೆ ಮೈ ಬಿರುಸು. ಆದರೆ ಅದು ಹೆಣ್ಣಿನ ನಾಲಗೆಯ ತೀಕ್ಷ್ಣಕ್ಕೆ ಸರಿ ಸಮನಾಗುವುದಿಲ್ಲ. ಎಂತಹ ದೊಡ್ಡ ರೌಡಿಯೇ ಆಗಲಿ ಅವನ ಹೆಂಡತಿಯ ನಾಲಿಗೆಗೆ ಹೆದರುತ್ತಾನೆ.


ಹೆಂಗಸು ಕೊಡುವ ಪೆಟ್ಟುಗಳು ಸೂಕ್ಷ್ಮ ಆಗಿರುವುದರಿಂದ ಅವು ಹೊರ ಜಗತ್ತಿಗೆ ಕಾಣುವುದೇ ಇಲ್ಲ. ಮತ್ತು ಹೆಣ್ಣಿಗೆ ಸೋತೆ ಎಂದು ಯಾವ ಗಂಡು ಒಪ್ಪಿಕೊಳ್ಳುತ್ತಾನೆ? ಅವೆರಡು ಸೇರಿ ಹೆಂಗಸಿನ ಜಾಣ ಕ್ರೌರ್ಯ ಬೆಳಕಿಗೆ ಬರದಂತೆ ತಡೆದುಬಿಡುತ್ತವೆ. ಗಂಡಸಿನ ದುಷ್ಟತನ ಜಗತ್ತಿಗೆ ಟಾಮ್ ಟಾಮ್ ಆದರೆ ಹೆಂಗಸು ಕೊಡುವ ಮಾನಸಿಕ ಚಿತ್ರಹಿಂಸೆ ಕೌಟುಂಬಿಕ ರಹಸ್ಯಗಳಾಗೆ ಉಳಿದುಬಿಡುತ್ತವೆ. ಅದು ಹೆಂಗಸಿಗೆ ನಿರ್ಭಿತಿಯಿಂದ ತನ್ನ ಕಾರ್ಯ ಕೈಗೊಳ್ಳಲು ಅನುವು ಕೂಡ ಮಾಡಿಕೊಡುತ್ತದೆ. ಒಂದು ಖಾಸಗಿ ನರಕಕ್ಕೆ ನಾಯಕಿ ಆಗುವ ಹೆಣ್ಣು ಎಲ್ಲಿಯೂ ಸುದ್ದಿ ಆಗುವುದಿಲ್ಲ. 


ನಮ್ಮ ಸಮಾಜ ಹೆಣ್ಣಿನ ತ್ಯಾಗಗಳಿಗಾಗಿ ಅವಳನ್ನು ಎತ್ತಿ ಹಿಡಿಯುತ್ತದೆ. ಅವಳಿಗೆ ತೊಂದರೆ ಆಗದಂತೆ ಕಾನೂನು, ವ್ಯವಸ್ಥೆಗಳು ಸೃಷ್ಟಿಯಾಗಿವೆ. ಅದರ ದುರುಪಯೋಗ ಮಾಡಿಕೊಳ್ಳುವ ಹೆಣ್ಣು ತಾನು ಹೊರಗಿನ ಸಮಾಜದ ಗಮನಕ್ಕೆ ಬರದಂತೆ ಕ್ರೂರಿಯಾಗುತ್ತ ಹೋಗುತ್ತಾಳೆ. ಹೆಣ್ಣು ಮಮತಾಮಯಿ ತಾಯಿ ಹಾಗೆಯೇ ಸೊಸೆಗೆ ಬೆಂಕಿ ಇಡುವ ಅತ್ತೆ ಕೂಡ. ಹೆಣ್ಣು ಗಂಡಿನ ಯಶಸ್ಸಿನಲ್ಲಿ ಪಾಲುದಾರಳು ಹಾಗೆಯೆ ಗಂಡನ್ನು ಅಧಪತನಕ್ಕೆ ತಳ್ಳಿ ವಿಕೃತ ಆನಂದ ಅನುಭವಿಸುವ ರಾಕ್ಷಸಿಯೂ ಕೂಡ.


ದೇವರು ಗಂಡು ಮತ್ತು ಹೆಣ್ಣಿಗೆ ಅವರದೇ ಆದ ಶಕ್ತಿ ಮತ್ತು ದೌರ್ಬಲ್ಯಗಳನ್ನು ನೀಡಿದ. ಗಂಡಸು ತನ್ನ ದೈಹಿಕ ಶಕ್ತಿಯಿಂದ ದಬ್ಬಾಳಿಕೆ ಮಾಡಿದರೆ, ಹೆಣ್ಣು ಮಾನಸಿಕ ಚಿತ್ರ ಹಿಂಸೆಯ ಮೂಲಕ ತನ್ನ ಹಿಡಿತ ಸಾಧಿಸಿ ಗಂಡಿಗೆ ಕ್ರೂರತನದಲ್ಲಿ ಸರಿಸಮ ಸವಾಲು ಒಡ್ಡುತ್ತಾಳೆ.

