Showing posts with label ಕನ್ನಡ ಬರಹಗಳು. Show all posts
Showing posts with label ಕನ್ನಡ ಬರಹಗಳು. Show all posts

Friday, October 28, 2022

ಶಾಂತಾರಾಮ್: ಒಂದು ವಿಭಿನ್ನ ಕಾದಂಬರಿ

(Gregory David Roberts ಅವರು ಬರೆದ ‘Shantaram’ ಪುಸ್ತಕದ ಮೊದಲ ಪುಟಗಳ ಭಾವಾನುವಾದ. ಬಹಳ ದಿನದ ಮೇಲೆ ಒಂದು ಒಳ್ಳೆಯ ಕಾದಂಬರಿ ಓದಿದ ಅನುಭವ ಆದ್ದರಿಂದ, ಅದರ ಲೇಖಕರು ಬರೆದ ಪರಿಚಯ ಪುಟಗಳನ್ನು ಇಲ್ಲಿ ಸಂಕ್ಷಿಪ್ತವಾಗಿ ಅನುವಾದಿಸಿದ್ದೇನೆ.)

 

ಬಹುಕಾಲದ ಹಿಂದೆ ಮಾಟಗಾತಿಯೊಬ್ಬಳು ನನಗೆ ಹೇಳಿದ್ದಳು. ಎಲ್ಲಾ ಜನರು ಒಂದಲ್ಲ ಒಂದು  ವರ್ಗಕ್ಕೆ ಸೇರಿರುತ್ತಾರೆ. ಕೆಲವರು ರೈತರು. ಅವರು ಯಾವ ಊರಿಗೆ ಹೋದರು, ಗುಂಡಿ ತೆಗೆಯುವುದು, ಬೀಜ ಬಿತ್ತುವುದು, ಫಸಲು ಕಾಯುವುದು ಇಂತಹ ಕೆಲಸಗಳೇ ಅವರಿಗೆ ಇಷ್ಟವಾಗುವುದು. ಅದೇ ತರಹ ಕೆಲವರು ಕಟ್ಟಡ ನಿರ್ಮಾಣ ಮಾಡುವವರು, ಇನ್ನು ಕೆಲವರು ಸಂಗೀತಗಾರರು. ಹಾಗೆಯೆ ಕೆಲವರು ಕುಶಲಕರ್ಮಿಗಳು, ನಟರು, ಸಾಧು-ಸಂತರು, ಶಿಕ್ಷಕರು. ಹೀಗೆ ಅವರವರ ಕಾಯಕ ಅವರಿಗೆ ಇಷ್ಟ. ಸ್ವಲ್ಪ ಜನ ಮಾಟಗಾತಿಯರು, ನನ್ನ ತರಹ. ಕೆಲವರು ಕ್ಷತ್ರಿಯರು ನಿನ್ನ ತರಹ.

 

ಅವಳು ಹೇಳಿದ್ದು ನಾನು ಆಗ ಪೂರ್ತಿಯಾಗಿ ನಂಬಲಿಲ್ಲ ಹಾಗೆಯೆ ತೆಗೆದು ಹಾಕಲಿಲ್ಲ ಕೂಡ. ಆದರೆ ಅದು ಆತ್ಮದ ಕರೆಗಂಟೆ ಎಂದು ನನಗೆ ಸಮಯ ಕಳೆದಂತೆ ಅರ್ಥವಾಗತೊಡಗಿತು.

 

ಅನಿವಾರ್ಯವೋ ಅಥವಾ ವಿಮೋಚನೇ ಇಲ್ಲವೋ, ಕ್ಷತ್ರಿಯರಿಗೆ ಹೋರಾಟದ ಹಾದಿ ಬಿಟ್ಟು ಬೇರೆ ರುಚಿಸುವುದಿಲ್ಲ. ಹೋರಾಡುವುದನ್ನು ಅವರು ಚಿಕ್ಕಂದಿನಲ್ಲೇ ಕಲಿಯುತ್ತಾರೆ.  ಕರಾಟೆ, ಬಾಕ್ಸಿಂಗ್ ಇತ್ಯಾದಿ ಕ್ರೀಡೆಗಳನ್ನು ಆಸಕ್ತಿಯಿಂದ ಗಮನಿಸುತ್ತಾರೆ. ಸಮರ ಕಲೆಗಳು ಅವರನ್ನು ಸೆಳೆಯುತ್ತವೆ. ಚಾಕು ಬಳಸುವದು, ಬಡಿಗೆ ಹಿಡಿದು ತಮ್ಮನ್ನು ರಕ್ಷಿಸಿಕೊಳ್ಳುವುದು ಅವರಿಗೆ ಸುಲಭದಲ್ಲಿ ದಕ್ಕುತ್ತವೆ. ಅವರು ಸೈನಿಕರೋ, ಪೊಲೀಸರೋ ಇಲ್ಲವೇ ದರೋಡೆಕೋರರೋ ಆಗುತ್ತಾರೆ ಅಂದಲ್ಲ. ಆದರೆ ಅವರು ದಬ್ಬಾಳಿಕೆಯನ್ನು, ಅನ್ಯಾಯವನ್ನು ಸಹಿಸಿಕೊಳ್ಳಲಾರರು. ಮತ್ತು ದುರ್ಬಲರ ರಕ್ಷಣೆಗೆ ಕಾಳಗಕ್ಕೆ ಇಳಿಯಲು ಹಿಂದೆ ಮುಂದೆ ನೋಡುವುದಿಲ್ಲ.

 

ಹತ್ತುವರುಷಗಳ ಕಠಿಣ ಜೈಲು ವಾಸದಲ್ಲಿ ಹಲವಾರು ಕ್ಷತ್ರಿಯರನ್ನು ಹತ್ತಿರದಿಂದ ಗಮನಿಸಿದ್ದೇನೆ. ಅವರಲ್ಲಿ ಹೋರಾಟ ಭಾವ ಎಷ್ಟು ದಟ್ಟವಾಗಿದೆಯೋ ಅಷ್ಟೇ ಸರಾಗವಾಗಿ ಅವರು ಕವಿತೆ ರಚಿಸಬಲ್ಲರು. ಮತ್ತು ಕೆಲವರು ಇತಿಹಾಸವನ್ನು ಅರೆದು ಕುಡಿದವರು. ಮತ್ತು ಕೆಲವರು ತತ್ವಜ್ಞಾನ ವಿಷಯದಲ್ಲಿ ಪ್ರಭುದ್ಧ ವಾದ ಮಂಡಿಸಬಲ್ಲವರು.

 

ಸಮವಸ್ತ್ರ ಧರಿಸಿದ ಸೈನಿಕರೆಲ್ಲ ಕ್ಷತ್ರಿಯರಲ್ಲ. ಹಾಗೆಯೆ ಸೂಟು ಬೂಟು ಧರಿಸಿದ್ದರು, ಕೆಲವರಲ್ಲಿ ಕ್ಷತ್ರಿಯರ ರಕ್ತ ಕುದಿಯುತ್ತಿರಬಹುದು. ಮತ್ತೆ ಬೀದಿ ಬದಿಯ ಒರಟರೆಲ್ಲ ಕ್ಷತ್ರಿಯರಲ್ಲ. ಏಕೆಂದರೆ  ಕ್ಷತ್ರಿಯರು ಒರಟರಲ್ಲ ಮತ್ತು ಒರಟರು ಕ್ಷತ್ರಿಯರಲ್ಲ.  

 

'ಶಾಂತಾರಾಮ್' ಪುಸ್ತಕದ ಮುಖ್ಯ ಪಾತ್ರ ಕೂಡ ಒಬ್ಬ ಕ್ಷತ್ರಿಯ. ಜೈಲಿನಿಂದ ತಪ್ಪಿಸಿಕೊಂಡು ತನ್ನ ಧೈರ್ಯ ಮತ್ತು ಬದುಕುವ ಆಸೆಯನ್ನು ಅವನು ನವೀಕರಣಗೊಳಿಸುತ್ತಾನೆ. ಆದರೆ ಕಾನೂನು ಬಾಹಿರ ದುಷ್ಕೃತ್ಯಗಳನ್ನು ಎಸಗಿದ್ದಕ್ಕೆ ಅವನಿಗೆ ನೋವಿದೆ. ಮತ್ತು ತನ್ನ ಘನತೆಯನ್ನು ಬಿಟ್ಟು ಕೊಡದ ಹೋರಾಟ ಅವನಿಗೆ ಅವನ ಜೀವನದ ಗಮ್ಯವನ್ನು ತಲುಪಲು ಸಹಾಯ ಮಾಡುತ್ತದೆ. ಸಮಾಧಾನದ ವಿಷಯ ಎಂದರೆ ಜೀವನದ ಆ ಪಯಣದಲ್ಲಿ ನಾವು ಒಬ್ಬಂಟಿಗರಲ್ಲ.

Saturday, October 1, 2022

ವಿಕ್ರಮನಿಗೆ ಕಥೆ ಹೇಳಲು ಬೇತಾಳವೇ ಏಕೆ ಬೇಕು?

'ವಿಕ್ರಮ ಮತ್ತು ಬೇತಾಳ' ಕಥೆಗಳನ್ನು ಮೊದಲು ನಾನು ಓದಿದ್ದು ಚಂದಮಾಮದಲ್ಲಿ. ಹೆಣವನ್ನು ಹೆಗಲಿಗೆ ಹಾಕಿಕೊಂಡು, ಒಂದು ಕೈಯಲ್ಲಿ ಕತ್ತಿ ಹಿರಿದು ಸ್ಮಶಾನದಲ್ಲಿ ಸಾಗಿ ಹೋಗುವ ರಾಜ ವಿಕ್ರಮಾದಿತ್ಯನ ಚಿತ್ರ ಭೀತಿ ಹುಟ್ಟಿಸುತಿತ್ತು. ಹಾಗೆಯೆ ಅವನ ಧೈರ್ಯ, ಸಾಹಸಗಳು ಬೆರಗು ಮೂಡಿಸುತ್ತಿತ್ತು. ಕ್ರಮೇಣ ಗೊತ್ತಾಯಿತು. ಬೇತಾಳ ಹೇಳುತ್ತಿದ್ದ ಕಥೆಗಳು ದೆವ್ವಗಳ ಕಥೆಗಳಲ್ಲ. ಬದಲಿಗೆ ರಾಜನ ಜಾಣ್ಮೆ, ವಿವೇಕ ಪರೀಕ್ಷೆ ಮಾಡುವ ಮತ್ತು ನೈತಿಕ ಸಂಧಿಗ್ದತೆ ಬಂದಾಗ ಸರಿ-ತಪ್ಪುಗಳನ್ನು ಅಳೆದು ನೋಡಿ ನಿರ್ಧಾರಕ್ಕೆ ಬರುವ ಕಥೆಗಳು ಆಗಿದ್ದವು.


ಅವು ನಿಜ ಕಥೆಗಳೋ ಅಥವಾ ದಂತ ಕಥೆಗಳೋ ಅನ್ನುವುದಕ್ಕಿಂತ ಅವುಗಳು ಕಥೆ ಕೇಳುವವರಲ್ಲಿ ಹುಟ್ಟಿಸುವ ಪ್ರಜ್ಞೆಯೇ ಮುಖ್ಯ. ಅದೇ ತರಹದ ಉದ್ದೇಶವನ್ನು ಪಂಚತಂತ್ರದ ಕಥೆಗಳು ಕೂಡ ಹೊಂದಿವೆ. ಸಮಸೆಗಳನ್ನು ಉಪಾಯದಿಂದ ಪರಿಹರಿಸಿಕೊಳ್ಳುವ ಅಕ್ಬರ್-ಬೀರಬಲ್, ತೆನಾಲಿ ರಾಮಕೃಷ್ಣರ ಕಥೆಗಳು ಕೂಡ ನಮ್ಮಲ್ಲಿವೆ.


ಉಜ್ಜಯಿನಿಯ ರಾಜ ವಿಕ್ರಮಾದಿತ್ಯ ನ್ಯಾಯ ನೀತಿಗೆ ಪ್ರಸಿದ್ಧನಾದವನು. ಅವನಿಗೆ ಸವಾಲೊಡ್ಡುವ ಕಥೆಗಳನ್ನು ಹೇಳುವ ಬೇತಾಳ. ಉತ್ತರ ಗೊತ್ತಿದ್ದೂ ಹೇಳದೆ ಹೋದರೆ 'ತಲೆ ಸಿಡಿದು ನೂರು ಚೂರಾಗುವುದು' ಎನ್ನುವ ಅದರ ಬೆದರಿಕೆ ಬೇರೆ. ಮೌನ ಮುರಿದರೆ ಮತ್ತೆ ಬೇತಾಳವನ್ನು ಹೊತ್ತು ಕಥೆ ಕೇಳುವ ಪರಿಸ್ಥಿತಿ ರಾಜನಿಗೆ. ಆದರೂ ಅವನು ಮೌನ ಮುರಿಯುತ್ತಾನೆ. ತನ್ನ ಸರಿ-ತಪ್ಪಿನ ತೀರ್ಪು ನೀಡುತ್ತಾನೆ. ಮತ್ತೆ ಹೊಸ ಕಥೆ ಹುಟ್ಟುತ್ತದೆ. ಆದರೆ ರಾಜನಿಗೆ ಕಥೆ ಹೇಳಲು ಬೇತಾಳವೇ ಏಕೆ ಬೇಕಿತ್ತು? ಬೇರೆ ಯಾರೂ ಮಾನವರು ಆ ಕಥೆಗಳನ್ನು ಹೇಳಲು ಸಾಧ್ಯ ಆಗುತ್ತಿರಲಿಲ್ಲವೇ? ಬೇತಾಳ ಹೇಳಿದ ಕಥೆಗಳನ್ನು ಗಮನಿಸಿ ನೋಡಿದರೆ ಸಂದೇಹವೇ ಬೇಡ. ಕಥೆಗಳಲ್ಲಿ ಬರುವ ಸನ್ನಿವೇಶಗಳು, ಸರಿ-ತಪ್ಪಿನ ಸವಾಲುಗಳು ಜೀವನವನ್ನು ಒಟ್ಟಾರೆಯಾಗಿ ನೋಡಿದಾಗ ಮಾತ್ರ ಹುಟ್ಟುವಂತಹವು. ಸಾಮಾನ್ಯ ಮನುಷ್ಯ ಯಾವುದೊ ಆಸೆಯ ಹಿಂದೆ ಬಿದ್ದಿರುತ್ತಾನೆ ಮತ್ತು ಸಮಸ್ಯೆ ಬಂದಾಗ ಸ್ವಾರ್ಥಿಯಾಗಿ ನಡೆದುಕೊಳ್ಳುತ್ತಾನೆ. ಅವನಿಗೆ ಸರಿ-ತಪ್ಪಿನ ವಿವೇಚನೆಗಿಂತ ತನ್ನ ಬೆಳವಣಿಗೆಯೇ ಮುಖ್ಯ. ಸಾಮಾನ್ಯ ಮನುಷ್ಯ ಮಾಡುವ ತಪ್ಪುಗಳನ್ನು ಎತ್ತಿ ತೋರಿಸುವ ಕಥೆಗಳನ್ನು ಬೇತಾಳ ಹೇಳುವುದೇ ಸಮಂಜಸ ಅಲ್ಲವೇ? ಆದರೆ ರಾಜ ವಿವೇಕ ಎತ್ತಿ ಹಿಡಿಯುವವನಾಗಿದ್ದ. ಬೇತಾಳ ಕೇಳುವ ಪ್ರಶ್ನೆಗೆ ಸಮಂಜಸ ಉತ್ತರ ನೀಡುತ್ತಿದ್ದ. ಹೀಗಾಗಿ ಆ ಕಥೆಗಳನ್ನು ಕೇಳಿದವರಲ್ಲಿ ನೈತಿಕ ಪ್ರಜ್ಞೆ ಜಾಗೃತ ಆಗುತ್ತಿತ್ತು. ಇಷ್ಟಕ್ಕೂ ಪ್ರಶ್ನೆ ಕೇಳಲು ಬೇತಾಳನೇ ಆಗಬೇಕಿಲ್ಲ. ನಮ್ಮ ಅಂತಃಪ್ರಜ್ಞೆಯೇ ಸಾಕು. ಮತ್ತು ಕಥೆ ಕೇಳಲು ರಾಜನೇ ಆಗಬೇಕಿಲ್ಲ. ನಮ್ಮಂತ ಸಾಮಾನ್ಯ ಜನರು ದೈನಂದಿನ ಕಾರ್ಯಗಳಲ್ಲಿ ತೆಗೆದುಕೊಳ್ಳುವ ಸರಿ-ತಪ್ಪಿನ ನಿರ್ಧಾರಗಳನ್ನು ವಿವೇಚನೆಯಿಂದ ತೆಗೆದುಕೊಂಡರೆ ಸಾಕು.


ಇಂದಿಗೆ ನಮ್ಮ ಎಷ್ಟು ಮಕ್ಕಳಿಗೆ ವಿಕ್ರಮ ಮತ್ತು ಬೇತಾಳನ ಕಥೆಗಳು ಗೊತ್ತಿವೆ? ಅವರು 'ಮೇರಿ ಹ್ಯಾಡ್ ಎ ಲಿಟಲ್ ಲ್ಯಾಂಬ್' ಎಂದು ಹಾಡುತ್ತಾರೆ. ಈ ವಿಷಯ ಪ್ರಸ್ತಾಪಿಸಿದರೆ ನನ್ನ ಸ್ನೇಹಿತರು ಇಂಗ್ಲಿಷ್ ಮತ್ತು ತಂತ್ರಜ್ಞಾನ ಹೊಟ್ಟೆ ತುಂಬಿಸುತ್ತದೆ. ಆದರೆ ನೈತಿಕತೆಯಿಂದ ಏನು ಪ್ರಯೋಜನ ಎನ್ನುವ ಪ್ರಶ್ನೆ ಹಾಕುತ್ತಾರೆ. ವಿಜ್ಞಾನ ಮತ್ತು ತಂತ್ರಜ್ಞಾನ ಬೆಳವಣಿಗೆ ಅವಶ್ಯಕ ಮತ್ತು ಇಂಗ್ಲಿಷ್ ಅದಕ್ಕೆ ಅನುಕೂಲಕರ. ಆದರೆ ನೋಡಿ ನೈತಿಕತೆ ಇರದ ತಂತ್ರಜ್ಞಾನ ಒಡ್ಡುವ ಅಪಾಯಗಳ ಬಗ್ಗೆ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ. ತಂತ್ರಜ್ಞಾನ ಪರಮಾಣು ಬಾಂಬ್ ಗಳನ್ನೂ ಕೂಡ ಸೃಷ್ಟಿಸುತ್ತದೆ. ಮೊದಲಿಗೆ ಅದರ ಉಪಯೋಗ ಶತ್ರುಗಳ ಮೇಲೆ. ಅವರು ನಾಶವಾದ ನಂತರ ತಮ್ಮ-ತಮ್ಮೊಳಗೆ ಜಗಳ ಹುಟ್ಟಿದರೆ?


ಮುಂದೊಂದು ದಿನ ಮಾನವ ಜಗತ್ತು ನಾಶವಾದರೆ, ಅದು ಕೇವಲ ತಂತ್ರಜ್ಞಾನದ ಬೆಳವಣಿಗೆಯಿಂದ ಅಲ್ಲ. ಅದು ನೈತಿಕತೆ ಮತ್ತು ಸರಿ-ತಪ್ಪಿನ ವಿವೇಚನೆ ಮರೆತದ್ದಕ್ಕಾಗಿ. ಮತ್ತು ಚಿಕ್ಕಂದಿನಲ್ಲಿ ವಿಕ್ರಮ ಮತ್ತು ಬೇತಾಳ ತರಹದ ಕಥೆಗಳನ್ನು ಕೇಳದಿದ್ದಕ್ಕಾಗಿ. ಎಲ್ಲ ನಾಶವಾದ ಮೇಲೆ ಕಥೆ ಹೇಳುವ ಬೇತಾಳಗಳು ಸಾಕಷ್ಟು ಹುಟ್ಟುತ್ತವೆ. ಆದರೆ ವಿವೇಚನೆಯಿಂದ ಸರಿ-ತಪ್ಪು ನಿರ್ಧಾರ ಮಾಡುವ ವಿಕ್ರಮಾದಿತ್ಯರು ಇರುವುದಿಲ್ಲ.



Saturday, September 3, 2022

ಮನದಾಸೆಗಳನ್ನು ಗೆಲ್ಲದೇ ಮಠ ಕಟ್ಟುವವರು

ಕನ್ನಡ ನಾಡಿನಲ್ಲಿ ಮಠ ಕಟ್ಟಿದ ಸಂತರು ಅನೇಕ. ಸಿದ್ಧಾರೂಢರಿಂದ, ಶಿವಕುಮಾರ ಸ್ವಾಮಿಗಳವರೆಗೆ. ಅವರು ಕಟ್ಟಿದ ಮಠಗಳಿಂದ ಸಮಾಜಕ್ಕೆ ಆದ ಪ್ರಯೋಜನ ಅಪಾರ. ಮಠ ಬಿಟ್ಟು ಅವರಿಗೆ ಪ್ರತ್ಯೇಕ ಜೀವನ ಎನ್ನುವುದು ಇರಲಿಕ್ಕಿರಲಿಲ್ಲ. ಅಷ್ಟೇ ಪ್ರಮುಖವಾಗಿದ್ದದ್ದು ಚಿತ್ರದುರ್ಗದ ಬೃಹನ್ಮಠ. ಆದರೆ ಅದರ ಜವಾಬ್ದಾರಿ ಹೊತ್ತು ಹೆಸರು ಗಳಿಸಿದ್ದ ಮಠಾಧೀಶರು ತಂದುಕೊಂಡ ಅಪವಾದ ಜನಸಾಮಾನ್ಯರಿಗೆ ಮಠಗಳ ಮೇಲಿನ ನಂಬಿಕೆ ಕುಸಿಯುವಂತೆ ಮಾಡುತ್ತದೆ.


"Every saint has a past and every sinner has a future". ಎಲ್ಲ ಸಂತರಿಗೂ ಗತ ಕಾಲ ಇರುತ್ತದೆ. ಅದನ್ನು ದಾಟಿ ಬಂದ ಮೇಲೆ ಅವರು ಸಂತರಾಗುವುದು. ಆದರೆ ಅವರು ವರ್ತಮಾನದಲ್ಲೂ ಕೂಡ ಮನದಾಸೆಗಳಿಗೆ ಕಟ್ಟು ಬಿದ್ದರೆ, ಅವರಲ್ಲಿ ಲೈಂಗಿಕ ದಾಹ ಇಂಗಿರದಿದ್ದರೆ, ಅವರು ನಿಜವಾದ ಸಂತರಲ್ಲ. ಅವರು ಸಾಮಾನ್ಯ ಮನುಷ್ಯರಂತೆ ಸಂಸಾರಿಯಾಗುವುದು ವಾಸಿ. ಹೊರ ಜಗತ್ತಿಗೆ ಧರ್ಮ ಸಾರುತ್ತ, ಅಂತರಂಗದಲ್ಲಿ ಅಧರ್ಮದ ಕೆಲಸಗಳಿಗೆ ಇಳಿದರೆ ಅದು ಇತರೆ ಮಠಾಧೀಶರನ್ನು ಕೂಡ ಅನುಮಾನದಿಂದ ನೋಡುವಂತೆ ಮಾಡುತ್ತದೆ.


ಮಠಾಧೀಶರು ಕೂಡ ಕಾನೂನಿಗಿಂತ ದೊಡ್ದವರೇನಲ್ಲ ಎನ್ನುವುದು ಇವತ್ತಿನ ಬೆಳವಣಿಗೆಗಳು ಸಾಬೀತು ಪಡಿಸುತ್ತಿವೆ. ಆದರೆ ಮಠದ ಒಳಗಡೆ ಅವರೇ ಸರ್ವಾಧಿಕಾರಿಗಳು ಅಲ್ಲವೇ? ಅದನ್ನು ಅವರು ದುರುಪಯೋಗ ಮಾಡಿಕೊಂಡರೆ ಯಾರಿಗೆ ದೂರುವುದು? ಹಾಗಾಗಿ ಎಷ್ಟೋ ಪ್ರಕರಣಗಳು ಬೆಳಕಿಗೆ ಬರದೇ ಮುಚ್ಚಿ ಹೋಗಿಬಿಡಬಹುದು. ಮಠದ ಶಾಲೆಗಳಲ್ಲಿ ಓದುತ್ತಿರುವ ಎಷ್ಟು ವಿದ್ಯಾರ್ಥಿಗಳಿಗೆ ಮಠಾಧೀಶರನ್ನು ವಿರೋಧಿಸುವ ಧೈರ್ಯ ಇರುತ್ತದೆ? ಅವರ ಆರ್ಥಿಕ, ಸಾಮಾಜಿಕ ಪರಿಸ್ಥಿತಿಗಳು ಅವರನ್ನು ಪ್ರತಿಭಟಿಸದಂತೆ ತಡೆಯಬಹುದು. ಅಲ್ಲದೆ ಅವರ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಮಠ ನಡೆಸುವವರು ಮಾಡುತ್ತಾರಲ್ಲ. ಅವೆಲ್ಲ ಸೇರಿ, ಸಮಸ್ಯೆ ದೊಡ್ಡ ಹಂತ ತಲುಪುವವರೆಗೆ ಸಾರ್ವಜನಿಕರಿಗೆ ಅದರ ಸುಳಿವು ಸಿಗದಂತೆ ಆಗಿಬಿಡುತ್ತದೆ. ಕೊನೆಗೆ ವಿಷಯ ಹೊರ ಬಿದ್ದಾಗ, ಎಲ್ಲ ಟಿವಿ ಚಾನೆಲ್ ಗಳು ಮುಗಿ ಬಿದ್ದು ಅದನ್ನೇ ತೋರಿಸುತ್ತಾರೆ. ಆಗ ತಮ್ಮ ಮಕ್ಕಳನ್ನು ಮಠದ ಶಾಲೆಗಳಲ್ಲಿ ಬಿಟ್ಟ ಪೋಷಕರಿಗೆ ಆತಂಕವಾಗುವುದು ಸಹಜ.


ಧರ್ಮ ಎತ್ತಿ ಹಿಡಿಯಬೇಕಾದವರು ಅಧರ್ಮದ ಹಾದಿ ತುಳಿದಾಗ ಅದರಿಂದ ಆಗುವ ಹಾನಿ ಅಪಾರ. ದೇವಸ್ಥಾನಕ್ಕೆ ಹೋದಾಗ ಪ್ರಸಾದವನ್ನು ಕಣ್ಣು ಮುಚ್ಚಿಕೊಂಡು ತಿನ್ನುವ ನಾವುಗಳು ಅದು ವಿಷ ಆಗಿರಬಹುದೇ ಎನ್ನುವ ವಿಚಾರ ಕ್ಷಣ ಕಾಲಕ್ಕೂ ಮಾಡುವುದಿಲ್ಲ. ಹಾಗೆಯೆ ಮಠದ ಶಾಲೆಗಳಿಗೆ ಈ ಘಟನೆಯಿಂದ ಆಗುವ ಆಘಾತ ಬಹು ಕಾಲದವರೆಗೆ ಕಣ್ಮರೆಯಾಗುವುದಿಲ್ಲ.

Sunday, August 28, 2022

ಪಳಗಲಾರದ ಕುದುರೆಗೆ ಯಾರೂ ಬೆಲೆ ಕಟ್ಟುವುದಿಲ್ಲ

'ಗೆದ್ದರೆ ಸ್ವಾತಂತ್ರ್ಯ, ಸತ್ತರೆ ಸ್ವರ್ಗ' ಇದು ಕಿತ್ತೂರು ರಾಣಿ ಚೆನ್ನಮ್ಮ ಆಡಿದ ಮಾತು. ಸ್ವಾತಂತ್ರ್ಯ ಹೋರಾಟಗಾರರೆಲ್ಲ ಬದುಕಿದ್ದು ಹಾಗೇಯೇ. ಭಗತ್ ಸಿಂಗ್ ಆಗಲಿ, ಆಜಾದ್ ಆಗಲಿ, ಸುಭಾಷ್ ಚಂದ್ರ ಭೋಸ್ ಆಗಲಿ ಅವರೆಲ್ಲ ಬ್ರಿಟಿಷರಿಗೆ ಪಳಗಲಿಲ್ಲ. ಅವರು ಬ್ರಿಟಿಷರ ಆಸೆ, ಆಮಿಷಗಳಿಗೆ ಇಲ್ಲವೇ ಬೆದರಿಕೆಗಳಿಗೆ ಮಣಿಯಲಿಲ್ಲ. ಗಾಂಧಿಗೂ ಬ್ರಿಟಿಷರ ಕಾನೂನನ್ನು ಪ್ರಶ್ನಿಸುವ ನೈತಿಕ ಸ್ಥೈರ್ಯ ಇತ್ತು. ಸ್ವಾತಂತ್ರ್ಯ ಅಲ್ಲದೆ ಕಡಿಮೆ ಯಾವುದಕ್ಕೂ ರಾಜಿ ಆಗಲು ಅವರು ಸಿದ್ಧರಿರಲಿಲ್ಲ. ಸ್ವಾತಂತ್ರ್ಯ ಹೋರಾಟಗಾರರೆಲ್ಲ ಬ್ರಿಟಿಷರಿಗೆ ಪಳಗಲಾರದ ಕುದುರೆ ಆಗಿದ್ದರು. ಆದರೆ ಹೆಚ್ಚಿನ ಸ್ವಾತಂತ್ರ್ಯ ಹೋರಾಟಗಾರರ ಅಂತ್ಯ, ಅವರ ಸಾವು ಅಸಹಜ ಆಗಿತ್ತು. ಅದು ಸ್ವಾತಂತ್ರ್ಯ ಬಯಸಿದ್ದಕ್ಕೆ ಅವರು ತೆತ್ತ ಬೆಲೆ. ಅದೇ ಕಾರಣಕ್ಕೆ ಹೆಚ್ಚಿನ ಜನ ಸ್ವಾತಂತ್ರ್ಯ ಬಯಸದೆ ಹೇಗೋ ಒಂದು ಬದುಕಿರುವುದು ಬಯಸುತ್ತಾರೆ.


