ಇಂದಿಗೆ ವಿಜಯನಗರ ಹೊಸ ಜಿಲ್ಲೆಯಾಗಿದೆ. ಆದರೆ ಐದು ಶತಮಾನಗಳ ಹಿಂದೆ ಇದು ಒಂದು ಸಾಮ್ರಾಜ್ಯವಾಗಿತ್ತಲ್ಲವೇ? ಮುತ್ತು ರತ್ನಗಳನ್ನು ಬೀದಿಯಲ್ಲಿ ವ್ಯಾಪಾರ ಮಾಡಿದ ಅಲ್ಲಿನ ಜನರು ಇಂದಿಗೆ ಹಿಂದುಳಿದ ಜಿಲ್ಲೆಗಳ ಜನರಾಗಿ ಪರಿವರ್ತತವಾದದ್ದು ಹೇಗೆ? ಹಂಪಿಯು ಭಾರತಕ್ಕೆ ಅಷ್ಟ ಅಲ್ಲ, ಬದಲಿಗೆ ಆವತ್ತಿನ ಕಾಲದಲ್ಲಿ ವಿಶ್ವದ ಪ್ರಮುಖ ನಗರಗಳಲ್ಲಿ ಒಂದಾಗಿತ್ತು. ಸಾಕಷ್ಟು ವಿದೇಶಿ ಪ್ರವಾಸಿಗರು ಹಂಪೆಯನ್ನು ರೋಮ್ ಗೆ ಹೋಲಿಸಿ ಕೊಂಡಾಡಿದ್ದರು. ಅಲ್ಲಿ ಆಡಳಿತ ಇದ್ದದ್ದು ಯಾವುದೊ ಸಣ್ಣ ಸಾಮಂತ ಅಥವಾ ಪಾಳೇಗಾರನದ್ದೋ ಅಲ್ಲವಲ್ಲ. ದಕ್ಷಿಣ ಭಾರತದ ಕೇಂದ್ರ ಬಿಂದು ಎನ್ನುವಂತೆ ೨೩೦ ವರ್ಷಗಳ ಕಾಲ ಗುರುತಿಸಿಕೊಂಡ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿ ಹಾಳು ಬೀಳುವಂತೆ ಮಾಡಿದ, ಮತ್ತೆ ಯಾವುದೇ ಕಾರಣಕ್ಕೆ ಪುನರುಜ್ಜಿವಿತಗೊಳ್ಳದಂತೆ ತಡೆದ ಕಾರಣಗಳು ಏನು? ಲಕ್ಷಾಂತರ ಜನ ಬದುಕಿದ ಒಂದು ಪಟ್ಟಣ ದುರಾದಷ್ಟದ ಹಣೆ ಪಟ್ಟಿ ಕಟ್ಟಿಕೊಂಡು ನೇಪಥ್ಯಕ್ಕೆ ಸರಿದು ಹೋದದ್ದು ಏಕೆ?
