Thursday, May 19, 2022

Movie Review: Lunana: A Yak in the Classroom

ಭೂತಾನ್ ದೇಶದ ರಾಜಧಾನಿಯಾದ ಥಿಂಫು ವಿನಲ್ಲಿ ವಾಸಿಸುವ ಒಬ್ಬ ಯುವಕ. ಆಗ ತಾನೇ ಶಿಕ್ಷಕ ತರಬೇತಿಯನ್ನು ಮುಗಿಸಿರುತ್ತಾನೆ. ಆದರೆ ಅವನಿಗೆ ಹಾಡುಗಾರನಾಗುವ ಮತ್ತು ಅದನ್ನೇ ವೃತ್ತಿಯಾಗಿಸಿಕೊಂಡು ಆಸ್ಟ್ರೇಲಿಯಾ ಗೆ ಹೋಗುವ ಆಸೆ. ಅವನ ಇಷ್ಟಕ್ಕೆ ವಿರುದ್ಧವಾಗಿ ಅವನಿಗೆ 'ಲುನಾನಾ' ಎನ್ನುವ ಹಿಮಾಲಯ ಪರ್ವತ ಶ್ರೇಣಿಯ ಹಳ್ಳಿಯೊಂದಕ್ಕೆ ಶಿಕ್ಷಕನಾಗಿ ಹೋಗುವುದಕ್ಕೆ ಹೇಳಲಾಗುತ್ತದೆ. ಅವನು ಒಲ್ಲದ ಮನಸ್ಸಿನಿಂದಲೇ ಹೊರಡುತ್ತಾನೆ. ಬಸ್ ಪ್ರಯಾಣ ಮುಗಿದ ಮೇಲೆ ಕಾಲು ದಾರಿಯಲ್ಲಿ ಎರಡು ದಿನದ ಹಾದಿ ಆ ಹಳ್ಳಿಗೆ. ಅವನಿಗೆ ಸಹಾಯವಾಗಲೆಂದು ಇಬ್ಬರು ಆ ಹಳ್ಳಿಯ ಜೊತೆಗಾರರು. ಪ್ರಯಾಸ ಪಟ್ಟು ಆಧುನಿಕ ಸೌಲಭ್ಯಗಳು ಯಾವೂ ಇಲ್ಲದ ಆ ಹಳ್ಳಿಗೆ ಅವನು ತಲುಪುತ್ತಾನೆ. ಆ ಹಳ್ಳಿಯ ಶಾಲೆಯಲ್ಲಿ ಭೋದಿಸಲು ಕಪ್ಪು ಹಲಗೆ ಕೂಡ ಇರದದ್ದು ನೋಡಿ ಅವನಿಗೆ ಭ್ರಮ ನಿರಸನ ಆಗುತ್ತದೆ. ಆದರೆ ಅವನಿಗೆ ಸ್ವಾಗತ ಕೋರಲು ಹಳ್ಳಿಯವರೆಲ್ಲ ಒಟ್ಟಿಗೆ ಸೇರಿರುತ್ತಾರೆ. ಆ ಹಳ್ಳಿಯ ಪ್ರಕೃತಿಯ ರಮ್ಯ ರಮಣೀಯ ಸೌಂದರ್ಯ ಅಕ್ಷರಗಳಲ್ಲಿ ವರ್ಣಿಸಲು ಅಸಾಧ್ಯ. ಆದರೆ ಅವ್ಯಾವು ಅವನ ಮೇಲೆ ಪ್ರಭಾವ ಬೀರುವುದಿಲ್ಲ. ಅವನು ಆದಷ್ಟು ಬೇಗ ಅಲ್ಲಿಂದ ವಾಪಸ್ಸು ಹೊರಡಲು ನಿರ್ಧರಿಸುತ್ತಾನೆ.