ಸ್ವಾತಂತ್ರ್ಯ ಎನ್ನುವ ಅಳಿವು ಉಳಿವಿನ ಹೋರಾಟ ಮನುಷ್ಯ ಭೂಮಿಗೆ ಬಂದಾಗಿನಿಂದ ಅವನ ಜೊತೆಯಾಗಿದೆ. ಆದಿವಾಸಿಯಾಗಿ ಬೆಟ್ಟ ಗುಡ್ಡಗಳಲ್ಲಿ ವಾಸಿಸುತ್ತಿದ್ದ ಮನುಷ್ಯ ಮೊದಲಿಗೆ ಪ್ರಾಣಿಗಳೊಡನೆ ಹೋರಾಡುತ್ತಿದ್ದ. ನಂತರ ನಿಯಾಂಡರ್ ಥಲ್ ಎನ್ನುವ ಇನ್ನೊಂದು ಬಲಿಷ್ಠ ಮನುಷ್ಯ ವರ್ಗದ ಜೊತೆ ಜಾಣತನದಿಂದ ಹೋರಾಡಿ ಬದುಕುಳಿದ ಹೋಮೋ ಸೇಪಿಯನ್ಸ್ ಗಳು ನಾವು. ನಂತರ ನಾಗರೀಕತೆ ಬೆಳೆದರೂ, ದಬ್ಬಾಳಿಕೆ-ಸ್ವಾತಂತ್ರ್ಯ ಹೋರಾಟದ ತಿಕ್ಕಾಟ ನಿಲ್ಲಲಿಲ್ಲ. ಭಾರತದ ಮೇಲೆ ಎಷ್ಟು ಜನ ಧಾಳಿ ನಡೆಸಿ ತಮ್ಮ ದಬ್ಬಾಳಿಕೆ ಮೆರೆದಿಲ್ಲ? ಕೊನೆಗೆ ಬಂದವರು ಬ್ರಿಟಿಷರು. ಅವರು ಹೋದ ಮೇಲೆ ನಮ್ಮ ನಮ್ಮ ಜನಗಳ ನಡುವೆಯೇ ತಿಕ್ಕಾಟ ಮುಂದುವರೆದಿದೆ.


ಅದು ದೇಶ-ಪಂಗಡಗಳ ನಡುವಿನ ಸಮಸ್ಯೆ ಅಷ್ಟೇ ಅಲ್ಲ. ಅದು ಪ್ರತಿಯೊಬ್ಬರೂ ತಮ್ಮ ಸ್ವಾತಂತ್ರ್ಯ ಹಕ್ಕನ್ನು ಉಳಿಸಿಕೊಳ್ಳುವ ಅಥವಾ ಇನ್ನೊಬ್ಬರಿಗೆ ಅಡಿಯಾಳಾಗಿ ಬದುಕುವ ಸಮಸ್ಯೆ. ಸಾಮಾನ್ಯವಾಗಿ ಜಗಳ-ಹೊಡೆದಾಟಗಳಿಂದ ದೂರ ಇರಲು ಬಯಸುವ ನಾನು ನನ್ನ ಸ್ವಾತಂತ್ರ್ಯ ವಿಷಯ ಬಂದಾಗ ಪೂರ್ತಿ ಶಕ್ತಿಯೊಂದಿಗೆ ಕಾದಾಡುತ್ತೇನೆ. ಬ್ರಿಟಿಷರಿಗೆ ಕಪ್ಪ ಕೊಡಲು ಬಯಸದ ಕಿತ್ತೂರು ರಾಣಿಯ ಹಾಗೆ. ನನ್ನಮೇಲೆ ಸವಾರಿ ಮಾಡಲು ಬಂದ ಎಲ್ಲರಿಗೂ, ಅದು ಆಫೀಸ್ ನಲ್ಲಿ ಬಾಸು, ಮನೆಯಲ್ಲಿ ಹೆಂಡತಿ, ಶ್ರೀಮಂತಿಕೆಯ ದರ್ಪ ಇರುವ ಸಂಬಂಧಿಗಳು, ರೌಡಿಗಳಂತೆ ಆಡುವ ಅಣ್ಣ-ತಮ್ಮಂದಿರು, ಸ್ನೇಹಿತರ ವೇಷದ ವಂಚಕರು ಹೀಗೆ ಎಲ್ಲರಿಗೂ ನನ್ನ ಹೋರಾಟದ ಬಿಸಿ ಮುಟ್ಟಿಸಿದ್ದೇನೆ. ಸೋಲಿನ ರುಚಿ ತೋರಿಸಿದ್ದೇನೆ. ಅವರಿಗೆ ಒಮ್ಮೆ ಸೋತರೆ ಆಯಿತು. ಅವರು ನಿಮ್ಮ ಮೇಲೆ ಸವಾರಿ ಮಾಡಲು ತೊಡಗುತ್ತಾರೆ. ನೀವು ಮನುಷ್ಯರಿಂದ ಪ್ರಾಣಿಯಾಗಿ ಬದಲಾಗಿ ಬಿಡುತ್ತೀರಿ. ಅದೇ ನೀವು ಪಳಗಲಾರದ ಕುದುರೆ ಆಗಿದ್ದರೆ, ನೀವು ನಿಮ್ಮ ಹಿಂದೆ ಬಿದ್ದವರನ್ನು ಹಿಂಗಾಲಿನಿಂದ ಝಾಡಿಸಿ ಬಿಡುತ್ತೀರಿ. ನಿಮ್ಮ ಬೆನ್ನೇರಿದರೆ ಅವರನ್ನು ಆಯಕಟ್ಟಿನ ಸ್ಥಳದಲ್ಲಿ ಕೆಡವುತ್ತೀರಿ. ಮತ್ತೆ ನಿಮ್ಮ ಸ್ವಾತಂತ್ರ್ಯ ಸಾಬೀತು ಪಡಿಸುತ್ತಿರಿ. ಅದೇ ಕಾರಣಕ್ಕೆ ನಾನು ದಬ್ಬಾಳಿಕೆ ಮಾಡುವುವರ ಜೊತೆಗೆ ಪೂರ್ತಿ ಶಕ್ತಿಯೊಂದಿಗೆ ಹೋರಾಡುತ್ತೇನೆ. ನನಗೆ ಒಮ್ಮೆ ಯಾರಾದರೂ ಬ್ಲಾಕ್ ಮೇಲ್ ಮಾಡಿದರೆ ಅಥವಾ ಡಬಲ್ ಗೇಮ್ ಆಡಿದರೆ ಅವರಿಗೆ ಇನ್ನೊಮೆ ಅವಕಾಶ ಕೊಡದಂತೆ ಜಾಗರೂಕತೆ ವಹಿಸುತ್ತೇನೆ. ಅವರ ಮನೆಗೆ ಕಾಲಿಡುವುದಿಲ್ಲ ಮತ್ತು ಅವರು ನನ್ನ ಮನೆಗೆ ಕಾಲಿಡದಂತೆ ಮಾಡುತ್ತೇನೆ. ಇದೇ ಕಾರಣಕ್ಕೆ ನೌಕರಿಗಳನ್ನು ಬದಲಾಯಿಸಿದ್ದೇನೆ. ಒಬ್ಬಂಟಿಯಾದರು ಧಿಕ್ಕಾರ ಹೇಳಿದ್ದೇನೆ. ಆದರೆ ಸ್ವಾತಂತ್ರ್ಯ ಕಳೆದುಕೊಂಡಿಲ್ಲ. ನನ್ನ ಜೊತೆಗೆ ದಬ್ಬಾಳಿಕೆ ಮಾಡಲು ಬಂದವರು ನಾನು ಪಳಗಲಾರದ ಕುದುರೆ ಎನ್ನುವ ಅರಿವು ಬಂದೊಡನೆ ನನ್ನ ತಂಟೆ ಕೈ ಬಿಡುತ್ತಾರೆ. ಆದರೆ ಬದಲಾಗುವ ಕಾಲ ಹೊಸ ಜನರ ಸಂಪರ್ಕ ತರುತ್ತದೆ. ಕೆಲವರು ಗೆಳೆಯರು ಆದರೆ, ಕೆಲವರು ದಬ್ಬಾಳಿಕೆ ಮಾಡಲು ಪ್ರಯತ್ನಿಸಿ ಬೇರೆ ದಾರಿ ಇಲ್ಲದೆ ದೂರ ಸರಿಯುತ್ತಾರೆ.


ಪಳಗಿದ ಕುದುರೆಗೆ ಬೆಲೆ ಕಟ್ಟಿ ಮಾರಾಟ ಮಾಡಬಹುದು ಮತ್ತು ಅದನ್ನು ಸ್ವಾರ್ಥ ಕೆಲಸಕ್ಕೆ ಉಪಯೋಗಿಸಿಕೊಳ್ಳಬಹುದು. ಆದರೆ ಪಳಗಲಾರದ ಕುದುರೆ ಬೇರೆಯವರ ದೌರ್ಜನ್ಯಕ್ಕೆ ಸಿಕ್ಕುವುದಿಲ್ಲ ಅಂದ ಮೇಲೆ ಅದಕ್ಕೆ ಬೆಲೆ ಯಾರು ಕಟ್ಟುತ್ತಾರೆ? ಬದಲಿಗೆ ಅದರ ಸಾವು ಬಯಸುತ್ತಾರೆ. ಹಾಗೇಯೇ ಇದು ಒಂದು ದಿನದ ಮಾತು ಅಲ್ಲ. ನೀವು ಸ್ವಾತಂತ್ರ್ಯ ಬಯಸಿದರೆ, ಮೊಗಲರಿಗೆ ಸಾಮಂತನಾಗಿ ಇರಲು ಒಪ್ಪದ ಶಿವಾಜಿಯ ಹಾಗೆ ನೀವು ಜೀವನ ಪೂರ್ತಿ ಕಾದಾಡುತ್ತ ಇರಬೇಕು. ಸ್ವಾತಂತ್ರ್ಯದ ಬೆಲೆ ತೆರಲು ತಯ್ಯಾರಾಗಿರಬೇಕು. ಆದರೆ ಯಾರೋ ಹೇಳಿದ ಹಾಗೆ ಬದುಕುವುದಕ್ಕಿಂತ ಅಪಾಯ ತಂದೊಡ್ಡುವ ಸ್ವಾತಂತ್ರ್ಯವೇ ನನಗೆ ಹೆಚ್ಚು ಪ್ರೀತಿ. ಬದುಕುವುದು ಸ್ವಲ್ಪ ದಿನವೇ ಆದರೂ, ನಾನು ಬದುಕುವುದು ನನ್ನ ಇಚ್ಛೆಯ ಹಾಗೆ.

Saturday, August 20, 2022

ಭಾರತಾಂಬೆಗೆ ಶರಣು

ಭಾರತ ಒಂದು ಭೂಭಾಗ ಎಂದುಕೊಂಡರೆ ಅದರ ಹೆಚ್ಚಿನ ಭಾಗವನ್ನು ಆಳಿದ ಮೊದಲ ರಾಜ ಅಶೋಕ ಚಕ್ರವರ್ತಿ. ಆ ನಂತರ ಉತ್ತರ, ದಕ್ಷಿಣ ಭಾಗಗಳನ್ನು ಬೇರೆ ಬೇರೆ ರಾಜರುಗಳು ಆಳಿದರೂ ಅವುಗಳು ಸಂಪರ್ಕದಲ್ಲಿದ್ದವು. ಆದರೆ ಮಹಾನ್ ಭಾರತದ ಕಲ್ಪನೆ ವಿದೇಶಿಯಗರಿಗೆ ನಮಗಿಂತ ಹೆಚ್ಚಾಗಿ ಇತ್ತು. ಭಾರತದ ಜೊತೆ ವ್ಯಾಪಾರ ಮಾಡಲು ವರ್ತಕರು ಹಾತೊರೆಯುತ್ತಿದ್ದರು. ಪ್ರವಾಸಿಗರು ಮುಗಿಬೀಳುತ್ತಿದ್ದರು. ಧಾಳಿಕೋರರು ಸಂಚು ಹೆಣೆಯುತ್ತಿದ್ದರು. ಅವರಿಗೆ ಸಿಂಧು ನದಿ ದಾಟಿದರೆ ಸಿಗುವ ಪ್ರದೇಶವೇ ಭಾರತ ಆಗಿತ್ತು. ಸಮುದ್ರ ಭಾಗದಿಂದ ಕೇರಳಕ್ಕೆ ಬಂದರೆ ಅದು ಕೂಡ ಅವರಿಗೆ ಭಾರತವೇ. ಗಾಳಿ ಬೀಸುವುದು ಹೆಚ್ಚು ಕಡಿಮೆ ಆಗಿ ಅವರ ಹಡಗು ಗೋವಾ ಗೆ ಬಂದು ಸೇರಿದರೆ ಅವರಿಗೆ ಅದು ಕೂಡ ಭಾರತವೇ. ಅದೇ ಇಂಗ್ಲಿಷರು ಸುತ್ತಿ ಬಳಸಿ ಕಲ್ಕತ್ತೆಗೆ ಬಂದರಲ್ಲ ಅದು ಕೂಡ ಭಾರತವೇ ಆಗಿತ್ತು. ಬ್ರಿಟಿಷರು ಭಾರತವನ್ನು ಒಟ್ಟುಗೂಡಿಸಿದ್ದು ಯಾವುದೇ ಸದುದ್ದೇಶ್ಶದಿಂದಲ್ಲ. ತಮ್ಮ ಆಡಳಿತ ಸುಗಮ ಆಗಲಿ ಎನ್ನುವುದಷ್ಟೆ ಆಗಿತ್ತು. ಆದರೆ ಇಂಡಿಯನ್ ರೈಲ್ವೇಸ್, ಇಂಡಿಯನ್ ಪೋಸ್ಟಲ್ ಸರ್ವಿಸ್ ಎನ್ನುವ ಸಂಸ್ಥೆಗಳು ಭಾರತದ ಉದ್ದಗಲಕ್ಕೂ ಹರಡಿ ಸಂಪರ್ಕ ಕಲ್ಪಿಸುವ ಜಾಲಗಳಾಗಿ ಹರಡಿಬಿಟ್ಟವು. ಅದರ ಸದುದ್ದೇಶ ಪಡೆದದ್ದು ಸ್ವತಂತ್ರ ಹೋರಾಟಗಾರರು.


ಮೋಹನ್ ದಾಸ್ ಎನ್ನುವ ವಕೀಲ ದಕ್ಷಿಣ ಆಫ್ರಿಕಾ ದಲ್ಲಿ ರೈಲಿನಿಂದ ಹೊರ ದಬ್ಬಿಸಿಕೊಂಡಾಗ ಅವನಲ್ಲಿ ಒಂದು ಸ್ವಾತಿಕ ಕಿಚ್ಚು ಮೂಡಿತ್ತು. ಅವಮಾನ ನುಂಗಲು ಸಿದ್ಧನಿರದ ಆತ ವ್ಯವಸ್ಥೆ ಬದಲಾಯಿಸಲು ಹೋರಾಟ. ಭಾರತಕ್ಕೆ ಮರಳಿ ಬಂದು ಮೊದಲ ಬಾರಿಗೆ ಅಹ್ಮದಾಬಾದ್ ನಲ್ಲಿ ಬಟ್ಟೆ ನೇಯುವ ಕಾರ್ಮಿಕರ ಪರವಾಗಿ ಉಪವಾಸ ಸತ್ಯಾಗ್ರಹ ಮಾಡಿದ. ಅವನ ಹಿಂದೆ ಜನರು ಮೂವತ್ತಿಗಿಂತ ಹೆಚ್ಚಿರಲಿಲ್ಲ. ಅದು ೧೯೧೯. ಆದರೆ ಅವನು ಸಾವಿರಾರು ಪಾತ್ರಗಳು ಬರೆದ. ನೂರಾರು ಊರು ಅಲೆದ. ಹೊಸ ನಾಯಕರನ್ನು ಹುಟ್ಟು ಹಾಕಿದ. ವಿದೇಶದ ಬಟ್ಟೆ ಸುಟ್ಟ. ಮತ್ತೆ ನೂಲುವುದನ್ನು ಕಲಿಸಿದ. ನಿಯಮಕ್ಕೆ ವಿರುದ್ಧವಾಗಿ ಸಮುದ್ರದ ನೀರಿನಿಂದ ಉಪ್ಪು ಮಾಡಲು ಹೊರಟ. ಹಲವಾರು ಬಾರಿ ಬಂಧನಕ್ಕೊಳಗಾದ. ಬಂಧಿಸಲು ಬಂದ ಬ್ರಿಟಿಷ್ ಪೊಲೀಸ್ ರಿಗೆ ನಿಮ್ಮ ಹತ್ತಿರ ಅರೆಸ್ಟ್ ವಾರೆಂಟ್ ಇದೆಯೇ ಎಂದು ಕೇಳಿದ ಮೊದಲ ಸ್ವಾತಂತ್ರ ಹೋರಾಟಗಾರ ಆತ. ಸಣ್ಣ ಮೈಯ, ಅಸಾಧಾರಣ ಧೈರ್ಯ ಇದ್ದ ವ್ಯಕ್ತಿ 'ಬ್ರಿಟಿಷರೇ ಭಾರತ ಬಿಟ್ಟು ತೊಲಗಿ' ಎನ್ನುವ ಚಳುವಳಿ ಆರಂಭಿಸಿದ. ಅದು ೧೯೪೨. ಅಷ್ಟೊತ್ತಿಗೆಲ್ಲ ಆತನಿಗೆ ಮೂವತ್ತು ಕೋಟಿ ಹಿಂಬಾಲಕರು ಇದ್ದರು.


ಆದರೆ ಸ್ವಾತಂತ್ರ ಹೋರಾಟದಲ್ಲಿ ಸಾಕಷ್ಟು ಜನ ಮುಂಚೂಣಿಯಲ್ಲಿದ್ದರು. ಬಿಸಿ ರಕ್ತದ ಭಗತ್ ಸಿಂಗ್, ಚಂದ್ರಶೇಖರ್ ಆಜಾದ್ ತರಹದವರು. 'ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ ಕೊಡುತ್ತೇನೆ' ಎಂದ ಅಪ್ರತಿಮ ದೇಶ ಭಕ್ತ ಸುಭಾಷ್ ಚಂದ್ರ ಬೋಸ್ ಇದ್ದರು. ಆಧ್ಯಾತ್ಮಿಕವಾಗಿ ಕ್ಷೇತ್ರದಲ್ಲಿದ್ದರು ಭಾರತ ಸ್ವತಂತ್ರ ಹೊಂದುವುದು ಬಯಸಿದ್ದ ಸ್ವಾಮಿ ವಿವೇಕಾನಂದ, ಅರವಿಂದೋ ಘೋಷ್ ಇದ್ದರು. ಅವರೆಲ್ಲರ ದಾರಿ ಬೇರೆ ಬೇರೆ. ಆದರೆ ಉದ್ದೇಶ ಒಂದೇ. ಸ್ವಾತಂತ್ರ ಭಾರತ. ಎರಡನೇ ಜಾಗತಿಕ ಯುದ್ಧದಲ್ಲಿ ಸೋತು ಸುಣ್ಣವಾಗಿದ್ದ ಬ್ರಿಟಿಷರು ಜಾಗತಿಕ ಬೆಳವಣಿಗೆಗಳ ಮೇಲೆ ತಮ್ಮ ಹಿಡಿತ ಕಳೆದುಕೊಂಡು ತಮ್ಮ ಅಧಿಕಾರವನ್ನು ಬಿಟ್ಟು ಕೊಡುತ್ತ ಹೋದರು. ಆಂತರಿಕ ಮತ್ತು ಬಾಹ್ಯ ಬೆಳವಣಿಗೆಗಳು ಭಾರತ ಸ್ವಾತಂತ್ರ ಆಗುವುದು ಬಿಟ್ಟರೆ ದಾರಿಯೇ ಇಲ್ಲ ಎನ್ನುವ ಸನ್ನಿವೇಶ ಸೃಷ್ಟಿ ಆಗಿಬಿಟ್ಟಿತು.


ಎಪ್ಪತೈದು ವರ್ಷಗಳ ಬಳಿಕ ಇಂದು ಸ್ವಾತಂತ್ರ ಭಾರತದಲ್ಲಿ ಅಭಿವೃದ್ಧಿ ಸಮರ್ಪಕ ಏನು ಅನಿಸುವುದಿಲ್ಲ. ಆದರೂ ಕೂಡ ಇದು ನಮ್ಮ ಭಾರತ ಎನ್ನುವ ನಂಬಿಕೆ ನಮ್ಮಲ್ಲಿ ಮನೆ ಮಾಡಿದೆ. ಅಂದಿಗೆ ಸ್ವತಂತ್ರ ಹೋರಾಟಗಾರರು ನಮ್ಮನ್ನು ಒಟ್ಟಿಗೆ ತರಲು ಹರಪ್ರಯತ್ನ ಪಟ್ಟರೆ ಇಂದಿಗೆ ಹಬ್ಬಗಳು, ಚಿತ್ರರಂಗ, ಕ್ರಿಕೆಟ್, ಗಡಿ ಸಮಸ್ಯೆಗಳು ನಮ್ಮನ್ನು ಒಟ್ಟಿಗೆ ತರುತ್ತಿವೆ. ನಮ್ಮ ದೇಶ ತಡವಾಗಿ ಆದರೂ ಹಂತ ಹಂತವಾಗಿ ಬಲಿಷ್ಠ ರಾಷ್ಟ್ರ ಎನಿಸಿಕೊಳ್ಳುತ್ತಿದೆ. 


ನಮ್ಮ ಇಂದಿನ ಸಮಸ್ಯೆಗಳು ಬೇರೆ ಇವೆ. ಬೇರೆ ದೇಶಗಳ ಜನ ಮಂಗಳ ಗ್ರಹಕ್ಕೆ ಹೋಗುವ ಪ್ರಯತ್ನ ಮಾಡುತ್ತಿದ್ದಾರೆ ಆದರೆ ನಾವು ಇತಿಹಾಸದಲ್ಲೇ ಕಳೆದು ಹೋಗಿದ್ದೇವೆ. ಅದರಿಂದ ಹೆಚ್ಚಿನ ಜನ ಹೊರ ಬಂದು ಹೊಸ ಪ್ರಯತ್ನಗಳನ್ನು ಜಾರಿ ಇಟ್ಟಾಗ ನಮ್ಮ ಭವಿಷ್ಯ ಕೂಡ ಉಜ್ವಲ ಆಗುತ್ತಾ ಹೋಗುತ್ತದೆ. ಎಲ್ಲ ಸಮಸ್ಯೆ ಮತ್ತು ಅವಕಾಶಗಳ ನಡುವೆ ಭಾರತಾಂಬೆ ನೂರು ಕೋಟಿ ಜನಕ್ಕೂ ಹೆಚ್ಚು ಜನರಿಗೆ ಆಶ್ರಯವಿತ್ತು ಸಲಹುತ್ತಿದ್ದಾಳೆ. ಅವಳಿಗೆ ಶರಣು!

Friday, August 12, 2022

ಕಾಡು ಕುದುರೆ ಓಡಿ ಬಂದಿತ್ತಾ…

ಗಾಯಕ ಶಿವಮೊಗ್ಗ ಸುಬ್ಬಣ್ಣನವರು ಇಂದು ವಿಧಿವಶ ಆಗಿದ್ದಾರೆ. ಅವರು ಮುಂಚೂಣಿಗೆ ಬಂದಿದ್ದು "ಕಾಡು ಕುದುರೆ ಓಡಿ ಬಂದಿತ್ತಾ" ಹಾಡಿನ ಮೂಲಕ. ನಂತರ ಜನಪ್ರಿಯತೆ ಗಳಿಸಿದ್ದು ಸಂತ ಶಿಶುನಾಳ ಶರೀಫರ ಹಾಡುಗಳ ಮೂಲಕ. ೮೩ ವರುಷಗಳ ತುಂಬು ಜೀವನ  ನಡೆಸಿದ ಅವರು ಸಾಕಷ್ಟು ಪ್ರಶಸ್ತಿ, ಗೌರವಗಳಿಗೆ ಪಾತ್ರ ಆಗಿದ್ದಾರೆ. ಅವರ ಕಂಠದಿಂದ ಹಾಡುಗಳಲ್ಲಿ ಹೊರ ಹೊಮ್ಮುವ ಶಕ್ತಿ ಅವರು ಹಾಡಿದ್ದ ಹಾಡುಗಳನ್ನು ಜನರಿಗೆ ಹತ್ತಿರವಾಗಿಸುತ್ತವೆ. ಶಿವಮೊಗ್ಗದಲ್ಲಿ ಹುಟ್ಟಿ ಬೆಳೆದು ಶಾಸ್ತ್ರೀಯ ಸಂಗೀತ ಕಲೆತು ನಂತರ ಬೆಂಗಳೂರಿನಲ್ಲಿ ನೆಲೆಸಿದ್ದ ಅವರು ಕನ್ನಡ ಸಂಸ್ಕೃತಿಯ ಭಾಗವಾಗಿದ್ದರು.

ಚಂದ್ರಶೇಖರ ಕಂಬಾರ ಅವರು ರಚಿಸಿದ ಕಾಡು ಕುದುರೆ ಓಡಿ ಬಂದಿತ್ತಾ ಹಾಡು ಹೀಗಿದೆ: 

ಕಾಡು ಕುದುರೆ ಓಡಿ ಬಂದಿತ್ತಾ
ಕಾಡು ಕುದುರೆ ಓಡಿ ಬಂದಿತ್ತಾ

ಊರಿನಾಚೆ ದೂರದಾರಿ 
ಸುರುವಾಗೊ ಜಾಗದಲ್ಲಿ 
ಮೂಡಬೆಟ್ಟ ಸೂರ್ಯ ಹುಟ್ಟಿ 
ಹೆಸರಿನ ಗುಟ್ಟ ಒಡೆವಲ್ಲಿ 
ಮುಗಿವೇ ಇಲ್ಲದ ಮುಗಿಲಿನಿಂದ 
ಜಾರಿಬಿದ್ದ ಉಲ್ಕೀ ಹಾಂಗ 
ಕಾಡಿನಿಂದ ಚಂಗನೆ ನೆಗೆದಿತ್ತ ||ಪ|| 

ಮೈಯಾ ಬೆಂಕಿ ಮಿರುಗತಿತ್ತ 
ಬ್ಯಾಸ್ಗಿ ಬಿಸಿಲ ಉಸಿರಾಡಿತ್ತ 
ಹೊತ್ತಿ ಉರಿಯೊ ಕೇಶರಾಶಿ 
ಕತ್ತಿನಾಗ ಕುಣೀತಿತ್ತ 
ಧೂಮಕೇತು ಹಿಂಬಾಲಿತ್ತ 
ಹೌಹಾರಿತ್ತ ಹರಿದಾಡಿತ್ತ 
ಹೈಹೈ ಅಂತ ಹಾರಿಬಂದಿತ್ತ ||1|| 

ಕಣ್ಣಿನಾಗ ಸಣ್ಣ ಖಡ್ಗ 
ಆಸುಪಾಸು ಝಳಪಿಸಿತ್ತ 
ಬೆನ್ನ ಹುರಿ ಬಿಗಿದಿತ್ತಣ್ಣ 
ಸೊಂಟದ ಬುಗುರಿ ತಿರಗತಿತ್ತ 
ಬಿಗಿದ ಕಾಂಡ ಬಿಲ್ಲಿನಿಂದ 
ಬಿಟ್ಟ ಬಾಣಧಾಂಗ ಚಿಮ್ಮಿ 
ಹದ್ದ ಮೀರಿ ಹಾರಿ ಬಂದಿತ್ತ ||2||
 
ನೆಲ ಒದ್ದು ಗುದ್ದ ತೋಡಿ 
ಗುದ್ದಿನ ಬದ್ದಿ ಒದ್ದಿಯಾಗಿ 
ಒರತಿ ನೀರು ಭರ್ತಿಯಾಗಿ 
ಹರಿಯೋಹಾಂಗ ಹೆಜ್ಜೀ ಹಾಕಿ 
ಹತ್ತಿದವರ ಎತ್ತಿಕೊಂಡು 
ಏಳಕೊಳ್ಳ ತಿಳ್ಳೀ ಹಾಡಿ 
ಕಳ್ಳೆ ಮಳ್ಳೆ ಆಡಿಸಿ ಕೆಡವಿತ್ತ ||3||


Song Link: https://www.youtube.com/watch?v=U6m9JSjH8fY

ಕೊನೆಯ ಸಾಲುಗಳನ್ನು ಮತ್ತೆ ಓದಿಕೊಳ್ಳಿ. ಕಾಡು ಕುದುರೆ ಹತ್ತಿದವರ ಎತ್ತಿಕೊಂಡು ಕಳ್ಳೆ ಮಳ್ಳೆ ಆಡಿಸಿ ಕೆಡವಿ ಹೋಗಿದೆ.

ಶಿವಮೊಗ್ಗ ಸುಬ್ಬಣ್ಣನವರಿಗೆ ಶ್ರದ್ಧಾಂಜಲಿಗಳು. 



ಹಾಸ್ಯ ಬರಹ: ಕೈಗೆ ಬಂದ ತುತ್ತು ...

ದೇವರು ಕರುಣಾಮಯಿ, ಅವನು ಎಲ್ಲರ ತಪ್ಪುಗಳನ್ನು ಮನ್ನಿಸುತ್ತಾನೆ ಎಂದು ಕೇಳಿದ್ದೆ. ಅದು ನನಗೆ ಅನುಭವ ಆಗುವ ಕಾಲ ಬಂದೇ ಬಿಟ್ಟಿತ್ತು. ಎರಡು ಮೂರು ದಿನಗಳಿಂದ ದುಸು-ಮುಸು ಎನ್ನುತ್ತಿದ್ದ ನನ್ನ ಪತ್ನಿ, ತನ್ನ ಅಕ್ಕಳ ಜೊತೆಗೆ ದೀರ್ಘ ಸಂಭಾಷಣೆ ಕೂಡ ಮಾಡಿ, ತನ್ನ ಬಟ್ಟೆ ಬರೆಗಳನ್ನು ಮಂಚದ ಮೇಲೆ ರಾಶಿ ಹಾಕಿ ಅವುಗಳನ್ನು ಪ್ಯಾಕ್ ಮಾಡುತ್ತಾ ತನ್ನ ದೃಢ ನಿರ್ಧಾರ ಘೋಷಿಸಿಯೇ ಬಿಟ್ಟಳು. 'ನಾನು ಮನೆ ಬಿಟ್ಟು ಹೋಗುತ್ತಿದ್ದೇನೆ. ನನಗಿನ್ನು ನಿನ್ನ ಸಹವಾಸ ಸಾಕು!"

