Wednesday, December 16, 2020

ಕೊರೊನ ವೈರಸ್ ಮತ್ತು ಮಾಲ್ತಸ್ ನ ಜನಸಂಖ್ಯೆಯ ಸಿದ್ಧಾಂತ

೧೮ ನೇ ಶತಮಾನದ ತಜ್ಞ ಥಾಮಸ್ ರಾಬರ್ಟ್ ಮಾಲ್ತಸ್ ಹೇಳಿದ್ದು, ಪ್ರಪಂಚದ ಜನಸಂಖ್ಯೆಯ ಬೆಳವಣಿಗೆಯ ವೇಗಕ್ಕೆ ಸರಿ ಸಮನಾಗಿ ಆಹಾರ ಪೂರೈಕೆಯ  ಬೆಳವಣಿಗೆಯಾಗುವುದಿಲ್ಲ . ಅದು ಏರು ಪೇರಾದಾಗ, ಆಹಾರ ಕೊರತೆಯ ಕಾರಣಕ್ಕೋ, ಯುದ್ಧಗಳ ಕಾರಣವೋ ಅಥವಾ ಸಾಂಕ್ರಾಮಿಕ ರೋಗಗಳ ಕಾರಣದಿಂದಲೋ ಜನಸಂಖ್ಯೆ ಇಳಿಕೆಯಾಗಿ ಮತ್ತೆ ಅದು ಸಮತೋಲನಕ್ಕೆ ಬರುವ ಏರ್ಪಾಡನ್ನು ಪ್ರಕೃತಿ ಮಾಡುತ್ತದೆ. ಈ ಸಿದ್ದಾಂತ ಸಾಕಷ್ಟು ಜನಪ್ರಿಯಗೊಂಡು ಜಗತ್ತಿನಾದ್ಯಂತ ಸಾಕಷ್ಟು ಪಠ್ಯ ಪುಸ್ತಕಗಳಲ್ಲಿ ಸೇರಿ ಹೋಗಿದೆ. ಈಗಾಗಲೇ ಕೊರೊನ ವೈರಸ್ ಗೆ ೧೬ ಲಕ್ಷಕ್ಕೂ ಜನ ವಿಶ್ವದಾದ್ಯಂತ ಅಸು ನೀಗಿದ್ದಾರಲ್ಲ. ಅದು ಜನಸಂಖ್ಯೆಯನ್ನು ನಿಯಂತ್ರಿಸುವ ಉದ್ದೇಶದಿಂದ ಪ್ರಕೃತಿ ಉಂಟು ಮಾಡಿದ ಏರ್ಪಾಡೇ? ಹಾಗಿದ್ದಲ್ಲಿ ಆಹಾರದ ಕೊರತೆ ನಮಗೆ ಕಾಡಿತ್ತೆ? ಮಾಲ್ತಸ್ ನ ಜನಸಂಖ್ಯೆಯ ಸಿದ್ದಾಂತ ಇಂದಿಗೂ ಅನ್ವಯಿಸುತ್ತದೆಯೇ? ಇಲ್ಲ ಎನ್ನುವುದು ನನ್ನ ಅಭಿಪ್ರಾಯ. ಅದು ಏಕೆ ಎನ್ನುವುದರ ವಿವರಣೆ ಮುಂದಿದೆ.


