ಸಂದೇಹವೇ ಬೇಡ. ಇದು KGF ೨ ಚಿತ್ರದ ಸಂಭಾಷಣೆ. ಇದು ಕೇವಲ ಆ ಚಿತ್ರಕ್ಕೆ ಅನ್ವಯಿಸುವುದಷ್ಟೇ ಅಲ್ಲ, ಚಿತ್ರರಂಗಕ್ಕೂ ಅನ್ವಯಿಸುತ್ತದೆ. ಈ ಹಿಂದೆ ಬಾಕ್ಸ್ ಆಫೀಸ್ ಅಲ್ಲಿ ದಾಖಲೆಗಳನ್ನು ಮಾಡಿದ್ದ ನಾಯಕರುಗಳೇ ಬೇರೆ. ಆ ಸ್ಥಾನಕ್ಕೆ ಈಗ ಬೇರೆಯವರು ಬಂದು ಕುಳಿತಾಗಿದೆ. ಮತ್ತು ಈ ಮಾತು ಬರೀ ಚಿತ್ರರಂಗ ಆಳುವುದಕ್ಕೆ ಮಾತ್ರ ಸೀಮಿತ ಎಲ್ಲಿ ಆಗುತ್ತದೆ? ಕಿರೀಟಗಳು ಎಲ್ಲಿ ಎಲ್ಲಿ ಇವೆಯೋ ಅಲ್ಲೆಲ್ಲ ಕೂಡ. ಹಿಂದೆ ಉತ್ತರ ಭಾರತವನ್ನಾಳಿದ ಚಂದ್ರಗುಪ್ತ ಮೌರ್ಯನ ಕಿರೀಟ ಅವನ ಮಗನ, ಮೊಮ್ಮಗನ ತಲೆ ಅಲಂಕರಿಸಿತು. ಕೊನೆಗೆ ಶತ್ರುಗಳ ಪಾಲಾಯಿತು. ವಿಜಯನಗರ ಸಾಮ್ರಾಜ್ಯದಲ್ಲಿ, ಮೂರು ಬೇರೆ ವಂಶಗಳಿಗೆ ಸೇರಿದ ೨೧ ರಾಜರ ತಲೆ ಅಲಂಕರಿಸಿದ ಕಿರೀಟ ಕೊನೆಗೆ ಮಣ್ಣು ಪಾಲಾಯಿತು. KGF ಚಿತ್ರದ ಸಂಭಾಷಣೆಯಂತೆ ಚದುರಂಗದಾಟದಲ್ಲಿ ಸೈನಿಕ, ಮಂತ್ರಿ, ರಾಜ ಎಲ್ಲ ಸತ್ತು ಹೋದ ಮೇಲೆ ಮತ್ತೆ ಹೊಸ ಆಟ ಶುರು. ಆಗ ಹೊಸ ರಾಜ, ಹೊಸ ಮಂತ್ರಿ, ಹೊಸ ಸೈನಿಕ.
ಕಿರೀಟಕ್ಕಿಂತ ಹೆಚ್ಚಿನ ಮರ್ಯಾದೆ ಇದ್ದ ತಲೆಗಳು ಅಪರೂಪ. ಮನುಷ್ಯನಿಗಿಂತ ಸ್ಥಾನಕ್ಕೆ ಇಲ್ಲಿ ಹೆಚ್ಚಿನ ಬೆಲೆ. ಹಾಗಾಗಿ ಕಿರೀಟಕ್ಕೆ ಇದ್ದ ಮರ್ಯಾದೆ ತಲೆಗೆ ಇಲ್ಲ. ಅದಕ್ಕೆ ನೋಡಿ ಕಿರೀಟದ ಮೇಲೆ ಹಲವಾರು ತಲೆಗಳ ಕಣ್ಣು. ಅವರು ತಲೆ ಮೇಲೆ ಕಿರೀಟ ಏರಿಸಿಕೊಳ್ಳುವುದಕ್ಕೆ ಯಾವುದೇ ಅಪಾಯ ಎದುರಿಸಲು ತಯ್ಯಾರು. ಹಾಗಾಗಿ KGF ಚಿತ್ರದಲ್ಲಿ ನಡೆಯುವುದು ನಿಜ ಜೀವನದ ನಾಟಕೀಯ ರೂಪ ಮಾತ್ರ. ಸಾವಿರಾರು ವರುಷಗಳ ಹಿಂದೆ ಬುಡಕಟ್ಟು ಜನಾಂಗಗಳಲ್ಲಿ ನಾಯಕನ ಸ್ಥಾನಕ್ಕೆ ಪೈಪೋಟಿ ಏರ್ಪಡುತ್ತಿತ್ತು. ಬಲಶಾಲಿಗಳು ಕಿರೀಟ ಏರಿಸಿಕೊಂಡರೆ, ಸೋತವರೆಲ್ಲ ಮಣ್ಣು ಸೇರುತ್ತಿದ್ದರು. ಮುಂದೆ ರಾಜ ಮಹಾರಾಜರ ಕಥೆ ಏನು ಬೇರಲ್ಲ. ಸೈನಿಕರ ಸಂಖ್ಯೆ ಜಾಸ್ತಿ ಅಷ್ಟೇ. ಇಂದಿನ ಚುನಾವಣಾ ರಾಜಕೀಯಗಳು ರಕ್ತದ ಹೊಳೆ ಬದಲು ಹಣದ, ಹೆಂಡದ ಹೊಳೆ ಹರಿಸುತ್ತಾರೆ. ಉಪಾಯದಿಂದ ಅಪಾಯವನ್ನು ಎದುರಿಸುತ್ತಾರೆ. ಆದರೆ ಅದರ ಹಿಂದಿನ ಉದ್ದೇಶ ಮಾತ್ರ ಹಳೆಯದೇ. ಕಿರೀಟ.