 

ಆ ಮಾತು ಕೇಳಿದ ತಕ್ಷಣ ಸಪ್ತ ಸಮುದ್ರಗಳು ಉಕ್ಕೇರಿದ ಹಾಗೆ ನನ್ನ ಹೃದಯ ಸಂತೋಷದ ಕಡಲಾಗಿತ್ತು. 'ಗಗನವೋ ಎಲ್ಲೋ, ಭೂಮಿಯು ಎಲ್ಲೋ" ಎಂದು ನಟಿ ಕಲ್ಪನಾರ ಹಾಗೆ ಗೆಜ್ಜೆ ಕಟ್ಟಿ ಕುಣಿಯಬೇಕು ಎನ್ನಿಸಿಬಿಟ್ಟಿತ್ತು. ಆದರೂ ಸಾವರಿಸಿಕೊಂಡು ಹೇಳಿದೆ "ಅಣ್ಣನ ಹತ್ತಿರ ಬಂದು ನಿನಗೆ ಸೇರಬೇಕಾದ ಆಸ್ತಿ ಪತ್ರಗಳನ್ನು ಬರೆಸಿಕೊಂಡು ಹೋಗು". ಇಷ್ಟಕ್ಕೂ ಅವಳು ಅರ್ಧ ಬಿಟ್ಟು ಪೂರ್ತಿ ಆಸ್ತಿ ತೆಗೆದುಕೊಂಡು ಹೋಗಲಿ. ಆಸ್ತಿ ಯಾವನಿಗೆ ಬೇಕು? ಬೇಕಿರುವುದು ಜೀವನದ ಸ್ವಾತಂತ್ರ್ಯ. "ಹೊಳೆ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ" ಎನ್ನುವ ಹಾಗೆ ಎಲ್ಲದಕ್ಕೂ ಮೂಗು ತೂರಿಸುವ ಮೂದೇವಿ ಜೊತೆ ಯಾರು ಸಂಸಾರ ಮಾಡಿಕೊಂಡಿರುತ್ತಾರೆ? ಮಸ್ಕಿ ಭ್ರಮರಾಂಭ ದೇವಸ್ಥಾನದಲ್ಲಿ ನನ್ನ ಮದುವೆಯಲ್ಲಿ ಊಟ ಮಾಡಿದ ಜನರಿಗಿಂತ ಹೆಚ್ಚಿನ ಜನರಿಗೆ ಅನ್ನ ದಾನ ಮಾಡಿದರೆ ಆ ಪಾಪ ಸಂಪೂರ್ಣ ಕಳೆಯುತ್ತದೆ ಏನೋ? ಅದನ್ನು ಹೇಳಬಲ್ಲ ಯಾವ ಸ್ವಾಮಿಗಳ ಹೆಸರು ನನಗೆ ಆ ಕ್ಷಣಕ್ಕೆ ತೋಚಲಿಲ್ಲ.

 

ಇಷ್ಟಕ್ಕೂ ನಾನು ಮದುವೆ ಆಗಿದ್ದು 'ಮದುವೆ ಆಗದೆ ಹುಚ್ಚು ಬಿಡುವುದಿಲ್ಲ, ಹುಚ್ಚು ಬಿಡದೆ ಮದುವೆ ಆಗುವುದಿಲ್ಲ' ಎನ್ನುವ ಮನಸ್ಥಿತಿಯಲ್ಲಿ ಇದ್ದಾಗ. ಮದುವೆ ಆದ ಸ್ನೇಹಿತರ ಅನುಭವ ಗಮನಿಸಿದರೆ ಕೆಲವು ಹಾಗೆ. ಕೆಲವು ಹೀಗೆ. ಒಂಥರಾ ಲಾಟರಿ ಇದ್ದ ಹಾಗೆ. ಯಾರೋ ಒಬ್ಬರು  ಲಾಟರಿ ಗೆದ್ದರೆ ಸಾವಿರಾರು, ಲಕ್ಷಾಂತರ ಜನ ದುಡ್ಡು ಕಳೆದುಕೊಳ್ಳುವುದಿಲ್ಲವೇ? ಆದರೆ ಈ ಗಂಡಸರಿಗೆ ಒಂದು ಹುಚ್ಚು ನಂಬಿಕೆ. ತಾವೇ ಗೆಲ್ಲುವುದು ಎನ್ನುವ ಆಸೆಗೆ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದುಬಿಡುತ್ತಾರೆ. ಹೂವಿನ ಗಿಡದಲ್ಲಿ ಹೂವು ಉಂಟು, ಮುಳ್ಳು ಉಂಟು. ಹೂವು ಬೇಗ ಬಾಡಿ ಹೋಗುತ್ತದೆ. ಆದರೆ ಮುಳ್ಳು? ಆಮೇಲೆ ಒಂದು ಹೂವಿಗೆ ಒಂದೇ ಮುಳ್ಳಲ್ಲ ಹಲವಾರು ಮುಳ್ಳುಗಳು. ಮದುವೆಯ ಆರಂಭದಲ್ಲಿ ಮಾತ್ರ ಹೂವು ಆಮೇಲೆ ಪಕಳೆಗಳೆಲ್ಲ ಉದುರಿ ಉಳಿಯುವುದು ಮೊನಚು ಮುಳ್ಳು ಮಾತ್ರ.

 

ಅದು ಏನೇ ಇರಲಿ. ದೇವರು ನನ್ನ ಪಾಲಿಗೆ ಕೊನೆಗೂ ಕಣ್ತೆರೆದಿದ್ದ. "ಭಾಗ್ಯದ ಬಾಗಿಲು" ಎನ್ನುವ ಅಣ್ಣಾವ್ರ ಚಲನ ಚಿತ್ರ ಇದೆಯಲ್ಲ. ಅದರ ಪೋಸ್ಟರ್ ಡೌನ್ಲೋಡ್ ಮಾಡಿ ವಾಟ್ಸಪ್ಪ್ ನಲ್ಲಿ ಸ್ನೇಹಿತ ಒಬ್ಬನಿಗೆ ಕಳಿಸಿದೆ. ಸಂಭ್ರಮ, ಉಲ್ಲಾಸ ಹಂಚಿಕೊಳ್ಳಲು ಸ್ನೇಹಿತರಿಗಿಂತ ಬೇರೆ ಯಾರು ಬೇಕು? ಅವನಿಗೆ ಹೊಟ್ಟೆ ಉರಿ ಆಯಿತೋ ಏನೋ? ಆದರೂ ತೋರಿಸಿಕೊಳ್ಳದೆ "ಯಾವಾಗ ಪಾರ್ಟಿ?" ಎಂದು ಮೆಸೇಜ್ ಕಳಿಸಿದ. ಮುಂದೆ ಏನೆಲ್ಲಾ ಮಾಡಬಹುದು ಎಂದು ಮನಸ್ಸು ಮಂಡಿಗೆ ತಿನ್ನತೊಡಗಿತ್ತು. 'ದಿಲ್ ಚಾಹತಾ ಹೈ", "ಜಿಂದಗಿ ನ ಮಿಲೆಗಾ ದುಬಾರಾ" ಚಿತ್ರಗಳಲ್ಲಿ ಸ್ನೇಹಿತರು ಪ್ರವಾಸ ಹೋಗುತ್ತಾರಲ್ಲ. ಹೇಗಾದರೂ ಮಂಗಳೂರಿನಿಂದ ಗೋವಾ ಗೆ ಡ್ರೈವ್ ಮಾಡಿಕೊಂಡ ಹೋಗಬೇಕೆನ್ನುವ ಆಸೆ ಬಾಕಿ ಉಳಿದಿತ್ತು. ಮತ್ತು ದಾರಿಯಲ್ಲಿನ ಪ್ರಕೃತಿಯ ರಮಣೀಯ ಸೊಬಗನ್ನು ಸವಿಯುವ ಇರಾದೆ. ಬೆಟ್ಟದ ತುದಿಯಿಂದ ವಿಶಾಲ ಸಮುದ್ರದ ಫೋಟೋಗಳನ್ನು ತೆಗೆಯುವಾಸೆ, ಕೆಂಪು ಸೂರ್ಯ ನೀರೊಳಗೆ ಮುಳುಗುವುದು, ಎಲ್ಲಿಗೂ ಹೋಗದೆ ಅಲ್ಲಿಯೇ ನಿಂತ ಒಂಟಿ ಬೋಟ್ ಗಳು ಹೀಗೆ ಅನೇಕ ಸನ್ನಿವೇಶಗಳು. ಚಿತ್ರ ತೆಗೆಯಲು ಅಲ್ಲಿ ಅವಕಾಶಗಳಿಗೇನು ಕಡಿಮೆ?

 

ಅದೇ ಐಡಿಯಾ ಹೆಂಡತಿಗೆ ಕೊಟ್ಟಿದ್ದರೆ ಅವಳು ಪ್ರವಾಸಕ್ಕೆ ಖಂಡಿತ ಒಪ್ಪಿಕೊಳ್ಳುತ್ತಿದ್ದಳು. ಆದರೆ ಅವಳ ಲಗೇಜ್ ಕಾರಿನಿಂದ ಹತ್ತಿ ಇಳಿಸುವದರಲ್ಲೇ ಕಾಲ ಕಳೆದು ಹೋಗುತ್ತಿತ್ತು. ಅವಳು ಬೆಳ್ಳಿಗೆ ರೆಡಿ ಆಗುವುದು ಕಾಯುತ್ತ ಕೂತು ತಾಳ್ಮೆಯೆಲ್ಲ ಕರಗಿ ಹೋಗುತ್ತಿತ್ತು. ಅವಳು ಮಾಡಿದ ಶಾಪಿಂಗ್ ವಸ್ತುಗಳನ್ನು ಹೊತ್ತು ತರುವ ಕೂಲಿ ಕೆಲಸ ನನ್ನದೇ. ಅವಳು ಬೀದಿಯಲ್ಲಿ ವ್ಯಾಪಾರಕ್ಕೆ ಇಳಿದರೆ ಸಾಕಷ್ಟು ಹೊತ್ತು ಸುಮ್ಮನೆ ಕೈ ಕಟ್ಟಿ ಬೀದಿಯಲ್ಲಿ ನಿಂತುಕೊಳ್ಳುವ ಕೆಲಸಕ್ಕಿಂತ ಶ್ರವಣ ಬೆಳಗೋಳದಲ್ಲಿ ಗೊಮ್ಮಟ ಆಗುವುದು ವಾಸಿ. ಅವಳು ಮೆಚ್ಚಿದ ಸೀರೆಗೆ ಎಷ್ಟು ಚೆಂದದ ಬಣ್ಣ, ಎಷ್ಟು ಚೆಂದದ ಡಿಸೈನ್ ಎಂದು ಹೊಗಳದೇ ಹೋದರೆ ನಿಮಗೆ ಟೇಸ್ಟ್ ಇಲ್ಲ ಎನ್ನುವ ಕಾಮೆಂಟ್ ಸದಾ ಸಿದ್ಧವಿರುತ್ತಿತ್ತು. ಸೂರ್ಯಾಸ್ತ ಆಕಾಶದಲ್ಲಿ ಮೂಡಿಸುವ ರಂಗು, ಪಕ್ಷಿಗಳ ರೆಕ್ಕೆ ಪುಕ್ಕದಲ್ಲಿ ಮೂಡಿರುವ ಆಕರ್ಷಕ ವಿನ್ಯಾಸಗಳು ಅವೆಲ್ಲ ಫ್ರೀ ಆದರಿಂದ ಅವುಗಳ ಬಗ್ಗೆ ಗಮನ ಹರಿಸುವ ಗೋಜಿಗೆ ಅವಳು ಹೋಗುತ್ತಲೇ ಇರಲಿಲ್ಲ. ಕ್ಯಾಮೆರಾದಲ್ಲಿ ಹೆಚ್ಚಿನ ಫೋಟೋಗಳು ಅವಳದೇ ಇರಬೇಕು. ಮತ್ತು ಫೋಟೋ ತೆಗೆದ ಮೇಲೆ ಅವಳು ಅದನ್ನು ನೋಡಿ ಓಕೆ ಇಲ್ಲ ನಾಟ್ ಓಕೆ ಎಂದು ಹೇಳುತ್ತಾಳೆ. ಅವಳು ಚೆಂದ ಕಾಣುವ ಹಾಗೆ ತೆಗೆಯದೆ ಇದ್ದರೆ ಒಂದು ನನ್ನ ಕ್ಯಾಮೆರಾ ಸರಿ ಇಲ್ಲ ಇಲ್ಲ ನನಗೆ ಫೋಟೋ ತೆಗೆಯಲು ಬರುವುದಿಲ್ಲ ಅಷ್ಟೇ. ಇಷ್ಟೆಲ್ಲಾ ಸಂಗತಿಗಳ ನಡುವೆ ಮಂಗಳೂರು ಶುರು ಆಗಿದ್ದೆಲ್ಲಿ? ಗೋವಾ ಮುಗಿದದ್ದು ಎಲ್ಲಿ ಎಂದು ಗೊತ್ತು ಕೂಡ ಆಗುತ್ತಿರಲಿಲ್ಲ.

 

ಶುಭ ವೇಳೆಯಲ್ಲಿ ಅಪಶಕುನ ಏಕೆ? ಪ್ರವಾಸ ಬಿಟ್ಟು ಬೇರೇನೂ ಮಾಡಬಹುದು? ಸದ್ಗುರು ಆಶ್ರಮಕ್ಕೋ ಇಲ್ಲವೇ ಹಿಮಾಲಯದ ಅಡಿಯಲ್ಲಿ ನಡೆಯುವ ಧ್ಯಾನ ಕೇಂದ್ರಗಳಿಗೆ ಹೋಗಿ ನಾಲ್ಕಾರು ದಿನ ತಣ್ಣಗೆ ಕುಳಿತು ಧ್ಯಾನ ಮಾಡಬಹುದು. ಮನೆಯಲ್ಲಿ ಧ್ಯಾನ ಮಾಡಲಿಕ್ಕೆ ಆಗುವುದಿಲ್ಲ ಎಂದಲ್ಲ. ಆದರೆ ಹೆಂಗಸರು ಏನಾದರು ಸಹಿಸಿಯಾರು. ತಮ್ಮ ಗಂಡ ಸಂತೋಷದಿಂದ ಮತ್ತು ನೆಮ್ಮದಿಯಿಂದ ಇರುವುದನ್ನು ಸಹಿಸಲಾರರು. ನನ್ನ ಹೆಂಡತಿ ಅಷ್ಟೇ ಅಲ್ಲ. ಮೊನ್ನೆ ಗೆಳೆಯರು ಸಿಕ್ಕಾಗ ಹೆಚ್ಚು ಕಡಿಮೆ ಎಲ್ಲ ಸ್ನೇಹಿತರ ದೂರು ಇದೆ ಆಗಿತ್ತು ಅವರೊಳಗೆ ವಿವಾಹ ವಿಚ್ಛೇದನ ಪಡೆದ ಸ್ನೇಹಿತನೊಬ್ಬ ನಮ್ಮನ್ನೆಲ್ಲ ಅಯ್ಯೋ ಪಾಪ ಎನ್ನುವಂತೆ ನೋಡುತ್ತಿದ್ದ. ನನಗೂ ಕೂಡ ಅವನ ಹಾಗೆ ನೆಮ್ಮದಿಯ ನಗೆ ಬೀರುವ ಸದವಕಾಶ ಹತ್ತಿರವೇ ಇದೆ ಎನ್ನುವ ಹರ್ಷದಿಂದ ನನ್ನ ಮುಖದಲ್ಲಿ ಮಂದಹಾಸ ಮೂಡಿತ್ತು. 

 

ಕೊನೆ ಕಾಲಕ್ಕೆ ಹೆಂಡತಿಯೇ ದಿಕ್ಕು ಎನ್ನುವ ಮಾತಿದೆಯಲ್ಲ. ಆದರೆ ನಿಜದಲ್ಲಿ ಅವಳು ಗಂಡನ ನಾಲಿಗೆ ಕಿತ್ತುಬಿಟ್ಟಿರುತ್ತಾಳೆ. ಕೊನೆ ಕಾಲದವರೆಗೆ ಹೆಂಡತಿಯ ಜೊತೆಗೆ ಬದುಕಿ ಯಾವ ನರಕಕ್ಕಾದರೂ ಸೈ ಎನ್ನುವಷ್ಟು ಅನುಭವ ಭೂಮಿ ಮೇಲೆಯೇ ಪಡೆಯುವುದಕ್ಕಿಂತ, ಕಾಲಕ್ಕಿಂತ ಸ್ವಲ್ಪ ಮೊದಲೇ ಸ್ನೇಹಿತರ ನಡುವೆಯೇ ಪ್ರಾಣ ಬಿಡುವುದೇ ವಾಸಿ. ಅವರು ನಮ್ಮನ್ನು ಮಣ್ಣು ಮಾಡಿ ಕೈ ತೊಳೆದುಕೊಳ್ಳುತ್ತಾರೆ. ಆಮೇಲೆ ಶಪಿಸಿಸುವ ಗೋಜಿಗೆ ಹೋಗುವುದಿಲ್ಲ. ಸಾಕ್ರಟೀಸ್ ಹೇಳಿದ್ದ ನಿನಗೆ ಕೆಟ್ಟ ಹೆಂಡತಿ ಸಿಕ್ಕರೆ ನೀನು ತತ್ವಜ್ಞಾನಿ ಆಗುತ್ತಿ ಎಂದು. ಆದರೆ ಅವಳು ನಡುವೆಯೇ ಸೋಡಾಚೀಟಿ ಕೊಟ್ಟು ಮತ್ತೆ ನಿಮ್ಮ ಬದುಕು ನಿಮಗೆ ಮರಳಿ ಸಿಕ್ಕರೆ? ಸಾಕ್ರಟೀಸ್ ಹೇಳದೆಯೇ ಉಳಿಸಿದ ಮಾತುಗಳನ್ನು ನಾನು ಹೇಳಿ ಒಂದು ಪುಸ್ತಕ ಹೊರತರಬಹುದು. ಆಗ ಚರಿತ್ರೆಯಲ್ಲಿ ನನಗೆ ಒಂದು ಸ್ಥಾನ ಕೂಡ ದೊರಕಬಹುದು ಎಂದು ಎನಿಸಿ ರೋಮಾಂಚನ ಆಯಿತು. ಎಷ್ಟೆಲ್ಲಾ ಅವಕಾಶಗಳಿವೆ ಈ  ವಿಶಾಲ ಪ್ರಪಂಚದಲ್ಲಿ. ಮತ್ತೆ ಆ ಅವಕಾಶ ಕೊಟ್ಟ ಹೆಂಡತಿಗೆ ನನ್ನ ಪುಸ್ತಕ ಅರ್ಪಿಸಿ ಧನ್ಯವಾದ ಹೇಳಬೇಕು ಎಂದುಕೊಂಡೆ. ಅವಳು ನನ್ನ ಬಿಟ್ಟು ಹೋಗುವುದರಿಂದ ಏನೆಲ್ಲಾ ಬದಲಾವಣೆಗಳು.

 

ಬುದ್ಧನಿಗೆ ಬೋಧಿ ವೃಕ್ಷದ ಕೆಳಗೆ ಜ್ಞಾನೋದಯ ಆಯಿತು. ಅಲ್ಲಿ ಅವನ ಹೆಂಡತಿ ಅವನ ಬೆನ್ನು ತಿವಿಯುತ್ತ ನಿಂತಿದ್ದರೆ ಅವನ ಜ್ಞಾನೋದಯ ಆಗುತ್ತಿತ್ತೇ? ನೆನಪಿಡಿ, ಬುದ್ಧ ಕಾಂತಿಯುತನಾಗಿ, ಮಂದಹಾಸನಾಗಿ, ಅರೆ ಕಣ್ಣು ತೆರೆದು ಕುಳಿತುಕೊಳ್ಳುವ ಧೈರ್ಯ ಮಾಡಿದ್ದೆ ಅವನ ಹೆಂಡತಿ ಅಲ್ಲಿಲ್ಲ ಎಂದು. ಇಷ್ಟಕ್ಕೂ ಹೆಂಡತಿಯರು ಎಂದರೆ ಕೆಟ್ಟವರು ಎಂದರೇನಲ್ಲ. ಆದರೆ ಅವರು ಹೆಂಡತಿಯರು ಅಷ್ಟೇ. ಅವರು ಸಂತೋಷ ಆಗಿರುವುದು ತಮ್ಮ ಗಂಡನಿಗೆ ಯಾವತ್ತೂ ತೋರಿಸಿಕೊಡುವುದಿಲ್ಲ. ಮತ್ತು ಗಂಡ ಸಂತೋಷ ಪಟ್ಟರೆ ಅವರಿಗೆ ನರಕ ಹೇಗಿರುತ್ತದೆ ಎಂದು ಕಣ್ಮುಂದೆಯೇ ತೋರಿಸಿಕೊಡಲು ಹಿಂದೆ ಮುಂದೆ ನೋಡುವದಿಲ್ಲ. ಅವಳು ತನ್ನ ಮಕ್ಕಳಿಗೆ ಕರುಣಾಮಯಿ, ತವರುಮನೆಯವರಿಗೆ ವಾತ್ಸಲ್ಯ ತೋರುವ ಮಗಳು, ಸಹೋದರಿ. ಆದರೆ ಗಂಡನಿಗೆ ಏಳು ಜನ್ಮದ ಕರ್ಮಗಳನ್ನು ಒಂದೇ ಜನುಮದಲ್ಲಿ ತೀರಿಸಿ ಹೋಗಲು ಬಂದಿರುವ ಯಮಲೋಕದ ಪ್ರತಿನಿಧಿ. ಮದುವೆ ಆಗುವವರೆಗೆ ಮಾತ್ರ ಅವಳು ಗಂಡಿಗೆ ಆಕರ್ಷಣೆ. ಆಮೇಲೆ ಗಂಡನನ್ನು ಬಟ್ಟೆ ಒಗೆದ ಮೇಲೆ ಹಿಂಡಿ ನೀರು ತೆಗೆಯುವ ಹಾಗೆ, ಗಂಡನ ಸಂತೋಷದ ಒಂದು ಹನಿ ಬಿಡದಂತೆ ಹಿಂಡಿ ತೆಗೆದುಬಿಡುತ್ತಾಳೆ. ಆದರೆ ನನಗೆ ಇನ್ನು ಆ ತಾಪತ್ರಯ  ಮುಗಿಯಿತು. ನಾನು ಸ್ವಚಂದ ಹಾರುವ ಹಕ್ಕಿ. ನನ್ನ ಸಂತೋಷ ಕಸಿದುಕೊಳ್ಳುವ ಕರಾರು ಮುಗಿದು ಹೋಗಿದೆ.

 

ಆದರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ದೇವತೆಗಳು ಅಸ್ತು ಅನ್ನುವ ಮುಂಚೆಯೇ ಹೆಂಡತಿ ಮನಸ್ಸು ಬದಲಾಯಿಸಿದ್ದಳು. ಹೋಗುತ್ತಿರುವುದು ಎರಡು ದಿನಕ್ಕೆ ಅಷ್ಟೇ ಎಂದು ಘೋಷಿಸಿ ಬಂದ ಮೇಲೆ ಇನ್ನು ಪಿಕ್ಚರ್ ಬಾಕಿ ಇದೆ ಎನ್ನುವ ನೋಟ ಬೀರಿ ಹೋದಳು. ನನ್ನ ಕನಸಿನ ಸೌಧ  ಕ್ಷಣಾರ್ಧದಲ್ಲೇ ಕುಸಿದು ಬಿದ್ದಿತ್ತು. ಪುರಾಣ ಕಥೆಯ ಹರಿಶ್ಚಂದ್ರ ಅಸಹಾಯಕತೆಯಿಂದ ನಕ್ಷತ್ರಕನನ್ನು ನೋಡಿದಂತೆ ಅವಳನ್ನು ನೋಡಿದೆ. ಮನೆಯ ಗೋಡೆಯ ಮೇಲೆ ಇದ್ದ ಬುದ್ಧನ ಪೇಂಟಿಂಗ್ ನಲ್ಲಿ ಬುದ್ಧ ಕಣ್ಣು ಅರೆ ತೆರದಿದ್ದು ಏಕೆ ಎಂದು ಗೊತ್ತಾಗಿತ್ತು. ಆದರೆ ಈಗ ಅರೆ ಮುಚ್ಚಿದ್ದು ಏಕೆ ಎಂದು ಕೂಡ ಗೊತ್ತಾಯಿತು. ಸಾಂತ್ವನ ಹೇಳುವಂತೆ ಸಾಯಿಬಾಬ (ಇನ್ನೊಂದು ಗೋಡೆಯ ಮೇಲಿನ ಪೇಂಟಿಂಗ್) ಕರುಣೆಯ ನೋಟ ಬೀರುತ್ತಿದ್ದ. ಸ್ನೇಹಿತ ಮತ್ತೆ ಮೆಸೇಜ್ ಮಾಡಿದ್ದ 'ಯಾವಾಗ ಪಾರ್ಟಿ?' ಯಾವುದೇ ಉತ್ತರ ನೀಡದೆ, ಗಾಳಿ ಹೋದ ಬಲೂನಿನಂತೆ ಸುಮ್ಮನೆ ಹೊದ್ದು ಮಲಗಿದೆ.

Sunday, August 7, 2022

ಕಥೆ: ಮೂರ್ಖರ ಸಾಮ್ರಾಜ್ಯಕ್ಕೆ ಅವಿವೇಕಿ ರಾಜ

(ಇದು ಒಂದು ಜಾನಪದ ಕಥೆಯ ಭಾವಾನುವಾದ. ಇದನ್ನು A. K. ರಾಮಾನುಜನ್ ಅವರ 'Folktales from India' ಸಂಗ್ರಹದಿಂದ ಆಯ್ದುಕೊಳ್ಳಲಾಗಿದೆ.)

 

ಒಂದು ಮೂರ್ಖರ ಸಾಮ್ರಾಜ್ಯಕ್ಕೆ, ಅವಿವೇಕಿಯೊಬ್ಬ ರಾಜನಾಗಿದ್ದ. ಅವನಿಗೊಬ್ಬ ಪೆದ್ದ ಮಂತ್ರಿ ಕೂಡ ಇದ್ದ. ಅವರ ವಿಚಾರ ಮತ್ತು ನಡುವಳಿಕೆಗಳು ಬಲು ವಿಚಿತ್ರವಾಗಿದ್ದವು. ಅವರು ಹಗಲು-ರಾತ್ರಿಗಳನ್ನೇ ಬದಲಾಯಿಸಿದ್ದರು. ಅವರ ಆದೇಶದ ಪ್ರಕಾರ, ರೈತರು ತಮ್ಮ ಹೊಲಗಳಿಗೆ ರಾತ್ರಿ ಉತ್ತಲು ಹೋಗಬೇಕಿತ್ತು. ವ್ಯಾಪಾರಸ್ಥರು ಕತ್ತಲು ಆಗುವವರೆಗೆ ತಮ್ಮ ಅಂಗಡಿಗಳನ್ನು ತೆಗೆಯುವಂತಿರಲಿಲ್ಲ. ಮತ್ತು ಸೂರ್ಯೋದಯ ಆದೊಡನೆ ಎಲ್ಲರು ನಿದ್ದೆಗೆ ಜಾರಬೇಕಿತ್ತು. ಅದಕ್ಕೆ ತಪ್ಪಿದರೆ ಮರಣ ದಂಡನೆಯೇ ಶಿಕ್ಷೆ ಆಗಿತ್ತು.


ಒಂದು ದಿನ ಗುರು-ಶಿಷ್ಯರ ಜೋಡಿ ಆ ಪಟ್ಟಣಕ್ಕೆ ಆಗಮಿಸಿದರು. ಆದರೆ ಹಾಡು-ಹಗಲಿನಲ್ಲಿ ರಸ್ತೆಗಳೆಲ್ಲ ಖಾಲಿ-ಖಾಲಿ. ಎಲ್ಲರು ನಿದ್ದೆಗೆ ಜಾರಿದ್ದಾರೆ. ದನ-ಕರುಗಳು ಸಹಿತ ಆ ಅಭ್ಯಾಸಕ್ಕೆ ಹೊಂದಿಕೊಂಡುಬಿಟ್ಟಿದ್ದವು. ಅಲ್ಲಿಗೆ ಬಂದ ಈ ಗುರು-ಶಿಷ್ಯರು ಊರು ಸುತ್ತಿ, ಎಲ್ಲೂ ಊಟ ಸಿಗದೇ ಸುಸ್ತಾದರು. ಆದರೆ ರಾತ್ರಿಯಾದಂತೆ ಊರಿಗೆ ಕಳೆ ಬಂದು ಬಿಟ್ಟಿತು. ಹಸಿದಿದ್ದ ಆಗಂತುಕರು ದಿನಸಿ ಕೊಳ್ಳಲು ಅಂಗಡಿ ಒಂದಕ್ಕೆ ಹೋದರು. ಅಲ್ಲಿ ಅವರಿಗೆ ಪರಮಾಶ್ಚರ್ಯ. ಅಲ್ಲಿ ಏನೇ ತೆಗೆದುಕೊಂಡರೂ ಅದರ ಬೆಲೆ ಒಂದೇ ರೂಪಾಯಿ. ಅಕ್ಕಿ, ಬೇಳೆ, ಹಣ್ಣು, ತುಪ್ಪ, ತರಕಾರಿ ಏನೇ ತೆಗೆದುಕೊಂಡರೂ ಅದರ ಬೆಲೆ ಒಂದೇ ರೂಪಾಯಿ. ಅವರು ತಮಗೆ ಬೇಕಾದ್ದು ಕೊಂಡುಕೊಂಡು ಅಡುಗೆ ಮಾಡಿಕೊಂಡು ಊಟ ಮಾಡಿದರು.

 

ಅಷ್ಟೊತ್ತಿಗೆ ಗುರುವಿಗೆ ಅದು ಮೂರ್ಖರ ಸಾಮ್ರಾಜ್ಯ ಎಂದು ಅರ್ಥವಾಗಿತ್ತು. ಅವನು ತನ್ನ ಶಿಷ್ಯನಿಗೆ ಹೇಳಿದ. "ಇದು ನಾವಿರಬೇಕಾದ ಜಾಗ ಅಲ್ಲ. ಇಲ್ಲಿ ಏನು ಬೇಕಾದರೂ ಆಗಬಹುದು. ಇಲ್ಲಿಂದ ಮುಂದಕ್ಕೆ ಹೋಗೋಣ." ಆದರೆ ಶಿಷ್ಯ ಹೊಟ್ಟೆಬಾಕ. ಅವನಿಗೆ ಬೇಕಾದದ್ದು ಕಡಿಮೆ ಖರ್ಚಿನಲ್ಲಿ ಭರ್ಜರಿ ಊಟ. ಅವನು ಅಲ್ಲಿಯೇ ಉಳಿಯುವ ನಿರ್ಧಾರ ಮಾಡಿದ. ಗುರು ಅವನನ್ನು ಅಲ್ಲಿಯೇ ಬಿಟ್ಟು ಮುಂದೆ ಸಾಗಿದ.