ದೆಹಲಿಯ ಚರಿತ್ರೆ ಗಮನಿಸಿ ನೋಡಿ. ಅಲ್ಲಿ ಸಾಕಷ್ಟು ರಾಜವಂಶಗಳು ಅಧಿಕಾರ ನಡೆಸಿ ಹೋಗಿವೆ. ಕೆಲವು ಹಿಂದೂ, ಕೆಲವು ಮುಸ್ಲಿಂ, ಆಮೇಲೆ ಬ್ರಿಟಿಷರು. ಆದರೂ ದೆಹಲಿ ಸ್ವತಂತ್ರ ಭಾರತದ ರಾಜಧಾನಿಯಾಗಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿದೆ. ಎಷ್ಟು ಬಾರಿ ಆಕ್ರಮಣಕ್ಕೊಳಗಾದರೂ ಮತ್ತೆ ಎದ್ದು ನಿಂತಿದೆ. ಅಥವಾ ಕಾಶಿ ಪಟ್ಟಣವನ್ನು ಗಮನಿಸಿ ನೋಡಿ. ಪುರಾತನ ಕಾಲದ ಈ ಪಟ್ಟಣ ಅಂದಿಗೂ, ಇಂದಿಗೂ ತನ್ನ ಇರುವಿಕೆಯನ್ನು ಮತ್ತು ಸ್ವಂತಿಕೆಯನ್ನು, ಕಾಲಾತೀತವೆನ್ನುವಂತೆ ಉಳಿಸಿಕೊಂಡು ಬಂದಿದೆ. ಬಹು ಜನ ಬದುಕಿದ್ದ ಪಟ್ಟಣಗಳೆಲ್ಲವೂ ತಮ್ಮ ವೈಭವವನ್ನು ಕಳೆದುಕೊಂಡರೂ ಜನರ ವಾಸಕ್ಕೆ ದೂರ ಎನ್ನುವಂತೆ ಮರೆಯಾಗಿ ಹೋಗಲಿಲ್ಲ.
ಆದರೆ ನಮ್ಮ ಹಂಪಿಯನ್ನೇ ನೋಡಿ, ಅದು ಇಂದಿಗೆ ಕರ್ನಾಟಕದ ಅಥವಾ ಆಂಧ್ರ ಪ್ರದೇಶದ ರಾಜಧಾನಿಯಾಗಿ ಬದಲಾಗಬೇಕಿತ್ತು. ಅದಿಲ್ಲದಿದ್ದರೆ, ಒಂದು ಜಿಲ್ಲಾ ಕೇಂದ್ರವೋ ಅಥವಾ ಒಂದು ದೊಡ್ಡ ಪಟ್ಟಣವೋ ಆಗಬೇಕಿತ್ತು. ಅವ್ಯಾವವೂ ಆಗಲಿಲ್ಲ. ೧೫೬೫ ರಲ್ಲಿ ಹಂಪಿಯನ್ನು ತೊರೆದ ಸಾಕಷ್ಟು ಜನ ಆಶ್ರಯಿಸಿದ್ದು, ಹೊಸ ಊರನ್ನು ಕಟ್ಟಿಕೊಂಡಿದ್ದು ಹತ್ತಿರದ ಹೊಸಪೇಟೆಯಲ್ಲಿ. ಆದರೆ ಒಂದು ಸಾಮ್ರಾಜ್ಯವನ್ನು ಕಟ್ಟಬಲ್ಲ ಮತ್ತು ಅದನ್ನು ಯಶಸ್ವಿಯಾಗಿ ನಡೆಸಿಕೊಂಡು ಹೋಗಬಲ್ಲ ಚಾತುರ್ಯ ಮತ್ತು ನೈಪುಣ್ಯತೆ ಇದ್ದ ಜನರು ಈ ಪ್ರದೇಶವನ್ನು ಶಾಶ್ವತವಾಗಿ ಎನ್ನುವಂತೆ ತೊರೆದು ಹೋದರು. ಏಕೆಂದರೆ ಅವರನ್ನು ಹಿಡಿದಿಡುವ ಶಕ್ತಿ ವಿಜಯನಗರ ಸಾಮ್ರಾಜ್ಯದ ಅವನತಿಯೊಂದಿಗೆ ಮುಗಿದು ಹೋಗಿತ್ತು. ಯುದ್ಧ ಗೆದ್ದವರಿಗೂ, ಹಂಪಿಯನ್ನು