Showing posts with label ಕನ್ನಡ ಬರಹಗಳು. Show all posts
Showing posts with label ಕನ್ನಡ ಬರಹಗಳು. Show all posts

Friday, June 9, 2023

ಬೆಂಗಳೂರಿನ ನಾನಾ ಮುಖಗಳು

ಸುಮಾರು ಒಂದೂವರೆ ಕೋಟಿ ಜನ ಜೀವನ ಸಾಗಿಸುವ ಬೆಂಗಳೂರು ನಗರಿಯಲ್ಲಿವಾಸಿಸುವ ಎಲ್ಲ ಜನರ ಅನುಭವಗಳು ಒಂದೇ ಆಗಿರಲು ಸಾಧ್ಯ ಇಲ್ಲ. ಇಲ್ಲಿ ಕೆಲವೇ ಸಾವಿರದಲ್ಲಿ ತಿಂಗಳ ಖರ್ಚು ನೀಗಿಸುವ ಕುಟುಬಗಳು ಇವೆ. ಹಾಗೆಯೇ ಕೋಟಿ ಹಣ ಖರ್ಚು ಮಾಡುವ ಕುಟುಂಬಗಳು ಕೂಡ ಇವೆ. ಮಂದ ಗತಿಯಲ್ಲಿ ಸಾಗುವ ಬಿಎಂಟಿಸಿ ಬಸ್ಸುಗಳಲ್ಲಿ ಪ್ರಯಾಣ ಮಾಡುವ ಜನ ಇದ್ದಾರೆ. ಅದೇ ರಸ್ತೆಗಳಲ್ಲಿ ಐಷಾರಾಮಿ ಕಾರುಗಳಲ್ಲಿ ಪ್ರಯಾಣ ಮಾಡುವ ಜನ ಕೂಡ ಅಷ್ಟೇ ಇದ್ದಾರೆ. ವಿಕ್ಟೋರಿಯಾ-ಬೌರಿಂಗ್ ಆಸ್ಪತ್ರೆಗಳಲ್ಲಿ ವಾರಸುದಾರರಿಲ್ಲದ ಶವಗಳು ಇವೆ. ಲಕ್ಸುರಿ ಆಸ್ಪತ್ರೆಗಲ್ಲಿ ಸತ್ತವರಿಗೆ ಕಣ್ಣೀರು ಸುರಿಸದ ಆದರೆ ಅಪಾರ ಸಂಪತ್ತಿಗೆ ವಾರಸುದಾರರು ಆದವರು ಕೂಡ ಇದ್ದಾರೆ. ಇಲ್ಲಿ ಹಳ್ಳಿ-ಚಿಕ್ಕ ಊರುಗಳಲ್ಲಿ ಇರುವ ಹಾಗೆ ಒಂದು ತರಹದ ಸಂಸ್ಕೃತಿ ಇಲ್ಲವೇ ಇಲ್ಲ. ಇದು ಅನೇಕ ವಿರೋಧಾಭಾಸಗಳು ಒಟ್ಟಿಗೆ ಕಾಣುವ ಊರು.

ನಿಮಗೆ ಬೆಂಗಳೂರು ಅಂದರೆ ಏನು? ಗಿಜಿಗುಟ್ಟುವ ಮೆಜೆಸ್ಟಿಕ್ ಅಷ್ಟೇನಾ? ಜೇಬಿಗೆ ಭಾರ ಎನ್ನಿಸುವ ಮಹಾತ್ಮಾ ಗಾಂಧೀ ರಸ್ತೆಯ ಅಂಗಡಿಗಳಾ? ರಾಜಕೀಯ ಶಕ್ತಿ ಪ್ರದರ್ಶನ ಮಾಡುವ ವಿಧಾನ ಸೌಧವಾ? ಅನೇಕ ಸಿನಿಮಾ ನಟರ ಮನೆಗಳಾ? ವೈಟ್ ಫೀಲ್ಡ್ ನಲ್ಲಿ ಓಡಾಡಿ ಇದು ಅಮೆರಿಕಕ್ಕೆ ಕಡಿಮೆ ಇಲ್ಲ ಅಂದು ಕೊಳ್ಳುವುದಾ? ಜಯದೇವ ಅಥವಾ ನಾರಾಯಣ ಆಸ್ಪತ್ರೆಗೆ ಓಡಾಡಿ ಸಂಬಂಧಿಕರ ಜೀವ ಉಳಿಸಿಕೊಳ್ಳಲು ಹೆಣಗುವುದಾ?  ದೇವನಹಳ್ಳಿಯ ವಿಮಾನ ನಿಲ್ದಾಣಕ್ಕೆ ಹೋಗಿ, ಇದು ಭಾರತ ಎನ್ನುವ ಬಡ ದೇಶದ ಭಾಗವೇ ಎಂದು ನಿಮಗೆ ನೀವೇ ಪ್ರಶ್ನೆ ಕೇಳಿಕೊಳ್ಳುವುದಾ?

ರವಿ ಬೆಳಗೆರೆ ಪುಟಗಟ್ಟಲೆ ಬರೆದ ಬೆಂಗಳೂರಿನ ಭೂಗತ ಲೋಕ ಇನ್ನೂ ಮರೆಯಾಗಿಲ್ಲ ಎನ್ನುವುದು ನನಗೆ ಇತ್ತೀಚಿಗೆ ಚಿತ್ರಮಂದಿರದಲ್ಲಿ 'ಹೆಡ್ ಬುಷ್' ಎನ್ನುವ ಚಿತ್ರ ನೋಡುವಾಗ ಅಲ್ಲಿ ನೋಡುಗರಲ್ಲಿ ನಡೆದ ವಾಗ್ವಾದ ನೋಡಿ ಮನೆವರಿಕೆ ಆಯಿತು. ಮೆಜೆಸ್ಟಿಕ್ ಮೆಟ್ರೋ ಸ್ಟೇಷನ್ ನಲ್ಲಿ ಸಾವಿರಾರು ಪ್ರಯಾಣಿಕರನ್ನು ವ್ಯವಸ್ಥಿತವಾಗಿ ನಿರ್ವಹಿಸಿವುದು ನೋಡಿ ನ್ಯೂಯಾರ್ಕ್ ನಗರದ ಜಾನ್ ಎಫ್ ಕೆನಡಿ ವಿಮಾನ ನಿಲ್ದಾಣದ ಜನಸಂದಣಿಗೆ ಏನು ಕಡಿಮೆ ಇಲ್ಲ ಎನಿಸಿತು. ನಮ್ಮ ಮನೆ ಹತ್ತಿರ ಒಬ್ಬ ಗಂಡ-ಮಕ್ಕಳಿಲ್ಲದ ಹೆಣ್ಣು ಮಗಳು ನಡೆಸುವ ಅನಾಥಾಶ್ರಮ ನೋಡಿ ಇದೆ ದೇಶದಲ್ಲಿ ಮದರ್ ತೆರೇಸಾ ಬದುಕಿದ್ದಲ್ಲವೇ ಎಂದು ನೆನಪಾಯಿತು.

ನಾನು ಮೊದಲು ಬೆಂಗಳೂರಿಗೆ ಬಂದದ್ದು ಶಾಲೆ ಪ್ರವಾಸದ ವೇಳೆ. ನಂತರ ಕಾಲೇಜು ಕಲಿಯುವಾಗ ತರಬೇತಿಗೆ ಎಂದು ಒಂದು ತಿಂಗಳು ಇದ್ದೆ. ನಂತರ 1999 ಆಗಸ್ಟ್  ೧೫ ರಂದು ನೌಕರಿ ಹುಡುಕಿಕೊಂಡು ಬಂದ ಮೇಲೆ ಇದೆ ನನ್ನ ಮನೆಯಾಗಿದೆ. ಬರೀ ನನ್ನ  ಜೀವನೋಪಾಯಕ್ಕಲ್ಲದೆ ಅವಲಂಬಿತರಿಗೆ ಸಹಾಯ ಮಾಡುವಷ್ಟು ಶಕ್ತಿ ತುಂಬಿದೆ. ಸುಮಾರು ಇಪ್ಪತ್ತು ನಾಲ್ಕು ವರುಷಗಳನ್ನು ಇಲ್ಲಿ ಕಳೆದ ಮೇಲೂ, ಈ ನಗರ ನನಗೆ ಅಚ್ಚರಿ ತರುತ್ತದೆ.

ಹಿಂದೆ ನಾನ್ನು ಜೀವನ ಕಳೆದ ಊರುಗಳಲ್ಲಿ ಇದ್ದ ಹಾಗೆ ಇಲ್ಲಿ ಯಾರು ಸಾಧು-ಸಂತರಿಲ್ಲ. ಹಿಂದೆ ನಾನು ಇದ್ದ ಕಲ್ಬುರ್ಗಿಯಲ್ಲಿ ಶರಣಬಸವ ಅಪ್ಪನ ಗುಡಿಯಿತ್ತು. ಹುಬ್ಬಳ್ಳಿಯಲ್ಲಿ ಸಿದ್ಧಾರೂಢರ ಮಠ ಇತ್ತು. ಬೆಂಗಳೂರಿನಲ್ಲಿ ಇರುವುದು ಭಕ್ತರನ್ನು ಯಾಮಾರಿಸುವ ನಕಲಿ ಸ್ವಾಮಿಗಳು. ಇಲ್ಲಿ ಬೆವರನ್ನು ನಂಬಿ ಬದುಕುವ ಸಾಮಾನ್ಯರ ಹಾಗೆಯೇ ಮೋಸ ಮಾಡಿಯೇ ಜೀವನ ಸಾಗಿಸುವ ಜನರ ಸಂಖ್ಯೆ ಕೂಡ ಕಡಿಮೆ ಇಲ್ಲ. ಆದರೆ ಅವೆಲ್ಲ ವಿರೋಧಾಭಾಸಗಳ ನಡುವೆ ಇದು ಕೋಟ್ಯಂತರ ಜನರಿಗೆ ಆಶ್ರಯ ನೀಡಿದೆ.

ನಮ್ಮ ಆಫೀಸಿನ ಹೊರಗಡೆ ವೀರಭದ್ರೇಶ್ವರ ಖಾನಾವಳಿ ಇದ್ದ ಹಾಗೆ, ಆಂಧ್ರ ಬಿರಿಯಾನಿ ಊಟ ಕೂಡ ಅಷ್ಟೇ ಫೇಮಸ್. ಪಕ್ಕದಲ್ಲೇ ಬಂಗಾಳಿಯ ಶೈಲಿಯ ಮೀನು ಮಾಡುವ ಅಂಗಡಿ ಇದೆ. ಪಂಜಾಬಿ ಊಟ ಕೂಡ ಅದರ ಪಕ್ಕದಲ್ಲೇ. ಭಾರತದಲ್ಲಿ ಇರುವ ಎಲ್ಲ ತರಹದ ಅಡುಗೆ ಶೈಲಿಯ ಊಟಗಳು ಇಲ್ಲಿ ಲಭ್ಯ. ಅಷ್ಟೇ ಅಲ್ಲ. ಇಲ್ಲಿಗೆ ಭೇಟಿ ನೀಡುವ ವಿದೇಶಿಗರ ಅನುಕೊಲಕ್ಕಾಗಿ ಕಾಂಟಿನೆಂಟಲ್ ರುಚಿಗಳು ಕೂಡ ಲಭ್ಯ.

ಜೋಪಡಿಗಳಲ್ಲಿ, ತಾತ್ಕಾಲಿಕ ಶೆಡ್ ಗಳಲ್ಲಿ ಜನ ವಾಸ ಮಾಡಿದ ಹಾಗೆ  ಮಯ ನಿರ್ಮಿಸಿದ ಇಂದ್ರಪ್ರಸ್ಥದ ಹಾಗಿರುವ ಮನೆಗಳಲ್ಲಿ ಕೂಡ ಜನ ವಾಸ ಮಾಡುವುದು ನೀವು ಇಲ್ಲಿ ಗಮನಿಸಬಹುದು. ನಿಮಗೆ ದೇಶ ಸುತ್ತಲು ಸಾಧ್ಯ ಆಗದಿದ್ದರೆ, ಬೆಂಗಳೂರನ್ನು ಒಂದೆರಡು ಸಲ ಸುತ್ತಿ ಬಂದರೆ ಅಡ್ಡಿ ಇಲ್ಲ ಎನ್ನಬಹುದು. ತರಹೇವಾರಿ ಜನರನ್ನು ಮತ್ತು ವಿಶಿಷ್ಟ ಅನುಭವಗಳನ್ನು ಒಂದೇ ಸ್ಥಳದಲ್ಲಿ ಕೊಡುವ ಊರು ನಮ್ಮ ಬೆಂಗಳೂರು. ಇದು ನನಗೆ ಕೊಟ್ಟ ಅವಕಾಶಕ್ಕೆ ನಾನು ಋಣಿ.

ಮಗಳ ದೌರ್ಬಲ್ಯಗಳನ್ನು ಮುಚ್ಚಿ ಹಾಕಿದ ನಂತರ

'ಕೆಟ್ಟ ತಂದೆ ಇರಬಹುದು ಆದರೆ ಕೆಟ್ಟ ತಾಯಿ ಇರಲು ಸಾಧ್ಯ ಇಲ್ಲ' ಎನ್ನುವುದು ಸಾಕಷ್ಟು ಜನರ ಅನುಭವದ ಮಾತು. ಹಾಗೆಯೇ ಮುಂದೆ ಹೋಗಿ 'ಕೆಟ್ಟ ಮಗ ಹುಟ್ಟಬಹುದು ಆದರೆ ಕೆಟ್ಟ ಮಗಳು ಹುಟ್ಟಲು ಸಾಧ್ಯ ಇಲ್ಲ' ಎಂದು ಕೂಡ ಹೇಳಬಹುದು. ಸಾಕಷ್ಟು ಜನ ತಂದೆಯರಿಗೆ ತಮ್ಮ ಹೆಣ್ಣು ಮಕ್ಕಳೆಂದರೆ ಹೆಮ್ಮೆ. ಕಡೆಯ ಕಾಲದಲ್ಲಿ ಗಂಡು ಮಕ್ಕಳು - ಸೊಸೆಯಂದಿರು ಊಟ ಹಾಕದಿದ್ದಾಗ ತಮ್ಮ ತಂದೆ-ತಾಯಿಯನ್ನು ಸಲಹುವ ಹಲವಾರು ಹೆಣ್ಣು ಮಕ್ಕಳನ್ನು ನಾನು ನೋಡಿದ್ದೇನೆ. ತಂದೆ-ತಾಯಿಗೆ ಧೈರ್ಯ ಹೇಳುವ ಕೆಲಸ ಬೆಳೆದ ಹೆಣ್ಣು ಮಕ್ಕಳು ಮಾಡಿದರೆ, ಹೆಚ್ಚಿನ ಗಂಡು ಮಕ್ಕಳು ಅವರ ಪೋಷಕರಿಗೆ ತಲೆ ನೋವಾಗಿರುತ್ತಾರೆ.

ಹೆಣ್ಣು ಮಕ್ಕಳ ಮೇಲೆ ಇರುವ ಪ್ರೀತಿ, ತಂದೆಗೆ ಗಂಡು ಮಕ್ಕಳ ಮೇಲೆ ಇರಲು ಸಾಧ್ಯ ಇಲ್ಲ.  ಹಾಗೆಯೆ ಹೆಣ್ಣು ಮಕ್ಕಳಿಗೆ ಕೂಡ ತಂದೆಯೇ ಅವರ ಜೀವನದ ಮೊದಲ ಹೀರೋ. ಬೇರೆ ಯಾರು ಆ ಸ್ಥಾನಕ್ಕೆ ಪೈಪೋಟಿ ನೀಡಲು ಸಾಧ್ಯ ಇಲ್ಲವೇ ಇಲ್ಲ. ಇದನ್ನು ಬಹಳಷ್ಟು ಕುಟುಂಬಗಳಲ್ಲಿ ಗಮನಿಸಬಹುದು. ತಂದೆಯ ದೌರ್ಬಲ್ಯಗಳನ್ನು ಮಗಳು ಮುಚ್ಚಿ ಹಾಕಿದರೆ, ತಂದೆಗೆ ಅವನ ಮಗಳಲ್ಲಿ ದೌರ್ಬಲ್ಯಗಳನ್ನು ಹುಡುಕುವುದು ಸಾಧ್ಯವೇ ಆಗುವುದಿಲ್ಲ. ಪ್ರಕೃತಿ ಹುಟ್ಟು ಹಾಕಿದ ಈ ತಂದೆ-ಮಗಳ ಸಂಬಂಧ, ಮಗಳು ಮದುವೆ ಆಗುವವರೆಗೆ ಚೆನ್ನಾಗಿಯೇ ಇರುತ್ತದೆ. ಆದರೆ ಅಲ್ಲಿಂದ ಅದು ಬೇರೆಯೇ ಸಮಸ್ಯೆಗಳನ್ನು ಹುಟ್ಟು ಹಾಕುತ್ತದೆ.

ಮಗಳು ತನ್ನ ತಂದೆಯ ಮೇಲೆ ತೋರಿದ ಪ್ರೇಮ, ಮದುವೆ ಆದ ನಂತರ ಮಗಳು ತನ್ನ ಗಂಡ ಮತ್ತು ಅವನ ಕುಟುಂಬದವರ ಜೊತೆ ತೋರಲು ಸಾಧ್ಯ ಇಲ್ಲ. ತಂದೆ ಸೋಂಭೇರಿ ಆಗಿದ್ದರೂ ಸಹಿಸಿಕೊಳ್ಳುವ ಮಗಳು, ತನ್ನ ಗಂಡ-ಮಾವ-ಅತ್ತೆ ಸೋಂಭೇರಿಗಳಾಗಿದ್ದರೆ ಯಾವುದೇ ಮುಲಾಜಿಲ್ಲದೆ ಮಾನ ಹರಾಜು ಮಾಡಿಬಿಡುತ್ತಾಳೆ. ಇದು ಕೂಡ ಸಾಕಷ್ಟು ಮನೆಗಳ ಸಂಗತಿ.

ಆದರೆ ಆ ಮಗಳಲ್ಲಿ ಕೂಡ ಲೋಪ-ದೋಷಗಳು ಇರುತ್ತಲ್ಲವೇ? ಅದನ್ನು ಮಗಳು ತನ್ನ ಮನೆಯಲ್ಲಿದ್ದಾಗ ಮುಚ್ಚಿ ಹಾಕಿದ ಹಾಗೆ, ಮದುವೆ ಆದ ನಂತರ ಕೂಡ ಅವನ ಮಗಳ ಕುಟುಂಬದಲ್ಲಿ ತಲೆ ಹಾಕಿ ಅವುಗಳನ್ನು ಮುಚ್ಚಿ ಹಾಕುತ್ತ ಹೋದರೆ, ಆ ತಂದೆ ಬಹು ಬೇಗ ಮರ್ಯಾದೆ ಕಳೆದು ಕೊಳ್ಳುತ್ತಾನೆ. ಅವನಿಗೆ ಮಗಳು ಮಾಡುವ ಕೆಲಸಗಳು ಸಹಜ ಅನ್ನಿಸಬಹುದು. ಆದರೆ ಅದೇ ಕೆಲಸಗಳನ್ನು ಅವನ ಸೊಸೆ ಮಾಡಿದರೆ ಅವನು ಸಹಿಸಿಕೊಳ್ಳುವುದಿಲ್ಲ. ಈ ತರಹದ ವಿರೋಧಾಭಾಸಗಳು ಅವನ ಮಗಳು ತಪ್ಪು ತಿದ್ದಿಕೊಳ್ಳುವುದು ಬಿಟ್ಟು, ಅವುಗಳನ್ನು ಹೆಚ್ಚಿಗೆ ಮಾಡುವಂತೆ ಪ್ರಚೋದಿಸುತ್ತವೆ. ಇತ್ತೀಚಿಗೆ ಮದುವೆ ಮುರಿದು ಬಿದ್ದ ಕುಟುಂಬಗಳನ್ನು ಗಮನಿಸುತ್ತಾ ಹೋದರೆ ಅಲ್ಲಿ ಮಗಳಿಗೆ ಬುದ್ಧಿ ಹೇಳದ ತಂದೆಯ ಪಾತ್ರ ಕೂಡ ಗಮನಿಸಬಹುದು.