 

ಆ ಪಟ್ಟಣದಲ್ಲಿ ಮುಂದೊಂದು ದಿನ ಹಗಲು ಹೊತ್ತಿನಲ್ಲಿ ಎಲ್ಲರು ಮಲಗಿದ್ದಾಗ, ಶ್ರೀಮಂತ ವ್ಯಾಪಾರಿ ಒಬ್ಬನ ಮನೆಯಲ್ಲಿ ಕಳ್ಳತನ ಆಯಿತು. ಗೋಡೆಗೆ ಕನ್ನ ಕೊರೆದು ಕಳ್ಳ ಹೊರ ಬರುವಷ್ಟರಲ್ಲಿ ಗೋಡೆ ಕಳ್ಳನ ಮೇಲೆ ಕುಸಿದು ಅವನು ಮೃತ ಪಟ್ಟನು. ಕಳ್ಳನ ಸಂಬಂಧಿಕರು ರಾಜನ ಹತ್ತಿರ ನ್ಯಾಯ ಪರಿಹಾರಕ್ಕೆ ಹೋದರು. ಕಳ್ಳತನ ಅವರ ಪುರಾತನ ವೃತ್ತಿ. ಅದನ್ನು ಮಾಡುವಾಗ ಗೋಡೆ ಭದ್ರವಾಗಿ ಕಟ್ಟಿಸದೆ ಇದ್ದರಿಂದ ಕಳ್ಳ ಮೃತ ಪಟ್ಟಿದ್ದಾನೆ. ಅದರ ಸಲುವಾಗಿ ಅಪರಾಧಿಗಳನ್ನು ಶಿಕ್ಷಿಸಿ ಅವರಿಗೆ ನ್ಯಾಯ ಒದಗಿಸಬೇಕು ಎಂದು ಕೇಳಿಕೊಂಡರು.

 

ರಾಜ ಅವರಿಗೆ ನ್ಯಾಯ ಒದಗಿಸುವುದಾಗಿ ಅಭಯವಿತ್ತ. ಕೂಡಲೇ ಆ ವ್ಯಾಪಾರಿಯನ್ನು ಕರೆ ತರಲು ಹೇಳಿದ. ಅಲ್ಲಿಗೆ ಬಂದ ವ್ಯಾಪಾರಿ ತನ್ನ ಅಹವಾಲು ಮಂಡಿಸಿದ. ಮನೆ ಅವನದೇ ಆದರೂ, ಅದು ಗೋಡೆ ಕಟ್ಟುವವನು ಭದ್ರವಾಗಿ ಕಟ್ಟದ್ದು ಕಳ್ಳ ಸಾಯಲು ಕಾರಣ ಎಂದು ಹೇಳಿದ. ಗೋಡೆ ಕಟ್ಟಿದವನನ್ನು ಅಲ್ಲಿಗೆ ಕರೆಸಿದರು. ಅವನು ಗೋಡೆ ಸರಿಯಾಗಿ ಕಟ್ಟದ್ದಕೆ ಕಾರಣ ಹೇಳಿದ. ಆ ದಿನ ಹುಡುಗಿಯೊಬ್ಬಳು ರಸ್ತೆಯಲ್ಲಿ ಆ ಕಡೆಗೆ, ಈ ಕಡೆಗೆ ಹಲವಾರು ಬಾರಿ ಓಡಾಡಿ ಅವಳ ಗೆಜ್ಜೆ ಸಪ್ಪಳದಿಂದ ಅವನು ವಿಮುಖನಾಗಿ ಗೋಡೆ ಭದ್ರವಾಗಿ ಕಟ್ಟಲು ಸಾಧ್ಯವಾಗಲಿಲ್ಲ ಎಂದು. ಆ ಹುಡುಗಿಯನ್ನು ಅಲ್ಲಿಗೆ ಬರ ಹೇಳಿದರು. ಆ ಹುಡುಗಿ ಅಂದು ಅಲ್ಲಿ ಸಾಕಷ್ಟು ಬಾರಿ ಓಡಾಡಲಿಕ್ಕೆ ಕಾರಣ, ಆ ರಸ್ತೆಯಲ್ಲಿದ್ದ ಅಕ್ಕಸಾಲಿಗನ ಅಂಗಡಿ. ಅವನು ಇವಳ ಆಭರಣ ಮಾಡಿಕೊಡದೆ ಆಗ ಬಾ, ಈಗ ಬಾ ಎಂದು ಸತಾಯಿಸುತ್ತಿದ್ದ. ಅದಕ್ಕೆ ಹಲವಾರು ಬಾರಿ ಅವನ ಅಂಗಡಿಗೆ ಹೋಗಬೇಕಾಗಿ ಬಂತು ಎಂದು ಹೇಳಿದಳು. ಅಕ್ಕಸಾಲಿಗನನ್ನು ರಾಜನ ಆಸ್ಥಾನಕ್ಕೆ ಕರೆಸಿದರು. ಅವನು ತನ್ನ ಕಥೆ ಹೇಳಿದ. ಒಬ್ಬ ವ್ಯಾಪಾರಿ ತನ್ನ ಆಭರಣಗಳನ್ನು ಮೊದಲು ಮಾಡಿಕೊಡಲು ಒತ್ತಡ ಹೇರಿದ್ದ. ಆ ಕಾರಣದಿಂದ ಅವನಿಗೆ ಹುಡುಗಿಯ ಆಭರಣ ಮಾಡಿಕೊಡಲು ಸಾಧ್ಯವಾಗದೆ ಸತಾಯಿಸಿದ್ದು ಎಂದು ಹೇಳಿದ. ಅವನಿಗೆ ತೊಂದರೆ ಕೊಟ್ಟ ವ್ಯಾಪಾರಿ ಬೇರೆ ಯಾರು ಅಲ್ಲ. ಗೋಡೆ ಬಿದ್ದು ಕಳ್ಳ ಸತ್ತನಲ್ಲ.  ಆ ಮನೆ ಮಾಲೀಕನೇ ಆಗಿದ್ದ. ತುಂಬಾ ಕ್ಲಿಷ್ಟಕರ ಸಮಸ್ಯೆ ಒಂದಕ್ಕೆ ಪರಿಹಾರ ಸಿಕ್ಕಿಯೇ ಬಿಟ್ಟಿತು. ರಾಜ-ಮಂತ್ರಿ  ಸೇರಿ ಆ ವ್ಯಾಪಾರಿಯೇ ಅಪರಾಧಿ ಎನ್ನುವ ನಿರ್ಧಾರಕ್ಕೆ ಬಂದರು ಮತ್ತು ಅವನಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದರು.

 

ಆದರೆ ಆ ವ್ಯಾಪಾರಿಗೆ ತುಂಬಾ ವಯಸ್ಸಾಗಿ ಹೋಗಿತ್ತು. ಅವನು ತುಂಬಾ ಕೃಶನಾಗಿ ಹೋಗಿದ್ದ. ಅಷ್ಟು ತೆಳ್ಳನೆಯ ವ್ಯಕ್ತಿಗೆ ಮರಣ ದಂಡನೆ ಕೊಟ್ಟರೆ ಏನು ಚೆನ್ನ ಎಂದು ಮಂತ್ರಿಗೆ ಅನ್ನಿಸಿತು. ಅವನು ತನ್ನ ಅನಿಸಿಕೆ ರಾಜನಿಗೆ ಹೇಳಿದ. ರಾಜ ಕೂಡ ವಿಚಾರ ಮಾಡಿ ನೋಡಿದ. ಯಾರೋ ಒಬ್ಬರಿಗೆ ಶಿಕ್ಷೆ ಆಗಲೇಬೇಕು. ತೆಳ್ಳನೆಯ ವ್ಯಾಪಾರಿಯ ಬದಲು ಒಬ್ಬ ದಷ್ಟಪುಷ್ಟ ವ್ಯಕ್ತಿಯ ತಲೆ ಕತ್ತರಿಸಬೇಕು ಎನ್ನುವ ನಿರ್ಧಾರಕ್ಕೆ ಅವರು ಬಂದರು. ದಪ್ಪನೆಯ ವ್ಯಕ್ತಿಯ ಹುಡುಕಾಟಕ್ಕೆ ತೊಡಗಿದಾಗ ಅವರಿಗೆ ಸಿಕ್ಕಿದ್ದು ಗುರುವಿನ ಹಿಂದೆ ಹೋಗದೆ ಅಲ್ಲಿಯೇ ಉಳಿದುಕೊಂಡಿದ್ದ ಶಿಷ್ಯ. ಅವನು ಚೆನ್ನಾಗಿ ಉಂಡು ತಿಂದು ಬಲಿತಿದ್ದ. ರಾಜ ಭಟರು ಅವನನ್ನು ವಧಾ ಸ್ಥಾನಕ್ಕೆ ಎಳೆದುಕೊಂಡು ಬಂದರು. ಅವನಿಗೆ ತಾನು ಮಾಡಿದ ತಪ್ಪು ಏನೆಂದು ತಿಳಿಯದು. ಎಷ್ಟು ಕೇಳಿಕೊಂಡರು ರಾಜಭಟರು ಅವನನ್ನು ಬಿಡಲಿಲ್ಲ. ಕೊನೆಗೆ ಅವನು ತನ್ನ ಗುರುವಿನಲ್ಲಿ ಪ್ರಾರ್ಥಿಸಿದ. ಗುರುವಿಗೆ ದಿವ್ಯದೃಷ್ಟಿಯಲ್ಲಿ ಎಲ್ಲ ಅರ್ಥ ಆಯಿತು. ಶಿಷ್ಯನ ಪ್ರಾಣ ಉಳಿಸಲು ಅವರು ಅಲ್ಲಿಗೆ ದೌಡಾಯಿಸಿ ಬಂದರು. ಅವರು ತಮ್ಮ ಶಿಷ್ಯನಿಗೆ ಬೈಯುತ್ತಾ ಅವನ ಕಿವಿಯಲ್ಲಿ ಏನೋ ಹೇಳಿದರು.

 

ನಂತರ ರಾಜನನ್ನು ಉದ್ದೇಶಿಸಿ ಕೇಳಿದರು "ಓ, ಬುದ್ದಿವಂತರಲ್ಲಿ ಶ್ರೇಷ್ಠನಾದ ರಾಜನೇ, ಗುರು-ಶಿಷ್ಯರಲ್ಲಿ ಯಾರು ದೊಡ್ಡವರು?"

 

ರಾಜ ಹೇಳಿದ "ಗುರುವೇ ದೊಡ್ಡವನು. ಅದರಲ್ಲಿ ಸಂದೇಹವೇ ಇಲ್ಲ. ಏಕೆ ಈ ಪ್ರಶ್ನೆ?"

 

ಅದಕ್ಕೆ ಗುರುಗಳು ಹೇಳಿದರು "ಹಾಗಾದರೆ ಮೊದಲಿಗೆ ನನ್ನನ್ನು ವಧಿಸಿ. ನಂತರ ನನ್ನ ಶಿಷ್ಯನನ್ನು ವಧಿಸಿ."

 

ಅದನ್ನು ಕೇಳಿದ ಶಿಷ್ಯ ರೋಧಿಸತೊಡಗಿದ "ಮೊದಲು ನನ್ನನ್ನು ವಧಿಸಿ. ನನಗೆ ಮರಣದಂಡನೆ ಶಿಕ್ಷೆ ನೀಡಿ"

 

ರಾಜ ಗೊಂದಲಕ್ಕೀಡಾಗಿ ಗುರುವನ್ನು ಕೇಳಿದ "ಒಬ್ಬ ದಪ್ಪನೆಯ ಮನುಷ್ಯನಿಗೆ ಶಿಕ್ಷೆ ನೀಡುವುದಕ್ಕಾಗಿ ನಿಮ್ಮ ಶಿಷ್ಯನನ್ನು ಎಳೆದು ತಂದೆವು. ಆದರೆ ನೀವೇಕೆ ಸಾಯಲು ಇಷ್ಟ ಪಡುವಿರಿ?"

 

ಗುರು ರಾಜನನ್ನು ಸ್ವಲ್ಪ ದೂರ ಕರೆದುಕೊಂಡು ಹೋಗಿ, ಯಾರಿಗೂ ಕೇಳಿಸದಂತೆ ಮೆತ್ತನೆಯ ಧ್ವನಿಯಲ್ಲಿ ಹೇಳಿದ. "ಇಲ್ಲಿ ಯಾರು ಮೊದಲು ಸಾಯುವರೋ, ಅವರಿಗೆ ಮುಂದಿನ ಜನ್ಮದಲ್ಲಿ ಈ ರಾಜ್ಯಕ್ಕೆ ರಾಜನಾಗುವ ಯೋಗ ಇದೆ. ನಂತರ ಸತ್ತವನು ಮಂತ್ರಿಯಾಗಬೇಕು. ನಾನು ರಾಜನಾಗುವ ಆಸೆಯಿಂದ ಮೊದಲು ಸಾಯಲು ಇಚ್ಛಿಸುತ್ತೇನೆ."

 

ರಾಜ ಚಿಂತೆಗೆ ಬಿದ್ದ. ಅವನಿಗೆ ಮುಂದಿನ ಜನ್ಮದಲ್ಲೂ ತನ್ನ ರಾಜ್ಯವನ್ನು ಬೇರೆಯವರಿಗೆ ಬಿಟ್ಟು ಕೊಡಲು ಇಷ್ಟ ಇರಲಿಲ್ಲ. ರಹಸ್ಯದಲ್ಲಿ ಮಂತ್ರಿಯನ್ನು ಕರೆದು ಸಮಾಲೋಚಿಸಿದ. ಅವರಿಬ್ಬರೂ ಮುಂದಿನ ಜನ್ಮದಲ್ಲಿ ರಾಜ್ಯವನ್ನು ಬೇರೆಯವರಿಗೆ ಬಿಟ್ಟು ಕೊಡುವ ಬದಲು ತಾವೇ ಸತ್ತು ಮರು ಜನ್ಮದಲ್ಲಿ ರಾಜ ಮಂತ್ರಿಯಾಗಿ ಅಧಿಕಾರ ನಡೆಸುವ ಆಲೋಚನೆಗೆ ಬಂದರು. ತಮ್ಮ ಸೇವಕರಿಗೆ ಮರುದಿನ ಬೆಳಿಗ್ಗೆ ಗುರು-ಶಿಷ್ಯರ ತಲೆ ಕಡಿಯುವಂತೆ ಆದೇಶ ನೀಡಿದರು. ಆದರೆ ರಾತ್ರಿಯ ವೇಳೆ ಗುರು-ಶಿಷ್ಯರನ್ನು ಸೆರೆಮನೆಯಿಂದ ಆಚೆ ಕಳಿಸಿ, ಆ ಜಾಗದಲ್ಲಿ ತಾವು ಮುಸುಕು ಹಾಕಿಕೊಂಡು ಮಲಗಿದರು.

 

ಮರುದಿನ ಬೆಳಿಗ್ಗೆ ಅವರಿಬ್ಬರ ತಲೆ ಕಡಿಯಲಾಯಿತು. ಅವರ ಮುಸುಕು ತೆಗೆದ ಮೇಲೆ ಜನ ಗಾಬರಿ ಆದರು. ತಮ್ಮ ರಾಜ್ಯಕ್ಕೆ ಇನ್ನಾರು ದಿಕ್ಕು ಎಂದು ಆಲೋಚಿಸತೊಡಗಿದರು. ಯಾರೋ ಒಬ್ಬರು ಗುರು-ಶಿಷ್ಯರನ್ನು ಕೇಳಿ ನೋಡೋಣ ಎಂದು ಹೇಳಿದರು. ಶಿಷ್ಯ ಮಂತ್ರಿಯಾಗುವುದಕ್ಕೆ ತಕ್ಷಣ ಒಪ್ಪಿಕೊಂಡ. ಆದರೆ ಗುರು ಹಲವಾರು ಷರತ್ತುಗಳನ್ನು ಹಾಕಿದ. ಅವನು ಎಲ್ಲ ವಿಷಯಗಳನ್ನು ಬದಲು ಮಾಡುವ ಅಧಿಕಾರಕ್ಕೆ ಜನ ಒಪ್ಪಿಕೊಂಡ ಮೇಲೆ ಅವನು ರಾಜನಾದ. ಅಲ್ಲಿಂದ ಮುಂದೆ ಆ ರಾಜ್ಯದಲ್ಲಿ ಹಗಲು-ಹಗಲಾಗಿಯೇ ಮತ್ತು ರಾತ್ರಿ-ರಾತ್ರಿಯಾಗಿಯೇ ಬದಲಾಯಿತು.

ಗೇಮ್ ಗಳು ಹೊಸ ಪೀಳಿಗೆಯವರಿಗೆ ಸೇರಿದ್ದು

ಚಕ್ರವರ್ತಿ ಅಶೋಕ ತನ್ನ ಸಂದೇಶಗಳನ್ನು ಕಲ್ಲಿನಲ್ಲಿ ಕೆತ್ತಿಸುತ್ತಿದ್ದ. ನಂತರದ ರಾಜರುಗಳು ತಾಮ್ರದ ಹಾಳೆಗಳ ಮೇಲೆ, ಇಲ್ಲವೇ ರೇಷ್ಮೆ ಬಟ್ಟೆಯ ಮೇಲೆ ತಮ್ಮ ಸಂದೇಶಗಳನ್ನು ಬರೆಯತೊಡಗಿದರು. ೧೭-೧೮ನೆ ಶತಮಾನದ ಹೊತ್ತಿಗೆ ಪ್ರಿಂಟಿಂಗ್ ಪ್ರೆಸ್ ಮತ್ತು ಕಾಗದದ ಆವಿಷ್ಕಾರ ಆಗಿತ್ತು. ಆಗ ಎಲ್ಲರ ಕೈಯಲ್ಲೂ, ಎಲ್ಲರ ಮನೆಯಲ್ಲೂ ಪುಸ್ತಕಗಳು. ಎರಡನೇ ಜಾಗತಿಕ ಮಹಾ ಯುದ್ಧದ ಹೊತ್ತಿಗೆ ಹಿಟ್ಲರ್, ಮುಸ್ಸಲೋನಿ ತಮ್ಮ ಭಾಷಣಗಳನ್ನು ರೇಡಿಯೋ ನಲ್ಲಿ ಬಿತ್ತರಿಸಲು ಆರಂಭಿಸಿದ್ದರು. ನಂತರ ಬಂದಿದ್ದು ಚಲನಚಿತ್ರಗಳು. ಅದು ಒಂದು ದೊಡ್ಡ ಉದ್ಯಮವೇ ಆಗಿ ಬೆಳೆಯಿತು. ಆದರೆ ಅದರ ತಲೆಯ ಮೇಲೆ ಕಾಲು ಇಡಲೆಂಬಂತೆ ಬಂತು ಟಿವಿ. ಇಂಟರ್ನೆಟ್, ಯೂಟ್ಯೂಬ್, tiktok ಬಂದ ಮೇಲೆ ಟಿವಿ ಕೂಡ ಹಿಂದೆ ಬಿತ್ತು. ಆದರೆ ಇಂದಿನ ಚಿಣ್ಣರನ್ನು ನೋಡಿ. ಅವರಿಗೆ ಗೇಮ್ ಗಳು ಸೆಳೆದಷ್ಟು ಬೇರೆ ಯಾವುದು ಸೆಳೆಯುವುದಿಲ್ಲ.


ಮನುಷ್ಯ ಕಲ್ಪನಾ ಜೀವಿ. ಅವನಿಗೆ ಹಗಲುಗನಸುಗಳು ಹುಟ್ಟಿಸುವ ರೋಮಾಂಚನ ವಾಸ್ತವ ಹುಟ್ಟಿಸುವುದಿಲ್ಲ. ಅದಕ್ಕೆ ಅವನು ಬೇರೆಯ ಲೋಕದಲ್ಲಿ ಕಳೆದು ಹೋಗಲು ಇಷ್ಟ ಪಡುತ್ತಾನೆ. ಅದಕ್ಕೆ ಸಹಾಯವಾಗಿದ್ದು ಮೊದ ಮೊದಲಿಗೆ ಪುಸ್ತಕಗಳು, ಕಾದಂಬರಿಗಳು. ಚಲನಚಿತ್ರಗಳು ಹುಟ್ಟಿಸುವ ಉದ್ರೇಕದ ಭಾವನೆಗಳು ಪುಸ್ತಕಗಳು ಹುಟ್ಟಿಸಲು ಸಾಧ್ಯವೇ? ಕ್ರಮೇಣ ಪುಸ್ತಕ ಓದುವವರ ಸಂಖ್ಯೆ ಕಡಿಮೆ ಆಗಿ ಚಲನಚಿತ್ರ ನೋಡುವವರ ಸಂಖ್ಯೆ ಜಾಸ್ತಿ ಆಯಿತು. ಬೋರಾಗಿಸುವ ಎರಡು ತಾಸಿನ ಚಿತ್ರ ನೋಡದೆ ಹತ್ತು youtube ವಿಡಿಯೋ ನೋಡುವ ಅವಕಾಶ ಇದ್ದರೆ ಜನ ಅದನ್ನೇ ಕೇಳುವುದಿಲ್ಲವೇ? ಆದರೆ ವಿಡಿಯೋ ನೋಡುವ ರೋಮಾಂಚನಕ್ಕಿಂತ ಗೇಮ್ ಆಡುವ ಥ್ರಿಲ್ ದೊಡ್ಡದು. ನೀವು ಗೇಮ್ ಆಡಲು ಶುರು ಇಟ್ಟರೆ ನಿಮಗೆ ಬೇರೆ ಯಾವುದೂ ರುಚಿಸುವುದಿಲ್ಲ. ಆತಂಕಕಾರಿ ವಿಷಯ ಎಂದರೆ ಗೇಮ್ ಗಳು ನಮ್ಮ ಮೆದುಳಿನಲ್ಲಿ ಹುಟ್ಟಿಸುವ ಡೋಪಮೈನ್ ರಭಸ ನಮ್ಮನ್ನು ಮತ್ತೆ ಮತ್ತೆ ಅದೇ ಅನುಭವಕ್ಕೆ ಹಾತೊರೆಯುವಂತೆ ಮಾಡುತ್ತದೆ. ಕ್ರಮೇಣ ಮನುಷ್ಯ ಅದಕ್ಕೆ ದಾಸನಾಗಿ ಹೋಗುತ್ತಾನೆ. ಅದು ಡ್ರಗ್ ಗಳು ಹುಟ್ಟಿಸುವ ನಶೆಗೆ ಮನುಷ್ಯ ದಾಸ ಆದಂತೆ. ಡ್ರಗ್ ಮತ್ತು ಗೇಮ್ ಗಳು ಕಾರ್ಯ ನಿರ್ವಹಿಸುವ ವೈಖರಿ ಬೇರೆ ಬೇರೆಯಾದರು ಅದರ ಪರಿಣಾಮ ಮಾತ್ರ ಒಂದೇ. ಡ್ರಗ್ ಗಳು ಮನುಷ್ಯನನ್ನು ಬೇಗನೆ ಸಾವಿನ ದವಡೆಗೆ ಒಯ್ದರೆ, ಗೇಮ್ ಗಳು ಹಾಗೆ ಮಾಡುವುದಿಲ್ಲ. ಬದಲಿಗೆ ಅವನ ಸೃಜನಶೀಲತೆ ಕಸಿದುಕೊಳ್ಳುತ್ತವೆ. ಆ ಮನುಷ್ಯನಿಗೆ ಬೇರೆಯವರ ಸುಖ-ದುಃಖಗಳು ಅರಿವಿಗೆ ಬರುವುದಿಲ್ಲ. ಏಕೆಂದರೆ ಅವನು ಜೀವಿಸುವುದು ಅವನದೇ ಲೋಕದಲ್ಲಿ.


ನಾನು ಚಿಕ್ಕವನಿದ್ದಾಗ ನಮ್ಮ ಮನೆಯಲ್ಲಿ ಇದ್ದದ್ದು ರೇಡಿಯೋ ಮಾತ್ರ. ನನ್ನ ಅಕ್ಕಳಿಗೆ ಕಾದಂಬರಿ ಓದುವ ಹವ್ಯಾಸ ಇತ್ತು. ಆದರೆ ಅವುಗಳು ನಮ್ಮ ಮೆದುಳಿನಲ್ಲಿ ಹುಟ್ಟಿಸುವ ಡೋಪಮೈನ್ ರಭಸ ಅಷ್ಟರಲ್ಲೇ ಇತ್ತು. ಎಲ್ಲರ ಮನೆಯಲ್ಲಿ ಬಂದ ಹಾಗೆ ನಮ್ಮ ಮನೆಯಲ್ಲಿ ಕೂಡ ಬಂದೆ ಬಿಟ್ಟಿತು ಟಿವಿ. ಕಟುಕರ ಮನೆಯ ಗಿಳಿ 'ಕೊಲ್ಲು, ಕತ್ತರಿಸು' ಎಂದ ಹಾಗೆ ಅದು ಬದಲಾದ ಕಾಲಮಾನವನ್ನು ತೋರಿಸುತ್ತಿತ್ತು. ಸ್ಮಾರ್ಟ್ ಫೋನ್ ಗಳು ನಮ್ಮ ಕೈ ಸೇರಿದ ಮೇಲೆ ನಾವು ವಾಸ್ತವಕ್ಕಿಂತ ಕಲ್ಪನೆಯಲ್ಲೇ ಹೆಚ್ಚು ಕಾಲ ಕಳೆಯುತ್ತಿದ್ದೇವೆ. ನೀವು ಬರಹಗಾರ ಆದರೆ ನಿಮ್ಮ ಬರಹಗಳನ್ನು ಹತ್ತಿಪ್ಪತ್ತು ಜನ ಓದಿದರೆ ಅದೇ ಜಾಸ್ತಿ. ಅದೇ ನೀವು ಚಿಕ್ಕ ವಿಡಿಯೋಗಳನ್ನು ಮಾಡಿದರೆ ಕನಿಷ್ಠ ನೂರು ಜನ ಆದರೂ ನೋಡುತ್ತಾರೆ. ಆದರೆ ಅವುಗಳನ್ನು ಮೀರಿಸುವಂತೆ ಬಂದಿರುವ ಗೇಮ್ ಗಳು ಹೊಸ ಪೀಳಿಗೆಯ ಮಕ್ಕಳನ್ನು ವ್ಯಸನಿಗಳನ್ನಾಗಿಸಿವೆ. ಅದು ಅಲ್ಪ ಪ್ರಮಾಣದಲ್ಲಿ ಇದ್ದರೆ ಒಳ್ಳೆಯದು ಇರುತ್ತಿತ್ತೇನೋ? ಆದರೆ ಮನುಷ್ಯನ ಮೆದುಳು ರೂಪುಗೊಂಡಿದ್ದೆ ರೋಮಾಂಚನ ಬಯಸಲು. ಅಪಾಯ ಎಂದು ಗೊತ್ತಿದ್ದರೂ F1 ರೇಸಿಂಗ್ ಜನ ನೋಡಲು ಹೋಗುವುದಿಲ್ಲವೆ? ಎತ್ತರದಿಂದ ನೆಗೆಯುವ ಬಂಗೀ ಜಂಪಿಂಗ್ ಹುಟ್ಟಿಸುವ ರೋಮಾಂಚನ ಪಡೆಯಲು ಜನ ದುಡ್ಡು ಖರ್ಚು ಮಾಡುವುದಿಲ್ಲವೇ?


ನನ್ನ ಆರು ವರ್ಷದ ಮಗ ತಾನು ದೊಡ್ಡವನಾದ ಮೇಲೆ ಗೇಮರ್ ಆಗುತ್ತೇನೆ ಎಂದು ಹೇಳುತ್ತಾನೆ. ನಾನು ಅಸಹಾಯಕತೆಯಿಂದ ಅವನನ್ನು ನೋಡುತ್ತೇನೆ. ಆದರೆ ಪ್ರಕೃತಿ ವಿಕಾಸಗೊಂಡಿದ್ದು ಹೀಗೆಯೇ. ಪುಸ್ತಕಗಳು ಹೊಸದಾಗಿ ಬಂದಾಗ, ಅದು ಕೆಟ್ಟ ಹವ್ಯಾಸ ಎಂದು ಹೇಳುವ ಕೆಲವರಾದರೂ ಇದ್ದರೇನೋ? ಆದರೆ ಪುಸ್ತಕಗಳು ನಿಲ್ಲಲಿಲ್ಲ. ಹಾಗೆಯೆ ಇಂದಿನ ಕಾಲಕ್ಕೆ ಗೇಮ್ ಗಳು. ಅವು ಹೊಸ ಪೀಳಿಗೆಗೆ ಸೇರಿದ್ದು. ಇದು ಇಷ್ಟಕ್ಕೆ ನಿಲ್ಲುತ್ತದೆ ಎಂದುಕೊಳ್ಳಬೇಡಿ. AR/VR ತಂತ್ರಜ್ಞಾನ ಅಭಿವೃದ್ಧಿ ಆಗುತ್ತಿದೆಯಲ್ಲ. ಅದು ಹುಟ್ಟಿಸುವ ಭ್ರಮಾ ಲೋಕ ತುಂಬಾನೇ ವಿಚಿತ್ರವಾದದ್ದು. ಅದರ ಮೇಲೆ Facebook ಸೇರಿದಂತೆ ಹಲವಾರು ಸಂಸ್ಥೆಗಳು ಕೋಟ್ಯಂತರ ರೂಪಾಯಿ ವ್ಯಯಿಸುತ್ತಿವೆ. ನಮ್ಮ ಆಫೀಸ್ ನಲ್ಲಿ ಕೂಡ ಅದರ ಲ್ಯಾಬ್ ಇದೆ. ಅದರ ಒಳ ಹೊಕ್ಕಾಗ ಆದ ಅನುಭವ ರೋಮಾಂಚನಕಾರಿ. ಅದು ನಮ್ಮ ಮೆದುಳಿನಲ್ಲಿ ಹುಟ್ಟಿಸುವ ಡೋಪಮೈನ್ ರಭಸ ಹೆಚ್ಚಿನ ಪ್ರಮಾಣದ್ದು.


ಪಂಚೇಂದ್ರಿಯಗಳಲ್ಲಿ ಮುಖ್ಯವಾದದ್ದು ಕಣ್ಣು. ಅದು ಕೂಡ ಮೆದುಳಿನ ಒಂದು ಭಾಗ. ಹಾಗಾಗಿ ಕಣ್ಣು ಹುಟ್ಟಿಸುವ ಭ್ರಮೆಗೆ ಮೆದುಳು ತಕ್ಷಣವೇ ಪ್ರತಿಕ್ರಿಯೆ ನೀಡುತ್ತದೆ. ಅದಕ್ಕಾಗಿ ನೀವು ಧ್ಯಾನಕ್ಕೆ ಕುಳಿತಾಗ ಕಣ್ಣು ಮುಚ್ಚಿಕೊಂಡು ಕುಳಿತುಕೊಳ್ಳುತ್ತೀರಿ. ಕಣ್ಣು ಮುಚ್ಚಿದ್ದರೆ ಮೆದುಳಿಗೆ ಸಿಗುವ ಮಾಹಿತಿ ಕಡಿಮೆ ಆಗುತ್ತದೆ ಆಗ ನಿಮ್ಮ ಮನಸ್ಸು ಶಾಂತ ಆಗುತ್ತದೆ. ಆದರೆ ಧ್ಯಾನ ಮಾಡುವುದು ಪ್ರಕೃತಿ ವಿರುದ್ಧದ ಈಜು. ನೀವು ಶಾಂತ ಆದರೆ ನಿಮ್ಮನ್ನು ಹುಟ್ಟಿಸಿ ಪ್ರಕೃತಿಗೆ ಏನು ಪ್ರಯೋಜನ? ಅದಕ್ಕೆ ಅದು ನಮ್ಮನ್ನು ಹೊಸ ಅನುಭವಗಳಿಗೆ ಹಾತೊರೆಯುವಂತೆ ಮಾಡುವ ಸ್ವಭಾವಗಳನ್ನು ನಮ್ಮ ಜೀನ್ ಗಳಲ್ಲಿ ಬರೆದುಬಿಟ್ಟಿದೆ. ಎಲ್ಲ ಆವಿಷ್ಕಾರಗಳಿಗೂ ಅದೇ ಮೂಲ. ಹಿಂದೆ ಒಂದು ಕಾಲದಲ್ಲಿ ಪುಸ್ತಕ, ಚಲನ ಚಿತ್ರಗಳು ಹುಟ್ಟಿದ್ದು ಇದೇ ತರಹದ ತುಡಿತದಿಂದ. ಇಂದಿಗೆ ಗೇಮ್ ಗಳು. ಮುಂದೆ ಬರಲಿರುವ AR/VR ಕೂಡ ಪ್ರಕೃತಿ ವಿಕಾಸದ ಒಂದು ಭಾಗವೇ.

