ಗಾನಕೆ ನಲಿಯದ ಮನಸೇ ಇಲ್ಲ,
ಗಾನಕೆ ಮಣಿಯದ ಜೀವವೇ ಇಲ್ಲ,
ಗಾನಕೆ ಒಲಿಯದ ದೇವರೇ ಇಲ್ಲ,
ಗಾನವೇ ತುಂಬಿದೆ ಈ ಜಗವೆಲ್ಲಾ
('ಉಪಾಸನೆ' ಚಿತ್ರದ 'ಭಾವವೆಂಬ ಹೂವು ಅರಳಿ' ಹಾಡಿನ ಸಾಲುಗಳು)
ಎಲ್ಲರಿಗೂ ಅವರ ಮನ ತಣಿಸುವ ಒಂದು ಹಾಡು ಇದ್ದೇ ಇರುತ್ತದೆ. ಅದು ಚಲನ ಚಿತ್ರದ ಹಾಡಾಗಿರಬಹುದು ಅಥವಾ ಭಾವಗೀತೆ ಇಲ್ಲವೇ ವಚನಗಳೋ ಇಲ್ಲವೋ ಭಕ್ತಿಗೀತೆಗಳೋ ಹೀಗೆ ಒಂದು ಹಾಡು ಕೇಳಿದ ತಕ್ಷಣ ಮನಸ್ಸು ಅದರಲ್ಲಿ ಲೀನವಾಗಿ ನಮ್ಮ ಭಾವನೆಗಳೆಲ್ಲ ಒಟ್ಟಾಗಿ ಹಾಡಾಗಿ ಹರಿಯುತಿದೆಯೋನೋ ಎನ್ನಿಸಿದ್ದರೆ ಅದು ನಿಮ್ಮ ಸುಪ್ತ ಮನಸ್ಸಿನ ಪ್ರತೀಕವಾದ ಹಾಡು. ಹಾಡನ್ನು ಆಸ್ವಾದಿಸುವುದರ ಜೊತೆಗೆ ಯಾವ ವಿಷಯ ಈ ಹಾಡನ್ನು ನಿಮಗೆ ಇಷ್ಟು ಹತ್ತಿರಕ್ಕೆ ತಂದಿದೆ ಎನ್ನುವ ಕಾರಣಗಳನ್ನು ಅವಲೋಕಿಸಿ ನೋಡಿ. ನೀವು ವ್ಯಕ್ತ ಪಡಿಸಲು ಸಾಧ್ಯವಾಗದ ಅನುಭೂತಿಗಳನ್ನು ಆ ಹಾಡು ಹೊರ ತಂದಿರುತ್ತದೆ ಮತ್ತು ನಿಮ್ಮ ಅಂತರಾಳದ ವಿಚಾರಗಳನ್ನು ಪ್ರತಿಬಿಂಬಿಸುತ್ತಿರುತ್ತದೆ.
ಕಥೆ-ಕಾದಂಬರಿಕಾರರಿಗಿಂತ, ಕವಿಗಳಿಗೆ ಭಾಷೆಯನ್ನು ಬಳಸುವ ಪ್ರಜ್ಞೆ ಸದಾ ಜಾಗೃತವಾಗಿರುತ್ತದೆ. ಬರಿ ಪ್ರಾಸಬದ್ಧ ಪದಗಳನ್ನು ಹುಡುಕುವುದಷ್ಟೇ ಅಲ್ಲವಲ್ಲ, ಬದಲಿಗೆ ಉಲ್ಲಾಸಗೊಳಿಸುವ ಇಲ್ಲವೇ ವಿಷಾದದ ಕೂಪಕ್ಕೆ ನೂಕುವ ಕೆಲಸ ಹಾಡಿನಿಂದಾಗಬೇಕು. ಅದಕ್ಕೆ ಕವಿಯ ಜೊತೆಗೆ, ಭಾವನೆಗಳಿಗೆ ಜೀವ ತುಂಬುವ ಕೆಲಸ ಗಾಯಕ/ಗಾಯಕಿಯರಿಂದ ಮತ್ತು ಹಾಡಿಗೆ ರಾಗ, ಪ್ರಾಸ ಜೋಡಿಸಿ ಸಂಗೀತ ಸಂಯೋಜಿಸುವವರ ಪ್ರಯತ್ನವೂ ಒಟ್ಟುಗೂಡಬೇಕು. ಆ ತಂಡ ಒಂದೇ ಲಹರಿಗೆ ಬಂದಾಗ ಒಂದು ಅದ್ಭುತ ಹಾಡು ಹುಟ್ಟುತ್ತದೆ.
