Wednesday, May 11, 2022

ಬದುಕೇ ಹಸಿರು ಪ್ರೀತಿ ಬೆರೆತಾಗ

ಬೆಂಗಳೂರಿನ ಆನಂದ್ ರಾವ್ ಸರ್ಕಲ್ ಗೆ ನಾನು ವರ್ಷಕ್ಕೆ ನಾಲ್ಕೈದು ಬಾರಿಯಾದರೂ ಬರುತ್ತೇನೆ. ಕಳೆದ ಇಪ್ಪತ್ತು ವರುಷಗಳಿಂದ ಬರುತ್ತಲೇ ಇದ್ದೇನೆ. ಇಲ್ಲಿಂದಲೇ ನಾನು ಊರಿಗೆ ಹೊರಡುವ ಬಸ್ಸನ್ನು ಏರುವುದು. ಇಲ್ಲಿಯ ಅನುಭವದ ಬಗ್ಗೆ ಹಿಂದೆ 'ಮೆಜೆಸ್ಟಿಕ್ ಎಂಬ ಮಾಯಾವಿ ಲೋಕ' ಎನ್ನುವ ಕಿರು ಲೇಖನ ಬರೆದಿದ್ದೆ. ಮತ್ತೆ ಇಂದು ಬರೆಯದೆ ಇರುವುದು ಆಗುತ್ತಿಲ್ಲ.


ಎರಡು ದಶಕಗಳ ಹಿಂದೆ ಇದ್ದ ಜನ ಜಂಗುಳಿ ಈಗಲೂ ಇದೆ. ಆದರೆ ಹಲವಾರು ರಸ್ತೆಗಳು ಏಖ ಮುಖವಾಗಿ ಬದಲಾಗಿವೆ. ಮಳೆಗಾಲದಲ್ಲಿ ಹಿಂದೆ ರಸ್ತೆಗಳು ಕೆಸರಿನ ಕೊಚ್ಛೆಯಾದಂತೆ ಈಗ ಆಗುವುದಿಲ್ಲ. ಏಕೆಂದರೆ ಈಗ ಅವು ಕಾಂಕ್ರೀಟ್ ರಸ್ತೆಗಳು. ಹತ್ತು ಹೆಜ್ಜೆಗೆ ಒಂದರಂತೆ ಇದ್ದೆ ಚಿತ್ರ ಮಂದಿರಗಳು ಈಗ ಉಳಿದಿಲ್ಲ. ಹಲವಾರು ಶಾಪಿಂಗ್ ಕಾಂಪ್ಲೆಕ್ಸ್ ಆಗಿ ಬದಲಾಗಿವೆ. ಬದಲಾಗಿದ್ದು ನಾವು. ಮೆಜೆಸ್ಟಿಕ್ ಅನ್ನು ಬದಲು ಮಾಡಿದ್ದು ನಾವು. ಆದರೂ ಮೆಜೆಸ್ಟಿಕ್ ಬದಲಾಯಿಸಿದೆ ಎಂದು ಹೇಳಿಕೊಂಡು ಓಡಾಡುತ್ತೇವೆ.


ಮತ್ತೆ ಬಸ್ ಏರಲು ಈ ದಿನ ರಾತ್ರಿ ಇಲ್ಲಿಗೆ ನಾನು ಬಂದಿದ್ದೇನೆ. ಹೊಸದಾಗಿ ಎನ್ನುವಂತೆ ಫುಟ್ ಪಾತ್  ನಲ್ಲಿ ಒಬ್ಬ ಲೌಡ್ ಸ್ಪೀಕರ್ ಇಟ್ಟುಕೊಂಡು ಹಾಡುತ್ತಿದ್ದಾನೆ.