Wednesday, August 3, 2022

ಸುಖಕ್ಕಿಂತ ದುಃಖಗಳೇ ನಮ್ಮನ್ನು ಹೆಚ್ಚು ಮನುಷ್ಯರನ್ನಾಗಿಸುತ್ತವೆ

ಬಡತನಕೆ ಉಣುವ ಚಿಂತೆ,
ಉಣಲಾದರೆ ಉಡುವ ಚಿಂತೆ, 
ಉಡಲಾದರೆ ಇಡುವ ಚಿಂತೆ,
ಇಡಲಾದರೆ ಹೆಂಡಿರ ಚಿಂತೆ,
ಹೆಂಡಿರಾದರೆ ಮಕ್ಕಳ ಚಿಂತೆ,
ಮಕ್ಕಳಾದರೆ ಬದುಕಿನ ಚಿಂತೆ,
ಬದುಕಾದರೆ ಕೇಡಿನ ಚಿಂತೆ,
ಕೇಡಾದರೆ ಮರಣದ ಚಿಂತೆ

~ ಅಂಬಿಗರ ಚೌಡಯ್ಯ

ಹೌದಲ್ಲವೇ? ಒಂದು ಕಾಲದಲ್ಲಿ ಹಣದಿಂದ ಹೆಚ್ಚು-ಕಡಿಮೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸಬಹುದು ಎಂದುಕೊಂಡಿದ್ದೆ. ಆಗ ನಾನಿನ್ನು ಈ ವಚನ ಓದಿರಲಿಲ್ಲ ಅಷ್ಟೇ. ಈಗ ನನಗೆ ಉಣುವ ಚಿಂತೆ ಇಲ್ಲ. ಆದರೆ ಅದಕ್ಕೆ ತಕ್ಕಂತೆ ಕಾಡುವ ಚಿಂತೆಗಳ ಸ್ವರೂಪ ಕೂಡ ಬದಲಾಗಿದೆ. ಓಶೋ ಒಂದು ಪ್ರವಚನದಲ್ಲಿ ಹೇಳಿದ್ದ. ನೀವು ಶ್ರೀಮಂತರಾಗಿ, ಆಗಲೂ ಕೂಡ ನಿಮಗೆ ಸಮಸ್ಯೆ ಬಗೆಹರಿಸಲು ಸಾಧ್ಯವಾಗದಿದ್ದರೆ ಆವಾಗ ನಿಮ್ಮ ಮನಸ್ಸು ಆಧ್ಯಾತ್ಮಿಕತೆ ಕಡೆಗೆ ಹೊರಳುವುದು ಎಂದು. ಸೂಪರ್ ಸ್ಟಾರ್ ಎನಿಸಿಕೊಂಡ ರಜನೀಕಾಂತ್ ಹಿಮಾಲಯದ ಗುಹೆಗಳಿಗೆ ಧ್ಯಾನ ಮಾಡಲು ಹೋಗುವುದಿಲ್ಲವೆ? ಅವರು ತಮ್ಮ ಚಿತ್ರಗಳಲ್ಲಿ ಮಾಡುವ ಮ್ಯಾಜಿಕ್ ಅವರ ಸ್ವಂತ ಜೀವನದಲ್ಲಿ ಮಾಡಲು ಸಾಧ್ಯವೇ? ಅವರಿಗೆ ಗೊತ್ತಾಗಿದೆ. ನಟನೆ ಮಾಡುವುದು ಪ್ರೇಕ್ಷಕರಿಗಾಗಿ, ಮತ್ತು ಧ್ಯಾನ ಮಾಡುವುದು ತಮಗಾಗಿ ಎಂದು.

ಆದರೆ ಇದರಲ್ಲಿ ಆಸಕ್ತಿಯ ವಿಷಯ ಎಂದರೆ 'ಉಣುವ ಚಿಂತೆ, ಹೆಂಡತಿಯ ಚಿಂತೆ, ಮಕ್ಕಳ ಚಿಂತೆ'  ಎಂದ ವಚನಕಾರ 'ಉಣುವ ಸಂತೋಷ, ಹೆಂಡತಿಯ ಸಂತೋಷ, ಮಕ್ಕಳ ಸಂತೋಷ'  ಎಂದು ಹೇಳಲಿಲ್ಲ. ಅದು ಏಕೆಂದರೆ ಸಂತೋಷ ಕ್ಷಣಿಕ, ಚಿಂತೆ ದೀರ್ಘ ಕಾಲದ್ದು. ಪರೀಕ್ಷೆಯಲ್ಲಿ ಮೊದಲ ದರ್ಜೆ ಗಳಿಸಿದ ಸಂತೋಷ ಹದಿನೈದು ದಿನದಲ್ಲಿ ಮರೆಯಾಗುತ್ತದೆ. ಆದರೆ ಫೇಲಾದ ಚಿಂತೆ ವರುಷವಿಡೀ ಕಾಡುತ್ತದೆ. ಪ್ರಕೃತಿ ನಮ್ಮನ್ನು ರೂಪುಗೊಳಿಸಿದ್ದು ಹಾಗೆಯೆ. ಅದು ನಮ್ಮ ಮೆದುಳಿನಲ್ಲಿ ರಾಸಾಯನಿಕಗಳ ಮೂಲಕ ಕ್ಷಣಿಕ ಕಾಲದ ಮಟ್ಟಿಗೆ ಸಂತೋಷ ಹುಟ್ಟಿಸಿ, ನಾವುಗಳು ಮತ್ತೆ ಮತ್ತೆ ಆ ಅನುಭವಕ್ಕೆ ಹಾತೊರೆಯುವಂತೆ ಮಾಡುತ್ತದೆ. ಹಾಗಾಗಿ ಸಂತೋಷ ಎನ್ನುವುದು ನೆನಪು ಮಾತ್ರ. ಆದರೆ ದುಃಖ ಎನ್ನುವುದು ಪಕ್ಕದಲ್ಲೇ ಇರುವ ಪ್ರತಿ ಕ್ಷಣ ಚುಚ್ಚಿ ಇರಿಯುವ ಸಂಗಾತಿ.

ಅದನ್ನು ನಮ್ಮ ವಚನಕಾರರು ಎಂದೋ ಅರಿತಿದ್ದರು. 'ಸಾಸಿವೆ ಕಾಳಿನಷ್ಟು ಸುಖಕ್ಕೆ, ಸಾಗರದಷ್ಟು ದುಃಖ ನೋಡಾ' ಎಂದು ಅಲ್ಲಮ ಪ್ರಭುಗಳು ಹೇಳಲಿಲ್ಲವೇ? ಅವರಿಗೆ ಸುಖ ಮತ್ತು ದುಃಖಗಳ ನಡುವಿನ ಅಪಾರ ಪ್ರಮಾಣದ ಅಂತರ ಮತ್ತು ತೀವ್ರತೆಯ ಅರಿವಿತ್ತು.ಆದರೆ ಪ್ರಕೃತಿ, ನಮ್ಮ ಮನಸ್ಥಿತಿಯನ್ನು ಸಾಸಿವೆ ಕಾಳಿನಷ್ಟು ಸಿಗುವ ಸುಖಕ್ಕೆ ಬೆಂಬತ್ತಿ ಹೋಗಿ, ಸಾಗರದಷ್ಟು ದುಃಖವನ್ನು ಅನುಭವಿಸುವಂತೆ ಮಾಡಿಬಿಡುತ್ತದೆ. ಅಂಬಿಗರ ಚೌಡಯ್ಯ ಹೇಳಿದಂತೆ ಉಣುವ ಚಿಂತೆಯಿಂದ, ಮರಣದ ಚಿಂತೆಗೆ ನಮಗರಿವಿಲ್ಲದಂತೆ ಬದಲಾಗುತ್ತ ಹೋಗಿಬಿಡುತ್ತೇವೆ. ಆದರೆ ವಚನಕಾರರು ತಮ್ಮ ಇಷ್ಟ ದೈವದ ಮೊರೆ ಹೊಕ್ಕು, ಶಿವಚಿಂತನೆಯಲ್ಲಿ ಇಲ್ಲವೇ ಗುಹೇಶ್ವರನ ಧ್ಯಾನದಲ್ಲಿ ಕಾಲ ಕಳೆದು ಮಾಯೆಯಿಂದ ಹೊರ ಬರುತ್ತಾರೆ. ಅದರಿಂದಲೇ 'ಮನದ ಮುಂದಣ ಆಸೆಯೇ ಮಾಯೆ' ಎನ್ನುವ ವಚನ ಅವರಿಗೆ ಹೇಳಲು ಸಾಧ್ಯವಾಗುತ್ತದೆ.

ಸುಖ ಅಲ್ಪ ಕಾಲದ್ದು, ದುಃಖ ದೀರ್ಘ ಕಾಲದ್ದು ಅಂದರೆ ನಾವು ಸುಖದ ಹಿಂದೆ ಬೀಳದೆ, ದುಃಖವನ್ನು ದೂರವಿಡುವ ಕಾರ್ಯ ಕೈಗತ್ತಿಕೊಳ್ಳಬೇಕಲ್ಲವೇ? ಅದನ್ನೇ ನೋಡಿ ಬುದ್ಧ ಮಾಡಿದ್ದು. ಅವನು ಸುಖದ ಮೂಲ ಯಾವುದು ಎಂದು ಕೇಳಲಿಲ್ಲ. ಬದಲಿಗೆ ದುಃಖದ ಮೂಲ ಯಾವುದು ಎಂದು ಹುಡುಕಿದ. ಅವನಿಗೆ ಜ್ಞಾನೋದಯ ಆಯಿತು. 'ಆಸೆಯೇ ದುಃಖದ ಮೂಲ' ಎನ್ನುವ ಸರಳ ಸತ್ಯವನ್ನು ಜಗತ್ತಿಗೆ ಸಾರಿದ. ಸತ್ಯ ಸರಳ ಆದರೆ ಸುಲಭ ಅಲ್ಲ. ಸಂತೋಷ ನೀವು ಬೇಡ ಎಂದು ತಿರಸ್ಕಿರಿಸದರೆ ಅದು ಪ್ರಕೃತಿಯ ವಿರುದ್ಧದ ಈಜು. ಅದು ಮತ್ತೆ ಸುಖಕ್ಕೆ ನಿಮ್ಮನ್ನು ಚಡಪಡಿಸುವಂತೆ ಮಾಡುತ್ತದೆ. ಮತ್ತೆ ಲೌಕಿಕದ ತಿರುಗಣಿಗೆ ಬೀಳುವಂತೆ ಮಾಡುತ್ತದೆ. ಬುದ್ಧ ದುಃಖದ ತೀವ್ರತೆ ಅನುಭವಿಸದೇ ಇದ್ದರೆ ಅದರ ಮೂಲ ಹುಡುಕಲು ಹೋಗುತ್ತಿರಲಿಲ್ಲ. ಶಿವಧ್ಯಾನದ ಆಶ್ರಯ ಇರದಿದ್ದರೆ ದಾಸರಿಗೆ, ವಚನಕಾರರಿಗೆ ಮುಕ್ತಿ ಎಲ್ಲಿತ್ತು?


ಇತಿಹಾಸ ಹೇಳುವುದು ಕೂಡ ಇದನ್ನೇ. ಒಂದು ಗೆದ್ದ ದೊಡ್ಡಸ್ತಿಕೆಗೆ, ಹಲವಾರು ಸೋಲಿನ ಅವಮಾನಗಳು ಜೊತೆಯಾಗಿಬಿಡುತ್ತವೆ. ಗೆಲುವಿಗಿಂತ ಸೋಲು ಭೀಕರ. ಗೆಲುವು ಮದ ಏರಿಸಿದರೆ, ಸೋಲು ಪಾಠ ಕಲಿಸುತ್ತದೆ. ಸುಖಕ್ಕಿಂತ ದುಃಖಗಳೇ ನಮ್ಮನ್ನು ಹೆಚ್ಚು ಮನುಷ್ಯರನ್ನಾಗಿಸುತ್ತವೆ. ದುಃಖಗಳೇ ಸಿದ್ಧಾರ್ಥನನ್ನು ಬುದ್ಧನನ್ನಾಗಿ ಬದಲಾಯಿಸಿದ್ದು. ಆ ಸತ್ಯದ ಅರಿವೇ ಬಸವಣ್ಣ, ಅಲ್ಲಮರಾದಿಯಾಗಿ ವಚನಕಾರರನ್ನು ಅಜರಾಮರ ಆಗಿಸಿದ್ದು.

Sunday, July 31, 2022

ಕುರಿ, ತೋಳ ಮತ್ತು ಕುರಿ ಕಾಯುವ ನಾಯಿ

ಲಕ್ಷಾಂತರ ವರ್ಷಗಳ ಹಿಂದೆ ಮಾನವ ಅಲೆಮಾರಿಯಾಗಿ, ಬೇಟೆಯಾಡುತ್ತ ಜೀವಿಸುತ್ತಿದ್ದ. ಆದರೆ ಅವನು ಕ್ರಮೇಣ ಕೃಷಿಕನಾಗಿ ಮಾರ್ಪಟ್ಟ. ಏಕೆಂದರೆ ಅದು ಬೇಟೆಗೆ ಹೋಲಿಸಿದರೆ ಸುಲಭ ಮತ್ತು ಅದರಿಂದ ಹೆಚ್ಚು ಹೊಟ್ಟೆಗಳನ್ನು ತುಂಬಿಸಬಹುದಾಗಿತ್ತು. ಕೃಷಿ ಜೀವನ ಮನುಷ್ಯರು ಒಟ್ಟಿಗೆ ಬಂದು ಒಂದು ಸಮಾಜ ಕಟ್ಟಲು ಸಹಾಯವಾಯಿತು. ಪ್ರಕೃತಿ ಮನುಷ್ಯನಿಗೆ ಮತ್ತು ಎಲ್ಲ ಜೀವಿಗಳಿಗೆ ಸುಲಭ ಜೀವನ ಹುಡುಕಿಕೊಳ್ಳಲು ಪ್ರಚೋದಿಸುತ್ತದೆ. ಹಾಗಾಗಿ ಎಲ್ಲರಿಗೂ ಕೃಷಿ ಕೆಲಸ ಇಷ್ಟವಾಗದೇ, ಕೃಷಿ ಮಾಡುವವರನ್ನು ದೋಚುವ (ಮೋಸದಿಂದಲೋ ಅಥವಾ ದಬ್ಬಾಳಿಕೆಯಿಂದಲೋ) ಮತ್ತು ಅದರಿಂದ ಸುಲಭ ಜೀವನ ಸಾಗಿಸುವ ವೃತ್ತಿಯನ್ನು ಹಲವರು ಆಯ್ದುಕೊಂಡರು. ಇಂತಹ ಕಳ್ಳರನ್ನು ಎದುರಿಸಲು, ಅವರಿಂದ ಸಾಮಾನ್ಯ ಜನರನ್ನು ರಕ್ಷಿಸಲು ದಂಡನಾಯಕರು, ತಳವಾರರು ಹುಟ್ಟಿಕೊಂಡರು. ಅಂತಹ ಹಲವರು ದಂಡನಾಯಕರಿಗೆ ನಾಯಕ ಆದವನೇ ರಾಜ ಎನಿಸಿಕೊಂಡ. ಹೀಗೆ ನಮ್ಮ ಸಮಾಜ ರೂಪುಗೊಳ್ಳುತ್ತ ಹೋಯಿತು.


ಇಂದಿಗೂ ಕೂಡ ಎಲ್ಲಾ ಸಮಾಜಗಳಲ್ಲಿ ಹಲವಾರು ಲೋಪ ದೋಷಗಳಿರುತ್ತವೆ. ದೌರ್ಬಲ್ಯಗಳಿರುತ್ತವೆ. ಅವುಗಳ ದುರ್ಬಳಕೆ ಮಾಡಿಕೊಳ್ಳುವ ಜನರು ಹುಟ್ಟಿಕೊಳ್ಳುತ್ತಾರೆ. ಉದಾಹರಣೆಗೆ ಮಾಫಿಯಾ ಅಥವಾ  ಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳು. ಕೆಲವರು ದಬ್ಬಾಳಿಕೆ ಮಾಡುತ್ತಾರೆ. ಇನ್ನು ಕೆಲವರು ಮೋಸ ಮಾಡಿ ತಮ್ಮ ಜಾಣ್ಮೆ ಮೆರೆಯುತ್ತಾರೆ. ಆದರೆ ಅವರು ಬದುಕುವುದು ಸಮಾಜದ ರಕ್ತ ಹೀರುತ್ತ ಅಲ್ಲದೆ ಯಾವುದೇ ಕೃಷಿ ಸಾಧನೆಯಿಂದಲ್ಲ.


ಎಲ್ಲ ಸಮಾಜದಲ್ಲಿ ಮೂರು ವರ್ಗದ ಜನರಿರುತ್ತಾರೆ. ಹೆಚ್ಚಿನವರು ಕುರಿಗಳು. ಅವರಿಗೆ ತಮ್ಮನ್ನು ತಾವು ಕಾಪಾಡಿಕೊಳ್ಳುವುದು ಗೊತ್ತಿಲ್ಲ. ಕೆಲವರು ತೋಳಗಳು. ಅವರು ಕುರಿಗಳನ್ನು ಹರಿದು ತಿನ್ನುತ್ತಾರೆ. ಇನ್ನು ಕೆಲವರು ಕುರಿ ಕಾಯುವ ನಾಯಿಗಳು. ಅವರು ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ಕುರಿಗಳನ್ನು ಕಾಪಾಡುತ್ತಾರೆ. ಸುತ್ತಲಿನ ಪರಿಸರ ಸದಾ ಗಮನಿಸುತ್ತಾ ಇರುತ್ತಾರೆ. ತೋಳ ಕಣ್ಣಿಗೆ ಬಿದ್ದೊಡನೆ ಎಚ್ಚರಿಸುತ್ತಾರೆ. ಮತ್ತು ಅವಶ್ಯಕತೆ ಬಿದ್ದರೆ ಕಾದಾಟಕ್ಕೆ ಇಳಿಯುತ್ತಾರೆ.


ಉದಾಹರಣೆಗೆ, ಮುಂಬೈ ನಲ್ಲಿ ಭಯೋತ್ಪಾದಕರ ಧಾಳಿಯಾದಾಗ, ಅಲ್ಲಿನ ಸಾರ್ವಜನಕರು ಕುರಿಗಳಾಗಿದ್ದರು. ತೋಳ ಪಾತ್ರ ವಹಿಸಿದ ಭಯೋತ್ಪಾದಕರ ಗುಂಡಿಗೆ ಬಲಿಯಾಗಿ ಸುಲಭದಲ್ಲಿ ಪ್ರಾಣ ತೆತ್ತರು. ಆದರೆ ಆ ತೋಳಗಳನ್ನು ಎದುರಿಸಿದ 'ಬ್ಲಾಕ್ ಕ್ಯಾಟ್ ಕಮಾಂಡೋ' ಗಳು ಮತ್ತು ಶಸ್ತ್ರಸಜ್ಜಿತ ಪೋಲಿಸ್ ರು ವಹಿಸಿದ ಪಾತ್ರ ಕುರಿಗಳನ್ನು ಕಾಯುವುದು ಮತ್ತು ತೋಳವನ್ನು ಓಡಿಸುವುದು ಇಲ್ಲವೇ ಕೊಲ್ಲುವುದು ಆಗಿತ್ತು.


ಭಾರತದ ಚರಿತ್ರೆಯನ್ನು ಗಮನಿಸುತ್ತಾ ಹೋಗಿ. ನಮ್ಮ ಹಾಗೆ ಪರಕೀಯರಿಂದ ಹಲವಾರು ಬಾರಿ ಅಕ್ರಮಣಕ್ಕೊಳಗಾದ ದೇಶ ಬೇರೆ ಯಾವುದೂ ಇಲ್ಲ. ಹಾಗೆ ಅಕ್ರಮಣಕ್ಕೊಳಗಾದಾಗ ದೇಶದಲ್ಲಿ ಇದ್ದ ಪರಿಸ್ಥಿತಿ ಗಮನಿಸಿ. ಕುರಿ ಕಾಯುವ ನಾಯಿ ಕಡಿಮೆ ಸಂಖ್ಯೆಯಲ್ಲಿದ್ದಾಗ, ಕುರಿಗಳೇ ಹೆಚ್ಚು ತುಂಬಿಕೊಂಡಿದ್ದಾಗ ತೋಳ ಸುಲಭದಲ್ಲಿ ಗೆಲ್ಲಲು ಸಾಧ್ಯ ಅಲ್ಲವೇ? ತೋಳಗಳ ಹಿಂಡಿನಲ್ಲಿ ಪ್ರತಿ ತೋಳ ಹೋರಾಡುತ್ತದೆ. ಆದರೆ ಕುರಿ ಹಿಂಡು ಚೆಲ್ಲಾಪಿಲ್ಲಿಯಾಗಿ ಸುಲಭಕ್ಕೆ ಪ್ರಾಣ ಕಳೆದುಕೊಳ್ಳುತ್ತವೆ. ಜೊತೆಗೆ ಕೆಲವೇ ಇದ್ದ ಕಾವಲು ನಾಯಿಗಳನ್ನು ಕೂಡ ಸಾವಿನ ಅಂಚಿಗೆ ತಳ್ಳಿಬಿಡುತ್ತವೆ. ನಿಮಗೆ ಪರಿಸ್ಥಿತಿ ಅರ್ಥವಾಗಿರಲಿಕ್ಕೆ ಸಾಕು.


ಇದು ಸಮಾಜದ ಮತ್ತು ದೇಶದ ಮಟ್ಟದಲ್ಲಿ ನಡೆಯುತ್ತಿರುವ ನಿರಂತರ ಪ್ರಕ್ರಿಯೆ. ಇದು ಸಣ್ಣ ಮಟ್ಟದಲ್ಲಿ ಅಂದರೆ ಕುಟುಂಬದ ಒಳ ಜಗಳಗಳಲ್ಲಿ ಕೂಡ ನಡೆಯುತ್ತಿರುತ್ತದೆ. ನಿಮ್ಮ ಕುಟುಂಬದಲ್ಲೇ ಕುರಿ ಯಾರು, ತೋಳ ಯಾರು ಮತ್ತು ಕುಟುಂಬ ಕಾಯುವ ನಾಯಿ ಯಾರು ಎಂದು ಗಮನಿಸಿ ನೋಡಿ. ಎಲ್ಲದಕ್ಕೂ ಮುಂಚೆ ನಿಮ್ಮ ಪಾತ್ರ ಏನು ಎಂದು ತಿಳಿದುಕೊಳ್ಳಿ. ನೀವು ಕುರಿಯಾಗಿದ್ದರೆ ನನ್ನ ಸಂತಾಪಗಳು. ನಿಮ್ಮನ್ನು ದೂಷಣೆಗೆ ಗುರಿ ಮಾಡಿ, ನಿಮ್ಮನ್ನು ಹುರಿ ಮುಕ್ಕುವ ತೋಳಗಳು ಹತ್ತಿರಕ್ಕೆ ಬರುವ ಮುನ್ನವೇ ಎಚ್ಚೆತ್ತುಕೊಳ್ಳಿ. ನಾಯಿಗಳ ಸ್ನೇಹ ಗಳಿಸಿ ಮತ್ತು ಅವುಗಳ ಎಚ್ಚರಿಕೆ ಮೀರದಿರಿ. ಒಂದು ವೇಳೆ ನೀವು ತೋಳವೇ ಆಗಿದ್ದರೆ, ಎಲ್ಲಾ ಸಮಯದಲ್ಲಿ ನಿಮ್ಮ ಆಟ ನಡೆಯುವುದಿಲ್ಲ. ನಿಮ್ಮನ್ನು ಗಮನಿಸುವ ನಾಯಿಗಳು ಇವೆ. ನಿಮ್ಮ ಲೆಕ್ಕಾಚಾರ ಹೆಚ್ಚು ಕಡಿಮೆ ಆದರೆ ನಿಮ್ಮ ಕೊನೆ ಗ್ಯಾರಂಟಿ ಎನ್ನುವುದು ಮರೆಯಬೇಡಿ. ನೀವು ಕುಟುಂಬ ಕಾಯುವ ನಾಯಿ ಆಗಿದ್ದರೆ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು. ಕುರಿ ಎನ್ನುವ ಕುಟುಂಬ ಮತ್ತು ಸಮಾಜದ ರಕ್ಷಣೆ ಮಾಡಿದ್ದಕ್ಕೆ. 


ಇದೇ ತರಹದ ತರ್ಕವನ್ನು ಅಮೆರಿಕದ Navy Seal ಗಳಿಗೆ ಮತ್ತು ಇಸ್ರೇಲ್ ದೇಶದ Mossad ಕಮಾಂಡೋಗಳಿಗೆ ಹೇಳಿಕೊಡಲಾಗುತ್ತವೆ. ಆದರೆ ಇದು ಇತಿಹಾಸ ಓದಿದ ಮತ್ತು ಸಮಾಜವನ್ನು ಗಮನಿಸುವ ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬಹುದಾದ ಸಾಮಾನ್ಯ ತಿಳುವಳಿಕೆ.



ಚಿತ್ರ: ಹೋರಾಟದ ನಂತರ ನಾಯಿಯನ್ನು ಕುರಿ ಸಂತೈಸುತ್ತಿರುವುದು  



Wednesday, July 27, 2022

ಅನುರಾಗ ಮಾಲಿಕೆ, ಅದಕಿಲ್ಲ ಹೋಲಿಕೆ

೧೯೬೦ ಮತ್ತು ೭೦ ರ ದಶಕಗಳಲ್ಲಿ ರಾಜಕುಮಾರ್ ಮತ್ತು ಭಾರತಿ ಅವರು ಒಟ್ಟಾಗಿ ೨೧ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಜೋಡಿ ನೋಡಿಯೇ 'ಭಲೇ ಜೋಡಿ' ಎನ್ನುವ ಚಿತ್ರ ತಯಾರಾಗಿತ್ತು. ಅವರ 'ಹೃದಯ ಸಂಗಮ' ಎನ್ನುವ ಕಪ್ಪು ಬಿಳುಪಿನ ಚಿತ್ರದ ಒಂದು ಹಾಡು ನನಗೆ ಅಚ್ಚು ಮೆಚ್ಚು. ಈ ಹಾಡಿನ ಚಿತ್ರೀಕರಣದಲ್ಲಿ ದೃಶ್ಯ-ವೈಭವಗಳಿಲ್ಲ. ಬಟ್ಟೆ-ಆಭರಣಗಳ ಶ್ರೀಮಂತಿಕೆಯ ಪ್ರದರ್ಶನ ಇಲ್ಲ. ಆದರೆ ಪ್ರೀತಿಯ ತೋರ್ಪಡಿಕೆಯಲ್ಲಿ ಭರ್ತಿ ಶ್ರೀಮಂತಿಕೆ. ಅದರಲ್ಲಿ ನಾಯಕ-ನಾಯಕಿ ಹೀಗೆ ಹಾಡುತ್ತಾರೆ:


'ನೀ ತಂದ ಕಾಣಿಕೆ
ನಗೆ ಹೂವ ಮಾಲಿಕೆ
ನಾ ತಂದ ಕಾಣಿಕೆ
ಅನುರಾಗ ಮಾಲಿಕೆ
ಅದಕಿಲ್ಲ ಹೋಲಿಕೆ'


ಹಳೆಯ ಕೆಲವೇ ಹಾಗಿತ್ತೋ ಅಥವಾ ಇದೆಲ್ಲ ಬರಿ ಕವಿಯ ಕಲ್ಪನೆ ಏನೋ ಗೊತ್ತಿಲ್ಲ. ಆದರೆ ಇಂದಿನ ಹೆಣ್ಣು ಮಕ್ಕಳಿಗೆ ಕಾಣಿಕೆ ಅಂದರೆ ಅದು ವಜ್ರದ್ದೋ ಇಲ್ಲವೇ ಬಂಗಾರದ್ದೋ ಆಗಿರಬೇಕು.ಯಾರಿಗೆ ಬೇಕು ನಗೆ ಹೂವ ಮಾಲಿಕೆ? ಹೇಳಿ, ನೀವೇ ಹೇಳಿ? ಗಂಡಸರೇನು ಕಡಿಮೆ ಇಲ್ಲ. ಮಾವನ ಆಸ್ತಿಯ ಮೌಲ್ಯ ಹೆಂಡತಿಯ ಅನುರಾಗಕ್ಕಿಂತ ಹೆಚ್ಚು ಮುಖ್ಯ.


'ಮೈ ಮರೆತು ನಿಂತೆ ಆ ನಿನ್ನ ನೋಟಕೆ
ನಾ ಹಾಡಿ ಕುಣಿದೆ ನಿನ್ನೆದೆ ತಾಳಕೆ'


ಈ ತರಹದ ನಿಷ್ಕಲ್ಮಶ ಮತ್ತು ಯಾವುದೇ ಷರತ್ತು-ಕರಾರುಗಳಿಲ್ಲದ ಪ್ರೀತಿ ಗಂಡ-ಹೆಂಡತಿ ಇಬ್ಬರೂ ಬಡವರಾಗಿದ್ದರೆ ಮಾತ್ರ ಸಾಧ್ಯವೇನೋ? ಅಲ್ಲಿ ಅಸ್ತಿ-ಅಂತಸ್ತಿನ ಅಡಚಣೆ ಇರುವುದಿಲ್ಲ. ಯಾರು ಹೆಚ್ಚು-ಕಡಿಮೆ ಎನ್ನುವ ವಾದ-ವಿವಾದಗಳಿರುವುದಿಲ್ಲ. ಆಗ ಸಂಗಾತಿಯ ನೋಟಕ್ಕೆ ಮೈ ಮರೆಯುವುದು, ಲಹರಿಯನ್ನು ಗೊತ್ತು ಮಾಡಿಕೊಳ್ಳುವುದು ಸಾಧ್ಯವೋ ಏನೋ? ಅದು ಬಿಟ್ಟು ಕೊಡು-ತೆಗೆದುಕೊಳ್ಳುವ ವ್ಯಾಪಾರದಲ್ಲಿ, ನಾನೇ ಶ್ರೇಷ್ಠ ಎನ್ನುವ ಸ್ಪರ್ಧೆಯಲ್ಲಿ ಹೇಗೆ ಸಾಧ್ಯ? ನೀವುಗಳು ಅವನ್ನೆಲ್ಲ ಮೀರಿ ನಿಂತ ಜೋಡಿಯಾಗಿದ್ದರೆ ನಿಮಗೆ ಅಭಿನಂದನೆಗಳು. ನಿಮ್ಮಂತವರನ್ನು ನೋಡಿಯೇ ಇಂತಹ ಕಾವ್ಯ ಸೃಷ್ಟಿಯಾಗಿರಲಿಕ್ಕೆ ಸಾಧ್ಯ.