ಇದನ್ನು ಮನಗಂಡಿದ್ದ ವಚನಕಾರರು, ಗ್ರಂಥಗಳನ್ನು ರಚಿಸದೇ ಸಾಮಾನ್ಯ ಮನುಷ್ಯನ ಮೇಲೇ ಅಳಿಯದ ಪ್ರಭಾವ ಬೀರುವಂತ ಗಾನಮಯವಾದ ವಚನಗಳನ್ನು, ಭಕ್ತಿ ಗೀತೆಗಳನ್ನು ರಚಿಸಿ ಅಜರಾಮರರಾದರು. ಇಂದಿಗೆ ಬಸವಣ್ಣನವರ ವಚನಗಳನ್ನು ವಿಮರ್ಶಿಸಿ, ಅರ್ಥೈಸಿ ನೂರಾರು ಪುಸ್ತಕಗಳು ಬಂದಿದ್ದರೂ, ಬಸವಣ್ಣನವರೇ ನಮಗೆ ಹೆಚ್ಚು ಹತ್ತಿರ ಅಲ್ಲವೇ? ಅಕ್ಕ, ಸರ್ವಜ್ಞ, ಪುರಂದರ ದಾಸರು ಇದಕ್ಕೆ ಹೊರತಲ್ಲ. ಋಗ್ವೇದವನ್ನು ವ್ಯಾಖ್ಯಾನಗೊಳಿಸಲು ೧೦೮ ಉಪನಿಷತ್ತುಗಳು ಬಂದಿದ್ದರೂ, ಋಗ್ವೇದದ ಒಂದು ಮಂತ್ರವಾದ 'ಗಾಯತ್ರಿ ಮಂತ್ರ' ದ ಹಾಗೆ ಅವನ್ನು ಜಪಿಸಲು ಸಾಧ್ಯವೇ? ಶಿಶುನಾಳ ಶರೀಫರು ಆಧ್ಯಾತ್ಮದ ಸಾರವನ್ನು ತಮ್ಮ ಹಾಡೊಳಗೆ ತುಂಬಲಿಲ್ಲವೇ? ಜಾನಪದ ಜನರ ನಾಲಿಗೆಯ ಮೇಲೆ ಉಳಿದ ಬಗೆಯೂ ಇದೆ ಅಲ್ಲವೇ? ಮಂತ್ರಗಳಿಗೆ ಶಕ್ತಿ ಇದೆಯೋ ಇಲ್ಲವೋ, ಆದರೆ ಹಾಡುಗಳಿಗೆ ಮಂತ್ರಶಕ್ತಿ ಇದೆ ಅನ್ನಿಸುವುದು, ಎಷ್ಟೋ ವಚನ, ಕೀರ್ತನೆ ರಚಿಸಿದ ಕರ್ತೃಗಳು ಕಾಲವಾಗಿ ಶತಮಾನಗಳು ಕಳೆದು ಹೋದರೂ, ಅವರ ರಚನೆಗಳು ಕಾಲಾತೀತ ಎನ್ನುವಂತೆ ಉಳಿದುಕೊಂಡಿರುವುದನ್ನು ನೋಡಿ.
