Sunday, December 20, 2020

ಕುರುಡರ ಜಗತ್ತಿನಲ್ಲಿ ಒಬ್ಬನಾಗಿ ಹೋಗದೆ

H. G. Wells ಅವರ ಒಂದು ಕಥೆಯ ಹೆಸರು "The Country of the Blind". ಈ ಕಥೆಯಲ್ಲಿ ಪರ್ವತಾರೋಹಿಯೊಬ್ಬ ಅದುವರೆಗೆ ಯಾರು ಹತ್ತಿರದ ಪರ್ವತನ್ನು ಹತ್ತುತ್ತಿರುವಾಗ ಜಾರಿ, ಪರ್ವತದ ಆಚೆ ಇರುವ ಇರುವ ಕಣಿವೆ ಒಂದಕ್ಕೆ ಉರುಳಿಕೊಂಡು ತಲುಪುತ್ತಾನೆ. ಮೈ ಕೈ ಸೋತು ತುಂಬಾ ದಣಿದಿದ್ದ ಅವನಿಗೆ ವಾಪಸ್ಸು ಹೋಗುವ ದಾರಿ ಗೊತ್ತಾಗುವುದಿಲ್ಲ. ಆದರೆ ಆ ಕಣಿವೆಯೊಳಗೆ ಒಂದು ಮನುಷ್ಯ ಜನಾಂಗ ವಾಸವಿರುವುದು ಗೊತ್ತಾಗುತ್ತದೆ. ಅವರನ್ನು ಸೇರಿಕೊಂಡಾಗ ಅವನಿಗೆ ತಿಳಿಯುವುದು ಅಲ್ಲಿರುವವರೆಲ್ಲ ಕುರುಡರು ಎಂದು. ಯಾವುದೊ ಅನುವಂಶೀಯ ರೋಗದಿಂದ, ಅಲ್ಲಿರುವ ಕುರುಡರ ಮಕ್ಕಳೆಲ್ಲ ಕುರುಡರಾಗಿಯೇ ಹುಟ್ಟಿರುತ್ತಾರೆ. ಹೀಗೆ ಅದು ವಂಶ ಪಾರಂಪರ್ಯವಾಗಿ ಬೆಳೆದು ಅದು ಕುರುಡರ ಜಗತ್ತೇ ಆಗಿರುತ್ತದೆ. ಆದರೆ ಅವರಿಗೆ ಉಳಿದ ಇಂದ್ರಿಯಗಳು ಹೆಚ್ಚಿನ ತೀಕ್ಷ್ಣತೆ ಪಡೆದು, ಯಾವುದೇ ಸಮಸ್ಯೆಯಿಲ್ಲದೆ ಒಳ್ಳೆಯ ಬದುಕನ್ನು ಬದುಕುತ್ತಿರುತ್ತಾರೆ. ಆದರೆ ಇವರಿಗೆ ಹೊರಗಿನ ಸಂಪರ್ಕ ಇರದೇ ಮತ್ತು ಹೊರಗಿನ ಜಗತ್ತಿಗೆ ಈ ತರಹದ ಒಂದು ಸ್ಥಳ ಇರುವುದು ಗೊತ್ತೇ ಇರುವುದಿಲ್ಲ. ಈ ಸ್ಥಳಕ್ಕೆ ಬಂದ ಆಗಂತುಕನಿಗೆ ಒಂದು ಕ್ಷಣ ಆಶ್ಚರ್ಯ ಮತ್ತು ಸಂತೋಷ ಒಟ್ಟಿಗೆ ಆಗುತ್ತವೆ. ಕುರುಡರ ಜಗತ್ತಿಗೆ ಒಕ್ಕಣ್ಣಿನ ರಾಜ ಎಂಬ ನಾಣ್ಣುಡಿಯಂತೆ ತಾನು ಅವರಿಗೆ ಹೊಸ ವಿಷಯಗಳನ್ನು ಕಲಿಸುತ್ತ ಅವರಿಗೆ ನಾಯಕನಾಗಬಹುದು ಎನ್ನುವ ಲೆಕ್ಕಾಚಾರದಲ್ಲಿ. ಆದರೆ ಕಣ್ಣು ಎನ್ನುವ ಇಂದ್ರಿಯ ಮತ್ತು ಅದರಿಂದ ಕಾಣಿಸುವ ನೋಟ ಏನು ಎಂಬುದು ಅರಿವಿರದ ಅವರಾರಿಗೂ ಈತನ ಮಾತುಗಳ ಮೇಲೆ ನಂಬಿಕೆ ಬರುವುದಿಲ್ಲ. ಈತನಿಗೆ ಏನೋ ಭ್ರಮೆ ಎಂದು ಕನಿಕರ ತೋರಿಸುತ್ತಾರೆ. ಬೇರೆ ದಾರಿ ಇರದೇ, ಅವರ ಜೀವನಕ್ಕೆ ಹೊಂದಿಕೊಳ್ಳುವ ಪರಿಸ್ಥಿತಿ ಆಗಂತುಕನದು. ಅವನಿಗೆ ಅಲ್ಲಿಯ ಯುವತಿ ಒಬ್ಬಳ  ಮೇಲೆ ಪ್ರೇಮಾಂಕುರವಾಗುತ್ತದೆ. ಅವಳ ನಂಬಿಕೆ ಗಳಿಸಿಕೊಂಡ ಮೇಲೆ, ಅವಳಿಗೆ ತಾನು ಕಾಣುತ್ತಿರವ ನೋಟ ಎಷ್ಟು ಮಹತ್ತರದ್ದು ಎಂದು ಮನವರಿಕೆ ಮಾಡಿ ಕೊಡುವ ಪ್ರಯತ್ನ ಮಾಡುತ್ತಾನೆ. ಆದರೆ ಅದು ಇನ್ನಷ್ಟು ಗೊಂದಲ ಉಂಟು ಮಾಡಿ ಅಲ್ಲಿರುವರೆಲ್ಲ ಇವನಿಗೆ ಅಲ್ಪ ಪ್ರಮಾಣದ ಹುಚ್ಚು ಹಿಡಿದಿದೆ ಎನ್ನುವ ತೀರ್ಮಾನಕ್ಕೆ ಬರುತ್ತಾರೆ. ಅಲ್ಲಿಯ ವೈದ್ಯನೊಬ್ಬ ಅದಕ್ಕೆಲ್ಲ ಕಾರಣ ಇವನಿಗಿರುವ ಕಣ್ಣುಗಳೇ  ಮತ್ತು ಅವನ್ನು ತೆಗೆದು ಹಾಕಿದರೆ ಎಲ್ಲ ಸರಿ ಹೋಗುತ್ತದೆ ಎಂದು ತೀರ್ಮಾನಿಸುತ್ತಾನೆ. ಪ್ರೀತಿಯ ಸೆಳೆತಕ್ಕೆ ಸಿಕ್ಕಿದ ಆಗಂತುಕ ಒಲ್ಲದ ಮನಸ್ಸಿನಿಂದಲೇ  ಅದಕ್ಕೆ ಒಪ್ಪಿಗೆ ನೀಡುತ್ತಾನೆ. ಆದರೆ ಅವನ ಕಣ್ಣುಗಳನ್ನು ಕೀಳುವ ಮುನ್ನವೇ, ಮರುದಿನ ಅವನು ನೋಡುವ ಸೂರ್ಯೋದಯದ ಕಿರಣಗಳು ಅವನ ಮನಸ್ಸನ್ನು ಬದಲಾಯಿಸುತ್ತವೆ. ಕುರುಡರ ಕಣಿವೆಯನ್ನು ಹಿಂದೆ ಬಿಟ್ಟು ಮತ್ತೆ ಪರ್ವತ ಹತ್ತಿ ಬೆಳಕಿನ ನಾಡಿಗೆ ದಾರಿ ಹುಡುಕುತ್ತ ಮುಂದೆ ಸಾಗುತ್ತಾನೆ.