'ಈ ಬಾಳ ಗುಡಿಗೆ ನೀನಾದೆ ದೀಪಿಕೆ
ಬೆಳಕಾಗಿ ನಿಂದೆ ನೀ ಎನ್ನ ಜೀವಕೆ'


ರಾಜಕುಮಾರ್ ಅಷ್ಟೇ ಅಲ್ಲ ಅವರ ಮಗ ಪುನೀತ್ ರ ಕಾಲವೂ ಮುಗಿದು ಹೋಗಿದೆ. ಇಂದಿಗೆ ಆದರ್ಶಮಯ ಚಿತ್ರಗಳು ಇಲ್ಲ. ಇಂದಿಗೆ ಹೆಣ್ಣು ಮಕ್ಕಳು ನೋಡುವುದು ಧಾರಾವಾಹಿಗಳನ್ನು. ಅದರಲ್ಲಿನ ಪಾತ್ರಗಳು ತೊಟ್ಟ ಆಭರಣಗಳನ್ನು ತಾವು ತೊಟ್ಟು ಯಾರಿಗೆ ಹೊಟ್ಟೆ ಉರಿಸಬೇಕು ಎನ್ನುವ ಲೆಕ್ಕಾಚಾರದಲ್ಲಿ ಅವರು ಮೈ ಮರೆತಿರುತ್ತಾರೆ. ಆ ಧಾರಾವಾಹಿಗಳಲ್ಲಿ ಹೆಣ್ಣಿನ ಪಾತ್ರಗಳೇ ಎಲ್ಲ ನಿರ್ಧಾರಗಳನ್ನು ಮಾಡುವುದು ನೋಡಿ ತಮ್ಮ ಕುಟುಂಬ ಕೂಡ ತಮ್ಮ ಕಪಿಮುಷ್ಠಿಯಲ್ಲಿ ಇರಬೇಕೆಂದು ಬಯಸುತ್ತಾರೆ. ಅವರಿಗೆ ಸುಮಧುರ ಗೀತೆಗಳು ಬೇಕಿಲ್ಲ. ಅವರವರ ಲೋಕ ಅವರವರಿಗೆ ಆಗಿ ಹೋಗಿದೆ. ಮಕ್ಕಳು ಮೊಬೈಲ್ ಗೇಮ್ ಗಳಲ್ಲಿ ಕಳೆದು ಹೋಗಿರುತ್ತಾರೆ. ನನ್ನ ತರಹದವರು ಹಳೆಯ ಹಾಡು ಕೇಳುತ್ತ ಹೊಸ ಲೇಖನ ಬರೆಯುತ್ತಾರೆ. ನಿಮ್ಮ ತರಹದವರು  'ಲೈಕ್' ಒತ್ತಿ ನಿಟ್ಟುಸಿರು ಬಿಡುತ್ತೀರಿ.


ವಾಸ್ತವ ಹೇಗಾದರೂ ಇರಲಿ, ಹಾಡು ಕೇಳುತ್ತ ಸಂತೋಷ ಹೊಂದಲು ಸಾಧ್ಯವಾಗುವುದಕ್ಕೆ ಅಲ್ಲವೇ ಹಾಡುಗಳು ಮಾಸದೆ ಉಳಿದಿರುವುದು. ಈ ಹಳೆಯ ಹಾಡು ಒಮ್ಮೆ ಕೇಳಿ ನೋಡಿ.


Sunday, July 24, 2022

ಕರ್ಮ ಎನ್ನುವ ಪಾಪ-ಪುಣ್ಯದ ಲೆಖ್ಖ

ಕರ್ಮ ಎನ್ನುವುದು ಅಂತೆ-ಕಂತೆಗಳ ಪುರಾಣ. ಅದರಲ್ಲಿ ನಿಮಗೆ ನಂಬಿಕೆ ಇರದೇ ಇದ್ದರೆ ಮುಂದಕ್ಕೆ ಓದಲೇಬೇಡಿ. ಆದರೆ ನನಗೆ ಆಗುತ್ತಿರುವ ಅನುಭವಗಳು ಅದರ ಮೇಲೆ ನಂಬಿಕೆ ಮೂಡಿಸಿವೆ.

 

ಸದ್ಗುರು, ರವಿಶಂಕರ್, ಶಿವಾನಿ ಅವರು ಕರ್ಮದ ಬಗ್ಗೆ ಮಾತನಾಡಿರುವ ಹಲವಾರು ವಿಡಿಯೋಗಳನ್ನು ನೋಡಿದ್ದೇನೆ. ಇಂಟರ್ನೆಟ್ ನಲ್ಲಿ ಸಾಕಷ್ಟು ಲೇಖನಗಳನ್ನು ಓದಿದ್ದೇನೆ. ಅದರ ಬಗ್ಗೆ ಸಾಕಷ್ಟು ವಿಚಾರ ಮಾಡಿದ್ದೇನೆ. ಮತ್ತು ನನ್ನ ಬದುಕಿಗೆ ತಾಳೆ ಹಾಕಿ ನೋಡಿದ್ದೇನೆ. ಕೊನೆಗೆ ನನಗೆ ಅರ್ಥವಾಗಿರುವುದಿಷ್ಟು.

 

ಕರ್ಮ ಎನ್ನುವುದು ಪಾಪ-ಪುಣ್ಯಗಳ ಪ್ರತ್ಯೇಕ ಲೆಖ್ಖ. ಆದರೆ ಅದು ಗಣಿತದ ಲೆಖ್ಖವಲ್ಲ. ಅನುಭವಗಳ ಲೆಖ್ಖ. ನೀವು ಇತರರಲ್ಲಿ ಒಳ್ಳೆಯ ಅನುಭೂತಿ ಮೂಡಿಸಿದ್ದರೆ ಅದರ ಫಲವು ನಿಮಗೆ ಉಂಟು. ಹಾಗೆಯೆ ನೀವು ಇತರರಿಗೆ ಅನ್ಯಾಯ ಮತ್ತು ನೋವು ಉಂಟು ಮಾಡಿದ್ದರೆ ಅದೇ ಅನುಭವ ನಿಮಗೆ ಕಟ್ಟಿಟ್ಟ ಬುತ್ತಿ. ಆ ಅನುಭವಗಳ ಪಾಠ ಕಲಿಯುವವರೆಗೆ ಆ ಸನ್ನಿವೇಶಗಳು ಮತ್ತು ವ್ಯಕ್ತಿಗಳು ನಮ್ಮ ಜೀವನದಲ್ಲಿ ಪುನರಾವರ್ತನೆ ಆಗುತ್ತಲೇ ಇರುತ್ತಾರೆ. ಹಾಗಾಗಿ ನೀವು ಎಷ್ಟು ಬೇಗ ಪಾಠ ಕಲಿಯುತ್ತಿರೋ ಅಷ್ಟು ಉತ್ತಮ.

 

ಸುಲಭ ಲೆಕ್ಕಾಚಾರದ ಪ್ರಕಾರ (ಜನ್ಮ ದಿನ ಮತ್ತು ರಾಶಿಯ ಅನುಗುಣವಾಗಿ) ನಾನು ಈ ಜನ್ಮಕ್ಕೆ ತಂದ ಕರ್ಮದ ಹೊರೆ ಎಂದರೆ, ಹಿಂದಿನ ಜನ್ಮಗಳಲ್ಲಿ ಅಹಂಕಾರಿಯಾಗಿ ಬೇರೆಯವರ ಭಾವನೆಗಳಿಗೆ ಬೆಲೆ ಕೊಡದೆ ನಡೆದುಕೊಂಡಿದ್ದು. ಅದರ ಫಲವಾಗಿಯೇನೋ ಎನ್ನುವಂತೆ ನನಗೆ ನನ್ನ ಭಾವನೆಗಳಿಗೆ ಬೆಲೆ ಕೊಡದ ಒರಟರೆ ಇಂದಿಗೆ ನನ್ನ ಬಂಧು-ಬಳಗವಾಗಿದ್ದಾರೆ. ಅದು ನಾನು ಮಾಡಿದ ಕರ್ಮ ನಾನು ಅನುಭವಿಸದೇ ವಿಧಿ ಇಲ್ಲ ಎನ್ನುವಂತೆ. ಆದರೆ ಅದರ ಪಾಠ ನನಗೆ ಮನದಟ್ಟಾಗಿ ಹೋಗಿದೆ. ಪಾಠ ಕಲಿಯದೇ ಇರುವ ಮೂರ್ಖತನದ ಶಾಪ ನನಗೆ ದೇವರು ನೀಡಿಲ್ಲ. ಅದು ಯಾವ ಪುಣ್ಯ ಕರ್ಮದ ಫಲವೋ?

 

ಕರ್ಮವನ್ನು ನೀವು ನಂಬಿದರೆ, ಈಗ ನಮ್ಮ ಜೊತೆಗೆ ಅನ್ಯಾಯದಿಂದ ನಡೆದುಕೊಳ್ಳುವ ಜನರನ್ನು ನಾವು ಬೈದುಕೊಳ್ಳುವಂತೆ ಇಲ್ಲ. ಹಾಗೆ ಮಾಡಿದರೆ ಮುಂದಿನ ಜನ್ಮದಲ್ಲಿ ಅದೇ ಜನರ ಜೊತೆಗೆ ನಮ್ಮ ಜೀವನ. ಅದು ಪಾಠ ಕಲಿಯದೇ ಇದ್ದದ್ದಕ್ಕಾಗಿ. ಬಿ.ಕೆ.ಶಿವಾನಿ ಅವರ ಪ್ರಕಾರ ನಾವು ಅವರಿಗೆ ಕ್ಷಮೆ ಕೇಳಬೇಕು. ಅದು ನಮಗೆ ನೆನಪಿರದ ಯಾವುದೊ ಜನ್ಮದಲ್ಲಿ ನಾವು ಅವರಿಗೆ ಮಾಡಿರಬಹುದಾದ ಅನ್ಯಾಯಕ್ಕಾಗಿ. ಕ್ಷಮೆ ಯಾಚನೆಯಿಂದ ನಮ್ಮ ಕರ್ಮದ ಹೊರೆ ಕಡಿಮೆ ಆಗುತ್ತದೆ. ಹಾಗೆ ಪಾಠ ಸಂಪೂರ್ಣ ಕಲಿತ ಮೇಲೆ, ನಮಗೆ ಅವರ ಜೊತೆ ಇರುವ ಕರ್ಮದ ಸಂಬಂಧ ಕಳಚಿ ಬೀಳುತ್ತದೆ. ಅದಾಗದೆ ಹೊಸ ಜೀವನ ಶುರು ಆಗದು.

 

ನೀವು ಯೋಗಿಗಳನ್ನು ಗಮನಿಸಿದರೆ ಅವರು ಯಾರ ಜೊತೆಗೂ ಕರ್ಮವನ್ನು ಕಟ್ಟಿಕೊಳ್ಳುವ ಗೊಡವೆಗೆ ಹೋಗುವುದೇ ಇಲ್ಲ. ಬುದ್ಧನ ಬಗ್ಗೆ ಒಂದು ಕಥೆಯಿದೆ. ಒಬ್ಬ ಮನುಷ್ಯ ಬುದ್ಧನ ಎದುರಿಗೆ ನಿಂತು, ಎಲ್ಲರ ಎದುರಿಗೆ ಬುದ್ಧನನ್ನು ವಾಚಾಮಗೋಚರವಾಗಿ ನಿಂದಿಸುತ್ತಾನೆ. ತಾಳ್ಮೆ ಕಳೆದುಕೊಳ್ಳದ ಬುದ್ಧ ಶಾಂತಿಯಿಂದ ಉತ್ತರಿಸುತ್ತಾನೆ. "ನೀನು ಕೊಟ್ಟ ಯಾವ ಉಡುಗೊರೆಯನ್ನು ನಾನು ಸ್ವೀಕರಿಸುತ್ತಿಲ್ಲ. ಅವೆಲ್ಲ ನಿನ್ನಲ್ಲೇ ಇರಲಿ."

 

ಬುದ್ಧನಿಗಿದ್ದ ಪ್ರೌಢಿಮೆ ನಮಗಿಲ್ಲ. ಉದ್ವೇಗಕ್ಕೆ ಸಿಕ್ಕು ಮನಸ್ಸಿಗೆ ತೋಚಿದ ಉತ್ತರ ನೀಡಿ ಕರ್ಮದ ಸುಳಿಗೆ ಸಿಲುಕಿ ನಾವು ಒದ್ದಾಡುತ್ತೇವೆ. ಪಾಠ ಪುನರಾವರ್ತನೆ ಆಗುತ್ತಾ ಹೋಗುತ್ತದೆ. ಶಿವಾನಿ ಅಕ್ಕಳ ಮಾತಿಗೆ ತಲೆಬಾಗಿ ಇಂದು ನಾನು ಹಿಂದೆ ಮಾಡಿರಬಹುದಾದ ಎಲ್ಲ ಅನ್ಯಾಯಗಳಿಗೆ, ಅದರಿಂದ ನೋವು ಅನುಭವಿಸಿದ ಎಲ್ಲರಲ್ಲಿ ಕ್ಷಮೆ ಕೋರುತ್ತೇನೆ. ಮುಂದೆ ಒಂದು ದಿನ ಕರ್ಮದ ಹೊರೆ ಕಡಿಮೆ ಎನಿಸಿದರೆ ನಿಮಗೆ ಖಂಡಿತ ತಿಳಿಸುತ್ತೇನೆ.

 

ಇದ್ಯಾವ ಪುರಾಣ ಎಂದು ನಿಮಗೆ ಅನ್ನಿಸಿದರೆ, ನಾನು ನಿಮಗೆ ಮುಂಚೆಯೇ ಈ ಲೇಖನ ಓದದೇ ಇರಲು ಎಚ್ಚರಿಸಿದ್ದೆ. ಧನ್ಯವಾದಗಳು!

Friday, July 22, 2022

ಅಹಂ ಬ್ರಹ್ಮಾಸ್ಮಿಯೋ ಅಥವಾ ನಕ್ಷತ್ರ ಧೂಳೋ?

ಸಂಸ್ಕೃತದಲ್ಲಿ 'ಅಹಂ ಬ್ರಹ್ಮಾಸ್ಮಿ' (ನಾವು ಕೂಡ ಬ್ರಹ್ಮ) ಎನ್ನುವ ಮಾತಿದೆ. ಯೋಗದ ಅರ್ಥ ಮತ್ತು ಉದ್ದೇಶ ಬ್ರಹ್ಮ ಅಥವಾ ಸೃಷ್ಟಿಕರ್ತನಲ್ಲಿ ಒಂದಾಗುವುದು.

 

ಇಂಗ್ಲಿಷ್ ನಲ್ಲಿ ಸ್ವಲ್ಪ ಬೇರೆಯ ತರಹದ ವ್ಯಖ್ಯಾನ ಇದೆ . ಅದರ ಪ್ರಕಾರ ನಾವೆಲ್ಲ ನಕ್ಷತ್ರ ಧೂಳು (Star Dust). ಅದು ನಿಜವೇ. ನಾವು ಜನ್ಮ ತಳೆದದ್ದು ಭೂಮಿಯ ಸಂಪನ್ಮೂಲಗಳಿಂದ. ಭೂಮಿ ಮೈ ತಳೆದದ್ದು ಸೂರ್ಯನಿಂದ ಸಿಡಿದ ತುಂಡಿನಿಂದ. ಅಂದರೆ ನಾವೆಲ್ಲ ಸೂರ್ಯನ ತುಂಡುಗಳಿಂದ ರೂಪುಗೊಂಡ ದೇಹಗಳೇ. ಅಷ್ಟೇ ಅಲ್ಲ ಸೂರ್ಯನ ಶಕ್ತಿಯೇ ಗಿಡ, ಮರಗಳಿಗೆ ಜೀವ ತುಂಬಿ ನಮಗೆ ಪ್ರತಿ ದಿನದ ಆಹಾರ ಒದಗಿಸುತ್ತದೆ. ಸೂರ್ಯನಿಂದ ರೂಪುಗೊಂಡ, ಸೂರ್ಯನಿಂದಲೇ ಜೀವಂತವಾಗಿರುವ ನಾವು ಸೂರ್ಯನ ಧೂಳಿನ ಕಣಗಳೇ ಸರಿ.

 

ಸತ್ತ ಮೇಲೆ ದೇಹ ಮಣ್ಣಲ್ಲಿ ಮಣ್ಣಾಗಿ ಮತ್ತೆ ಸೃಷ್ಟಿಯಲ್ಲಿ ಒಂದಾಗುತ್ತದೆ. ದೈಹಿಕವಾಗಿ ಗಮನಿಸಿದರೆ ಅಹಂ ಬ್ರಹ್ಮಾಸ್ಮಿ ಮತ್ತು ನಕ್ಷತ್ರ ಧೂಳು ಒಂದೇ ತರಹದ ಅರ್ಥ ಒದಗಿಸುತ್ತದೆ. ಆದರೆ 'ಅಹಂ ಬ್ರಹ್ಮಾಸ್ಮಿ' ಗೆ ಇರುವ ಪಾರಮಾರ್ಥಿಕ ಅರ್ಥ ನಕ್ಷತ್ರ ಧೂಳಿಗೆ ಇಲ್ಲ. ದೈಹಿಕ ಅಸ್ತಿತ್ವಕ್ಕೆ ಮೀರಿದ ಆತ್ಮದ ಇರುವಿಕೆಯ ಬಗ್ಗೆ ನಕ್ಷತ್ರದ ಧೂಳು ಮಾತನಾಡುವುದಿಲ್ಲ. ಅದು ನಂಬುವುದು ಕಣ್ಣಿಗೆ ಕಾಣುವ ಅಥವಾ ಅಳತೆಗೆ ಸಿಗುವಂತಹದ್ದು ಮಾತ್ರ.

 

ಆದರೆ ವಿಜ್ಞಾನ ಬೆಳೆದಂತೆಲ್ಲ ಪುರಾತನ ಕಾಲದ ಯೋಗ ಅಭ್ಯಾಸಗಳಿಗೆ, ಧ್ಯಾನ ತಂದುಕೊಡುವ ದೈಹಿಕ ಲಾಭಗಳಿಗೆ ಪುರಾವೆ ಸಿಗತೊಡಗಿದೆ. ಆದರೆ ಧ್ಯಾನ ನಮ್ಮಲ್ಲಿ ಮೂಡಿಸುವ ಪ್ರಜ್ಞೆಗಳಿಗೆ ವಿಜ್ಞಾನ ಹುಡುಕಿರುವ ವಿವರಣೆ ಅಷ್ಟಕಷ್ಟೇ. ಕ್ರಮೇಣ ಅದು ಕೂಡ ಬದಲಾಗುತ್ತದೆ. ಕಣ್ಣಿಗೆ ಕಾಣಿಸಿದ ಮತ್ತು ಕಿವಿಗೆ ಕೇಳಿಸದ ತರಂಗಾಂತರಗಳಲ್ಲಿ (wavelength) ಅದ್ಭುತ ಜಗತ್ತೇ ಅಡಗಿದೆ. ಭೂಮಿಯ ಗುರುತ್ವಾಕರ್ಷಣೆ ಶಕ್ತಿ ನಮ್ಮ ಕಣ್ಣಿಗೆ ಕಾಣುವುದಿಲ್ಲ, ಕಿವಿಗೆ ಕೇಳಿಸುವುದಿಲ್ಲ, ನಾಲಿಗೆ ರುಚಿಗೆ, ಮೂಗಿನ ವಾಸನೆಗೆ ನಿಲುಕುವುದಿಲ್ಲ ಮತ್ತು ಚರ್ಮದ ಸ್ಪರ್ಶಕ್ಕೆ ದೊರಕುವುದಿಲ್ಲ. ಆದರೆ ನಮ್ಮ ಅನುಭವಕ್ಕೆ ಬರುತ್ತದೆ. ಅದನ್ನು ಪರೀಕ್ಷೆ ಮಾಡಬೇಕೆ? ಒಂದು ಚೆಂಡನ್ನು ನಿಮ್ಮ ತಲೆಯ ಮೇಲೆ ತೂರಿ ನೋಡಿ.

 

ಪಂಚೇದ್ರಿಯಗಳಿಗೆ ನಿಲುಕದ ಗ್ರಹಿಕೆಗಳು ವಿಶ್ವದ ತುಂಬಾ ವ್ಯಾಪಿಸಿವೆ. ಪ್ರಕೃತಿಯು ನಮ್ಮ ಉಳಿವಿಗೆ ಎಷ್ಟು ಸಾಕೋ ಅಷ್ಟು ಮಾತ್ರದ ಶಕ್ತಿಯನ್ನು ನಮ್ಮ ಪಂಚೇಂದ್ರಿಯಗಳಿಗೆ ನೀಡಿತು. ಅದರ ಮುಂದಿನ ಕಲಿಕೆ ಮಾತ್ರ ನಮ್ಮ ಪ್ರಯತ್ನಕ್ಕೆ ಬಿಟ್ಟಿದ್ದು. ವಿಜ್ಞಾನ ಬೆಳೆದಂತೆಲ್ಲ, ತಂತ್ರಜ್ಞಾನ ಅಭಿವೃದ್ಧಿಯಾದಂತೆಲ್ಲ ಅವುಗಳ ಉಪಯೋಗ ಪ್ರತಿದಿನ ಮಾಡುತ್ತೇವೆ. ಉದಾಹರಣೆಗೆ ಮೈಕ್ರೋವೇವ್ ಓವನ್ ನಲ್ಲಿ ಬೆಂಕಿ ಇಲ್ಲದೆ ಅಡುಗೆ ಬಿಸಿಯಾಗಿದ್ದು ಹೇಗೆ? ನಮ್ಮ ಸೆಲ್ ಫೋನ್ ಗಳು ಹಿಂದಿನ ತಲೆಮಾರಿನವರಿಗೆ ಒಂದು ಅದ್ಭುತದಂತೆ ತೋರುತ್ತವೆಯೋ ಏನೋ?

 

ಒಂದು ಕಾಲದಲ್ಲಿ ಭೂಮಿ ಚಪ್ಪಟೆ ಆಗಿದೆ, ಅದೇ ವಿಜ್ಞಾನ ಎಂದು ನಂಬಿದ್ದ ನಾವುಗಳು ಕಾಲ ಕ್ರಮೇಣ ನಮ್ಮ ನಂಬಿಕೆಗಳನ್ನು ಬದಲಾಯಿಸಿಕೊಂಡೆವು. ಹಾಗೆಯೆ ಯೋಗ, ಧ್ಯಾನ ತಂದು ಕೊಡುವ ಮಾನಸಿಕ ಪ್ರಭುದ್ಧತೆ ವೈರಾಗ್ಯವನ್ನು ಮೀರಿದ ವಿಜ್ಞಾನ ಎನ್ನುವ ತಿಳುವಳಿಕೆ ನಮಗೆ ಈಗ ಇರದೇ ಹೋಗಬಹುದು. ಆದರೆ ಆ ಅನಿಸಿಕೆ ಬದಲಾಗುವ ಕಾಲ ತುಂಬಾ ದೂರ ಇರಲಿಕ್ಕಿಲ್ಲ. ವಿಜ್ಞಾನಿಗಳು ಪ್ರಯೋಗಾಲಯದಲ್ಲಿ ಕಂಡುಕೊಂಡ ಸತ್ಯಗಳ ಹಾಗೆ, ಯೋಗಿಗಳು ಧ್ಯಾನದ ಮೂಲಕ ಕಂಡ ಸತ್ಯಗಳು ಕೂಡ ಅಷ್ಟೇ ನಿಖರವಾದವು ಎನ್ನುವ ನಂಬಿಕೆ ನಮಗೆ ಕ್ರಮೇಣ ಮೂಡಬಹುದು.

 

ಇದೆಲ್ಲ ಅನಿಸಿದ್ದು 'Stalking the wild pendulum' ಎನ್ನುವ ಪುಸ್ತಕ ಓದಿದ ಮೇಲೆ. ಆ ಪುಸ್ತಕದ ಪರಿಚಯ ನನ್ನ ಹಿಂದಿನ ಲೇಖನದಲ್ಲಿದೆ. ಒಮ್ಮೆ ಓದಿ ನೋಡಿ.

Thursday, July 21, 2022

ವಿಷಪೂರಿತ ಸಂಬಂಧಗಳ ಜೊತೆಗಿನ ಅನುಭವ

೧. ಅವರು ಯಾವ ತಪ್ಪು ಮಾಡುವುದು ಸಾಧ್ಯವಿಲ್ಲ. ತಪ್ಪೆಲ್ಲಾ ನಿಮ್ಮದೇ.
೨. ಅವರು ನಿಮ್ಮ ಮೇಲೆ ದಬ್ಬಾಳಿಕೆ ಮಾಡಿದರೂ, ಅದು ನೀವೇ ಮಾಡಿದ್ದು ಎನ್ನುತ್ತಾರೆ.
೩. ಅವರು ಯಾವ ಟೀಕೆ, ವಿಮರ್ಶೆ ಸಹಿಸಿಕೊಳ್ಳುವುದಿಲ್ಲ
೪. ಅವರು ಸಮಯಕ್ಕೆ ಸರಿಯಾಗಿ ಯಾವತ್ತೂ ಬರುವುದಿಲ್ಲ. ಆದರೆ ಅದರ ಜವಾಬ್ದಾರಿ ಮಾತ್ರ ಅವರದಲ್ಲ.
೫. ಅವರಿಗೆ ನಿಮ್ಮ ಮೇಲೆ ಸಂಪೂರ್ಣ ಅಧಿಕಾರದ ಹಕ್ಕಿದೆ. ಆದರೆ ಅವರ ಮೇಲೆ ನಿಮಗೆ ಯಾವ ಹಕ್ಕು ಇಲ್ಲ.
೬. ಅವರು ಸೋಂಭೇರಿಗಳು. ಹೆಚ್ಚಿನ ಕೆಲಸ ನೀವೇ ಮಾಡಿದರೂ, ಅವರನ್ನೇ ನೀವು ಹೊಗಳಬೇಕು.
೭. ಸುಳ್ಳು ಹೇಳುವುದು ಅವರಿಗೆ ನೀರು ಕುಡಿದಷ್ಟು ಸುಲಭ.
೮. ಸಂದರ್ಭಕ್ಕೆ ತಕ್ಕಂತೆ ನಾಟಕ ಆಡುವುದರಲ್ಲಿ ಅವರು ಎತ್ತಿದ ಕೈ. ಅವರ ನಟನೆ ಸಿನೆಮಾ ನಟರಿಗಿಂತ ಅದ್ಭುತ.
೯. ಪರಿಸ್ಥಿತಿ ಕೈ ಮೀರಿದರೆ ತಾವು ಸಾಕಿಕೊಂಡ ಚೇಲಾಗಳನ್ನು ಕರೆಸಿ ನಿಮ್ಮ ಮೇಲೆ ಒಟ್ಟಿಗೆ ಬೀಳುತ್ತಾರೆ.
೧೦. ನಿಮಗೆ ಗೊತ್ತಿರದಂತೆ ಸಮಾಜದಲ್ಲಿ ನಿಮ್ಮ ಮೇಲೆ ಸುಳ್ಳು ಅಪವಾದ ಹೊರಿಸುತ್ತಾರೆ.
೧೧. ಅವರಿಗೆ ಅನೇಕ ಲೈಂಗಿಕ ಸಂಬಂಧಗಳಿರುತ್ತವೆ.
೧೨. ನಿಮ್ಮ ಹಿಂದೆ ಇರುವ ಮತ್ತು ಸಹಾಯಕ್ಕಾಗುವ ಜನರನ್ನು ಅವರು ನಿಮ್ಮಿಂದ ಬೇರ್ಪಡಿಸುತ್ತಾರೆ.
೧೩. ಅವರಿಗೆ ನೀವು ಏನೇ ಮಾಡಿದರೂ ಅವರಿಗೆ ಅದು ಸಾಕೆನಿಸುವುದಿಲ್ಲ.
೧೪. ನಿಮಗೆ ತೊಂದರೆ ಆದಾಗ ಅವರು ವಿಕೃತ ಸಂತೋಷ ಅನುಭವಿಸುತ್ತಾರೆ.
೧೫. ಸಮಾಜದ ಕಣ್ಣಿಗೆ ಅವರು ತಮ್ಮ ಗುಣಧರ್ಮಗಳು ಬೀಳದಂತೆ ಎಚ್ಚರ ವಹಿಸುತ್ತಾರೆ. ಅವರ ಆಟ ಏನಿದ್ದರೂ ನೀವು ಒಬ್ಬಂಟಿಯಾಗಿ ಸಿಕ್ಕಾಗ.
೧೬. ನೀವು ಅವರ ವಿರುದ್ಧ ಧ್ವನಿ ಎತ್ತಿದರೆ, ಅವರು ಮಾಡುವ ಚಟಗಳನ್ನು ಎತ್ತಿ ತೋರಿಸಿದರೆ ಅವುಗಳನ್ನು ಮಾಡಿದ್ದು ನೀವೇ  ಎಂದು ವಾದಿಸುತ್ತಾರೆ.