ಪ್ರಾಣಿ ಜಗತ್ತಿನಲ್ಲಿ ಮಾಲ್ತಸ್ ನ ಸಿದ್ದಾಂತ ಯಾವತ್ತಿಗಾದರು ಅನ್ವಯಿಸುತ್ತದೆ ಎಂದು ಹೇಳಬಹುದು. ಉದಾಹರಣೆಗೆ, ಒಂದು ಕಾಡಿನಲ್ಲಿನ ಹುಲಿಗಳ ಸಂಖ್ಯೆ ಅವು ಬೇಟೆಯಾಡುವ ಪ್ರಾಣಿಗಳಾದ ಜಿಂಕೆ, ಕಡವೆ ಇತ್ತ್ಯಾದಿ ಪ್ರಾಣಿಗಳ ಸಂಖ್ಯೆಯ ಮೇಲೆ ಅವಲಂಬಿತವಾಗಿರುತ್ತದೆ. ಮತ್ತು ಆ ಪ್ರಾಣಿಗಳ ಸಂಖ್ಯೆ ಕಾಡಿನ ವಿಸ್ತಾರ, ಹುಲ್ಲುಗಾವಲಿನ ಮೇಲೆ ಅವಲಂಬಿತವಾಗಿರುತ್ತದೆ. ಕಾಡು ದೊಡ್ಡದಾಗದ ಹೊರತು ಅಲ್ಲಿನ ಜಿಂಕೆ, ಕಡವೆಗಳ ಸಂಖ್ಯೆ ಜಾಸ್ತಿಯಾಗದು ಹಾಗೆಯೆ ಅಲ್ಲಿನ ಹುಲಿಗಳ ಸಂಖ್ಯೆಗೂ ಒಂದು ಮಿತಿಯಿರುತ್ತದೆ. ಅದಕ್ಕೂ ಮೀರಿ ಹುಲಿಗಳ ಸಂಖ್ಯೆ ಜಾಸ್ತಿಯಾದರೆ, ಹಸಿವಿನಿಂದಲೋ, ಕಾದಾಟದಿಂದಲೋ ಕೆಲವು ಹುಲಿಗಳು ಸತ್ತು, ಅವುಗಳ ಸಂಖ್ಯೆ ಮತ್ತೆ ಸಮತೋಲನಕ್ಕೆ ಬರುತ್ತದೆ.


ಶಿಲಾಯುಗದ ಕಾಲದಲ್ಲಿ ಮನುಷ್ಯ ಇತರೆ ಪ್ರಾಣಿಗಳ ಹಾಗೆ ಅಲೆದಾಡುತ್ತ, ಪ್ರಾಣಿಗಳನ್ನು ಬೇಟೆಯಾಡುತ್ತ ಬದುಕುತ್ತಿದ್ದ. ಆಗ ಮನುಷ್ಯರ ಸಂಖ್ಯೆಗೆ ಪ್ರಕೃತಿಯ ಮಿತಿಯಿತ್ತು, ನಂತರ ವ್ಯವಸಾಯ ಕಲಿತುಕೊಂಡ ಮಾನವ, ತನ್ನ ಆಹಾರಕ್ಕೆ ಅಲೆಯದೇ ತಾನೇ ಬೆಳೆದುಕೊಳ್ಳುವ ವ್ಯವಸ್ಥೆ ಮಾಡಿಕೊಂಡ. ಆದರೂ ವ್ಯವಸಾಯದ ಉತ್ಪನ್ನ ಪ್ರತಿ ವರ್ಷವೂ ಒಂದೇ ರೀತಿಯಿರಲಿಲ್ಲ. ಮಳೆ ಕಡಿಮೆಯಿದ್ದ ವರ್ಷ, ಬರಗಾಲ ಬಂದಾಗ ಆಹಾರದ ಕೊರತೆಯಾಗುತ್ತಿತ್ತು. ಅದೇ ಸಮಯಕ್ಕೆ ಸಾಂಕ್ರಾಮಿಕ ರೋಗಗಳು ಬಂದಾಗ ಸೂಕ್ತ ವೈದ್ಯಕೀಯ ಸೌಕರ್ಯಗಳ ಕೊರತೆಯಿತ್ತು. ಅದು ೧೮ನೆ ಶತಮಾನದಲ್ಲಿ ಮಾಲ್ತಸ್ ಜೀವಿತವಾಗಿದ್ದಾಗ ಇದ್ದಂತ ಪರಿಸ್ಥಿತಿ. ಹಸಿವಿನಿಂದ, ರೋಗದಿಂದ, ಯುದ್ಧದಿಂದ ಜನ ಸತ್ತಾಗ ಅದು ಪ್ರಕೃತಿಯ ಕೈವಾಡ ಎಂದು ಮಾಲ್ತಸ್ ಗೆ ಅನ್ನಿಸಿದ್ದರೆ ಆಶ್ಚರ್ಯವೇನಿಲ್ಲ. 