Sunday, May 29, 2022

ಸುಖಕ್ಕೆ ಹುಟ್ಟಿದ ಕಷ್ಟಗಳು

ಕಳೆದ ವರ್ಷ ನಾನು ಮನೆ ರಿಪೇರಿ ಕೆಲಸ ಮಾಡಿಸುತ್ತಿದ್ದಾಗ, ಗಾರೆ ಕೆಲಸಕ್ಕೆ ಒಂದು ಕುಟುಂಬ ಬರುತ್ತಿತ್ತು. ಗಂಡ, ಹೆಂಡತಿ ಮತ್ತು ಹೆಂಡತಿಯ ತಾಯಿ. ಗಂಡ ಗೋಡೆ ಕಟ್ಟುವ ಕೆಲಸ ಮಾಡಿದರೆ ಹೆಂಡತಿ ಅವನಿಗೆ ಸರಕು ತಂದು ಕೊಡುವ ಸಹಾಯದ ಕೆಲಸ. ಅವಳ ತಾಯಿಗೆ ಉಸುಕು ಹಿಡಿಯುವ ಕೆಲಸ. ಮೈ ಮುರಿಯುವ ದುಡಿತ. ಮಧ್ಯಾಹ್ನದ ಹೊತ್ತಿಗೆ ಕಟ್ಟಿಕೊಂಡು ಬಂದ ರೊಟ್ಟಿ ತಿನ್ನುತ್ತಿದ್ದರು. ಮತ್ತೆ ದುಡಿತಕ್ಕೆ ಹಾಜರು. ಸಂಜೆ ಹೊತ್ತಿಗೆ ಸಡಗರದಿಂದ ತಮ್ಮ ಮನೆಗೆ ಧಾವಿಸುತ್ತಿದ್ದರು. ಇದು ಪ್ರತಿ ದಿನದ ಊಟಕ್ಕೆ ಕುಟುಂಬದ ಎಲ್ಲರೂ ದುಡಿಯಬೇಕಾದ ಪರಿಸ್ಥಿತಿ. ಕೆಲಸ ನಡೆದಷ್ಟೂ ದಿನ ಗಂಡ ಅನವಶ್ಯಕ ರೇಗಿದ್ದು, ಹೆಂಡತಿ ಗಂಡನನ್ನು ಆಡಿಕೊಂಡಿದ್ದು, ಅತ್ತೆ ಹೀಯಾಳಿಸಿದ್ದು ಇಂತಹದ್ದು ಯಾವುದು ನನ್ನ ಗಮನಕ್ಕೆ ಇರಲಿಲ್ಲ. ಅವರಿಗಿದ್ದದ್ದು ಹೊಟ್ಟೆ ತುಂಬಿಸಿಕೊಳ್ಳಲು ಬೇಕಾದ ಕೆಲಸ ಮಾತ್ರ. ಕೆಲಸದಲ್ಲೇ ಅವರ ನೆಮ್ಮದಿ.


ಇದು ಮನೆ ಹೊರಗೆ ಬಿಸಿಲಲ್ಲಿ ದುಡಿಯುವ ಪಾಡಾದರೆ, ಮನೆ ಒಳಗೆ ನೆರಳಲ್ಲಿ ಕುಳಿತು, ಇಂದಿನ ಊಟಕ್ಕೆ ಏನು ಎಂದು ಚಿಂತೆ ಮಾಡುವ ಅವಶ್ಯಕತೆ ಇಲ್ಲದ ನಮ್ಮ ಕುಟುಂಬದಲ್ಲಿ ಮಾತ್ರ ಅಸಮಾಧಾನ. ಗಂಡನಿಗೆ ಚುಚ್ಚಿ ಮಾತನಾಡುವ ಹೆಂಡತಿ, ಇವಳೆದೆಷ್ಟು ಧಿಮಾಕು ಎಂದು ನೋಡುವ ಗಂಡ, ಅವರನ್ನು ನೋಡಿ ಇವರ ಹಣೆಬರಹವೇ ಇಷ್ಟು ಎಂದುಕೊಳ್ಳುವ ಉಳಿದ ಕುಟುಂಬದ ಸದಸ್ಯರು. ಪ್ರತಿ ದಿನ ಬಿಸಿಲಲ್ಲಿ ತುತ್ತಿನ ಚೀಲ ತುಂಬಿಸಿಕೊಳ್ಳಲು ದುಡಿಯುವುದು ಮನೆ ಕಟ್ಟುವವರ ನಿಜವಾದ ಕಷ್ಟಗಳಾದರೆ, ಮನೆ ಮಾಲೀಕರ ಸಮಸ್ಯೆಗಳು ಮಾತ್ರ ಸುಖಕ್ಕೆ ಹುಟ್ಟಿದವು. ಅಲ್ಲಿ ಗಂಡನಿಗೆ ಮನೆ ಇನ್ನು ಚೆನ್ನಾಗಿ ಕಟ್ಟಿಸಬಹುದಿತ್ತು ಎನ್ನುವ ಚಿಂತೆ, ಹೆಂಡತಿಗೆ ಇವನ ಬುದ್ಧಿಯೇ ಸರಿ ಇಲ್ಲ ಎನ್ನುವ ಚಿಂತೆ, ಇವರಿಬ್ಬರು ಏಕೆ ಹೀಗೆ ಆಡುತ್ತಾರೋ ಎನ್ನುವ ಚಿಂತೆ ಅವರ ಮಕ್ಕಳಿಗೆ.