KGF ಚಿತ್ರದ ಅಭೂತಪೂರ್ವ ಯಶಸ್ಸು ಮನುಷ್ಯ ಬದಲಾಗಿಲ್ಲ ಎನ್ನುವುದನ್ನು ಸಾರಿ ಹೇಳುತ್ತದೆ. ಎಲ್ಲ ಮನುಷ್ಯನ ಅಂತರಂಗದಲ್ಲಿ ಕಿರೀಟ ಏರಿಸಿಕೊಳ್ಳುವ ಆಸೆ ಅಡಗಿರುತ್ತದೆ. ಚಿತ್ರದ ನಾಯಕ ರಾಕಿಯಲ್ಲಿ ಅವರು ತಮ್ಮಅಂತರಂಗವನ್ನೇ ಕಾಣುತ್ತಾರೆ. ರಾಕಿ ಮನ ಮುಟ್ಟುವ ಸಂಭಾಷಣೆ ಹೇಳಿದಾಗ ಶಿಳ್ಳೆ, ಚಪ್ಪಾಳೆಗಳು ಸಂದದ್ದು ಯಾರಿಗೆ ಎಂದುಕೊಂಡಿರಿ? ತೆರೆಯ ಮೇಲೆ ಗಣಿ ಕಾರ್ಮಿಕರ ಪ್ರತಿನಿಧಿಯಾಗುವ ರಾಕಿ, ತೆರೆಯ ಮುಂದೆ ಕುಳಿತಿರುವ ಪ್ರೇಕ್ಷಕರ ಪ್ರತಿನಿಧಿಯಾಗುವ ಜವಾಬ್ದಾರಿಯನ್ನು ಕೂಡ ದಕ್ಷತೆಯಿಂದ ನಿಭಾಯಿಸಿಬಿಡುತ್ತಾನೆ. ಚಿತ್ರ ದೊಡ್ಡ ಮಟ್ಟದಲ್ಲಿ ಗೆಲ್ಲುತ್ತದೆ. ಗೆಲ್ಲಿಸಿದ್ದು ಪ್ರೇಕ್ಷಕರು. ಅವರು ಗೆಲ್ಲಿಸಿದ ಕಾರಣ, ರಾಕಿಯಲ್ಲಿ ತಮ್ಮನ್ನು ತಾವೇ ಕಂಡುಕೊಂಡದ್ದಕ್ಕೆ.
ಭಾಗ ೧ ರಲ್ಲಿದ ರಾಕಿ ತಾಯಿಯ ಸಂಭಾಷಣೆ 'ಗುಂಪು ಕಟ್ಟಿ ಹೊಡೆಯೋಕೆ ಹೋಗಿದ್ದೆನೋ? ಒಬ್ಬನೇ ಹೋಗಿ ಹೊಡೆದು ಬಾ" ಎನ್ನುವ ಮಾತು ಪ್ರೇಕ್ಷಕರು ಒಪ್ಪಿಕೊಂಡುಬಿಡುತ್ತಾರೆ. ಮತ್ತು ಭಾಗ ೨ ರಲ್ಲಿ ಚಿಕ್ಕ ಮಗ ತನ್ನ ತಾಯಿಗೆ ಹೇಳುವ 'ಭೂಮಿ ಮೇಲೆ ಇರುವ ಬಂಗಾರ ಎಲ್ಲ ನಿನಗೆ ತಂದು ಕೊಡುತ್ತೇನೆ' ಎನ್ನುವ ಸಂಭಾಷಣೆ ಮೆಚ್ಚಿಕೊಂಡುಬಿಡುತ್ತಾರೆ. ಅಂತರಂಗದ ಆಸೆಗಳ ಮುಂದೆ ವಿವೇಚನೆ ಎಲ್ಲಿ ನಿಲ್ಲಲು ಸಾಧ್ಯ? ಮನುಷ್ಯ ಯಾವತ್ತಿಗೂ ಬದುಕಿದ್ದು ಹಾಗೇನೇ. ರೀತಿ-ನೀತಿಗಳನ್ನು ತನ್ನ ಅವಶ್ಯಕತೆಗೆ ತಕ್ಕಂತೆ ಬದಲಾಯಿಸಿಕೊಳ್ಳುತ್ತಾನೆ. ಆಸೆಗಳ ಸಾಕಾರಕ್ಕಾಗಿ ಅಪಾಯಗಳಿಗೆ ಎದೆಯೊಡ್ಡುತ್ತ ಹೋಗುತ್ತಾನೆ. ಅವನ ಆಸೆಗಳ ತುತ್ತ ತುದಿಯಲ್ಲಿರುವುದು ಕಿರೀಟ. ಅದಕ್ಕೆ ಇಲ್ಲಿ ತಲೆಗಳು ಶಾಶ್ವತ ಅಲ್ಲ, ಕಿರೀಟ ಮಾತ್ರ ಶಾಶ್ವತ.
No comments:
Post a Comment