Tuesday, May 24, 2022

ನಿರರ್ಥಕತೆಯಲ್ಲೂ ಆಸೆಯ ಹೊಳಪು

ಇಪ್ಪತ್ತು ವರುಷಗಳ ಹಿಂದೆ ತೆರೆ ಕಂಡ 'Cast Away' ಎನ್ನುವ ವಿಶಿಷ್ಟ ಚಿತ್ರ ನೀವು ನೋಡಿರದಿದ್ದರೆ ಅದರ ಕಿರು ಸಾರಾಂಶ ಇಲ್ಲಿ ಕೊಡುತ್ತೇನೆ. ಚಿತ್ರದ ನಾಯಕ ಕಾರ್ಗೋ ಕಂಪನಿ (ಸರಕು ಸಾಗಾಣಿಕೆ ವ್ಯವಹಾರ) ಒಂದಕ್ಕೆ ಕೆಲಸ ಮಾಡುತ್ತಿರುತ್ತಾನೆ. ಅವನಿಗೆ ಒಬ್ಬ ಪ್ರೇಯಸಿ ಇದ್ದಾಳೆ. ಮದುವೆ ಆಗುವ ಆಲೋಚನೆ ಕೂಡ ಅವರಿಬ್ಬರಿಗೆ ಇದೆ. ಆದರೆ ಸಾಮಾನ್ಯ ಎನ್ನಿಸುವ ಅವನ ಜೀವನ ಹಠಾತ್ತನೆ ಬದಲಾಗಿ ಬಿಡುತ್ತದೆ. ಒಂದು ಅವಸರದ ಕೆಲಸದ ಮೇಲೆ ಹೊರ ದೇಶಕ್ಕೆ ಹೋಗಲು ಅವನಿಗೆ ಕರೆ ಬರುತ್ತದೆ. ಪೆಸಿಫಿಕ್ ಸಾಗರದ ಮೇಲೆ ಅವರು ಪ್ರಯಾಣಿಸುತ್ತಿದ್ದ ವಿಮಾನ ತೊಂದರೆಗೀಡಾಗಿ ನೀರಿಗೆ ಬೀಳುತ್ತದೆ. ನಾಯಕನನ್ನು ಬಿಟ್ಟು ವಿಮಾನದಲ್ಲಿ ಇದ್ದ ಉಳಿದವರೆಲ್ಲ ಅಪಘಾತದಲ್ಲಿ ಅಸುನೀಗುತ್ತಾರೆ. ಸಮುದ್ರದ ಅಲೆಗಳು ನಾಯಕನನ್ನು ಒಂದು ನಿರ್ಜನ ದ್ವೀಪಕ್ಕೆ ತಂದು ಸೇರಿಸುತ್ತವೆ. ಗ್ರಾಹಕರಿಗೆ ಮುಟ್ಟಿಸಬೇಕಾದ ಕೆಲ ಪಾರ್ಸೆಲ್ ಗಳು ಕೂಡ ಅವನ ಜೊತೆ ದ್ವೀಪ ಸೇರುತ್ತವೆ. ಕರ್ತವ್ಯ ಪ್ರಜ್ಞೆಯಿಂದ ಅವುಗಳನ್ನು ಸೇರಬೇಕಾದವರಿಗೆ ಮುಟ್ಟಿಸಲು ಎತ್ತಿ ಇಡುತ್ತಾನೆ.


