ಬೆಂಗಳೂರಿನಲ್ಲಿ ರಸ್ತೆಗಿಳಿದರೆ ಸಾಕು. ಅಲ್ಲಿ ವಾಹನಗಳು ನಾ ಮುಂದು, ನೀ ಮುಂದು ಎಂದು ನುಗ್ಗುತ್ತಿರುತ್ತವೆ. ಎಲ್ಲರಿಗೂ ಅವಸರ. ಆಂಬುಲೆನ್ಸ್ ವಾಹನದ ಅವಸರ ಅರ್ಥವಾಗುತ್ತದೆ. ಆದರೆ ಉಳಿದವರಿಗೆ ೫-೧೦ ನಿಮಿಷ ತಮ್ಮ ಮನೆ, ಆಫೀಸ್ ಬೇಗ ತಲುಪಿದರೆ ಅವರ ಜೀವನ ತುಂಬಾ ಏನು ಬದಲಾಗುವಿದಿಲ್ಲ. ಆದರೆ ರಸ್ತೆಯಲ್ಲಿ ಸ್ಪರ್ಧೆಗೆ ಬಿದ್ದವರ ಹಾಗೆ ವಾಹನ ಚಲಾಯಿಸುತ್ತಾರೆ. ಮೊನ್ನೆ ವಿಧಾನ ಪರಿಷತ್ತಿನಲ್ಲಿ ಕುರ್ಚಿಗಾಗಿ ಕಾದಾಡಿದರಲ್ಲ ನಮ್ಮ ಜನ ನಾಯಕರು, ಅವರೂ ಸ್ಪರ್ಧೆಗೆ ಬಿದ್ದವರೇ. ಆ ಕುರ್ಚಿ ನಮ್ಮ ಪಕ್ಷಕ್ಕೆ ಸೇರಿದ್ದು ಎಂದು ಒಂದು ಪಕ್ಷದವರು, ಇಲ್ಲ ನಮ್ಮ ಪಕ್ಷಕ್ಕೆ ಸೇರಿದ್ದು ಅಂದು ಇನ್ನೊಬ್ಬರು. ನಾನು ಕೆಲಸ ಮಾಡುವ ಆಫೀಸ್ ನಲ್ಲಿ, ಕೆಲವು ಸಹೋದ್ಯೋಗಿಗಳು ಯಾರನ್ನು ಬೇಕಾದರೂ ತುಳಿದು, ಪ್ರಮೋಷನ್ ಗಿಟ್ಟಿಸಿಕೊಳ್ಳಲು ಸಾಹಸ ಪಡುತ್ತಿರುತ್ತಾರೆ. ನನ್ನ ಕೆಲವು ಸ್ನೇಹಿತರು, ಬಂಧುಗಳು, ತಾವು ಉಳಿದವಿರಿಗಿಂತ ಉತ್ತಮ ವರ್ಗದವರು ಎಂದು ತೋರಿಸಿಕೊಳ್ಳಲು ಅನವರತ ಪ್ರಯತ್ನ ಪಡುತ್ತಿರುತ್ತಾರೆ.
