ನಾವೇ ಅಲ್ಲದಿದ್ದರೆ, ನಮ್ಮ ನಿಮ್ಮ ನಡುವೆ ಅಲ್ಲೊಬ್ಬರು, ಇಲ್ಲೊಬ್ಬರು ಇರುತ್ತಾರೆ. ಅವರು ಯಾರಿಗಾದರೂ ಸಹಾಯ ಮಾಡುವ ಮುನ್ನ "ಅವರು ನಮಗೇನು ಸಹಾಯ ಮಾಡಿದ್ದಾರೆ?" ಎಂದು ಪ್ರಶ್ನೆ ಕೇಳುತ್ತಾರೆ. ಅವರಿಗೆ ಜೀವನ ಒಂದು ವ್ಯವಹಾರ ಎನಿಸಿದ್ದರೆ ಅದು ಅವರ ಅಭಿಪ್ರಾಯ. ಇದು ಲೌಕಿಕವಾಗಿ ಸಾಮಾನ್ಯ ವಿಷಯ ಎಂದು ಅನಿಸಿದರೂ ಇದರ ಬಗ್ಗೆ ಸ್ವಲ್ಪ ವಿಚಾರ ಮಾಡಿ ನೋಡೋಣ.
ನಾವು ಹುಟ್ಟಿದ್ದು ಅಸಹಾಯಕ ಪರಿಸ್ಥಿತಿಯಲ್ಲಿ. ನಾವು ಇನ್ನು ಕೂಸಾಗಿದ್ದಾಗ ಅಮ್ಮ, ಅಜ್ಜಿ, ಅಕ್ಕ ಹೀಗೆ ಹಲವಾರು ವ್ಯಕ್ತಿಗಳು ಲಾಲನೆ ಪಾಲನೆ ಮಾಡಬೇಕಿತ್ತಲ್ಲವೇ? ಹಾಗೆಯೆ ನಾವು ಸತ್ತಾಗ ಕೂಡ ಯಾರೋ ನಮ್ಮನ್ನು ಹೊತ್ತುಕೊಂಡು ಹೋಗಬೇಕು. ಹುಟ್ಟು, ಸಾವಿನ ನಡುವೆ ಕೂಡ ನಾವು ಸಂಪೂರ್ಣ ಸ್ವಾವಲಂಬಿಯಾಗಿಲ್ಲ. ನಾವು ಶಾಲೆಯಲ್ಲಿದ್ದಾಗ ನಮ್ಮ ಪ್ರತಿಭೆ ಕಂಡು ಪ್ರೋತ್ಸಾಹಿಸಿದ ಶಿಕ್ಷಕರಿದ್ದರಲ್ಲವೇ? ಅವರು ಆ ಕೆಲಸ ಮಾಡದೇ, ಬರಿ ಪಾಠ ಮಾಡಿದ್ದರೂ ಕೂಡ ಅವರಿಗೆ ಸಂಬಳ ಬರುತ್ತಿತ್ತು. ಅವರು ಈ ಹುಡುಗ ತಮಗೆ ಯಾವ ಸಹಾಯ ಮಾಡಿದ್ದಾನೆ ಎಂದು ಕೇಳಿಕೊಳ್ಳಲಿಲ್ಲ. ಕೆಲವೊಮ್ಮೆ ಅವಸರದಲ್ಲಿದ್ದಾಗ ದಾರಿಯಲ್ಲಿ ನಮಗೆ ಲಿಫ್ಟ್ ಕೊಟ್ಟು ಸರಿಯಾದ ಸಮಯಕ್ಕೆ ನಮ್ಮನ್ನು ಸ್ಥಳಕ್ಕೆ ಮುಟ್ಟಿಸುತ್ತಾರಲ್ಲ ಅಪರಿಚಿತರು, ಅವರಿಗೆ ನಾವು ಯಾವ ಸಹಾಯ ಮಾಡಿದ್ದು? ಕೆಲವು ವರ್ಷಗಳ ಹಿಂದೆ ನಾನು ಓಡಿಸುತ್ತಿದ್ದ ಕಾರು ಅಪಘಾತಕ್ಕೀಡಾದಾಗ, ಅಲ್ಲೇ ಇದ್ದ ಕೆಲ ಮಂಗಳಮುಖಿಯರು ನಮ್ಮ ಸಹಾಯಕ್ಕಾಗಿ ಧಾವಿಸಿದ್ದರು. ನಮಗೆ ಅವರ ಪರಿಚಯ ಇದ್ದಿಲ್ಲ ಮತ್ತು ನಾವು ಅವರಿಗೆ ಹಿಂದೆ ಯಾವ ಸಹಾಯ ಮಾಡಿದ್ದಿಲ್ಲ. ಯಾವುದೊ ಕಷ್ಟದ ಸಮಯದಲ್ಲಿ ನಮ್ಮ ಜೊತೆಗೆ ನಿಲ್ಲುವ ಸ್ನೇಹಿತನಿಗೆ ನಾವು ಹಿಂದೆ ಸಹಾಯ ಮಾಡಿರಲೇಬೇಕು ಎಂದೇನಿದೆ? ಅವರೆಲ್ಲರೂ "ಇವರು ನಮಗೇನು ಸಹಾಯ ಮಾಡಿದ್ದಾರೆ?" ಎಂದು ನಮ್ಮ ಬಗ್ಗೆ ಕೇಳಿಕೊಂಡಿದ್ದರೆ ನಮ್ಮ ಜೀವನ ಹೇಗಿರುತ್ತಿತ್ತು?