ಈ ಮೇಲಿನ ಗುಣಧರ್ಮಗಳನ್ನು ನೀವು ನಿಮ್ಮ ಹತ್ತಿರದವರಲ್ಲಿ ಗುರುತಿಸಿದ್ದೆ ಆದರೆ ನೀವು ಈಗಾಗಲೇ ಎಚ್ಚರದಿಂದ ಇರುತ್ತೀರಿ. ಆದರೆ ನೀವು ಅವರನ್ನು ಬದಲು ಮಾಡುವ, ತಿದ್ದುವ ಕೆಲಸಕ್ಕೆ ಕೈ ಹಾಕಿದರೆ ನಿಮ್ಮ ಬದುಕೇ ಹಾಳಾಗುವುದರಲ್ಲಿ ಸಂದೇಹ ಇಲ್ಲ. ಬದಲಿಗೆ ಅವರಿಂದ ದೂರ ಇದ್ದಷ್ಟು ವಾಸಿ. ನೀವು ಅವರನ್ನು ಕೈ ಬಿಟ್ಟರೂ ಅವರು ನಿಮ್ಮನ್ನು ಕೈ ಬಿಡುವುದಿಲ್ಲ. ಒಳ್ಳೆಯತನ ಪಕ್ಕಕ್ಕಿಟ್ಟು ನಿಮಗೆ ಕೂಡ ಕೆಟ್ಟವರಾಗಲು ಬರುತ್ತದೆ ಎಂದು ತೋರಿಸಿಕೊಡದೆ ಇದ್ದರೆ ನಿಮಗೆ ಮಾನಸಿಕ ಚಿತ್ರಹಿಂಸೆ ಗ್ಯಾರಂಟಿ. ಅವರ ವಿರುದ್ಧ ಕಾನೂನು ಸಮರ ಹೂಡುವ ಮೊದಲು ಸಾಕಷ್ಟು ದಾಖಲೆಗಳನ್ನು ಸಿದ್ಧ ಪಡಿಸಿಕೊಳ್ಳಿ. ತಜ್ಞರ ಸಲಹೆ ಪಡೆಯಿರಿ. ನಿಮಗೆ ನಂಬಿಕೆ ಇರುವ ಗೆಳೆಯರಲ್ಲಿ ವಿಷಯ ತಿಳಿಸಿ. ಒಬ್ಬಂಟಿಯಾಗಿ ಹೋರಾಡುವುದಕ್ಕಿಂತ ಸಹಾಯ ಪಡೆದುಕೊಂಡು ಮುಂದುವರೆಯಿರಿ. ನೀವು ಅವರಿಗಿಂತ ಪಳಗಿದ ಕೈ ಎಂದು ಅವರಿಗೆ ಸ್ಪಷ್ಟ ಮಾಡಿಕೊಟ್ಟರೆ ಅವರು ನಿಮ್ಮನ್ನು ಬಿಟ್ಟು ಇನ್ನೊಬ್ಬರನ್ನು ತಮ್ಮ ಚಿತ್ರಹಿಂಸೆಗೆ ಹುಡುಕಿಕೊಳ್ಳುತ್ತಾರೆ.

(ಇದು ನನ್ನ ಸ್ವಂತ ಅನುಭವ. ಹಂಚಿಕೊಂಡರೆ ಯಾರಿಗಾದರೂ ಉಪಯೋಗವಾದೀತು ಎನ್ನುವ ಉದ್ದೇಶದಿಂದ ಇದನ್ನು ಹಂಚಿಕೊಂಡಿದ್ದೇನೆ. ಹೆಚ್ಚಿನ ವಿಷಯ ತಿಳಿದುಕೊಳ್ಳುವುದಕ್ಕೆ 'Narcissist' ಎನ್ನುವ ಪದ ಗೂಗಲ್ ನಲ್ಲಿ ಹುಡುಕಿ)

Saturday, July 16, 2022

ಸರ್ವವನ್ನು ಪರಿತ್ಯಾಗ ಮಾಡಿದ ಸರ್ವಜ್ಞನು ತ್ರಿಪದಿ ಹೇಳುವುದನ್ನು ಮರೆಯಲಿಲ್ಲ

ನೀವು ಕಥೆ ಓದುತ್ತಿರೋ, ಕೇಳುತ್ತಿರೋ (ಇನ್ನೊಬ್ಬರಿಂದ ಅಥವಾ ರೇಡಿಯೋನಲ್ಲಿ) ಅಥವಾ ನೋಡುತ್ತಿರೋ (ಸಿನೆಮಾ ಇಲ್ಲವೇ ದೂರದರ್ಶನದಲ್ಲಿ) ಎನ್ನುವುದು ಮುಖ್ಯವಲ್ಲ. ಅದಕ್ಕೆ ಹೇಗೆ ಸ್ಪಂದಿಸುತ್ತೀರಿ ಅನ್ನುವುದು ಮುಖ್ಯ. ಕಥೆಗಳಿಗೆ ಭಾಷೆ ಮತ್ತು ಮಾಧ್ಯಮಕ್ಕಿಂತ ಅವುಗಳು ತಮ್ಮ ವೀಕ್ಷಕರನ್ನು ಹೇಗೆ ಹಿಡಿದಿಡುತ್ತವೆ ಎನ್ನುವುದೇ ಮುಖ್ಯ.

 

ಶಾಲಾ, ಕಾಲೇಜುಗಳಲ್ಲಿ ಒತ್ತಾಯಪೂರ್ವಕವಾಗಿ ನಿಮಗೆ ಕಥೆ ಓದಿಸಿದ್ದರೆ ಅಥವಾ ಬೇಕಿಲ್ಲದ ಸಿನೆಮಾ ನೀವು ನೋಡಿದ್ದರೆ ಅವು ನಿಮ್ಮ ಮನಸ್ಸಿನಲ್ಲಿ ನಿಲ್ಲುವುದೇ ಇಲ್ಲ. ಅದು ಸಮಯ ವ್ಯರ್ಥ ಮಾತ್ರ. ಬರೀ ನಿಮ್ಮದಷ್ಟೇ ಅಲ್ಲ, ಕಥೆ ಬರೆದವರ ಅಥವಾ ಸಿನೆಮಾ ಮಾಡಿದವರದು ಕೂಡ. ಆದರೆ ನೀವು ಚಿಕ್ಕಂದಿನಲ್ಲಿ ಅಜ್ಜಿ ಹೇಳಿದ ಕಥೆ ಆಸಕ್ತಿಯಿಂದ ಕೇಳಿದ್ದರೆ ಅದು ನಿಮ್ಮ ಮನಸ್ಸಿನಲ್ಲಿ ಒಂದು ಶಾಶ್ವತ ಸ್ಥಾನ ಪಡೆಯುತ್ತದೆ. ಮುಂದೆ ನೀವು ಅಜ್ಜ, ಅಜ್ಜಿಯಾದ ಮೇಲೆ ನಿಮ್ಮ ಮೊಮ್ಮಕ್ಕಳಿಗೆ ಅದೇ ಕಥೆ ಹೇಳಲು ಹೊರಡುತ್ತೀರಿ. ಕಾಲ ಬದಲಾಗಿದೆ. ಆದರೂ ನೀವು ಕೇಳಿದ ಕಥೆ ಮೂಲವನ್ನು ಹಾಗೆಯೆ ಇಟ್ಟುಕೊಂಡು ಕೆಲವು ವಿವರಗಳನ್ನು ಮತ್ತು ಹೇಳುವ ಶೈಲಿ ಮಾತ್ರ ಬದಲಾಯಿಸುತ್ತೀರಿ. ನೀವು ಕಥೆ ಕೇಳುಗರಿಂದ, ಕಥೆ ಹೇಳುವವರಾಗಿ ಬದಲಾಗಿದ್ದು ನಿಮ್ಮ ಅರಿವಿಗೆ ಬರುವುದೇ ಇಲ್ಲ. ನಿಮ್ಮ ಮೊಮ್ಮಕ್ಕಳಿಗೂ ನೀವು ಹೇಳುವ ಹಲವು ಕಥೆಗಳು ಇಷ್ಟವಾಗಿ ಬಿಡುತ್ತವೆ. ರಾಮಾಯಣ, ಮಹಾಭಾರತಗಳು ಸಾವಿರಾರು ವರುಷಗಳು ಕಾಲ ಬದುಕಿ ಬಂದದ್ದು ಹಾಗೆಯೆ.

 

ಕಥೆ ಅಂದರೆ ಕೃಷ್ಣನ ಬಾಲ ಲೀಲೆಗಳು, ಶಿವಾಜಿಯ ಸಾಹಸಗಳು ಅಷ್ಟೇ ಅಲ್ಲವಲ್ಲ. ನಮ್ಮ ನಿಮ್ಮ ನಡುವೆ ಹೊಸ ಕಥೆಗಳು ಹುಟ್ಟಿಬಿಡುತ್ತವೆ. ಅಥವಾ ನಾವೇ ಹೊಸ ಕಥೆಯ ವಸ್ತುಗಳಾಗಿ ಬಿಡುತ್ತೇವೆ. ನಮ್ಮ ನಡುವೆ ಅದನ್ನು ಗಮನಿಸಿ ಹೇಳುವ ಹೊಸ ಕಥೆಗಾರ ಹುಟ್ಟಿಯೇ ಬಿಡುತ್ತಾನೆ. ಅವನು ಅದನ್ನು ಹಾಸ್ಯಮಯವಾಗಿ ಹೇಳಬಹುದು.

 

"ದೊಡ್ಡವರೆಲ್ಲ ಜಾಣರಲ್ಲ,

ಚಿಕ್ಕವರೆಲ್ಲ ಕೋಣರಲ್ಲ"

 

ಇಲ್ಲವೇ ವಿಷಾದ ತುಂಬಿ ಹೇಳಬಹುದು

.

" ಕೈ ಸೋತರೆ ಬೊಂಬೆಯ ಕಥೆಯು

ಕೊನೆಯಾಗುವುದೇಕೊನೆಯಾಗುವುದೇ?"

 

ಮನಸ್ಸಿಗೆ ತಟ್ಟಿದ ಕಥೆಗಳೆಲ್ಲ ಒಬ್ಬ ಮನುಷ್ಯನಿಂದ ಇನ್ನೊಬ್ಬನಿಗೆ ವರ್ಗಾವಣೆಯಾಗುತ್ತ ಹೋಗುತ್ತವೆ. ಮಾಧ್ಯಮಕ್ಕಿಂತ (ಪುಸ್ತಕ, ಸಿನೆಮಾ) ಕಥೆಯ ಸಾರವೇ ಮುಖ್ಯವಾಗುತ್ತದೆ. ಆಗ ಕಥೆ ಬರೆದವರಿಗೂ ಮತ್ತು ಸಿನೆಮಾ ಮಾಡಿದವರಿಗೂ ಒಂದು ಸಾರ್ಥಕ ಭಾವನೆ ಹುಟ್ಟುತ್ತದೆ. ಭಾವನೆಯೇ ಬರಹಗಾರರಿಗೆ, ಚಿತ್ರ ನಿರ್ದೇಶಕರಿಗೆ ಸ್ಫೂರ್ತಿ ತುಂಬುತ್ತದೆ. ಸಿನೆಮಾ ನಿರ್ದೇಶಕರ ಮನಸ್ಸು ಕೆದಕಿ ನೋಡಿ. ಅಲ್ಲಿ ಅವರನ್ನು ಪ್ರಭಾವಗೊಳಿಸಿದ ಅನೇಕ ಚಿತ್ರಗಳು ಇರುತ್ತವೆ. ಹಾಗೆಯೆ ಬರಹಗಾರನಲ್ಲಿ ಅವನು ಓದಿದ ಹಲವಾರು ಪುಸ್ತಕಗಳು ಇರುತ್ತವೆ. ಪ್ರಭಾವ ಅವರಲ್ಲಿ ದಟ್ಟವಾಗಿದ್ದು, ತಾವು ಹೊಸ ಕಥೆಗಳ ಹುಡುಕಾಟಕ್ಕೆ ತೊಡಗುತ್ತಾರೆ. ಇನ್ನಾರನ್ನೋ ಪ್ರಭಾವಗೊಳಿಸುತ್ತಾರೆ. ಅವರ ಸಂತತಿ ಬೆಳೆಯುತ್ತ ಹೋಗುತ್ತದೆ. ಅದು ಅಜ್ಜಿ ಹೇಳಿದ ಕಥೆ ಕೇಳಿ ನಾವು ಕಥೆಗಾರ ಆದಂತೆ.

 

ಎಲ್ಲ ಕಥೆಗಾರರಿಗೆ ಅವರ ಸಂದೇಶ ಮುಂದಕ್ಕೆ ದಾಟಿಸುವ ಅವಶ್ಯಕತೆ ಇರುತ್ತದೆ. ಅವರಿಗೆ ಒಬ್ಬ ಓದುಗ ಅದನ್ನು ಮೆಚ್ಚಿಕೊಳ್ಳುತ್ತಾನೆ ಎನ್ನುವ ಆಸೆ ಇರುತ್ತದೆ. ನೋವಿರಲಿ, ಸುಖವಿರಲಿ ಅದನ್ನು ಕೇಳುವ ಕಿವಿಗಳು ಇರುತ್ತವೆ ಎನ್ನುವ ನಂಬಿಕೆ ಕಥೆಗಾರರನ್ನು ಕಥೆ ಹೊಸೆಯುವಂತೆ ಮಾಡುತ್ತವೆ. ಬಸವಣ್ಣ, ಅಲ್ಲಮ ಪ್ರಭುಗಳು ತಾವು ಕಂಡುಕೊಂಡಿದ್ದು ವಚನಗಳನ್ನಾಗಿಸಿದರು. ಮೂಲಕ ತಮ್ಮ ಅನುಭವಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಿದರು. ಮೊಗಲ್ ದೊರೆ ಅಕ್ಬರ್ ತನ್ನ ವಿಜಯಗಾಥೆ  ತಿಳಿಸಲು 'ಅಕ್ಬರ್ ನಾಮಾ' ಬರೆಸಿದ. ಅಶೋಕ ಚಕ್ರವರ್ತಿ ತನ್ನ ಸಂದೇಶಗಳನ್ನು ಕಲ್ಲಿನಲ್ಲಿ ಕೆತ್ತಿಸಲಿಲ್ಲವೇ? ಅವುಗಳು ಎರಡು ಸಾವಿರ ವರುಷಗಳ ನಂತರವೂ ಅವನ ಕಥೆ ಹೇಳುವ ಸ್ಮಾರಕಗಳಾಗಿ ಉಳಿದಿವೆ. ಪುರಂದರ ದಾಸರು ಬರೀ ಕೀರ್ತನೆಗಳನ್ನು ಹಾಡುವುದಷ್ಟೇ ಅಲ್ಲ, ಅವುಗಳನ್ನು ಬೇರೆಯವರಿಗೆ ಕಲಿಸಲು ಕೂಡ ಶ್ರಮ ಪಟ್ಟರು. ಸರ್ವವನ್ನು ಪರಿತ್ಯಾಗ ಮಾಡಿದ ಸರ್ವಜ್ಞನು ತ್ರಿಪದಿ ಹೇಳುವುದನ್ನು ಮರೆಯಲಿಲ್ಲ. ಅದು ಅವನ ಜೀವನದ ಸಂದೇಶ. ಋಷಿ ಮುನಿಗಳು ವೇದಗಳನ್ನು ಹುಟ್ಟಿಸಿದ್ದು ಹಾಗೆಯೆ. ಪತಂಜಲಿ ಮಹರ್ಷಿ ಯೋಗ ಸೂತ್ರಗಳನ್ನು ದಾಖಲಿಸಿದ್ದು ಅದೇ ಉದ್ದೇಶದಿಂದಲೇ. ಅವರ ಕಥೆ, ಸಂದೇಶಗಳನ್ನು ಕೇಳಿದ ಆಸಕ್ತರು ಅವುಗಳನ್ನು ಮುಂದಕ್ಕೆ ಸಾಗಿಸುತ್ತ ಬಂದರು.

 

ನಮ್ಮ ನಿಮ್ಮಲ್ಲೂ ಕಥೆಗಳು ಇವೆ. ಅವು ಆಸಕ್ತಿದಾಯಕವಾಗಿದ್ದಲ್ಲಿ ಅವುಗಳನ್ನು ಕೇಳುವವರು ಇರುತ್ತಾರೆ. ಇವತ್ತಲ್ಲದಿದ್ದರೆ ಮುಂದೊಂದು ದಿನ ಬರುತ್ತಾರೆ. ಸಾಕಷ್ಟು ಜನರು ಅಲ್ಲದಿದ್ದರೆ ಒಬ್ಬರಿಬ್ಬರಾದರು ಸರಿ. ಆಸೆ ಮತ್ತು ನಂಬಿಕೆಯೇ ನಮ್ಮ ಜೀವನವನ್ನು ಕುತೂಹಲದಾಯಕವಾಗಿಸುವುದು. ಹಾಗಾಗಿ ಇಲ್ಲಿ ಬರೀ ಕಥೆ ಕೇಳಿ ಹೋಗಬೇಡಿ. ನಿಮ್ಮ ಕಥೆಯನ್ನು ಕೂಡ ಹೇಳಿ ಹೋಗಿ.

Friday, July 1, 2022

ಎಲ್ಲಿ ಜೀವನ ನಡೆವುದೋ ಅದೇ ನಮ್ಮೂರು

ಇದು 'ನೋಡಿ ಸ್ವಾಮಿ ನಾವಿರೋದು ಹೀಗೆ' ಚಿತ್ರದ ಒಂದು ಹಾಡಿನ ಸಾಲು. ಈ ಹಾಡಿನಲ್ಲಿ ಶಂಕರ್ ನಾಗ್ ಒಂದು ಜೋಪಡಿಯಲ್ಲಿ ಹಾಯಾಗಿ ಕಾಲು ಚಾಚಿ ಕುಳಿತು 'ಎಲ್ಲಿ ಜೀವನ ನಡೆವುದೋ ಅದೇ ನಮ್ಮೂರು' ಎಂದು ಹಾಡುತ್ತಾರೆ. ಆ ಮನುಷ್ಯ ಬದುಕಿದ್ದು ಹಾಗೇನೇ. ಹಾಗಾಗಿ ಆ ಹಾಡಿನಲ್ಲಿ ಶಂಕರ್ ನಾಗ್ ಮಾಡಿದ್ದು ನಟನೆ ಅನಿಸುವುದಿಲ್ಲ. ಆ ಹಾಡಿನಲ್ಲಿರುವ ಫಿಲಾಸಫಿ ಅನ್ನು ನಾನು ಕೂಡ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮಾಡಿದ್ದೇನೆ.


ನಮ್ಮೂರು ಅಂದರೆ ನಾನು ಹುಟ್ಟಿ ಬೆಳೆದ ಊರು, ಮಸ್ಕಿ ನಂಗಿಷ್ಟ. ಹತ್ತೆನೆಯ ತರಗತಿ ಮುಗಿದ ಮೇಲೆ ಅಂದಿಗೆ ನಮ್ಮೂರಿನಲ್ಲಿ ಯಾವುದೇ ಕಾಲೇಜುಗಳು ಇಲ್ಲವಾದ್ದರಿಂದ ಊರು ಬಿಡುವುದು ಅವಶ್ಯಕ ಇತ್ತು. ಪಿ.ಯು.ಸಿ. ಮೊದಲನೇ ವರುಷ ಓದಿದ್ದು ಲಿಂಗಸಗೂರಿನಲ್ಲಿ (ಪ್ರತಿ ದಿನ ಬಸ್ ನಲ್ಲಿ ಓಡಾಡಿ).  ಎರಡನೇ ವರುಷ ಓದಿದ್ದು ರಾಯಚೂರಿನಲ್ಲಿ, ಅದು ಮೊದಲನೇ ಬಾರಿಗೆ ಊರು  ಬಿಟ್ಟಿದ್ದು. ಅದಾದ ಮೇಲೆ ೧೯೯೪ ರಲ್ಲಿ ಹೋಗಿದ್ದು ಉರಿ ಬಿಸಿಲಿನಲ್ಲಿ ರಣ ಖಾರ ತಿಂದು, ಖಡಕ್ ಚಹಾ ಕುಡಿದು, ಒರಟು ಮಾತನಾಡುವ ಕಲಬುರ್ಗಿಗೆ. ಆದರೆ ಮುಸ್ಸಂಜೆಯಲ್ಲಿ ಆ ಜನ ಇಷ್ಟ ಪಡುತ್ತಿದ್ದ ಕಿಶೋರ್ ಕುಮಾರ್, ಮೊಹಮ್ಮದ್ ರಫಿ ಹಾಡುಗಳು ಕೂಡ ಅಷ್ಟೇ ತಂಪು. ಹಾಗೆಯೆ ಅಲ್ಲಿಯ ಗುರುದತ್ ಖಾನಾವಳಿ ಊಟ ಬೇರೆ ಯಾವುದರ ಜೊತೆಗೂ ಹೋಲಿಕೆ ಮಾಡುವುದು ಅಸಾಧ್ಯ. ನಂತರ ೧೯೯೯ ರಲ್ಲಿ ಆರು ತಿಂಗಳು ಹುಬ್ಬಳ್ಳಿಯಲ್ಲಿ ತರೆಬೇತಿಗೆಂದು ೧,೫೦೦ ರೂಪಾಯಿ ಸ್ಟೈಪೆಂಡ್ ಪಡೆದು ಅಷ್ಟರಲ್ಲಿ ಜೀವನ ಸಾಗಿಸಿ (ಸ್ವಲ್ಪ ಉಳಿಸಿ ಕೂಡ) ಆ ಊರಿನ ಸವಿ ಸವಿದದ್ದಾಯಿತು.


ಓದುವುದು ಮುಗಿದ ಮೇಲೆ ಹೆಚ್ಚು ಸ್ನೇಹಿತರಿದ್ದ ದೂರದ ಪುಣೆಗೆ ನೌಕರಿ ಹುಡುಕಿಕೊಂಡು ಹೋಗಿದ್ದೆ. ಆದರೆ ಮೊದಲ ಇಂಟರ್ವ್ಯೂ ಬಂದಿದ್ದು ಬೆಂಗಳೂರಿನಲ್ಲಿ. ಸಿಕ್ಕಿದ್ದು ಪೂರ್ತಿ ೨,೫೦೦ ರೂಪಾಯಿ ಸಂಬಳದ ನೌಕರಿ. ಮನೆಯಲ್ಲಿ ಮತ್ತೆ ದುಡ್ಡು ಕೇಳುವುದಿಲ್ಲ ಎನ್ನುವ ಧೃಢ ನಿರ್ಧಾರ ಮಾಡಿದ್ದ ನನಗೆ ಅಷ್ಟು ಸಾಕಾಗಿತ್ತು. ಅದೇ ಊರಿನಲ್ಲಿ ನೌಕರಿಗಳು ಬದಲಾದವು. ಆದರೆ ಅಲ್ಲಿಂದ ಇಲ್ಲಿಯವರೆಗೆ ದುಡಿಯುವ ಅವಕಾಶ ನೀಡಿದ್ದು ಬೆಂಗಳೂರೇ. ಬೆಂಗಳೂರು ಎನ್ನುವ ಊರಿಗೆ, ನನಗೆ ನೌಕರಿ ಕೊಟ್ಟಿರುವ ಕಂಪನಿ ಗೆ ಮತ್ತು ಕೇಳಿದಾಗಲೆಲ್ಲ ಸಾಲ ಕೊಡುವ HDFC ಬ್ಯಾಂಕ್ ಗೆ ನಾನು ಚಿರ ಋಣಿ.


ನೆಲೆ ಸಿಕ್ಕಿದ್ದು ಬೆಂಗಳೂರಿನಲ್ಲಿ ಆದರೂ, ನನಗೆ ತಿರುಗುವ ಹುಚ್ಚು. ಮಾರುತಿ-೮೦೦ ಕಾರಲ್ಲಿಗೆಳೆಯರ ಜೊತೆ ಬಂಡೀಪುರ ಪ್ರವಾಸ ಮಾಡಿದ್ದೆ. ಕರ್ನಾಟಕ ಅಷ್ಟೇ ಅಲ್ಲ, ಭಾರತದ ಮೂಲೆ ಮೂಲೆ ನೋಡಿ, ಅರಿಯುವ ಹವ್ಯಾಸ ನನ್ನದು. ಮತ್ತು ಕೆಲಸದ ನಿಮಿತ್ತ ವಿದೇಶಗಳಿಗೆ ಹೋಗುವ ಅವಕಾಶ ಬೇರೆ. ಮೊದಲಿಗೆ ಹೋಗಿದ್ದು ಚಳಿಗಾಲದಲ್ಲಿ ರಸ್ತೆ ಮೇಲೆ ಹಿಮ ಸುರಿದು ನನ್ನನ್ನು ಕಂಗಾಲು ಮಾಡುತ್ತಿದ್ದ ಈರಿ ಎನ್ನುವ ಅಮೇರಿಕಾದಲ್ಲಿರುವ ಒಂದು ಚಿಕ್ಕ ಪಟ್ಟಣಕ್ಕೆ. ನಂತರ ಇಟಲಿ ದೇಶದ ಫ್ಲಾರೆನ್ಸ್ ನಗರದಲ್ಲಿ ಎರಡು ತಿಂಗಳುಗಳ ಕಾಲ ಇದ್ದೆ. ಆಮೇಲೆ ಅಮೇರಿಕಾ ದೇಶದ ಸಾಂಟಾ ಕ್ಲಾರಾ ಎನ್ನುವ ಪಟ್ಟಣದಲ್ಲಿ ತಿಂಗಳುಗಟ್ಟಲೆ ಇರುವ ಅವಶ್ಯಕತೆ ನನ್ನ ನೌಕರಿಗಿತ್ತು. ಸಿಂಗಾಪುರ್ ದೇಶದ ಆರಾಮದಾಯಕತೆ, ತೈವಾನ್ ದೇಶದಲ್ಲಿ ಸಸ್ಯಾಹಾರಿ ಊಟ ಸಿಗದೇ ಬರಿ ಸೇಬು ಹಣ್ಣು ತಿಂದು ಬದುಕಿದ್ದು ಕೂಡ ನನ್ನ ಅನುಭವದ ಒಂದು ಭಾಗ.


"ಬದುಕು ಕರೆದೊಯ್ದ ಕಡೆ ಹೋದೆ ನಾನು" ಎಂದು ನಾನು ಈಗ ಹಾಡಬಹುದು. ಆದರೆ ಅದಕ್ಕೆ ಸಹಾಯವಾಗಿದ್ದು ಚಿಕ್ಕಂದಿನಲ್ಲಿ ನೋಡಿದ್ದ "ಎಲ್ಲಿ ಜೀವನ ನಡೆವುದೋ ಅದೇ ನಮ್ಮೂರು" ಎನ್ನುವ ಗೀತೆ. ಬದುಕು ನಡೆಸಿದ ಊರುಗಳೆಲ್ಲ ನಮ್ಮವೇ ಎನ್ನುವ ಭಾವ ನನ್ನದು. ಮತ್ತೆ ಕಲಬುರ್ಗಿಗೆ ಅಥವಾ ಹುಬ್ಬಳಿಗೆ ಹೋಗಿ ಜೀವನ ನಡೆಸುವ ಅವಶ್ಯಕತೆ ಬಂದರೆ ಎರಡನೆಯ ವಿಚಾರ ಮಾಡದೇ ಹೊರಟು ಬಿಡುತ್ತೇನೆ. ಆದರೆ ದುಡಿಯುವ ಅವಶ್ಯಕತೆ ಕೊನೆಯಾಗುತ್ತ ಬಂದಿದೆ. ಅದು ಸಾಧ್ಯವಾಗಿದ್ದು ಇಪ್ಪತ್ತು ವರುಷ ದುಡಿದು ಉಳಿಸಿದ ಹಣದಿಂದ. ಹಾಗಾಗಿ ಮತ್ತೆ ಹುಟ್ಟೂರಿಗೆ ಇಂದಲ್ಲ ನಾಳೆ ಮರಳುವ ಇರಾದೆ ನನ್ನದು. ಅಲ್ಲಿ ನನ್ನ ಬಾಲ್ಯ ಸ್ನೇಹಿತರಿದ್ದಾರೆ. ಓದಿದ ಶಾಲೆ ಇದೆ. ನಡೆದುಕೊಂಡ ದೇವಸ್ಥಾನಗಳು ಇವೆ. ಅಲ್ಲಿ ನಾನು ಪರಕೀಯ ಎನ್ನುವ ಭಾವನೆ ಬೇಕಿಲ್ಲ. 


ಆದರೆ ಯಾವ ಊರಲ್ಲೂ ನನಗೆ ನಾನು ಪರಕೀಯ ಎನ್ನುವ ಭಾವನೆ ಮೂಡಿಲ್ಲ. ಏಕೆಂದರೆ ನಾನು ಅವರಲ್ಲಿ ಒಬ್ಬವನಾಗಿ ಹೋಗಿದ್ದೆ. ಹಿಮಾಲಯ ಪ್ರವಾಸ ಹೋದಾಗ ಮೂರು ಹೊತ್ತು ಆಲೂ ಪರೋಟ ತಿಂದು ಜೀವನ ಕಳೆದಿದ್ದೇನೆ, ಸಂತೋಷವಾಗಿಯೇ! ಹಾಗೆಯೆ ಕೆಲವು ತಿಂಗಳುಗಳ ಹಿಂದೆ ಕುಟುಂಬದ ಜೊತೆ ಪ್ರವಾಸ ಹೋದಾಗ, ಎಲ್ಲ ಊರುಗಳು ಕೂಡ ನಮ್ಮೂರೇ ಅನಿಸುತಿತ್ತು. ಹೆಂಡತಿ ಒಪ್ಪಿದ್ದರೆ ರಿಷಿಕೇಶ ದಲ್ಲಿ ಅಥವಾ ನೈನಿತಾಲ್ ನಲ್ಲಿ ದೀರ್ಘ ಕಾಲ ಕಳೆಯಲು ನನಗೆ ಯಾವ ಯಾವ ಅಭ್ಯಂತರವೂ ಇರಲಿಲ್ಲ.


ನನ್ನ ಮಟ್ಟಿಗೆ ಯಾವ ಊರು ಹೆಚ್ಚಲ್ಲ, ಕಡಿಮೆ ಕೂಡ ಅಲ್ಲ. ಅಲ್ಲಿ ನಮಗೆ ಜೀವನ ಅವಕಾಶ ಇದ್ದರೆ, ಕೆಲವು ಗೆಳೆಯರು ಸಿಕ್ಕರೆ ಅದೇ ನಮ್ಮೂರು. ಅದೇ ಅಲ್ಲವೇ ಶಂಕರ್ ನಾಗ್ ಚಿತ್ರದಲ್ಲಿ ಹಾಡಿದ್ದು.