ತಂದೆಯ ಹತ್ತಿರ ಮಗಳು ಹೇಗೆ ನಡೆಕೊಳ್ಳುತ್ತಾಳೋ, ಅವಳು ಇತರರ ಜೊತೆ ಹಾಗೆ ನಡೆದು ಕೊಳ್ಳುತ್ತಿರುವುದಿಲ್ಲ. ಇದನ್ನು ಗಮನಿಸಲು ತಂದೆ ಸೋತು ಹೋಗುತ್ತಾನೆ. ಮಗಳ ಮೇಲಿನ ಕುರುಡು ಪ್ರೇಮ ಕೂಡ ಅದಕ್ಕೆ ಕಾರಣ ಆಗಿರುತ್ತದೆ. ಅವನು ಮಗಳು ಕೂಡ ತಂದೆ ಜೊತೆ ಸಂಬಂಧ ನಿಭಾಯಿಸಿದ ಹಾಗೆ ಉಳಿದ ಸಂಬಂಧಗಳನ್ನು ನಿಭಾಯಿಸಲು ಸೋತು ಹೋಗುತ್ತಾಳೆ.

ತಂದೆ ಸತ್ತ ಮೇಲೆ ಮಗಳ ಜೀವನ ಮುಂದುವರೆಯಬೇಕಲ್ಲವೇ? ಮಗಳಿಗೆ ಬೇಕಿರುವುದು ತಂದೆಯ ವಿವೇಕ ಮತ್ತು ಅನುಭವ ಅಲ್ಲದೇ ತಂದೆಯ ಮಿತಿ ಮೀರಿದ ಪ್ರೇಮ ಅಲ್ಲ. ಕ್ಷಮಿಸಿ, ಇದು ಎಲ್ಲ ಮನೆಯಲ್ಲಿ ನಡೆಯುವ ಸಂಗತಿ ಅಲ್ಲ. ಆದರೆ ಅನವಶ್ಯಕ ಎನ್ನಿಸುವಷ್ಟು ಮಗಳಿಗೆ ಬೆಂಬಲ ನೀಡುವ ತಂದೆ ಇದ್ದರೆ, ಆ ಮಗಳು ತನ್ನ ಗಂಡನ ಮನೆ ಬಿಟ್ಟು ಬರುವ ಸಾಧ್ಯತೆಗಳು ಕೂಡ ಅಷ್ಟೇ ಜಾಸ್ತಿ ಎನ್ನುವುದು ನನ್ನ ಸ್ವಂತ ಅನುಭವ.

Wednesday, May 17, 2023

ಮುಳುಗುತ್ತಿರುವ ಸೂರ್ಯನತ್ತ ನಡೆದು ಹೋಗುವ ಮುನ್ನ

ಇಂದು ಟಿವಿಯಲ್ಲಿ ಸುಮ್ಮನೆ ಚಾನೆಲ್ ಬದಲು ಮಾಡುತ್ತಿದ್ದಾಗ ಅದರಲ್ಲಿ 'ಜೀವನ ಚೈತ್ರ' ಚಲನ ಚಿತ್ರ ಬರುತ್ತಿದ್ದದ್ದು ಗಮನಿಸಿದೆ. ಆ ಚಿತ್ರ ಅದಾಗಲೇ ಅರ್ಧಕ್ಕಿಂತ ಹೆಚ್ಚು ಮುಗಿದು ಹೋಗಿತ್ತು. ಆಗಲೇ ಒಂದೆರಡು ಬಾರಿ ನೋಡಿದ್ದ ನೆನಪಿದ್ದರೂ ಮತ್ತೆ ನೋಡುವ ಕುತೂಹಲ ಹುಟ್ಟಿತು. 'ಗಂಗಾ ಮಾ, ಜೈ ಜೈ  ಗಂಗಾ ಮಾ' ಎನ್ನುವ ಹಿನ್ನೆಲೆ ಸಂಗೀತದೊಂದಿಗೆ ಅಣ್ಣಾವ್ರು ಹಿಮಾಲಯದ ಪುಣ್ಯಕ್ಷೇತ್ರಗಳ ದರ್ಶನ ಮಾಡುತ್ತಾರಲ್ಲ. ಅಲ್ಲಿಂದ ಕೊನೆಯವರೆಗೆ ಟಿವಿ ಬಿಟ್ಟು ಬೇರೆ ಎಲ್ಲೂ ಹೋಗಲಿಲ್ಲ ನಾನು.

'ನಾದಮಯ ಈ ಲೋಕವೆಲ್ಲಾ' ಎನ್ನುವ ಅದ್ಭುತ ಹಾಡಿನಲ್ಲಿ ನಮಗೆ ಗಂಗೋತ್ರಿ, ಗೋಮುಖ, ಕೇದಾರನಾಥ, ಬದರೀನಾಥ, ದೇವಪ್ರಯಾಗ ಕೊನೆಗೆ ಹರಿದ್ವಾರವನ್ನು ತೋರಿಸುತ್ತ ಅಧ್ಯಾತ್ಮ ಲೋಕಕ್ಕೆ ಸೆಳೆಯುವ ಹಾಡು ಹಾಡುವ ಅಣ್ಣಾವ್ರಿಗೆ ತಮ್ಮ ಊರಿನವನನ್ನು ನೋಡಿ ಜ್ಞಾಪಕ ಮರಳುತ್ತದೆ. ತಾಯಿಯನ್ನು ಕಾಣುವ ಆಸೆಯೊಂದಿಗೆ ಊರಿಗೆ ಮರಳುತ್ತಾರೆ ವಿಶ್ವನಾಥ ಜೋಡೀದಾರ.

ತಮ್ಮ ಮನೆಯಲ್ಲಿ ನಡೆದಿರುವ ಕುಡುಕರ ಸಮಾರಾಧನೆಯನ್ನು ಕಂಡು ಸಿಡಿದೇಳುವ ಅಣ್ಣಾವ್ರ ಅಭಿನಯ, ಸಂಭಾಷಣೆಗಳು ಅಮೋಘ. 'ಎಲ್ಲೋ ಅಮ್ಮ' ಎಂದು ತಮ್ಮ ಮಗನನ್ನು ಹಿಡಿದೆತ್ತುವ ಸ್ಥೈರ್ಯ ಅವರ ಪಾತ್ರಗಳಿಗಲ್ಲದೆ ಬೇರೆ ಯಾರಿಗುಂಟು? ಮಗ ಇನ್ನು ಸತ್ತಿಲ್ಲ ಎನ್ನುವ ನಂಬಿಕೆ ಸುಳ್ಳು ಮಾಡದೆ ಅವರ ಅಮ್ಮನಿಗೆ ತಮ್ಮ ತೋಳಿನಲ್ಲೇ ನೆಮ್ಮದಿಯ ಕೊನೆ ಉಸಿರು ಬಿಡುವ ಅವಕಾಶ ವಿಶ್ವನಾಥ ಜೋಡೀದಾರ ಪಾತ್ರಕ್ಕೆ. ನಂತರ ಮದಿರೆ ತಯಾರಿಸುವ ಕಾರ್ಖಾನೆ ಮುಚ್ಚಿಸಿ, ಉಯಿಲು ಬರೆದಿಟ್ಟು ಮುಳುಗುತ್ತಿರುವ ಸೂರ್ಯನತ್ತ ನಡೆದು ಹೋಗುವ ರಾಜಕುಮಾರ್ ಅವರ ಅಭಿನಯ ಅದ್ಭುತ.

ಅದೇ ಅಣ್ಣಾವ್ರ ಸೂಪರ್ ಹಿಟ್ ಚಿತ್ರ ಎನ್ನಿಸಿಕೊಂಡ, ೧೯೭೨ ರಲ್ಲಿ ಬಿಡುಗಡೆಗೊಂಡ 'ಬಂಗಾರದ ಮನುಷ್ಯ' ಚಿತ್ರದಲ್ಲಿ ಕೂಡ ಕೊನೆಯ ಸನ್ನಿವೇಶ ಮುಳುಗುತ್ತಿರುವ ಸೂರ್ಯನತ್ತ ನಡೆದು ಹೋಗುವುದೇ ಇದೆ. ಆದರೆ ಆ ಚಿತ್ರದುದ್ದಕ್ಕೂ ಯಾವ ಪ್ರಯತ್ನ ಬಿಡದೆ ಆದರೆ ಕೊನೆಗೆ ಹತಾಶೆಗೊಂಡು, ಸೋತು ಹೋಗಿ, ಮುಳುಗುತ್ತಿರುವ ಸೂರ್ಯನತ್ತ ನಡೆದು ಹೋಗುವುದೇ ಬೇರೆ. ಮತ್ತು 'ಜೀವನ ಚೈತ್ರ'ದ ಸಂತೃಪ್ತ ಜೀವನ ನಡೆಸಿ, ಆತ್ಮ ತೃಪ್ತಿಯೊಂದಿಗೆ ಮುಳುಗುತ್ತಿರುವ ಸೂರ್ಯನತ್ತ ನಡೆದು ಹೋಗುವುದೇ ಬೇರೆ.

ಎಲ್ಲರ ಜೀವನವೂ ಕೊನೆಯಾಗುತ್ತದೆ. ಅದನ್ನೇ ಚಿತ್ರದಲ್ಲಿ ಮುಳುಗುತ್ತಿರುವ ಸೂರ್ಯನತ್ತ ನಡೆದು ಹೋಗುವುದರ ಮೂಲಕ ನಿರ್ದೇಶಕ ತೋರಿಸುತ್ತಾನೆ. ೧೯೭೨ರ  'ಬಂಗಾರದ ಮನುಷ್ಯ' ದ ರಾಜೀವನ ಪಾತ್ರ ಮತ್ತು ೧೯೯೨ರ  'ಜೀವನ ಚೈತ್ರ'ದ ವಿಶ್ವನಾಥ ಜೋಡೀದಾರ ಪಾತ್ರ ಹೊರತಲ್ಲ. ಆದರೆ ಆ ಎರಡು ಕಥೆಗಳು ಅಂತ್ಯಗೊಳ್ಳುವ ಸಂದರ್ಭಗಳು ಬೇರೆ ಬೇರೆ. ಮತ್ತು ಆ ಎರಡು ಚಿತ್ರಗಳಲ್ಲಿ ಅಭಿನಯಿಸಿದ ಅಣ್ಣಾವ್ರು ಆ ಪಾತ್ರಗಳಿಗೆ ತುಂಬಿದ ಜೀವಕಳೆಯು ಕೂಡ ಬೇರೆ.

ಅದು ಬರೀ ಕಥೆಗಳಿಗಷ್ಟೇ ಸೀಮಿತವಲ್ಲ. ನನಗೆ, ನಿಮಗೆ ಕೂಡ ಮುಳುಗುತ್ತಿರುವ ಸೂರ್ಯನತ್ತ ನಡೆದು ಹೋಗುವ ಸಂದರ್ಭ ಬಂದೇ ಬಿಡುತ್ತದೆ. ಆದರೆ ಅಷ್ಟರವರೆಗೆ ನಾವು ಬದುಕಿದ ರೀತಿ ಹೇಗಿತ್ತು, ನಮಗೆ ಬಂದ ಸಂದರ್ಭ ಮತ್ತು ಅವಕಾಶಗಳು ಹೇಗಿದ್ದವು ಅನ್ನುವುದು ನಮಗೆ ರಾಜೀವನ ವಿಷಾದಮಯ ಅಂತ್ಯ ಸಾಧ್ಯವೋ ಅಥವಾ ವಿಶ್ವನಾಥ ಜೋಡೀದಾರರ ನೆಮ್ಮದಿಯ ಅಂತ್ಯ ಸಾಧ್ಯವೋ ಎನ್ನುವದು ನಿರ್ಧರಿಸುತ್ತದೆ. ಎಲ್ಲ ಸಾಧ್ಯತೆಗಳನ್ನು ತೆರೆಯ ಮೇಲೆ ಅಭಿನಯಿಸಿ ತೋರಿಸಿದ ರಾಜಣ್ಣ ಏಕೆ ಅಜರಾಮರ ಎನ್ನುವುದು ಅವರ ಚಿತ್ರಗಳು ಮತ್ತೆ ಮತ್ತೆ ಮನದಟ್ಟು ಮಾಡಿ ತೋರಿಸುತ್ತವೆ.

'' failed to upload. Invalid response: Unexpected token '<', "<html>

  "... is not valid JSON


Friday, May 12, 2023

ಅಧಿಕಾರದ ಆಸೆ ಮತ್ತು ಸಾಯಬಹುದಲ್ಲ ಎನ್ನುವ ಭಯ

ಸಾಮಾನ್ಯ ಮನುಷ್ಯ ಬೇಕಾದರೆ ಒಂದೊಪ್ಪತ್ತು ಊಟ ಬಿಟ್ಟು ಉಪವಾಸ ಮಾಡುತ್ತಾನೆಯೇ ಹೊರತು ವಿಷ ಬೆರೆಸಿದ ಆಹಾರ ಸೇವಿಸಲು ಒಪ್ಪುವುದಿಲ್ಲ. ಕಹಿ ಅನಿಸಿದ ಪದಾರ್ಥ ಆಗಿಂದಾಗಲೇ ಉಗುಳಿ ಜೀವ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಾನೆ. ಪ್ರಕೃತಿ ಮನುಷ್ಯನನ್ನು ರೂಪಿಸಿದ್ದು ಹಾಗೆಯೇ. ಬದುಕಿದರೆ ಹೇಗೋ ಜೀವನ ಮಾಡಬಹುದು ಎಂದುಕೊಳ್ಳುವ ಮನುಷ್ಯ ಸಾವಿನ ಅಪಾಯಗಳನ್ನು ಎದುರಿಸಲು ಹೋಗುವುದಿಲ್ಲ. ಆದರೆ ಎಲ್ಲರೂ ಹಾಗಲ್ಲ.

ಹಿಂದಿನ ಕಾಲದಲ್ಲಿ ರಾಜರುಗಳು ಒಬ್ಬರ ಮೇಲೆ ಒಬ್ಬರ ಯುದ್ಧ ಹೂಡುತ್ತಿದ್ದರಲ್ಲ. ಅದರ ಹಿಂದಿನ ಕಾರಣ, ಒಬ್ಬ ರಾಜನಿಗೆ ಹೆಚ್ಚಿನ ಅಧಿಕಾರದ ಆಸೆ. ಮತ್ತು ಇನ್ನೊಬ್ಬನಿಗೆ ಇರುವ ಅಧಿಕಾರ ಏಕೆ ಬಿಟ್ಟು ಕೊಡಬೇಕು ಎನ್ನುವ ಛಲ. ಹೆಚ್ಚಿನ ಯುದ್ಧಗಳು ಇಬ್ಬರಲ್ಲಿ ಒಬ್ಬ ರಾಜ ಸಾಯುವುದರೊಂದಿಗೆ ಕೊನೆಗೊಳ್ಳುತ್ತಿದ್ದವಲ್ಲ. ಅಂದರೆ ಸಾವಿಗೆ ಇಬ್ಬರು ರಾಜರುಗಳು ಮಾನಸಿಕವಾಗಿ ಸಿದ್ಧರಾಗಿಯೇ ಬಂದಿರುತ್ತಿದ್ದರು. ಅವರಿಗೆ ಸತ್ತರೆ ಹೇಗೆ ಎನ್ನುವ ಭಯಕ್ಕಿಂತ ಅಧಿಕಾರ ಕಳೆದುಕೊಂಡರೆ ಹೇಗೆ ಎನ್ನುವ ಚಿಂತೆ ಹೆಚ್ಚಿಗೆ ಭಾದಿಸುತ್ತಿತ್ತು.

ಇದು ಹಳೆಯ ಕಾಲಕ್ಕೆ ಸೀಮಿತವಲ್ಲ. ಅಮೇರಿಕಾದ ಅಧ್ಯಕ್ಷ ಜಾನ್ ಎಫ್ ಕೆನಡಿ ಯಿಂದ ಭಾರತದ ಪ್ರಧಾನಿ ಇಂದಿರಾ ಗಾಂಧಿಯವರೆಗೆ ಅವರು ಅಧಿಕಾರದಲ್ಲಿ ಇರುವಾಗ ಹತರಾದರಲ್ಲ. ಅವರು ತೆಗೆದುಕೊಂಡ ನಿರ್ಧಾರಗಳು ಶತ್ರುಗಳನ್ನು ಸೃಷ್ಟಿಸುವುದು ಮತ್ತು ಅದು ಅವರ ಜೀವಕ್ಕೆ ಕುತ್ತಾಗಬಹುದು ಎನ್ನುವ ಅಪಾಯಗಳ ಬಗ್ಗೆ ಅವರಿಗೆ ಸ್ಪಷ್ಟವಾಗಿ ಅರಿವಿತ್ತು. ಆದರೂ ಕೂಡ ಅವರೇಕೆ ಅಪಾಯಗಳಿಗೆ ಎದೆಯೊಡ್ಡಿದರು? ಪ್ರಕೃತಿ ಅವರನ್ನೇಕೆ ವಿಭಿನ್ನವಾಗಿ ರೂಪಿಸಿತು?

ಕೂಲಂಕುಷವಾಗಿ ಪರಿಶೀಲಿಸಿ ನೋಡಿದರೆ, ಪ್ರಕೃತಿ ಎಲ್ಲ ತರಹದ ಜನರನ್ನು ಸೃಷ್ಟಿಸಿತ್ತದೆ. ಕಾಡಿನಲ್ಲಿ ಜಿಂಕೆ, ತೋಳ, ಹುಲಿಗಳ ನಡುವಳಿಕೆ ಬೇರೆ ಬೇರೆ ಹಾಗೆಯೆ ಅವುಗಳ ಸಂಖ್ಯೆಯು ಕೂಡ ಬೇರೆ ಬೇರೆ. ಜಿಂಕೆಗಳು ಗುಂಪಿನಲ್ಲಿ ಬದುಕುತ್ತವೆ. ಅವುಗಳು ಇನ್ನೊಬ್ಬರ ಮೇಲೆ ಆಕ್ರಮಣ ಮಾಡುವುದಿರಲಿ, ತಮ್ಮನ್ನು ರಕ್ಷಿಕೊಳ್ಳುವ ಕಲೆಯೂ ಅವುಗಳಿಗೆ ಒಲಿದಿಲ್ಲ. ಆದರೆ ಹಸಿದ ಹುಲಿ ಎಂತಹ ಪ್ರಾಣಿಯನ್ನಾದರೂ ಬೇಟೆಯಾಡುವ ಗುಂಡಿಗೆ ತೋರುತ್ತದೆ. ಅದೇ ತರಹ ಮನುಷ್ಯರಲ್ಲಿ ತಾನು ರಾಜನಾಗಬೇಕೆನ್ನುವ ಆಸೆ ಇರುವವರ ಸಂಖ್ಯೆ ಕಡಿಮೆ. ಆದರೆ ಅವರಿಲ್ಲ ಎಂದಿಲ್ಲ. ಒಂದು ಜಿಂಕೆ ಹುಲಿಗೆ  ಆಹಾರವಾದರೆ ಉಳಿದವೆಲ್ಲ ಓಡಿ ತಪ್ಪಿಸಿಕೊಳ್ಳುತ್ತವಲ್ಲ. ಉಳಿದ ಜನ ಎಲ್ಲ ಆ ಪ್ರಕೃತಿಯವರು.