ಹೊಟ್ಟೆ ಹಸಿದಿದ್ದಾಗ ಅಲ್ಲಿರುವುದು ಒಂದೇ ಗಮನ. ಆದರೆ ಹೊಟ್ಟೆ ತುಂಬಿದವರಿಗೆ? ಉಡಲು ಬಟ್ಟೆ ಇಲ್ಲದವರಿಗೆ ಒಂದೇ ಚಿಂತೆ. ನಿಮ್ಮ ಹತ್ತಿರ ಸಾಕಷ್ಟು ಉಡುಪುಗಳಿದ್ದರೆ ಯಾವುದನ್ನು ಯಾವುದಕ್ಕೆ ಮ್ಯಾಚ್ ಮಾಡಿ ಉಟ್ಟುಕೊಳ್ಳುವುದು ಎನ್ನುವ ಚಿಂತೆ. ಬಡವರಿಗೆ ಕತ್ತಲ್ಲಿ ಕರಿಮಣಿ ಸರ ಒಂದೇ ಆಭರಣ ಆದರೆ ಉಳ್ಳವರಿಗೆ ತಮ್ಮ ಹತ್ತಿರ ಬರೀ ಎರಡೇ ನೆಕ್ಕ್ಲೆಸ್ ಇರುವುದಲ್ಲ ಎನ್ನುವ ಚಿಂತೆ. ದುಡಿಯುವವನಿಗೆ ಬಟ್ಟೆ ಕೊಳಕಾಗಿದ್ದರ ಕಡೆಗೆ ಲಕ್ಷವೇ ಇರುವುದಿಲ್ಲ. ಆದರೆ ಮನೆಯೊಳಗೇ ಕನ್ನಡಿಯ ಮುಂದೆ ಬಹು ಹೊತ್ತು ಅಲಂಕಾರ ಮಾಡಿಕೊಂಡು ಹೊರ ಬರುವ ಹೆಂಗಸಿಗೆ ಪೌಡರ್ ಜಾಸ್ತಿ ಆಯಿತೇನೋ ಎನ್ನುವ ಅನುಮಾನ. ಬಡ ಮಕ್ಕಳಿಗೆ ಶಾಲಾ ಪುಸ್ತಕಗಳಿಗೆ ದುಡ್ಡು ಹೊಂದಿಸುವುದೇ ಕಷ್ಟ. ಆದರೆ ಅಂದುಕೊಂಡಿದ್ದಕ್ಕಿಂತ ಸ್ವಲ್ಪ ಕಡಿಮೆ ಮಾರ್ಕ್ಸ್ ಬಂದದ್ದಕ್ಕೆ ಕೊರಗುವ ಅನುಕೂಲಸ್ಥ ಕುಟುಂಬದ ಹುಡುಗರಿಗೆ ಅನಿಸುವುದು ಏನು?


ಅವರವರ ಕಷ್ಟ ಅವರವರಿಗೆ ಎಂದು ನೀವು ಹೇಳಬಹುದು. ಆದರೆ ಗಮನಿಸಿ ನೋಡಿ. ಸಾಕಷ್ಟು ಕಷ್ಟಗಳು ಸುಖಕ್ಕೆ ಹುಟ್ಟಿದ ಕಷ್ಟಗಳು. ನಿಜವಾದ ಕಷ್ಟಗಳನ್ನು ಅರಿತವಿರಿಗೆ ಸುಖಕ್ಕೆ ಹುಟ್ಟಿದ ಕಷ್ಟಗಳು ಬಾಧಿಸುವುದಿಲ್ಲ. ಆದರೆ ಅಂತಹ ಅರಿವು ಮತ್ತು ಅನುಭವ ನಮ್ಮಲ್ಲಿ ಸಾಕಷ್ಟು ಜನರಿಗೆ ಇಲ್ಲ. ಇರುವ ಆಸ್ತಿ ಕಡಿಮೆ ಆಯಿತು ಎಂದು ಕೊರಗುವ ಗಂಡಸು, ಇನ್ನಷ್ಟು ಸೀರೆ ಬೇಕಿತ್ತು ಎಂದು ಬೇಜಾರಾಗುವ ಹೆಂಗಸು ಅವರೆಲ್ಲರೂ ನಿಜ ಕಷ್ಟಗಳಿಂದ ದೂರವೇ ಉಳಿದಿದ್ದಾರೆ. ಅವರಿಗೆ ತಮ್ಮ ಕಷ್ಟಗಳು ಸುಖಕ್ಕೆ ಹುಟ್ಟಿದ ಕಷ್ಟಗಳು ಎನ್ನುವ ತಿಳುವಳಿಕೆಗೆ ಬಂದರೆ ಅವರ ನೋವು ಕಡಿಮೆ ಆಗುತ್ತದೆ. ಆದರೆ ವಿಪರ್ಯಾಸ ನೋಡಿ. ಅವರು ನೋಡುತ್ತಿರುವುದು ಬಡವರನ್ನಲ್ಲ. ತಮಗಿಂತ ಶ್ರೀಮಂತರನ್ನ. ಹಾಗಾಗಿ ಕಷ್ಟಗಳು (ಸುಖಕ್ಕೆ ಹುಟ್ಟಿದವು) ಅವರನ್ನು ಭಾದಿಸುವುದು ಬಿಡುವುದೇ ಇಲ್ಲ. 