ನೀವು ಗಮನಿಸಿಯೇ ಇರ್ತೀರಿ. 'ಸಂಗೀತ ಸಂಜೆ' ಕಾರ್ಯಕ್ರಮಗಳಿಗೆ ಜನರನ್ನು ಒಟ್ಟುಗೂಡಿಸಲು ಯಾವ ಪ್ರಯತ್ನವೂ ಬೇಕಿಲ್ಲ. ಅವರು ತಾವಾಗಿಯೇ ಬರುತ್ತಾರೆ. ಒತ್ತಡದ ಚಾಕಟ್ಟು ದಾಟಿ, ಮನದಣಿಯೇ ಹಾಡು ಕೇಳಿ ಮೈ ಮರೆಯಲು ಮುತುವರ್ಜಿಯ ಆಹ್ವಾನ ಬೇಕೇ? ಬರೀ ಮನುಷ್ಯರಿಗೆ ಇಲ್ಲವೇ ದೇವರಿಗೆ ಪ್ರಿಯವಾದದ್ದು ಈ ಹಾಡು ಎಂದುಕೊಳ್ಳಬೇಡಿ. ಡಾ. ರಾಜಕುಮಾರ್ ರ ಹಾಡುಗಳನ್ನು ಕೇಳುತ್ತ ಹೆಚ್ಚು ಹಾಲು ಕರೆದ ಹಸು-ಎಮ್ಮೆಗಳ ಬಗ್ಗೆ ಓದಿದ್ದ ನೆನಪು ನನಗೆ ಇದೆ. ಹಿಂದೆ ದ್ವಾಪರ ಯುಗದಲ್ಲಿ, ಕೃಷ್ಣನ ಮುರಳಿಯ ಕರೆ ಕೂಡ ಗೋಕುಲದ ಹಸುಗಳಿಗೆ ಇದೆ ರೀತಿಯ ಮೋಡಿ ಮಾಡಿರಬೇಕು. ಹಾಗೆ ಕಿಂದರಿ ಜೋಗಿಯು ಮೊದಲಿಗೆ ಮೂಷಿಕಗಳನ್ನು, ನಂತರ ಊರಿನ ಮಕ್ಕಳನ್ನು ಮೋಹಿತಗೊಳಿಸಿದ್ದು ಸಣ್ಣ ವಿದ್ಯೆಯೇ?
ಕಲೆಯ ಪ್ರಾಕಾರಗಳಲ್ಲಿ ಯಾವುದು ಹೆಚ್ಚು ಅಥವಾ ಕಡಿಮೆ ಎನ್ನುವ ಜಿಜ್ಞಾಸೆ ನನ್ನದಲ್ಲ. ಆದರೆ ಸಾಮಾನ್ಯ ಜನರಲ್ಲಿ ಹೆಚ್ಚಿನ ಪರಿಣಾಮ ಬೀರುವುದು ಸಾಧ್ಯ ಎನ್ನಿಸುವುದು ಗೀತೆ-ಸಂಗೀತದ ಮೂಲಕ ಎನ್ನುವುದು ನನ್ನ ಅಭಿಪ್ರಾಯ ಅಷ್ಟೇ.
ಜೀವನದಲ್ಲಿ ಬೇಸರವಾದಾಗ, ಕಳೆದು ಹೋದ ಭಾವನೆ ಬಂದಾಗ ಮಾತ್ರ ಇಷ್ಟದ ಹಾಡುಗಳನ್ನು ಕೇಳಬೇಕು ಎಂದೆನಿಲ್ಲವಲ್ಲ. ಅದಕ್ಕಾಗಿಯೇ ನಾನು ಕಳೆದು ಹೋಗುವ ಮುನ್ನವೇ, ನನ್ನತನ ತುಂಬುವ ಹಾಡುಗಳ ಮೊರೆ ಹೋಗುತ್ತೇನೆ. ಎದೆಯ ಲಹರಿಯ ಪ್ರತಿಧ್ವನಿ ಆಗುತ್ತವೆ ಈ ಹಾಡುಗಳು ಮತ್ತು ಬದುಕುವ ಉತ್ಸಾಹ ಬಾಡಿ ಹೋಗದಂತೆ ನನ್ನನ್ನು ಕಾಪಾಡುತ್ತವೆ. ಅಂದ ಹಾಗೆ ನಿಮ್ಮ ಇಷ್ಟದ ಹಾಡುಗಳು ಯಾವವು?
No comments:
Post a Comment