ಇಂದಿಗೆ ಚುನಾವಣೆಗಳು ನಡೆದಿವೆಯಲ್ಲ. ಅಲ್ಲಿ ಅಧಿಕಾರ ಬೇಕೆಂದು ಸ್ಪರ್ಧಿಸುವವರು ಕೆಲವು ಜನ. ಅವರ ಹಿಂದೆ ಹೊಡೆದಾಡಲು ತಯ್ಯಾರು ಇರುವವರು ಕೆಲವು ಸಾವಿರ ಜನ. ಆದರೆ ಅದನ್ನು ನಿಂತು ನೋಡುವವರು ಕೋಟಿ ಜನ. ಚುನಾವಣೆಯಲ್ಲಿ ಬರಿ ಮತದ ಹೋರಾಟ ಅಷ್ಟೇ ಇಲ್ಲ. ಪ್ರತಿಸ್ಪರ್ಧಿಗಳು ಬೀದಿಯಲ್ಲಿ ಕೂಡ ಹೊಡೆದಾಟಕ್ಕೆ ಇಳಿಯುತ್ತಾರೆ. ಆಗ ಸಂಘರ್ಷದಲ್ಲಿ ಕೈ-ಕಾಲು ಮುರಿಯಬಹುದು ಅಥವಾ ತಮ್ಮ ಅಥವಾ ಹಿಂಬಾಲಕರ ಜೀವವೇ ಹೋಗಬಹುದು. ಆ ಅಪಾಯವನ್ನು ಎದುರಿಸಲು ಸಜ್ಜಾಗಿರುವವನೇ ಶಾಸಕ ಆಗುತ್ತಾನೆ. ಅವನು ಒಳ್ಳೆಯವನು  ಅಥವಾ ಕೆಟ್ಟವನು ಎನ್ನುವ ನೈತಿಕ ವಿಮರ್ಶೆ ನಾನು ಮಾಡುತ್ತಿಲ್ಲ. ಆದರೆ ಶಾಸಕನ ಅಧಿಕಾರದ ಆಸೆ ಅವನನ್ನು ಜೀವ ಭಯವನ್ನು ಮೆಟ್ಟಿ ನಿಲ್ಲುವಂತೆ ಮಾಡಿದೆ. ಅದು ಹಿಂದಿನ ಕಾಲದಲ್ಲಿ ರಾಜನೊಬ್ಬ ಯುದ್ಧಕ್ಕೆ ಸಜ್ಜಾದ ಹಾಗೆ.

ತಮಗೆ ಏನಾದರೂ ಆದರೆ ಹೇಗೆ ಎನ್ನುವ ಸಾಮಾನ್ಯ ಮನುಷ್ಯ ಅಂತಹ ಅಪಾಯಗಳಿಗೆ ಎದೆಯೊಡ್ಡುವುದಿಲ್ಲ. ತಲೆ ತಗ್ಗಿಸಿ ದೌರ್ಜನ್ಯಗಳನ್ನು ಸಹಿಸಿಕೊಳ್ಳುತ್ತಾನೆ. ಅಪಾಯ ಎದುರಿಸಿ ನಿಲ್ಲುವ ವ್ಯಕ್ತಿ ಒಂದು ಗೆಲ್ಲುತ್ತಾನೆ ಇಲ್ಲವೇ ಸೋತು ಸುಣ್ಣವಾಗುತ್ತಾನೆ ಅಥವಾ ಪ್ರಾಣ ಕಳೆದುಕೊಳ್ಳುತ್ತಾನೆ. ಗೆದ್ದವನ ದೊಡ್ಡಸ್ತಿಕೆ ಇನ್ನೊಬ್ಬ ಪ್ರತಿಸ್ಪರ್ಧಿ ಹುಟ್ಟುವವರೆಗೆ. ಅವನ ಸಂತತಿ ಉಳಿಯುವುದು ಕಷ್ಟ. ಕಾಡಿನಲ್ಲಿ ಹುಲಿಗಳ ಹಾಗೆ.  ಆದರೆ ಅಪಾಯದಿಂದ ದೂರ ಸರಿಯುವ ವ್ಯಕ್ತಿಯ ಸಂತತಿ ಬೆಳೆಯುತ್ತ ಹೋಗುತ್ತದೆ. ಕಾಡಿನ ಜಿಂಕೆಗಳ ಹಾಗೆ.

ನಾಡನ್ನಾಳಿದ ಎಷ್ಟೋ ರಾಜ ಮನೆತನಗಳ ಸಂತತಿಗಳು ಬಹು ಬೇಗ ಅಳಿದು ಹೋದವು. ಅದು ಅವರು ಅಪಾಯಗಳನ್ನು ಎದುರಿಸಿದ್ದಕ್ಕೆ. ಸಾಮಾನ್ಯ ಜನರ ಸಂತತಿ ನೂರು ಪಟ್ಟು ಬೆಳೆಯಿತು. ಅದು ಅವರು ಪರಿಸ್ಥಿತಿಗೆ ತಲೆ ಬಾಗಿದ್ದಕ್ಕೆ. ಅದು ಕಾಡಲ್ಲಿನ ಹುಲಿ-ಜಿಂಕೆಯ ಅನುಪಾತದ ಹಾಗೆ.

ಅಧಿಕಾರ ಬೇಕೆನ್ನುವವರು ಮುಂದೆಯೂ ಇರುತ್ತಾರೆ. ಅವರು ಪುಕ್ಕಲರ ಹಾಗೆ ಬದುಕುವುದಿಲ್ಲ. ಮತ್ತು ಅವರ ಅಧಿಕಾರ ತುಂಬಾ ಕಾಲ ಕೂಡ ಉಳಿಯುವುದಿಲ್ಲ. ಹೇಗೋ ಒಂದು ಬದುಕಿದರಾಯಿತು ಎನ್ನುವವರು ಯಾವುದೇ ಸಂಘರ್ಷಕ್ಕೆ ಇಳಿಯುವುದಿಲ್ಲ. ಅವರ ಬದುಕಿದ್ದು, ಸತ್ತಿದ್ದು ಯಾರಿಗೂ ಬದಲಾವಣೆ ತರುವುದಿಲ್ಲ. ಬದಲಾವಣೆ ತರುವವರು ಸಾವಿಗೆ ಅಂಜಿ ಬದುಕುವುದಿಲ್ಲ.

(ಪ್ರಭಾವ: ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣ ಸ್ಪರ್ಧಿಗಳ ಬೀದಿ ಹೊಡೆದಾಟ ನೋಡಿ ಅನಿಸಿದ್ದು)

Saturday, May 6, 2023

ಬಸವನಿದ್ದಲ್ಲಿ ಕಲ್ಯಾಣ

ಬಸವಣ್ಣವನವರು ತಾವು ಹುಟ್ಟಿದ ಕಾಲಮಾನದಲ್ಲಿ ಇದ್ದ ವಿಚಾರಗಳಿಗಿಂತ ಆಧುನಿಕತೆ ಹೊಂದಿದ್ದವರು. ಅನುಭವ ಮಂಟಪ ಆಗಲಿ, ಅಂತರ್ಜಾತಿ ವಿವಾಹಗಳೇ ಆಗಲಿ, ಲಿಂಗಾಯತ ಧರ್ಮವನ್ನು ಹುಟ್ಟಿ ಹಾಕಿದ್ದೆ ಆಗಲಿ, ತಾವು ವಚನಗಳನ್ನು ರಚಿಸುವುದಲ್ಲದೆ ಹಲವಾರು ಶರಣರಿಗೆ ವಚನ ರಚಿಸುವ ಪ್ರೋತ್ಸಾಹ ನೀಡಿ ಕನ್ನಡ ವಚನ ಸಾಹಿತ್ಯ ಸಮೃದ್ಧಿ ಇಷ್ಟೆಲ್ಲಾ ಕಾರ್ಯಗಳು ಜರುಗುವುದಕ್ಕೆ ಕಾರಣ ಆದರು. ಸನಾತನ ಧರ್ಮದ ಆಚಾರ-ವಿಚಾರಗಳನ್ನು ತಿರಸ್ಕರಿಸಿ 'ಕಾಯಕವೇ ಕೈಲಾಸ' ಎಂದು ಸಾರಿದರು. ಅವರ ಸಮಾಜ ಸುಧಾರಣೆ ಕಾರ್ಯಗಳನ್ನು ಅರಸೊತ್ತಿಗೆ ಒಪ್ಪದಿದ್ದಾಗ ಬಿಜ್ಜಳನ ರಾಜಧಾನಿಯನ್ನು ಬಿಟ್ಟು ಹೊರ ನಡೆದರು. ಕಲ್ಯಾಣದಲ್ಲಿ ಬಸವನಿಲ್ಲದಿದ್ದರೇನಂತೆ? ಬಸವನಿದ್ದಲ್ಲಿ ಕಲ್ಯಾಣ ಅಲ್ಲವೇ?


ಬಸವಣ್ಣವರ ಜೀವನ ದುರಂತ ಅಂತ್ಯ ಕಂಡರೂ, ಅವರು ಕಟ್ಟಿದ ಲಿಂಗಾಯತ ಧರ್ಮ ಬೆಳೆದು ಹೆಮ್ಮರ ಆಯಿತು. ಇಂದಿಗೂ ಪ್ರತಿಯೊಂದು ಲಿಂಗಾಯತ ಕುಟುಂಬದಲ್ಲಿ ಬಸವ ನಾಮಧೇಯರಿದ್ದಾರೆ. ಆದರೆ ಅವರಲ್ಲಿ ಎಷ್ಟು ಜನಕ್ಕೆ ಕೂಡಲ ಸಂಗನ ಒಲಿಸಿಕೊಳ್ಳುವ ಪರಿ ಗೊತ್ತು?


ನೀವು ಬಸವಣ್ಣನನ್ನು ಮೆಚ್ಚುವವರು ಆಗಿದ್ದರೆ, ಬಾಗೇವಾಡಿಯಿಂದ ಶುರು ಮಾಡಿ, ಬಸವಣ್ಣನವರ ಕಾರ್ಯಕ್ಷೇತ್ರ ಬಸವಕಲ್ಯಾಣದಲ್ಲಿ ಅಲೆದು ಕೊನೆಯಲ್ಲಿ ಅವರ ಐಕ್ಯ ಸ್ಥಳವಾದ ಕೂಡಲ ಸಂಗಮದಲ್ಲಿ ಕಾಲ ಕಳೆದು ನೋಡಿ. ಅಲ್ಲಿ ದೇವಸ್ಥಾನದ ಪ್ರಾಂಗಣದ ಕಟ್ಟೆಗಳ ಮೇಲೋ ಇಲ್ಲವೇ ಹೊಳೆಯ ದಡದಲ್ಲೋ ನಿಮಗೆ ಬಸವಣ್ಣನವರ ದರ್ಶನವಾದಂತೆ ಅನಿಸುತ್ತದೆ. ಬಸವ ಎನ್ನುವ ಭಕರ ಧ್ವನಿಯಿಂದ, ಹೃದಯ ಮುಟ್ಟುವ  ವಚನಗಳ ಅರ್ಥಗಳ ಮೂಲಕ  ಬಸವಣ್ಣನವರು ನಿಮಗೆ ಒಲಿಯುತ್ತಾರೆ. ಅವರಿಗೆ ಕೂಡಲ ಸಂಗಮ ಒಲಿದ ಹಾಗೆ.

Monday, April 24, 2023

ಯಾರೇ ಕೂಗಾಡಲಿ, ರಾಜಣ್ಣ ನಿನಗೆ ಸಾಟಿಯಿಲ್ಲ

ಮುತ್ತತ್ತಿರಾಯನ ಆಶೀರ್ವಾದದಿಂದ ಮುತ್ತುರಾಜನಾಗಿ ಹುಟ್ಟಿ, ಹೊಟ್ಟೆಪಾಡಿಗೆ ನಾಟಕ ಕಂಪನಿ ಸೇರಿ, ನಂತರ ಸಿನೆಮಾದಲ್ಲಿ ರಾಜಕುಮಾರನಾಗಿ ಪರಿಚಯವಾಗಿ, 'ಬೇಡರ ಕಣ್ಣಪ್ಪ' ನಿಂದ 'ಜೀವನ ಚೈತ್ರ' ದವರೆಗೆ ಕನ್ನಡ ಚಿತ್ರರಂಗದ ಅನಭಿಷಕ್ತ ರಾಜನಾಗಿ ಮೆರೆದ ಅಣ್ಣಾವ್ರ ಜೀವನಗಾಥೆ ಕೂಡ ಅಷ್ಟೇ ಆಸಕ್ತಿದಾಯಕವಾದದ್ದು.


ರಾಜಕುಮಾರ ಅಂದರೆ ಕೇವಲ ನಟನಲ್ಲ. 'ನಾನಿರುವುದೇ  ನಿಮಗಾಗಿ' ಹಾಡಿನ ಮೂಲಕ ಕನ್ನಡದ ಮೊದಲ ರಾಜ ಮಯೂರವರ್ಮನ ಪಾತ್ರಕ್ಕೆ ಜೀವ ತುಂಬಿದ ವ್ಯಕ್ತಿಯನ್ನು ಕೇವಲ ನಟ ಎಂದು ಹೇಗೆ ಕರೆಯುವುದು? 'ನಾವಿರುವ ತಾಣವೇ ಗಂಧದ ಗುಡಿ' ಎಂದು ಹಾಡಿ ನಮ್ಮಲ್ಲಿ ಅಭಿಮಾನ ಮೂಡಿಸುವುದು ಕೇವಲ ನಟನಿಂದ ಸಾಧ್ಯವೇ? ಭಕ್ತಿ ಪ್ರಧಾನ ಚಿತ್ರಗಳಿಂದ ಬಾಂಡ್ ಚಿತ್ರಗಳವೆರೆಗೆ ವೈವಿಧ್ಯಮಯ ಪಾತ್ರಗಳಲ್ಲಿ ಕಾಣಿಸಿಕೊಂಡ ರಾಜಕುಮಾರ್ ಕನ್ನಡಿಗರ ಆರಾಧ್ಯ ದೈವವಾಗಿ ಬದಲಾದದ್ದು ಅವರ ವಿನಯದಿಂದ ಮತ್ತು ಅಗಾಧ ಪ್ರತಿಭೆಯಿಂದ.


'ಯಾರೇ ಕೂಗಾಡಲಿ, ಎಮ್ಮೆ ನಿನಗೆ ಸಾಟಿಯಿಲ್ಲ', 'ಬೆಳ್ಳಿ ಮೂಡಿತೋ, ಕೋಳಿ ಕೂಗಿತೋ', 'ಚಿನ್ನದ ಗೊಂಬೆಯಲ್ಲ, ದಂತದ ಗೊಂಬೆಯಲ್ಲ' ಹೀಗೆ ಅವರ ನೂರಾರು ಹಾಡುಗಳು ಅಂದಿಗೂ, ಇಂದಿಗೂ ಮನರಂಜಿಸುವುದಲ್ಲದೆ ಬದುಕಿನ ದ್ವಂದ್ವಗಳಿಗೆ ಸಲಹೆ ನೀಡುವ ಸಂಗಾತಿಯಾಗುತ್ತವೆ. ಅದಕ್ಕೆ ಏನೋ, ಅವರು ಕಾಲವಾದರೂ ಮತ್ತೆ ರಾಜಣ್ಣ ನೆನಪಾಗುವುದು ಅವರ ಹಾಡುಗಳ ಮೂಲಕ ಮತ್ತು ಅವರ ಸಂಭಾಷಣೆಗಳ ಮೂಲಕ.


ಹೊಸ ಪೀಳಿಗೆ ರಾಜಣ್ಣ ಗೊತ್ತಿಲ್ಲ. ಆದರೆ ಹಿಂದಿನ ೨-೩ ಪೀಳಿಗೆಗಳಿಗೆ ರಾಜಣ್ಣ ಒಂದು ಆದರ್ಶಮಯ ಮತ್ತು ನೈತಿಕತೆ ಎತ್ತಿ ಹಿಡಿಯುವ ಜೀವನದ ಮಾರ್ಗ ತೋರಿಸಿದರು. ಅವರು ಚಿ, ಉದಯಶಂಕರ್ ಅವರ ಜೊತೆ ನಡೆಸಿದ ಸಂಭಾಷಣೆ ಇಲ್ಲಿದೆ. ಕೇಳಿ ನೋಡಿ.


https://fb.watch/k5WNUoQPTv/


Friday, April 21, 2023

ನೋವು ಮರೆತ ಸ್ಪಷ್ಟ ಗುರುತು

ಕೆಲ ವರುಷಗಳ ಹಿಂದೆ ನಾನು ಕೆಲಸ ಮಾಡುತ್ತಿದ್ದ ಆಫೀಸ್ ನಲ್ಲಿ, ಮಧ್ಯಾಹ್ನದ ಹೊತ್ತಿಗೆ ಒಂದು NGO ಕಡೆಯಿಂದ ಒಂದು ಪ್ರಸ್ತುತಿ ಇದೆ ಎಂದು ನಮ್ಮೆಲ್ಲರನ್ನೂ ಒಟ್ಟಿಗೆ ಸೇರಿಸಿದರು. ಅದು ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಜವಾಬ್ದಾರಿಯಿಂದ ಚಲಾಯಿಸುವುದು ಮತ್ತು ರಸ್ತೆಯಲ್ಲಿ ಇರುವ ಇತರರ ಮೇಲೆ ಸಹಾನುಭೂತಿ ತೋರಿಸುವುದು ಅದರ ಕುರಿತಾಗಿತ್ತು. ನಮ್ಮ ಸಹೋದ್ಯೋಗಿಯೊಬ್ಬ ಅವರಿಗೆ ಪ್ರಶ್ನೆ ಕೇಳಿಯೇ ಬಿಟ್ಟ 'ನಿಮಗೇಕೆ ಇದರಲ್ಲಿ ಆಸಕ್ತಿ?' ಅವರು ಸಮಾಧಾನದಿಂದ ಉತ್ತರಿಸಿದರು. ವೈದ್ಯಕೀಯ ವಿದ್ಯಾರ್ಥಿನಿಯಾಗಿದ್ದ ಅವರ ಮಗಳ ಮೇಲೆ ಒಬ್ಬ ಲಾರಿ ಹತ್ತಿಸಿ ಸಹಾಯಕ್ಕೆ ನಿಲ್ಲದೆ ಹೋಗಿದ್ದ. ಬೇರೆಯವರು ಗಮನಿಸುವದಷ್ಟರಲ್ಲಿ ಅವಳು ತೀವ್ರ ರಕ್ತಸಾವ್ರದಿಂದ ಅಸು ನೀಗಿದ್ದಳು. ಅದನ್ನು ಆತ ನಮಗೆ ಯಾವುದೇ ನೋವಿಲ್ಲದೆ ವಿವರಿಸಿದ್ದ. ಮತ್ತು ಆ ಘಟನೆ ಒಂದು NGO ಸ್ಥಾಪನೆಗೆ ಕಾರಣ ಆಯಿತು ಎಂದು ವಿವರಿಸಿದ್ದ.


ಯಾರೇ ಆಗಲಿ, ತೀವ್ರ ನೋವಿಗೆ ಒಳಪಟ್ಟಾಗ ಖಿನ್ನತೆಗೆ ಒಳಗಾಗುತ್ತಾರೆ. ಅದು ತಮಗೆ ಏಕೆ ಆಯಿತು ಎನ್ನುವ ಪ್ರಶ್ನೆ ಮತ್ತೆ ಹಾಕಿಕೊಳ್ಳುತ್ತಾರೆ. 'ಸಾವಿರದ ಮನೆಯಿಂದ ಸಾಸಿವೆ ತಾ' ಎಂದ ಬುದ್ಧ ಅದು ಎಲ್ಲರಿಗೆ ಸಹಜ ಎನ್ನುವ ಮನವರಿಕೆ ಮಾಡಿಕೊಟ್ಟದ್ದನಲ್ಲವೇ? ಹಾಗೆಯೆ ಆ ನೋವನ್ನು ಭರಿಸುವ ಶಕ್ತಿ ಮನಸ್ಸಿಗೆ ಬಂದಾಗ ಅದು ಬೇರೆಯ ತರಹದ ವಿಚಾರಗಳನ್ನು ಮಾಡಲು ತೊಡಗುತ್ತದೆ. ಅದರಿಂದ ತಾವು ಕಲಿಯಬೇಕಾದ್ದು ಏನು ಎನ್ನುವ ಪ್ರಶ್ನೆ ಅವರಿಗೆ ಖಿನ್ನತೆಯಿಂದ ಹೊರ ಬರುವಂತೆ ಮಾಡುತ್ತದೆ. ಆ ತರಹ ಇನ್ನೊಬ್ಬರಿಗೆ ಆಗಬಾರದು ಎಂದರೆ ಏನು ಮಾಡಬೇಕು ಅನ್ನುವ ದಿಕ್ಕಿನಲ್ಲಿ ಕೆಲಸ ಪ್ರಾರಂಭಿಸುವದರೊಂದಿಗೆ ಆ ದುಃಖ ಬಹತೇಕ ಮರೆಯಾಗಿಬಿಡುತ್ತದೆ. ಅದು ನೋವು ಮರೆತ ಸ್ಪಷ್ಟ ಗುರುತು.


