Sunday, December 20, 2020

ಮೋಸದ ಮುನ್ನವೇ ಸಿಗುವ ಮುನ್ಸೂಚನೆಗಳು

ರಾಮಾಯಣದಲ್ಲಿನ ಸೀತಾಪಹರಣ ಪ್ರಸಂಗದ ನೆನಪು ಮಾಡಿಕೊಳ್ಳೋಣ. ಬಂಗಾರದ ಜಿಂಕೆ ಎನ್ನುವುದು ಇರಲು ಸಾಧ್ಯವಿಲ್ಲ. ಇದರಲ್ಲಿ ಏನೋ ಮೋಸವಿದೆ ಎಂದು ಸೀತೆಗೆ ಏಕೆ ಅನಿಸಲಿಲ್ಲ? ಅವಳು ಒಬ್ಬ ರಾಜನ ಮಗಳು. ಅವಳಿಗೆ ಎಲ್ಲ ವಿದ್ಯಾಭ್ಯಾಸ ದೊರಕಿತ್ತು. ಆದರೆ ಒಂದು ಕ್ಷಣ ವಿಚಾರ ಮಾಡದೇ ಜಿಂಕೆಯ ಮೇಲೆ ಮೋಹ ಪಟ್ಟಳು. ರಾಮನಿಗೆ ಅದನ್ನು ಹಿಡಿದು ತರಲು ಕೇಳಿದಳು. ರಾಮ ದೈವಾಂಶ ಸಂಭೂತನಲ್ಲವೇ? ಅವನಿಗೆ ಇದು ಮೋಸ ಎನ್ನುವುದು ಗೊತ್ತಾಗಿರಲಿಕ್ಕೂ ಸಾಕು. ಅವನು  ತನ್ನ ಪತ್ನಿಗೆ 'ಸಾಕು ಸುಮ್ಮನಿರು' ಅಥವಾ  'ಮುಂದೆ ನೋಡೋಣ' ಎಂದು ಹೇಳಿದ್ದರೆ ಸಾಕಾಗಿತ್ತು. ಅಸಮಾಧಾನ ಮುಗಿದ ನಂತರ ಬಂಗಾರದ ಜಿಂಕೆಯ ಮರ್ಮ ಸೀತೆಗೆ ಅರಿವಾಗುತಿತ್ತೇನೋ? ಆದರೆ, ಒಂದು ಕೈ ನೋಡೇ ಬಿಡೋಣ ಎಂದು ಬಿಲ್ಲನ್ನು ಹಿಡಿದು ರಾಮ ಹೊರಟ. ಅವನು ಎಷ್ಟು ಹೊತ್ತಾದರೂ ಬರದಿದ್ದಾಗ ,  ಸೀತೆಗೆ, ತನ್ನ ಗಂಡ ಪರಾಕ್ರಮಿ ಎಂದು ಗೊತ್ತಿದ್ದರೂ ಚಿಂತೆಯಾಯಿತು. ಲಕ್ಷ್ಮಣನಿಗೆ ನೋಡಿಕೊಂಡು ಬಾ ಎಂದು ಗಂಟು ಬಿದ್ದಳು. ಲಕ್ಷ್ಮಣ ಏನು ಸುಮ್ಮನೆ ಹೋಗಲಿಲ್ಲ. ಯಾವುದೊ ಮೋಸದ ಜಾಡು ಇಲ್ಲಿ ಇರಬಹುದು ಎಂದು ಊಹಿಸಿ ಒಂದು ಗೆರೆಯನ್ನು ಗೀಚಿ (ಲಕ್ಷ್ಮಣ ರೇಖೆ), ಯಾವುದೇ ಕಾರಣಕ್ಕೂ ಅದನ್ನು ದಾಟಿ ಬರದಂತೆ ತನ್ನ ಅತ್ತಿಗೆಗೆ ತಿಳಿಸಿಯೇ ಹೊರಟ. ಆದರೆ ಅದನ್ನು ಕೂಡ ಸೀತೆ ದಾಟಿ ಬಂದ ಮೇಲೆಯಲ್ಲವೇ ಅವಘಡ ಸಂಭವಿಸಿದ್ದು. ಮೋಸದ ಜಾಡು ಸಾಕಷ್ಟು ಮುನ್ಸೂಚನೆಗಳನ್ನು ನೀಡುತ್ತಾ ಹೋಗಿತ್ತು. ಪ್ರತಿಯೊಂದು ಹಂತದಲ್ಲೂ ಹಿಂದೆ ಸರಿಯುವ ಅವಕಾಶ ಇತ್ತು. ಆದರೆ ಅವುಗಳನ್ನೆಲ್ಲ ಕಡೆಗಣಿಸಿದಾಗ ನಡೆದದ್ದು ಅನಾಹುತ. ಹೌದು ಸ್ವಾಮಿ, ಇದು ಆಗದಿದ್ದರೆ ರಾಮಾಯಣ ಕಥೆ ಹೇಗೆ ಮುಂದೆ ಹೋಗುತಿತ್ತು ಎನ್ನುವಿರಾ? ಆಗಬಾರದ್ದೆಲ್ಲ ಒಂದಾದ ನಂತರ ಆಗುತ್ತಾ ಹೋದರೆ 'ಯಾರಿಗೆ ಬೇಕಿತ್ತು ಈ ರಾಮಾಯಣ' ಎಂದು ನಾವು ಆಗಾಗ ಹೇಳುವಿದಿಲ್ಲವೇ? ಅದು ಇದಕ್ಕೇನೋ?