"ಬದುಕೇ ಹಸಿರು ಪ್ರೀತಿ ಬೆರೆತಾಗ,

ವಿಷದ ಮುಳ್ಳಂತೆ ಸೇಡು ಸಿಡಿದಾಗ"


ಅದು ಅಣ್ಣಾವ್ರು 'ನಂಜುಂಡಿ ಕಲ್ಯಾಣ' ಚಿತ್ರಕ್ಕೆ ಹಾಡಿದ ಹಾಡು. ಹಳೆಯ ಕಾಲದಲ್ಲಿ ಬದುಕುವುದು ನಾನೊಬ್ಬನೇ ಅಲ್ಲ ಎನ್ನುವುದು ಅರಿವಾಯಿತು. ಹಾಡುಗಾರನನ್ನೇ ದಿಟ್ಟಿಸಿ ನೋಡಿದೆ. ಅವನು ಕಣ್ಣು ಮುಚ್ಚಿಕೊಂಡು ಹಾಡುತ್ತಿದ್ದ. ನಿರಾಳವಾಗಿ ಹತ್ತಿರದ ಉಡುಪಿ ಹೋಟೆಲ್ ಗೆ ಎರಡು ಇಡ್ಲಿ ತಿನ್ನಲು ಸೇರಿದೆ. ಹೊರಗೆ ಬರುವಷ್ಟರಲ್ಲಿ ಹಾಡು ಬದಲಾಗಿತ್ತು.


"ತ್ಯಾಗಕ್ಕೆ ಫಲವುಂಟು,

ನಿನಗೊಂದು ಬೆಲೆಯುಂಟು"


'ಕರ್ಣ' ಚಿತ್ರದಲ್ಲಿ ವಿಷ್ಣುವರ್ಧನ್ ಅವರು ಪಟ್ಟ ನೋವಿಗಿಂತ ಹೆಚ್ಚಿನ ಸಂಕಟದಲ್ಲಿ ಹಾಡುಗಾರ ಹಾಡುತ್ತಿದ್ದ. ಸಂತೋಷದ ಹಾಡು ಬೇಸರವಾಗುವುದಕ್ಕೆ ಮುಂಚೆ 175 ಬಾರಿ ಕೇಳಬಹುದು ಆದರೆ ನೋವಿನ ಹಾಡು 850 ಕ್ಕೂ ಹೆಚ್ಚು ಬಾರಿ ಕೇಳಬಹುದು ಎಂದು ಓದಿದ್ದು ನೆನಪಾಯಿತು. ೮೦ ರ ದಶಕದ ಹಾಡುಗಳು, ಚಿತ್ರಗಳೇ ಹಾಗಿದ್ದವು. ರೀತಿ, ನೀತಿ, ಸಮಾಜ ಪ್ರಜ್ಞೆಗಳನ್ನು ಎತ್ತಿ ಹಿಡಿಯುತ್ತಿದ್ದವು. ಆದರೆ ಕಾಲ ಬದಲಾಗದೆ ಇರುತ್ತದೆಯೇ? 'ಅಪ್ಪ ಲೂಸಾ, ಅಮ್ಮ ಲೂಸಾ?' ಎನ್ನುವ ಹಾಡು ಇಲ್ಲಿ ಕೇಳದೆ ಇರುವುದು ಪುಣ್ಯ ಎಂದುಕೊಂಡೆ. ಇಷ್ಟಕ್ಕೂ ಅಂತಹ ಹಾಡು ಇಷ್ಟ ಪಡುವವರು ಬ್ರಿಗೇಡ್ ರಸ್ತೆಯ ಪಬ್ ಗಳಲ್ಲಿ, ಊರಾಚೆಯ ರೆಸಾರ್ಟ್ ಗಳಲ್ಲಿ ಕಳೆದು ಹೋಗಿರುತ್ತಾರೆ. ಬೆಂಗಳೂರಿನ ಶ್ರೀಮಂತರು ಮೆಜೆಸ್ಟಿಕ್ ಗೆ ಬರುವುದೇ ಇಲ್ಲ. ತಮ್ಮ ಐಷಾರಾಮಿ ಕಾರುಗಳಲ್ಲಿ ರಿಂಗ್ ರೋಡ್ ಬಳಸಿ ಊರ ಹೊರಗೆ ತಲುಪಿ ಬಿಡುತ್ತಾರೆ. ಇಲ್ಲಿಗೆ ಬರುವವರು ಮಧ್ಯಮ ಮತ್ತು ಬಡ ಜನರು ಮಾತ್ರ. ಇಲ್ಲಿ ಕೋರಮಂಗಲ, ವೈಟ್ ಫೀಲ್ಡ್ ಪ್ರದೇಶಗಳ ಬೆಲೆ ಇಲ್ಲ. ಹಾಗೆ ನೋಡಿದರೆ ಇಂದಿಗೆ ಮೆಜೆಸ್ಟಿಕ್  ಸಂಪರ್ಕ ಕೇಂದ್ರ ಮಾತ್ರ. ಆರ್ಥಿಕ ವ್ಯವಸ್ಥೆ ಈ ಪ್ರದೇಶ ಬಿಟ್ಟು ದೂರ ಹೋಗಿ ಬಹಳ ಸಮಯವೇ ಕಳೆದಿದೆ. ಆದರೆ ಬಡ ಮತ್ತು ಮಧ್ಯಮ ವರ್ಗದವರೇ ಚಲನ ಚಿತ್ರಗಳನ್ನು ಗೆಲ್ಲಿಸುವುದು. ಅಣ್ಣಾವ್ರು ಕಾಲದ 'ನಾಲ್ಕಾಣೆ ಪ್ರಭು' ಇಂದು ನೂರಿನ್ನೂರು ಖರ್ಚು ಮಾಡುವ ದೊರೆ. ಈ ಜನರೇ ಚುನಾವಣೆಗಳ ಭವಿಷ್ಯ ಕೂಡ ನಿರ್ಧರಿಸುವುದು.