ಈ ಕಥೆಯಲ್ಲಿನ ಕಣ್ಣನ್ನು ಒಂದು ಅಭಿಪ್ರಾಯ ಎಂದುಕೊಂಡರೆ, ಈ ಕಥೆಯ ಪ್ರಮಾಣದಲ್ಲಿ ಅಲ್ಲದಿದ್ದರೂ, ನಾವು ನೀವುಗಳು ಈ ತರಹದ ಪರಿಸ್ಥಿಯಲ್ಲಿ ಸಿಕ್ಕಿ ಬಿದ್ದ ನೆನಪಾಗುದಿಲ್ಲವೇ? ಯಾವುದೊ ಭ್ರಮೆಯಲ್ಲಿ ಸಿಕ್ಕಿ ಬಿದ್ದ ಒಂದು ಸಮಾಜದ ಎಲ್ಲ ಜನರು ಒಂದೇ ತರಹ ವರ್ತಿಸುವುದು ಸಾಮಾನ್ಯ ವಿಷಯವೇ. ಅವರಿಗೆ ಅನುಭವಕ್ಕೆ ಬಂದದ್ದು ಅಷ್ಟೇ. ಸಮುದ್ರವನ್ನು ನೋಡದ ಭಾವಿಯ ಕಪ್ಪೆ ತನ್ನದೇ ದೊಡ್ಡ ಜಗತ್ತು ಅಂದ ಹಾಗೆ. ಪರಿಸ್ಥಿತಿಗೆ ಕಟ್ಟು ಬಿದ್ದು ಅಲ್ಲಿಯವರಲ್ಲಿ ಒಂದಾಗಿ ಹೋದ ಸಾಕಷ್ಟು ಜನರನ್ನು ನಾನು ನೋಡಿದ್ದೇನೆ. ಹಾಗೆಯೇ ಲಂಕೆಯ ರಾಕ್ಷಸರ ನಡುವೆ ತಾನು ಬದಲಾಗದೆ ಆದರೆ ಏನು ಮಾಡಲಾಗದೆ ಅಸಹಾಯಕನಾದ ವಿಭೀಷಣನ ತರಹದವರೂ ಇದ್ದಾರೆ. ಆದರೆ ಅಲ್ಲಿಂದ ಬೇಗ ಹೊರ ಬಂದಷ್ಟು ಜಾಣತನ ಎನ್ನುವುದು ನನ್ನ ಅಭಿಪ್ರಾಯ. ಅಂದ ಹಾಗೆ ನಿಮ್ಮ ಸ್ನೇಹಿತರಾರು? ಅವರೆಲ್ಲ ಒಂದೇ ತರಹ ವಾದಿಸುವವರಲ್ಲ ತಾನೇ?

No comments:

Post a Comment