ಆದರೆ ಇಂದಿನ ಮನುಷ್ಯ, ೧೮ನೆ ಶತಮಾನದ ಇತಿ ಮಿತಿಗಳನ್ನು ಮೀರಿ ಬೆಳವಣಿಗೆ ಸಾಧಿಸಿದ್ದಾನೆ. ಇವತ್ತಿಗೆ ನೀರಾವರಿ ಸೌಲಭವಿದೆ. ಮಳೆಯ ಮೇಲೆ ಅವಲಂಬನೆ ಇದ್ದರೂ ಎರಡು ನೂರು ವರುಷಗಳ ಹಿಂದಕ್ಕೆ ಹೋಲಿಸಿದರೆ ಅದು ಗಣನೀಯವಾಗಿ ಕಡಿಮೆಯಾಗಿದೆ. ಗೊಬ್ಬರದ ಬಳಕೆ, ಕ್ರಿಮಿ ಕೀಟಗಳ ನಾಶಕ್ಕಾಗಿ ಔಷಧಗಳ ಬಳಕೆಯಿಂದ ಅದೇ ವಿಸ್ತೀರ್ಣದಲ್ಲಿ ಹೆಚ್ಚಿನ ಬೆಳೆ ಬೆಳೆಯುವುದು ಮನುಷ್ಯನಿಗೆ ಸಾಧ್ಯವಾಗಿದೆ. ಹೈಬ್ರಿಡ್ ತಳಿಗಳ ಆವಿಷ್ಕಾರದಿಂದ ಆಹಾರ ಉತ್ಪಾದನೆ ಇನ್ನು ಹೆಚ್ಚಾಗಿದೆ. ಅಲ್ಲದೆ ಬೆಳೆದ ಬೇಳೆ ಕಾಳುಗಳನ್ನು ಸಂಸ್ಕರಿಸುವ ಮತ್ತು ಅವುಗಳನ್ನು ಬಹು ಕಾಲದವರೆಗೆ ಕೆಡದಂತೆ ಕಾಪಾಡಿಕೊಳ್ಳುವ ವಿದ್ಯೆಯನ್ನೂ ಮನುಜ ಕಲಿತದ್ದಾಗಿದೆ. ಇಂದಿಗೆ ಆಹಾರದ ಕೊರತೆ ೧೮ನೆ ಶತಮಾನದ ತರಹ ಇಲ್ಲ. ಇಂದು ಸರಿಯಾದ ಬೆಲೆ ಸಿಗದೇ ರಸ್ತೆಗೆ ಸುರಿದು ಹೋದ ಟೊಮೇಟೊ ಬಗ್ಗೆ, ಸರಕಾರದ ಗೋದಾಮುಗಳಲ್ಲಿ ದಾಸ್ತಾನು ಇಟ್ಟಲ್ಲೇ ಹಾಳಾಗಿ ಹೋದ ಅಕ್ಕಿ, ಗೋದಿಯ ಬಗ್ಗೆ ನಾವು ಸುದ್ದಿ ಓದುತ್ತೇವೆ. ಇವುಗಳು ಆಹಾರದ ಕೊರತೆ ಇರುವುದು ಸೂಚಿಸುವುದಿಲ್ಲ.


ಹಾಗೆಯೇ ವೈದ್ಯಕೀಯ ಸೌಲಭ್ಯಗಳು, ರೋಗ ನಿರೋಧಕ ಔಷಧಿಗಳು ಇಂದಿಗೆ ಇರುವ ಹಾಗೆ ೧೮ನೆ ಶತಮಾನದಲ್ಲಿ ಇರಲಿಲ್ಲ. ಆಗ ಸಾಂಕ್ರಾಮಿಕ ರೋಗಗಳಿಗೆ ಇಡೀ ಊರಿಗೆ ಊರೇ ಖಾಲಿ ಮಾಡಿಕೊಂಡು ಗುಳೆ ಹೋಗುವ ಪರಿಸ್ಥಿತಿ ಇಂದು ಎಷ್ಟು ಊರುಗಳಲ್ಲಿದೆ?   ಆದರೆ ೧೮ನೆ ಶತಮಾನದಲ್ಲಿ ಅದು ಸಾಮಾನ್ಯ ಸಂಗತಿಯಾಗಿತ್ತು. 


