ಇಂದು ನಾವು ಹುಲಿ ನೋಡಬೇಕೆಂದರೆ ಮೃಗಾಲಯಕ್ಕೆ ಹೋಗಬೇಕು. ಬಂಡೀಪುರ, ನಾಗರಹೊಳೆ ಕಾಡಿನಲ್ಲಿ ಸಫಾರಿ ಹೋದರೂ, ಹುಲಿರಾಯನ ದರ್ಶನವಾಗುವುದು ಅತಿ ವಿರಳ. ಆದರೆ ಕೇವಲ ೬೦- ೭೦ ವರ್ಷಗಳ ಹಿಂದೆ ಕಾಡಿನ ವಿಸ್ತಾರ ದೊಡ್ಡದಿದ್ದು, ಹುಲಿಗಳು ಕಾಡಿನಂಚಿನ ಹಳ್ಳಿಗಳಿಗೆ ನುಗ್ಗಿ ದನಗಳನ್ನು ಬೇಟೆಯಾಡುವುದು ಮತ್ತು ಅಪರೂಪಕ್ಕೆ ನರಭಕ್ಷಕನಾಗುವುದು, ಜನರು ಅದರ ಭೀತಿಯಲ್ಲಿ ಹೊತ್ತಿಗೆ ಮುಂಚೆ ಮನೆ ಸೇರುವುದು ಇವೆಲ್ಲ ಸರ್ವೇ ಸಾಮಾನ್ಯ ಸಂಗತಿಯಾಗಿತ್ತು ಎನ್ನುವುದು ಇಂದಿನ ನವ ಪೀಳಿಗೆಗೆ ಆಶ್ಚರ್ಯಕರ ಸಂಗತಿ ಎನ್ನಿಸಬಹುದು. ಒಂದು ಹುಲಿ ನರಭಕ್ಷಕನಾದಾಗ ಬೇರೆ ದಾರಿಯಿಲ್ಲದೆ ಆ ಹುಲಿಯನ್ನು ಮುಗಿಸಲು ಬೇಟೆಗಾರರಿಗೆ ಕರೆ ಹೋಗುತ್ತಿತ್ತು. ಅದರಲ್ಲಿ ಮುಖ್ಯವಾದವರು - ಉತ್ತರ ಭಾರತದಲ್ಲಿ ಜಿಮ್ ಕಾರ್ಬೆಟ್ ಮತ್ತು ದಕ್ಷಿಣದಲ್ಲಿ ಕೆನೆತ್ ಆಂಡರ್ಸನ್. ನಮ್ಮ ದಕ್ಷಿಣ ಭಾಗದ ಹಲವಾರು ನರಭಕ್ಷಕ ಹುಲಿ-ಚಿರತೆಗಳಿಗೆ ಮುಕ್ತಿ ಕಾಣಿಸಿದವರು ಕೆನೆತ್ ಆಂಡರ್ಸನ್. ಅವರು ಜನರಿಗೆ ತೀವ್ರ ಉಪಟಳ ಕೊಟ್ಟ ಪ್ರಾಣಿಗಳನ್ನು ಬೇಟೆಯಾಡುವುದಲ್ಲದೇ, ಒಳ್ಳೆಯ ಬರಹಗಾರರೂ ಆಗಿದ್ದರು. ಅವರು ಇಂಗ್ಲಿಷ್ ನಲ್ಲಿ ರಚಿಸಿದ ಕಾಡಿನ ಕಥೆಗಳನ್ನು ಕನ್ನಡ ಭಾಷೆಗೆ ರೂಪಾಂತರ ತಂದವರು ತೇಜಸ್ವಿ. ಇದನ್ನು ಅನುವಾದ ಎನ್ನದೇ ರೂಪಾಂತರ ಎಂದು ಕರೆಯುವ ಕಾರಣ ತೇಜಸ್ವಿಯವರಿಗೆ ಕಾಡು-ಪರಿಸರದ ಬಗ್ಗೆ ಇದ್ದ ಜ್ಞಾನ. ಹಾಗಾಗಿ ಈ ಕಥೆಗಳನ್ನು ಕನ್ನಡಕ್ಕೆ ಯಥಾವತ್ತಾಗಿ ಭಟ್ಟಿ ಇಳಿಸುವ ಬದಲಿಗೆ ಜೀವ ತುಂಬುವ ಪ್ರಕ್ರಿಯೆ ಅವರಿಂದ ಸಾಧ್ಯವಾಯಿತು.