ಜಗತ್ತಿನಲ್ಲಿ ಸ್ವಾರ್ಥಿಗಳೇ ತುಂಬಿರಬಹುದು. ಆದರೆ ಸ್ವಾರ್ಥವನ್ನು ಮೆಟ್ಟಿ ನಿಲ್ಲುವ ಜನರೂ ಇದ್ದಾರಲ್ಲ. ಸ್ವತ ಬ್ರಹ್ಮಚಾರಿಯಾದ ಶಿವಕುಮಾರ ಸ್ವಾಮಿಗಳು ಸಿದ್ಧಗಂಗೆಯಲ್ಲಿ ಮಠ ಕಟ್ಟಿ, ಸಾವಿರಾರು ಜನರ ಮಕ್ಕಳಿಗೆ ಆಸರೆಯಾಗಲಿಲ್ಲವೇ? ಅವರ ಮನಸ್ಸಿನಲ್ಲಿ "ಇವರು ನಮಗೇನು ಸಹಾಯ ಮಾಡಿದ್ದಾರೆ?" ಎನ್ನುವ ಪ್ರಶ್ನೆ ಯಾವತ್ತೂ ಬಂದಿರಲಿಕ್ಕಿಲ್ಲ. ದಿನ ನಿತ್ಯ ದಾಸೋಹ ನಡೆಸುವ ಧರ್ಮಸ್ಥಳದ ಹೆಗ್ಗಡೆಯವರು ಬಂದಿರುವ ಭಕ್ತರಿಗೆ "ಇವರು ನಮಗೇನು ಸಹಾಯ ಮಾಡಿದ್ದಾರೆ?" ಎಂದು ಯಾವತ್ತಾದರೂ ಕೇಳಿದ್ದಾರೆಯೇ? ಸ್ವಾರ್ಥಿಗಳು ಸಾವಿರಾರು ಜನ ಇದ್ದರೂ, ಅದನ್ನು ಮೆಟ್ಟಿ ನಿಲ್ಲುವ ಒಬ್ಬೊಬ್ಬ ವ್ಯಕ್ತಿ ಸಮಾಜವನ್ನು ಮುನ್ನಡೆಸುತ್ತಾ ಹೋಗುತ್ತಾನೆ.