ಎರಡನೇ ಜಾಗತಿಕ ಮಹಾಯುದ್ಧದ ನಂತರ ಅಷ್ಟು ದೊಡ್ಡ ಪ್ರಮಾಣದ ಯುದ್ಧ ಇಂದಿಗೆ  ಆಗುವ ಸಂಭವವೂ ತೀರಾ ಕಡಿಮೆ. ಈ ಶತಮಾನದಲ್ಲಿ ಮನುಜ ಕಲಿತುಕೊಂಡ ದೊಡ್ಡ ಪಾಠ, ಯುದ್ದದಿಂದ ಆಗುವ ಸಾವು ನೋವು. ಇಂದಿಗೆ ಜಗಳಗಳೇ ಇಲ್ಲ ಎಂದಿಲ್ಲ. ಆದರೆ ಸಣ್ಣ ಪುಟ್ಟ ಯುದ್ದಗಳನ್ನು ಕ್ಷಿಪಣಿಗಳೇ ಮಾಡಿ ಮುಗಿಸುತ್ತವೆ. ಯುದ್ಧ ಎನ್ನುವುದು ಮನುಷ್ಯ ಹೋರಾಟವಲ್ಲ ಬದಲಿಗೆ ಅದು ತಂತ್ರಜ್ಞಾನದ ಹೋರಾಟ ಎನ್ನುವಂತ ಪರಿಸ್ಥಿತಿ ಇಂದಿನದು.


ಆಹಾರದ ಪೂರೈಕೆ, ವೈದ್ಯಕೀಯ ಸೌಲಭ್ಯಗಳು ಮತ್ತು ಯುದ್ಧ ಮಾಡುವ ರೀತಿ ಬದಲಾಗಿರುವ ಈ ಕಾಲಕ್ಕೂ, ಮಾಲ್ತಸ್ ಬದುಕಿದ ಕಾಲಕ್ಕೂ ಅಜ ಗಜಾಂತರ ವ್ಯತಾಸವಿದೆ. ಹಾಗಾದರೆ ಈ ಕೊರೊನ ವೈರಸ್  ಏನು ಅನ್ನುತ್ತೀರಾ? ೧೮ನೆ ಶತಮಾನದ ಪರಿಸ್ಥಿತಿ ಇಂದಿಗೆ ಇದ್ದಿದ್ದರೆ, ಕೊರೊನ ಮಾರಿಗೆ ಸತ್ತವರ ಸಂಖ್ಯೆ ದಶ ಕೋಟಿಗಳಲ್ಲಿರುತ್ತಿತ್ತು ಎನ್ನುವುದು ನನ್ನ ಅಭಿಪ್ರಾಯ. ೭೮೦ ಕೋಟಿ ಜನಸಂಖ್ಯೆ ಇರುವ ಜಗತ್ತಿನಲ್ಲಿ, ೧೬ ಲಕ್ಷ ಸಾವು ನಮ್ಮ ಜನಸಂಖ್ಯೆಯನ್ನು ೦.೦೨% ಮಾತ್ರ ಕಡಿಮೆ ಮಾಡಿದೆ. ಇಷ್ಟಕ್ಕೆ ನಾವು ಸರಿಯಾಗಿ ನಿಭಾಯಿಸಿದ್ದೇವೆ ಎಂದೇನೂ ನಾನು ಹೇಳುತ್ತಿಲ್ಲ. ಆದರೆ ಮಾಲ್ತಸ್ ಇಂದು ಬದುಕಿದ್ದರೆ ತನ್ನ ಸಿದ್ಧಾಂತವನ್ನು ಬದಲಾಯಿಸುತ್ತಿದ್ದ ಮತ್ತು ಕೊರೊನ ವೈರಸ್ ಪ್ರಕೃತಿಯ ಕೈವಾಡ ಎನ್ನುವುದಕ್ಕಿಂತ ಮನುಷ್ಯ ಎದುರಿಸುತ್ತಿರುವ ಒಂದು ಸವಾಲು ಎಂದು ಹೇಳುತ್ತಿದ್ದ ಎನ್ನುವುದಷ್ಟೆ ನನ್ನ ಅಭಿಪ್ರಾಯ.

No comments:

Post a Comment