ರೈತರ ಆದಾಯ ದ್ವಿಗುಣಗೊಳಿಸುವ ಯೋಜನೆ ಒಂದು ಒಳ್ಳೆಯ ಉದ್ದೇಶ. ಆದರೆ ಕೆಲವು ವಾಸ್ತವ ಸಂಗತಿಗಳನ್ನು ನಾವು ಗಮನಿಸುವುದು ಉತ್ತಮ. ತುಂಬಾ ಸರಳವಾಗಿ ವಿಚಾರ ಮಾಡಿದರೆ, ರೈತಣ್ಣನ ಆದಾಯ ದ್ವಿಗುಣವಾಗಲು ಆತ ಮಾರುವ ಕೃಷಿ ಉತ್ಪನ್ನಗಳ ಬೆಲೆ ದುಪ್ಪಟ್ಟಾಗಬೇಕು. ಇಲ್ಲವೇ ಆತನ ಖರ್ಚುಗಳು ಅರ್ಧಕ್ಕೆ ಕಡಿಮೆಯಾಗಬೇಕು. ಇಲ್ಲವೇ ಇವೆರಡು ಬೇರೆ ಬೇರೆ ಅನುಪಾತದಲ್ಲಿ ಬದಲಾಗಬೇಕು.
ಮೊದಲೆನಯದು, ಕೃಷಿ ಉತ್ಪನ್ನಗಳ ಬೆಲೆ ಹೆಚ್ಚಾಗಬೇಕೆಂದರೆ ಅದನ್ನು ಕೊಳ್ಳುವ ಗ್ರಾಹಕನಿಗೆ ಆ ಬೆಲೆಯನ್ನು ಕೊಡುವ ಸಾಮರ್ಥ್ಯವಿರಬೇಕು. ನಾವು ತರಕಾರಿ ಕೊಳ್ಳಲು ಹೋದಾಗ, ತುಂಬಾ ಹೆಚ್ಚಿನ ಬೆಲೆಯ ತರಕಾರಿಯನ್ನು ಕೊಂಡುಕೊಳ್ಳದೆ, ನಮಗೆ ಸರಿ ಅನ್ನಿಸುವ ಕಡಿಮೆ ಬೆಲೆಯ ತರಕಾರಿಯನ್ನು ಖರೀದಿ ಮಾಡುವುದಿಲ್ಲವೇ? ಅಂದರೆ ಬೆಲೆ ಹೆಚ್ಚಿಗೆ ಬಂದರೂ, ಅದನ್ನು ಖರಿಸದಿಸುವ ಗ್ರಾಹಕರು ಕಡಿಮೆ ಆಗಿ ಮತ್ತೆ ಗ್ರಾಹಕ ಯಾವ ಬೆಲೆ ಕೊಡಲು ಸಾಧ್ಯವೋ ಅಲ್ಲಿಗೆ ಅಕ್ಕಿ-ಬೆಳೆಯಾಗಲಿ, ಹಣ್ಣು-ತರಕಾರಿಯಾಗಲಿ, ಎಲ್ಲ ಕೃಷಿ ಉತ್ಪನ್ನಗಳ ಬೆಲೆಗಳು ಬಂದು ನಿಲ್ಲುತ್ತವೆ. ಬೆಲೆ ಕಡಿಮೆ ಆಗದಿದ್ದರೆ, ಹೆಚ್ಚಿನ ಬೆಲೆಯ ಉತ್ಪನ್ನಗಳು ಕಡಿಮೆ ಮಟ್ಟದಲ್ಲಿ ಖರ್ಚಾಗಿ, ಕಡಿಮೆ ಬೆಲೆಯ ಉತ್ಪನ್ನಗಳು ಜಾಸ್ತಿ ಎನ್ನುವಷ್ಟು ಖರ್ಚಾಗುತ್ತವೆ. ಭಾರತ ಇನ್ನೂ ಬಡ ದೇಶ ಅಲ್ಲವೇ. ಇಲ್ಲಿನ ಹೆಚ್ಚಿನ ಜನರ ಆದಾಯ ಅಷ್ಟಕಷ್ಟೇ ಎನ್ನುವಂತಿದ್ದರೆ ಅವರು ರೈತನಿಗೆ ದುಪ್ಪಟ್ಟು ಬೆಲೆ ಹೇಗೆ ಕೊಟ್ಟಾರು? ಇದು ಬರಿ ಕೃಷಿ ಉತ್ಪನ್ನಗಳಿಗೆ ಸೀಮಿತ ಅಲ್ಲ. ಮಾರುಕಟ್ಟೆಯಲ್ಲಿನ ಎಲ್ಲ ವಸ್ತುಗಳ ಬೆಲೆ ನಿರ್ಧರಿತವಾಗುವುದು ಹಾಗೆಯೇ. ಭಾರತದ ಪ್ರಜೆಯ ಸರಾಸರಿ ಆದಾಯ ಹೆಚ್ಚಾಗದ ಹೊರತು, ಬರಿ ರೈತನ ಆದಾಯ ಹೆಚ್ಚಾಗುವುದು ಹೇಗೆ ಸಾಧ್ಯ?