ಲೋಕ ಕಲ್ಯಾಣ ಮಾಡಿದ ಜನರ ಜೀವನ ಗಮನಿಸಿ ನೋಡಿ. ಅವರು ಮಠ ಕಟ್ಟಿದ್ದು, ಕೆರೆ ಕಟ್ಟಿದ್ದು ಜನ ಹಿತಕ್ಕಾಗಿ ಎಂದು ಮೇಲ್ನೋಟಕ್ಕೆ ಅನಿಸಿದರೂ, ಅದು ಅವರು ತಮ್ಮ ನೋವು ಮರೆಯುವ ಪ್ರಕ್ರಿಯೆಯ ಕೊನೆಯ ಹಂತ ಆಗಿರುತ್ತದೆ. ಯಾವುದೇ ನೋವು ತಿನ್ನದ ಮನುಷ್ಯ ಸ್ವಾರ್ಥಿಯಾಗಿ ಬಾಳುವ ಸಾಧ್ಯತೆ ಹೆಚ್ಚು. ಆದರೆ ತಾಯಿಯನ್ನು ವೈದ್ಯಕೀಯ ಚಿಕಿತ್ಸೆ ಇಲ್ಲದೆ ಕಳೆದುಕೊಂಡ ಮನುಷ್ಯ, ತಮ್ಮೂರಿನಲ್ಲೆಯೇ ಹೊಸ ಆಸ್ಪತ್ರೆ ಕಟ್ಟಿಸಲು ಹೊರಡುತ್ತಾನೆ. ತಾನು ಕಲಿತುಕೊಂಡ ವಿಷಯಗಳನ್ನು ಇತರ ಒಳಿತಿಗೆ ಹಂಚಿಕೊಳ್ಳಲು ಬಯಸುತ್ತಾನೆ. ಅನಾಥರಾಗಿ ಬೆಳೆದವರು ಅನಾಥಾಶ್ರಮ ಕಟ್ಟಲು ಮುಂದಾಗುತ್ತಾರೆ. ಸಮಾಜದಿಂದ ತುಳಿತಕ್ಕೆ ಒಳಗಾದವರು, ಅದನ್ನು ತಮ್ಮದೇ ದಾರಿಯಲ್ಲಿ ತಡೆಗಟ್ಟುವ ಗಾಂಧಿ, ಅಂಬೇಡ್ಕರ್ ಆಗುತ್ತಾರೆ.


ಅದನ್ನು ಅವರು ಬರೀ ಸಮಾಜ ಸೇವೆಗೆಂದು ಮಾಡಿದರು ಎಂದುಕೊಳ್ಳಬೇಡಿ. ಮನಶಾಸ್ತ್ರದ ಪ್ರಕಾರ ಅದು ಅವರ ತಮ್ಮ ಆಂತರಿಕ ದಳ್ಳುರಿ ಶಮನ ಮಾಡಿಕೊಳ್ಳುವ ಪ್ರಕ್ರಿಯೆಯ ಒಂದು ಭಾಗ ಆಗಿತ್ತು ಅಷ್ಟೇ. ಅದು ಚಿಕ್ಕ ವಯಸ್ಸಿನಲ್ಲಿ ನೋವುಂಡ ಮನುಷ್ಯ ಮುಂದೆ ದೊಡ್ಡ ಸಾಧಕ ಆಗಲು ನೆರವಾಗುತ್ತದೆ. ಆದರೆ ನೋವುಗಳು ಕೊನೆ ವಯಸ್ಸಿನಲ್ಲಿ ಬಂದರೆ ಅವುಗಳು ಸಾವು ಬೇಗ ತಂದುಕೊಳ್ಳುವ ಸಾಧನ ಅಷ್ಟೇ.


ಯಾವುದೇ ಸಮಾಜ ಸುಧಾರಕ ನೋವು ನೋಡುತ್ತಾ ಸುಮ್ಮನೆ ಕೂಡುವುದಿಲ್ಲ. ಬುದ್ಧ ಜ್ಞಾನಿಯಾದ ಮೇಲೆ ಒಂದು ಮೂಲೆಯಲ್ಲಿ ಕುಳಿತು ಧ್ಯಾನ ಮಾಡುವ ಬದಲು ಅಲೆದಾಡುತ್ತ ಜನರ ಅಜ್ಞಾನ ಕಳೆಯುವ ಪ್ರಯತ್ನ ಮಾಡಿದ. ತನ್ನ ಹುಡುಕಾಟದ ನೋವು ಇತರರಿಗೆ ಆಗದೆ ಇರಲಿ ಎಂದು ತಾನು ತಿಳಿದುಕೊಂಡಿದ್ದನ್ನು ಇತರರಿಗೆ ತಿಳಿಸುವ ಪ್ರಯತ್ನ ಮಾಡಿದ. ಅದು ಅವನು ತನ್ನ ನೋವು ಮರೆತ ಸ್ಪಷ್ಟ ಗುರುತು ಆಗಿತ್ತು.

Sunday, April 2, 2023

ಊರಿಂಗೆ ದಾರಿಯನು ಆರು ತೋರಿದಡೇನು

ಸರ್ವಜ್ಞನನ್ನು ನೀವು ಕವಿ ಎನ್ನುವಿರೋ, ತತ್ವಜ್ಞಾನಿ ಎನ್ನುವಿರೋ, ಯೋಗಿ ಎನ್ನುವಿರೋ ಅಥವಾ ಗುರು ಎನ್ನುವಿರೋ, ಇಲ್ಲವೇ ಶರಣ ಎನ್ನುವಿರೋ?

 

ಅವೆಲ್ಲವುಗಳಿಗೆ ಸರಿ ಹೊಂದುವಂತೆ ಮನುಷ್ಯ ಜೀವನದ ಸೂಕ್ಷ್ಮಗಳನ್ನು ಸರಳ ಪದಗಳಲ್ಲಿ ಜೋಡಿಸಿ ತ್ರಿಪದಿ ವಚನಗಳನ್ನು ರಚಿಸಿದ ಈತನ ಜೀವನ ಅನುಭವವು ವೈವಿಧ್ಯಮಯದಿಂದ ಕೂಡಿದ್ದು. ಆತ ತನ್ನನ್ನು ತಾನು ಹೇಳಿಕೊಂಡಿದ್ದು ಹೀಗೆ:

 

'ಸರ್ವಜ್ಞನೆಂಬುವನು ಗರ್ವದಿಂದಾದವನೆ?

ಸರ್ವರೊಳಂದು ನುಡಿಗಲಿತು ವಿದ್ಯದ

ಪರ್ವತವೇ ಆದ ಸರ್ವಜ್ಞ'

 

ಆತ ಜನ ಸಾಮಾನ್ಯರ ಬದುಕನ್ನು, ಅವರ ಮೌಢ್ಯತೆಯನ್ನು ಗಮನಿಸಿ ರಚಿಸಿದ ವಚನಗಳು ಅನೇಕ. ಅದರಲ್ಲಿ ಒಂದು:

 

'ಚಿತ್ತವಿಲ್ಲದೆ ಗುಡಿಯ ಸುತ್ತಿದೆಡೆ ಫಲವೇನು?

ಎತ್ತು ಗಾಣವನು ಹೊತ್ತು ತಾ ನಿತ್ಯದಿ

ಸುತ್ತಿ ಬಂದಂತೆ ಸರ್ವಜ್ಞ'

 

ಇದು ಭಕ್ತಿಯಿರದ ಜನರ ಕುರಿತು ಆದರೆ, ಭಕ್ತಿಯನ್ನು ಅಂತರಂಗದಲ್ಲಿ ಮನೆ ಮಾಡಿಕೊಂಡವರ ಕುರಿತು ಇನ್ನೊಂದು ವಚನ ಇದೆ:

 

'ಮನದಲ್ಲಿ ನೆನೆವಂಗೆ, ಮನೆಯೇನು ಮಠವೇನು?

ಮನದಲ್ಲಿ ನೆನೆಯದಿರುವವನು ದೇಗುಲದ

ಕೊನೆಯಲ್ಲಿದ್ದೆನು ಸರ್ವಜ್ಞ'

 

'ಜಾತಿ ಹೀನನ ಮನೆ ಜ್ಯೋತಿ ತಾ ಹೀನವೇ?' ಎಂದು ಪ್ರಶ್ನಿಸಿದ ಸರ್ವಜ್ಞ ನಿಜ ಅರಿವಿನೆಡೆಗೆ ಸಾಗುವ ದಾರಿಯನ್ನು ಕೂಡ ತೋರುತ್ತಾನೆ.

 

'ಏನಾದಡೇನಯ್ಯಾ ತಾನಾಗದನ್ನಕ್ಕ

ತಾನಾಗಿ ತನ್ನನ್ನರಿದವನು ಲೋಕದಲಿ

ಏನಾದಡೇನು ಸರ್ವಜ್ಞ'

 

ಹಾಗೆಯೆ ಜೀವನವು ಋಣ ಮುಗಿಯುವ ತನಕ ಎನ್ನುವ ಎಚ್ಚರ ಕೂಡ ಕೊಡುತ್ತಾನೆ.

 

'ಎಣ್ಣೆ ಬೆಣ್ಣೆಯ ಋಣವು, ಅನ್ನ ವಸ್ತ್ರದ ಋಣವು,

ಹೊನ್ನು ಹೆಣ್ಣಿನ ಋಣ ತೀರಿದಾಕ್ಷಣದಿ

ಮಣ್ಣು ಪಾಲೆಂದ ಸರ್ವಜ್ಞ'

 

'ಸಿರಿ ಬಂದ ಕಾಲಕ್ಕೆ ಕರೆದು ದಾನವ ಮಾಡು' ಎಂದ ಸರ್ವಜ್ಞ 'ಕೊಟ್ಟಿದ್ದು ತನಗೆ, ಬಚ್ಚಿಟ್ಟಿದ್ದು ಪರರಿಗೆ' ಎನ್ನುವ ಸತ್ಯ ಕೂಡ ಸಾರಿದ. ಪರಮಾರ್ಥಗಳನ್ನಲ್ಲದೆ ಸಮಾಜಮುಖಿ ವಚನಗಳನ್ನು ಕೂಡ ಅವನು ರಚಿಸಿದ್ದಾನೆ.

 

'ಅಜ್ಜಿಯಿಲ್ಲದ ಮನೆ, ಮಜ್ಜಿಗೆಯಿಲ್ಲದ ಊಟ ಲಜ್ಜೆಗೇಡೆಂದ' ಸರ್ವಜ್ಞ 'ಮಾತಿನಲ್ಲಿ ಸೋತವನಿಗಿದಿರಿಲ್ಲ' ಎನ್ನುವ ಕಿವಿ ಮಾತು ಕೂಡ ಹೇಳಿದ.

 

'ಹೆಣ್ಣಿಂದ ಕೆಟ್ಟ ದಶಕಂಠ, ಕೌರವನು ಮಣ್ಣಿಂದ ಕೆಡನೆ?' ಎಂದು ಹೇಳಿ ರಾಮಾಯಣ, ಮಹಾಭಾರತಗಳ ಸಾರವನ್ನು ಒಂದೇ ಸಾಲಿನಲ್ಲಿ ಹೇಳಿ ಚಾಕಚಕ್ಯತೆ ಮೆರೆದ.

 

'ಕೋಟಿವಿದ್ಯೆಗಳಲ್ಲಿ ಮೇಟಿ ವಿದ್ಯೆಯೇ ಮೇಲು' ಎಂದ ಸರ್ವಜ್ಞ ಸಾಲದ ಅನುಭವ ಹೇಳಲು ಮರೆಯಲಿಲ್ಲ.

 

'ಸಾಲವನು ಕೊಂಬಾಗ ಹಾಲು ಹಣ್ಣು ಉಂಡಂತೆ

ಸಾಲಿಗನು ಬಂದು ಎಳೆವಾಗ ಕಿಬ್ಬದಿಯ

ಕೀಲು ಮುರಿದಂತೆ ಸರ್ವಜ್ಞ'

 

ತಾನು ಬದುಕಿದ ಕಾಲದ ಮತ್ತು ಸಮಾಜದ ಅನುಭವಗಳನ್ನೆಲ್ಲ ಒಟ್ಟಾಗಿಸಿ ತನ್ನ ವಚನಗಳ ಮೂಲಕ ಸಾಮಾಜಿಕ ಪ್ರಜ್ಞೆ ಮೆರೆದ ಸರ್ವಜ್ಞ. 'ಊರಿಂಗೆ ದಾರಿಯನು, ಆರು ತೋರಿದಡೇನು' ಎಂದು ಕೇಳಿದ ಸರ್ವಜ್ಞ ಬದುಕಿಗೆ ದಾರಿದೀಪ ತೋರುವ ಶರಣ ಕೂಡ ಹೌದಲ್ಲವೇ.

Wednesday, March 8, 2023

ಪ್ರತಿಯೊಂದು ಪ್ರಶ್ನೆಗೆ ಉತ್ತರ ಇರುವುದಿಲ್ಲ

ಅದು ೧೯೯೩ ನೇ ವರ್ಷ. ನಾನಾಗ ರಾಯಚೂರಿನಲ್ಲಿ ಹಾಸ್ಟೆಲ್ ನಲ್ಲಿ ಇದ್ದುಕೊಂಡು ಪಿ.ಯು.ಸಿ. ಓದುತ್ತಿದ್ದೆ. ಆಗ ನೋಡಿದ ಹಿಂದಿ ಚಿತ್ರ 'ರಂಗ್'. ಅದು ನಟಿ ದಿವ್ಯಾ ಭಾರತಿಯ ಕೊನೆಯ ಚಿತ್ರ. ಅದಕ್ಕೆ ಏನೋ ಎನ್ನುವಂತೆ ಕಾಲೇಜಿನ ಮಿತ್ರರೆಲ್ಲ ಆ ಚಿತ್ರ ನೋಡಲು ಹೋಗಿದ್ದೆವು. ಆ ಚಿತ್ರದಲ್ಲಿ ಇಬ್ಬರು ಹೀರೋಯಿನ್ ಗಳು. ನನಗೆ ದಿವ್ಯಾ ಭಾರತಿಗಿಂತ ಎರಡನೆಯ ಹೀರೋಯಿನ್ ಆಯೇಷಾ ಜುಲ್ಕಾಳ ಅಭಿನಯ ಚೆನ್ನಾಗಿದೆ ಎನಿಸಿತ್ತು. ಅದನ್ನೇ ಸ್ನೇಹಿತನಿಗೆ ಹೇಳಿದರೆ ಊರ ಜನ ಏನು ಇಷ್ಟ ಪಡುತ್ತಿದ್ದಾರೆ ನೋಡು ಎಂದು ಹೇಳಿದ್ದ. ಆ ಚಿತ್ರದ ಒಂದು ಹಾಡು ನನಗೆ ಇಷ್ಟವಾಗಿ ನನ್ನ ನೆನಪಿನಾಳಕ್ಕೆ ಸೇರಿ ಹೋಗಿತ್ತು. ಅದು: 


'ಹರ್ ಸವಾಲ್ ಕಾ ಜವಾಬ್ ನಹಿ ಮಿಲ್ ಸಕ್ತಾ, 

ಮೇರಾ ಪ್ಯಾರ್ ಕಾ ಹಿಸಾಬ್ ನಹಿ ಮಿಲ್ ಸಕ್ತಾ' 

(ಅನುವಾದ: 

ಪ್ರತಿ ಪ್ರಶ್ನೆಗೆ ಉತ್ತರ ಸಿಗುವುದಿಲ್ಲ

ನನ್ನ ಪ್ರೀತಿ ಲೆಕ್ಕಕ್ಕೆ ಸಿಗುವುದಿಲ್ಲ)


ಎನ್ನುವ ಹಾಡು. ಅದು ಪ್ರೇಮಿಗಳು ಸಂತೋಷದಿಂದ ಹಾಡುವ ಹಾಡು ಆಗಿದ್ದರೂ, ಅದು ದುಃಖದ ಸನ್ನಿವೇಶಕ್ಕೂ ಅಷ್ಟೇ ಚೆನ್ನಾಗಿ ಹೊಂದಾಣಿಕೆ ಆಗುತ್ತದೆ ಎನ್ನುವ ವಿಷಯ ನನಗೆ ತಿಳಿಯಲು ಮೂವತ್ತು ವರುಷಗಳು ಹಿಡಿಯಿತು.


ವಿಚಾರ ಮಾಡಿ ನೋಡಿ. ಹಣ, ಆಸ್ತಿಗಳು ಲೆಕ್ಕಾಚಾರಕ್ಕೆ ಸಿಗುತ್ತವೆ. ಆದರೆ ಪ್ರೀತಿ, ಪ್ರೇಮ, ಸಂಬಂಧಗಳನ್ನು ಹೇಗೆ ಅಳತೆ ಮಾಡುವಿರಿ? ನಿಮ್ಮ ಮಗುವನ್ನು ಅದು ತನ್ನ ತಂದೆ ತಾಯಿಗಳನ್ನು ಎಷ್ಟು ಪ್ರೀತಿ ಮಾಡುತ್ತದೆ ಎಂದು ಕೇಳಿ ನೋಡಿ. ಅದು ಎದೆ ಉಬ್ಬಿಸಿ, ಕೈಗಳನ್ನು ಎಷ್ಟು ಸಾಧ್ಯವೋ ಅಷ್ಟು ಅಗಲ ಮಾಡಿ ಹೇಳುತ್ತದೆ 'ಇಷ್ಟು' ಎಂದು. ಆ ಮಗು ದೊಡ್ಡವನಾಗಿ ಮೋಸದ ಅನುಭವ ಆದ ಮೇಲೆ ಕೇಳಿ ನೋಡಿ, ಮೋಸ ಹೋದ ನೋವು ಎಷ್ಟು ಎಂದು. ಅದು ಮತ್ತೆ ಕೈ ಅಗಲ ಮಾಡಿ ಹೇಳುವ ಗೋಜಿಗೆ ಹೋಗುವುದಿಲ್ಲ. ಬದಲಿಗೆ ಕಣ್ಣಿನಾಳದಲ್ಲಿ ನಿಮಗೆ ಉತ್ತರ ಸಿಕ್ಕಿರುತ್ತದೆ.  ಸಮುದ್ರದಾಳವನ್ನು ಉಸಿರು ಬಿಗಿದಿಡಿದುಕೊಂಡು ಅಳತೆ ಮಾಡುವ ಧೀರರಿದ್ದಾರೆ. ಆದರೆ ಹೃದಯದ ಆಳವನ್ನು ಅಳತೆ ಮಾಡಿದವರು ಎಲ್ಲಿದ್ದಾರೆ?