ರಾಮಾಯಣದ ಮಾತು ಬಿಡಿ. ನಮಗೆ ಆಗುವ ದಿನ ನಿತ್ಯದ ಸಣ್ಣ ಪುಟ್ಟ ಮೋಸಗಳ ಬಗ್ಗೆ ವಿಚಾರ ಮಾಡಿ ನೋಡೋಣ. ಇನ್ನೂ ಚೆನ್ನಾಗಿ ಪರಿಚಯವಿರದ ಸ್ನೇಹಿತನೊಬ್ಬ ಸ್ವಲ್ಪ ಹಣ ಕೇಳುತ್ತಾನೆ. ಬೇರಾರು ನೆನಪಾಗದೆ ನೀವೇ ಏಕೆ ಅವನಿಗೆ ನೆನಪಾದೀರಿ ಎಂದು ನೀವು ವಿಚಾರ ಮಾಡದೇ ನೀವು ಅವನಿಗೆ ಹಣ ನೀಡಿದರೆ, ಅಲ್ಲಿ ನೀವು ಸಹಾಯ ಮಾಡಿದ್ದಕ್ಕಿಂತ ಪಾಠ ಕಲಿಯುವ ಸಂಭವವೇ ಹೆಚ್ಚು. ಸಾಕಷ್ಟು ಅನುಭಗಳಾದ ಮೇಲೆ ನಾನು ಅಂಥವರಿಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತೇನೆ. ಅವನಿಗೆ ಹಣದ ಅವಶ್ಯಕತೆ ಹೇಗಾಯಿತು? ಅವನು ಅಂತಹ ಪರಿಸ್ಥಿತಿಗೆ ಬರುತ್ತಿರುವುದು ಇದೆ ಮೊದಲೋ, ಅಲ್ಲವಾದಲ್ಲಿ ಅವನು ಏಕೆ ಅದಕ್ಕೆ ತಯಾರಿ ಮಾಡಿಕೊಂಡಿರಲಿಲ್ಲ? ಅವನು ಕೇಳಿದ ಹಣಕ್ಕಿಂತ ಕಡಿಮೆ ಹಣ ಕೊಟ್ಟರೆ ಸಾಕಾಗುತ್ತದೋ? ಅಷ್ಟರಲ್ಲಿ ಅವನ ನಿಜ ಕಾರಣ ನನಗೆ ಅರಿವಾಗುತ್ತದೆ ಮತ್ತು ಅದು ನನಗೆ ತಿಳಿದದ್ದು ಅವನಿಗೂ ಗೊತ್ತಾಗುತ್ತದೆ. ಕೊನೆ ಎಂಬಂತೆ ನಾನು ಕೇಳುವುದು, ಯಾವಾಗ ವಾಪಸ್ಸು ನೀಡುತ್ತೀಯ ಮತ್ತು ಅದಕ್ಕೆ ನಿನಗೆ ಹೇಗೆ ಹಣ ಸಿಗುತ್ತದೆ? ಅಷ್ಟರಲ್ಲಿ ಆ ಹಣ ವಾಪಸ್ಸು ಬರುತ್ತೋ, ಇಲ್ಲವೋ ಎನ್ನುವ ಅಂದಾಜು ನನಗೆ ಸಿಕ್ಕಿರುತ್ತದೆ.