Tuesday, May 24, 2022

ನಿರರ್ಥಕತೆಯಲ್ಲೂ ಆಸೆಯ ಹೊಳಪು

ಇಪ್ಪತ್ತು ವರುಷಗಳ ಹಿಂದೆ ತೆರೆ ಕಂಡ 'Cast Away' ಎನ್ನುವ ವಿಶಿಷ್ಟ ಚಿತ್ರ ನೀವು ನೋಡಿರದಿದ್ದರೆ ಅದರ ಕಿರು ಸಾರಾಂಶ ಇಲ್ಲಿ ಕೊಡುತ್ತೇನೆ. ಚಿತ್ರದ ನಾಯಕ ಕಾರ್ಗೋ ಕಂಪನಿ (ಸರಕು ಸಾಗಾಣಿಕೆ ವ್ಯವಹಾರ) ಒಂದಕ್ಕೆ ಕೆಲಸ ಮಾಡುತ್ತಿರುತ್ತಾನೆ. ಅವನಿಗೆ ಒಬ್ಬ ಪ್ರೇಯಸಿ ಇದ್ದಾಳೆ. ಮದುವೆ ಆಗುವ ಆಲೋಚನೆ ಕೂಡ ಅವರಿಬ್ಬರಿಗೆ ಇದೆ. ಆದರೆ ಸಾಮಾನ್ಯ ಎನ್ನಿಸುವ ಅವನ ಜೀವನ ಹಠಾತ್ತನೆ ಬದಲಾಗಿ ಬಿಡುತ್ತದೆ. ಒಂದು ಅವಸರದ ಕೆಲಸದ ಮೇಲೆ ಹೊರ ದೇಶಕ್ಕೆ ಹೋಗಲು ಅವನಿಗೆ ಕರೆ ಬರುತ್ತದೆ. ಪೆಸಿಫಿಕ್ ಸಾಗರದ ಮೇಲೆ ಅವರು ಪ್ರಯಾಣಿಸುತ್ತಿದ್ದ ವಿಮಾನ ತೊಂದರೆಗೀಡಾಗಿ ನೀರಿಗೆ ಬೀಳುತ್ತದೆ. ನಾಯಕನನ್ನು ಬಿಟ್ಟು ವಿಮಾನದಲ್ಲಿ ಇದ್ದ ಉಳಿದವರೆಲ್ಲ ಅಪಘಾತದಲ್ಲಿ ಅಸುನೀಗುತ್ತಾರೆ. ಸಮುದ್ರದ ಅಲೆಗಳು ನಾಯಕನನ್ನು ಒಂದು ನಿರ್ಜನ ದ್ವೀಪಕ್ಕೆ ತಂದು ಸೇರಿಸುತ್ತವೆ. ಗ್ರಾಹಕರಿಗೆ ಮುಟ್ಟಿಸಬೇಕಾದ ಕೆಲ ಪಾರ್ಸೆಲ್ ಗಳು ಕೂಡ ಅವನ ಜೊತೆ ದ್ವೀಪ ಸೇರುತ್ತವೆ. ಕರ್ತವ್ಯ ಪ್ರಜ್ಞೆಯಿಂದ ಅವುಗಳನ್ನು ಸೇರಬೇಕಾದವರಿಗೆ ಮುಟ್ಟಿಸಲು ಎತ್ತಿ ಇಡುತ್ತಾನೆ.