ನಂಬಿಕೆ ಮತ್ತು ಮೋಸ ಒಂದೇ ನಾಣ್ಯದ ಎರಡು ಮುಖಗಳು. ನೀವು ನಂಬಿದಲ್ಲಿ ಮಾತ್ರ ಮೋಸ ಹೋಗಲು ಸಾಧ್ಯ. ನಂಬದೆ ಇದ್ದಲ್ಲಿ ಎಲ್ಲಿಯ ಮೋಸ? ನೀವು ಎಷ್ಟು ಬಲವಾಗಿ ನಂಬಿದ್ದೀರೋ, ಅಷ್ಟು ಆಳದ ಮೋಸ ಸಾಧ್ಯ. ನಂಬದೆ ಜೀವನ ಸಾಧ್ಯ ಇಲ್ಲ, ಹಾಗೆಯೆ ಮೋಸ ಹೋಗದೆ ಬದುಕಲು ಕೂಡ ಸಾಧ್ಯ ಇಲ್ಲ. ಲೆಕ್ಕಾಚಾರಕ್ಕೆ ಸಿಗದ ನೋವುಗಳಿಗೆ ಮದ್ದಿಲ್ಲ. ಅವರು ನಿಮಗೆ ಏಕೆ ಮೋಸ ಮಾಡಿದರು ಅಥವಾ ಮೋಸ ಹೋಗುವಷ್ಟು ಅವಿವೇಕಿ ನೀವೇಕೆ ಆಗಿದ್ದೀರಿ ಎನ್ನುವ ಪ್ರಶ್ನೆಗೆ ನಿಮಗೆ ಸಮಂಜಸ ಉತ್ತರ ಸಿಗದೇ ಹೋಗಬಹುದು. ಅದನ್ನೇ ವಿಚಾರ ಮಾಡುತ್ತಾ ಕೂಡುವ ಬದಲು ಸುಮ್ಮನೆ ಹಾಡು ಕೇಳಿ:


'ಹರ್ ಸವಾಲ್ ಕಾ ಜವಾಬ್ ನಹಿ ಮಿಲ್ ಸಕ್ತಾ, 

ಮೇರಾ ಪ್ಯಾರ್ ಕಾ ಹಿಸಾಬ್ ನಹಿ ಮಿಲ್ ಸಕ್ತಾ' 


https://www.youtube.com/watch?v=MUWZimGH4Sk&list=RDMUWZimGH4Sk&start_radio=1




Saturday, February 4, 2023

ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಉಬ್ಬು ಶಿಲ್ಪಗಳು

ಮಸ್ಕಿಯ ಬೆಟ್ಟದ ಮೇಲಿನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಮೇಲಿನ ಸುಣ್ಣ ಬಣ್ಣವನ್ನು ತೆರವುಗೊಳಿಸಿದ್ದರಿಂದ, ದೇವಸ್ಥಾನದ ಗೋಡೆಗಳ ಮೇಲಿದ್ದ ಉಬ್ಬು ಶಿಲ್ಪಗಳು ಸ್ಪಷ್ಟವಾಗಿ ಗೋಚರಿಸತೊಡಗಿವೆ.
ಸಾಕಷ್ಟು ಶಿಲ್ಪಗಳು ವಿಜಯನಗರ ಸಾಮ್ರಾಜ್ಯಕ್ಕಿಂತ ಹಳೆಯದಾಗಿರಬಹುದಾದ ಶೈಲಿಯನ್ನು ಹೋಲುತ್ತವೆ. ಸುಮಾರು ಎಂಟು ನೂರು-ಸಾವಿರ ವರುಷ ಅಥವಾ ಅದಕ್ಕೂ ಹಳೆಯದಾದ ಇತಿಹಾಸ ಈ ದೇವಸ್ಥಾನಕ್ಕಿರಬಹುದು ಎನ್ನುವುದು ನನ್ನ ಅಂದಾಜು. ಅಚ್ಚರಿ ಎನ್ನುವಂತೆ ಕೆಲವು ಮಿಥುನ ಶಿಲ್ಪಗಳು ಕೂಡ ಈ ದೇವಸ್ಥಾನದ ಗೋಡೆಗಳ ಮೇಲಿವೆ.

ಬಾಗಿಲುಗಳ ಸುತ್ತ ಮೆದು ಕಲ್ಲಿನಲ್ಲಿ ಮೂಡಿರುವ ಶಿಲ್ಪಗಳು, ಹೊರ ಗೋಡೆಗಳ ಮೇಲೆ ಕಟ್ಟಡ ಕಲ್ಲಿನಲ್ಲೇ ಮೂಡಿವೆ. ಬೇರೆ ಬೇರೆ ಕಾಲದಲ್ಲಿ ಈ ಶಿಲ್ಪಗಳು (ನವೀಕರಣ, ಪುನರುಜ್ಜೀವನ ಸಮಯದಲ್ಲಿ) ಇಲ್ಲಿ ಜೋಡಣೆಗೊಂಡಿರುವ ಸಾಧ್ಯತೆ ಕೂಡ ಇದೆ. ಹಾಗಾಗಿ ಎಲ್ಲ ಶಿಲ್ಪಗಳು ಒಂದೇ ಕಾಲಮಾನದ್ದಾಗಿರಲಿಕ್ಕಿಲ್ಲ ಎನ್ನುವುದು ನನ್ನ ಅಭಿಪ್ರಾಯ. ಅದನ್ನು ತಜ್ಞರೇ ದೃಢಪಡಿಸಬೇಕು.

ಮುಂಬಾಗಿಲನ ಮೇಲೆ ಪಂಚವಾದ್ಯಗಳನ್ನು ನುಡಿಸುತ್ತಿರುವವರು



ಕತ್ತಿ ಯುದ್ಧ ಮಾಡುತ್ತಿರುವ ಕುದುರೆ ಸವಾರರು




ಮದುವೆ ದಿಬ್ಬಣವೋ ಅಥವಾ ರಾಜ ರಾಣಿ ಸವಾರಿಯೊ?

ಸಿಂಹವನ್ನು ಸಂಹರಿಸುತ್ತಿರುವುದು (ಹೊಯ್ಸಳರ ಚಿನ್ಹೆಯನ್ನು ಹೋಲುತ್ತದೆ)

ಶಿವಲಿಂಗಕ್ಕೆ ಹಾಲೆರೆಯಿತ್ತಿರುವ ಹಸು

ಮೂರು ಹಂಸಗಳು (NCERT adopted this as their logo)

ಅಭಯ ಆಂಜನೇಯ (ವಿಜಯನಗರ ಕಾಲದಲ್ಲಿ ಈ ಭಂಗಿಯ ಅನೇಕ ದೇವಸ್ಥಾನಗಳು ನಿರ್ಮಾಣ ಆಗಿದ್ದವು)

ಸಂಗೀತ, ನೃತ್ಯ ಮತ್ತು ಗಾಯನ

ವರಾಹ (ವಿಜಯನಗರ ಮತ್ತು ಚಾಲುಕ್ಯ ಸಾಮ್ರಾಜ್ಯದ ಚಿನ್ಹೆ) . ಜಿಂಕೆ ಮೌರ್ಯ ಸಾಮ್ರಾಜ್ಯದ ನಾಣ್ಯಗಳ ಮೇಲಿರುತ್ತಿತ್ತು.

ಗಣಪತಿ

ಮಲಗಿರುವ ವಿಷ್ಣು

ಶಿಲಾಯುಗದ ಪಳೆಯುಳಿಕೆಗಳು, ಅಶೋಕನ ಶಿಲಾ ಶಾಸನ ಇರುವ ಈ ಊರಿನಲ್ಲಿ ಜನ ವಸತಿ ಪುರಾತನ ಕಾಲದಿಂದ ಇತ್ತು ಎನ್ನುವುದನ್ನು ಸೂಚಿಸುವುದಲ್ಲದೆ,  ದೇವಸ್ಥಾನದ ಮೇಲಿನ ಶಿಲ್ಪಗಳು ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಬಹು ಕಾಲದಿಂದ ಆದರಿಸಲ್ಪಟ್ಟಿತ್ತು ಎನ್ನುವುದನ್ನು ಸ್ಪಷ್ಟ ಪಡಿಸುತ್ತದೆ.


ಸಂಬಂಧಿಸಿದ ಲೇಖನ: ಮಲ್ಲಿಕಾರ್ಜುನ ಶಿಖರಕ್ಕೆ ಬೆಳಕಾಗಿ



Sunday, January 22, 2023

ಶ್ರೀ ಭ್ರಮರಾಂಭ ಮಲ್ಲಿಕಾರ್ಜುನ ದೇವಸ್ಥಾನ, ಮುಡುಕುತೊರೆ (ಮೈಸೂರು ಜಿಲ್ಲೆ)



'ಮಲ್ಲಿಕಾ' + 'ಅರ್ಜುನ' = 'ಮಲ್ಲಿಕಾರ್ಜುನ'
(
ಮಲ್ಲಿಗೆ ಹೂವಿನಿಂದ ಅರ್ಜುನನಿಂದ ಪೂಜಿಸಿಗೊಂಡ ಶಿವ)

ಮಹಾಭಾರತ ಕಾಲದಲ್ಲಿ, ಇಲ್ಲಿ ಶಿವನ ಪೂಜೆಯನ್ನು 'ಮಲ್ಲಿಕಾ' ಹೂವಿನಿಂದ 'ಅರ್ಜುನಮಾಡಿದ್ದರಿಂದ ದೇವಸ್ಥಾನ 'ಮಲ್ಲಿಕಾರ್ಜುನ' ದೇವಸ್ಥಾನವೆಂದೇ ಪ್ರಸಿದ್ಧಿಗೆ ಬಂತು.

 

ಮುರಿದ ತೊರೆ 'ಮುಡುಕುತೊರೆ'

ಇಲ್ಲಿ ಕಾವೇರಿ ನದಿ ಮುರಿದ ತೊರೆಯಂತೆ ಹರಿಯುವುದರಿಂದ, ಸ್ಥಳಕ್ಕೆ 'ಮುಡುಕುತೊರೆ' ಎಂದು ಹೆಸರು. ಅದು ಸ್ಥಳ ಪುರಾಣ. ಇಲ್ಲಿ ಬೇಸಿಗೆಯಲ್ಲಿ ಕಾವೇರಿ ತೊರೆಯಂತೆ ಕಾಣುತ್ತಾಳೆ ಏನೋ? ಆದರೆ ನಾನು ಈಗ ನೋಡುವಾಗ ಕಾವೇರಿ ಇಲ್ಲಿ ಮೈ ತುಂಬಿ ಹರಿಯುತ್ತಿದ್ದಾಳೆ. ಹಾಗೆಯೇ ಸುತ್ತಲಿನ ಪರಿಸರ ಹಸಿರಾಗಿರುವುದು ಮತ್ತು ಹಲವೆಡೆ ದಟ್ಟ ಕಾಡು ಅವಳದೇ ಆಶೀರ್ವಾದ. ಅವಳು ರೈತರಿಗೆ ಭಾಗ್ಯ ದೇವತೆ. ಸಾಕಷ್ಟು ದೇವಸ್ಥಾನಗಳು ಅವಳ ದಡದಲ್ಲಿ. 



೧,೨೦೦ ವರುಷಗಳ ಪರಂಪರೆ

ಸುಮಾರು ಎಂಟನೇ ಶತಮಾನದಲ್ಲಿ, ತಲಕಾಡಿನ ಗಂಗ ರಾಜರಿಂದ ನಿರ್ಮಿಸಲ್ಪಟ್ಟ ದೇವಸ್ಥಾನ ನಂತರ ವಿಜಯನಗರ ಮತ್ತು ಮೈಸೂರು ಅರಸರಿಂದ ಕೂಡ ಆದರಿಸಲ್ಪಿಟ್ಟಿದೆ. ಇಂದಿನ ಕಾಲದ ಪ್ರಜಾಪ್ರಭುತ್ವ ಸರ್ಕಾರಗಳು ಕೂಡ ದೇಣಿಗೆ ನೀಡಿ ದೇವಸ್ಥಾನವನ್ನು ಸುಸ್ಥಿತಿಯಲ್ಲಿಟ್ಟಿವೆ. ಅದಕ್ಕೂ ಮಿಗಿಲಾಗಿ ಮಲ್ಲಿಕಾರ್ಜುನನ ಭಕ್ತರು, ಸುತ್ತೂರು ಮಠದ ಗಮನ ಕೂಡ. ಅವೆಲ್ಲವೂ ಸೇರಿ, ದೇವಸ್ಥಾನ ,೨೦೦ ವರುಷಗಳ ಕಾಲ ಭಾರತದ ಸಂಸ್ಕೃತಿ, ಪರಂಪರೆಯ ಕುರುಹಾಗಿ ಜನ ಜೀವನದಲ್ಲಿ ಬೆರೆತು ಹೋಗಿದೆ


 

ಶ್ರೀ ಮಲ್ಲಿಕಾರ್ಜುನನ ಉತ್ಸವ ಮೂರ್ತಿ

ನದಿಯ ಪಕ್ಕ ಬೆಟ್ಟ. ಅದರ ಮೇಲೆ ಪತ್ನಿ ಭ್ರಮರಾಂಭೆಯ ಜೊತೆ ವಿರಾಜಮಾನನಾಗಿರುವ ಮಲ್ಲಿಕಾರ್ಜುನನ ದರುಶನಕ್ಕೆ ನೀವು ಕುಟುಂಬದ ಅಥವಾ ಸ್ನೇಹಿತರ ಜೊತೆಗೆ ತೆರಳಬಹುದು. ಮೆಟ್ಟಿಲ ಮೂಲಕ ಬೆಟ್ಟ ಹತ್ತಬಹುದು. ಇಲ್ಲವೇ ಬೆಟ್ಟದ ಮೇಲ್ಭಾಗದವರೆಗೆ ವಾಹನದಲ್ಲಿ ಚಲಿಸಿ ನಂತರ ಕೆಲವೇ ಮೆಟ್ಟಿಲುಗಳನ್ನೇರಿ ಕೂಡ ದರುಶನ ಪಡೆಯಬಹುದು


ಮೆಟ್ಟಿಲ ಮೂಲಕ ಬೆಟ್ಟ ಹತ್ತಬಹುದು


ಇಲ್ಲಿಯ ಶಾಂತ ಪರಿಸರದಲ್ಲಿ ದಿನ ಕಳೆಯಬಯಸುವವರಿಗೆ ನದಿಯ ದಡದಲ್ಲಿ ಒಂದು ರೆಸಾರ್ಟ್ ಕೂಡ ಇದೆಮಕ್ಕಳಿಗೆ ಆಕರ್ಷಣೆಯಾಗಿ ನದಿಯಲ್ಲಿ ತೆಪ್ಪಗಳ ಮತ್ತು ದೋಣಿಗಳ ಸೌಲಭ್ಯ ಇದೆ. ನದಿಯ ಆಚೆ ಕಡೆ ಇರುವುದೇ ತಲಕಾಡು. ತಲಕಾಡಿನ ಪಂಚಲಿಂಗಗಳಲ್ಲಿ ಮಲ್ಲಿಕಾರ್ಜುನ ದೇವಸ್ಥಾನವೂ ಒಂದು. ಬೋಟ್ ಸವಾರಿ ರೆಸಾರ್ಟ್ ನಲ್ಲಿ ಉಳಿದುಕೊಂಡವರಿಗೆ ಮಾತ್ರ. ಅಥವಾ ತಲಕಾಡು ಕಡೆಯಿಂದ ಮುಂಗಡ ಕಾಯ್ದಿರಿಸಿಕೊಳ್ಳಬೇಕು. ಸುಮ್ಮನೆ  ಹೋದವರಿಗೆ ಕಾವೇರಿ ಮಡಿಲಲ್ಲಿ ಕೈ-ಕಾಲಾಡಿಸಿ, ಫೋಟೋ ತೆಗೆದುಕೊಳ್ಳಲು ಅಡ್ಡಿಯೇನಿಲ್ಲ.


ಕಾವೇರಿ ಮಡಿಲಲ್ಲಿ ಸ್ನೇಹಿತರೊಂದಿಗೆ


ಸುತ್ತ ಒಂದೆರಡು ಗಂಟೆಗಳ ಪ್ರಯಾಣದಲ್ಲಿ ದೇವಸ್ಥಾನಗಳ ಸಮೂಹವೇ ಇದೆ.  ಮಲೆ ಮಹದೇಶ್ವರ ಬೆಟ್ಟ, ಬಿಳಿಗಿರಿ ರಂಗನ ಬೆಟ್ಟ, ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನಗಳು ಹತ್ತಿರದ ಹಾದಿ. ದೈವ ಆರಾಧಕರಿಗೆ ಮತ್ತು ಕಾಡು-ಬೆಟ್ಟ ನೋಡಬಯಸುವವರಿಗೆ ಕಣ್ಣಿಗೆ ಹಬ್ಬ ಮತ್ತು ಮನಸ್ಸಿಗೆ ತೃಪ್ತಿಶಿವರಾತ್ರಿ ಸಮಯದಲ್ಲಿ ಶಿವನ ದೇವಸ್ಥಾನಗಳು ಹೆಚ್ಚಿನ ಜನಸಂದಣಿ ಕಾಣುತ್ತವೆ. ಆದರೆ ಲೋಕ ಕಲ್ಯಾಣ ಬಯಸುವ ಭ್ರಮರಾಂಭ-ಮಲ್ಲಿಕಾರ್ಜುನರ ದರುಶನಕ್ಕೆ ಹಬ್ಬಗಳ ಹಂಗಿಲ್ಲದೆ ಬರುವ ಜನರಿಗೇನು ಕಡಿಮೆ ಇಲ್ಲ.

ಕಣ್ಣಿಗೆ ಹಬ್ಬ ಮತ್ತು ಮನಸ್ಸಿಗೆ ತೃಪ್ತಿ

 


ಬೆಂಗಳೂರಿನಿಂದ ಇಲ್ಲಿಗೆ ಮದ್ದೂರು-ಮಳವಳ್ಳಿಯ ಮೂಲಕ ತಲುಪಬಹುದುಸುಮಾರು ೧೩೦ ಕಿ.ಮೀದೂರದ ಹಾದಿನಂತರದ ಪ್ರಯಾಣಕ್ಕೆ ತಲಕಾಡು ಇಲ್ಲವೇ ೫೦ ಕಿ.ಮೀದೂರದ ಮೈಸೂರಿಗೆ ತೆರಳಬಹುದು. ಬೆಂಗಳೂರಿಗೆ ವಾಪಸ್ಸಾಗುವವರು ಗಗನಚುಕ್ಕಿ ಭರಚುಕ್ಕಿ ಜಲಪಾತಗಳನ್ನು ನೋಡಿಕೊಂಡು ಹೋಗಬಹುದು. ಆದರೆ ಸಂಜೆ ಐದರ ನಂತರ ಅವುಗಳ ದಾರಿ ಮುಚ್ಚಲಾಗುತ್ತದೆ ಎನ್ನುವುದು ಗಮನದಲ್ಲಿ ಇರಲಿ. 


ಭರಚುಕ್ಕಿ ಜಲಪಾತ

Friday, January 6, 2023

ರೈತ ಮತ್ತವನ ಕುದುರೆ

(ಇದು ಚೀನಾ ದೇಶದ ನೀತಿ ಕಥೆಯೊಂದರ ಭಾವಾನುವಾದ)


ಒಂದಾನೊಂದು ಕಾಲದಲ್ಲಿ ಚೀನಾ ದೇಶದಲ್ಲಿ ಒಬ್ಬ ರೈತನಿದ್ದ. ಅವನ ಕುದುರೆ ಕಳೆದು ಹೋಗಿತ್ತು. ನೆರೆ ಹೊರೆಯವರು ಬಂದು ಆ ರೈತನ ಹತ್ತಿರ 'ಎಷ್ಟು ಕೆಟ್ಟ ಸಂಗತಿ' ಎಂದು ರೈತನಿಗೆ ಹೇಳಿದರು. ರೈತ ಉತ್ತರಿಸಿದ 'ಇರಬಹುದು'.


ಕೆಲ ದಿನಗಳಿಗೆ ಕಳೆದು ಹೋಗಿದ್ದ ಕುದುರೆ ರೈತನ ಹತ್ತಿರ ವಾಪಸ್ಸಾಯಿತು. ಅದರ ಜೊತೆಗೆ ಇನ್ನು ನಾಲ್ಕು ಕಾಡು ಕುದುರೆಗಳು. ನೆರೆ ಹೊರೆಯವರು ರೈತನ ಹತ್ತಿರ ಬಂದು ಹೇಳಿದರು 'ಎಷ್ಟು ಒಳ್ಳೆಯ ಸಂಗತಿ'. ರೈತ ಉತ್ತರಿಸಿದ 'ಇರಬಹುದು'.


ಅದರ ಮರುದಿನ, ರೈತನ ಮಗ ಹೊಸದಾಗಿ ಬಂದು ಕಾಡು ಕುದುರೆಗಳನ್ನು ಪಳಗಿಸಲು ಹೋಗಿ ಕಾಲು ಮುರಿದುಕೊಂಡ. ನೆರೆ ಹೊರೆಯವರು ರೈತನ ಹತ್ತಿರ ಬಂದು ಹೇಳಿದರು 'ಎಷ್ಟು ಕೆಟ್ಟ ಸಂಗತಿ'. ರೈತ ಉತ್ತರಿಸಿದ 'ಇರಬಹುದು'.


ಅದಾಗಿ ಕೆಲ ದಿನಗಳಿಗೆ ಆ ದೇಶದಲ್ಲಿ ಯುದ್ಧ ಆರಂಭವಾಗಿ, ಸೈನ್ಯಕ್ಕೆ ಒತ್ತಾಯದಿಂದ ಭರ್ತಿ ಮಾಡಿ ಕೊಳ್ಳಲು ಸೈನ್ಯ ಅಧಿಕಾರಿಗಳು ಬಂದರು. ಅವರು ರೈತನ ಮಗನ ಕಾಲು ಮುರಿದಿದ್ದಕ್ಕೆ ಅವನನ್ನು ಕರೆದುಕೊಂಡು ಹೋಗಲಿಲ್ಲ. ನೆರೆ ಹೊರೆಯವರು ರೈತನ ಹತ್ತಿರ ಬಂದು ಹೇಳಿದರು 'ಎಷ್ಟು ಒಳ್ಳೆಯ ಸಂಗತಿ'. ರೈತ ಉತ್ತರಿಸಿದ 'ಇರಬಹುದು'.