ದ್ವೀಪದ ಮರಳಿನ ಮೇಲೆ ದೊಡ್ಡದಾಗಿ 'HELP' ಎಂದು ಬರೆಯುತ್ತಾನೆ. ದೂರದಲ್ಲಿ ಹೋಗುವ ಹಡಗು, ವಿಮಾನಗಳ ಗಮನ ಸೆಳೆಯಲು ಯತ್ನಿಸುತ್ತಾನೆ. ಯಾವುದೂ ಫಲ ಕಾಣುವುದಿಲ್ಲ. ಬದುಕುವುದಕ್ಕಾಗಿ ಎಳನೀರು ಇಳಿಸುತ್ತಾನೆ. ಮೀನು ಹಿಡಿಯುತ್ತಾನೆ. ಬೆಂಕಿ ಹೊತ್ತಿಸುತ್ತಾನೆ. ಒಂದು ಚೆಂಡಿಗೆ ಕಣ್ಣು, ಮೂಗು ಬಳಿದು ಅದನ್ನೇ ತನ್ನ ಪ್ರೇಯಸಿ ಎಂದುಕೊಂಡು ಮಾತಿಗೆ ಇಳಿಯುತ್ತಾನೆ.  ಅದು ಅವನ ಕಷ್ಟ ಸುಖದ ಏಕೈಕ ಸಂಗಾತಿ.  ಮತ್ತೆ ನಾಡು ಸೇರುವುದಕ್ಕೆ ಇರುವ ಆಶಾ ಕಿರಣ. ನಾಲ್ಕು ವರುಷಗಳು ಹೀಗೆಯೇ ಕಳೆದುಹೋಗುತ್ತವೆ. ಗಡ್ಡ, ಮೀಸೆ ಬೆಳೆದು ಮೈಯೆಲ್ಲಾ ಇಳಿದು ಹೋಗಿ ಗುರುತು ಸಿಗದ ಪರಿಸ್ಥಿತಿ ತಲುಪುತ್ತಾನೆ. ಕೊನೆಗೆ ಒಂದು ತೆಪ್ಪ ಕಟ್ಟಿಕೊಂಡು ಸಮುದ್ರಕ್ಕೆ ಇಳಿಯುತ್ತಾನೆ. ತೇಲುತ್ತ ಸಮುದ್ರ ಮಧ್ಯಕ್ಕೆ ತಲುಪುತ್ತಾನೆ. ದಾರಿಯಲ್ಲಿ ಹೋಗುತ್ತಿದ್ದ ಹಡಗಿನವರು ಅವನನ್ನು ಗಮನಿಸಿ ಮತ್ತೆ ನಾಗರಿಕತೆಗೆ ಕರೆ ತರುತ್ತಾರೆ.


ಅದುವರೆಗೆ ಅವನು ಸತ್ತೇ ಹೋದ ಎಂದುಕೊಂಡಿದ್ದ ಅವನ ಕಂಪನಿಯವರು ಅವನ ಆಗಮನ ಸ್ವಾಗತಿಸಿ ಔತಣ ಕೂಟ ಏರ್ಪಡಿಸುತ್ತಾರೆ. ಮತ್ತೆ ಗೆಳತಿಯನ್ನು ನೋಡಲು ಹೋಗುತ್ತಾನೆ ನಾಯಕ. ಅವಳಿಗೆ ಈಗಾಗಲೇ ಮದುವೆ ಆಗಿ ಮಗು ಕೂಡ ಇದೆ. ಅವನು ಬದುಕಿ ಬರುವುದಕ್ಕೆ ಅವಳೇ ಸ್ಪೂರ್ತಿ ಎಂದು ಹೇಳುತ್ತಾನೆ. ಮನಸ್ಸಿನ ಮೂಲೆಯಲ್ಲಿ ಅವನು ಸತ್ತಿಲ್ಲ ಎನ್ನುವುದು ಅವಳಿಗೆ ತಿಳಿದಿತ್ತು ಎಂದು ಅವಳು ಕೂಡ ಹೇಳುತ್ತಾಳೆ. ಆದರೆ ಅಸಹಾಯಕ ಪರಿಸ್ಥಿತಿ. ಅವನ ವಾಹನವನ್ನು ಅವನಿಗೆ ಮರಳಿಸಿ ಬೀಳ್ಕೊಡುತ್ತಾಳೆ ಅವನ ಗೆಳತಿ. 


ದ್ವೀಪದಲ್ಲಿ ತನ್ನ ಜೊತೆಗಿದ್ದ ಪಾರ್ಸೆಲ್ ಅನ್ನು ಅದರ ಮಾಲೀಕರಿಗೆ ಮುಟ್ಟಿಸಲು ಹೊರಡುತ್ತಾನೆ ನಾಯಕ. ಅದನ್ನು ಮುಟ್ಟಿಸುವಾಗ 'ಇದು ನನ್ನ ಜೀವ ಉಳಿಸಿತು' ಎನ್ನುವ ಚೀಟಿ ಬರೆದಿಡುತ್ತಾನೆ. ವಾಪಸ್ಸು ಬರುವಾಗ ನಾಲ್ಕು ದಾರಿ ಸಂಧಿಸುವ ಜಾಗದಲ್ಲಿ ಎಲ್ಲಿಗೆ ಹೋಗುವುದು ಎಂದು ತಿಳಿಯದೆ ತನ್ನ ಗಾಡಿಯನ್ನು ನಿಲ್ಲಿಸುತ್ತಾನೆ. ದಾರಿಯಲ್ಲಿ ಹೋಗುವ ಒಬ್ಬ ಹೆಣ್ಣು ಮಗಳು ಅವನಿಗೆ ದಾರಿ ತಪ್ಪಿದೆಯಾ ಎಂದು ವಿಚಾರಿಸುತ್ತಾಳೆ. ನಾಲ್ಕು ದಾರಿಗಳು ಎಲ್ಲಿಗೆ ಹೋಗುತ್ತವೆ ಎನ್ನುವ ವಿವರ ನೀಡಿ ಹೊರಡುತ್ತಾಳೆ. ಅವನು ತಂದ ಪಾರ್ಸೆಲ್ ಮೇಲಿದ್ದ ದೇವತೆಗಳ ರೆಕ್ಕೆಯ ಚಿತ್ರ ಅವಳ ಟ್ರಕ್ ಹಿಂಬದಿಯಲ್ಲಿ ಕೂಡ ಬರೆದಿರುತ್ತದೆ.