ದ್ವೀಪದ ಮರಳಿನ ಮೇಲೆ ದೊಡ್ಡದಾಗಿ 'HELP' ಎಂದು ಬರೆಯುತ್ತಾನೆ. ದೂರದಲ್ಲಿ ಹೋಗುವ ಹಡಗು, ವಿಮಾನಗಳ ಗಮನ ಸೆಳೆಯಲು ಯತ್ನಿಸುತ್ತಾನೆ. ಯಾವುದೂ ಫಲ ಕಾಣುವುದಿಲ್ಲ. ಬದುಕುವುದಕ್ಕಾಗಿ ಎಳನೀರು ಇಳಿಸುತ್ತಾನೆ. ಮೀನು ಹಿಡಿಯುತ್ತಾನೆ. ಬೆಂಕಿ ಹೊತ್ತಿಸುತ್ತಾನೆ. ಒಂದು ಚೆಂಡಿಗೆ ಕಣ್ಣು, ಮೂಗು ಬಳಿದು ಅದನ್ನೇ ತನ್ನ ಪ್ರೇಯಸಿ ಎಂದುಕೊಂಡು ಮಾತಿಗೆ ಇಳಿಯುತ್ತಾನೆ.  ಅದು ಅವನ ಕಷ್ಟ ಸುಖದ ಏಕೈಕ ಸಂಗಾತಿ.  ಮತ್ತೆ ನಾಡು ಸೇರುವುದಕ್ಕೆ ಇರುವ ಆಶಾ ಕಿರಣ. ನಾಲ್ಕು ವರುಷಗಳು ಹೀಗೆಯೇ ಕಳೆದುಹೋಗುತ್ತವೆ. ಗಡ್ಡ, ಮೀಸೆ ಬೆಳೆದು ಮೈಯೆಲ್ಲಾ ಇಳಿದು ಹೋಗಿ ಗುರುತು ಸಿಗದ ಪರಿಸ್ಥಿತಿ ತಲುಪುತ್ತಾನೆ. ಕೊನೆಗೆ ಒಂದು ತೆಪ್ಪ ಕಟ್ಟಿಕೊಂಡು ಸಮುದ್ರಕ್ಕೆ ಇಳಿಯುತ್ತಾನೆ. ತೇಲುತ್ತ ಸಮುದ್ರ ಮಧ್ಯಕ್ಕೆ ತಲುಪುತ್ತಾನೆ. ದಾರಿಯಲ್ಲಿ ಹೋಗುತ್ತಿದ್ದ ಹಡಗಿನವರು ಅವನನ್ನು ಗಮನಿಸಿ ಮತ್ತೆ ನಾಗರಿಕತೆಗೆ ಕರೆ ತರುತ್ತಾರೆ.


ಅದುವರೆಗೆ ಅವನು ಸತ್ತೇ ಹೋದ ಎಂದುಕೊಂಡಿದ್ದ ಅವನ ಕಂಪನಿಯವರು ಅವನ ಆಗಮನ ಸ್ವಾಗತಿಸಿ ಔತಣ ಕೂಟ ಏರ್ಪಡಿಸುತ್ತಾರೆ. ಮತ್ತೆ ಗೆಳತಿಯನ್ನು ನೋಡಲು ಹೋಗುತ್ತಾನೆ ನಾಯಕ. ಅವಳಿಗೆ ಈಗಾಗಲೇ ಮದುವೆ ಆಗಿ ಮಗು ಕೂಡ ಇದೆ. ಅವನು ಬದುಕಿ ಬರುವುದಕ್ಕೆ ಅವಳೇ ಸ್ಪೂರ್ತಿ ಎಂದು ಹೇಳುತ್ತಾನೆ. ಮನಸ್ಸಿನ ಮೂಲೆಯಲ್ಲಿ ಅವನು ಸತ್ತಿಲ್ಲ ಎನ್ನುವುದು ಅವಳಿಗೆ ತಿಳಿದಿತ್ತು ಎಂದು ಅವಳು ಕೂಡ ಹೇಳುತ್ತಾಳೆ. ಆದರೆ ಅಸಹಾಯಕ ಪರಿಸ್ಥಿತಿ. ಅವನ ವಾಹನವನ್ನು ಅವನಿಗೆ ಮರಳಿಸಿ ಬೀಳ್ಕೊಡುತ್ತಾಳೆ ಅವನ ಗೆಳತಿ. 


ದ್ವೀಪದಲ್ಲಿ ತನ್ನ ಜೊತೆಗಿದ್ದ ಪಾರ್ಸೆಲ್ ಅನ್ನು ಅದರ ಮಾಲೀಕರಿಗೆ ಮುಟ್ಟಿಸಲು ಹೊರಡುತ್ತಾನೆ ನಾಯಕ. ಅದನ್ನು ಮುಟ್ಟಿಸುವಾಗ 'ಇದು ನನ್ನ ಜೀವ ಉಳಿಸಿತು' ಎನ್ನುವ ಚೀಟಿ ಬರೆದಿಡುತ್ತಾನೆ. ವಾಪಸ್ಸು ಬರುವಾಗ ನಾಲ್ಕು ದಾರಿ ಸಂಧಿಸುವ ಜಾಗದಲ್ಲಿ ಎಲ್ಲಿಗೆ ಹೋಗುವುದು ಎಂದು ತಿಳಿಯದೆ ತನ್ನ ಗಾಡಿಯನ್ನು ನಿಲ್ಲಿಸುತ್ತಾನೆ. ದಾರಿಯಲ್ಲಿ ಹೋಗುವ ಒಬ್ಬ ಹೆಣ್ಣು ಮಗಳು ಅವನಿಗೆ ದಾರಿ ತಪ್ಪಿದೆಯಾ ಎಂದು ವಿಚಾರಿಸುತ್ತಾಳೆ. ನಾಲ್ಕು ದಾರಿಗಳು ಎಲ್ಲಿಗೆ ಹೋಗುತ್ತವೆ ಎನ್ನುವ ವಿವರ ನೀಡಿ ಹೊರಡುತ್ತಾಳೆ. ಅವನು ತಂದ ಪಾರ್ಸೆಲ್ ಮೇಲಿದ್ದ ದೇವತೆಗಳ ರೆಕ್ಕೆಯ ಚಿತ್ರ ಅವಳ ಟ್ರಕ್ ಹಿಂಬದಿಯಲ್ಲಿ ಕೂಡ ಬರೆದಿರುತ್ತದೆ.