ಸುತ್ತಲಿನ ಜನರನ್ನು ಗಮನಿಸಲು ತೊಡಗಿದೆ. ಅವರೆಲ್ಲ ತಮ್ಮ ತಮ್ಮ ಲೋಕದಲ್ಲೇ ಕಳೆದು ಹೋಗಿದ್ದರು. ಜಮಖಂಡಿ, ಗಂಗಾವತಿ, ಬೈಲಹೊಂಗಲ, ಊರು ಯಾವುದಾದರೇನಂತೆ?  ಎಲ್ಲ ಊರುಗಳಿಗೂ ಇಲ್ಲಿಂದ ಬಸ್ ಉಂಟು. VRL , SRS , ಸುಗಮ ಬಸ್ ಗಳು ಆರಂಭವಾಗುವುದು ಇಲ್ಲಿಂದಲೇ. ಇಡೀ ಕರ್ನಾಟಕದ ಮಧ್ಯಮ ವರ್ಗದ ಜನರನ್ನು ಇಲ್ಲಿ ಸಣ್ಣ ಸ್ಥಳದಲ್ಲೇ ಒಟ್ಟಾಗಿ ನೋಡಬಹುದು.


ಹಾಡು ಮತ್ತೆ ಬದಲಾಯಿತು.


"ಮಳೆ ನಿಂತು ಹೋದ ಮೇಲೆ,

ಹನಿಯೊಂದು ಜಾರಿದೆ


ಹೇಳುವುದು ಏನೋ ಉಳಿದು ಹೋಗಿದೆ

ಹೇಳಲಿ ಹೇಗೆ ತಿಳಿಯದಾಗಿದೆ"


ಮನುಷ್ಯ ಎಷ್ಟು ನೋವನ್ನು ಬೇಕಾದರೂ ಸಹಿಸಿಯಾನು ಆದರೆ ಹೇಳುವುದನ್ನು ಹೇಳದೆ ಹೋಗಲಾರ. ಅದ್ಭುತ ಹಾಡುಗಳು, ಸಂಗೀತ, ಕಥೆ, ಕಾದಂಬರಿ ಗಳು ಹುಟ್ಟಿದ್ದು ಈ ಭಾವದಿಂದಲೇ. ಹೇಳಬೇಕಾದ್ದು ಹೇಳುವುದು ಆಗದೆ ಹೋದರೆ ಮನುಷ್ಯ ಕಥೆ ಕಟ್ಟುತ್ತಾನೆ. ನಾಟಕ ಹೂಡುತ್ತಾನೆ. ಅಲ್ಲಿಂದಲೇ ಅವನ ಸಮಸ್ಯೆಗಳ ಆರಂಭ.


ಕ್ಷಮಿಸಿ, ನಾನು ಹೊರಡುವ ಬಸ್ ಬಂದಾಗಿದೆ. ಮತ್ತೆ ಸಿಗೋಣ. ಶುಭ ರಾತ್ರಿ!

No comments:

Post a Comment