ಖ್ಯಾತ ಸಾಹಿತಿ ಶಿವರಾಮ ಕಾರಂತರ ಒಂದು ಜನಪ್ರಿಯ ಕಾದಂಬರಿಯ ಹೆಸರು 'ಗೆದ್ದ ದೊಡ್ಡಸ್ತಿಕೆ'. ಗೆದ್ದು ದೊಡ್ಡಸ್ತಿಕೆಯನ್ನು ತೋರಿಸಿಕೊಳ್ಳಲು ಹೆಣಗಾಡುವುದೇ, ಸಾಕಷ್ಟು ಜನರ ಜೀವನ ಗುರಿ. ರಸ್ತೆಯಲ್ಲಿ ಎಲ್ಲರನ್ನು ಹಿಂದೆ ಹಾಕುವುದು, ಅವಶ್ಯಕತೆಗಿಂತ ಅಂತಸ್ತಿಗಾಗಿಯೇ ದೊಡ್ಡ ಮನೆ ಕಟ್ಟಿ ಮೆರೆಯುವುದು, ಎದುರಾಳಿಗಳನ್ನು ತುಳಿದು ಹಾಕುವುದೇ ರಾಜಕೀಯ ಎನ್ನುವುದು. ಹೀಗೆ ಈ ಸ್ಪರ್ಧೆ, ಗೆದ್ದ ದೊಡ್ಡಸ್ತಿಕೆ ಎನ್ನುವುದು ಇರದೇ ಇದ್ದಿದ್ದರೆ, ಜನರಿಗೆ ಜೀವನವೇ ಬೇಸರ ಆಗಿಬಿಡುತ್ತಿತ್ತು. ಹಿಂದೆ ಬಿದ್ದವರು, ನಮ್ಮ ಗೆಲುವನ್ನು ಒಪ್ಪಿಕೊಳ್ಳುತ್ತಾರೋ, ಇಲ್ಲವೋ. ಆದರೆ ನಮಗೆ ಮಾತ್ರ ಗೆದ್ದು ದೊಡ್ಡಸ್ತಿಕೆಯಲ್ಲಿ ಬೀಗಬೇಕು.
ಏಕೆ ಹೀಗೆ ಎಂದು ವಿಚಾರ ಮಾಡಿದರೆ, ಚಿಕ್ಕಂದಿನಿಂದ ನಮ್ಮ ಸಮಾಜ ಪರೋಕ್ಷವಾಗಿ ಇದನ್ನೇ ಹೇಳಿಕೊಟ್ಟದ್ದು. ಶಾಲೆಯಲ್ಲಿರುವಾಗ ಓಟದ ಪಂದ್ಯ ಇರಲಿಲ್ಲವೇ? ಪ್ರಥಮ ಸ್ಥಾನ ಒಂದೇ ಇದ್ದರೂ, ಅದು ನಮ್ಮದೇ ಎಂದುಕೊಂಡು ಎಲ್ಲರೂ ಓಡುವುದಿಲ್ಲವೇ? ಮುಂದೆ ಅದೇ ಓಟವನ್ನು ನಮ್ಮ ವೃತ್ತಿಯಲ್ಲಿ ಮುಂದುವರೆಸಿಕೊಂಡು ಹೋಗುತ್ತವೆ. ಹಾಗೆಯೇ ಜೀವನದಲ್ಲಿ ನಾವೂ ತೆಗೆದುಕೊಳ್ಳುವ ಅನೇಕ ನಿರ್ಧಾರಗಳು ಇದರಿಂದ ಪ್ರಭಾವಿತಗೊಳ್ಳುತ್ತವೆ. ವಿಚಾರ ಮಾಡಿ ನೋಡಿ. ನಮ್ಮ ಅನೇಕ ಕಷ್ಟಗಳು, ಬೇರೆಯವರ ದೊಡ್ಡಸ್ತಿಕೆಗೆ ಹುಟ್ಟಿದವು. ನಮ್ಮ ಅಣ್ಣ ತಮಂದಿರು, ಅಸ್ತಿ ಮಾಡಿದರು. ನಮ್ಮ ಸಹೋದ್ಯೋಗಿ ಅಂತಹ ಮನೆ ಕಟ್ಟಿಸಿದ. ನಮ್ಮ ನೆರೆಯವನು ಜುಮ್ ಎಂದು ಹೊಸ ಐಷಾರಾಮಿ ಕಾರಿನಲ್ಲಿ ಓಡಾಡುತ್ತಾನೆ. ಅವು ಎಲ್ಲ ನಮಗೆ ಬೇಕಿತ್ತೋ ಇಲ್ಲವೋ ಎಂದು ವಿಚಾರ ಮಾಡುವುದಿಲ್ಲ. ಅದರ ಬದಲು ನಾವು ಗೆಲ್ಲಬೇಕೆಂದರೆ, ಅವರಿಗಿಂತ ಹೆಚ್ಚು ಸಾಧಿಸಬೇಕು ಎಂದು ಹೊರಡುತ್ತೇವೆ. ಸ್ಪರ್ಧೆ ಒಂದಾದರ ನಂತರ ಇನ್ನೊಂದರಂತೆ ಮುಂದುವರೆಯುತ್ತ ಹೋಗುತ್ತದೆ. ನೀವು ಒಬ್ಬರೊಡನೆ ಜಿದ್ದಿಗೆ ಬಿದ್ದು, ಅದರಲ್ಲಿ ಸಫಲರಾದರೂ, ಆ ಸಂತೋಷ ನಿಮ್ಮಲ್ಲಿ ಬಹಳ ದಿನ ಉಳಿಯಲಾರದು. ಏಕೆಂದರೆ ನೀವು ಪ್ರಯತ್ನ ಪಟ್ಟಿದ್ದು ಅವರ ಜೀವನದ ಗುರಿಯಲ್ಲಿ, ಅವರಿಗಿಂತ ಮುಂದೆ ಹೋಗಲು. ಅಲ್ಲಿ ಮುಟ್ಟಿದ ಮೇಲೆ ನಿಮಗರಿವಾಗುತ್ತದೆ. ಅರೆರೇ, ಇದಲ್ಲ ನಾನು ಜೀವನದಲ್ಲಿ ಸಾಧಿಸಲು ಬಯಸಿದ್ದು. ಅಷ್ಟರಲ್ಲಿ ಸಾಕಷ್ಟು ಸಮಯ, ಹಣ ಮತ್ತು ನಿಮ್ಮ ಅಮೂಲ್ಯ ಜೀವನ ವ್ಯರ್ಥವಾಗಿರುತ್ತದೆ.
ಜೀವನದಲ್ಲಿ ಎಲ್ಲರೂ ಓಡುತ್ತಿರುವವರೇ. ಆದರೆ ಸಾಕಷ್ಟು ಜನರಿಗೆ ಆ ಸ್ಪರ್ಧೆ ತಮಗೆ ಬೇಕೋ, ಬೇಡವೋ ಎಂದು ಕೇಳಿಕೊಳ್ಳುವ ವ್ಯವಧಾನವಿಲ್ಲ. ಗೆದ್ದವನ ದೊಡ್ಡಸ್ತಿಕೆಯೂ ಬಹಳ ದಿನ ಉಳಿಯುವುದಿಲ್ಲವಲ್ಲ. ಅವನು ಕಾಲ ಚಕ್ರಕ್ಕೆ ಸಿಕ್ಕಿ ಹಿಂದೆ ಬಿದ್ದು, ಮುಂದೆ ಸಾಗಿದವರನ್ನು ಪೆಚ್ಚಾಗಿ ನೋಡುತ್ತಾ ನಿಲ್ಲುತ್ತಾನೆ. ನಿಜ ಧೈರ್ಯ ಇರುವುದು, ಅನವಶ್ಯಕ ಸ್ಪರ್ಧೆ ಮಾಡುವುದರಲ್ಲಿ ಅಲ್ಲ. ಜಾಗೃತೆಯಿಂದ ಅದರಿಂದ ಹಿಂದೆ ಸರಿಯುವುದರಲ್ಲಿ. ನಮ್ಮ ಗುರಿ ಸಾಧನೆ ನಮ್ಮ ಸಂತೋಷಕ್ಕೆ ಆದರೆ ಅದು ಬಹು ಕಾಲ ಉಳಿದೀತು ಎನ್ನುವುದು ನನ್ನ ಅಭಿಪ್ರಾಯ.
No comments:
Post a Comment