ಈ ಚಿತ್ರದ ನಾಯಕ Tom Hanks ಅವರ ಅಭಿನಯ ಅಮೋಘ. ಈ ಚಿತ್ರವನ್ನು ಹಲವಾರು ಬಾರಿ ನೋಡಿದ್ದೇನೆ. ಪ್ರತಿ ಸಲವೂ ಹಿಂದೆ ಗೊತ್ತಾಗಿರದ ಹೊಸ ಆಯಾಮಗಳು ಗೊತ್ತಾಗಿವೆ. ಎಂತಹ ಕಷ್ಟದ ಪರಿಸ್ಥಿತಿಯಲ್ಲಿ ಕೂಡ ಮನುಷ್ಯ ಬದುಕುವುದಕ್ಕೆ, ತನ್ನವರನ್ನು ಸೇರಿಕೊಳ್ಳುವುದಕ್ಕೆ ಪ್ರಯಾಸ ಪಡುತ್ತಾನಲ್ಲವೇ? ಅವನಲ್ಲಿ ಯಾವುದೊ ಒಂದು ಬದುಕುವ ಆಸೆ ಹುಟ್ಟಿಸುತ್ತಿರುತ್ತದೆ. ಆದರೆ ಬದುಕಿ ಬಂದ ಮೇಲೆ ಅವನ ಆಸೆಗೆ ಯಾವುದೇ ಅರ್ಥ ಉಳಿದಿಲ್ಲವಾದರೆ ಅವನು ಏನು ಮಾಡುತ್ತಾನೆ? ಅದು ಈ ಚಿತ್ರದಲ್ಲಿ ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಇದು ಹಲವಾರು ನಿಜ ಘಟನೆಗಳಿಂದ ಪ್ರೇರೇಪಣೆ ಪಡೆದ ಚಿತ್ರ. ವಾಸ್ತವ ಚಿತ್ರಗಳಿಗಿಂತ ಘೋರವಾಗಿರುತ್ತದೆ ಎನ್ನುವ ಅಂದಾಜು ಹುಟ್ಟಿಸುವ ಚಿತ್ರ.


ಯಾವಾಗಲೋ ಒಮ್ಮೆ ಈ ಚಿತ್ರ ನೆನಪಿಗೆ ಬರುತ್ತದೆ. ಅದರಲ್ಲಿ ನಾಯಕನ ಜೀವನ ಉತ್ಸಾಹ, ಅವನು ಪಡುವ ಶ್ರಮ, ಆದರೆ ಅವನು ಸತ್ತು ಹೋಗಿದ್ದಾನೆ ಎಂದು ತನ್ನ ಪಾಡಿಗೆ ತಾನು ಸಾಗುವ ಸಮಾಜ, ವಾಪಸ್ಸು ಬಂದ ಮೇಲೆ ಅವನಿಗೆ ಉಂಟಾಗುವ ನಿರಾಸೆ. ಮುಂದೆ ಏನು ಮಾಡಬೇಕು ಎಂದು ತೋಚದ ಪರಿಸ್ಥಿತಿ. ಬದುಕಿನ ನಿರರ್ಥಕತೆಯಲ್ಲೂ ಮತ್ತೆ ಆಸೆಯ ಹೊಳಪು. ಎಲ್ಲವೂ ಮತ್ತೆ ಕಣ್ಮುಂದೆ ಬಂದು ಹೋಗುತ್ತವೆ.


ಆ ಚಿತ್ರದ ಕೊನೆಯ ದೃಶ್ಯದ ಲಿಂಕ್ ಇಲ್ಲಿದೆ ನೋಡಿ: https://www.youtube.com/watch?v=4aM1DjtaeF8