ಈ ಕಾಡಿನ ಕಥೆಗಳು
ನಾಲ್ಕು ಪುಸ್ತಕಗಳಾಗಿ ಹೊರ ಬಂದಿವೆ. ಅದರಲ್ಲಿ ಎರಡನೇ ಭಾಗವಾದ ಪೆದ್ದಚೆರುವಿನ ರಾಕ್ಷಸ ಪುಸ್ತಕವನ್ನು
ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ. ಇದು ಮೂರು ಚಿಕ್ಕ ಕಥೆಗಳನ್ನು (ಪೆದ್ದಚೆರುವಿನ ರಾಕ್ಷಸ, ತಾಳವಾಡಿಯ
ಮೂಕರಾಕ್ಷಸ ಮತ್ತು ಲಕ್ಕವಳ್ಳಿಯ ಹೆಬ್ಬುಲಿ) ಹೊಂದಿದೆ. ಅದರಲ್ಲಿನ 'ಲಕ್ಕವಳ್ಳಿಯ ಹೆಬ್ಬುಲಿ' ಯ ಕಥೆಯನ್ನು
ಸ್ವಲ್ಪ ವಿವರದಲ್ಲಿ ನೋಡೋಣ.
ಕೆನೆತ್ ಆಂಡರ್ಸನ್
ಅವರಿಗೆ ಲಕ್ಕವಳ್ಳಿಗೆ (ಚಿಕ್ಕ ಮಗಳೂರು ಜಿಲ್ಲೆ-
ಭದ್ರ ಜಲಾಶಯ ಹಾಗೂ ಹುಲಿ ಅಭಯಾರಣ್ಯಕ್ಕೆ ಹೊಂದಿಕೊಂಡ ಹಳ್ಳಿ) ಬರಲು ಆಹ್ವಾನ ನೀಡುತ್ತಾರೆ ಅಲ್ಲಿನ
ಆಣೆಕಟ್ಟಿನ ಜವಾಬ್ದಾರಿ ಹೊತ್ತ ಇಂಜಿನಿಯರ್ ಒಬ್ಬರು. ವಿಷಯ ಕೆದಕಿದಾಗ ತಿಳಿದು ಬರುವುದು ಇಷ್ಟು.
ಒಂದು ದೊಡ್ಡ ಹುಲಿ ಲಕ್ಕವಳ್ಳಿ ರಸ್ತೆಯ ಕಾಡಿನಲ್ಲಿ ಸೇರಿಕೊಂಡು ಅಲ್ಲಿ ಮೇಯಲು ಹೋಗುತ್ತಿದ್ದ ದನಗಳನ್ನು
ದಿನಂಪ್ರತಿ ಹಿಡಿದು ತಿನ್ನಲು ಶುರು ಮಾಡಿತ್ತು. ದಿನ ಕಳೆದಂತೆ ದನ ಕಾಯುವರ ಕೋಪ ಹಾಗೂ ಹುಲಿಯ ಧೈರ್ಯ
ಎರಡೂ ಹೆಚ್ಚುತ್ತಾ ಹೋಗಿ, ಇಬ್ಬರೂ ಮುಖಾ-ಮುಖಿಯಾದರು. ಹುಲಿ ಅವನನ್ನು ಕೊಂದು ಅರ್ಧಂಬರ್ಧ ತಿಂದು,
ದನವನ್ನೂ ಹೊತ್ತುಕೊಂಡು ಹೋಯಿತು. ನಂತರ ಸರಣಿ ಕೊಲೆಗಳನ್ನು ನಡೆಸುತ್ತ ಸಂಪೂರ್ಣ ನರಭಕ್ಷಕನಾಗಿ ಬದಲಾಯಿತು.