ಹಾಳುಗೆಡುವುದರಲ್ಲಿ ಇದ್ದ ಉತ್ಸಾಹ ಅದನ್ನು ಕಾಪಾಡಿ ತಮ್ಮ ಆಳ್ವಿಕೆಗೆ ಒಳಪಡಿಸಿಕೊಳ್ಳುವದರ ಬಗ್ಗೆ ಇರಲಿಲ್ಲ. ಹಂಪಿಯು ಅವರ ಕಣ್ಣನ್ನು ಶತಮಾನಗಳ ಕಾಲ ಕುಕ್ಕಿತ್ತಲ್ಲ. ವೈಭವದ ಉತ್ತುಂಗ ಹೆಚ್ಚಿನ ಶತ್ರುಗಳನ್ನು ಸೃಷ್ಟಿ ಮಾಡುವುದು ಸಾಮಾನ್ಯ ವಿಷಯ ತಾನೇ? ಯುದ್ಧ ಸೋತ ಸುದ್ದಿ ತಲುಪಿದ ತಕ್ಷಣ, ರಾಮರಾಯನ ತಮ್ಮಂದಿರು, ವಂಶಸ್ಥರು ಸಾಧ್ಯವಾದಷ್ಟು ಸಂಪತ್ತನ್ನು ಆನೆಗಳ ಮೇಲೆ ಹೇರಿಕೊಂಡು ಪೆನುಗೊಂಡಗೆ ಸಾಗಿದರು. ಹಂಪಿಯ ರಕ್ಷಣೆ ವಿರೂಪಾಕ್ಷನ ಪಾಲಿಗೆ ಬಿತ್ತು. ಮೊದಲಿಗೆ ಸುತ್ತ ಮುತ್ತಲಿನ ಕಳ್ಳ-ಕಾಕರೇ ಹಂಪಿಯನ್ನು ದೋಚಿದರು. ನಂತರದ ದಿನಗಳು ಹಂಪಿಯ ಚರಿತೆಯಲ್ಲಿ ಕರಾಳ ದಿನಗಳು. ಆಗ ನಡೆದ ದೌರ್ಜನ್ಯದ ಭೀಕರತೆಗೆ ಸಾಕ್ಷಿಯಾಗಿ ಇಂದಿಗೂ ಭಗ್ನ ಅವಶೇಷಗಳು ನಿಂತಿವೆ. ತುಂಗಭದ್ರೆಯು ಹಂಪೆಯ ಎಲ್ಲ ರಕ್ತದ ಕಲೆಗಳನ್ನು ತೊಳೆದು ಹಾಕಿದರೂ, ಜನರ ಭೀತಿ ಮರೆಯಾಗಿ ಹೋಗಲೇ ಇಲ್ಲ. ಯಾರಿಗೂ ಬೇಡವಾಗಿ ಹೋದ ಹಂಪೆಯನ್ನು ಮತ್ತಷ್ಟು ಹಾಳುಗೆಡವಿದ್ದು ಕಾಲನ ಮಹಿಮೆ.
ಕಳೆದು ಹೋದ ಗತ ವೈಭವದ ಬಗ್ಗೆ ಮಾತನಾಡುವ ನಾವು, ವಿಜಯನಗರದ ಅರಸರಿಗೆ ಸಾಧ್ಯವಾಗಿದ್ದು ಅವರ ನಂತರದ ಸಮಾಜಕ್ಕೆ ಏಕೆ ಸಾಧ್ಯವಾಗಲಿಲ್ಲ ಎಂದು ಯೋಚಿಸುವುದಿಲ್ಲ. ಮುತ್ತು ರತ್ನ ಬೀದಿಗಳಲ್ಲಿ ಮಾರಿ ವೈಭವದ ತುದಿ ತಲುಪಿದ ಕೀರ್ತಿ ಅಂದಿನ ಅರಸರದಾದರೆ, ಅದೇ ಪ್ರದೇಶದ ಮಣ್ಣನ್ನು ವಿದೇಶಗಳಿಗೆ ಮಾರಿಕೊಳ್ಳುವ ಅಪಕೀರ್ತಿ ನಮ್ಮ ಇಂದಿನ ಸಮಾಜದ್ದು ಎನ್ನುವುದೇ ದುರಾದೃಷ್ಟ.
Picture Credit: Shivashankar Banagar |
No comments:
Post a Comment