Monday, May 23, 2022

ಇಲ್ಲಿ ತಲೆಗಳು ಶಾಶ್ವತ ಅಲ್ಲ, ಕಿರೀಟ ಮಾತ್ರ ಶಾಶ್ವತ

ಸಂದೇಹವೇ ಬೇಡ. ಇದು KGF ಚಿತ್ರದ ಸಂಭಾಷಣೆ. ಇದು ಕೇವಲ ಚಿತ್ರಕ್ಕೆ ಅನ್ವಯಿಸುವುದಷ್ಟೇ  ಅಲ್ಲ, ಚಿತ್ರರಂಗಕ್ಕೂ ಅನ್ವಯಿಸುತ್ತದೆ. ಹಿಂದೆ ಬಾಕ್ಸ್ ಆಫೀಸ್ ಅಲ್ಲಿ ದಾಖಲೆಗಳನ್ನು ಮಾಡಿದ್ದ ನಾಯಕರುಗಳೇ ಬೇರೆ. ಸ್ಥಾನಕ್ಕೆ ಈಗ ಬೇರೆಯವರು ಬಂದು ಕುಳಿತಾಗಿದೆ. ಮತ್ತು ಮಾತು ಬರೀ ಚಿತ್ರರಂಗ ಆಳುವುದಕ್ಕೆ ಮಾತ್ರ ಸೀಮಿತ ಎಲ್ಲಿ ಆಗುತ್ತದೆ? ಕಿರೀಟಗಳು ಎಲ್ಲಿ ಎಲ್ಲಿ ಇವೆಯೋ ಅಲ್ಲೆಲ್ಲ ಕೂಡ. ಹಿಂದೆ ಉತ್ತರ ಭಾರತವನ್ನಾಳಿದ ಚಂದ್ರಗುಪ್ತ ಮೌರ್ಯನ ಕಿರೀಟ ಅವನ ಮಗನ, ಮೊಮ್ಮಗನ ತಲೆ ಅಲಂಕರಿಸಿತು. ಕೊನೆಗೆ ಶತ್ರುಗಳ ಪಾಲಾಯಿತು. ವಿಜಯನಗರ ಸಾಮ್ರಾಜ್ಯದಲ್ಲಿ, ಮೂರು ಬೇರೆ ವಂಶಗಳಿಗೆ ಸೇರಿದ ೨೧ ರಾಜರ ತಲೆ ಅಲಂಕರಿಸಿದ ಕಿರೀಟ ಕೊನೆಗೆ ಮಣ್ಣು ಪಾಲಾಯಿತು. KGF  ಚಿತ್ರದ ಸಂಭಾಷಣೆಯಂತೆ ಚದುರಂಗದಾಟದಲ್ಲಿ ಸೈನಿಕ, ಮಂತ್ರಿ, ರಾಜ ಎಲ್ಲ ಸತ್ತು ಹೋದ ಮೇಲೆ ಮತ್ತೆ ಹೊಸ ಆಟ ಶುರು. ಆಗ ಹೊಸ ರಾಜ, ಹೊಸ ಮಂತ್ರಿ, ಹೊಸ ಸೈನಿಕ.

 

ಕಿರೀಟಕ್ಕಿಂತ ಹೆಚ್ಚಿನ ಮರ್ಯಾದೆ ಇದ್ದ ತಲೆಗಳು ಅಪರೂಪ. ಮನುಷ್ಯನಿಗಿಂತ ಸ್ಥಾನಕ್ಕೆ ಇಲ್ಲಿ ಹೆಚ್ಚಿನ ಬೆಲೆ. ಹಾಗಾಗಿ ಕಿರೀಟಕ್ಕೆ ಇದ್ದ ಮರ್ಯಾದೆ ತಲೆಗೆ ಇಲ್ಲ. ಅದಕ್ಕೆ ನೋಡಿ ಕಿರೀಟದ ಮೇಲೆ ಹಲವಾರು ತಲೆಗಳ ಕಣ್ಣು. ಅವರು ತಲೆ ಮೇಲೆ ಕಿರೀಟ ಏರಿಸಿಕೊಳ್ಳುವುದಕ್ಕೆ ಯಾವುದೇ ಅಪಾಯ ಎದುರಿಸಲು ತಯ್ಯಾರು. ಹಾಗಾಗಿ KGF ಚಿತ್ರದಲ್ಲಿ ನಡೆಯುವುದು ನಿಜ ಜೀವನದ ನಾಟಕೀಯ ರೂಪ ಮಾತ್ರ. ಸಾವಿರಾರು ವರುಷಗಳ ಹಿಂದೆ ಬುಡಕಟ್ಟು ಜನಾಂಗಗಳಲ್ಲಿ ನಾಯಕನ ಸ್ಥಾನಕ್ಕೆ ಪೈಪೋಟಿ ಏರ್ಪಡುತ್ತಿತ್ತು. ಬಲಶಾಲಿಗಳು ಕಿರೀಟ ಏರಿಸಿಕೊಂಡರೆ, ಸೋತವರೆಲ್ಲ ಮಣ್ಣು ಸೇರುತ್ತಿದ್ದರು. ಮುಂದೆ ರಾಜ ಮಹಾರಾಜರ ಕಥೆ ಏನು ಬೇರಲ್ಲ. ಸೈನಿಕರ ಸಂಖ್ಯೆ ಜಾಸ್ತಿ ಅಷ್ಟೇ. ಇಂದಿನ ಚುನಾವಣಾ ರಾಜಕೀಯಗಳು ರಕ್ತದ ಹೊಳೆ ಬದಲು ಹಣದ, ಹೆಂಡದ ಹೊಳೆ ಹರಿಸುತ್ತಾರೆ. ಉಪಾಯದಿಂದ ಅಪಾಯವನ್ನು ಎದುರಿಸುತ್ತಾರೆ. ಆದರೆ ಅದರ ಹಿಂದಿನ ಉದ್ದೇಶ ಮಾತ್ರ ಹಳೆಯದೇ. ಕಿರೀಟ.