ನೀತಿ: ಕೆಟ್ಟ ಘಟನೆಗಳು ಒಳ್ಳೆಯ ಪರಿಣಾಮಗಳನ್ನು ಬೀರಬಹುದು. ಹಾಗೆಯೆ ಒಳ್ಳೆಯ ಘಟನೆಗಳು ಕೆಟ್ಟ ಪರಿಣಾಮವನ್ನು ಕೂಡ.

Saturday, December 10, 2022

ಬೆಳಗಿನ ಜಾವದ ಬೆಂಗಳೂರು ರಸ್ತೆಗಳಲ್ಲಿ

ಬೆಳಗಿನ ಜಾವ ನಾಲ್ಕು ಗಂಟೆ. ಮನೆ ಹೊರಗೆ ನಿಲ್ಲಿಸಿದ ಕಾರು ಯಾವುದೇ ತಕರಾರು ಇಲ್ಲದೆ ಒಂದೇ ಸಲಕ್ಕೆ ಗುರುಗುಟ್ಟತೊಡಗುತ್ತದೆ. ಬೆಂಗಳೂರಿನ ನಿರ್ಜನ ರಸ್ತೆಗಳಲ್ಲಿ ಕಾರು ಓಡಿಸತೊಡಗುತ್ತೇನೆ. ಮುಂದೆ ಅಡ್ಡ ಬರುವವರಿಲ್ಲ. ಹಿಂದೆ ಹಾರ್ನ್ ಹೊಡೆಯುವವರಿಲ್ಲ. ನಿಶಬ್ದ, ಏಕಾಂತ ಬೇಡವೆನಿಸಿ ರೇಡಿಯೋ ಹಚ್ಚುತ್ತೇನೆ. ತಣ್ಣನೆಯ ಕೊರೆಯುವ ಚಳಿಯಲ್ಲಿ ಬೆಚ್ಚನೆಯ ಹಾಡು ಕೇಳಿಸುತ್ತದೆ.

'ಮನಸು ಬರೆದ ಮಧುರ ಗೀತೆ, ನೀನೇ
ಹರೆಯ ಸುರಿದ ಸ್ವಾತಿ ಮುತ್ತು, ನೀನೇ
ಕವಡೆ ಒಳಗೆ ಹನಿಯ ಬೆಸುಗೆ
ಮುತ್ತು ಹಲವು ಬಗೆ'

ನಾನು ಹೋಗಬೇಕಾದ ಜಾಗ ತಲುಪಿ ಆಗಿದೆ. ಹಗಲು ಹೊತ್ತಿನಲ್ಲಿ ಪಾರ್ಕಿಂಗ್ ಸಿಗದ ಆಸ್ಪತ್ರೆ ಬಾಗಿಲ ಮುಂದೆಯೇ ರಾಜಾರೋಷವಾಗಿ ಕಾರು ನಿಲ್ಲಿಸುತ್ತೇನೆ. ಗಿಜಿಗುಡುವ ರಿಸೆಪ್ಶನ್ ನಲ್ಲಿ ಆ ಹೊತ್ತಿನಲ್ಲಿ ಯಾರೂ ಇಲ್ಲ. ಸೆಕ್ಯೂರಿಟಿ ಗಾರ್ಡ್ ಕೂಡ ಮೂಲೆಯಲ್ಲಿ ಹೊದ್ದು ಮಲಗಿದ್ದಾನೆ. ಡಾಕ್ಟರ್ ತಪಾಸಣೆ ನಡೆಸುವ ಕೋಣೆಯಲ್ಲಿ ಜ್ಞಾನಭಾರತಿ ಠಾಣೆಯ ಪೊಲೀಸರು ಒಬ್ಬರನ್ನು ತಪಾಸಣೆಗೆ ಕರೆದುಕೊಂಡು ಬಂದಿದ್ದಾರೆ. ಹೆಚ್ಚಿಗೆ ಮಾತನಾಡದ, ಆದರೆ ಸೂಕ್ಷ್ಮಗ್ರಾಹಿಯಾದ, ಅದೇ ಕಾರಣಕ್ಕೆ ಅವರನ್ನು ನಾನು ಗೌರವಿಸುವ ವೈದ್ಯ ಭೂಷಣ್ ತಮ್ಮ ಗಡ್ಡ ಕೆರೆದುಕೊಳ್ಳುತ್ತಾ, ತಲೆ ತಗ್ಗಿಸಿ ರಿಪೋರ್ಟ್ ಬರೆಯುತ್ತಿದ್ದಾರೆ. ನಾನು ಮೊದಲ ಮಹಡಿಗೆ ಹೋಗುತ್ತೇನೆ. ಅಲ್ಲಿ ಟೇಬಲ್ ಮೇಲೆಯೇ ತಲೆಯಿಟ್ಟು ಮಲಗಿದ ನರ್ಸ್ ಅನ್ನು ಎಬ್ಬಿಸಿ ನಾನು ತಂದ ಇಂಜೆಕ್ಷನ್ ಗಳನ್ನು ಕೊಡುತ್ತೇನೆ. ಚಿಕ್ಕ ಮಗನಿಗೆ ಬಂದ ವೈರಲ್ ಫೀವರ್ ದೊಡ್ಡ ಮಗನಿಗೂ ಬಂದಾಗಿದೆ. ವೈದ್ಯರು ತಾಕೀತು ಮಾಡಿದಂತೆ ಬೆಳಿಗ್ಗೆ, ಸಾಯಂಕಾಲ ಇಂಜೆಕ್ಷನ್ ಕೊಡಿಸುವುದಷ್ಟೇ ನನ್ನ ಕೆಲಸ. ಸುತ್ತ ಕಣ್ಣು ಹಾಯಿಸುತ್ತೇನೆ. ಒಂದು ವರುಷದ ಹಸುಳೆಯಿಂದ ತೊಂಬತ್ತರ ವೃದ್ಧರವರೆಗೆ ಒಬ್ಬೊಬ್ಬರು ಒಂದು ಹಾಸಿಗೆ ಹಿಡಿದು ಮಲಗಿದ್ದಾರೆ. ಜೀವನ ಆರಂಭ ಆಗುವುದು ಮತ್ತು ಕೊನೆಗೊಳ್ಳುವುದು ಆಸ್ಪತ್ರೆಯಲ್ಲೇ ಅಲ್ಲವೇ? ಆದರೆ ನಡುವೆ? ಅಲ್ಲಿಂದ ಹೊರ ಬಂದು ಮತ್ತೆ ಕಾರು ಸೇರಿ ಹಾಡು ಕೇಳಲು ತೊಡಗುತ್ತೇನೆ. ರಾತ್ರಿ ಬರಬೇಕಾದ ಹಾಡು ನಸುಕಲ್ಲಿ ಬರುತ್ತಿದೆ.

'ಮಲಗು ಮಲಗು ಚಾರುಲತೆ
ನಿನಗೂ ನೆರಳಿದೆ'

ಮಾಡಲು ಬೇರೆ ಕೆಲಸವಿಲ್ಲದ ನಾನು ಹಾಡು ಗಮನವಿಟ್ಟು ಕೇಳತೊಡುಗುತ್ತೇನೆ.

'ಎತ್ತಣ ಭೂಮಿಯ ಬಂಗಾರ
ಎತ್ತಣ ಮುತ್ತದು ಕಡಲೂರ
ಸೇರಿಸಿ ಪೋಣಿಸೋ ಮಣಿಹಾರ
ಸೃಷ್ಟಿಯ ಸುಂದರ ಹುನ್ನಾರ

ನಾನೆಲ್ಲೋ ನೀನೆಲ್ಲೋ ಇದ್ದವರು
ಈಗೊಂದು ಸೂರಡಿ ಸೇರಿದೆವು'

ಎಲ್ಲೋ ಸಿಗುವ ಬಂಗಾರ, ಮುತ್ತು ಹಾರವಾದಂತೆ ಎಲ್ಲೋ ಹುಟ್ಟಿದ ಗಂಡು-ಹೆಣ್ಣು ಜೊತೆಯಾಗುತ್ತಾರೆ. ಆದರೆ ಎಲ್ಲೋ ಹುಟ್ಟಿದ ನಾನು ಬೆಂಗಳೂರು ಸೇರಿದ್ದು ಸೃಷ್ಟಿಯ ಹುನ್ನಾರವೇ? ಅದೆಲ್ಲ ಏನಿಲ್ಲ. ಹೊಟ್ಟೆಪಾಡು ಅಷ್ಟೇ ಎನ್ನುವ ಹಾಗೆ ರಸ್ತೆಗಿಳಿದಿದ್ದ ಹಾಲು, ಪೇಪರ್ ಹಂಚುವ ಮಿತ್ರರು ಓಡಾಡುತ್ತಿದ್ದರು. ಜೀವನ ಸಾಗುವುದು ಕಾರಲ್ಲಲ್ಲ, ರಸ್ತೆಯ ಮೇಲೆ ಎಂದೆನಿಸಿ ರಸ್ತೆಗೆ ಬಂದು ನಿಂತೆ. ದುಡಿಯುವವರಿಗೆ ಬೆಂಗಳೂರು ಸ್ವರ್ಗ. ಆದರೆ ನೆಮ್ಮದಿ ಕೇಳುವವರಿಗೆ ಅಲ್ಲ. ಚಿಕ್ಕ ಊರುಗಳಲ್ಲಿ ಸ್ಪರ್ಧೆ ಕಡಿಮೆ ಹಾಗೆಯೆ ದುಡಿಮೆ ಕೂಡ. ಅದನ್ನು ಸರಿದೂಗಿಸಲು ಎಂಬಂತೆ ನೆಮ್ಮದಿ ಮಾತ್ರ ಧಾರಾಳ. ಆದರೆ ಎಲ್ಲದಕ್ಕೂ ಕೊನೆ ಎಂಬಂತೆ ಹಣದ ದಾಹ ಇರುವವರೆಗೆ ಮಾತ್ರ ಬೆಂಗಳೂರಿನ ಜಂಜಾಟ ಸಹಿಸಲು ಸಾಧ್ಯ. ಹನ್ನೆರಡನೆಯ ಶತಮಾನದಲ್ಲಿ ಗಿಜಿಗುಡುವ ಬಸವಕಲ್ಯಾಣವನ್ನು ಮತ್ತು ಬಿಜ್ಜಳನ ಅಧಿಕಾರವನ್ನು ಧಿಕ್ಕರಿಸಿ ಶರಣರು ಹೊರನಡೆಯಲಿಲ್ಲವೇ? ಬಸವಣ್ಣನವರು ಕೂಡಲ ಸಂಗಮವನ್ನು ಆಯ್ದುಕೊಂಡರೆ, ಅಕ್ಕ ಮಹಾದೇವಿಯನ್ನು ಕೈ ಬೀಸಿ ಕರೆದದ್ದು ಕದಳೀವನ. ಬೆಂಗಳೂರೆಂಬ ಅನುಭವ ಮಂಟಪ ಸಾಕಾಗುವ ಹೊತ್ತಿಗೆ ನಾನು ಕೂಡ ಇಲ್ಲಿಂದ ಹೊರಹೋಗಬೇಕು.

ಕತ್ತಲು ಮರೆಯಾಗಿ ಬೆಳಕು ಹಬ್ಬಲು ಶುರುವಾಯಿತು. ಬೆಂಗಳೂರು ತನ್ನ ದಿನದ ವ್ಯವಹಾರಕ್ಕೆ ಅಣಿಯಾಗಲು ತೊಡಗಿತ್ತು. 'ಇರುವಷ್ಟು ದಿನವಾದರೂ ಇಲ್ಲಿ ಸಂತೋಷದಿಂದ ಇರು ಮಾರಾಯ' ಎನ್ನುವಂತೆ ಅದು ನನ್ನನ್ನು ನೋಡಿ ನಕ್ಕಂತೆ ಅನಿಸಿತು. ಹತ್ತಿರದ ಹೋಟೆಲ್ ನಲ್ಲಿ ಬಿಸಿ ಬಿಸಿ ಕಾಫಿ ಹೀರುತ್ತಾ ನಾನು ಕೂಡ ನಗೆ ಬೀರಿದೆ.

Saturday, November 26, 2022

ಎಚ್ಚರವಿರಲಿ ಎಂದ ಬುದ್ಧ ಬೇರೆ ನಿಯಮ ಹೇಳಲಿಲ್ಲ

ಒಂದು ದಿನ ಬುದ್ಧನ ಶಿಷ್ಯ ಆನಂದ ಕೇಳಿದ 'ಒಂದು ವೇಳೆ ಸ್ತ್ರೀ ಎದುರಾದರೆ ಏನು ಮಾಡಬೇಕು?'

 

ಬುದ್ಧ ಉತ್ತರಿಸಿದ 'ನೆಲ ನೋಡಿ ಮಾತನಾಡು. ಅವಳನ್ನು ನೋಡಬೇಡ'

 

ಆನಂದ ಮರುಪ್ರಶ್ನೆ ಹಾಕಿದ 'ಅವಳನ್ನು ನೋಡಿ ಮಾತನಾಡುವ ಅವಶ್ಯಕತೆ ಬಂದರೆ?'

 

'ನೋಡು. ಆದರೆ ಮುಟ್ಟಬೇಡ' ಬುದ್ಧ ಸಮಾಧಾನದಿಂದ ಹೇಳಿದ.

 

ಆನಂದನ ಸವಾಲು ಮುಂದುವರೆಯಿತು 'ಒಂದು ವೇಳೆ ಮುಟ್ಟುವ ಅವಶ್ಯಕತೆ ಬಂದರೆ?'

 

'ಮೈ ಮೇಲೆ ಎಚ್ಚರವಿರಲಿ' ಎಂದು ಹೇಳಿದ ಬುದ್ಧ ಸುಮ್ಮನಾದ. ಮುಂದೆ ಬೇರೆ ಯಾವುದೇ ನಿಯಮ ಹೇಳಲಿಲ್ಲ.

 

ಬುದ್ಧ ಎಚ್ಚರವಿರಲಿ ಎಂದು ಹೇಳಿದ್ದು ನಮ್ಮ ಮನದ ಕಾಮನೆಗಳಿಂದ. ನಮ್ಮ ಮನದಾಸೆಗಳೇ ನಮ್ಮನ್ನು ದುಃಖಕ್ಕೆ ಈಡು ಮಾಡುತ್ತವೆ ಎಂದು ಅವನಾಗಲೇ ಅರಿತಿದ್ದ. ಅದನ್ನೇ ಸರಳವಾಗಿ 'ಆಸೆಯೇ ದುಃಖಕ್ಕೆ ಮೂಲ' ಎಂದು ಕೂಡ ಸಾರಿದ.

 

ಇಂದಿಗೆ ನಮ್ಮ ಸುತ್ತ ಮುತ್ತಲಿನ ಜನಗಳನ್ನೇ ನೋಡಿ. ಬುದ್ಧನ ಮಟ್ಟಿಗೆ ಅಲ್ಲದಿದ್ದರೂ ಸ್ವಲ್ಪ ಮಟ್ಟಿಗಿನ ಎಚ್ಚರ ಹೊಂದಿರುತ್ತಾರೆ. ಎಚ್ಚರವಿರುವವರು ದುಶ್ಚಟಗಳಿಗೆ ದಾಸರಾಗುವಿದಿಲ್ಲ. ಅವಕಾಶ ಇದ್ದಾಗಲೂ ನಯವಾಗಿ ತಿರಸ್ಕರಿಸಿ  ಮುಂದೆ ಸಾಗುತ್ತಾರೆ. ಎಂತಹ ಕಷ್ಟಗಳೇ ಬರಲಿ, ಅವರು ಕೊಲೆ-ಸುಲಿಗೆಗಳಿಗೆ ಇಳಿಯುವುದಿಲ್ಲ. ಅವರನ್ನು ಕಾಯುತ್ತಿರುವುದು ಅದೇ ಎಚ್ಚರ.

 

ಅದೇ ಎಚ್ಚರ ಇರದ ಮನುಷ್ಯರನ್ನು ನೋಡಿ. ಕುಡಿತಕ್ಕೆ ದಾಸರಾಗಿರುತ್ತಾರೆ. ಜೂಜಾಟಕ್ಕೆ ಮನೆ ಮಾರಲು ಹಿಂದೆ ಮುಂದೆ ನೋಡುವುದಿಲ್ಲ. ತಮ್ಮ ಸ್ವಾರ್ಥಕ್ಕೆ ಯಾರಿಗೆ ಬೇಕಾದರೂ ಅನ್ಯಾಯ ಮಾಡಲು ಹಿಂಜರಿಯುವುದಿಲ್ಲ. ಅವರು ಹೊರಗಡೆ ಎಷ್ಟೇ ಸಂತೋಷದಿಂದ ಇರುವಂತೆ ಕಂಡರೂ ಅದು ತೋರಿಕೆಯದ್ದಾಗಿರುತ್ತದೆ. ಏಕೆಂದರೆ ಸಂತೋಷದಿಂದ ಇರುವವನು ಇನ್ನೊಬ್ಬರಿಗೆ ಅನ್ಯಾಯ ಮಾಡಲು ಹೊರಡುವುದಿಲ್ಲ. ಮನದಲ್ಲಿ ಸಮಾಧಾನ ಇಲ್ಲದವನು ಮಾತ್ರ ಇನ್ನೊಬ್ಬರ ತಂಟೆಗೆ ಹೋಗಲು ಸಾಧ್ಯ.

 

ಎಚ್ಚರದ ಸಾಮರ್ಥ್ಯ ನಮ್ಮ ನಿಮ್ಮಲ್ಲಿ ಬೇರೆ ಬೇರೆ ಮಟ್ಟದಲ್ಲಿ ಇರುತ್ತದೆ. ಅದಕ್ಕೆ ತಕ್ಕಂತೆ ನಮ್ಮ ಸುಖ ಸಂತೋಷಗಳು ಕೂಡ ಬೇರೆ ಬೇರೆ ಮಟ್ಟದಲ್ಲಿ ಇರುತ್ತವೆ. ಅತಿಯಾಸೆ ಪಟ್ಟವನು ಮಾತ್ರ ಹೆಚ್ಚಿನ ದುಃಖ ಹೊಂದಲು ಸಾಧ್ಯ. ಎಚ್ಚರ ವಹಿಸಿ ಆಸೆ ತೊರೆದವನಿಗೆ, ದುಃಖಗಳು ಅಷ್ಟಾಗಿ ಬಾಧಿಸುವುದಿಲ್ಲಆಸೆ ಪಡುವುದನ್ನು ಪ್ರಕೃತಿ ನಮ್ಮಲ್ಲಿ ಸಹಜ ಗುಣ ಧರ್ಮವನ್ನಾಗಿಸಿದೆ. ಆಸೆ ಪಡುವುದು ಸುಲಭ. ಅದನ್ನು ತೊರೆಯುವುದು ದುರ್ಲಭ. ಅದಕ್ಕೆ ಸಾಧಾರಣ ಮನುಷ್ಯ ಆಸೆಗಳ ತಿರುಗಣಿಗೆ ಬಿದ್ದು ಅದರ ಜೊತೆಗೆ ಬರುವ ದುಃಖಗಳನ್ನು ತಾಳಲಾರದೆ ಒದ್ದಾಡುತ್ತಾನೆ. ಅದಕ್ಕೆ ಬುದ್ಧ ಆಸೆಗಳನ್ನು ಹತೋಟಿಯಲ್ಲಿ ಇಟ್ಟುಕೋ ಎಂದ. ಎಚ್ಚರವಿರಲಿ ಎಂದು ಹೇಳಿದ.

