Friday, December 18, 2020

ಬೆಂಗಳೂರು ಹೊರವಯಲದಲ್ಲಿನ ವೈವಿಧ್ಯಮಯ ಪ್ರಾಣಿ-ಪಕ್ಷಿ ಸಂಕುಲ

ಬೆಂಗಳೂರು ನಗರ ಕಾಂಕ್ರೀಟ್ ಕಾಡಾದರೆ, ಅದರ ಹೊರ ವಲಯ ಮಾತ್ರ ತನ್ನ ನೈಸರ್ಗಿಕ ಪರಿಸರವನ್ನು ಇನ್ನು ಕಳೆದುಕೊಂಡಿಲ್ಲ. ನಾವು ಬೆಂಗಳೂರು ಹೊರವಯಲದಲ್ಲಿ ಮನೆ ಕಟ್ಟಿ ವಾಸಕ್ಕೆ ಬಂದು ಆರು ವರ್ಷಗಳಾಗುತ್ತಾ ಬಂತು.  ಮೆಜೆಸ್ಟಿಕ್ ನಿಂದ ಸುಮಾರು ೧೮  ಕಿ.ಮೀ. ಹಾಗು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಸುಮಾರು ನಾಲ್ಕು ಕಿ.ಮೀ. ದೂರದಲ್ಲಿದೆ ನಮ್ಮ ಮನೆ. ಇಲ್ಲಿ ಹೊಸದಾಗಿ ಬಂದಾಗ, ಮನೆಯ ಮುಂದಿನ ಸಂಪಿಗೆ ಮರದಲ್ಲಿ, ಸೂರ್ಯೋದಯಕ್ಕೆ ಕೋಗಿಲೆ ಕೂಗಿದರೆ, ರಾತ್ರಿ ಧಾಳಿ ಇಡುವ ಗೂಬೆಗಳ ಬಗ್ಗೆ ಹಿಂದೆ ಲೇಖನ ಬರೆದಿದ್ದೆ. (Link: http://booksmarketsandplaces.blogspot.com/2015/07/blog-post_29.html)


ಇಲ್ಲಿ ಕೇವಲ ಪಕ್ಷಿಗಳಷ್ಟೇ ಇಲ್ಲ, ನಾವಿದ್ದರೂ ನಮ್ಮನ್ನ್ಯಾಕೆ ಗಮನಿಸುತ್ತಿಲ್ಲ ಎಂದು ಪ್ರಾಣಿ, ಸರೀಸೃಪ ಜಗತ್ತು ನನ್ನ ಕಣ್ಣಿಗೆ ಬೀಳಲಾರಂಭಿಸಿತು. ನಮ್ಮ ಬಡಾವಣೆಯಲ್ಲಿ ಹಾವುಗಳು ಸುತ್ತಾಡುವುದನ್ನು, ನಾನು ಸೇರಿದಂತೆ ಇಲ್ಲಿಯ ನಿವಾಸಿಗಳೆಲ್ಲ ಗಮನಿಸಿದ್ದರು. ಅವು ವಿಷಪೂರಿತ ನಾಗರಹಾವು ಮತ್ತು ವೈಪರ್ ಹಾವುಗಳು. ಯಾರಿಗೂ ತೊಂದರೆ ಕೊಡದೆ ಅಡ್ಡಾಡಿಕೊಂಡಿದ್ದವು. (ಅಥವಾ ಅವುಗಳು ಅಡ್ಡಾಡಿಕೊಂಡಿದ್ದ ಜಾಗದಲ್ಲಿ ನಾವುಗಳು ಮನೆ ಕಟ್ಟಿಕೊಂಡಿದ್ದೆವು). ಒಂದು ದಿನ ಬೆಳಗ್ಗೆ, ಮರಿ ಅಲ್ಲದ ಆದರೆ ಇನ್ನು ದೊಡ್ಡದಾಗದ, ಸುಮಾರು ಎರಡು-ಮೂರು ಅಡಿ ಉದ್ದದ ನಾಗರಹಾವು ನಮ್ಮ ಮನೆಯ ಮುಂಬಾಗಿಲಿನ ಮುಂದೆ ಬಂದು ಕುಳಿತಿತ್ತು. ನಮ್ಮ ಅವಸರಕ್ಕೆ ಹಾವು ಹಿಡಿಯುವವರಾರು ನನ್ನ ಫೋನಿಗೆ ಸಿಗಲಿಲ್ಲ. ಏನು ಮಾಡುವುದು ಎಂದು ವಿಚಾರ ಮಾಡುತ್ತಿರುವಾಗ, ಆ ಹಾವು, ಮನೆಯ ಕಾಂಪೌಂಡ್ ನಲ್ಲಿದ್ದ ಒಂದು ಪೈಪ್ ನೊಳಗೆ ಸೇರಿಕೊಂಡಿತು. ತಡ ಮಾಡದೇ ನಾನು ಪೈಪ್ ನ ಎರಡು ಬದಿಗೂ ಸ್ವಲ್ಪ ಸಡಿಲವಾಗಿ ಪ್ಲಾಸ್ಟಿಕ್ ಚೀಲಗಳನ್ನು ಕಟ್ಟಿಬಿಟ್ಟೆ. ಇದನ್ನು ಊರಾಚೆ ಬಿಟ್ಟು ಬರಲು ಒಬ್ಬರನ್ನು ಸಹಾಯಕ್ಕಾಗಿ ಕರೆದರೆ, ಆ ವ್ಯಕ್ತಿ ಆ ಪೈಪ್ ಅನ್ನು ನನ್ನ ಕೈಗೆ ಕೊಟ್ಟು, ಸುಮ್ಮನೆ ದ್ವಿಚಕ್ರ ವಾಹನದಲ್ಲಿ ಹಿಂದೆ ಬಂದು ಕುಳಿತುಕೊಂಡ. ಸರಿ, ಎಂದು ಅದನ್ನು ತೆಗೆದುಕೊಂಡು ಊರು ದಾಟಿ, ಕಟ್ಟಿದ ಚೀಲಗಳನ್ನು ಬಿಚ್ಚಿ, ಪೈಪ್ ನ್ನು ಮೆತ್ತಗೆ ಅಲ್ಲಾಡಿಸಿದೆ. ಅದರಿಂದ ಹೊರ ಬಂದು, ಸರ ಸರ ಹರಿದು ಮಿಂಚಿನಂತೆ ಮಾಯವಾದ ನಾಗರಾಜ. ಅದರ ವೇಗ ಮತ್ತು ಶಕ್ತಿ ಕಂಡು ಒಂದು ಕ್ಷಣ ರೋಮಾಂಚನ ಆಯಿತು.