 

KGF ಚಿತ್ರದ ಅಭೂತಪೂರ್ವ ಯಶಸ್ಸು ಮನುಷ್ಯ ಬದಲಾಗಿಲ್ಲ ಎನ್ನುವುದನ್ನು ಸಾರಿ ಹೇಳುತ್ತದೆ. ಎಲ್ಲ ಮನುಷ್ಯನ ಅಂತರಂಗದಲ್ಲಿ ಕಿರೀಟ ಏರಿಸಿಕೊಳ್ಳುವ ಆಸೆ ಅಡಗಿರುತ್ತದೆ. ಚಿತ್ರದ ನಾಯಕ ರಾಕಿಯಲ್ಲಿ ಅವರು ತಮ್ಮಅಂತರಂಗವನ್ನೇ ಕಾಣುತ್ತಾರೆ. ರಾಕಿ ಮನ ಮುಟ್ಟುವ ಸಂಭಾಷಣೆ ಹೇಳಿದಾಗ ಶಿಳ್ಳೆ, ಚಪ್ಪಾಳೆಗಳು ಸಂದದ್ದು ಯಾರಿಗೆ ಎಂದುಕೊಂಡಿರಿ? ತೆರೆಯ ಮೇಲೆ ಗಣಿ ಕಾರ್ಮಿಕರ ಪ್ರತಿನಿಧಿಯಾಗುವ ರಾಕಿ, ತೆರೆಯ ಮುಂದೆ ಕುಳಿತಿರುವ ಪ್ರೇಕ್ಷಕರ ಪ್ರತಿನಿಧಿಯಾಗುವ ಜವಾಬ್ದಾರಿಯನ್ನು ಕೂಡ ದಕ್ಷತೆಯಿಂದ ನಿಭಾಯಿಸಿಬಿಡುತ್ತಾನೆ. ಚಿತ್ರ ದೊಡ್ಡ ಮಟ್ಟದಲ್ಲಿ ಗೆಲ್ಲುತ್ತದೆ. ಗೆಲ್ಲಿಸಿದ್ದು ಪ್ರೇಕ್ಷಕರು. ಅವರು ಗೆಲ್ಲಿಸಿದ ಕಾರಣ, ರಾಕಿಯಲ್ಲಿ ತಮ್ಮನ್ನು ತಾವೇ ಕಂಡುಕೊಂಡದ್ದಕ್ಕೆ

 

ಭಾಗ ರಲ್ಲಿದ ರಾಕಿ ತಾಯಿಯ ಸಂಭಾಷಣೆ 'ಗುಂಪು ಕಟ್ಟಿ ಹೊಡೆಯೋಕೆ ಹೋಗಿದ್ದೆನೋ? ಒಬ್ಬನೇ ಹೋಗಿ ಹೊಡೆದು ಬಾ" ಎನ್ನುವ ಮಾತು ಪ್ರೇಕ್ಷಕರು ಒಪ್ಪಿಕೊಂಡುಬಿಡುತ್ತಾರೆ. ಮತ್ತು ಭಾಗ ರಲ್ಲಿ ಚಿಕ್ಕ ಮಗ ತನ್ನ ತಾಯಿಗೆ ಹೇಳುವ 'ಭೂಮಿ ಮೇಲೆ ಇರುವ ಬಂಗಾರ ಎಲ್ಲ ನಿನಗೆ ತಂದು ಕೊಡುತ್ತೇನೆ' ಎನ್ನುವ ಸಂಭಾಷಣೆ ಮೆಚ್ಚಿಕೊಂಡುಬಿಡುತ್ತಾರೆ. ಅಂತರಂಗದ ಆಸೆಗಳ ಮುಂದೆ ವಿವೇಚನೆ ಎಲ್ಲಿ ನಿಲ್ಲಲು ಸಾಧ್ಯ? ಮನುಷ್ಯ ಯಾವತ್ತಿಗೂ ಬದುಕಿದ್ದು ಹಾಗೇನೇ. ರೀತಿ-ನೀತಿಗಳನ್ನು ತನ್ನ ಅವಶ್ಯಕತೆಗೆ ತಕ್ಕಂತೆ ಬದಲಾಯಿಸಿಕೊಳ್ಳುತ್ತಾನೆ. ಆಸೆಗಳ ಸಾಕಾರಕ್ಕಾಗಿ ಅಪಾಯಗಳಿಗೆ ಎದೆಯೊಡ್ಡುತ್ತ ಹೋಗುತ್ತಾನೆ.  ಅವನ ಆಸೆಗಳ ತುತ್ತ ತುದಿಯಲ್ಲಿರುವುದು ಕಿರೀಟ. ಅದಕ್ಕೆ ಇಲ್ಲಿ ತಲೆಗಳು ಶಾಶ್ವತ ಅಲ್ಲ, ಕಿರೀಟ ಮಾತ್ರ ಶಾಶ್ವತ.