 

ಕಷ್ಟದ ನಿರ್ಧಾರಗಳು ಬದುಕನ್ನು ಸುಲಭವಾಗಿಸುತ್ತವೆ. ಆದರೆ ಸುಲಭದ  ನಿರ್ಧಾರಗಳು ಬದುಕನ್ನು ಕಷ್ಟಮಯವನ್ನಾಗಿಸುತ್ತವೆ. ಎಚ್ಚರವಿರಲಿ ಎಂದು ಹೇಳಿದ ಬುದ್ಧ ಕಷ್ಟದ ನಿರ್ಧಾರ ತೆಗೆದುಕೊಳ್ಳಲು ಪ್ರೇರೇಪಿಸಿದ. ಆಸೆಗಳನ್ನು ಗೆದ್ದ ಮೇಲೆ, ಇಲ್ಲವೇ ಅವುಗಳು ಹತೋಟಿಯಲ್ಲಿದ್ದರೆ ನಮ್ಮ ಜೀವನದಲ್ಲಿ ದುಃಖಗಳು ಕೂಡ ಅಷ್ಟೇ ದೂರದಲ್ಲಿ ಇರುತ್ತವೆ ಎನ್ನುವುದು ಅವನ ಜೀವನದ ಸಂದೇಶವಾಗಿತ್ತು.

 

ಅದಕ್ಕೆ 'ಎಚ್ಚರವಿರಲಿ' ಎನ್ನುವ ನಿಯಮ ಅಷ್ಟೇ ಸಾಕಾಗಿತ್ತು.

Thursday, November 10, 2022

ಆಸ್ತಿ ಎನ್ನುವ ಉರುಳು ಕಂಟಕ

ಎರಡು ವರುಷದ ಹಿಂದೆ 'ಆಸ್ತಿ ಜಗಳಗಳ ಸುತ್ತ' ಎನ್ನುವ ಕಿರು ಲೇಖನ ಬರೆದಿದ್ದೆ. ಮೂರು ತಲೆಮಾರುಗಳಕ್ಕಿಂತ ಹೆಚ್ಚಿಗೆ ಉಳಿಯದ ಆಸ್ತಿಗೆ ಬಡಿದಾಡಿ ಜನ ಹೇಗೆ ನೆಮ್ಮದಿ ಕಳೆದುಕೊಳ್ಳುತ್ತಾರೆ ಎನ್ನುವುದರ ಕುರಿತ ಲೇಖನ ಅದಾಗಿತ್ತು. (https://booksmarketsandplaces.blogspot.com/2020/01/blog-post.html). ಆಗ ಆಸ್ತಿ ಎನ್ನುವುದು ಉರುಳು ಕಂಟಕ ಎನ್ನುವ ಸ್ಪಷ್ಟತೆ ಮೂಡಿರಲಿಲ್ಲ.


ಆಸ್ತಿ ತರುವ ಅಧಿಕಾರ, ದವಲತ್ತು, ಸವಲತ್ತುಗಳು ಯಾರಿಗೆ ಬೇಡ? ಆದರೆ ಅದರ ಜೊತೆಗೆ ಆಪತ್ತುಗಳು ಕೂಡ ಬರುತ್ತವೆ. ಅದು ನಿಮ್ಮನ್ನು ನಿಮ್ಮ ಇಷ್ಟದ ಹಾಗೆ ಬದುಕಲು ಬಿಡುವುದಿಲ್ಲ. ನಿಮ್ಮವರೇ ನಿಮ್ಮಿಂದ ದೂರಾಗುತ್ತಾರೆ. ಅದುವರೆಗೆ ನಿಮ್ಮ ಮೇಲೆ ಬೀಳದ ಬೇಟೆಗಣ್ಣುಗಳು ನಿಮ್ಮ ಮೇಲೆ ಬೀಳತೊಡಗುತ್ತವೆ. ಕ್ರಮೇಣ ನೀವು ವರ್ತಿಸುವ ರೀತಿಯೇ ಬದಲಾಗಿಬಿಡುತ್ತದೆ.


ನೀವು ಶಂಕರ್ ನಾಗ್ ನಿರ್ದೇಶನದ, ಅಣ್ಣಾವ್ರು ಅಭಿನಯದ 'ಒಂದು ಮುತ್ತಿನ ಕಥೆ' ಚಿತ್ರ ನೋಡಿದ್ದೀರಾ? ಅದರಲ್ಲಿ ಸಮುದ್ರಾಳದಲಿ ಮುತ್ತು ಹುಡುಕುವ ಕಥಾ ನಾಯಕನಿಗೆ ಅಸಾಧಾರಣ ಗಾತ್ರದ, ಬೆಲೆ ಕಟ್ಟಲಾಗದ ಒಂದು ಮುತ್ತು ಸಿಗುತ್ತದೆ. ಅದರಿಂದ ತನ್ನ ಬಾಳು ಬದಲಾಗುತ್ತದೆ. ತನ್ನ ಮಗನನ್ನು ಶಾಲೆಗೆ ಕಳುಹಿಸಿ ಓದಿಸಬಹುದು ಎಂದೆಲ್ಲ ಅವನು ಕನಸು ಕಟ್ಟುತ್ತಾನೆ. ಆದರೆ ಅಲ್ಲಿಂದಲೇ ಅವನಿಗೆ ಸಮಸ್ಯೆಗಳ ಸರಮಾಲೆಯೇ ಎದುರಾಗುತ್ತದೆ. ಅದನ್ನು ಕೊಂಡುಕೊಳ್ಳಲು ವ್ಯಾಪಾರಸ್ಥರು ತಂತ್ರಗಾರಿಕೆ ಹೂಡುತ್ತಾರೆ. ಮಗನನ್ನು ಚಿಕಿತ್ಸೆಗೆಂದು ಕರೆದುಕೊಂಡು ಹೋದರೆ ವೈದ್ಯ ಆ ಮುತ್ತು ಕೊಡದಿದ್ದರೆ ಅವನ ಮಗನನ್ನು ಸಾಯಿಸುವುದಾಗಿ ಬೆದರಿಸುತ್ತಾನೆ. ದೇವಸ್ಥಾನ ಪೂಜಾರಿ ಮುತ್ತು ಕೊಟ್ಟರೆ ಮಾತ್ರ ಪೂಜೆ, ಇಲ್ಲದಿದ್ದರೆ ಇಲ್ಲ ಎಂದು ನಿರಾಕರಿಸುತ್ತಾನೆ. ಅಣ್ಣನ ಹಾಗೆ ಜೊತೆಗಿದ್ದವನು ಆ ಮುತ್ತು ಕದಿಯಲು ಪ್ರಯತ್ನಿಸುತ್ತಾನೆ. ಸ್ನೇಹಿತರೆಲ್ಲ ದೂರಾಗುತ್ತಾರೆ. ನಾಯಕನ ಮೇಲೆ ಮಾರಣಾಂತಿಕ ಹಲ್ಲೆಗಳಾಗುತ್ತವೆ. ಕೊನೆಗೆ ಅವನು ಆ ಮುತ್ತನ್ನು ಮತ್ತೆ ಸಮುದ್ರಕ್ಕೆ ಬೀಸಾಡಿ ಬರುವುದರೊಂದಿಗೆ ಆ ಚಿತ್ರ ಮುಗಿಯುತ್ತದೆ.


ಜಗತ್ತಿನ ಅಧಿಕಾರವೆಲ್ಲ ತನ್ನದಾಗಬೇಕು ಎಂದು ಬಯಸಿದ್ದ ಅಲೆಕ್ಸಾಂಡರ್. ಅವನು ಪರ್ಶಿಯಾದ ರಾಜನ ವಿರುದ್ಧ ಯುದ್ಧಕ್ಕೆ ಇಳಿದಾಗ, ಆ ಯುದ್ಧದಲ್ಲಿ ಎಲ್ಲರ ಕಣ್ಣು ಅಲೆಕ್ಸಾಂಡರ್ ಮೇಲೆ. ಕೆಂಪು ಶಿರಸ್ತ್ರಾಣ ಧರಿಸಿ, ಶ್ವೇತ ಕುದುರೆಯ ಬೆನ್ನೇರಿದವನ ಕಥೆ ಮುಗಿಸಲು ಎಲ್ಲ ಶತ್ರು ಸೈನಿಕರ  ಪ್ರಯತ್ನ. ಆದರೆ ಅಲೆಕ್ಸಾಂಡರ್ ತಲೆ ಕಾಯಲು ಒಂದು ದೊಡ್ಡ ಹಿಂಡೇ ಇತ್ತು. ಆ ಯುದ್ಧ ಅವನು ಗೆದ್ದರೂ, ಅವನ ಅದೃಷ್ಟ ಹಾಗೆ ಉಳಿಯುವುದಿಲ್ಲ. ಮುಂದೊಂದು ಯುದ್ಧದಲ್ಲಿ ಎದೆಗೆ ಬಿದ್ದ ಬಾಣ ಮಾಡಿದ ಗಾಯ ವಾಸಿಯಾಗದೆ ಅವನು ಅಸು ನೀಗುತ್ತಾನೆ. ಅವನ ಸೈನಿಕರಲ್ಲೇ ಪಂಗಡಗಳಾಗುತ್ತವೆ. ಅವನ ಹೆಣ ಕೂಡ ತಾಯ್ನಾಡಿಗೆ ಮರಳುವುದಿಲ್ಲ.


ಮೊಗಲ್ ದೊರೆಗಳನ್ನು ಗಮನಿಸಿ ನೋಡಿ. ಶಾಹ್ ಜಹಾನ್ ಮಗನಿಂದ ಬಂದಿಸಲ್ಪುಡುತ್ತಾನೆ. ಔರಂಗಜೇಬ್ ತನ್ನ ಸೋದರ ಸೋದರಿಯನ್ನೆಲ್ಲ ಯಮ ಪುರಿಗೆ ಅಟ್ಟುತ್ತಾನೆ. ವಿಜಯನಗರ ಸಾಮ್ರಾಜ್ಯ ಇತಿಹಾಸ ಗಮನಿಸಿ ನೋಡಿ. ಆ ರಾಜರುಗಳು ಯುದ್ಧ ಭೂಮಿಯಲ್ಲಿ ಪ್ರಾಣ ಬಿಟ್ಟದ್ದಕ್ಕಿಂತ, ಅಣ್ಣ ತಮ್ಮಂದಿರು ಹಾಕಿದ ವಿಷಕ್ಕೆ ಪ್ರಾಣ ಬಿಟ್ಟ ಪ್ರಕರಣಗಳೇ ಹೆಚ್ಚು. ಮುಂದೆ ರಾಜಾಧಿಕಾರದ ಬದಲು ಪ್ರಜಾಪ್ರಭುತ್ವ ಬಂತು. ಐದು ವರ್ಷಕ್ಕೆ ಒಮ್ಮೆ ಒಬ್ಬನಿಗೆ ರಾಜನಾಗುವ ಅವಕಾಶ. ಅದು ರಕ್ತಪಾತಗಳನ್ನು ಕಡಿಮೆ ಮಾಡಿದರೂ, ತಂತ್ರಗಾರಿಕೆ ನಿಲ್ಲಲಿಲ್ಲ. ನಮ್ಮ ಯಡಿಯೂರಪ್ಪನವರು ಎಷ್ಟು ಸಲ ಗದ್ದುಗೆ ಏರಿ ಅದನ್ನು ಕಳೆದುಕೊಂಡರು ನೆನಪಿಸಿಕೊಳ್ಳಿ.


ಇವೆಲ್ಲ ದೊಡ್ಡವರ ಕಥೆ ಆದರೆ, ನಮ್ಮಂತ ಸಾಧಾರಣ ಜನರ ಕಥೆ ಏನು ವಿಭಿನ್ನ ಅಲ್ಲ. ನಿಮಗೆ ಸ್ವಂತ ಮನೆ, ಹೊಲ, ಅಸ್ತಿ-ಪಾಸ್ತಿ ಇಲ್ಲವೇ? ನೀವು ಎಷ್ಟು ಅದೃಷ್ಟವಂತರು ಎಂದು ನಿಮಗೆ ಗೊತ್ತೇ  ಇಲ್ಲ. ನಿಮಗೆ ಇರುವ ನೆಮ್ಮದಿ ಯಾರು ಸುಲಭದಲ್ಲಿ ಕಸಿದುಕೊಳ್ಳಲು ಸಾಧ್ಯ ಇಲ್ಲ. ನೀವು ಪುಟದೊಂದು ಮನೆ ಕಟ್ಟಿಸಿಕೊಂಡಿದ್ದೀರಿ. ಆದರೆ ನಿಮ್ಮ ಸೋದರರಿಗೆ ಅದು ಸಾಧ್ಯ ಆಗಿಲ್ಲವೇ? ಆಗ ನಿಮಗೆ ಅಸೂಯೆಯ ಬಿಸಿ ತಟ್ಟುತ್ತಲೇ ಇರುತ್ತದೆ. ಅವರ-ನಿಮ್ಮ ಸಂಬಂಧದಲ್ಲಿ ವಿಶ್ವಾಸ ಸಾಧ್ಯವಿಲ್ಲ. ನಿಮ್ಮ ಬಂಧುಗಳೆಲ್ಲ ಬಡವರು ಆಗಿದ್ದು, ನೀವೊಬ್ಬರು ಮಾತ್ರ ಅನುಕೂಲಸ್ಥರು ಆಗಿದ್ದರೆ, ನಿಮ್ಮದು ರಣರಂಗದಲ್ಲಿನ ಅಲೆಕ್ಸಾಂಡರ್ ಪರಿಸ್ಥಿತಿ.


ಆಸ್ತಿ ಗಳಿಸುವುದಕ್ಕಿಂತ ಉಳಿಸಿಕೊಳ್ಳುವುದೇ ದೊಡ್ಡ ಸಮಸ್ಯೆ. ಮೈಸೂರು ಮಹಾರಾಜರು ಮಾಡಿದ್ದ ಆಸ್ತಿ ಏನು ಕಡಿಮೆಯೇ? ಇಂದಿಗೆ ಅವರ ಕುಟುಂಬದವರು ಆ ಆಸ್ತಿ ಉಳಿಸಿಕೊಳ್ಳಲು ಮಾಡುತ್ತಿರುವ ಕಾನೂನು ಸಮರಗಳನ್ನು, ಹರ ಸಾಹಸಗಳನ್ನು ಗಮನಿಸಿ ನೋಡಿ. ಅವರು ತಮ್ಮ ಜೀವನ ಶಕ್ತಿಯನ್ನೆಲ್ಲ ಅದಕ್ಕೆ ವ್ಯಯಿಸುತ್ತಿದ್ದಾರೆ.


ಬೆಂಗಳೂರಿನಲ್ಲಿ ದೊಡ್ಡ ಆಸ್ತಿ ಮಾಡಿ ರಿಯಲ್ ಎಸ್ಟೇಟ್ ಧಂಧೆಯಲ್ಲರುವ ಜನರನ್ನು ಗಮನಿಸಿ ನೋಡಿ. ಅವರು ಎಲ್ಲಿ ಹೋದರೂ ಒಬ್ಬರೇ ಹೋಗುವುದಿಲ್ಲ. ಅವರ ಹಿಂದೇ-ಮುಂದೆ ಹುಡುಗರ ಪಡೆಯನ್ನೇ ಕಟ್ಟಿಕೊಂಡು ಬರುತ್ತಾರೆ. ಅವರಿಗೆ ಯಾವಾಗ ಬೇಕಾದರೂ ಜೀವ ಹೋಗಬಹುದು ಎನ್ನುವ ಭಯ. ಅವರು ಶತ್ರುಗಳ ಕೈಯಲ್ಲಿ ಸಾಯುವುದಕ್ಕಿಂತ ತಮ್ಮ ಬಂಧುಗಳ ಹಾಕುವ ವಿಷಕ್ಕೆ ಸತ್ತು ಹೋಗುತ್ತಾರೆ. ಆ ವಿಷಯಗಳು ಖಾಸಗಿ ಆದ್ದರಿಂದ ಅವು ಎಲ್ಲೂ ಸುದ್ದಿಯಾಗುವುದಿಲ್ಲ. ಆಗ ಆಸ್ತಿಗೆ ಇನ್ನೊಬ್ಬ ಒಡೆಯ. ಅವನ ಜೀವನ ಕಾಲ ಎಷ್ಟೋ?


ಸುಮಾರು ೪.೫ ಶತಕೋಟಿ (ಬಿಲಿಯನ್) ವರ್ಷ ಇತಿಹಾಸ ಇರುವ ಭೂಮಿ, ತನಗೆ ಯಾರಾದರೂ ಒಡೆಯನು ಇದ್ದಾನೆ ಎಂದರೆ ಗಹ ಗಹಿಸಿ ನಗುತ್ತದೆ. ಅವನನ್ನು ತನ್ನಲ್ಲಿ ಲೀನವಾಗಿಸಿ ಇನ್ನೊಬ್ಬನಿಗೆ ಅವಕಾಶ ಮಾಡಿಕೊಡುತ್ತದೆ.

ಮನುಷ್ಯ ಕಲಿಯುವುದಿಲ್ಲ. ಕಲಿತ ಮನುಷ್ಯ ಆಸ್ತಿಗೆ ಆಸೆ ಪಡುವುದಿಲ್ಲ.

Sunday, October 30, 2022

ಎರಡು ಚಿತ್ರಗಳು ಮತ್ತು ಒಳ್ಳೆಯತನ ಎನ್ನುವ ಕೆಟ್ಟ ಖಾಯಿಲೆ

ಕಳೆದ ಎರಡು ದಿನದಲ್ಲಿ ನಾನು ನೋಡಿದ ಎರಡು ಚಲನ ಚಿತ್ರಗಳಲ್ಲಿ ಕೆಲವು ಸಮಾನ ಅಂಶಗಳಿವೆ.


ಮೊದಲಿಗೆ 'ಕಾಂತಾರ'. ಅದು ಒಂದು ಅದ್ಭುತ ಚಿತ್ರ. ತಲೆ ತಲಾಂತರಗಳ ಹಿಂದೆ ದಾನವಾಗಿ ಕೊಟ್ಟ ಭೂಮಿಯನ್ನು ವಾಪಸ್ಸು ಬಯಸುವ ಇಂದಿನ ತಲೆಮಾರು, ಅದನ್ನು ಆಗಗೊಡದ ಕ್ಷೇತ್ರಪಾಲಕ ದೈವ.


ಎರಡನೆಯದು 'ಹೆಡ್ ಬುಷ್'  ಚಿತ್ರ. ಅದು ಬೆಂಗಳೂರು ಕಂಡ ಮೊದಲ ಭೂಗತ ದೊರೆ ಜಯರಾಜ್ ನ ಕಥೆ.


ಒಂದು ದೈವದ-ಕ್ಷೇತ್ರ ಪಾಲಕನ ಕಥೆ. ಇನ್ನೊಂದು ಬೆಂಗಳೂರು ಕ್ಷೇತ್ರ ತನ್ನದೇ ಎನ್ನುವ ರೌಡಿಯ ಕಥೆ. ಎರಡೂ ಚಿತ್ರಗಳಲ್ಲಿ ಹೋರಾಟ ಇದೆ. ಮತ್ತು ಎರಡು ಚಿತ್ರಗಳ ಮುಖ್ಯ ಪಾತ್ರಗಳು ಕೈಯಲ್ಲಿ ಮಚ್ಚು ಹಿಡಿಯುತ್ತವೆ. ದೈವದ ಜೊತೆಗೆ ರೌಡಿ ಕಥೆಯ ಹೋಲಿಕೆ ನನ್ನ ಉದ್ದೇಶ ಅಲ್ಲ. ಆದರೆ ಅವಶ್ಯಕತೆ ಬಂದಾಗ ಮಚ್ಚು ಹಿಡಿಯಲು ಈ ಎರಡು ಪಾತ್ರಗಳು ಹಿಂದೆ ಮುಂದೆ ನೋಡುವುದಿಲ್ಲ ಎಂದು ಹೇಳುವುದಷ್ಟೇ ನನ್ನ ಉದ್ದೇಶ.


ಈ ಎರಡೂ ಕಥೆಗಳಲ್ಲಿ ಕಂಡು ಬರುವ ಸಾಮಾನ್ಯ ಅಂಶವೆಂದರೆ, 'ಕಾಂತಾರ' ದಲ್ಲಿ ನ್ಯಾಯ ಕೊಡಿಸಲು ದೈವವೇ ಬರಬೇಕು. ಆದರೆ ಅನ್ಯಾಯ ಎಸಗಲು ಮಾನವ ಸಾಕು. ಇಲ್ಲಿ ದೈವ ಬರೀ ಒಳ್ಳೆಯತನ ತೋರುವುದಕ್ಕೆ ಸೀಮಿತ ಆಗಿಲ್ಲ. ತಾನು ಯಾವಾಗ ಕೆಟ್ಟವನಾಗಬೇಕು ಎನ್ನುವ ಅಂಶದಲ್ಲಿ ದೈವಕ್ಕೆ ಸ್ಪಷ್ಟತೆ ಇದೆ. ಮತ್ತು ಅದು ಆವಾಹಿಸಿಕೊಳ್ಳುವುದು ಅವಶ್ಯಕತೆ ಬಂದಾಗ ಕೆಟ್ಟವನಾಗಲು ತಯಾರಾಗಿರುವ ಆ ಚಿತ್ರದ ಹೀರೋನನ್ನು.