ಹಾವಿದ್ದಲ್ಲಿ, ಮುಂಗುಸಿ ಇರಬೇಕು ತಾನೇ. ಅವುಗಳು ಕಣ್ಣಿಗೆ ಬೀಳಲಾರಂಭಿಸಿದವು. ಆದರೆ ಆಶ್ಚರ್ಯ ಎನ್ನುವಂತೆ, ಮನೆ ಪಕ್ಕದ ಖಾಲಿ ಸೈಟುಗಳಲ್ಲಿ, ಒಂದು ಕಾಡು ಮೊಲ, ಟಣ್ಣನೆ ಜಿಗಿದಾಡುತ್ತಿತ್ತು. ಅದನ್ನು ಕಂಡು ಹರ್ಷಗೊಂಡು ಚಿಕ್ಕ ಮಕ್ಕಳು ಅದರ ಹಿಂದೆ ಓಡಿದರು. ಕುತೂಹಲದಿಂದ ಏನು ವಿಷಯ ಎಂದು ನೋಡಲು ಬಂದ ಬೀದಿ ನಾಯಿಗಳು ಅದನ್ನು ಬೆನ್ನಟ್ಟಿದವು. ನಂತರ ಅದು ಈ ಕಡೆಗೆ ಸುಳಿಯಲೇ ಇಲ್ಲ.


ಈ ವರ್ಷ ಲಾಕ್ ಡೌನ್ ಆರಂಭವಾದಾಗ, ಆಫೀಸ್ ಗೆ ಹೋಗುವ ತಾಪತ್ರಯ ಇರಲಿಲ್ಲ. ಹಾಗೆಯೇ ನಗರದ ಕಡೆಗೆ ಹೋಗುವ ಹಾಗೆಯೂ ಇರಲಿಲ್ಲ. ಆದ್ದರಿಂದ ನಮ್ಮ ಬಡಾವಣೆಯಿಂದ ಹಳ್ಳಿಗಳ ಕಡೆಗೆ ಹೋಗುವ ರಸ್ತೆಯ ಕಡೆಗೆ ನಮ್ಮ ವಾಕಿಂಗ್ ಶುರು ಮಾಡಿದೆವು. ಊರಾಚೆಯ ಕೆರೆ ದಾಟಿ ಹೋದರೆ, ಅಲ್ಲಿ ಸಾಲು ಸಾಲು ತೋಟಗಳಿವೆ. ಮಾವು, ಅಡಕೆ, ತೆಂಗಿನ ತೋಟಗಳು. ಸಾಲು ಸಾಲಾಗಿ ತೇಗದ ಮರಗಳನ್ನು ಕೂಡ ಕಾಣಬಹುದು. ಹಾಗೆಯೆ ಕೆಂಪೇಗೌಡ ಬಡಾವಣೆಯ ಕೆಲಸ ಕೂಡ ಅಲ್ಲಲ್ಲಿ ನಡೆದಿದೆ. ಮುಂಜಾನೆ ಮತ್ತು ಸಂಜೆ ಹೊತ್ತಿನಲ್ಲಿ, ನಮ್ಮ ನಡಿಗೆಯ ಸಮಯದಲ್ಲಿ ಅಲ್ಲಿ ನವಿಲುಗಳು ಕಣ್ಣಿಗೆ ಬೀಳಲಾರಂಭಿಸಿದವು. ಹತ್ತಾರಲ್ಲ, ನೂರಾರು ಸಂಖ್ಯೆಯಲ್ಲಿ ಇದ್ದ ಅವುಗಳು ಪ್ರತಿ ದಿನ ಕಣ್ಣಿಗೆ ಬಿದ್ದು, ಅವುಗಳ ಫೋಟೋ ತೆಗೆದು ನಮಗೂ ಸಾಕಾಗಿ ಹೋಯಿತು.