ಅದನ್ನು ಬೇಟೆಯಾಡಲು ಲಕ್ಕವಳ್ಳಿಗೆ ಬಂದ ಕೆನೆತ್ ರಿಗೆ, ಹುಲಿ ಆಗ ತಾನೇ ಒಬ್ಬ ಕೂಲಿಯವನೊಬ್ಬನನ್ನು
ಹೊತ್ತುಕೊಂಡು ಹೋಗಿರುವುದು ತಿಳಿಯುತ್ತದೆ. ಜಾಡು ಹಿಡಿದು ಕಾಡು ಹೊಕ್ಕರೆ, ಕೊಂಚ ಕಾಲದಲ್ಲೇ ಹೆಜ್ಜೆ-ಗುರುತು,
ರಕ್ತದ ಕಲೆಗಳು ಕಾಣುವುದು ನಿಂತು ಹೋಗುತ್ತದೆ. ವಾಪಸ್ಸು ಬಂದು ಅರಣ್ಯ ಇಲಾಖೆಯವರಲ್ಲಿ ಅವರು ಯಾವುದಾದರೂ
ಗುಹೆಯನ್ನು ನೋಡಿದ್ದಾರೆಯೇ ಎಂದು ವಿಚಾರಿಸಿದಾಗ, ಕಾಡಿನಲ್ಲಿ ಒಂದು ಪಾಳು ಬಿದ್ದ ಗುಡಿಯ ಬಗ್ಗೆ ತಿಳಿಯುತ್ತದೆ.
ಅಲ್ಲಿ ಹೋಗಿ ಪರಿಶೀಲಿಸಿದರೆ ಹುಲಿ ಅದನ್ನು ತನ್ನ ವಾಸ ಸ್ಥಾನ ಮಾಡಿಕೊಂಡಿಲ್ಲ ಎಂದು ತಿಳಿಯುತ್ತದೆ.
ನಂತರ ಒಬ್ಬ ದನ ಮೇಯಿಸುವವನಿಂದ ಪಾಳು ಗುಡಿಯ ಒಂದು ಮೈಲಿಯಾಚೆ ಗುಹೆ ಇರುವುದಾಗಿ ತಿಳಿಯುತ್ತದೆ. ಆ
ಗುಹೆಯ ಹತ್ತಿರ ಹೋದಾಗ ಅತಿ ಸನಿಹದಲ್ಲೇ ಮೇಲೆರಗಲು ಸಿದ್ಧವಾಗಿದ್ದ ಹುಲಿರಾಯನ ದರ್ಶನವಾಗುತ್ತದೆ.
ಬದುಕು-ಸಾವಿನ ಕೆಲವು ಕ್ಷಣಗಳ ಮಧ್ಯದಲ್ಲೇ ಗುರಿಯಿಟ್ಟು ಗುಂಡು ಹಾರಿಸಿ ಪಕ್ಕಕ್ಕೆ ಉರುಳುತ್ತಾರೆ
ಬೇಟೆಗಾರ ಕೆನೆತ್. ಇವರ ಮೇಲೆ ಹಾರಿದ ಹುಲಿ ಸತ್ತು ಬೀಳುತ್ತದೆ. ಸತ್ತ ಮೇಲೆ ಪರೀಕ್ಷಿಸಿದಾಗ ಅದೊಂದು
ವಯಸ್ಸಾದ, ಬೇಟೆಯಾಡಲು ಅಸಮರ್ಥವಾದ ಪ್ರಾಣಿ ಎಂದು ತಿಳಿಯುತ್ತದೆ. ಕತ್ತಲಾದರೂ ನಿರ್ಭಿತಿಯಿಂದ ಮರಳುತ್ತಾರೆ
ಬೇಟೆಗಾರ ಮತ್ತು ಅವನ ಜೊತೆಗಾರ.
ಈ ಪುಸ್ತಕದ ಕರ್ತೃ ಪೂರ್ಣ ಚಂದ್ರ ತೇಜಸ್ವಿಯವರದು ಬಹು ಮುಖ ಪ್ರತಿಭೆಯ ವ್ಯಕ್ತಿತ್ವ. ಕಥೆ-ಕಾದಂಬರಿಗಳಿಂದ ಜನಪ್ರಿಯರಾಗಿರುವ ತೇಜಸ್ವಿ ಅವರು ಛಾಯಾಗ್ರಾಹಣ, ಸಹಜ ಕೃಷಿ, ಬೇಟೆ, ವೈಜ್ಞಾನಿಕ ಬರಹಗಳನ್ನು ಕೂಡ ಪ್ರಿಯವಾಗುವ ಹಾಗೆ ಬರೆಯಬಲ್ಲರು. ಅದಕ್ಕೆ ಈ ಪುಸ್ತಕ ಒಂದು ಉದಾಹರಣೆ ಮಾತ್ರ.
No comments:
Post a Comment