ಮರುದಿನ ಬೆಳಿಗ್ಗೆ ಅವನಿಗೆ ಪುಟಾಣಿ ವಿದ್ಯಾರ್ಥಿಯೊಬ್ಬಳು ಬಂದು ಎಬ್ಬಿಸುತ್ತಾಳೆ. ಅಲ್ಲಿರುವ ಸ್ವಲ್ಪೇ ಜನ ವಿದ್ಯಾರ್ಥಿಗಳ ಕಲಿಕಾ ಆಸಕ್ತಿಯನ್ನು ಕಂಡು ಅವನಿಗೆ ಆಶ್ಚರ್ಯ ಆಗುತ್ತದೆ. ಇರುವಷ್ಟು ದಿನ ಪ್ರಾಮಾಣಿಕ ಪ್ರಯತ್ನ ಮಾಡುವ ನಿರ್ಧಾರ ಮಾಡುತ್ತಾನೆ. ಅಲ್ಲಿರುವ ಜನ ಅವನನ್ನು ತಮ್ಮ ಉದ್ಧಾರಕ್ಕೆಂದೇ ಬಂದಿರುವ ಮನುಷ್ಯ ಎಂದು ನೋಡುವುದು ಅವನ ಗಮನಕ್ಕೆ ಬರುತ್ತದೆ. ಅಡಿಗೆಗೆ ಬೆಂಕಿ ಹೊತ್ತಿಸಲು ಒಣಗಿದ ಸೆಗಣಿ ಹುಡುಕಿಕೊಂಡು ಅಲೆಯುವ ಅವನಿಗೆ ತೊಂದರೆಯಾಗದಂತೆ ಮಾಡಲು ಒಂದು ಯಾಕ್ (ಹಿಮಾಲಯ ಪ್ರದೇಶದ ಎಮ್ಮೆ) ತಂದು ಶಾಲೆಯಲ್ಲಿ ಕಟ್ಟುತ್ತಾರೆ. ಇದ್ದಿಲನ್ನು ಶಾಲೆಯ ಒಂದು ಗೋಡೆಗೆ ಬಳಿದು ಕಪ್ಪು ಹಲಗೆಯನ್ನಾಗಿ ಮಾಡುತ್ತಾನೆ ಚಿತ್ರ ನಾಯಕ. ಸ್ನೇಹಿತರಿಗೆ ಪತ್ರ ಬರೆದು ಶಾಲೆಗೇ ಬೇಕಾದ ಕಲಿಕಾ ಸಾಮಗ್ರಿಯನ್ನು ತರಿಸಿಕೊಳ್ಳುತ್ತಾನೆ. ಮಕ್ಕಳ ಕಲಿಕೆ ಭರದಿಂದ ಸಾಗುತ್ತದೆ. ಇತ್ತ ನಾಯಕನಿಗೆ ಒಬ್ಬ ಹಾಡುಗಾರ್ತಿಯ ಪರಿಚಯ ಆಗುತ್ತದೆ. (ಚಿತ್ರಕ್ಕೆ ನಾಯಕಿಯು ಕೂಡ ಬೇಕಲ್ಲವೇ?). ಅವಳು ಅವನಿಗೆ ತನ್ನ ಹಾಡು ಕಲಿಸುತ್ತ ನಾಯಕನಿಗೆ ಆ ಹಳ್ಳಿಯ ವಾಸ ಬರೀ ಸಹನೀಯ ಅಷ್ಟೇ ಇಲ್ಲ, ಇಷ್ಟ ಕೂಡ ಆಗುವಂತೆ ಮಾಡುತ್ತಾಳೆ.


ಕೆಲ ತಿಂಗಳು ಕಳೆದು ಚಳಿಗಾಲ ಆರಂಭ. ಮಂಜು ಬಿದ್ದು ಹಳ್ಳಿಯ ದಾರಿ ಮುಚ್ಚಿ ಹೋಗುವ ಸಮಯ ಬಂದು ಬಿಡುತ್ತದೆ. ನಾಯಕ ತನ್ನ ಊರಿಗೆ ಮರಳಿ ಮತ್ತೆ ಬೇಸಿಗೆಯಲ್ಲಿ ಮರಳುವಂತೆ ಊರಿನವರೆಲ್ಲ ಅವನಿಗೆ ಕೋರಿಕೊಳ್ಳುತ್ತಾರೆ. ನಾಯಕಿ ಕೂಡ ಭಾರವಾದ ಹೃದಯದಿಂದ ಅವನಿಗೆ ವಿದಾಯ ಹೇಳುತ್ತಾಳೆ. ಆದರೆ ಅವನಿಗೆ ಅಷ್ಟರಲ್ಲೇ ಆಸ್ಟ್ರೇಲಿಯಾ ದೇಶದ ವೀಸಾ ಕೈ ಸೇರಿರುತ್ತದೆ.


ಮುಂದಿನ ಸನ್ನಿವೇಶದಲ್ಲಿ ನಾಯಕ ಆಸ್ಟ್ರೇಲಿಯಾ ದೇಶದ ರೆಸ್ಟೋರೆಂಟ್ ಒಂದರಲ್ಲಿ ತನ್ನ ಗಿಟಾರ್ ಬಾರಿಸುತ್ತ ಹಾಡುತ್ತಿರುತ್ತಾನೆ. ಆದರೆ ಅಲ್ಲಿರುವ ಯಾರಿಗೂ ಅವನ ಮೇಲೆ ಗಮನವೇ ಇರುವುದಿಲ್ಲ. ನಾಯಕ ಇಂಗ್ಲಿಷ್ ಹಾಡು ನಿಲ್ಲಿಸಿ ಲುನಾನಾ ಹಳ್ಳಿಯಲ್ಲಿ ಕಲಿತಿದ್ದ ಹಾಡು ಹಾಡಲು ಆರಂಭಿಸುತ್ತಾನೆ.


ಭೂತಾನ್ ದೇಶದ ಈ ಚಿತ್ರ ಅಂತರರಾಷ್ಟ್ರೀಯ ಮಟ್ಟದ ಗಮನ ಸೆಳೆದಿದೆ. ಪ್ರಕೃತಿ ಸೊಬಗೇ ಮೈ  ತಳೆದಂತಿರುವ ಆ ಹಳ್ಳಿಯ ನಿಸರ್ಗ ಸಂಪತ್ತು ಮತ್ತು 'ಶಿಕ್ಷಕ ಭವಿಷ್ಯ ನಿರ್ಧರಿಸುತ್ತಾನೆ' ಎನ್ನುವ ಸಂಭಾಷಣೆ ಗಮನ ಸೆಳೆಯುತ್ತವೆ.

(Lunana: A Yak in the Classroom is avialable on Amazon Prime)


No comments:

Post a Comment