ನಾಲ್ಕು ವರುಷಗಳ ಹಿಂದೆ ಒಂದು ಹನಿ ನೀರು ಇರದಿದ್ದ ಕೆರೆಯಲ್ಲಿ, ಒಳ್ಳೆಯ ಮಳೆಯಿಂದ ನೀರು ಬರಲಾರಂಭಿಸಿತು. ಕಳೆದ ನವೆಂಬರ್ ತಿಂಗಳಲ್ಲಿ ಬಂದ ಮಳೆಗೆ, ಕೆರೆ ತುಂಬಿ ಕೋಡಿ ಬೀಳುವ  ಸ್ಥಿತಿಯಲ್ಲಿದೆ. ಇದುವರೆಗೇ ಕಾಣದಿದ್ದ ಬಾತುಕೋಳಿಗಳು ಎಲ್ಲಿಂದಲೋ ಬಂದು ಸೇರಿಕೊಂಡಿವೆ. ಹಾಗೆ ಮೀನುಗಾರರು ಇಲ್ಲಿ ಬಲೆ ಬೀಸಿ, ದಷ್ಟ ಪುಷ್ಟವಾಗಿ ಬೆಳೆದ ಮೀನುಗಳನ್ನು ಹಿಡಿದುಕೊಂಡು ಹೋಗುತ್ತಾರೆ.   

  

ಆದರೆ ಬೇಸರದ ಸಂಗತಿಯೆಂದರೆ, ಲಾಕ್ ಡೌನ್ ಮುಗಿದ ನಂತರ, ಈ ಹಳ್ಳಿ ರಸ್ತೆಗಳಲ್ಲಿ ಓಡಾಡುವ ವಾಹನಗಳ ಸಂಖ್ಯೆ ಜಾಸ್ತಿಯಾಗಿದೆ. ರಸ್ತೆ ಕಿತ್ತು ಹೋಗಿ, ಧೂಳು ಎದ್ದು, ಅಲ್ಲಿ ಓಡಾಡುವುದು ಕಷ್ಟ ಆಗುತ್ತಿದೆ. ಒಂದು ಮುಂಜಾನೆ ಅಲ್ಲಿ ಬೇಟೆಗಾರರನ್ನು ನೋಡಿದ ಮೇಲೆ, ನವಿಲುಗಳು ಸ್ವಲ್ಪ ಕಡಿಮೆ ಕಾಣಸಿಗುತ್ತಿವೆ. ಹಾಗೆ ಕೆರೆ ನೀರಿಗೆ ಒಂದು ಭಾಗದಲ್ಲಿ ಕಸ, ಕೊಳಚೆ ಸೇರಿಕೊಂಡಿದೆ. ಕೆಂಪೇಗೌಡ ಬಡಾವಣೆಗೆ ಸೇರಿದ ಈ ಜಾಗ, ಅದು ಬೆಳವಣಿಗೆ ಆದಂತೆ ಇಲ್ಲಿನ ಹಸಿರಿನ ಹೊದಿಕೆ ಕಡಿಮೆ ಆಗುತ್ತಿದೆ. ಇನ್ನು ಕೆಟ್ಟು ಹೋಗುವ ಮುನ್ನ, ನೀವು ನಮ್ಮ ಮನೆಗೆ ಯಾವುದಾದರೂ ಸಂಜೆ ಬನ್ನಿ. ನಮ್ಮ ಮನೆಯಲ್ಲಿ ಕಾಫಿ ಕುಡಿಯುವುರಂತೆ ಹಾಗೆಯೇ ಒಂದು ಸುತ್ತು ವಾಕಿಂಗ್ ಹೋಗಿ ಬರೋಣ.



No comments:

Post a Comment