ವಂಚನೆ ದೊಡ್ಡದಾದಷ್ಟೂ ಮುನ್ಸೂಚನೆಗಳು ಅಧಿಕವಾಗಿಯೇ ಇರುತ್ತವೆ. ಆದರೆ ತಿಳಿದುಕೊಳ್ಳುವ ಜಾಣ್ಮೆ ನಮಗಿರಬೇಕಷ್ಟೆ. ನಾವು ಮಾಡಬೇಕಾದ್ದು ಇಷ್ಟೇ. ಮೊದಲನೆಯದು ವಂಚಕರು ಉಂಟು ಮಾಡುವ ಭ್ರಮೆಯಿಂದ ಹೊರ ಬಂದು ಸತ್ಯಾಸತ್ಯತೆಯ ಬಗ್ಗೆ ತಿಳಿದುಕೊಳ್ಳುವುದು. ನಂತರ ಅವರು  ನಿರೀಕ್ಷೆ ಮಾಡಿದೆ ಇರದಂತಹ ಕೆಲವು ಪ್ರಶ್ನೆಗಳನ್ನು ಕೇಳಿ ಅವರನ್ನು ತಬ್ಬಿಬ್ಬು ಮಾಡುವುದು. ಆಗಲೂ ಸ್ಪಷ್ಟತೆ ದೊರೆಯದಿದ್ದರೆ, ಸ್ವಲ್ಪ ಕಾಲಾವಕಾಶ ಕೇಳಿ, ಇನ್ನೊಮ್ಮೆ ಅವರನ್ನು ಭೇಟಿಯಾಗುವುದು. ಮತ್ತೆ ಮತ್ತೆ ಭ್ರಮಾಲೋಕ ಸೃಷ್ಟಿಸುವುದು ಎಂತಹ ವಂಚಕನಿಗಾದರು ಕಷ್ಟದ ಕೆಲಸವೇ ಸರಿ. ನೀವು ಅಂತಹ ವೇಳೆಯಲ್ಲಿ, ನಿಮ್ಮ ಪ್ರಜ್ಞಾವಂತ ಸ್ನೇಹಿತರನ್ನು ಜೊತೆಗೂಡಿಸಿಕೊಂಡು ಆಲೋಚಿಸಿದಲ್ಲಿ ಇನ್ನೊಂದು ರಾಮಾಯಣಕ್ಕೆ ಅವಕಾಶವೇ ಇರದು.


ನಾನು ಹಿಂದೆ ಮನೆ ಕಟ್ಟುವಾಗ, ಅನೇಕ ಮೋಸಗಾರರ ಮತ್ತು ಅವರ ಕಾರ್ಯ ವೈಖರಿಗಳ ಪರಿಚಯವಾದವು. ಇವತ್ತಿಗೆ ಆ ತರಹದ ವಂಚನೆಗಳನ್ನು ಸುಲಭದಲ್ಲಿ ನಿಭಾಯಿಸುತ್ತೇನೆ. ಆದರೆ ಬೆಂಗಳೂರಿನಲ್ಲಿ ಜೀವಿಸುತ್ತಿರುವ ನನಗೆ, ಇನ್ನೂ ದೊಡ್ಡ ಮಟ್ಟದ ವಂಚನೆ ಮಾಡುವ ಮತ್ತು ಅದರಲ್ಲಿ ಸಾಕಷ್ಟು ಪಳಗಿದ ವ್ಯಕ್ತಿಗಳ ಪಟ್ಟುಗಳು ಅನುಭವಕ್ಕೆ ಬರುತ್ತಿವೆ. ಈ ವಿಷಯ ನನಗೆ ಬೇಡದಿದ್ದರೂ ಅಂಥವರ ನಡುವೆ ಬದುಕಬೇಕಾದ ಮತ್ತು ಅವರಿಂದ ನಮ್ಮನ್ನು ರಕ್ಷಿಸಿಕೊಳ್ಳುವ ಅನಿವಾರ್ಯತೆ, ಹೊಸ ಪಾಠಗಳನ್ನು ಕಲಿಸುತ್ತಿವೆ. ಅವರ ಬಗ್ಗೆ ಮುಂದೆ ಯಾವಾಗಲಾದರೂ ಬರೆಯುತ್ತೇನೆ.

No comments:

Post a Comment