ಹಾಗೆಯೆ  'ಹೆಡ್ ಬುಷ್' ಚಿತ್ರದಲ್ಲಿ ಜಯರಾಜ್ ಒಬ್ಬ ಹೀರೋ ತರಹ ಕಂಡರೂ ಅವನು ರಾಜಕಾರಣಿಗಳ ಕೈಗೊಂಬೆ ಮಾತ್ರ. ಕೆಟ್ಟವರಿಗೆ ಬುದ್ಧಿ ಕಲಿಸಲು ಯಾವುದೇ ಕೆಡಕು ಮಾಡಲು ಹಿಂದೆ ಮುಂದೆ ನೋಡದ ಜಯರಾಜ್ ನೇ ಆಗಬೇಕು. ಅವನಿಗೆ ರೌಡಿಗಳಷ್ಟೇ ಅಲ್ಲ, ಪೊಲೀಸರು ಮತ್ತು ರಾಜಕಾರಣಿಗಳನ್ನು ಬೆದರಿಸುವ ಸ್ಥೈರ್ಯ ಇದೆ. ಹಾಗೆಯೆ ಬಡವರ ಜೊತೆಗೆ ನಿಲ್ಲುವ ಔದಾರ್ಯ ಕೂಡ ಇದೆ.


ಆದರೆ ನಮ್ಮಂತಹ ಜನರಿಗೆ ಅಷ್ಟು ಗುಂಡಿಗೆ ಇಲ್ಲ. ನಮಗೆ ಎಲ್ಲರಿಂದ ಒಳ್ಳೆಯವರು ಅನಿಸಿಕೊಳ್ಳಬೇಕು ಎನ್ನುವ ಇಚ್ಛೆ. ನಮ್ಮ ಮೇಲೆ ಅನ್ಯಾಯ ಆದಾಗ ನಾವು ಪ್ರತಿಭಟನೆ ಮಾಡುವುದಿಲ್ಲ. ದಬ್ಬಾಳಿಕೆಗಳನ್ನು ಸುಮ್ಮನೆ ಉಗುಳು ನುಂಗಿಕೊಂಡು ಸಹಿಸಿಕೊಂಡುಬಿಡುತ್ತವೆ. ನಮಗೆ ಅನ್ಯಾಯ ಆದಾಗ ನಮಗೆ ಕೆಟ್ಟವರಾಗಲು ಬರುತ್ತದೆ ಎಂದು ತೋರಿಸಿ ಕೊಡಲು ಆಗುವುದಿಲ್ಲ. ಮಚ್ಚು ಹಿಡಿದವರನ್ನು ನಾವು ನೋಡಿದಾಗ ರೋಮಾಂಚಿತರಾಗುತ್ತೇವೆಯೇ ಹೊರತು ನಮಗೆ ಸ್ವತಃ ಮಚ್ಚು ಹಿಡಿದುಕೊಳ್ಳುವ ಧೈರ್ಯ ಇಲ್ಲ. ನಮಗೆಲ್ಲ ಇರುವುದು ಒಳ್ಳೆಯತನ ಎನ್ನುವ ಕೆಟ್ಟ ಖಾಯಿಲೆ. ನಮ್ಮಂತವರ ರಕ್ಷಣೆಗೆ 'ಕಾಂತಾರ' ತರಹದ ದೈವಗಳೇ ಬರಬೇಕು. ಇಲ್ಲವೇ ಜಯರಾಜ್ ತರಹದ ಡಾನ್ ಗಳ ಸಹಾಯ ಕೋರಬೇಕು.


ಕಾಂತಾರ ಚಿತ್ರದಲ್ಲಿ ಅನ್ಯಾಯದ ವಿರುದ್ಧ ಹೋರಾಟಕ್ಕೆ ದೈವ ಹಿಂಸೆಗೆ ಇಳಿಯಲು ಹಿಂದೆ ಮುಂದೆ ನೋಡುವುದಿಲ್ಲ. ಅದಕ್ಕೆ ಒಳ್ಳೆಯತನ ಎನ್ನುವ ಕೆಟ್ಟ ಖಾಯಿಲೆ ಇಲ್ಲ. ಆದರೆ ನಾವುಗಳು ಪಾಪ ಮಾಡಿದವರು ಕರ್ಮ ಅನುಭವಿಸುತ್ತಾರೆ ಎಂದುಕೊಂಡು ಸುಮ್ಮನಾಗುತ್ತೇವೆ. ಹಾಗೆಯೆ 'ಹೆಡ್ ಬುಷ್' ಚಿತ್ರದ ಜಯರಾಜ್ ಪಾಪ-ಕರ್ಮಗಳ ಲೆಖ್ಖ ಮಾಡುವುದಿಲ್ಲ. ಕೈಯಲ್ಲಿ ಮಚ್ಚು ಹಿಡಿದು ಎದಿರೇಟು ಕೊಡುತ್ತಾನೆ. ಅದು ಅವನಿಗೆ ಏಕೆ ಸಾಧ್ಯ  ಆಗುತ್ತದೆ ಎಂದರೆ ಅವನಿಗೆ ಕೂಡ ಒಳ್ಳೆಯತನ ಎನ್ನುವ ಕೆಟ್ಟ ಖಾಯಿಲೆ ಇಲ್ಲ. ಅವನು ಮಾಡುವುದು ಸರಿ-ತಪ್ಪು ಎನ್ನುವ ವಿಮರ್ಶೆ ಇಲ್ಲಿ ನಾನು ಮಾಡುತ್ತಿಲ್ಲ. ಆದರೆ ಅವನು ಒಳ್ಳೆಯತನದ ಸೋಗಿನಲ್ಲಿರುವ ಹೇಡಿ ಅಲ್ಲ ಎಂದಷ್ಟೇ ನಾನು ಹೇಳುತ್ತಿರುವುದು.


ಸಮಾಜದ ಹೆಚ್ಚಿನ ಜನ ಒಳ್ಳೆಯತನದ ಸಮಸ್ಯೆಯಿಂದ ನರಳುತ್ತಿರುವವರು. ಅವರಿಗೆ ಪ್ರತಿಭಟಿಸುವ ಆಸೆ ಇದೆ ಆದರೆ ಧೈರ್ಯ ಇಲ್ಲ. ಆ ಸಮಸ್ಯೆ ಇರದ ಹೀರೋಗಳಿರುವ ಚಿತ್ರಗಳನ್ನು ಅವರು ಆಸಕ್ತಿಯಿಂದ ವೀಕ್ಷಿಸುತ್ತಾರೆ. ಗೆಲ್ಲಿಸುತ್ತಾರೆ. ಆದರೆ ಮನೆಗೆ ಬಂದ ಮೇಲೆ ಮತ್ತೆ ಒಳ್ಳೆಯತನದ ಮುಸುಕು ಹೊತ್ತು ಮಲಗುತ್ತಾರೆ. ಅನ್ಯಾಯದ ವಿರುದ್ಧ ಪ್ರತಿಭಟಿಸಲು ಮಚ್ಚು ಹಿಡಿಯಲೇಬೇಕು ಎಂದಿಲ್ಲ. ಅನ್ಯಾಯ ಮಾಡುವವರ ಹಾದಿಯನ್ನು ಅಸಹಕಾರದಿಂದ ಕಠಿಣಗೊಳಿಸಬಹುದು. ಆಗ ಅನ್ಯಾಯಗಳ ಪ್ರಮಾಣ ಕಡಿಮೆ ಆಗುತ್ತಾ ಹೋಗುತ್ತವೆ. 


ಆದರೆ ನಮಗೇಕೆ ಬೇಕು ಹೋರಾಟದ ಉಸಾಬರಿ? ನಾವೆಲ್ಲ 'ಕಾಂತಾರ' ಮತ್ತು 'ಹೆಡ್ ಬುಷ್' ವೀಕ್ಷಿಸಿ ಆನಂದಿಸುವ ಒಳ್ಳೆಯವರು ಅಷ್ಟೇ. ನೀವೇನಂತೀರಿ?

ಮರೆಯಲಾಗದ ನೋವುಗಳಿಗೂ ಮದ್ದುಂಟು

ಕಾಲ ಎಷ್ಟೋ ನೋವುಗಳನ್ನು ಮರೆಸಿಬಿಡುತ್ತದೆ. ಚಿಕ್ಕಂದಿನಲ್ಲಿ ನಾವು ಆಟಿಕೆಗೆ ಜಗಳ ಮಾಡಿದ್ದು ಅವತ್ತಿಗೆ ಅದು ನೋವಿನ ಸಂಗತಿ ಆಗಿದ್ದರು, ಇಂದಿಗೆ ಅದು ನೆನಪಿಗೆ ಬಂದರೆ ನಗು ಬರುತ್ತದೆ. ಅದು ಕಾಲನ ಮಹಿಮೆ. ಇನ್ನು ಕೆಲ ವಿಷಯಗಳಲ್ಲಿ ಪೆಟ್ಟಿಗೆ ಬಿದ್ದದ್ದು, ಹಣಕಾಸಿನ ವಿಷಯಗಳಲ್ಲಿ ಮೋಸ ಹೋಗಿದ್ದು ಇತ್ಯಾದಿಗಳು ಕೆಲ ಕಾಲ ಕಳೆದ ನಂತರ ಅವು ಪಾಠ ಕಲಿಸಿದ ಸಂಗತಿಗಳಾಗಿ ನೆನಪಲ್ಲಿ ಉಳಿಯುತ್ತವೆಯೇ ಹೊರತು ಮತ್ತೆ ಮತ್ತೆ ತೀವ್ರ ನೋವು ತರುವ ವಿಷಯಗಳಾಗುವುದಿಲ್ಲ.

 

ಆದರೆ ಕಾಲ ಮರೆಸಲಾಗದಂತಹ ಕೆಲ ಸಂಗತಿಗಳಿವೆ. ಮೊದಲನೆಯದು, ಬೆಳೆದು ನಿಂತ ಮಗ/ಮಗಳು ಸಾವನ್ನಪ್ಪುವುದು. ಇಪ್ಪತ್ತು ವರುಷದ ಹಿಂದೆ ಆಕ್ಸಿಡೆಂಟ್ ನಲ್ಲಿ ತೀರಿ ಹೋದ ಮಗನನ್ನು ನೆನೆದ ತಕ್ಷಣ ಕಣ್ಣೀರು ಸುರಿಸುವ ಹೆಣ್ಣು ಮಗಳು ನಮ್ಮ ನೆರೆಯಲ್ಲಿದ್ದಾಳೆ. ಅವಳ ನೋವನ್ನು ಕಾಲ ಮರೆಸಿಲ್ಲ ಮತ್ತು ಎಷ್ಟು ಅತ್ತರೂ ಅವಳ ನೋವು ಕಡಿಮೆ ಆಗಿಲ್ಲ. ಎರಡನೆಯದು, ತುಂಬಾ ನಂಬಿಕೊಂಡ ಪ್ರೀತಿಯ ಸಂಗಾತಿ ಮೋಸ ಮಾಡಿ ದೂರಾಗುವುದು. ಆ ಅನುಭವ ಆದ ಜನರನ್ನು ಗಮನಿಸಿ ನೋಡಿ. ಅವರಿಗೆ ಆ ವಿಷಯ ನೆನಪಾದ ತಕ್ಷಣ ಮುಖ ಕಿವಿಚುತ್ತದೆ. ಅದನ್ನು ಮರೆಯಲು ಅವರು ಎಷ್ಟು ಕುಡಿದರೂ ಅದು ಮರೆಯಾಗುವುದಿಲ್ಲ.

 

ಈ ಎರಡು ನೋವುಗಳು ಏಕೆ ಜೀವನಪೂರ್ತಿ ಮನುಷ್ಯನನ್ನು ಕಾಡುತ್ತವೆ ಎಂದು ಹುಡುಕಿ ಹೊರಟರೆ ಅದಕ್ಕೆ ಜೀವ ವಿಕಾಸ ಶಾಸ್ತ್ರದಲ್ಲಿ (Evolutionary Biology) ಉತ್ತರ ದೊರೆಯುತ್ತದೆ. ಲಕ್ಷಾಂತರ ವರುಷ ವಿಕಾಸ ಹೊಂದಿದ ಮಾನವನಲ್ಲಿ ಪ್ರಕೃತಿ ಎರಡು ವಿಷಯಗಳನ್ನು ಅಳಿಸಲಾಗದಂತಹ ಸಾಂಕೇತಿಕ ಭಾಷೆಯಲ್ಲಿ ಬರೆದುಬಿಟ್ಟಿದೆ. ಅವು ಆ ಜೀವಿ ತಾನು ಉಳಿಯಲು ಏನು ಬೇಕೋ ಅದು ಮಾಡುವುದು ಮತ್ತು ತನ್ನ ವಂಶ ಮುಂದುವರೆಯಲು ಬೇಕಾದ ಏರ್ಪಾಡು ಮಾಡಿಕೊಳ್ಳುವುದು. ಇವೆರಡು ಪ್ರತಿಯೊಂದು ಪ್ರಾಣಿ, ಪಕ್ಷಿಯಲ್ಲಿ ಬಹು ಮುಖ್ಯವಾದ ಅಂಶಗಳು. ಇವೆರಡಕ್ಕೆ ಸಂಬಂಧಿಸಿದ ವಿಷಯಗಳು ಜೀವಿಗಳಿಗೆ ಅತಿ ಹೆಚ್ಚು ನೋವು ತರುತ್ತದೆ. ಉಳಿದ ನೋವುಗಳನ್ನು ಕಾಲ ಮರೆಸಿ ಹಾಕುತ್ತದೆ.

 

ಉದಾಹರಣೆಗೆ, ನಿಮಗೆ ಹೊಟ್ಟೆ ಹಸಿವಿನ ಸಂಕಟ ತಾಳಲಾಗುತ್ತಿಲ್ಲ. ಅದೇ ಸಮಯಕ್ಕೆ ನಿಮಗೆ ಆಗದವರು ನಿಮ್ಮನ್ನು ಅವಮಾನ ಪಡಿಸಲು ನೋಡುತ್ತಾರೆ. ಆಗ ನೀವು ಯಾವುದಕ್ಕೆ ಪ್ರಾಮುಖ್ಯತೆ ಕೊಡುತ್ತೀರಿ? ಆಹಾರ ಮೊದಲು ಹುಡುಕಿಕೊಂಡು ಆಮೇಲೆ ಅವಮಾನಕ್ಕೆ ಪ್ರತಿಕಾರ ತೀರಿಸಬಹುದಲ್ಲವೇ? ಈ ಆದ್ಯತೆಗಳನ್ನು ಜೋಡಿಸಿದ್ದು ಪ್ರಕೃತಿಯು ನಮ್ಮಲ್ಲಿ ಅಳಿಸಲಾಗದಂತೆ ಮೂಡಿಸಿರುವ ಸಾಂಕೇತಿಕ ಭಾಷೆ. ಮೊದಲು ನಾವು ಉಳಿಯಬೇಕು ಆಮೇಲೆ ಸನ್ಮಾನ, ಸತ್ಕಾರ, ಪ್ರತಿಕಾರ ಎಲ್ಲ.

 

ಮನುಷ್ಯನನ್ನು ಜೀವನಪೂರ್ತಿ ಕಾಡುವ ಮಗನ ಸಾವು, ಸಂಗಾತಿಯ ಬೇರ್ಪಡಿಕೆ ವಿಷಯಗಳು ಮನುಷ್ಯನ ಅಳಿವು-ಉಳಿವಿಗೆ ಸಂಬಂಧಿಸಿದ್ದು. ಅವು ಹೃದಯಕ್ಕೆ ತುಂಬಾ ಹತ್ತಿರ ಮತ್ತು ಮನಸ್ಸಿನಾಳದಲ್ಲಿ ಪ್ರಕೃತಿ ಬರೆದು ಬಿಟ್ಟಿರುವ ಭಾಷೆ. ಅವಕ್ಕೆ ಕಾಲನಲ್ಲಿ ಮದ್ದಿಲ್ಲ. ಹಾಗಾಗಿ ಜೀವನದಲ್ಲಿ ಸೋತು ಹೋದ ಹತಾಶೆಯನ್ನು ಅವುಗಳು ಶಾಶ್ವತವಾಗಿ ಇರುವಂತೆ ಮಾಡುತ್ತವೆ. ಹಾಗಾದರೆ ಇದಕ್ಕೆ ಮದ್ದಿಲ್ಲವೇ? ಏಕಿಲ್ಲ?

 

ಸಾಧು-ಸಂತರನ್ನು ನೋಡಿ. ಅವರು ತಮ್ಮ ಕುಟುಂಬವನ್ನು ಹಿಂದೆ ಬಿಟ್ಟು ಬರುವುದಷ್ಟೇ ಅಲ್ಲ. ಅವರು ತಮ್ಮ ಪಾಲಕರು ಇಟ್ಟ ಹೆಸರನ್ನು ಕೂಡ ಬದಲಾಯಿಸಿರುತ್ತಾರೆ. ಅವರಿಗೆ ನೋವಿಲ್ಲ ಎಂದಲ್ಲ. ಆದರೆ ಅವರು ನೋವನ್ನು ಮೀರಿ ಬೆಳೆದಿರುತ್ತಾರೆ. ಅದು ಏಕೆ ಅವರಿಗೆ ಸಾಧ್ಯ ಆಗುತ್ತದೆ ಎಂದರೆ, ಅವರು ತಮ್ಮ ಸಂಬಂಧಗಳಲ್ಲಿ ಇದ್ದು ಇಲ್ಲದೆ ಹಾಗೆ ಇರುವ ಬೇರ್ಪಡಿಕೆಯನ್ನು ಮೈಗೂಡಿಸಿಕೊಂಡಿರುತ್ತಾರೆ. ಹಾಗಾಗಿ ಅವರಿಗೆ ನೋವು-ನಲಿವಿನ ಸಂಗತಿಗಳು ಸಮಾನವಾಗಿ ಕಾಣುತ್ತವೆ. 


ನೀವು ನೋವು ಗೆಲ್ಲಲು ಸಾಧು-ಸಂತರೇ ಆಗಬೇಕಿಲ್ಲ. ಕುಟುಂಬದಲ್ಲಿ ಇದ್ದುಕೊಂಡು, ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸುತ್ತಾ, ಸಂಬಂಧಗಳಿಂದ ಒಂದು ಪ್ರತ್ಯೇಕತೆಯನ್ನು ಕಾಪಾಡಿಕೊಂಡಿದ್ದರೆ ಸಾಕು. ಆಗ ಎಂತಹ ನೋವೇ ಇರಲಿ, ಕಾಲ ವಾಸಿ ಮಾಡದೆ ಇರುವ ಬೇಸರದ ಸಂಗತಿಯಾಗಿರಲಿ, ಅದು ವಿಧಿಯ ಆಟ ಎನ್ನುವ ಅರಿವು ನಿಮಗೆ ಮೂಡುತ್ತದೆ. ನೋವು ಪೂರ್ತಿ ಮರೆಯಾಗುವುದಿಲ್ಲ. ಮನಸ್ಸಿನ ಮೂಲೆಯಲ್ಲಿ ಉಳಿದುಕೊಂಡೆ ಇರುತ್ತದೆ. ಆದರೆ ಅದು ಸದಾ ನಿಮ್ಮನ್ನು ಬಾಧಿಸುವುದಿಲ್ಲ. ಏಕೆಂದರೆ ನಿಮ್ಮ ಪಾಲಿಗೆ ಬಂದದ್ದು ನೀವು ಸ್ವೀಕರಿಸಿದ್ದೀರಿ ಎನ್ನುವ ಮನೋಭಾವ ಅಷ್ಟೇ ಉಳಿದಿರುತ್ತದೆ.