Thursday, April 15, 2021

ತಾಯಂದಿರೆಲ್ಲ ಗಾಂಧಾರಿಯರು

ಧೃತರಾಷ್ಟ್ರ ಹುಟ್ಟು ಕುರುಡನಿದ್ದ. ಆದರೆ ಗಾಂಧಾರಿ ಹಾಗಲ್ಲವಲ್ಲ. ಅವಳು ಕಣ್ಣು ಕಟ್ಟಿಕೊಂಡಿದ್ದು ಅವಳ ಗಂಡನಿಗಾಗಿ ಮಾಡಿದ ತ್ಯಾಗ ಎನಿಸಿದರೂ ಅವಳು ಮಕ್ಕಳ ವಿಷಯದಲ್ಲಿ ನಡೆದುಕೊಂಡಿದ್ದು ಮಾತ್ರ ವಿಚಿತ್ರ. ತುಂಬು ಸಭೆಯಲ್ಲಿ ದ್ರೌಪದಿಯ ವಸ್ತ್ರಹರಣ ನಡೆದಾಗ, ಬೇರೆ ಯಾರಿಗಾದರೂ ಅದನ್ನು ನಿಲ್ಲಿಸುವ ಹಕ್ಕು ಇತ್ತೋ ಇಲ್ಲವೋ, ಗಾಂಧಾರಿಗೆ ತನ್ನ ಮಕ್ಕಳಿಗೆ ಅದನ್ನು ಬೇಡ ಎನ್ನುವ ಹಕ್ಕು ಇದ್ದೆ ಇತ್ತು. ಆದರೆ ಗಾಂಧಾರಿ ಕಟ್ಟಿಕೊಂಡಿದ್ದು ಕೇವಲ ಕಣ್ಣಿಗಲ್ಲ, ಅವಳ ಮನಸ್ಸಿಗೂ ಕೂಡ. ಮಾತೃ ಪ್ರೇಮ ಕೇವಲ ಅವಳ ಕಣ್ಣನ್ನು ಅಲ್ಲ, ವಿವೇಕವನ್ನು ಕೂಡ ಕುರುಡು ಮಾಡಿತ್ತು. ಅವಳು ಮಾನಾಪಹರಣ ನಿಲ್ಲಿಸುವ ಪ್ರಯತ್ನ ಮಾಡಲೇ ಇಲ್ಲ.


ಮಹಾಭಾರತ ಒಂದು ಕಟ್ಟು ಕಥೆ ಎಂದು ಅದನ್ನು ಉಪೇಕ್ಷಿಸಬಹುದು. ಆದರೆ ಇಂದಿನ ತಾಯಂದಿರು ಕೂಡ ತಾವು ಯಾವ ಗಾಂಧಾರಿಗೇನು ಕಡಿಮೆ ಇಲ್ಲ ಎಂದು ಕಲಿಯುಗದಲ್ಲಿ ವರ್ತಿಸುತ್ತಾರಲ್ಲ. ಅದು ನನ್ನನ್ನು ಅಚ್ಚರಿಗೊಳಿಸುತ್ತದೆ. ತಮ್ಮ ಮಕ್ಕಳ (ಗಂಡಾಗಲಿ, ಹೆಣ್ಣಾಗಲಿ) ಸಹಾಯಕ್ಕೆ ಧಾವಿಸುವ ತಾಯಂದಿರು, ಅದೇ ಮಕ್ಕಳು ಅನ್ಯಾಯದ ಕೆಲಸಕ್ಕೆ ಇಳಿದಾಗ ಕಂಡೂ ಕಾಣದಂತೆ ವರ್ತಿಸಿಬಿಡುತ್ತಾರೆ. ಅನ್ಯಾಯ ತಡೆಗಟ್ಟದ ಗಾಂಧಾರಿಯಂತೆ, ನವ ಮಹಾಭಾರತಗಳಿಗೆ ದಾರಿಯಾಗುತ್ತಾರೆ.  ಇಲ್ಲವೇ ಒಬ್ಬ ಮಗ ಗೆದ್ದು ತಂದದ್ದನ್ನು ಉಳಿದೆಲ್ಲ ಮಕ್ಕಳಿಗೆ ಹಂಚುವ ಕುಂತಿಯರಾಗುತ್ತಾರೆ. ಇವನ್ನೆಲ್ಲ ಗಮನಿಸಿದರೆ, ಮಹಾಭಾರತ ಸಮಯದ ತಾಯಂದಿರಿಗೂ ಇಂದಿನ ತಾಯಂದಿರಿಗೂ ಯಾವುದೇ ವ್ಯತ್ಯಾಸ ಇಲ್ಲ ಎಂದು ಅನಿಸುತ್ತದೆ.

 

ಆದರೆ ಇಲ್ಲಿ ಗಮನಿಸಬೇಕಾದ ಪಾಠವೆಂದರೆ, ತಾಯಿ ಪ್ರೀತಿ ಯಾವುದೇ ಪ್ರಶ್ನೆ ಇರಲಾರದಂತದ್ದು. ನಿಮಗೆ ನೋವಾದಾಗ ತಾಯಿ ಮಡಿಲು ಕೊಡುವ ಆಶ್ರಯ ಬೇರೆ ಯಾರು ಕೂಡ ನೀಡಲಾರದಂತಹದ್ದು. ಆದರೆ ಗಾಂಧಾರಿ, ಕುಂತಿಯರಂತೆ ನಿಮ್ಮ ವಿವೇಕವನ್ನು ಎಚ್ಚರಿಸುವ ಕೆಲಸವನ್ನುತಾಯಿ ಮಾಡದೆ ಹೋಗಬಹುದು. ಒಂದು ವೇಳೆ ನೀವು ಮಾಡುತ್ತಿರುವುದು ಮಾನಾಪಹರಣದ ಕೆಲಸ ಆದರೆ, ಅದಕ್ಕೆ ನಿಮ್ಮನ್ನು ಎಚ್ಚರಿಸುವ, ತಡೆಯುವ ಕೆಲಸ ತಾಯಿ ಮಾಡಲಾರಳು. ಅದಕ್ಕೆ ಭಾವನಾತೀತ ವಿದುರರು ನಿಮ್ಮ ಜೊತೆ ಇರಬೇಕು.  ಇಲ್ಲದೆ ಹೋದರೆ ನೀವು ಮಹಾಭಾರತದಿಂದ ಕಲಿತದ್ದೇನು ಇಲ್ಲ.

No comments:

Post a Comment