ಇನ್ನೂ ರೈತನ ಖರ್ಚುಗಳ ಕಡೆಗೆ ಗಮನ ಹರಿಸೋಣ. ಅವನು ಕೊಂಡುಕೊಳ್ಳುವ ಬೀಜ, ಗೊಬ್ಬರ, ಕ್ರಿಮಿನಾಶಕ ಇತರೆ ವಸ್ತುಗಳ ಬೆಲೆಯನ್ನು ಅರ್ಧಕ್ಕೆ ಇಳಿಸಲು ಸಾಧ್ಯವೇ? ಅವನ ಹೊಲಗಳಲ್ಲಿ ದುಡಿಯುವ ಕೂಲಿ ಕಾರ್ಮಿಕರ ದಿನಗೂಲಿಯನ್ನು ಅರ್ಧಕ್ಕೆ ಇಳಿಸಲು ಸಾಧ್ಯವೇ? ಹಾಗಾದಲ್ಲಿ, ಅವರು ಹೊಲಗಳಿಗೆ ಕೂಲಿ ಹೋಗುವುದು ಬಿಟ್ಟು ಇತರೆ ಕೆಲಸಗಳಿಗೆ ವಲಸೆ ಹೋಗುವುದಿಲ್ಲವೆ? ಈ ಸಮಸ್ಯೆಯನ್ನು ರೈತ ಆಗಲೇ ಅನುಭವಿಸುತ್ತಿಲ್ಲವೇ?
ಆದರೆ, ರೈತ ಬೆಳೆದ ಉತ್ಪನ್ನ ಕೆಡದಂತೆ, ಬೆಲೆ ಬರುವವರೆಗೆ ದಾಸ್ತಾನು ಮಾಡಲು ಸಹಾಯವಾಗುವಂತೆ ಉಗ್ರಾಣಗಳು ಇದ್ದರೂ, ಅವುಗಳ ಪ್ರಮಾಣ ಇನ್ನಷ್ಟು ಹೆಚ್ಚಿಸಬಹುದು. ಅವನ ಪಂಪ್ಸೆಟ್ ಗೆ ಉಚಿತ ಅಥವಾ ರಿಯಾಯಿತಿ ದರದ ವಿದ್ಯುತ್ ನೀಡುವುದು ಮುಂದುವರೆಸಬಹುದು. ಬೆಂಬಲ ಬೆಲೆ, ಕನಿಷ್ಟ ಬೆಲೆ, ಇವುಗಳು ರೈತ ಬದುಕುಳಿಯುವುದು ಸಾಧ್ಯವಾಗುವಂತೆ ಮಾಡುತ್ತವೆ ಹೊರತು ಅವನ ಆದಾಯ ದುಪ್ಪಟ್ಟಾಗಲು ಶೀಘ್ರದಲ್ಲಿ ಹೇಗೆ ಸಾಧ್ಯ?
ಇಷ್ಟಕ್ಕೂ ದೊಡ್ಡ ಮತ್ತು ಮಧ್ಯಮ ರೈತರು ಉಪವಾಸವೇನು ಇಲ್ಲ. ಅವರು ಆರ್ಥಿಕವಾಗಿ ಹೆಚ್ಚೇನು ಹಿಂದೆ ಬಿದ್ದಿಲ್ಲ. ಆದರೆ ಅರ್ಧಕ್ಕೂ ಹೆಚ್ಚು ಸಣ್ಣ ಪ್ರಮಾಣದ ರೈತರೇ ಇದ್ದಾರಲ್ಲ. ಅವರಿಗೆ ಇರುವುದೇ ಎರಡು-ಮೂರು ಎಕರೆ ಜಮೀನು. ಇವರಿಗೆ ಸಹಾಯದ ಅವಶ್ಯಕತೆ ಇದ್ದರೂ, ಉಳಿದ ಸಮಾಜವನ್ನು ಮೇಲಕ್ಕೆತ್ತದ ಹೊರತು ಸಣ್ಣ ರೈತರನ್ನಷ್ಟೇ ಉದ್ಧಾರ ಮಾಡುವುದು ಹೇಗೆ ಸಾಧ್ಯ?
ಯಾವುದೇ ಭೂಮಿ ಇಲ್ಲದ, ಸಾಕಷ್ಟು ಜನ ಕೂಲಿ ಕಾರ್ಮಿಕರು ದಿನಗೂಲಿಯಲ್ಲಿ ಬದುಕುತ್ತಿದ್ದಾರಲ್ಲ. ಅವರೇಕೆ ನಮಗೆ ನೆನಪಾಗುತ್ತಿಲ್ಲ? ಅವರೆಲ್ಲ ಮುಂದೆ ಬರದೇ, ಹೆಚ್ಚಿನ ಬೆಲೆ ಕೊಟ್ಟು ರೈತನನ್ನು ಉದ್ಧಾರ ಮಾಡಲು ಹೇಗೆ ಸಾಧ್ಯ? ಕೃತಕವಾಗಿ ಬೆಲೆ ಹೆಚ್ಚಿಸಿ, ಬರೀ ಮೇಲ್ವರ್ಗದವರೇ ಎಲ್ಲ ವಸ್ತು ಕೊಂಡುಕೊಂಡರೆ, ಕೂಲಿ, ಕಾರ್ಮಿಕರು ಉಣ್ಣಬೇಕಾದದ್ದು ಏನು?
ನಾನು ಯಾವ ಸರ್ಕಾರದ ಪರವಾಗಿಯೂ ಅಥವಾ ವಿರುದ್ಧವಾಗಿಯೂ ಧ್ವನಿ ಎತ್ತುತ್ತಿಲ್ಲ. ಆದರೆ ನಮ್ಮ ಸಮಾಜವನ್ನು ರಾಜಕಾರಣಿಗಳು, ಅಧಿಕಾರಿಗಳು ಮತ್ತು ಸಾಮಾನ್ಯ ಜನರು ಅರ್ಥ ಮಾಡಿಕೊಳ್ಳುವ ರೀತಿ ತುಂಬಾ ಬೇರೆ ಎನಿಸಿತು. ಹಾಗಾಗಿ ಕೆಲವು ಮೂಲಭೂತ ಪ್ರಶ್ನೆಗಳನ್ನು ಹಾಕಿಕೊಂಡು, ನಿಮ್ಮ ಹತ್ತಿರ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದೇನೆ.
No comments:
Post a Comment