ನಾವು ಅಂತಹ ಮಹಾ ಪುರುಷರು ಆಗದಿದ್ದರೂ ಪರವಾಗಿಲ್ಲ. ಆದರೆ ನಮ್ಮ ಕೈಲಾಗುವ ಸಣ್ಣ ಪುಟ್ಟ ಸಹಾಯ ಮಾಡಲು ನಾವು "ಅವರು ನಮಗೇನು ಸಹಾಯ ಮಾಡಿದ್ದಾರೆ?" ಎಂದು ಪ್ರಶ್ನೆ ಕೇಳಿಕೊಳ್ಳಬೇಕೇ? ಯಾರೋ ವಂಚಕರಿಗೆ ಸಹಾಯ ಮಾಡಿ ಎಂದು ನಾನು ಹೇಳುತ್ತಿಲ್ಲ. ಇಲ್ಲವೇ ಉದಾರಿಯಾಗಿ ದಾನ ಧರ್ಮಕ್ಕೆ ನಿಲ್ಲಿ ಎಂದೂ ಹೇಳುತ್ತಿಲ್ಲ. ಆದರೆ ನಿಜ ಅವಶ್ಯಕತೆ ಇದೆ ಎಂದು ನಮಗೆ ಅನಿಸಿದಲ್ಲಿ ಮತ್ತು ಆ ಸಹಾಯದಿಂದ ನಾವು ಹೆಚ್ಚು ಏನು ಕಳೆದುಕೊಳ್ಳುವಿದಿಲ್ಲ ಎಂದಲ್ಲಿ, ಆಗ ನಾವು ಪ್ರಶ್ನೆ ಕೇಳಿಕೊಳ್ಳುವ ಅಗತ್ಯವೇನಿದೆ? ನಮ್ಮಿಂದ ಸಹಾಯ ಪಡೆದ ಜನರಿಗೆ ನಮಗೆ ಸಹಾಯ ಮಾಡುವ ಸಾಮರ್ಥ್ಯ ಇರದೇ ಇರಬಹುದು ಅಥವಾ ಅಂತಹ ಪರಿಸ್ಥಿತಿ ಬರದೇ ಹೋಗಬಹುದು. ಅಥವಾ ಅವರು ನಮ್ಮನ್ನು ಮರೆತು ಕೂಡ ಹೋಗಬಹುದು. ಯಾವುದೇ ಸಹಾಯಕ್ಕೆ ಮುನ್ನ ಅದರಿಂದ ನಮಗೇನು ಲಾಭ ಎಂದು ಕೇಳಿಕೊಳ್ಳುತ್ತಾ ಹೋದರೆ, ನಮ್ಮ ಸುತ್ತ ಮುತ್ತ ಅಂತಹ ಜನರೇ ತುಂಬುತ್ತ ಹೋಗುವುದಿಲ್ಲವೆ?
ಆದರೆ ನಮ್ಮ ಕುಟುಂಬದಲ್ಲೇ ಆ ಪ್ರಶ್ನೆ ಕೇಳುವ ಜನರಿದ್ದರೆ ಏನು ಮಾಡುವುದು? ಮತ್ತು ಅವರು ನಿಮ್ಮ ಕೈ ತಡೆದರೆ ನೀವು ಆಗೇನು ಮಾಡುವಿರಿ? ನನ್ನನ್ನು ಕುಟುಂಬದವರು ಬುದ್ಧಿಗೇಡಿ ಎಂದು ಕರೆದರೂ, ನನಗೆ ಮಾತ್ರ ಆ ಪ್ರಶ್ನೆ ಕೇಳಿಕೊಳ್ಳಲು ಆಗುತ್ತಿಲ್ಲ. ನನಗೆ ಹಿಂದೆ ಸಹಾಯ ಮಾಡಿದ ಅನೇಕ ಅಪರಿಚಿತರೇ ನನಗೆ ಆದರ್ಶ. ಅವರು ನನ್ನ ಜೊತೆ ಯಾವುದೇ ವ್ಯವಹಾರದ ಅಥವಾ ಋಣ ಸಂದಾಯದ ಮಾತು ಆಡಲಿಲ್ಲ. ಸ್ವಾರ್ಥಿಗಳು, ವಂಚಕರ ನಡುವೆಯೂ ಸಮಾಜದ ಬಗ್ಗೆ ವಿಶ್ವಾಸ ಹುಟ್ಟಿಸುವ ವ್ಯಕ್ತಿಗಳು, ಪ್ರತಿಫಲ ಬಯಸದೆ ಮಾಡುವ ಕೆಲಸಗಳು ಉಂಟು ಮಾಡುವ ನೆಮ್ಮದಿಯನ್ನು ತೋರಿಸಿಕೊಡುತ್ತಾರೆ ಅಲ್ಲವೇ? ಅವರು ಕೇಳಿಕೊಳ್ಳದ ಪ್ರಶ್ನೆ ನಾವೇಕೆ ಕೇಳಿಕೊಳ್ಳಬೇಕು?
No comments:
Post a Comment