ಈ ಚಿತ್ರದ ನಾಯಕ Tom Hanks ಅವರ ಅಭಿನಯ ಅಮೋಘ. ಈ ಚಿತ್ರವನ್ನು ಹಲವಾರು ಬಾರಿ ನೋಡಿದ್ದೇನೆ. ಪ್ರತಿ ಸಲವೂ ಹಿಂದೆ ಗೊತ್ತಾಗಿರದ ಹೊಸ ಆಯಾಮಗಳು ಗೊತ್ತಾಗಿವೆ. ಎಂತಹ ಕಷ್ಟದ ಪರಿಸ್ಥಿತಿಯಲ್ಲಿ ಕೂಡ ಮನುಷ್ಯ ಬದುಕುವುದಕ್ಕೆ, ತನ್ನವರನ್ನು ಸೇರಿಕೊಳ್ಳುವುದಕ್ಕೆ ಪ್ರಯಾಸ ಪಡುತ್ತಾನಲ್ಲವೇ? ಅವನಲ್ಲಿ ಯಾವುದೊ ಒಂದು ಬದುಕುವ ಆಸೆ ಹುಟ್ಟಿಸುತ್ತಿರುತ್ತದೆ. ಆದರೆ ಬದುಕಿ ಬಂದ ಮೇಲೆ ಅವನ ಆಸೆಗೆ ಯಾವುದೇ ಅರ್ಥ ಉಳಿದಿಲ್ಲವಾದರೆ ಅವನು ಏನು ಮಾಡುತ್ತಾನೆ? ಅದು ಈ ಚಿತ್ರದಲ್ಲಿ ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಇದು ಹಲವಾರು ನಿಜ ಘಟನೆಗಳಿಂದ ಪ್ರೇರೇಪಣೆ ಪಡೆದ ಚಿತ್ರ. ವಾಸ್ತವ ಚಿತ್ರಗಳಿಗಿಂತ ಘೋರವಾಗಿರುತ್ತದೆ ಎನ್ನುವ ಅಂದಾಜು ಹುಟ್ಟಿಸುವ ಚಿತ್ರ.


ಯಾವಾಗಲೋ ಒಮ್ಮೆ ಈ ಚಿತ್ರ ನೆನಪಿಗೆ ಬರುತ್ತದೆ. ಅದರಲ್ಲಿ ನಾಯಕನ ಜೀವನ ಉತ್ಸಾಹ, ಅವನು ಪಡುವ ಶ್ರಮ, ಆದರೆ ಅವನು ಸತ್ತು ಹೋಗಿದ್ದಾನೆ ಎಂದು ತನ್ನ ಪಾಡಿಗೆ ತಾನು ಸಾಗುವ ಸಮಾಜ, ವಾಪಸ್ಸು ಬಂದ ಮೇಲೆ ಅವನಿಗೆ ಉಂಟಾಗುವ ನಿರಾಸೆ. ಮುಂದೆ ಏನು ಮಾಡಬೇಕು ಎಂದು ತೋಚದ ಪರಿಸ್ಥಿತಿ. ಬದುಕಿನ ನಿರರ್ಥಕತೆಯಲ್ಲೂ ಮತ್ತೆ ಆಸೆಯ ಹೊಳಪು. ಎಲ್ಲವೂ ಮತ್ತೆ ಕಣ್ಮುಂದೆ ಬಂದು ಹೋಗುತ್ತವೆ.


ಆ ಚಿತ್ರದ ಕೊನೆಯ ದೃಶ್ಯದ ಲಿಂಕ್ ಇಲ್ಲಿದೆ ನೋಡಿ: https://www.youtube.com/watch?v=4aM1DjtaeF8



No comments:

Post a Comment