"ಎಲ್ಲಿ ಜೀವನ ನಡೆವುದೋ ಅದೇ ನಮ್ಮೂರು

ಯಾರು ಸ್ನೇಹದಿ ಬರುವರೋ ಅವರೇ ನಮ್ಮೋರು"





Monday, June 13, 2022

ಚಲನ ಚಿತ್ರ ವಿಮರ್ಶೆ: ಗಂಗೂಬಾಯಿ ಕಠಿಯಾವಾಡಿ (ಹಿಂದಿ)

ಗಂಗಾ (ಅಲಿಯಾ ಭಟ್) ಉತ್ತಮ ಮನೆ ವಾತಾವರಣದಲ್ಲಿ ಬೆಳೆದವಳು ಆದರೆ ಅವಳಿಗೆ ಚಲನಚಿತ್ರಗಳಲ್ಲಿ ನಟಿಸುವಾಸೆ. ದೇವ್ ಆನಂದ್ ಅವಳ ಅಚ್ಚುಮೆಚ್ಚಿನ ನಟ. ಗಂಗಾಳಿಗೆ ಅವಳ ಪ್ರಿಯಕರ ಚಿತ್ರರಂಗದಲ್ಲಿ ಅವಕಾಶ ಕೊಡಿಸುವ ಆಸೆ ಒಡ್ಡಿ ಅವಳಿಗೆ ಮನೆಯಲ್ಲಿ ಯಾರಿಗೂ ತಿಳಿಸದಂತೆ ಆದರೆ ಒಡವೆಗಳನ್ನು ತೆಗೆದುಕೊಂಡು ಬರುವಂತೆ ತಿಳಿಸುತ್ತಾನೆ. ಅವನ ಜೊತೆ ಬಾಂಬೆಗೆ ಹೋಗುವ ಗಂಗಾಳಿಗೆ ಬೇರೆಯೇ ಭವಿಷ್ಯ ಕಾದಿರುತ್ತದೆ. ಅವಳ ಪ್ರಿಯಕರ ಅವಳನ್ನು ತನ್ನ ಆಂಟಿ ಮನೆ ಎಂದು ಹೇಳಿ ಒಂದು ವೇಶ್ಯಾಗೃಹಕ್ಕೆ ಅವಳನ್ನು ಸಾವಿರ ರುಪಾಯಿಗೆ ಮಾರಿ ಹೋಗಿಬಿಡುತ್ತಾನೆ. ಒಲ್ಲದ ಮನಸ್ಸಿನಿಂದ ಗಂಗಾ ಒಬ್ಬ ವೇಶ್ಯೆಯಾಗಿ ಬದಲಾಗುತ್ತಾಳೆ. ಅಲ್ಲಿ ಇರುವ ಹೆಣ್ಣು ಮಕ್ಕಳೆದೆಲ್ಲ ಹೆಚ್ಚು ಕಡಿಮೆ ಅದೇ ತರಹದ ಕಥೆಗಳು. ಮನೆ ಬಿಟ್ಟು ಹೋಗುವ ಮುನ್ನ ತಮ್ಮ ತಂದೆಗೆ ಭೇಟಿಯಾಗಿದ್ದರೆ ಅವನು ಅವರನ್ನು ಅಲ್ಲೇ ಉಳಿಸಿಕೊಂಡು ಈ ನರಕದಿಂದ ಪಾರು ಮಾಡಿರುತ್ತಿದ್ದ ಎಂದು ಹಲಬುವವರು. ತಂದೆ-ತಾಯಿಯನ್ನು ತುಂಬಾ ಪ್ರೀತಿಸುವವರು ಆದರೆ ಮನೆಗೆ ವಾಪಸ್ಸು ಹೋಗಲು ಹೆದರುವುವರು. ಅವರ ಕುಟುಂಬ ಅವರನ್ನು ಕ್ಷಮಿಸುತ್ತದೆಯೋ ಇಲ್ಲವೋ ಮತ್ತು ಸಮಾಜ ಅವರನ್ನು ಹೇಗೆ ನೋಡುತ್ತದೋ ಎನ್ನುವ ಹೆದರಿಕೆಯಿಂದ ಅಲ್ಲೇ ಉಳಿದುಕೊಂಡು ಪೂರ್ಣ ಪ್ರಮಾಣದ ವೇಶ್ಯೆಯರಾಗಿ ಜೀವನ ಮಾಡುತ್ತಿರುವವರು.


ಆದರೆ ಗಂಗಾ ಮಾತ್ರ ತನ್ನ ಘನತೆಯನ್ನು ಯಾವ ಕಾರಣಕ್ಕೂ ಬಿಟ್ಟು ಕೊಡುವುದಿಲ್ಲ. ಒಂದು ದಿನ ಅವಳ ಹತ್ತಿರ ಬಂದವನೊಬ್ಬ ಅವಳಿಗೆ ದೈಹಿಕ ಚಿತ್ರಹಿಂಸೆ ನೀಡಿ ಅವಳಿಗೆ ಆಸ್ಪತ್ರೆ ಸೇರುವಂತೆ ಮಾಡುತ್ತಾನೆ. ಸಹಾಯ ಕೋರಿ ಗಂಗಾ ಅಲ್ಲಿಯ ಭೂಗತ ದೊರೆ ರಹೀಮ್ ಲಾಲಾ (ಅಜಯ್ ದೇವಗನ್) ಸಂಪರ್ಕಿಸುತ್ತಾಳೆ. ಅವಳನ್ನು ಸೋದರಿಯ ಹಾಗೆ ನೋಡುವ ಲಾಲಾ ಗಂಗಾಳಿಗೆ ದೈಹಿಕ ಹಿಂಸೆ ನೀಡಿದವನಿಗೆ ತಕ್ಕ ಶಾಸ್ತಿ ಕಲಿಸುತ್ತಾನೆ. ಅಲ್ಲಿಂದ ವೇಶ್ಯಾಗೃಹದ ನಾಯಕಿಯಾಗಿ ಬದಲಾಗುತ್ತಾಳೆ ಗಂಗಾ. ಮತ್ತು ಕಾಮಾಟಿಪುರದ ಸ್ಥಳೀಯ ಚುನಾವಣೆಗೆ ಸ್ಪರ್ಧಿಸಿ ಗೆದ್ದೂ ಬಿಡುತ್ತಾಳೆ. ಅವಳು ವೇಶ್ಯೆಯರ ಪರವಾಗಿ ದನಿ ಎತ್ತುತ್ತಾಳೆ. ಅವರ ಮಕ್ಕಳನ್ನು ಶಾಲೆಗೆ ಕಳಿಸುವ ಏರ್ಪಾಡು ಮಾಡುತ್ತಾಳೆ.


ಅವಳಿಗೆ ಒಬ್ಬ ಪ್ರಿಯಕರನೂ ಇದ್ದಾನೆ. ಆದರೆ ಮದುವೆ ಹೇಗೆ ಸಾಧ್ಯ. ಬದಲಿಗೆ ತನ್ನ ಸಹೋದ್ಯೋಗಿ ಒಬ್ಬಳ ಮಗಳನ್ನು ಅವನಿಗೆ ಮದುವೆ ಮಾಡಿಸುತ್ತಾಳೆ. ಅವಳೀಗ ತನ್ನ ಸಹೋದ್ಯೋಗಿ ಎಲ್ಲರ ಪ್ರತಿನಿಧಿ. ಕಾಮಾಟಿಪುರದಿಂದ ಅವರೆನ್ನೆಲ್ಲ ಹೊರ ಹೋಗಲು ಹೇಳಿದಾಗ ಅವಳು ತನ್ನ ಸಮುದಾಯವನ್ನು ಪ್ರತಿನಿಧಿಸುತ್ತಾಳೆ. ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಾಳೆ. ಸ್ತ್ರೀ ಹಕ್ಕು ವೇದಿಕೆಯಲ್ಲಿ ಅವಳ ಭಾಷಣಕ್ಕೆ ಎಲ್ಲರೂ ತಲೆದೂಗುತ್ತಾರೆ. ಅವಳಿಗೆ ದೇಶದ ಪ್ರಧಾನಿ (ಅಂದಿನ ಪ್ರಧಾನಿ ಜವಾಹರಲಾಲ್ ನೆಹರು) ಅವರೊಂದಿಗೆ ವೇಶ್ಯೆಯರ ಸಮಸ್ಯೆ ಕುರಿತು ಮಾತನಾಡುವ ಅವಕಾಶ ಕೂಡ ದೊರಕುತ್ತದೆ. ಕಾಮಾಟಿಪುರದಿಂದ ಅವರನ್ನು ಹೊರ ಕಳಿಸುವ ಚರ್ಚೆ ಅಲ್ಲಿಗೆ ಮುಗಿಯುತ್ತದೆ.


ಇದು ನಿಜ ಜೀವನ ಆಧರಿಸಿ ಮಾಡಿದ ಚಿತ್ರ. ವೇಶ್ಯೆಯರ ಸಮಸ್ಯೆ ಕುರಿತು ಹಲವಾರು ಚಿತ್ರಗಳು ಬಂದಿವೆ. ಆದರೆ ವೇಶ್ಯೆ ಒಬ್ಬಳು ದನಿ ಎತ್ತಿ ಹೋರಾಟ ಮಾಡುವ ಚಿತ್ರ ಬಂದಿರಲಿಲ್ಲ. ಅಲಿಯಾ ಭಟ್ ಅವರ ಅಭಿನಯ ಅಮೋಘ. ಅಜಯ್ ದೇವಗನ್ ಅವರ ನಟನೆ ಕೂಡ ಗಮನ ಸೆಳೆಯುತ್ತದೆ. ಉಳಿದವರೆಲ್ಲ ಹೆಚ್ಚಾಗಿ ಹೊಸ ನಟರು ಆದರೆ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ.


ಹೆಣ್ಣು ಮಕ್ಕಳನ್ನು ವೇಶ್ಯೆ ವೃತ್ತಿಗೆ ಇಳಿಸುವದರಲ್ಲಿ ಮೋಸದಿಂದ ಕರೆದೊಯ್ಯುವ ಗಂಡಸು ಎಷ್ಟು ಕಾರಣನೋ ಅಲ್ಲಿಂದ ಮುಂದಕ್ಕೆ ಕರೆದೊಯ್ಯುವ ಘರ್ ವಾಲಿ ಹೆಂಗಸರು ಕೂಡ ಅಷ್ಟೇ ಕಾರಣರು. ಹೆಣ್ಣು ಮಕ್ಕಳು ಮನೆ ಬಿಟ್ಟು ಓಡಿ ಹೋಗುವುದಕ್ಕಿಂತ ಮುಂಚೆ ಈ ಚಿತ್ರ ಒಮ್ಮೆ ನೋಡುವುದು ವಾಸಿ. ಹಾಗೆಯೆ ದೌರ್ಜನ್ಯ ತುಂಬಿದ ಸಮಾಜದಲ್ಲಿ ನ್ಯಾಯದ ಪರವಾಗಿ ನಿಲ್ಲುವ ಪಾತ್ರಗಳು ಕೂಡ ಈ ಚಿತ್ರದಲ್ಲಿ ಇವೆಯಲ್ಲ. ಮುಚ್ಚುಮರೆಯ ಲೋಕದಲ್ಲಿ ನಡೆಯುವ ಪಾಪಕಾರ್ಯಗಳ ಕಥೆಗಳನ್ನು ಆಲಿಸಲು ಈ ಚಿತ್ರ ಒಮ್ಮೆ ನೋಡಿ. ಈ ಚಿತ್ರ ನಿಮ್ಮ ಹೃದಯ ಗೆಲ್ಲುವುದರಲ್ಲಿ ಸಂದೇಹವೇ ಇಲ್ಲ.   




ಊರಿಗೆ ಒಂದು ದಾರಿ ಆದರೆ ಯಡವಟ್ಟನಿಗೆ ಒಂದು ದಾರಿ

ಈ ಗಾದೆ ಮಾತು ನೀವು ಕೇಳಿಯೇ ಇರ್ತೀರಿ. ಅಥವಾ ಸಂದರ್ಭ ಬಂದಾಗ ನಿಮ್ಮ ಬಾಯಿಯಿಂದಲೇ ಆ ಮಾತು ಹೊರ ಬಂದಿರುತ್ತದೆ. ಆದರೆ ಊರಿಗೆ ಒಬ್ಬ ಯಡವಟ್ಟ ಮಾತ್ರ ಎಲ್ಲಿ ಇರುತ್ತಾನೆ? ಊರಿಗೆ ಒಬ್ಬಳೇ ಪದ್ಮಾವತಿ ಇರಬಹುದು ಆದರೆ ಯಡವಟ್ಟರು ಮಾತ್ರ ಬೇಕಾದಷ್ಟು ಸಿಗುತ್ತಾರೆ. ಹೆಚ್ಚು ಕಡಿಮೆ ಮನೆಗೆ ಒಬ್ಬರಂತೆ.


ಬೇರೆಯವರಿಗೆ ಯಡವಟ್ಟ ಎಂದು ಕರೆಯುವ ಮುನ್ನ ನಾವು ಹೇಗೆ ಎನ್ನುವ ಅರಿವು ನಮಗಿರಬೇಕಲ್ಲವೇ? ಮೊದ ಮೊದಲಿಗೆ ನಾನೇ ಯಡವಟ್ಟ ಎಂದುಕೊಂಡಿದ್ದೆ. ಆದರೆ ಸಾಕಷ್ಟು ಜನರನ್ನು ನೋಡಿದ ಮೇಲೆ, ಹಲವಾರು ದೊಡ್ಡ ಯಡವಟ್ಟರನ್ನು ಎದುರಿಸಿದ ಮೇಲೆ ನನ್ನ ಅಭಿಪ್ರಾಯ ಬದಲಾಗಿದೆ.


ಕುಟುಂಬದವರೆಲ್ಲ ಒಂದು ತರಹ ವಿಚಾರ ಮಾಡಿದರೆ ಅವರೊಳಗೆ ಒಬ್ಬ ಮಾತ್ರ ಬೇರೆಯದೇ ಲೋಕದಲ್ಲಿದ್ದು ಯಡವಟ್ಟ ಎನಿಸಿಕೊಳ್ಳುತ್ತಾನೆ. ಅವನಿಗೆ (ಅಥವಾ ಅವಳಿಗೆ) ಉಳಿದವರ ನೋವು, ಸಂಕಟ, ಹೆದರಿಕೆಗಳು ಅರ್ಥವಾಗದೇ ಹೋಗಿಬಿಡುತ್ತವೆ. ಮನೆ ತುಂಬಾ ದುಡಿಯುವವರ ನಡುವೆ ಖಾಲಿ ಕುಳಿತಿಕೊಳ್ಳುವ ಒಬ್ಬನಿಗೆ ಯಡವಟ್ಟ ಎನ್ನುವ ಹಣೆ ಪಟ್ಟ ಅಂಟಿಯೇ ಬಿಡುತ್ತದೆ. ಎಲ್ಲ ಯಡವಟ್ಟರು ಕೆಲಸಕ್ಕೆ ಬಾರದವರು ಎಂದೇನಿಲ್ಲ. ಎಷ್ಟೊಂದು ಸಲ ಹೊಸ ದಾರಿಯನ್ನು ಹುಡುಕುವುವವರೇ ಈ ಯಡವಟ್ಟರು. ಆದರೆ ಅಂತಹ ಯಡವಟ್ಟರು ನೂರಿಗೆ ಒಬ್ಬರು ಆದರೆ ಉಳಿದ ತೊಂಭತ್ತೊಂಭತ್ತು ಯಡವಟ್ಟರು ಅವರ ಕುಟುಂಬಗಳಿಗೆ ತಲೆನೋವಾಗಿಬಿಡುತ್ತಾರೆ.


ಇಷ್ಟಕ್ಕೂ ಯಡವಟ್ಟರು ಯಾರಿಗೂ ಅರ್ಥ ಆಗಲು ಸಾಧ್ಯ ಇಲ್ಲ ಎಂದೇನಿಲ್ಲ. ಬೇರೆ ಮನೆಗಳಲ್ಲಿನ ಯಡವಟ್ಟರು ತುಂಬಾ ಸುಲಭವಾಗಿ ನಮಗೆ ಅರ್ಥ ಆಗುತ್ತಾರೆ. ಏಕೆಂದರೆ ಅಲ್ಲಿ ನಮಗೆ ಯಾವುದೇ ಭಾವನೆಗಳಿಲ್ಲ. ಆದರೆ ನಮ್ಮ ಮನೆಯಲ್ಲಿನ ಯಡವಟ್ಟರನ್ನು ಗಮನಿಸಿದರೆ ನಮಗೆ ಅವರು ಅರ್ಥ ಆಗುವುದಕ್ಕಿಂತ ಹೆಚ್ಚು ನೋವೇ ಆಗುತ್ತದೆ. ಹಾಗಾಗಿ ಈ ಯಡವಟ್ಟರಿಗೆ ಸ್ವಲ್ಪವಾದರೂ ಸರಿ ದಾರಿಗೆ ತರಬೇಕೆಂದರೆ ನಮ್ಮ ಮನೆಯೊಳಗಿನ ಮಂದಿ ಉಪಯೋಗಕ್ಕೆ ಬರುವುದಿಲ್ಲ. ಅದಕ್ಕೆ ಹೊರಗಿನವರೇ ಆಗಬೇಕು. ಅಲ್ಲದೇ ಯಡವಟ್ಟರ ಸಂಪೂರ್ಣ ಬೇಕು-ಬೇಡಗಳನ್ನು ನಾವು ಗಮನಿಸಿಕೊಳ್ಳುವುದು ಬಿಟ್ಟರೆ ವಾಸ್ತವ ಲೋಕ ಅವರ ಧಿಮಾಕನ್ನು ಸ್ವಲ್ಪ ಮಟ್ಟಿಗಾದರೂ ಕಡಿಮೆ ಮಾಡಿಸುತ್ತದೆ.


ಮನೆಗೆ ಒಬ್ಬ ಯಡವಟ್ಟ ಇದ್ದರೆ ಹೇಗೋ ಸುಧಾರಿಸಿಕೊಂಡು ಹೋಗಬಹುದು. ಆದರೆ ನಾಲ್ಕಾರು ಯಡವಟ್ಟರ ನಡುವೆ ನೀವು ಒಬ್ಬರೇ ಸಿಕ್ಕಿ ಹಾಕಿಕೊಂಡರೆ? ಅಲ್ಲಿಂದ ಜಾರಿಕೊಳ್ಳಬಹುದು. ಇಲ್ಲವೇ ಅವರ ನಡುವೆ ಸಿಕ್ಕಿ ಒದ್ದಾಡಬಹುದು. ಒಟ್ಟಿನಲ್ಲಿ ಈ ಯಡವಟ್ಟರು ನಮಗೆ ಜೀವನದ ಇತಿ-ಮಿತಿಗಳನ್ನು ತೋರಿಸಿಕೊಡುತ್ತಾರೆ. ಸಂಪೂರ್ಣ ಆನಂದಮಯ ಜೀವನಕ್ಕಿಂತ ಮನೆಯಲ್ಲೊಬ್ಬರು ಯಡವಟ್ಟ ಇರುವುದು ಆ ದೃಷ್ಟಿಯಿಂದ ಒಳ್ಳೆಯದೇನೋ?

Friday, June 10, 2022

ಡೋಪಮೈನ್ ಎನ್ನುವ ಅತಿಯಾಸೆ ಹುಟ್ಟಿಸುವ ರಾಸಾಯನಿಕ

ನಮ್ಮ ಮೆದುಳಿನಲ್ಲಿ ಉತ್ಪತ್ತಿಯಾಗುವ ಹಲವಾರು ರಾಸಾಯನಿಕಗಳಲ್ಲಿ ಒಂದು ಈ ಡೋಪಮೈನ್ (Dopamine). ಇದು ಸಂತೋಷ ಮತ್ತು ಆಸೆಗೆ ಸಂಬಂಧಿಸಿದ್ದು. ಆದರೆ ಸಂತೋಷ ಇದ್ದಲ್ಲಿ ದುಃಖ ಮತ್ತು ಆಸೆ ಇದ್ದಲ್ಲಿ ನಿರಾಸೆ ಸಹಜ ಅಲ್ಲವೇ. ಹಾಗಾಗಿ ಈ ಡೋಪಮೈನ್ ಪ್ರಮಾಣ ಹೆಚ್ಚಾದರೂ ಸಮಸ್ಯೆ, ಕಡಿಮೆ ಆದರೂ ಸಮಸ್ಯೆ.

 

ಹೊಸ ವಸ್ತು ಕೊಂಡುಕೊಳ್ಳುವುದಕ್ಕೆ ಮುನ್ನ ನಮ್ಮ ಮನದಲ್ಲಿ ಆ ವಸ್ತು ನಮ್ಮದಾದರೆ ಎಷ್ಟು ಚೆನ್ನ ಎಂದು ಅನಿಸುತ್ತದಲ್ಲವೇ? ಆ ಭಾವನೆಯನ್ನು ನಮ್ಮಲ್ಲಿ ಉಂಟು ಮಾಡುವ ರಾಸಾಯನಿಕವೇ ಈ ಡೋಪಮೈನ್. ಆದರೆ ಆ ವಸ್ತು ನಮ್ಮದಾದ ಮೇಲೆ ಅದು ಸಂತೋಷ ಉಂಟು ಮಾಡುವುದು ಕಡಿಮೆ ಆಗಿ ಮನಸ್ಸು ಬೇರೆಯ ವಸ್ತುವಿನ ಕಡೆಗೆ ಕಣ್ಣು ಹಾಕುತ್ತದೆ. ಇದು ಕೂಡ ಡೋಪಮೈನ್ ದೇ ಪ್ರಭಾವ. ಏಕೆಂದರೆ ಡೋಪಮೈನ್ ಭವಿಷ್ಯದ ಬಗ್ಗೆ ಮಾತ್ರ ಯೋಚಿಸುತ್ತದೆ. ಇತಿಹಾಸದ ಬಗ್ಗೆ ಅಲ್ಲ. ಅಲ್ಲದೆ ಇದರ ಅಡ್ಡ ಪರಿಣಾಮ ಎಂದರೆ ಅದು ನಿಮ್ಮ ಮನಸ್ಸನ್ನು ಇನ್ನು ಹೆಚ್ಚಿನ ವಸ್ತುಗಳಿಗೆ ಆಸೆ ಪಡುವಂತೆ ಮಾಡುತ್ತದೆ. ಉದಾಹರಣೆಗೆ ನೀವು ಮೊದಲನೇ ಬಾರಿಗೆ ಒಂದು ಕಾರು ಖರೀದಿಸಿ ಖುಷಿ ಪಟ್ಟಿದ್ದರೆ ಮುಂದಿನ ಸಲ ಅದೇ ತರಹದ ಕಾರು ನಿಮಗೆ ಮೊದಲಿನಷ್ಟು ಖುಷಿ ಹುಟ್ಟಿಸುವುದಿಲ್ಲ. ಬದಲಿಗೆ ನೀವು ಇನ್ನು ದೊಡ್ಡ ಬೆಲೆಯ ಕಾರು ಖರೀದಿಸಬೇಕು. ಮೊದಮೊದಲಿಗೆ ನೀವು ದಿನಕ್ಕೆ ಒಂದೇ ಸಿಗರೆಟ್ ಸೇದಿದರೆ ಕ್ರಮೇಣ ದಿನ ಕಳೆದಂತೆ ಅದರ ಪ್ರಮಾಣ ಹೆಚ್ಚುತ್ತಾ ಹೋಗುವಂತೆ ಮಾಡುತ್ತದೆ ಈ ಡೋಪಮೈನ್. ಆಸೆಗಳೇ ಆಗಲಿ ಅಥವಾ ದುಶ್ಚಟಗಳೇ ಆಗಲಿ ಅವುಗಳ ಪ್ರಮಾಣ ಹೆಚ್ಚುವಂತೆ ಮಾಡುತ್ತ ಹೋಗುತ್ತದೆ ಡೋಪಮೈನ್.

 

ಆದರೆ ಮೆದುಳು ಎನ್ನುವುದು ಮಾಯಾ ಪ್ರಪಂಚ. ನೀವು ಗಟ್ಟಿ ಮನಸ್ಸಿನಿಂದ ದುಶ್ಚಟಗಳಿಂದ ಮತ್ತು ಆಸೆಬುರುಕತನದಿಂದ ಹೊರ ಬಂದರೆ, ಮೊದಲಿಗೆ ಅದು ಕಿರಿಕಿರಿ ಮಾಡುತ್ತದೆ. ಆದರೆ ನೀವು ಜಗ್ಗದಿದ್ದಲ್ಲಿ ಅದು ಮತ್ತೆ ಮೆದುಳನ್ನು ಕಡಿಮೆ ಆಸೆಗಳಿಗೆ ಹೊಂದಿಕೊಳ್ಳುವಂತೆ ಮಾಡಿಕೊಳ್ಳುತ್ತದೆ. ಆದರೆ ಡೋಪಮೈನ್ ಪ್ರಮಾಣ ತುಂಬಾ ಕಡಿಮೆ ಆದಲ್ಲಿ ಅದು ಮನುಷ್ಯನನ್ನು ಖಿನ್ನತೆಗೆ ದೂಡಿಬಿಡುತ್ತದೆ. ಯಾವುದೇ ಕೆಲಸದಲ್ಲಿ ಆಸಕ್ತಿ ಇಲ್ಲದಂತೆ ಮಾಡುತ್ತದೆ. ಹಾಗಾಗಿ ಇದರ ಪ್ರಮಾಣ ನಿಯಮಿತವಾಗಿದ್ದಷ್ಟು ನಮ್ಮ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು. ಆಸೆಗಳಿಗೆ ಕಡಿವಾಣ ಹಾಕುವುದು, ಧ್ಯಾನ ಮಾಡುವುದು ಇದರ ಸಮತೋಲನಕ್ಕೆ ಸಹಾಯವಾಗುತ್ತವೆ.

 

ನಿಮ್ಮಲ್ಲಿ ಡೋಪಮೈನ್ ಸರಿ ಪ್ರಮಾಣದಲ್ಲಿ ಇದೆಯೇ ಇಲ್ಲವೇ ಎಂದು ತಿಳಿದುಕೊಳ್ಳುವುದು ಸುಲಭ. ನಿಮಗೆ ಸಣ್ಣ ಸಣ್ಣ ವಿಷಯಗಳು ಸಂತೋಷ ತರುವುದೇ ಇಲ್ಲವೇ ಎನ್ನುವುದು ಗಮನಿಸಿ ನೋಡಿ. ಉದಾಹರಣೆಗೆ ಒಂದು ಸೊಗಸಾದ ಸಂಜೆ, ಸೂರ್ಯಾಸ್ತ ಮೂಡಿಸಿದ ಆಕಾಶದಲ್ಲಿನ ರಂಗು ರಂಗಿನ ಚಿತ್ತಾರ, ನಾಯಿ ಮರಿ ಜೊತೆಗಿನ ಆಟ, ಒಂದು ಶೃಂಗಾರ ಕಾವ್ಯ ಈ ತರಹದ್ದು ನಿಮ್ಮಲ್ಲಿ ಸಂತೋಷ ಉಂಟು ಮಾಡಿದರೆ ನಿಮಗೆ ಅಭಿನಂದನೆಗಳು.

 

ಒಂದು ವೇಳೆ ನಿಮಗೆ ದುಡ್ಡು, ಕೀರ್ತಿ, ಆಸ್ತಿ ಇವು ಕೊಟ್ಟಷ್ಟು ಸಂತೋಷ ನಿಮಗೆ ಬೇರೆ ಏನು ಕೊಡುವುದಿಲ್ಲವಾದರೆ ನಿಮ್ಮಲ್ಲಿ ಡೋಪಮೈನ್ ಪ್ರಚೋದನೆ ಹೆಚ್ಚಿನ ಪ್ರಮಾಣದಲ್ಲಿ ಇದೆ. ನಿಮಗೆ ಒಂದು ಸುಂದರ ಸ್ಥಳದಲ್ಲಿ ಮನೆ ಖರೀದಿಸುವ ತಾಕತ್ತು ಇರುತ್ತದೆ ಆದರೆ ಅದರ ಸಂತೋಷ ಅನುಭವಿಸುವ ಮನಸ್ಥಿತಿ ಇರುವುದಿಲ್ಲ. ಏಕೆಂದರೆ ನಿಮ್ಮಲ್ಲಿರುವ ಡೋಪಮೈನ್ ನಿಮ್ಮನ್ನು ಅಲ್ಲಿಗೆ ಸುಮ್ಮನಾಗಲು ಬಿಡುವುದಿಲ್ಲ.

 

ಹಾಗೆಯೆ ದುಶ್ಚಟಕ್ಕೆ ದಾಸರಾದವರು ಮತ್ತು ಜೀವನದಲ್ಲಿ ಬೇಸರಗೊಂಡವರು ಕ್ರಮೇಣ ಅವಕ್ಕೆ ಕಡಿವಾಣ ಹಾಕಿಕೊಂಡು, ಮನಸ್ಸನ್ನು ವಿಮುಖ ಮಾಡಿಕೊಂಡು, ಬೇರೆ ಕೆಲಸಗಳಲ್ಲಿ ತಲ್ಲೀನರಾಗುವ ಮೂಲಕ ಅದರಿಂದ ಹೊರಗೆ ಬಂದು ಬಿಡಬಹುದು. ಆದರೆ ನಮ್ಮನ್ನು ನಾವು ಗಮನಿಸಿಕೊಳ್ಳುವ ವ್ಯವಧಾನ ಇರಬೇಕಷ್ಟೆ.

 

ಇಂದಿನ ಅತಿ ವೇಗದ ಜೀವನದಲ್ಲಿ ಆಸೆಗಳಿಗೆ ಮಿತಿ ಇಲ್ಲದಂತೆ ಬದುಕುವ ನಾವುಗಳು ನಮ್ಮ ಬದುಕಿನ ರೀತಿ ಗಮನಿಸಿಕೊಳ್ಳುವದನ್ನು ಮರೆತೇ ಬಿಟ್ಟಿದ್ದೇವೆ. ಇವತ್ತಿನ ಮಾತು ಬಿಡಿ. ಸಾವಿರಾರು ವರುಷಗಳ ಹಿಂದೆಯೇ ಬುದ್ಧ 'ಆಸೆಯೇ ದುಃಖಕ್ಕೆ ಮೂಲ' ಎಂದು ಹೇಳಲಿಲ್ಲವೇ? ಆದರೆ ಅದಕ್ಕೆ ಡೋಪಮೈನ್ ಕಾರಣ ಎನ್ನುವುದನ್ನು ಇಂದಿನ ವೈದ್ಯಕೀಯ ವಿಜ್ಞಾನ ಬಿಡಿಸಿ ಹೇಳುತ್ತಿದೆ. ಈ ನಿಟ್ಟಿನಲ್ಲಿ ಹಲವಾರು ಸಂಶೋಧನೆಗಳು ಸಾಗುತ್ತಿವೆ. ಇಂದ್ರಿಯ ಮೋಹಗಳಿಗೆ ಸಿಲುಕುವುದನ್ನು ಬಿಡಿಸುವುದು ಕಲಿಸುವ ಧ್ಯಾನ ಕೂಡ ಮುಂದೆ ಒಂದು ದಿನ ವೈದ್ಯಕೀಯ ವಿಜ್ಞಾನದ ಅದರಲ್ಲೂ ನರಮಂಡಲಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ರಾಮಬಾಣವಾಗಬಹುದು ಎನ್ನುವುದು ನನ್ನ ಅನಿಸಿಕೆ.


References:

1. Dopamine Nation by Anna Lembke (Book)

2. The Molecule of More by Daniel Z. Lieberman (Book)

3. Podcast: How Dopamine drives crave by Daniel Lieberman (Audio)

4. Podcast: Huberman Lab on Neuroscience (Audio)